ಮೈಕ್ರೋವೇವ್‌ ಎಂಜಿನಿಯರಿಂಗ್‌ನಲ್ಲಿ ಇತಿಹಾಸ ನಿರ್ಮಿಸಿದ ಬಿಎಂ ಶ್ರೀ ಸೋದರಿ ರಾಜೇಶ್ವರಿ ಚಟರ್ಜಿ

ಕನ್ನಡತಿ ರಾಜೇಶ್ವರಿ ಚಟರ್ಜಿ ಹಲವು ಅಪೂರ್ವ ಹೆಗ್ಗುರುತುಗಳನ್ನು ದಾಖಲಿಸಿದವರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಲವು ಮೊದಲುಗಳಿಗೆ ಕಾರಣವಾದ ಇವರು ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂದು ಅವರ 98ನೇ ಜನ್ಮದಿನ

ಚಿತ್ರ ಕೃಪೆ : ಭಾರತೀಯ ವಿಜ್ಞಾನ ಸಂಸ್ಥೆ ಸಂಗ್ರಹ

ಮೂವತ್ತರ ದಶಕ. ನೊಬೆಲ್‌ ಪುರಸ್ಕೃತ ವಿಜ್ಞಾನಿ ಸಿ ವಿ ರಾಮನ್‌ ಆಗ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ನಿರ್ದೇಶಕರು. ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಮಹತ್ವದ ಸಾಧನೆ ಮಾಡಿದ ಕಮಲಾ ಸೋಹ್ನಿ ಆಗ ಸ್ನಾತಕೋತ್ತರ ಪದವಿಗಾಗಿ ಐಐಎಸ್‌ಸಿಗೆ ಅರ್ಜಿ ಹಾಕಿದ್ದರು. ಆ ಹೊತ್ತಿಗೆ ಸಂಸ್ಥೆಯಲ್ಲಿ ಕೆಲ ಮಹಿಳೆಯರು ಅಧ್ಯಯನ ಮಾಡುತ್ತಿದ್ದರಾದರೂ ಕಮಲಾ ಅವರಿಗೆ ರಾಮನ್‌ ಪ್ರವೇಶ ನಿರಾಕರಿಸಿದ್ದರು. ಛಲ ಬಿಡದ ಕಮಲಾ ರಾಮನ್‌ ಮನವೊಲಿಸಿ, ಸಂಶೋಧನಾ ಸಹಾಯಕಿ ಅವಕಾಶ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ಕೆಲ ಕಾಲದಲ್ಲಿ ಸಿ ವಿ ರಾಮನ್‌ ಮನಸ್ಸು ಬದಲಾಗಿ, ಇನ್ನು ಮೂವರು ಮಹಿಳೆಯರಿಗೆ ಪ್ರವೇಶಾವಕಾಶ ನೀಡಿದರು. ಈ ಸಾಲಿನಲ್ಲಿಯೇ ನಲವತ್ತರ ದಶಕದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗೆ ಕಾಲಿಟ್ಟವರು ರಾಜೇಶ್ವರಿ. ಮೂರು ದಶಕಗಳ ಕಾಲ ಸಂಶೋಧನೆಯಲ್ಲಿ ತೊಡಗಿಸಿಕೊಂಡ ರಾಜೇಶ್ವರಿ ಮೈಕ್ರೋವೇವ್‌ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದರು. ರಡಾರ್‌ ತಂತ್ರಜ್ಞಾನದಲ್ಲಿ ಇಂದಿಗೂ, ಭಾರತದ ರಕ್ಷಣಾ ಸಂಶೋಧನಾ ಸಂಸ್ಥೆಯ ರಕ್ಷಣಾ ತಂತ್ರಾಂಶಗಳಲ್ಲಿ ಬಳಕೆಯಾಗುತ್ತಿರುವುದು ರಾಜೇಶ್ವರಿ ಅವರ ಸಂಶೋಧನೆಯೇ.

ಯಾರಿವರು?

ಮೈಸೂರು ರಾಜ್ಯದ ಮೊತ್ತಮೊದಲ ಮಹಿಳಾ ಪದವೀಧರೆ ಕಮಲಮ್ಮ ದಾಸಪ್ಪ ಅವರ ಮೊಮ್ಮಗಳು ಈ ರಾಜೇಶ್ವರಿ. ನಂಜನಗೂಡಿನ ಪ್ರಸಿದ್ಧ ವಕೀಲ ತಂದೆ ಬಿ ಎಂ ಶಿವರಾಮಯ್ಯ ಇವರ ತಂದೆ, ಕನ್ನಡದ ಕಣ್ವ ಎಂದೇ ಹೆಸರು ಪಡೆದ, ಖ್ಯಾತ ಕವಿ ಮತ್ತು ಸಾಹಿತಿ ಬಿ ಎಂ ಶ್ರೀಕಂಠಯ್ಯನವರು ಇವರ ಸೋದರ. ಇಂತಹ ಕುಟುಂಬದಲ್ಲಿ ಬೆಳೆದ ರಾಜೇಶ್ವರಿ. ಅಜ್ಜಿ ಸ್ಥಾಪಿಸಿದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು.

ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ನಡೆಸಿ, ಬಿಎಸ್ಸಿ (ಆನರ್ಸ್) ಮತ್ತು ಎಂಎಸ್ಸಿ (ಗಣಿತ ಮತ್ತು ಭೌತಶಾಸ್ತ್ರ) ಪದವಿಗಳನ್ನು ಪ್ರಥಮ ದರ್ಜೆಯಲ್ಲಿ ಪಡೆದು ಉತ್ತೀರ್ಣರಾದರು. ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ, ಆ ಕಾಲಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಪಾರಿತೊಷಕ, ಎಂ ಟಿ ನಾರಾಯಣ ಅಯ್ಯಂಗಾರ್ ಬಹುಮಾನ ಮತ್ತು ವಾಲ್ಟರ್ಸ್ ಸ್ಮಾರಕ ಪಾರಿತೋಷಕ- ಈ ಮೂರೂ ಬಹುಮಾನಗಳು ಲಭಿಸಿದ್ದವು.

ವಿಜ್ಞಾನ ಸಂಶೋಧನೆಯಲ್ಲಿ ಅತೀವ ಆಸಕ್ತಿ ಇದ್ದ ರಾಜೇಶ್ವರಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಧ್ಯಯನ ಮಾಡಬೇಕೆಂಬ ಮಹದಾಸೆಯೊಂದಿಗೆ ಅರ್ಜಿ ಹಾಕಿದರು. ಈ ಹೊತ್ತಿಗಾಗಲೇ ಮಹಿಳೆಯರಿಗೆ ಮುಕ್ತವಾಗುತ್ತಿದ್ದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ರಾಜೇಶ್ವರಿಯವರಿಗೂ ಪ್ರವೇಶ ದೊರೆಯಿತು. ಇದೇ ವೇಳೆ ವಿಜ್ಞಾನ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಲೆಂದು ಸಮಿತಿಯೊಂದನ್ನು ರಚಿಸಿದ್ದರು. ಇದರಲ್ಲಿ ಶಾಂತಿ ಸ್ವರೂಪ್‌ ಭಟ್ನಾಗರ್, ಹೋಮಿ ಜಹಾಂಗೀರ್‌ ಬಾಬಾ, ಜೆ ಸಿ ಘೋಷ್‌ ಮತ್ತು ಕೆ ಎಸ್‌ ಕೃಷ್ಣನ್‌ ಇದ್ದರು. ಈ ಸಮಿತಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ವಿಜ್ಞಾನ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಸಕ್ರಿಯವಾಗಲಿ ಶಿಷ್ಯವೇತನ ನೀಡಬೇಕೆಂದು, ಅಮೆರಿಕ, ಇಂಗ್ಲೆಂಡ್‌ ಮತ್ತು ಕೆನಡಾಗಳಲ್ಲಿ ಉನ್ನತ ವ್ಯಾಸಂಗಕ್ಕೆ ಕಳಿಸಿಕೊಡಬೇಕೆಂದು ಶಿಫಾರಸು ಮಾಡಿತು.

ಈ ಹೊತ್ತಿಗಾಗಲೇ ಐಐಎಸ್‌ಸಿಯಲ್ಲಿ ತಮ್ಮ ಅಧ್ಯಯನಶೀಲತೆಯಿಂದ ಹೆಸರಾಗಿದ್ದ ರಾಜೇಶ್ವರಿ ಅವರಿಗೆ 1947ರಲ್ಲಿ ಶಿಷ್ಯವೇತನ ಲಭಿಸಿತು. ಅಮೆರಿಕದ ಮಿಷಿಗನ್‌ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರವೇಶವೂ ಲಭಿಸಿತು. ವಾಷಿಂಗ್ಟನ್‌ ಡಿಸಿಯಲ್ಲಿ ರೇಡಿಯೋ ಫ್ರೀಕ್ವೆನ್ಸಿ ಮೆಷರ್‌ಮೆಂಟ್‌ ಇಲಾಖೆಯಲ್ಲಿ ಎಂಟು ತಿಂಗಳ ಕಾಲ ತರಬೇತಿ ಪಡೆದರು. ವಿಲಿಯಂ ಗೌಲ್ಡ್‌ ಡೋ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದರು.

ವಿದ್ಯಾರ್ಥಿನಿಯಾಗಿ ಐಐಎಸ್‌ಸಿಯಿಂದ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ರಾಜೇಶ್ವರಿ ಅವರು ಪ್ರಾಧ್ಯಾಪಕರಾಗಿ ಮತ್ತೆ ಐಐಎಸ್‌ಸಿಗೆ ಮರಳಿದರು.

