ಸೈಫೈ ದಿನದ ವಿಶೇಷ | ಸಣ್ಣಕತೆ – ವ್ಯೋಮ

ವೈಜ್ಞಾನಿಕ ಕಾಲ್ಪನಿಕ ಕತೆಗಳು ರೋಚಕ ಅನುಭವವನ್ನು ನೀಡುತ್ತವೆ. ನಮಗೆ ಬಾಹ್ಯಾಕಾಶದ ಮಾಹಿತಿಯನ್ನು ನೀಡುತ್ತಾ, ನಮ್ಮ ಕಲ್ಪನಾ ಶಕ್ತಿಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಪ್ರೇರೇಪಿಸುತ್ತವೆ. ಖ್ಯಾತ ಲೇಖಕ ಐಸಾಕ್‌ ಅಸಿಮೋವ್‌ ಜನ್ಮ ದಿನದ ನೆನಪಿನಲ್ಲಿ ಜ.2ಅನ್ನು ವೈಜ್ಞಾನಿಕ ಕಾಲ್ಪನಿಕಗಳ ಕತೆಗಳ ದಿನವಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟೆಕ್‌ಕನ್ನಡ ಓದುಗರಿಗಾಗಿ ಸಣ್ಣ ಕತೆಯನ್ನು ತಂದಿದ್ದೇವೆ

“ಗಮ್ಯ ತಲುಪುತ್ತೇವಾ ?”

“ಖಂಡಿತ…ಎಷ್ಟು ವರ್ಷಗಳು, ಎಷ್ಟು ವಿಜ್ಞಾನಿಗಳು, ಎಷ್ಟು ಕೇಂದ್ರಗಳು ಕಾರ್ಯ ನಿರ್ವಹಿಸಿರುವುದು…ಆ ಎಲ್ಲಾ ಶ್ರಮದ ಪ್ರಾಜೆಕ್ಟ್ ಇದು…ಭರವಸೆ ಇದೆ…”

ಕ್ಷಿಪಣಿ ಗಂಟೆಗೆ 624269 ಕಿಲೋಮೀಟರ್ ವೇಗದಲ್ಲಿ ಸೌರಮಂಡಲದಲ್ಲಿ ಹೋಗುತ್ತಿದೆ. ಆದರೆ ಅದರೊಳಗಿದ್ದ ವಿಜೇತ ಮತ್ತು ಅನಿರುದ್ಧನಿಗೆ ಚಲಿನೆಯ ಅನುಭವವೇ ಆಗುತ್ತಿಲ್ಲ. ಎಲ್ಲವೂ ಸ್ಥಬ್ಧವಾದ ಭಾವ…ಸ್ಕ್ರೀನ್ ಮೇಲೆ ನೋಡಿದಾಗಲಷ್ಟೇ ತಾವು ಸೌರಮಂಡಲದಲ್ಲಿ ವೇಗವಾಗಿ ಹೋಗುತ್ತಿರುವುದರ ಬಗ್ಗೆ ಹಾಗೂ ಎಲ್ಲಿದ್ದೇವೆ ಎಂಬುದರ ಬಗ್ಗೆ ತಿಳಿಯುತ್ತದೆ. ” ಇದೇಕೋ ಸ್ವಲ್ಪ ಹೊತ್ತಿಗೇ ಬೋರ್ ಬಂತು…”, ವಿಜೇತ ಹೇಳಿದ ಮಾತುಗಳು ಎದುರಿಗೇ ಇದ್ದ ಅನಿರುದ್ಧನನ್ನು ತಲುಪಲು ಸುಮಾರು ಮೂರು ನಿಮಿಷಗಳು ಬೇಕಾಯ್ತು. ಮಾತು ಕಿವಿಯ ತಮಟೆಯನ್ನು ಬಡಿದಾದಮೇಲೆ ಅನಿರುದ್ಧ ಜೋರಾಗಿ ನಕ್ಕ. ಅವನ ನಗುವಿನ ಸದ್ದು ವಿಜೇತನ ಕಿವಿಯ ಬಾಗಿಲನ್ನು ಪ್ರವೇಶಿಸಲು ಮತ್ತೇ ಮೂರು ನಿಮಿಷ.

