ನಮ್ಮದೇ ಭಾಷೆಯಲ್ಲಿ ಮಾತನಾಡುವ ವರ್ಚ್ಯುವಲ್‌ ಮನುಷ್ಯರನ್ನು ಸೃಷ್ಟಿಸುತ್ತಿದೆ ಸ್ಯಾಮ್‌ಸಂಗ್‌!

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ರೊಬೊಟಿಕ್ಸ್‌ ಕೂಡಿ ಬುದ್ಧಿವಂತ ಮನುಷ್ಯನರನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಲೇ ಇದೆ. ಮನುಷ್ಯನ ವಿವಿಧ ಅಗತ್ಯ ಮತ್ತು ಆದ್ಯತೆಗಳನ್ನು ಪೂರೈಸುವುದಕ್ಕೆ ಹಲವು ದೈತ್ಯ ಟೆಕ್‌ ಸಂಸ್ಥೆಗಳು ದುಡಿಯುತ್ತಿವೆ. ಈ ನಿಟ್ಟಿನಲ್ಲಿ ಸ್ಯಾಮ್‌ಸಂಗ್‌ ಪ್ರಯೋಗವೂ ಒಂದು, ಅದರ ಹೆಸರು ನಿಯೋನ್

ನಿಮಗೆ ನಿರ್ದಿಷ್ಟ ವಿಷಯದ ಬಗ್ಗೆ ಕೆಲವು ಗೊಂದಲಗಳಿವೆ. ಕೂಡಲೇ ಒಬ್ಬ ಶಿಕ್ಷಕರನ್ನು ಕೇಳಿ ತಿಳಿಯಬೇಕೆನಿಸುತ್ತದೆ. ಆಗ ನಿಮ್ಮ ಪರದೆಯ ಮೇಲೆ ಕಾಣಿಸಿಕೊಳ್ಳುವ ವ್ಯಕ್ತಿ, ನಿಮ್ಮೊಂದಿಗೆ ಮಾತನಾಡಿ, ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುತ್ತಾನೆ.

ನೀವು ಕಚೇರಿಯೊಂದಕ್ಕೆ ಹೋದಾಗ, ಅಲ್ಲಿ ರಿಸೆಪ್ಷನ್‌ನಲ್ಲಿ ಯಾರು ಕಾಣಿಸುವುದಿಲ್ಲ. ಬದಲಿಗೆ ಒಂದು ದೊಡ್ಡ ಪರದೆ ಕಾಣಿಸುತ್ತದೆ. ಅಲ್ಲಿ ಹೋಗಿ ನಿಂತ ಕೂಡಲೇ ನಿಮ್ಮನ್ನು ಸ್ವಾಗತಿಸುವ ವ್ಯಕ್ತಿಯೊಬ್ಬರು ಕಾಣಿಸುತ್ತಾರೆ. ನಿಮ್ಮೊಂದಿಗೆ ಸಾಮಾನ್ಯ ಮನುಷ್ಯನಂತೆ ಮಾತನಾಡಿ ನಿಮಗೆ ಅಗತ್ಯ ಸೇವೆಯನ್ನು ನೀಡುತ್ತಾರೆ.

ಮೇಲಿನ ಎರಡೂ ಉದಾಹರಣೆಗಳು ಕೃತಕ ಮನುಷ್ಯನ ಕಲ್ಪನೆಯನ್ನು ತಿಳಿಸಲು ಹೇಳಿದ್ದು. ಈಗಾಗಲೇ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿಸಿದ ಹಲವು ಸೇವೆಗಳು ಆರಂಭವಾಗಿವೆ. ಈ ಸಾಲಿಗೆ ಹೊಸ ಸೇರ್ಪಡೆ ಸ್ಯಾಮ್‌ಸಂಗ್‌ ಅವರ ನಿಯೋನ್‌.

