ಕೇವಲ 250 ಗ್ರಾಂ ತೂಕದ ಪಾಕೆಟ್ ವೆಂಟಿಲೇಟರ್ ಅವಿಷ್ಕರಿಸಿದ ಭಾರತೀಯ ವಿಜ್ಞಾನಿ

ಕೋಲ್ಕತಾದ ಡಾ. ರಾಮೇಂದ್ರ  ಲಾಲ್  ಮುಖರ್ಜಿ  ಅವರು ಈ  ಸಣ್ಣ  ಗಾತ್ರದ  ವೆಂಟಿಲೇಟರ್  ನಿರ್ಮಿಸಿದ್ದಾರೆ.  ಮೊಬೈಲ್  ಚಾರ್ಜರ್  ಬಳಸಿ  ಇದನ್ನು  ಚಾರ್ಜ್ ಮಾಡಬಹುದಾಗಿದೆ

ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿ ಹೋಗಿರು ಭಾರತವು, ವೆಂಟಿಲೇಟರ್ ಕೊರತೆಯಿಂದ ಸಾವಿರಾರು ಸಾವುಗಳನ್ನು ಕಂಡಿದೆ. ಆಕ್ಸಿಜನ್ ವೆಂಟಿಲೇಟರ್’ಗಳಿಗೆ ಬೇಡಿಕೆಯೂ ಹೆಚ್ಚಾದರೂ ಪೂರೈಕೆ ಮಾತ್ರ ಸಾಲುತ್ತಿಲ್ಲ. ಇದೇ ಸಂದರ್ಭದಲ್ಲಿ ಕೊಲ್ಕತ್ತಾ ಮೂಲಕ ವಿಜ್ಞಾನಿಯೊಬ್ಬರು ಪಾಕೆಟ್ ವೆಂಟಿಲೇಟರ್ ಅಭಿವೃದ್ದಿಪಡಿಸುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. 

ಪ್ರವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಡಾ. ರಾಮೇಂದ್ರ ಲಾಲ್ ಮುಖರ್ಜಿ ಅವರು ಈ ಸಣ್ಣ ಗಾತ್ರದ ವೆಂಟಿಲೇಟರ್ ನಿರ್ಮಿಸಿದ್ದಾರೆ. ಮೊಬೈಲ್ ಚಾರ್ಜರ್ ಬಳಸಿ ಇದನ್ನು ಚಾರ್ಜ್ ಮಾಡಬಹುದಾಗಿದೆ. 

ಇದರ ಕಾರ್ಯ ವಿಧಾನದ ಕುರಿತು ಮಾಹಿತಿ ನಿಡಿರುವ ಡಾ. ರಾಮೇಂದ್ರ ಅವರು, ಈ ಯಂತ್ರದಲ್ಲಿ ಎರಡು ಭಾಗಗಳಿವೆ. ಒಂದು ಬ್ಯಾಟರಿ ಮತ್ತೊಂದು ವೆಂಟಿಲೇಟರ್. ಯಂತ್ರದ ಪವರ್ ಬಟನ್ ಆನ್ ಮಾಡಿದ ನಂತರ ಯಂತ್ರವು ವಾತಾವರಣದಲ್ಲಿನ ಗಾಳಿಯನ್ನು ಹೀರಿಕೊಂಡು UV Chamberಗೆ ಕಳುಹಿಸುತ್ತದೆ. ಇಲ್ಲಿ ಗಾಳಿಯು ಶುದ್ದವಾಗಿ ಮೌತ್ ಪೀಸ್ ಮುಖಾಂತರ ಹೊರ ಬರುತ್ತದೆ, ಎಂದು ಹೇಳಿದ್ದಾರೆ.
“UV Chamberನಲ್ಲಿ ಎಲ್ಲಾ ರೀತಿಯ ಕ್ರಿಮಿಗಳು ಕೂಡಾ ನಾಶವಾಗಲಿವೆ. ಇದರಿಂದಾಗಿ ಕೋವಿಡ್ ಸೋಂಕಿತರು ಕೂಡಾ ಇದನ್ನು ಬಳಸಬಹುದು. ಆಕ್ಸಿಜನ್ ಎಷ್ಟು ಬೇಕು ಎಂಬುದನ್ನು ರೋಗಿಗಳೇ ಖುದ್ದು ನಿರ್ಧರಿಸಿ ಇದರಲ್ಲಿರುವ ನಾಬ್ ಮುಖಾಂತರ ಆಕ್ಸಿಜನ್ ಹರಿವನ್ನು ನಿಯಂತ್ರಿಸಬಹುದು,” ಎಂದು ಅವರು ಹೇಳಿದ್ದಾರೆ. 

