ವಿಜ್ಞಾನ ಸಂವಹನ; ನಿನ್ನೆಯ ಮೆಲುಕುಗಳು, ಮಸುಕಾದ ನಾಳೆಗಳು

ವಿಜ್ಞಾನವನ್ನು ವೈಚಾರಿಕತೆಯಿಂದ, ಮಾನವೀಯ ಮೌಲ್ಯಗಳಿಂದ ದೂರವಿರಿಸುವ ಪ್ರಜ್ಞಾಪೂರ್ವಕ ಪ್ರಯತ್ನಗಳು ಇಂದು ನಡೆಯುತ್ತಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಯಾವೆಲ್ಲ ಸಂದರ್ಭಗಳಲ್ಲಿ ವೈಚಾರಿಕ ಮನೋಭಾವವನ್ನು, ಮಾನವೀಯತೆಯನ್ನೂ ಮರೆತು ಸ್ವಯಂ ವಿಜೃಂಭಣೆ, ಜನಾಂಗೀಯ ಶ್ರೇಷ್ಠತೆ, ಸರ್ವಾಧಿಕಾರಿ ಮನೋಭಾವದ ಶಕ್ತಿಗಳ ಪರವಾಗಿ ನಿಂತಿದೆಯೋ ಆ ಸಂದರ್ಭಗಳಲ್ಲೆಲ್ಲಾ ಮನುಕುಲದ ಬೆನ್ನುಮುರಿಯುವ ಕೆಲಸವಾಗಿದೆ

‘ಕನ್ನಡದಲ್ಲಿ ವಿಜ್ಞಾನ ಸಂವಹನ: ನಿನ್ನೆ, ಇಂದು ಮತ್ತು ನಾಳಿನ ಹಾದಿಗಳು’, ಎನ್ನುವ ಎರಡು ದಿನದ ಸಮ್ಮೇಳನವೊಂದು ಕಳೆದ ತಿಂಗಳು, ಸೆಪ್ಟೆಂಬರ್ 20-21ರಂದು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದಲ್ಲಿ ಆಯೋಜನೆಗೊಂಡಿತ್ತು. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ವಿಜ್ಞಾನ ಪ್ರಸಾರ್ ಸಂಸ್ಥೆಯು ಸ್ವಾಮಿ ವಿವೇಕಾನಂದ ಯೂಥ್‌ ಮೂವ್ಮೆಂಟ್ ಮತ್ತು ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ಕುತೂಹಲಿಯಾಗಿ ಭಾಗವಹಿಸುವ ಅವಕಾಶ ನನ್ನದಾಗಿತ್ತು.

ಮೊದಲಿಗೆ, ಸಂಘಟನೆಯ ದೃಷ್ಟಿಯಿಂದ ಗಮನಿಸುವುದಾದರೆ ಇದೊಂದು ಅಚ್ಚುಕಟ್ಟಾಗಿ ನಿರ್ವಹಿಸಲ್ಪಟ್ಟ ಸಮ್ಮೇಳನ. ಸಂಘಟಕರ ಕಾರ್ಯತತ್ಪರತೆ ಪ್ರಶಂಸನೀಯವಾಗಿತ್ತು. ಸಮ್ಮೇಳನದಲ್ಲಿ ಪಾಲ್ಗೊಳ್ಳುವವರು ಮುಂಚಿತವಾಗಿಯೇ ನೊಂದಾಯಿಸಿಕೊಳ್ಳಬೇಕಾದ ಅಗತ್ಯವಿದ್ದರಿಂದ ಬಹುತೇಕವಾಗಿ ವಿಜ್ಞಾನ ಸಂವಹನದ ವಿಚಾರದಲ್ಲಿ ಆಸಕ್ತಿಯುಳ್ಳವರೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಆಸಕ್ತ ಕಿವಿಗಳಿಗೇನೂ ಸಮ್ಮೇಳನದಲ್ಲಿ ಕೊರತೆಯಿರಲಿಲ್ಲ. ವಿವಿಧ ವಯೋಮಾನ, ವರ್ಗ, ವೃತ್ತಿ, ಪರಿಸರದ ಹಿನ್ನೆಲೆಯಿಂದ, ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಆಸಕ್ತ ಬಳಗ ಎರಡೂ ದಿನದ ಗೋಷ್ಠಿಗಳಿಗೆ ಸ್ಪಂದಿಸಿದ ರೀತಿಗೆ ಸಭಾಂಗಣ ಭರ್ತಿಯಾಗಿದ್ದೇ ಸಾಕ್ಷಿಯಾಗಿತ್ತು. ಸಂಘಟನೆ ಹಾಗೂ ನಿರ್ವಹಣೆಯ ದೃಷ್ಟಿಯಿಂದ ಸಮ್ಮೇಳನ ಯಶಸ್ವಿ ಮಾತ್ರವೇ ಅಲ್ಲ, ಮುಂದಿನ ದಿನಗಳಲ್ಲಿ ಇಂತಹ ಪ್ರಯತ್ನಗಳಿಗೆ ಮಾದರಿ ಕೂಡ.