ನಿಯೋನ್‌ ಒಂದು ರೀತಿಯಲ್ಲಿ ವಿಡಿಯೋ ಚಾಟ್‌ಬಾಟ್‌. ನಿರ್ದಿಷ್ಟ ವಸ್ತು, ವಿಷಯದ ಅನುಭವ, ಮಾಹಿತಿ ಒಳಗೊಂಡ ಒಬ್ಬ ಬಾಟ್‌ ನಿಮ್ಮದೊಂದಿಗೆ ವ್ಯವಹರಿಸುತ್ತದೆ. ಅದು ಥೇಟ್‌ ಮನುಷ್ಯನಂತೆಯೇ ಇರುತ್ತದೆ. ಆದರೆ ಭೌತಿಕವಾಗಿರುವುದಿಲ್ಲ. ಬದಲಿಗೆ ವರ್ಚ್ಯುವಲ್‌ ರೂಪದಲ್ಲಿ ಅಂದರೆ ನಿಮ್ಮ ಎಲೆಕ್ಟ್ರಾನಿಕ್‌ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.

ಇದು ಸ್ಯಾಮ್‌ಸಂಗ್‌ ಟೆಕ್ನಾಲಜಿ ಅಮಡ್‌ ಅಡ್ವಾನ್ಸ್ಡ್‌ ರೀಸರ್ಚ್‌ ಲ್ಯಾಬ್ಸ್‌ನ ಸೃಷ್ಟಿಯಾಗಿದ್ದು, ಇದನ್ನು ಭಾರತೀಯ ಮೂಲದ ಪ್ರಣವ್‌ ಮಿಸ್ತ್ರಿ ಮುನ್ನಡೆಸುತ್ತಿದ್ದಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ ಈ ನಿಯೋನ್‌, ‘ಕಂಪ್ಯೂಟರ್‌ ಮೂಲಕ ಮೂಲಕ ಸೃಷ್ಟಿಸಿದ ವರ್ಚ್ಯುವಲ್‌ ವ್ಯಕ್ತಿ. ನಿಜವಾದ ಮನುಷ್ಯನಂತೆ ವರ್ತಿಸುವ ಈತ/ಈಕೆ ಬುದ್ಧಿ ಮತ್ತು ಭಾವಗಳೊಂದಿಗೆ ಸ್ಪಂದಿಸುವ ಸಾಮರ್ಥ್ಯ ಹೊಂದಿರುತ್ತಾನೆ”. ಹಾಗೆಂದ ಮಾತ್ರಕ್ಕೆ ಇವು ಕೇಳಿದ್ದಕ್ಕೆ ಉತ್ತರಿಸುವ ಸ್ಮಾರ್ಟ್‌ ಅಸಿಸ್ಟಂಟ್‌ ಅಷ್ಟೇ ಅಲ್ಲ. ಬದಲಿಗೆ ಹೊಸ ಹೊಸ ಕೌಶಲ್ಯಗಳನ್ನು ಕಲಿಯುವ, ಕಲಿತಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯವುಳ್ಳ ಸಾಧನಗಳು. ಒಂದೇ ಕೊರತೆ ಎಂದರೆ ಇವುಗಳಿಗೆ ಮನುಷ್ಯನೆಂದು ಹೇಳುವ ಭೌತಿಕ ಆಕಾರವಿರುವುದಿಲ್ಲ. ಆದರೆ ಹೊಲೊಗ್ರಾಫಿಕ್‌ ತಂತ್ರಜ್ಞಾನವನ್ನು ಈ ನಿಯೋನ್‌ ಜೊತೆಗೆ ಮೇಳೈಸಿದರೆ ಅದೂ ಸಾಧ್ಯವಾಗಬಹುದು ಎನ್ನಲಾಗುತ್ತಿದೆ.

ನಿಯೋನ್‌ ಕಲ್ಪನೆಯ ಹಿಂದಿರುವ ಭಾರತೀಯ ಮೂಲದ ತಂತ್ರಜ್ಞ ಪ್ರಣವ್ ಮಿಸ್ತ್ರಿ

ಈ ನಿಯೋನ್‌ಗಳು ಪಾಠ ಮಾಡಬಹುದು, ಹಣಕಾಸು ವಿಷಯಗಳಲ್ಲಿ ಸಲಹೆಗಳನ್ನು ನೀಡಬಹುದು, ನಟಿಸಬಹುದು, ಟಿವಿ ಆಂಕರ್‌ಗಳಾಗಿ ಕಾಣಿಸಿಕೊಳ್ಳಬಹುದು. ಹೀಗೆ ನಿರ್ದಿಷ್ಟ ಕ್ಷೇತ್ರ ಪರಿಣಿತಿಯ ಸೇವೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬಲ್ಲವು ಎಂದು ಮಿಸ್ತ್ರಿ ವಿವರಿಸಿದ್ದಾರೆ.