೧೯೫೩ರಲ್ಲಿ ಭಾರತಕ್ಕೆ ಮರಳಿದ ರಾಜೇಶ್ವರಿಯವರು, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಸೇರಿದರು. ಸಹೋದ್ಯೋಗಿ ಸಿಸಿರ್ ಕುಮಾರ್ ಚಟರ್ಜಿಯವರನ್ನು ಅದೇ ವರ್ಷ ವಿವಾಹವಾದರು. ವಿವಾಹದ ನಂತರ ಚಟರ್ಜಿ ದಂಪತಿಗಳು, ಮೈಕ್ರೋವೇವ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧನೆಯನ್ನು ಪ್ರಾರಂಭಿಸಿದರು. ಭಾರತದಲ್ಲಿ ಈ ರೀತಿಯ ಸಂಶೋಧನೆಯು ಅದೇ ಮೊದಲನೆಯದಾಗಿತ್ತು. ಈ ಸಂದರ್ಭದಲ್ಲಿ ಅವರು ಪ್ರಾಧ್ಯಾಪಕರಾಗಿ ನೇಮಕವಾದರು. ಜೊತೆಗೆ, ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರೂ ಆದರು.

ಇವರ ಮಾರ್ಗದರ್ಶನದಲ್ಲಿ ಬೆಳೆದ ಹಲವು ವಿದ್ಯಾರ್ಥಿಗಳು ವಿಜ್ಞಾನ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಪದ್ಮಶ್ರೀ ಪುರಸ್ಕೃತ ರಡಾರ್‌ ಪಿತಾಮಹ ಎಂದು ಕರೆಸಿಕೊಂಡ ಆರ್ ಪಿ ಶೆಣೈ ರಾಜೇಶ್ವರಿ ಅವರ ಶಿಷ್ಯ. ಟಿ ಎಸ್‌ ವೇದವತಿ, ಆನಂದ ಕುಮಾರ್‌, ಕೆ ಜಿ ನಾರಾಯಣನ್‌ ರಾಜೇಶ್ವರಿಯ ಸಂಶೋಧನೆಯ ಪರಂಪರೆಯನ್ನು ಮುಂದುವರೆಸಿದವರು. ಮೂರೂವರೆ ದಶಕಗಳ ಕಾಲ ವಿಜ್ಞಾನದ ಒಡನಾಟದಲ್ಲಿ ಅಪಾರತೊಡಗಿಸಿಕೊಂಡ ರಾಜೇಶ್ವರಿ 100ಕ್ಕೂ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

ಎಲಿಮೆಂಟ್ಸ್ ಆಫ್ ಮೈಕ್ರೋವೇವ್ ಇಂಜಿನಿಯರಿಂಗ್, ಡೈಎಲೆಕ್ಟ್ರಿಕ್ ಮತ್ತು ಡೈಎಲೆಕ್ಟ್ರಿಕ್ ಲೋಡೆಡ್ ಆಂಟೆನಾಗಳು, ಅಡ್ವಾನ್ಸ್ಡ್‌ ಮೈಕ್ರೋವೇವ್‌ ಎಂಜಿನಿಯರಿಗ್‌; ಅಡ್ವಾನ್ಸ್ಡ್‌ ಟಿಪ್ಸ್‌ ಪ್ರಮುಖ ಕೃತಿಗಳು. ಎ ಥೌಸಂಡ್‌ ಸ್ಟ್ರೀಮ್ಸ್‌ ಅವರ ಆತ್ಮಕತೆ.

ನಿವೃತ್ತಿಯ ನಂತರವೂ ಸಾರ್ವಜನಿಕವಾಗಿ ಸಕ್ರಿಯರಾಗಿದ್ದ ರಾಜೇಶ್ವರಿ, ಭಾರತೀಯ ಮಹಿಳಾ ಅಧ್ಯಯನ ಸಂಘದಲ್ಲಿ ತನ್ನನ್ನು ತೊಡಗಿಸಿಕೊಂಡು, ಮಹಿಳಾ ಶಿಕ್ಷಣದಲ್ಲಿನ ತೊಡಕುಗಳು, ಜಾತಿ ವ್ಯವಸ್ಥೆ, ಬಡತನ, ಲಿಂಗ ಅಸಮಾನತೆಯ ಬಗ್ಗೆ ಧ್ವನಿ ಎತ್ತಿದ್ದರು.

ಅವರ ಸಾಧನೆಯನ್ನು ಗುರುತಿಸಿದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ ಜಗದೀಶ್ಚಂದ್ರ ಭೋಸ್ ಸ್ಮಾರಕ ಪ್ರಶಸ್ತಿ, ಇಂಗ್ಲೆಂಡಿನ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ರೇಡಿಯೋ ಇಂಜಿನೀಯರಿಂಗ್ ಸಂಸ್ಥೆ, ಮೌಂಟ್ ಬ್ಯಾಟನ್ ಪ್ರಶಸ್ತಿ, ಅತ್ಯುತ್ತಮ ಸಂಶೋಧನೆ ಮತ್ತು ಉತ್ತಮ ಬೋಧನಾಕ್ರಮಕ್ಕಾಗಿ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಶನ್ ಇಂಜಿನಿಯರ್ಸ್ ಸಂಸ್ಥೆ ರಾಮ್‌ಲಾಲ್ ವಾಧ್ವಾ ಪ್ರಶಸ್ತಿ ಲಭಿಸಿದವು. ಮೇಘನಾದ ಸಹಾ ಪಾರಿತೋಷಕವೂ ಸಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.