ಇನ್ನು ಸಮ್ಮೇಳನದ ವಸ್ತು, ವಿಚಾರಗಳ ಬಗ್ಗೆ ಗಮನಿಸುವುದಕ್ಕೂ ಮುನ್ನ ಕೆಲವೊಂದು ಪೂರಕ ಮಾಹಿತಿ ಅಗತ್ಯ. ಆ ಕುರಿತು ಗಮನಿಸುವುದಾರೆ, ದೇಶದಲ್ಲಿ ವಿಜ್ಞಾನವನ್ನು ಜನಪ್ರಿಯವಾಗಿಸುವ ಉದ್ದೇಶವನ್ನು ಹೊಂದಿರುವ ವಿಜ್ಞಾನ ಪ್ರಸಾರ್ ಈ ನಿಟ್ಟಿನಲ್ಲಿ ದೇಶೀಯ ಭಾಷೆಗಳಲ್ಲಿ ವಿಜ್ಞಾನ ಸಂವಹನವನ್ನು ಉದ್ದೀಪಿಸಬೇಕಾದ ಅಗತ್ಯತೆಯನ್ನು ಮನಗಂಡಿದೆ. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನವೆನ್ನುವುದು ಇಂದಿಗೂ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗಿಲ್ಲ. ಇದಕ್ಕೆ ಹತ್ತಹಲವು ಕಾರಣಗಳಿವೆ. ಅದೊಂದು ವಿಸ್ತಾರ ಭಿತ್ತಿಯಲ್ಲಿ ಚರ್ಚಿಸಬೇಕಾದ ವಿಷಯ ಆರಂಭದಲ್ಲಿಯೇ ಹೇಳಬೇಕಾದ ಒಂದು ಮಾತೆಂದರೆ, ಸಂವಹನದ ಈ ಸವಾಲು ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೇ ಸೀಮಿತವಾದುದಲ್ಲ. ಇದು ಬಹುತೇಕ ಎಲ್ಲ ಜ್ಞಾನ ಶಿಸ್ತುಗಳನ್ನೂ ಆವರಿಸಿಕೊಂಡಿರುವಂತಹದ್ದು. ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣದ ನಂತರ ನಮ್ಮಲ್ಲಿ  ಬಹುತೇಕ ಜ್ಞಾನಶಿಸ್ತುಗಳನ್ನು ಮಾತೃಭಾಷೆಗಳಲ್ಲಿ/ದೇಶೀಯ ಭಾಷೆಗಳಲ್ಲಿ ಕಲಿಯಲಾಗುವುದಿಲ್ಲ. ಕೆಲವೊಂದು ಮಾನವಿಕ ವಿಜ್ಞಾನದ ವಿಷಯಗಳು ಇದಕ್ಕೆ ಹೊರತಾದರೂ ಅಲ್ಲಿಯೂ ಸಹ ಉನ್ನತ ಶಿಕ್ಷಣದ ಹಂತದಲ್ಲಿ ಮತ್ತೆ ಇಂಗ್ಲಿಷ್‌ ಭಾಷೆಯತ್ತಲೇ ಮುಖ ಮಾಡಬೇಕಾಗುತ್ತದೆ.

ಶಿಕ್ಷಣದ ವಿಚಾರವನ್ನು ಎಳೆದು ತರುವುದು ಈ ಅಂಕಣದ ಉದ್ದೇಶವಲ್ಲವಾದರೂ, ಯಾವುದೇ ಬಗೆಯ ಜ್ಞಾನ-ವಿಜ್ಞಾನ ಸಂವಹನಗಳ ಕುರಿತಾಗಿ ಚರ್ಚಿಸುವಾಗ ಆಯಾ ಭಾಷೆಗಳಲ್ಲಿನ ಶಿಕ್ಷಣದೊಳಗೆ ಈ ವಿಷಯಗಳು ತಮ್ಮ ಬೇರುಗಳನ್ನು ಎಷ್ಟು ಆಳವಾಗಿ ಇಳಿಸಿಕೊಂಡಿವೆ, ಯಾವ ಹಂತದವರೆಗೂ ವ್ಯಾಪಿಸಿಕೊಂಡಿವೆ ಎನ್ನುವುದು ಮುಖ್ಯವಾಗುತ್ತದೆ. ಹಾಗಾಗಿ, ದೇಶೀಯ ಭಾಷೆಗಳಲ್ಲಿ ವಿಜ್ಞಾನ ಸಂವಹನದ ವಿಚಾರವಾಗಿ ಎದುರಾಗಿರುವ ಸವಾಲುಗಳೇನಿವೆ ಇವು ಕೇವಲ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾದಂತಹವೇನೂ ಅಲ್ಲ, ಬಹುತೇಕ ಜ್ಞಾನಶಿಸ್ತುಗಳಿಗೂ ಇವು ಅನ್ವಯಿಸುವಂಥವು. ಇದೇ ಕಾರಣಕ್ಕೆ ವಿಜ್ಞಾನದ ವಿಚಾರವನ್ನು ಮಾತ್ರವೇ ಕೇಂದ್ರದಲ್ಲಿರಿಸಿಕೊಂಡು ಈ ಸಮಸ್ಯೆಯನ್ನು ನೋಡುವಾಗ ಅದು ಎಲ್ಲ ಜ್ಞಾನವಲಯಗಳಿಗೂ ಎದುರಾಗಿರುವ ಸಾಮಾನ್ಯ ಸವಾಲುಗಳನ್ನು ಮಾತ್ರವೇ ಅಲ್ಲದೆ ವಿಜ್ಞಾನ ಕ್ಷೇತ್ರದ ಸಂವಹನದ ವಿಚಾರದಲ್ಲಿ ವಿಶೇಷವಾಗಿ ಎದುರಾಗಿರುವ ಸವಾಲುಗಳು, ಪರಿಹಾರದ ಹಾದಿಗಳನ್ನೂ ಗಟ್ಟಿಯಾಗಿ ಧ್ವನಿಸಬೇಕಾಗುತ್ತದೆ. ಹಾಗಾದಾಗಲೇ ಅದು ನಾಳಿನ ಹಾದಿಗಳ ವಿಚಾರದಲ್ಲಿ ಹೆಚ್ಚು ನಿಚ್ಚಳಗೊಳ್ಳುವುದು. ಈ ಅಂಶವನ್ನು ಪರಿಣಾಮಕಾರಿಯಾಗಿ ಗುರುತಿಸುವಲ್ಲಿ ಹಾಗೂ ಈ ನಿಟ್ಟಿನಲ್ಲಿ ಗುರಿ ನಿರ್ದೇಶಿತ ಚರ್ಚೆಯನ್ನು ವಿವಿಧ ಗೋಷ್ಠಿಗಳ ಮೂಲಕ ಹುಟ್ಟುಹಾಕುವಲ್ಲಿ ಬೇಕಾದ ಪರಿಣಾಮಕಾರಿ ಬಂಧದ ಕೊರತೆ ಸಮ್ಮೇಳನದಲ್ಲಿತ್ತು. ಇದೇ ಕಾರಣಕ್ಕೆ ಸಮ್ಮೇಳನ ಒಟ್ಟಂದದಲ್ಲಿ ಗಮನಿಸಿದಾಗ ಚದುರಿದ ಚಿತ್ರಗಳಂತೆ ಭಾಸವಾಯಿತು.

