ವಿಸ್ಮಯಗಳಿಂದ ತುಂಬಿರುವ ನಬೋಮಂಡಲದಲ್ಲಿ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಅಪರಿಚಿದ ಗ್ರಹವೊಂದು ರೇಡಿಯೋ ಸಿಗ್ನಲ್ ಕಳಿಸುತ್ತಿದೆ! ಅದೂ ಮುಹೂರ್ತವಿಟ್ಟಂತೆ ನಿರ್ದಿಷ್ಟ ಅವಧಿಗೊಮ್ಮೆ ಹಾಗೂ ನಿರಂತರವಾಗಿ!
ಆಸ್ಟ್ರೇಲಿಯಾದ ಖಗೋಳ ಭೌತಶಾಸ್ತ್ರಜ್ಞ ನತಾಶಾ ಹರ್ಲಿ-ವಾಕರ್ ಈ ಕೌತುಕವನ್ನು ಕಂಡುಕೊಂಡಿದ್ದು, ರೇಡಿಯೋ ತರಂಗಗಳು ಕರಾರುವಾಕ್ಕಾಗಿ ಪ್ರತಿ 18 ನಿಮಿಷ 18 ಸೆಕೆಂಡಿಗೊಮ್ಮೆ ನಿರಂತರವಾಗಿ ಬಿತ್ತರವಾಗುತ್ತಿವೆ ಎಂದು ತಿಳಿಸಿದ್ದಾರೆ. ಈ ಹೊಸ ವಿದ್ಯಮಾನ ವೈಜ್ಞಾನಿಕ ಸಮುದಾಯದಲ್ಲಿ ಸಂಚಲನವನ್ನು ಸೃಷ್ಟಿಸಿದ್ದು, ವಿಜ್ಞಾನಿಗಳು ಈ ಬಗ್ಗೆ ಹೆಚ್ಚಿನ ಸಂಶೋಧನೆಗೆ ಕೈ ಹಾಕಿದ್ದಾರೆ.
ರೇಡಿಯೋ ತರಂಗಗಳನ್ನು ಬಿಡುಗಡೆ ಮಾಡುತ್ತಿರುವ ಕಾಯವು ಭೂಮಿಯಿಂದ ಸುಮಾರು 4,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದು, ಬಲವಾದ ಕಾಂತೀಯ ಬಲವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕ್ಷೀರ ಪಥ (ಮಿಲ್ಕಿ ವೇ) ನಕ್ಷತ್ರ ಪುಂಜದಲ್ಲಿ ಇಂತಹ ಅಚ್ಚರಿ ದಾಖಲಾಗಿದ್ದು, ಈ ವಿದ್ಯಮಾನದ ಬಗ್ಗೆ ಇನ್ನಷ್ಟು ಅನ್ವೇಷಣೆಗಳು ಆಗಬೇಕಿವೆ. ರೇಡಿಯೋ ತರಂಗ ಬಿತ್ತರವಾಗುತ್ತಿರುವ ವಿಚಾರ ಮಾತ್ರ ಖಚಿತವಾಗಿದ್ದು ಹೇಗೆ, ಯಾಕೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲು ಇನ್ನಷ್ಟು ಕಾಲ ಕಾಯಬೇಕಿದೆ. ಅಲ್ಲಿಯವರೆಗೆ ನಾವು ಎಫ್‌ಎಂ ರೇಡಿಯೋ ಹಾಕಿ ಹಾಡು ಕೇಳಿ ಹಾಯಾಗಿರೋಣ.