ರೂ. 4000 ಕೊಟ್ಟರೆ ಬೈಕ್‌ ನಿಮ್ಮ ಹೆಸರಿಗೆ, ಕಂತು ವಿಳಂಬಿಸಿದರೆ ಓಡುವುದೇ ಇಲ್ಲ!

ಬುಧವಾರ ಅನಾವರಣಗೊಂಡ ರಿವೋಲ್ಟ್‌ ಆರ್ ವಿ 400 ಎಐ ಆಧರಿತ ಎಲೆಕ್ಟ್ರಿಕ್‌ ಬೈಕ್‌, ವಾಹನಪ್ರಿಯರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿದೆ. ಆದರೆ ಕಂತು ಕಟ್ಟಲು ವಿಳಂಬ ಮಾಡಿದರೆ ಸ್ವಿಚ್‌ ಆಫ್‌ ಆಗುತ್ತದೆ!

ಅಮೆಜಾನ್‌ ಸೇರಿದಂತೆ ಆನ್‌ಲೈನ್‌ನಲ್ಲೇ ಬುಕ್ಕಿಂಗ್ ವ್ಯವಸ್ಥೆ ಆರಂಭಿಸಿದ ರಿವೋಲ್ಟ್ ಮಾರಾಟ ಕ್ರಮದಲ್ಲೂ ಹೊಸ ಹಾದಿ ಕಂಡುಕೊಂಡಿದೆ. ಯಾವುದೇ ಡೌನ್‌ಪೇಮೆಂಟ್ ಇಲ್ಲದೆ ಕೇವಲ ನಾಲ್ಕು ಸಾವಿರ‌ ರೂಪಾಯಿಗೆ ನಿಮ್ಮ ಹೆಸರಿಗೆ ಬೈಕನ್ನು ನೋಂದಣಿ‌ ಮಾಡಿಕೊಳ್ಳಬಹುದು.

ನಂತರ ಮುಂದಿನ ಮೂರು ವರ್ಷ ಪ್ರತಿ ತಿಂಗಳು ₹4000 ಪಾವತಿ ಮಾಡಬೇಕು. ಮೂರು ವರ್ಷಗಳ ವರೆಗಿನ ಬ್ರೇಕ್ ಪ್ಯಾಡ್, ಟೈರ್ ಬದಲಾವಣೆ ಸೇರಿದಂತೆ ಸರ್ವೀಸ್ ಕೂಡ ಉಚಿತ ಎಂದು ಕಂಪನಿ ತಿಳಿಸಿದೆ. ಈ ಅವಧಿಯ ಮುನ್ನವೇ ಬೈಕನ್ನು ಮಾರಾಟ ಮಾಡಲು ಇಚ್ಛಿಸಿದಲ್ಲಿ ಮುಂದಿನ ಕಂತುಗಳನ್ನು ಹೊಸ ಬಳಕೆದಾರ ತುಂಬಬೇಕು.

ಅಕಸ್ಮಾತ್ ಕಂತು ಕಟ್ಟಲು ತಪ್ಪಿದರೆ ಪಾವತಿ ಮಾಡುವಂತೆ ಕಂಪನಿಯಿಂದ ನಿಮಗೆ ಫೋನ್ ಬರುವುದಿಲ್ಲ, ಬದಲಾಗಿ ಬೈಕ್ ಓಡುವುದು ನಿಲ್ಲುತ್ತದೆ. ಇದು ಸಂಪೂರ್ಣ ಇಲೆಕ್ಟ್ರಿಕ್ ಹಾಗೂ ಸದಾ ಕನೆಕ್ಟೆಡ್ ಆದ ಕಾರಣ ಬೈಕನ್ನು “ಸ್ವಿಚ್ ಆಫ್” ಮಾಡುವ ವ್ಯವಸ್ಥೆ ಕಂಪನಿ ಕೈಯಲ್ಲಿ ಇರುತ್ತದೆ. ಬಹುತೇಕ 125ಸಿಸಿ ಎಂಜಿನ್ ಹೊಂದಿದ ಬೈಕಿನ ಪವರ್ ಹೊಂದಿರುವ ರಿವೋಲ್ಟ್ ಒಂದು ಚಾರ್ಜಿನಲ್ಲಿ ಇಕೋ ಮೋಡ್‌ಲ್ಲಿ 156 ಕಿಮೀ ದೂರ ಕ್ರಮಿಸಬಹುದು. ಆದರೆ ಇದು ಗಂಟೆಗೆ 45 ಕಿಮೀ ವೇಗದ ಮಿತಿ ಇರಿಸಿಕೊಂಡಾಗ ಮಾತ್ರ. ಪವರ್ ಮೋಡಿನಲ್ಲಿ ಗಂಟೆಗೆ 85ಕಿಮೀ ವೇಗದಲ್ಲಿ ಚಲಿಸಬಹುದಾದರೂ ಒಟ್ಟು ಮೈಲೇಜ್ ಅರ್ಧಕ್ಕರ್ಧ ಕಡಿಮೆ ಆಗುತ್ತದೆ.