ವಿಜ್ಞಾನ ಸಂವಹನ ವಿಚಾರದಲ್ಲಿ ಕಳೆದ ಹಲವು ದಶಕಗಳಿಂದ ತೊಡಗಿಕೊಂಡಿರುವ ವಿವಿಧ ಹಿನ್ನಲೆಯ ಸಂಪನ್ಮೂಲ ವ್ಯಕ್ತಿಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು, ಈ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಉದ್ಯಮಶೀಲರು, ಪ್ರಯೋಗಗಕ್ಕೆಳೆಸಿರುವ ಆಸಕ್ತರು ಸಮ್ಮೇಳನದ ವಿವಿಧ ಗೋಷ್ಠಿಗಳ ಸಂವಹನಕಾರರಾಗಿದ್ದರು. ವಿಜ್ಞಾನ ಹಾಗೂ ತಂತ್ರಜ್ಞಾನ ಹಿನ್ನೆಲೆಯ ವೃತ್ತಿಗಳೂ ಸೇರಿದಂತೆ ವಿವಿಧ ಹಿನ್ನೆಲಯಿಂದ ಬಂದು ಕನ್ನಡದಲ್ಲಿ ವಿಜ್ಞಾನ ಸಂವಹನ ವಿಚಾರವಾಗಿ ತಮ್ಮ ಬರಹ ಹಾಗೂ ಸೃಜನಶೀಲ ಕ್ರಿಯೆಗಳಿಂದ ಗುರುತಿಸಿಕೊಂಡಿರುವ ಡಾ.ಪಾಲಹಳ್ಳಿ, ವಿಶ್ವನಾಥ, ಶ್ರೀಮತಿ ಹರಿಪ್ರಸಾದ್, ಉದಯಶಂಕರ ಪುರಾಣಿಕ, ಸಿ. ಚನ್ನೇಶ್, ಪ್ರೊ..ಎಂ.ಆರ್. ನಾಗರಾಜು, ಶಶಿಧರ ಢೋಂಗ್ರೆ, ಬಿ.ಎಸ್‌.ಸೋಮಶೇಖರ್, ಭಾರತ್ ವಾಣಿಯ ಬೇಳೂರು ಸುದರ್ಶನ್, ಮುಂತಾದವರು ಮಾತ್ರವೇ ಅಲ್ಲದೆ, ಸಂಘಟನೆಯ ಹೊಣೆ ಹೊತ್ತಿದ್ದ ವಿಜ್ಞಾನ ಪ್ರಸಾರ್‌ನ ಡಾ.ಟಿ.ವಿ.ವೆಂಕಟೇಶ್ವರನ್‌ ಹಾಗೂ ಸಿಎಫ್‌ಟಿಆರ್‌ಐನ ಕೊಳ್ಳೇಗಾಲ ಶರ್ಮ ಮುಂತಾಗಿ ಅನೇಕರು ಸಮ್ಮೇಳನದ ವಿವಿಧ ಗೋಷ್ಠಿ, ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡರು. ಹೊಸ ತಲೆಮಾರಿನ ಕ್ಷಮಾ ಭಾನುಪ್ರಕಾಶ್, ಹೇಮಾ, ಟಿ.ಜಿ.ಶ್ರೀನಿಧಿ, ಅನನ್ಯ ಮುಂತಾದವರು ಸಮಕಾಲೀನವಾಗಿ ಸ್ಪಂದಿಸುವ ಪ್ರಯತ್ನ ಮಾಡಿದರು.