ಮಂಗಳವಾರ ಲಾಸ್‌ವೆಗಾಸ್‌ನಲ್ಲಿ ಆರಂಭವಾದ ಕನ್‌ಸ್ಯೂಮರ್‌ ಎಲೆಕ್ಟ್ರಾನಿಕ್ಸ್‌ ಶೋನಲ್ಲಿ ಇದರ ಮಾದರಿಯನ್ನು ಪ್ರದರ್ಶಿಸಲಾಗಿದ್ದು, ಅಪಾರ ಪ್ರಶಂಸೆ ವ್ಯಕ್ತವಾಗಿದೆ.

ವ್ಯಕ್ತಿಗತ ಸಂಭಾಷಣೆಗಾಗಿ ಹೆಚ್ಚಿನ ಆದ್ಯತೆ ಇರುವ ಈ ಕಲ್ಪನೆಯಲ್ಲಿ ವ್ಯಕ್ತಿ ಮತ್ತು ನಿಯೋನ್‌ ನಡುವೆ ಸಂವಾದ, ಸಂಭಾಷಣೆ ಸಾಧ್ಯವಾಗುವಂತೆಯೇ ರೂಪಿಸಲಾಗಿದೆ. ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಬಲ್ಲ ಈ ನಿಯೋನ್‌ಗಳು ಡೀಪ್‌ಫೇಕ್‌ ಉತ್ತಮ ಹಾಗೂ ಸುಧಾರಿತ ಆವೃತ್ತಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಿಸ್ತ್ರಿ ಹೇಳುವುದು ಇದನ್ನೆ, ಅಂದರೆ ನಿಮ್ಮ ಆಪ್ತ ಮಾತುಕತೆಗೆ ಬೇಕಾಗುವ ಒಬ್ಬ ವ್ಯಕ್ತಿಯನ್ನು ನಿಯೋನ್‌ನಲ್ಲಿ ಕಂಡುಕೊಳ್ಳಲು ಸಾಧ್ಯವಿದೆ. ಅತ್ಯಾಧುನಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಒಳಗೊಂಡ ಈ ನಿಯೋನ್‌ಗಳು ಮನುಷ್ಯ ಸಂವಾದದ ಗುಣಮಟ್ಟವು ಉತ್ತಮವಾಗಿರಲಿದೆ. ಅಂದರೆ ಸ್ಪಂದನೆ, ವಿಚಾರ ಸ್ಪಷ್ಟತೆ, ಭಾವುಕತೆಗಳಲ್ಲಿ ಮನುಷ್ಯನಷ್ಟೇ, ನಿಖರವಾಗಿರುತ್ತದೆ.

ಈ ನಿಯೋನ್‌ಗಳಲ್ಲಿ ಕೋರ್‌ ಆರ್‌3 ಎಂಬ ಸಿಸ್ಟಮ್‌ ಬಳಸಲಾಗಿದೆ. ಇದರ ಪೇಟೆಂಟ್‌ ಸ್ವತಃ ಸ್ಯಾಮ್‌ಸಂಗ್‌ ಹೊಂದಿದ್ದು, ಭಿನ್ನ ಅನುಭವ ನೀಡುವುದಕ್ಕೆ ಕಾರಣವಾಗಿರುವ ಕೇಂದ್ರ ತಂತ್ರಜ್ಞಾನವೆಂದು ಮಿಸ್ತ್ರಿ ವಿವರಿಸಿದ್ದಾರೆ.
ನಿಯೋನ್‌ ಕೇವಲ ಮಾಹಿತಿ ನೀಡುವ ಬುದ್ಧಿವಂತ ಯಂತ್ರವಲ್ಲ. ನಿಮಗೆ ಸಂಗಾತಿಯಾಗುವ, ಭಾವನೆಗಳಿರುವ ವರ್ಚ್ಯುವಲ್‌ ವ್ಯಕ್ತಿ ಎಂದು ಸ್ಯಾಮ್‌ಸಂಗ್‌ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.