ಎಸ್‌ ಎಂ ಎಸ್‌ಗೆ ಹೇಳಿ ಗುಡ್‌ ಬೈ, ಬರುತ್ತಿದೆ ಆರ್‌ ಸಿ ಎಸ್‌ ಎಂಬ ಹೊಸ ಸೇವೆ

ದುಬಾರಿ ಕರೆ ದರಗಳಿದ್ದಾಗ ವರದಂತೆ ಸಿಕ್ಕಿದ್ದು ಎಸ್‌ ಎಂ ಎಸ್‌. ಸುಮಾರು ಎರಡೂವರೆ ದಶಕಗಳ ಕಾಲ ಸಂವಹನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತ್ತು. ಈಗ ಅದಕ್ಕೂ ವಿದಾಯ ಹೇಳುವ ಕಾಲ ಬಂದಿದೆ. ಎಸ್‌ಎಂಎಸ್‌ ಜಾಗವನ್ನು ಆರ್‌ಸಿಎಸ್‌ ಆಕ್ರಮಿಸಿಕೊಳ್ಳುತ್ತಿದೆ. ಏನಿದು ಆರ್‌ಸಿಎಸ್‌? ಏನಿದರ ವಿಶೇಷ?

ತೊಂಬತ್ತರ ದಶಕದ ಆರಂಭ. ಮೊಬೈಲ್‌ ಫೋನ್‌ಗಳು ಹೆಚ್ಚು ಹೆಚ್ಚು ಬಳಕೆಯಾಗುತ್ತಿದ್ದ ಕಾಲ. ದಶಕದ ಅತ್ಯಂತದ ಹೊತ್ತಿಗೆ ಮೊಬೈಲ್‌ ಫೋನ್‌ ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿತ್ತು. ಆದರೆ ಮೊಬೈಲ್‌ ಕರೆ ದರ ಮಾತ್ರ ಅಗ್ಗದ್ದಾಗಿರಲಿಲ್ಲ. ಸಣ್ಣ ಪುಟ್ಟ ವಿಚಾರಗಳನ್ನು ಕರೆ ಮಾಡಿ ತಿಳಿಸುವುದು ದುಬಾರಿ ವ್ಯವಹಾರವಾಗಿತ್ತು. ಆಗ ಬಂದಿದ್ದೇ ಎಸ್‌ಎಂಎಸ್‌.

ಹೆಸರೇ ಹೇಳುವಂತೆ ಶಾರ್ಟ್‌ ಮೆಸೇಜ್‌ ಸರ್ವಿಸ್‌ ಕೇವಲ 160 ಅಕ್ಷರಗಳನ್ನು ಬರೆಯುವುದಕ್ಕೆ ಅವಕಾಶ ಮಾಡಿಕೊಡುತ್ತಾ ಬಂದಿದೆ. ಇದರಲ್ಲಿ ಚಿತ್ರ, ಆಡಿಯೋ, ವಿಡಿಯೋ ಕಳಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಕಳೆದೊಂದು ದಶಕದಲ್ಲಿ ಇಂರ್ಟರ್ನೆಟ್‌ ಕೈಗೆಟುಕುವಂತಾದ ಮೇಲೆ, ಸೋಷಿಯಲ್‌ ಮೆಸೇಜಿಂಗ್‌ ಆಪ್‌ಗಳು ಹೆಚ್ಚು ಪ್ರಚುರವಾದ ಮೇಲೆ ಎಸ್‌ಎಂಎಸ್‌ಗಳ ಬಳಕೆ ಕಡಿಮೆಯಾಯಿತು.

ಈ ನಡುವೆ ಅಂದರೆ 2007ರಲ್ಲಿ ರಿಚ್‌ ಕಮ್ಯುನಿಕೇಷನ್‌ ಸರ್ವಿಸಸ್‌ ಎಂಬ ಯೋಜನೆಯನ್ನು ಚರ್ಚೆಗೆ ಬಂದಿತು. ಟೆಲಿಕಾಂ ಸಂಸ್ಥೆಗಳು ಅನುಮಾನಗಳಿದ್ದರಿಂದ ತಕ್ಷಣವೇ ಇದು ಜಾರಿಗೆ ಬರಲಿಲ್ಲ. ಈಗ ಗೂಗಲ್‌ ಬೆಂಬಲದೊಂದಿಗೆ ಆರ್‌ಸಿಎಸ್‌ ಜಾರಿಗೆ ಬರುತ್ತಿದೆ. ಎಟಿಅಂಡ್‌ಟಿ , ಟಿ-ಮೊಬೈಲ್‌, ಸ್ಪ್ರಿಂಟ್‌ ಮತ್ತು ವೆರಿಜಾನ್‌ ಟೆಲಿಕಾಂ ಸಂಸ್ಥೆಗಳು ಎಸ್‌ಎಂಎಸ್‌ ಜಾಗಕ್ಕೆ ಆರ್‌ಸಿಎಸ್‌ ಅನ್ನು ಜಾರಿಗೆ ತರುತ್ತಿವೆ.