ಕನ್ನಡದಲ್ಲಿ ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹಾಗೂ ಗುಣಾತ್ಮಕ ಬದಲಾವಣೆಗಾಗಿ ವಿಜ್ಞಾನ, ತಂತ್ರಜ್ಞಾನವನ್ನು ಸ್ಥಳೀಯ ನೆಲೆಗಳಲ್ಲಿ ಬಳಸಿಕೊಳ್ಳುತ್ತಿರುವ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಕೊಡುಗೆಗಳ ಕುರಿತಾದ ಎರಡು ಪ್ರತ್ಯೇಕ ಗೋಷ್ಠಿಗಳು ಆಸಕ್ತರಿಗೆ ಅನೇಕ ಆಕರ ಮೂಲಗಳನ್ನು ಒದಗಿಸಿತು. ಇದಲ್ಲದೆ, ಕನ್ನಡದಲ್ಲಿ ವಿಜ್ಞಾನ ಸಂವಹನದ ಇತಿಹಾಸದ ಕುರಿತಾಗಿ ಸಮ್ಮೇಳನದುದ್ದಕ್ಕೂ ವಿವಿಧ ಗೋಷ್ಠಿಗಳ ಸಂದರ್ಭಗಳಲ್ಲಿ ಹಿರಿಯ ಸಂವಹನಕಾರರು ಮೆಲಕು ಹಾಕಿದ ಸಂಗತಿಗಳು ಆಸಕ್ತಿಕರವಾಗಿದ್ದವು. ಈ ಮಾಹಿತಿಗಳು ಸಂಶೋಧನೆಯ ದೃಷ್ಟಿಯಿಂದ ದಾಖಲಾರ್ಹವಾದಂತಹವು.

ಸಮ್ಮೇಳನದ ಆರಂಭದಿಂದಲೂ ಕೆಲವು ಪ್ರಮುಖ ವಿಷಯಗಳಲ್ಲಿ ವಿವಿಧ ಸಂವಹನಕಾರರಲ್ಲಿ ವ್ಯತಿರಿಕ್ತ ಅಭಿಪ್ರಾಯಗಳಿದ್ದವು. ವಿಜ್ಞಾನ ವಿಷಯಗಳನ್ನು ಸರಳಗೊಳಿಸಿ ವಿದ್ಯಾರ್ಥಿಗಳನ್ನು, ಜನಸಾಮಾನ್ಯರನ್ನು ಮುಟ್ಟುವ ವಿಚಾರವಾಗಿ ‘ಸರಳ’ ಹಾಗೂ ‘ಜನಪ್ರಿಯ’ ಎನ್ನುವ ಎರಡು ಸಂಗತಿಗಳನ್ನು ಹೆಚ್ಚುಕಡಿಮೆ ಸಮಾನಾರ್ಥಕವಾಗಿ ಅರ್ಥೈಸಿಕೊಂಡಂತೆ ಅನೇಕ ಸಂವಹನಕಾರರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ವಿಜ್ಞಾನದ ವಿಚಾರದಲ್ಲಿ ಸರಳವಾಗಿ ಸಂವಹಿಸುವುದು ಅದನ್ನು ಜನರ ಸಮೀಪಕ್ಕೆ ಹೆಚ್ಚು ಒಯ್ಯಲು ಅನುವುಮಾಡಿಕೊಡಬಲ್ಲದು ನಿಜ. ಆದರೆ, ‘ಜನಪ್ರಿಯ’ವಾಗುವ ಭರದಲ್ಲಿ ‘ವಿಚಾರಶೀಲತೆ’ಯನ್ನು ಬದಿಗೊತ್ತುವಂತಾಗಬಾರದು. ವಿಜ್ಞಾನದ ಪ್ರಸರಣದ ಉದ್ದೇಶವೇ ಸಮಾಜವನ್ನು ವಿಚಾರಶೀಲವೂ, ಆಲೋಚನಾಪರವೂ ಆಗಿ ರೂಪಿಸುವುದಾಗಿದೆ. ಹಾಗಾಗಿ ವಿಜ್ಞಾನವನ್ನು ಜನಪ್ರಿಯಗೊಳಿಸುವಾಗ ಸರಳವೂ, ವಿಚಾರಶೀಲವೂ ಆಗಿರಬೇಕಾದ ಅಗತ್ಯತೆ ಇರುತ್ತದೆ. ಇದನ್ನು ಕ್ಷಣಕಾಲ ಮರೆತರೂ ಸರಳತೆಯ ಹೆಸರಿನಲ್ಲಿ ಅಸಮಂಜಸ ವಿಷಯಗಳನ್ನು ಆಕರ್ಷವಾಗಿ ಹೇಳುವುದು ವಿಜ್ಞಾನ, ಗಣಿತವನ್ನು ಜನಪ್ರಿಯವಾಗಿಸುವ ಬದಲಿಗೆ ಅದನ್ನು ಮತ್ತೊಂದು ಮೋಡಿಯನ್ನಾಗಿಸಿಬಿಡುವ ಅಪಾಯವಿರುತ್ತದೆ. ಈ ಅಪಾಯವನ್ನು ಪ್ರಾಥಮಿಕ ಹಂತದಲ್ಲಿ, ವಿಶೇಷವಾಗಿ ಮಕ್ಕಳೊಂದಿಗೆ ವಿಜ್ಞಾನ, ಗಣಿತ ಸಂವಹನಗಳಲ್ಲಿ ತೊಡಗುವ ವ್ಯಕ್ತಿ, ಸಂಸ್ಥೆಗಳು ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ.

