ಪುಣೆ ಮೂಲದ ಡಯಾಗ್ನಸ್ಟಿಕ್ ಕಂಪನಿ ಮೈಲ್ಯಾಬ್ ಡಿಸ್ಕವರಿ ಸಲುಷನ್ಸ್ ಕೋವಿಡ್-19 ಟೆಸ್ಟ್ ಕಿಟ್‌ಗೆ ಸರ್ಕಾರ ಅನುಮತಿ ನೀಡಿದ್ದು, ಇನ್ನೊಂದು ವಾರದಲ್ಲಿ 1 ಲಕ್ಷ ಕಿಟ್‌ಗಳನ್ನು ಪೂರೈಸುವ ಭರವಸೆ ನೀಡಿದೆ. ಭಾರತೀಯ ಸಂಸ್ಥೆಯೇ ರೂಪಿಸಿದ ಮೊದಲ ಕೋವಿಡ್ 19 ಕಿಟ್ ಇದಾಗಿದೆ

ಪ್ರಸ್ತುತ ಭಾರತದಾದ್ಯಂತ ಕೋವಿಡ್-19 ಸೋಂಕು ಪತ್ತೆಗೆ ನಡೆಸುತ್ತಿರುವ ಟೆಸ್ಟಿಂಗ್ ಕಿಟ್ ಜರ್ಮನಿಯಿಂದ ಪೂರೈಕೆಯಾಗುತ್ತಿದೆ. ದಿನೇದಿನೇ ವ್ಯಾಪಕವೂ ಹಾಗೂ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಿಟ್‌ಗಳ ಪೂರೈಕೆಯೂ ಅಷ್ಟೇ ತ್ವರಿತವಾಗಿ ಆಗಬೇಕಾಗುತ್ತದೆ. ಈ ತುರ್ತು ಪರಿಸ್ಥಿತಿಯಲ್ಲಿ ಪುಣೆ ಮೂಲದ ಮೈ ಲ್ಯಾಬ್ ಡಯಾಗ್ನಸ್ಟಿಕ್ ಸಲುಷನ್ಸ್ ಪ್ರೈವೇಟ್ ಲಿಮಿಟೆಡ್ ಕಿಟ್‌ವೊಂದನ್ನು ರೂಪಿಸಿದ್ದು, ವಾಣಿಜ್ಯ ಬಳಕೆಯ ಉತ್ಪಾದನೆಗೆ ಸರ್ಕಾರ ಅನುಮತಿ ನೀಡಿದೆ.
ಈ ಕಿಟ್‌ಗೆ ಮೈ ಲ್ಯಾಬ್ ಪ್ಯಾಥೊ ಡಿಟೆಕ್ಟ್ ಕೋವಿಡ್ 19 ಕ್ವಾಲಿಟೇಟಿವ್ ಪಿಸಿಆರ್ ಕಿಟ್ ಎಂದು ಕರೆಯಲಾಗಿದ್ದು, ಭಾರತದ ಆಹಾರ ಅಭಿವೃದ್ಧಿ ಪ್ರಾಧಿಕಾರ/ ಕೇಂದ್ರ ಔಷಧಿ ನಿಯಂತ್ರಣ ಸಂಸ್ಥೆ ಸಿಡಿಎಸ್‌ಸಿಒಯಿಂದ ಅನುಮತಿ ಪಡೆದುಕೊಂಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಕೂಡ ವಿಶ್ಲೇಷಣೆ ಮಾಡಿ, ಒಪ್ಪಿಗೆ ನೀಡಿದೆ ಎಂದು ಇಂಡಿಯಾ ಟುಡೆ ವರದಿ ಪ್ರಕಟಿಸಿದೆ.