ಕೇವಲ 250 ಗ್ರಾಂ ತೂಕವಿರುವ ಈ ವೆಂಟಿಲೇಟರ್, ಸಂಪೂರ್ಣವಾಗಿ ಚಾರ್ಜ್ ಆದರೆ ಸುಮಾರು ನಾಲ್ಕು ಗಂಟೆಗಳ ಕಾಲ ಬಳಸಬಹುದಾಗಿದೆ. 

ಡಾ. ರಾಮೇಂದ್ರ ಅವರಿಗೆ ಸೋಂಕು ತಗುಲಿದಾಗ, ತೀವ್ರವಾದ ಆಕ್ಸಿಜನ್ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ಅವರು ಪಟ್ಟ ಕಷ್ಟಗಳನ್ನು ನೆನೆಸಿಕೊಂಡು, ಸಣ್ಣ ವೆಂಟಿಲೇಟರ್ ನಿರ್ಮಿಸುವ ಆಲೋಚನೆ ಮಾಡಿದ್ದರು. ಕೋವಿಡ್ ನಿಂದ ಗುಣಮುಖರಾಗುತ್ತಿದ್ದಂತೆಯೇ ಕೆಲಸ ಆರಂಭಿಸಿದ ರಾಮೇಂದ್ರ ಅವರು, ಆನ್ಲೈನ್ ಮೂಲಕ ಅಗತ್ಯವಿರುವ ವಸ್ತುಗಳನ್ನು ತರಿಸಿಕೊಂಡರು. ಇದಾದ ಬಳಿಕ ಕೇವಲ 20 ದಿನಗಳಲ್ಲಿ ಪಾಕೆಟ್ ವೆಂಟಿಲೇಟರ್ ತಯಾರಿಸಿದ್ದಾರೆ. 

ಇದು ಕೇವಲ ಕೋವಿಡ್ ರೋಗಿಗಳಿಗಷ್ಟೇ ಅಲ್ಲದೇ, ಆಸ್ತಮಾ ಮತ್ತು ಉಸಿರಾಟ ಸಂಬಂಧಿತ ಕಾಯಿಲೆಯಿಮದ ಬಳಲುತ್ತಿರುವ ಅನೇಕರಿಗೆ ಉಪಕಾರಿಯಾಗಲಿದೆ. 

“ಜಾಗತಿಕವಾಗಿ ವೆಂಟಿಲೇಟರ್ ಮಾರುಕಟ್ಟೆ ವೇಗವಾಗಿ ಮುಂದುವರೆಯುತ್ತಿದ್ದು, ಅಮೇರಿಕಾ ಮೂಲದ ಕಂಪನಿಗಳು ನನ್ನನ್ನು ಸಂಪರ್ಕಿಸಿವೆ,” ಎಂದು ರಾಮೇಂದ್ರ ಅವರು ಹೇಳಿದ್ದಾರೆ. ಈಗಾಗಲೇ 30 ಪೇಟೆಂಟ್ ಪಡೆದಿರುವ ರಾಮೇಂದ್ರ, ತಮ್ಮ ಹೊಸ ಅವಿಷ್ಕಾರದಿಂದ ಹಲವರ ಪ್ರಾಣ ಉಳಿಸುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.