ಇದೇ ವೇಳೆ, ಕೇವಲ ಕನ್ನಡಕ್ಕೆ ಮಾತ್ರವೇ ಸೀಮಿತವಾಗಿ ಈ ಸವಾಲುಗಳನ್ನು ಗಮನಿಸದೆ, ಜಗತ್ತಿನ ವಿವಿಧ ದೇಶಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ವಿಜ್ಞಾನ, ಗಣಿತ, ತಂತ್ರಜ್ಞಾನದ ವಿಚಾರಗಳನ್ನು ತಮ್ಮದೇ ಭಾಷೆಯಲ್ಲಿ ಕಲಿಸುತ್ತಿರುವ, ಕಲಿಯುತ್ತಿರುವ ದೇಶ, ಸಮುದಾಯಗಳಲ್ಲಿ ನಡೆಯುತ್ತಿರುವ ಪ್ರಯೋಗಗಳ ಬಗ್ಗೆ ವಿಜ್ಞಾನ ಸಂವಹನಕಾರರು ಹೆಚ್ಚು ಅಧ್ಯಯನಶೀಲರಾಗಿರಬೇಕಾಗುತ್ತದೆ. ಇಂತಹ ಅಧ್ಯಯನಶೀಲತೆಯ ಕೊರತೆ ವಿವಿಧ ಗೋಷ್ಠಿಗಳ ವಿವಿಧ ಸಂವಹನಕಾರರ ಮಾತುಗಳಲ್ಲಿ ಸಮ್ಮೇಳನದುದ್ದಕ್ಕೂ ಕಂಡುಬರುತ್ತಿತ್ತು. ಪರಿಣಾಮ ವಿಷಯಗಳು ಹರಿತವೂ, ಆಲೋಚನಾಪರವೂ ಆಗುವ ಬದಲಿಗೆ ಬಹಳಷ್ಟು ಸಾರಿ ಚರ್ವಿತಚರ್ವಣವಾಗುತ್ತಿದ್ದವು.

ಸಮ್ಮೇಳನದಲ್ಲಿದ್ದ ಮತ್ತೊಂದು ಕೊರತೆಯೆಂದರೆ ಅಂತರ್ಶಿಸ್ತೀಯ ಅಧ್ಯಯನಕಾರರ ಅಲಭ್ಯತೆ. ಸಮಕಾಲೀನ ಜಗತ್ತಿನಲ್ಲಿ ವಿಜ್ಞಾನ, ತಂತ್ರಜ್ಞಾನಗಳೆನ್ನುವುದು ಕೇವಲ ಕ್ಷೇತ್ರ ಸೀಮಿತವಾಗಿ ನೋಡುವಂತಹ ವಿಷಯಗಳಲ್ಲ. ಅಸಲಿಗೆ ಇಂದು ಯಾವುದೇ ಅಧ್ಯಯನ ಶಿಸ್ತುಗಳು ದ್ವೀಪಗಳಾಗಿ ಉಳಿದಿಲ್ಲ. ಮಾನವಿಕ ಅಧ್ಯಯನಗಳು, ಸಂಶೋಧನೆಗಳನ್ನು ವಿಜ್ಞಾನ, ತಂತ್ರಜ್ಞಾನಗಳು ಗಮನಾರ್ಹವಾಗಿ ಪ್ರಭಾವಿಸುತ್ತಿರುವ, ಮೈಲುಗಲ್ಲೆನ್ನುವಂತೆ ಬದಲಿಸುತ್ತಿರುವ ವ್ಯಾಪಕ ಸಂಗತಿಗಳನ್ನು ನಾವು ಇಂದು ನೋಡುತ್ತಿದ್ದೇವೆ. ಮಾನವ ಜನಾಂಗದ ಖಂಡಾಂತರ ವಲಸೆಯ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ವಂಶವಾಹಿ ಅಧ್ಯಯನಗಳು ಹೇಗೆ ಸಂದೇಹಕ್ಕೆ ಆಸ್ಪದವಿಲ್ಲದಂತೆ ಖಚಿತ ತೀರ್ಮಾನಗಳಿಗೆ ಬರಲು ಕಾರಣವಾಗಿವೆ ಎನ್ನುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಈ ಬೆಳವಣಿಗೆ ಅನೇಕ ಸಾಂಸ್ಕೃತಿಕ, ಐತಿಹಾಸಿಕ ಅಧ್ಯಯನಗಳ ಪುನರ್‌ ವಿಮರ್ಶೆಗೆ ವೇದಿಕೆಯಾಯಿತು. ಇದೇ ರೀತಿ, ವಿವಿಧ ಮಾನವಿಕ, ಸಾಂಸ್ಕೃತಿಕ ಶಿಸ್ತುಗಳು, ವಿಶೇಷವಾಗಿ ಸಾಮಾಜಿಕ ವಿಜ್ಞಾನ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನಗಳು ಇಂದು ‘ದತ್ತಾಂಶ ವಿಶ್ಲೇಷಣೆ’ (Data Analytics) ಎನ್ನುವ ಭವಿಷ್ಯದ ದಿನಗಳಲ್ಲಿ ಪ್ರಭಾವಿಯಾಗಿ ಹೊಮ್ಮಲಿರುವ ವಿಜ್ಞಾನ, ತಂತ್ರಜ್ಞಾನ ಹಾಗೂ ಮಾನವಿಕ ಶಿಸ್ತುಗಳನ್ನು ಬೆಸೆಯುವ ಅಧ್ಯಯನ ಕ್ಷೇತ್ರದ ಆಧಾರ ಸ್ತಂಭಗಳಾಗಿವೆ. ‘ವಿಜ್ಞಾನ ಸಂವಹನದ ವಿಚಾರವಾಗಿ ನಾಳಿನ ಹಾದಿಗಳು,’ ಹೇಗಿರಲಿವೆ ಎನ್ನುವುದನ್ನು ದಿಟ್ಟಿಸಬೇಕಾದರೆ ಇಂತಹ ಹತ್ತುಹಲವು ಸಂಗತಿಗಳನ್ನು ಗುರುತಿಸುವ, ವಿವರಿಸುವ ದೂರದರ್ಶಿತ್ವದ ಅಂತರ್ಶಿಸ್ತೀಯ ಅಧ್ಯಯನಕಾರರೊಂದಿಗಿನ ವಿಚಾರಮಂಥನ ನಡೆಸುವ ಅಗತ್ಯವಿತ್ತು. ಈ ಅವಕಾಶವನ್ನು ಸಮ್ಮೇಳನ ಕೈಚೆಲ್ಲಿತು.