ಲ್ಯಾಬ್‌ನ ವ್ಯವಸ್ಥಾಪಕ ನಿರ್ದೇಶಕ ಹಸ್‌ಮುಖ್ ರಾವಲ್, ‘ಕಿಟ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ/ ಸಿಡಿಸಿ ಮಾರ್ಗಸೂಚಿಗಳನ್ನು ಅನುಸರಿಸಿ ಅಭಿವೃದ್ಧಿ ಪಡಿಸಲಾಗಿದೆ. ಆರು ವಾರಗಳಲ್ಲಿ ಕಿಟ್ ಅನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಕಿಟ್ ಕುರಿತು ಮಾಹಿತಿ ನೀಡಿರುವ ಮೈಲ್ಯಾಬ್‌ನ ಕಾರ್ಯಕಾರಿ ನಿರ್ದೇಶಕ ಶೈಲೇಂದ್ರ ಕಾವಡೆ, ಸೂಕ್ಷ್ಮ ಪಿಸಿಆರ್ ಟೆಕ್ನಾಲಜಿ (ಪಾಲಿಮರೇಸ್ ಚೈನ್ ರಿಯಾಕ್ಷನ್) ಆಧರಿತ ಈ ಕಿಟ್ ಇದಾಗಿದ್ದು, ಪ್ರಾಥಮಿಕ ಹಂತದಲ್ಲೇ ಸೋಂಕನ್ನು ಗುರುತಿಸುವಷ್ಟು ಸಮರ್ಥವಾಗಿದೆ. ಅಲ್ಲದೆ ಅತ್ಯಂತ ನಿಖರವಾಗಿ ಸೋಂಕನ್ನು ಪತ್ತೆ ಮಾಡಬಲ್ಲದು’ ಎಂದಿದ್ದಾರೆ.
ಪ್ರಸ್ತುತ ಕಿಟ್‌ಗಳಿಗೆ ಹೋಲಿಸಿದೆ ಕೇವಲ ಎರಡೂವರೆ ಗಂಟೆಗಳಲ್ಲಿ ಸೋಂಕನ್ನು ಗುರುತಿಸುವಷ್ಟು ಸಮರ್ಥವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಕಿಟ್‌ನ ಬೆಲೆ 1200 ರೂ.ಗಳಾಗಬಹುದು ಎಂದು ಅಂದಾಜು ಮಾಡಲಾಗಿದೆ.
ಇದನ್ನೂ ಓದಿ | ಕರೋನಾ ಕಳವಳ | 15 ನಿಮಿಷಗಳಲ್ಲಿ ಫಲಿತಾಂಶ; ಕ್ಷಿಪ್ರ ಕೋವಿಡ್-19 ಪರೀಕ್ಷಾ ಸಾಧನ ಸಿದ್ಧಪಡಿಸಿದ ಬ್ರೆಜಿಲ್‌ನ ಸ್ಟಾರ್ಟಪ್
ಸದ್ಯದ ಭಾರತದಲ್ಲಿ ನಡೆಯುತ್ತಿರುವ ಪರೀಕ್ಷೆಗಳು ಕಡಿಮೆ ಸಂಖ್ಯೆಯಲ್ಲಾಗುತ್ತಿದೆ. ವಿದೇಶಿ ಕಿಟ್‌ಗಳನ್ನು ಅವಲಂಬಿಸಿರುವುದು ಪರೀಕ್ಷೆಗಳು ನಿಧಾನಗತಿಯಲ್ಲಿ ನಡೆಯಲು ಕಾರಣವಾಗಿದ್ದು. ಸಾಗಣೆಯೇ ಸಮಸ್ಯೆಯಾಗಿದೆ. ಸ್ಥಳೀಯವಾಗಿ ಉತ್ಪಾದನೆ ಮಾಡುವಂತಾಗಿದ್ದು, ಪರೀಕ್ಷೆಗಳನ್ನು ವೇಗವಾಗಿ ನಡೆಸುವ ತುರ್ತಿಗೆ ಪೂರಕವಾದ ಬಲ ತುಂಬಿದಂತಾಗಿದೆ.
ಒಂದು ವಾರದಲ್ಲಿ 1 ಲಕ್ಷ ಕಿಟ್‌ಗಳನ್ನು ಉತ್ಪಾದಿಸಿಕೊಡುವುದಾಗಿ ಮೈಲ್ಯಾಬ್ ಕಂಪನಿ ತಿಳಿಸಿದ್ದು, 1 ಕಿಟ್‌ನಿಂದ 100 ರೋಗಿಗಳನ್ನು ಪರೀಕ್ಷಿಸಬಹುದು ಎಂದಿದೆ. ಅದರಂತೆ ಒಂದೇ ದಿನದಲ್ಲಿ 1000 ರೋಗಿಗಳನ್ನು ಪರೀಕ್ಷಿಸಲು ಸಾಧ್ಯವಿದೆ ಎನ್ನಲಾಗಿದೆ.