ಆರ್‌ಸಿಎಸ್‌ ಇನ್‌ಸ್ಟಂಟ್‌ ಮೆಸೇಜಿಂಗ್‌ ಸೇವೆಯಂತೆ ಇರುತ್ತದೆ. ಅಂದರೆ ನಾವೀಗ ಬಳಸುತ್ತಿರುವ ವಾಟ್ಸ್‌ಆಪ್‌, ಫೇಸ್‌fಬುಕ್‌ ಮೆಸೇಂಜರ್‌ ಮಾದರಿಯಲ್ಲಿರುತ್ತದೆ. ಇದರಲ್ಲಿ ಗ್ರೂಪ್‌ ಚಾಟ್‌ ಮಾಡಬಹುದು. ವಿಡಿಯೋ, ಆಡಿಯೋ ಮೆಸೇಜ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಹೈ ರೆಸಲ್ಯೂಷನ್‌ ಫೋಟೋಗಳನ್ನು ಹಂಚಿಕೊಳ್ಳಬಹುದು. ಜೊತೆಗೆ ಮೆಸೇಜ್‌ ನೋಡಿದ್ದು, ಓದಿದ್ದು ಎಲ್ಲವನ್ನೂ ತಿಳಿಯಬಹುದು.

ಇಷ್ಟೇ ಅಲ್ಲ, ಗೂಗಲ್‌ ಇನ್ನಷ್ಟು ಸೇವೆಗಳನ್ನು ನೀಡುವ ಉದ್ದೇಶ ಹೊಂದಿದೆ. ಅಂದರೆ ವಾಣಿಜ್ಯ ಉದ್ದೇಶಗಳಿಗಾಗಿ ಅಂದರೆ ಆಟೋಮೇಟೆಡ್‌ ಸೇವೆಗಳನ್ನು ಮಾಹಿತಿ ನೀಡುವುದಕ್ಕೆ ಆರ್‌ಸಿಎಸ್‌ನ ದುಡಿಸಿಕೊಳ್ಳಬಹುದು ಎಂಬ ಆಲೋಚನೆ ಇದೆ. ಗೂಗಲ್‌ನ ಈ ಆಲೋಚನೆಯನ್ನು ಸರಿಯಾಗಿಯೇ ಅರ್ಥ ಮಾಡಿಕೊಂಡಿರುವ ವೆರಿಜಾನ್‌ ಸಂಸ್ಥೆಯ ಸಿಇಒ ರೋನಾನ್‌ ಡನ್‌ ಹೇಳಿಕೆ ನೀಡಿದ್ದಾರೆ: ” ಕ್ರಾಸ್‌ ಕ್ಯಾರಿಯರ್‌ ಮೆಸೇಜಿಂಗ್‌ ಇನಿಷಿಯೇಟಿವ್‌ ವೇದಿಕೆ ನವೀನ ರೀತಿಯಲ್ಲಿ ಬಳಕೆದಾರರನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಸೆಯುತ್ತದೆ. ಅಷ್ಟೇ ಅಲ್ಲ, ಉದ್ಯಮಗಳನ್ನು ಗ್ರಾಹಕರೊಂದಿಗೆ ಬೆಸೆಯುವ ಮೂಲಕ ವಿಶ್ವಾಸಾರ್ಹ ಪರಿಸರವನ್ನು ಸೃಷ್ಟಿಸುತ್ತದೆ” .

ಈ ಸಾರ್ವತ್ರಿಕವಾದ ಮೆಸೇಜಿಂಗ್‌ ಸೇವೆ ಎನ್‌ಕ್ರಿಪಕ್ಷನ್‌ ಅನ್ನು ಹೊಂದಿದ್ದೆ. ಮಾಹಿತಿ ಸುರಕ್ಷತೆ ಮತ್ತು ಖಾಸಗಿತನದ ವಿಷಯದಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಪ್ರಸ್ತುತ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಆಪಲ್‌ ಈ ಸೇವೆಗೆ ಇನ್ನು ಬೆಂಬಲ ಸೂಚಿಸಿಲ್ಲ.