 ವಿಜ್ಞಾನ ಪ್ರಸರಣದ ವಿಚಾರವಾಗಿ ಮುದ್ರಣ, ವಿದ್ಯುನ್ಮಾನ, ಡಿಜಿಟಲ್ ಮಾಧ್ಯಮಗಳ ಕುರಿತಾಗಿ ಸಮ್ಮೇಳನದಲ್ಲಿ ವ್ಯಕ್ತವಾದ ಬಹುತೇಕ ವಿಮರ್ಶೆಗಳು ಕಟುವಾದರೂ ಅರ್ಹವಾದುವೇ ಆಗಿದ್ದವು. ಯಾವುದೇ ವಿಷಯವನ್ನೂ ರೋಚಕ, ರಂಜನೀಯವಾಗಿ ಹೇಳಲು ಬಯಸುವ ಸಮಕಾಲೀನ ಮಾಧ್ಯಮಗಳು ಜನಪ್ರಿಯತೆಯನ್ನು ಕಾಯ್ದುಕೊಳ್ಳುವ ಅಥವಾ ಜನಪ್ರಿಯವಾಗುವ ಭರದಲ್ಲಿ ವಸ್ತುವಿಗೆ (Content) ಅಪಚಾರ ಎಸಗುವುದು ಅತಿ ಸಾಮಾನ್ಯವಾಗಿದೆ. ವಿಜ್ಞಾನ, ಜ್ಯೋತಿಷ, ಮೌಢ್ಯ, ಹಿಂಸೆ, ರಾಜಕೀಯ, ಅರ್ಥಶಾಸ್ತ್ರ, ಸಮಕಾಲೀನ ವಿದ್ಯಮಾನ, ಕ್ರೀಡೆ, ಸಿನಿಮಾ ಹೀಗೆ ಈ ಯಾವುದೇ ವಿಷಯವನ್ನು ಹೇಳುವಾಗಲೂ ರೋಚಕತೆ, ರಂಜನೀಯತೆಗೆ ಕಟ್ಟುಬೀಳಲೇಬೇಕಾದ ಅನಿವಾರ್ಯತೆಯನ್ನು ಮಾಧ್ಯಮಗಳು ಸೃಷ್ಟಿಸಿಕೊಂಡಿವೆ. ಹಾಗಾಗಿಯೇ ಜ್ಞಾನವನ್ನೂ ಸಹ ಮೌಢ್ಯದ ಭಾಷೆಯಲ್ಲಿಯೇ ಹೇಳುವಲ್ಲಿ ಮಾಧ್ಯಮಗಳು ಉತ್ಸುಕವಾಗಿವೆ. ಇಂತಹ ಮಾಧ್ಯಮಗಳ ಬಗ್ಗೆ ನಿಷ್ಠುರವಾಗಿ ವಿಮರ್ಶಿಸುವುದು ಉತ್ತಮ ಬೆಳವಣಿಗೆಯೇ. ಆದರೆ, ಈ ನಿಟ್ಟಿನಲ್ಲಿ ಕೆಲವೊಂದು ಅಪವಾದಗಳಿವೆ. ಗಂಭೀರವಾಗಿ ಜ್ಞಾನ, ವಿಜ್ಞಾನದ ವಿಷಯಗಳನ್ನು ಚರ್ಚಿಸುವ ವೇದಿಕೆಗಳನ್ನೂ ಸಹ ಮಾಧ್ಯಮಗಳು, ವಿಶೇಷವಾಗಿ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳು ನೀಡಿವೆ, ನೀಡುತ್ತಿವೆ ಎನ್ನುವುದನ್ನು ಇಲ್ಲಿ ಮರೆಯಬಾರದು. ಅದನ್ನು ಸ್ಪಷ್ಟವಾಗಿ ಗುರುತಿಸುವ ಪ್ರಯತ್ನವೂ ಆಗಬೇಕು. ಕೆಲವಾದರೂ ಮಾಧ್ಯಮಗಳು ಈ ನಿಟ್ಟಿನಲ್ಲಿ ಕಾಳಜಿಯಿಂದ ತೊಡಗಿಕೊಳ್ಳದೆ  ಹೋಗಿದ್ದಲ್ಲಿ ಸಮ್ಮೇಳನದಲ್ಲಿ ನೆರೆದಿದ್ದ ವಿವಿಧ ವಲಯಗಳಿಂದ ಬಂದಿದ್ದ ಆಸಕ್ತರಿಗೆ ವೇದಿಕೆಯಲ್ಲಿ ಆಸೀನರಾಗಿದ್ದ ಬಹುತೇಕ ಸಂವಹನಕಾರರೆಲ್ಲರೂ ಅಪರಿಚಿತರೇ ಆಗಿರಬೇಕಿತ್ತು! ಆದರೆ, ಪರಿಸ್ಥಿತಿ ಹಾಗಿರಲಿಲ್ಲ.

