ಚಾಲಕ ಮಾತ್ರವಲ್ಲ, ಕ್ಯಾಬಿನ್‌ ಇಲ್ಲದ ಸ್ಕಾನಿಯಾ ಲಾರಿ!

ಡ್ರೈವರ್ ಲೆಸ್‌ ಕಾರುಗಳು ಭಾರತ ಪ್ರವೇಶಿಸಲು ಬಿಡುವುದಿಲ್ಲ ಎಂದು ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಗುಡುಗುತ್ತಿರುವ ಹೊತ್ತಲ್ಲಿ ಭಾರಿಗಾತ್ರದ ವಾಹನ ನಿರ್ಮಿಸುವ ಸ್ಕಾನಿಯಾ ಕಂಪನಿ ಚಾಲಕ ರಹಿತ ಲಾರಿಯನ್ನು ಪ್ರಯೋಗಾರ್ಥ ಓಡಿಸುತ್ತಿದೆ. ಹೇಗಿದೆ ಈ ಲಾರಿ? ಮುಂದೆ ಓದಿ

ಈ ಲಾರಿಗೆ ಚಾಲಕ ಬೇಡ ಎಂಬುದು ಮಾತ್ರವಲ್ಲ, ಚಾಲಕನನ್ನೇ ನಿಷೇಧಿಸಲಾಗಿದೆ. ಎಲ್ಲಾ ಲಾರಿಗಳಲ್ಲೂ ಅಗತ್ಯವಾಗಿ ಇರುವ ಡ್ರೈವರ್ ಕ್ಯಾಬಿನ್ನನ್ನೇ ಇಲ್ಲವಾಗಿಸಿ ಸ್ಕಾನಿಯಾ ಹೊಸ ಲಾರಿಯನ್ನು ಪ್ರಾಯೋಗಿಕವಾಗಿ ತಯಾರು ಮಾಡಿದೆ.

ಫೋಕ್ಸ್‌ವ್ಯಾಗನ್ ಅಡಿಯಲ್ಲಿರುವ ಭಾರಿ ವಾಹನ ತಯಾರಿಕಾ ಕಂಪನಿ ಸ್ಕಾನಿಯಾ ಎಎಕ್ಸ್ಎಲ್ ಹೆಸರಿನ ಟ್ರಕ್ ಸಂಪೂರ್ಣ ಸ್ವಯಂಚಾಲಿತ. “ಸ್ವಯಂ ಚಾಲಿತ ಟ್ರಕ್ಕನ್ನು ನಾವು ಈಗಾಗಲೇ ಅಭಿವೃದ್ಧಿಗೊಳಿಸಿದ್ದರೂ ಅಗತ್ಯ ಸಂದರ್ಭಗಳಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಚಾಲಕನಿಗೆ ಅವಕಾಶವಿತ್ತು, ಅದರಲ್ಲಿ ಚಾಲಕ ಸದಾ ಇರಬೇಕಿತ್ತು. ಕ್ಯಾಬಿನ್ನೇ ಇಲ್ಲದ ಸ್ಕಾನಿಯಾ ಎಎಕ್ಸ್‌ಎಲ್‌ ಆಮೂಲಾಗ್ರ ಬದಲಾವಣೆ ತರಲಿದೆ” ಎಂದು ಸ್ಕಾನಿಯಾದ ಸಂಶೋಧನಾ ವಿಭಾಗದ ಮುಖ್ಯಸ್ಥ ಕ್ಲೇಸ್ ಎರಿಕ್ಸನ್ ಬಿಡುಗಡೆ ಸಂದರ್ಭ ಹೇಳಿದ್ದಾರೆ.

ಡೀಸಿಲ್ ಚಾಲಿತ ಎಂಜಿನ್‌ ಹೊಂದಿದ ಈ ಲಾರಿ ಚಾಲನೆಗೆ ಸಾಫ್ಟ್ವೇರ್ ಹಾಗೂ ಹಲವು ಸೆನ್ಸಾರ್‌ಗಳನ್ನು ಬಳಕೆ ಮಾಡುತ್ತದೆ. ಮೈನಿಂಗ್‌ನಂಥ ಕೆಲಸ ಕಾರ್ಯಗಳಲ್ಲಿ ಸಾಗಾಟ ನಿರ್ವಹಿಸುವ ತಂಡ ಲಾರಿ ಚಾಲನೆಗೆ ಬೇಕಾದ ಮಾರ್ಗ ನಿಗದಿ ಹಾಗೂ ಸಮಯ ನಿರ್ಧರಿಸುತ್ತಾರೆ. ನಂತರ ಲಾರಿಗಳು ಅಗತ್ಯಕ್ಕನುಗುಣ ಕೆಲಸ ಮಾಡಬೇಕು ಎಂಬುದು ಕಂಪನಿಯ ಲೆಕ್ಕಾಚಾರ.

ಅಕ್ಟೋಬರ್ ಎರಡರಂದು ಸ್ವೀಡನ್ನಿನ ಸೊದರ್ಟಾಲಿಯದಲ್ಲಿ ಸ್ಕಾನಿಯಾ ಎಎಕ್ಸ್ಎ ಸಾರ್ವಜನಿಕವಾಗಿ ಪ್ರಾತ್ಯಕ್ಷಿಕೆ ನೀಡಲಿದೆ.

ಚಾಲಕ ರಹಿತ ವಾಹನಗಳಿಗೆ ಭಾರತದಲ್ಲಿ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೆ.24ರಂದು ಕೆವಿಐಸಿ ಆಯೋಜಿತ ಕಾರ್ಯಕ್ರಮದ ಹೇಳಿದ್ದರು. ತಾನು ತಂತ್ರಜ್ಞಾನದ ವಿರೋಧಿಯಲ್ಲ; ಆದರೆ ದೇಶದಲ್ಲಿ ಸುಮಾರು 40 ಲಕ್ಷ ಚಾಲಕರಿದ್ದು 25 ಲಕ್ಷ ಚಾಲಕರ ಕೊರತೆ ಇದೆ. ಈ ಕಾರಣಕ್ಕಾಗಿ ಚಾಲಕ ರಹಿತ ಕಾರುಗಳು ರಸ್ತೆಗಿಳಿಯಲು “ನಾನಿರುವವರೆಗೆ ಬಿಡುವುದಿಲ್ಲ” ಎಂದು ತಿಳಿಸಿದ್ದರು.