ಶ್ರವಣ ಮತ್ತು ದೃಷ್ಟಿಹೀನರಿಗೆ ಸ್ಯಾಮ್‌ಸಂಗ್‌ ತಂದಿದೆ ಹೊಸ ಆ್ಯಪ್

ಕಿವಿ ಮತ್ತು ಕಣ್ಣುಗಳೆರಡು ಅಮೂಲ್ಯ ಅಂಗಗಳು ಅವೆರಡು ಇಲ್ಲದೆ ಸಂವಹನದ ಕಲ್ಪನೆಯನ್ನೂ ಮಾಡಿಕೊಳ್ಳುವುದು ಕಷ್ಟ. ಈ ಸಮಸ್ಯೆಗೆ ಸ್ಯಾಮ್‌ಸಂಗ್‌ ಹೊಸದೊಂದು ಆ್ಯಪ್ ಅನ್ನು ಪರಿಹಾರವಾಗಿ ನೀಡಿದೆ. ಇದು ಒಂದು ರೀತಿಯ ಮರುಹುಟ್ಟನ್ನು ನೀಡುವ ಆಪ್‌ ಎಂದರೆ ಅತಿಶಯೋಕ್ತಿಯೇನಲ್ಲ

ಒಂದು ಕ್ಷಣ ಕಣ್ಣು ಮುಚ್ಚಿಕೊಳ್ಳಿ. ನಂತರ ನಿಮಗೆ ಅಗತ್ಯವಾದದ ವಸ್ತುವೊಂದನ್ನು ಬೇಕೆಂದು ತುಟಿ ಬಿಚ್ಚದೆ ಇನ್ನೊಬ್ಬರಿಗೆ ಹೇಳಲು ಪ್ರಯತ್ನಿಸಿ!

ನಿಮಗೆ ಬರೆಯಲು ಗೊತ್ತಿದೆ. ಆದರೆ ಕಣ್ಣು ಕಾಣದೇ ಇರುವುರಿಂದ ಬರೆಯಲು ಸಾಧ್ಯವಿಲ್ಲ. ಸದ್ದು ಮಾಡಿ ನಿಮ್ಮತ್ತ ಯಾರ ಗಮನವನ್ನಾದರೂ ಸೆಳೆಯಬಹುದು. ಆದರೆ ನಿರ್ದಿಷ್ಟವಾಗಿ ಬೇಕಾಗಿರುವ ವಸ್ತುವಿನ ಬಗ್ಗೆ ಹೇಳುವುದಾದರೂ ಹೇಗೆ?

ಜಗತ್ತಿನ ಹೀಗೆ ಅಂಧತ್ವ ಮತ್ತು ಶ್ರವಣ ದೋಷವಿರುವ ಮಕ್ಕಳು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಅಂಥವರಿಗೆ ನೆರವಾಗಲೆಂದು ಸೆನ್ಸ್‌ ಇಂಟರ್‌ನ್ಯಾಷನಲ್‌ ಇಂಡಿಯಾ ಸಹಯೋಗದಲ್ಲಿ ಗುಡ್‌ವೈಬ್ಸ್‌ ಆ್ಯಪ್ ಅಭಿವೃದ್ಧಿಪಡಿಸಿದೆ.

ಈ ಆ್ಯಪ್ ಮೋರ್ಸ್‌ ಕೋಡ್‌ ಆಧರಿಸಿ ಕೆಲಸ ಮಾಡುತ್ತದೆ. ಫೋನ್‌ ಪರದೆಯ ಮೇಲೆ ಮೋರ್ಸ್‌ ಸಂಕೇತಗಳನ್ನು ತಟ್ಟುವ ಮೂಲಕ ಬರೆದರೆ ಅದು ಅಕ್ಷರ ರೂಪ ಪಡೆದು, ನಂತರ ಧ್ವನಿಯಾಗಿ ಇನ್ನೊಂದು ತುದಿಯಲ್ಲಿರುವವರಿಗೆ ರವಾನೆಯಾಗುತ್ತದೆ. ಪ್ರತಿಯಾಗಿ ಆ ತುದಿಯಿಂದ ಧ್ವನಿ ಅಥವಾ ಅಕ್ಷರರೂಪದಲ್ಲಿ ಬರುವ ಸಂದೇಶವನ್ನು ಮೋರ್ಸ್‌ ಕೋಡ್‌ ರೂಪದಲ್ಲಿ ನೀಡುತ್ತದೆ. ಇದು ಅಂಧರಿಗೆ ಹೇಗೆ ತಿಳಿಯುತ್ತದೆ? ಪ್ರತಿ ಬಾರಿ ಒಂದು ಅಕ್ಷರ ಬಂದಾಗ ಫೋನ್‌ ವೈಬ್ರೇಟ್‌ ಆಗುತ್ತದೆ. ಇದನ್ನು ಮೋರ್ಸ್‌ ಸಂಕೇತರೂಪದಲ್ಲಿ ಗ್ರಹಿಸಿಕೊಂಡು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಒಸಿಆರ್ ತಂತ್ರಜ್ಞಾನಗಳು ಈಗ ಅಸಾಧ್ಯಗಳನ್ನು ಸಾಧ್ಯವಾಗಿಸುತ್ತಿವೆ.