ಇದನ್ನೂ ಓದಿ : ಅಸಮಾನ ಸಂಪತ್ತಿಗೆ ಕೊಡಲಿ ಪೆಟ್ಟಾಗಲಿ ನೂತನ ತಂತ್ರಜ್ಞಾನ-2

ಅಂತಿಮವಾಗಿ, ವಿಜ್ಞಾನವನ್ನು ವೈಚಾರಿಕತೆಯಿಂದ, ಮಾನವೀಯ ಮೌಲ್ಯಗಳಿಂದ ದೂರವಿರಿಸುವ ಪ್ರಜ್ಞಾಪೂರ್ವಕ ಪ್ರಯತ್ನಗಳು ಇಂದು ನಡೆಯುತ್ತಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಯಾವೆಲ್ಲ ಸಂದರ್ಭಗಳಲ್ಲಿ ವೈಚಾರಿಕ ಮನೋಭಾವವನ್ನು, ಮಾನವೀಯತೆಯನ್ನೂ ಮರೆತು ಸ್ವಯಂ ವಿಜೃಂಭಣೆ, ಜನಾಂಗೀಯ ಶ್ರೇಷ್ಠತೆ, ಸರ್ವಾಧಿಕಾರಿ ಮನೋಭಾವದ ಶಕ್ತಿಗಳ ಪರವಾಗಿ ನಿಂತಿದೆಯೋ ಆ ಸಂದರ್ಭಗಳಲ್ಲೆಲ್ಲಾ ಮನುಕುಲದ ಬೆನ್ನುಮುರಿಯುವ ಕೆಲಸವಾಗಿದೆ. ಮೂಲಭೂತವಾದಿಯಾದ, ವಿಚಾರಶೀಲನಲ್ಲದ, ಜೀವಪರವಲ್ಲದ ಸಂಶೋಧಕ ಯಾವುದೇ ಕ್ಷೇತ್ರದಲ್ಲಿದ್ದರೂ  ಜ್ಞಾನ ಹಾಗೂ ಸತ್ಯದ ಹೆಸರಿನಲ್ಲಿ ಸಂಕುಚಿತ ಮನೋಭಾವದ, ಶ್ರೇಷ್ಠತೆಯ ಅಹಮಿಕೆಯನ್ನು ಬೆಳೆಸುವ, ವಿಧ್ವಂಸಕಾರಿ ಪ್ರಯತ್ನಗಳಿಗೆ ಹೆಗಲು ಕೊಡುವ ಕೆಲಸಗಳಿಗೆ ಮಾತ್ರವೇ ಬಳಕೆಯಾಗುತ್ತಾನೆ. ಹಾಗಾಗಿಯೇ, ವಿಜ್ಞಾನ ಸಂವಹನವೆನ್ನುವುದು ಅತ್ಯಗತ್ಯವಾಗಿ ವಿಚಾರಶೀಲತೆಯ ಸಂವಹನವೂ, ಮಾನವೀಯತೆಯ ಸಂವಹನವೂ ಆಗಿರಲೇಬೇಕು. ಅದು ಎಂದಿಗೂ ಧರ್ಮ, ಜಾತಿ, ಜನಾಂಗಗಳ ಶ್ರೇಷ್ಠತೆಯ ವ್ಯಸನವಾಗಬಾರದು.

ವಿಜ್ಞಾನ ಸಂವಹನವೆನ್ನುವುದು ಸಮಾಜದಲ್ಲಿ ಪ್ರಶ್ನಿಸುವ, ವಿಮರ್ಶಿಸುವ, ವಿಶ್ಲೇಷಿಸುವ ಗುಣಗಳನ್ನು ಅತ್ಯಗತ್ಯವಾಗಿ ಬೆಳೆಸಬೇಕು. ಜಗತ್ತಿನ ಇತಿಹಾಸದಲ್ಲಿ ಸಾಹಿತ್ಯ ಹಾಗೂ ವಿಮರ್ಶೆಗಳು ಪಡೆದಿರುವ ವಿಶಿಷ್ಟ ಸ್ಥಾನಕ್ಕೆ ಇದುವೇ ಕಾರಣ. ವೈಚಾರಿಕತೆಯನ್ನು, ಪ್ರಶ್ನಿಸುವ ಮನೋಭಾವವನ್ನು, ವಿಮರ್ಶೆಯ ಗುಣವನ್ನೂ ಸಾಹಿತ್ಯ ಹಾಗೂ ವಿಮರ್ಶಾ ಕ್ಷೇತ್ರಗಳು ಜಗತ್ತಿನುದ್ದಕ್ಕೂ ದೇಶ, ಗಡಿ, ಜನಾಂಗಗಳ ಹಂಗಿಲ್ಲದೆ ವ್ಯಾಪಕವಾಗಿ ಹಬ್ಬಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿವೆ. ವಿಜ್ಞಾನಕ್ಕೆ ನೈಜ ಮನ್ನಣೆ, ಪುರಸ್ಕಾರ, ಸ್ವಾತಂತ್ರ್ಯ ದೊರೆಯುವುದು ವಿಚಾರಶೀಲ ಸಮಾಜದಲ್ಲಿ ಮಾತ್ರವೇ ಸಾಧ್ಯ. ಪ್ರಶ್ನಿಸುವ ಮನೋಭಾವವನ್ನು ಧಿಕ್ಕರಿಸುವ ಸಮಾಜ, ಸರ್ಕಾರಗಳಿರುವೆಡೆ ವಿಜ್ಞಾನಕ್ಕೆ ಅಲ್ಪಕಾಲೀನ ಯಶಸ್ಸು ದೊರೆಯಬಹುದಾದರೂ ಅಂತಿಮವಾಗಿ ಅದರ ತಾಯಿಬೇರಾದ ಆಲೋಚನಾ ಶಕ್ತಿಯೇ ಹತವಾಗುತ್ತದೆ. ಆತ್ಮವನ್ನು ಮಾರಿಕೊಂಡು ಸೈತನಾನನ ಗುಲಾಮನಾಗುವ ಡಾ.ಪೌಸ್ಟ್‌ನ ವ್ಯಕ್ತಿತ್ವ ಈ ಸಂದರ್ಭಕ್ಕೆ ಉತ್ತಮ ಉಪಮೆಯಾಗಿ ಒದಗಿಬರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದ ವಿಚಾರವಾಗಿ ಮಾತನಾಡುವ, ಸಂವಹಿಸುವ ಅನೇಕರಲ್ಲಿ ಇಂದು ಪ್ರೌಢ ಆಲೋಚನಾಶಕ್ತಿಯ ಕೊರತೆ ಕಾಣುತ್ತಿದೆ. ಇದು ಯಾವುದೇ ಒಂದು ದೇಶ, ಭಾಷೆಗೆ ಸೀಮಿತವಾಗಿ ಹೇಳಿದ ಮಾತಲ್ಲ, ಬದಲಿಗೆ ಜಾಗತಿಕವಾಗಿ ಕಂಡುಬರುವಂತದ್ದು. ಪರಿಣಾಮ ಇಂದು ಅನೇಕ ವಿಜ್ಞಾನ ಸಂವಹನಕಾರರು ಮೂಲಭೂತವಾದಿ ಚಿಂತನೆಗಳ ಅಂಧಕಾರದಲ್ಲಿ ಬೆಳಕನ್ನು ಅರಸುವ ಪ್ರಯತ್ನದಲ್ಲಿದ್ದಾರೆ!

