ಯುವಕರನ್ನು ಮರಳುಮಾಡಿದ್ದ ಪಬ್‌ಜಿ ಹೆಸರಿನ ಗೇಮ್ ಭಾರತದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾನ್ ಆಗಿತ್ತು. ಆದರೆ ಅದಕ್ಕಿದ್ದ ಬೇಡಿಕೆಯ ಕಾರಣಕ್ಕೆ ನಿಷೇಧ ಹಿಂತೆಗೆಯುವ ಆಗ್ರಹ, ನಿರೀಕ್ಷೆಗಳು ದಟ್ಟವಾಗಿತ್ತು. ಈಗ ಅದು ನಿಜವಾಗಿದೆ

ಚೀನಾದೊಂದಿಗೆ ರಾಜತಾಂತ್ರಿಕ ವಿಷಯದಲ್ಲಿ ಎದ್ದ ಚರ್ಚೆ ಮತ್ತು ವಿವಾದಗಳು, ತಿರುವು ಪಡೆದದ್ದು ಮೊಬೈಲ್ ಅಪ್ಲಿಕೇಷನ್‌ಗಳನ್ನು ನಿಷೇಧಿಸುವ ಮೂಲಕ. ಹಾಗೇ ನಿಷೇಧಕ್ಕೆ ಒಳಪಟ್ಟ 100ಕ್ಕೂ ಹೆಚ್ಚು ಚೀನಾ ಮೂಲದ ಆಪ್‌ಗಳಲ್ಲಿ ಒಂದು ಪಬ್ ಜಿ.
ಹರೆಯದವರಲ್ಲಿ ಹುಚ್ಚಿನಂತೆ ವ್ಯಾಪಿಸಿದ ಪಬ್ ಜಿ ಆಟದ ಗೀಳು, ದಿಢೀರ್ ನಿಷೇಧದಿಂದ ಕಂಗಾಲಾಗುವಂತೆ ಮಾಡಿತ್ತು. ಆದರೆ ಈಗ ಪಬ್ ಜಿ ಮೇಲಿನ ನಿಷೇಧ ಹಿಂತೆಗೆಯುತ್ತಿರುವ ಸುದ್ದಿ ಹೊರಬಿದ್ದಿದೆ.
ಭಾರತೀಯ ಮಾರುಕಟ್ಟೆಗಾಗಿ ವಿಶೇಷವಾಗಿ ಸಿದ್ಧವಾಗುತ್ತಿದ್ದು, ಕೊರಿಯಾ ಮೂಲದ ಕ್ರಾಫ್ಟನ್‌ನ ಅಂಗ ಸಂಸ್ಥೆಯಾದ ಪಬ್‌ಜಿ ಕಾರ್ಪೋರೇಷನ್ ಸಂಸ್ಥೆ ಭಾರತದಲ್ಲೇ ಒಂದು ಕಚೇರಿಯನ್ನು ಸ್ಥಾಪಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕಚೇರಿಯಲ್ಲಿ 100 ಮಂದಿ ಸೇವೆ ಆರಂಭಿಸಲಿದ್ದಾರೆ ಎಂದು ತಿಳಿಸಿದೆ.
ಚೀನಾ ಮೂಲದ ಆಪ್ ಎಂಬ ಕಾರಣಕ್ಕೆ ಭಾರತ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆ 69(ಎ)ಅಡಿಯಲ್ಲಿ ನಿಷೇಧ ಹೇರಿತ್ತು. ಆದರೆ ಈ ಸಂಸ್ಥೆಯೂ ಖಾಸಗಿತನ ಮತ್ತು ಮಾಹಿತಿ ಸುರಕ್ಷತೆಯ ಭಾರತದ ಕಾನೂನಿನ ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸುವುದಾಗಿ ಕಂಪನಿಯ ಪ್ರಕಟಣೆ ತಿಳಿಸಿದೆ.
ಪಬ್‌ಜಿ ನಿಷೇಧದ ಹಿನ್ನೆಲೆಯಲ್ಲಿ ಭಾರತದ್ದೇ ಆಪ್‌ಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಅನೇಕ ಸಂಸ್ಥೆಗಳು ಮುಂದಾಗಿದ್ದವು. ಫೌಜಿ ಹೆಸರಿನಲ್ಲಿ ಗೇಮಿಂಗ್ ಆಪ್ ಕೂಡ ಬಿಡುಗಡೆಯಾಗಿತ್ತು ಮತ್ತು ಇದನ್ನು ಅಕ್ಷಯ್ ಕುಮಾರ್ ಪ್ರಚಾರ ಮಾಡಿದ್ದರು.