ಚೀನೀ ಬೈಕ್ ಹೊಸ ಉಡುಪಿನಲ್ಲಿ?

ರಿವೋಲ್ಟ್ ಬೈಕಿನ ಬಹುಭಾಗವನ್ನು ದೇಶೀಯವಾಗಿ ವಿನ್ಯಾಸ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದ್ದರೂ ಕೆಲವೇ ಕೆಲವು ಬಾಹ್ಯ ವಿನ್ಯಾಸದ ಹೊರತು ಚೈನಾದ ಸೂಪರ್ ಸೋಕೋ ಬೈಕಿಗೆ ಸಾಕಷ್ಟು ಹೋಲುತ್ತದೆ. ಹಾಗಾಗಿ ಇದು ಸೂಪರ್ ಸೋಕೋವನ್ನು ಕೇವಲ ರೀ ಬ್ಯಾಡ್ಜ್ (ಹೆಸರು ಬದಲಾವಣೆ) ಮಾಡಲಾಗಿದೆ‌ ಎಂಬ ಟೀಕೆಗಳು ಅಟೋ ಲೋಕದಲ್ಲಿ ವ್ಯಕ್ತವಾಗಿವೆ.

ಇದನ್ನೂ ಓದಿ | ದೇಶದ ಮೊದಲ ಎಲೆಕ್ಟ್ರಿಕ್‌ ಮೋಬೈಕ್‌ ರಿವೋಲ್ಟ್‌ ಆರ್‌ ವಿ 400 ಮಾರುಕಟ್ಟೆಗೆ

ಸೂಪರ್ ಸೋಕೋ ಟಿಎಸ್ ಚೈನಾ ಅಲ್ಲದೆ ಕೆಲವು ಐರೋಪ್ಯ‌ ರಾಷ್ಟ್ರಗಳಲ್ಲಿ ಲಭ್ಯವಿದ್ದು 2990 ಯುರೋಗೆ (₹2.34 ಲಕ್ಷ) ಬಿಕರಿಯಾಗುತ್ತಿದೆ. ರಿವೋಲ್ಟ್ ಆರ್‌ವಿ ಎಲ್‌ಇಡಿ ಹೆಡ್‌ಲೈಟ್, ಸ್ವಿಚ್‌ಗಳು, ಚಾಲನಾ ಮೋಟರ್ ಹಾಗೂ ಫ್ರೇಮ್ ಎಲ್ಲದರಲ್ಲೂ ಸೂಪರ್ ಸೋಕೋ ಟಿಎಸ್ಸನ್ನು ಹೋಲುತ್ತದೆ. ಸೂಪರ್ ಸೋಕೋ ಟಿಎಸ್‌ನ ವೇಗಕ್ಕೆ ಗಂಟೆಗೆ 45 ಕಿಮೀ ವೇಗದ ಮಿತಿ ಅಳವಡಿಸಲಾಗಿದೆ, ಆದರೆ ರಿವೋಲ್ಟ್‌ಗೆ ಆ ಮಿತಿಯಿಲ್ಲ, ಹಾಗೆಯೇ ಸೂಪರ್ ಸೋಕೋ ಒಂದು ಚಾರ್ಜ್‌ನಲ್ಲಿ 160 ಓಡುತ್ತದೆ‌ ಎನ್ನಲಾದರೆ ರಿವೋಲ್ಟ್ ಆರ್‌ವಿಯ ಪ್ರಯಾಣ ಮಿತಿ 156 ಕಿಮೀ ಎಂಬುದಷ್ಟೇ ವ್ಯತ್ಯಾಸ.