ವಿಜ್ಞಾನವನ್ನು ಜನಪ್ರಿಯವಾಗಿಸಬೇಕೆಂದರೆ ಸಮಾಜವನ್ನು ವಿಚಾರಶೀಲವಾಗಿಸಬೇಕು. ಇದನ್ನು ತಿರುವುಮುರುವಾಗಿ ಹೇಳುವುದು ಸತ್ಯಕ್ಕೆ ಮತ್ತೂ ಹೆಚ್ಚು ಹತ್ತಿರವಾದದ್ದು. ವಿಚಾರಶೀಲ ಸಮಾಜದಲ್ಲಿ ಮಾತ್ರವೇ ವಿಜ್ಞಾನ ಜನಪ್ರಿಯತೆಯನ್ನೂ, ನಿಜ ಮನ್ನಣೆಯನ್ನೂ ಪಡೆಯಲು ಸಾಧ್ಯ. ಫಲವತ್ತತೆಯೇ ಇಲ್ಲದ ಭೂಮಿಯಲ್ಲಿ ಉತ್ತಮ ಬೆಳೆ ಹೇಗೆ ಸಾಧ್ಯ? ಹಾಗಾಗಿಯೇ ವಿಜ್ಞಾನವೂ ಸೇರಿದಂತೆ ಯಾವುದೇ ಶ್ರೇಷ್ಠ ಜ್ಞಾನಗಳ ಸಂವಹನದ ಭಾಷೆ ವೈಚಾರಿಕತೆ, ಮಾನವೀಯತೆಯ ಭಾಷೆಯಾಗಿಯೇ ಇರುತ್ತದೆ. ಆನಂತರವಷ್ಟೇ ಅದು ಕನ್ನಡ, ತಮಿಳು, ತೆಲುಗು ಎಂದು ವಿಭಾಗೀಕರಣಗೊಳ್ಳಬಹುದು.

ಇದೇ ಕಾರಣಕ್ಕೆ ವಿಜ್ಞಾನ ಸಂಹವನವನ್ನು ಸಮಾಜದಲ್ಲಿ ಪರಿಣಾಮಕಾರಿಯಾಗಿ ಸಾಧ್ಯವಾಗಿಸಬೇಕೆಂದರೆ ಎಲ್ಲ ವಲಯಗಳ ವಿಚಾರಶೀಲ ಆಲೋಚನೆಗಳಿಗೆ ವಿಜ್ಞಾನ ಸಂವಹನಕಾರರು ತಮ್ಮನ್ನು ಅಗತ್ಯವಾಗಿ ಒಡ್ಡಿಕೊಳ್ಳಬೇಕಿದೆ. ಯಾವುದೇ ಸಂವಹನ ಪರಿಣಾಮಕಾರಿಯಾಗುವುದು ಅದು ದಕ್ಕಿಸಿಕೊಳ್ಳುವ ಸಮಗ್ರ ದೃಷ್ಟಿಕೋನ ಹಾಗೂ ಜೀವಪರತೆಯಿಂದ. ವಿಜ್ಞಾನ ಸಂವಹನಕಾರರು ಸೇರಿದಂತೆ ಎಲ್ಲ ಬಗೆಯ ಸಂವಹನಕಾರರಿಗೂ ಈ ಮಾತು ಅನ್ವಯ. ವಿಪರ್ಯಾಸವೆಂದರೆ, ಈ ಅಂಶ ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ಸಮ್ಮೇಳನದ ಗೋಷ್ಠಿಗಳಿಂದ ಹೊರಗೇ ಉಳಿದದ್ದು ಸೋಜಿಗವೆನಿಸಿತು.