“ಅಲ್ವೋ…, ಕೈ ಚಾಚಿದರೆ ಪರಸ್ಪರ ಸ್ಪರ್ಷಿಸಿಕೊಳ್ಳಬಲ್ಲೆವು. ಆದರೆ ಒಂದೊಂದೇ ಅಕ್ಷರ ತೇಲಿಕೊಂಡು ಇನ್ನೊಬ್ಬರ ಕಿವಿಗೆ ಬೀಳಲು ಎಷ್ಟೊತ್ತು ಕಾಯಬೇಕಲ್ಲೋ…!! ತಮಾಷೆ ಅನ್ಸುತ್ತೆ…ನಿನ್ನ ತುಟಿ ಚಲನೆ ಕಾಣುತ್ತೆ…ಆದರೆ ಧ್ವನಿ ಮಾತ್ರ ಕೇಳುವುದಿಲ್ಲ…ಅಯ್ಯೋ ದೇವರೇ…ಕಾದೂ ಕಾದೂ ಸಂಭಾಷಣೆ ನಡೆಸೋ ಹೊತ್ತಿಗೆ ಸಾಕು ಸಾಕಾಗುತ್ತೆ…ನೀನು ಹಾವ ಭಾವ ಮಾಡುತ್ತಾ ಮೂಕನಂತೆ ಮಾತನಾಡುವುದನ್ನು ನೋಡಲು ಒಳ್ಳೇ ಮಜವಾಗಿರುತ್ತೆ ವಿಜೇತ”. ” ನಿಂದೂ ಅಷ್ಟೇ…”, ಬೆರಳು ಮಾಡಿ ತೋರಿಸಿದ ವಿಜೇತ. “ಎಲ್ಲಾ ವ್ಯೋಮದ ಮಹಿಮೆ. ಗುರುತ್ವಾಕರ್ಷಣೆ ರಹಿತ ಪ್ರದೇಶದಲ್ಲಿ ನಾವಿದ್ದೇವೆ. ವಿಚಿತ್ರ, ಶಬ್ಧ ತರಂಗಗಳೂ ಇಷ್ಟು ನಿಧಾನವಾಗಿ ಚಲಿಸುತ್ತಿರುವುದೇ ಅಚ್ಚರಿ!!…ಇದನ್ನು ನಾನು ಊಹಿಸಿರಲಿಲ್ಲ. ನಾವೀಗಾಗಲೇ ಭೂಮಿಯಿಂದ ತುಂಬಾ ದೂರ ಇದ್ದೇವೆ…”, ಅನಿರುದ್ಧನ ಮಾತಿಗೆ ವಿಜೇತ ತಲೆಯಾಡಿಸಿದ. ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೇ ಕಾಯಬೇಕಾಗಿರುವುದರಿಂದ ಇಬ್ಬರೂ ಕ್ರಮೇಣ ಕೈಸನ್ನೆಗಳಿಂದ ಸಂವಾದ ನಡೆಸತೊಡಗಿದರು. ಅದೂ ಅಷ್ಟು ತೃಪ್ತಿದಾಯಕವಲ್ಲ ಎನ್ನಿಸಿದ್ದರಿಂದ ಆದಷ್ಟೂ ಸುಮ್ಮನಿರಲು ಪ್ರಯತ್ನಿಸತೊಡಗಿದರು.

ಚಂದ್ರ, ಅದನ್ನೂ ದಾಟುತ್ತಿದ್ದೇವೆ…”, ವಿಜೇತನ ಮಾತಿಗೆ ತಲೆದೂಗಿದ ಅನಿರುದ್ಧ ಚಂದ್ರ ಸಮೀಪದಿಂದ ಹೇಗೆ ಕಂಡ ಎಂಬುದನ್ನು ಭೂಮಿಯ ಬಾಹ್ಯಾಕಾಶ ಕೇಂದ್ರಕ್ಕೆ ಸಂದೇಶ ಕಳಿಸಿದ. “ಹಾಯ್ ಚಂದ್ರಿಮಾ, ಬೈ ಬೈ…”, ವಿಜೇತ ಹೇಳಿದಾಗ, “ಏನೋ ನೀನು!!…ಚಂದ್ರನನ್ನು ಪುಲ್ಲಿಂಗ ಅಂತಾನೇ ಯುಗಯುಗಗಳಿಂದ ಹೇಳಿಕೊಂಡು ಬರ್ತಿದ್ದಾರೆ. ನೀನು ನೋಡಿದರೆ ಚಂದ್ರಿಮಾ ಅಂತ ಕರೀತೀಯಲ್ಲ!!…”, ಅನಿರುದ್ಧ ಛೇಡಿಸಿದ. “ಅದೇನು, ಯಾರೋ ಹೇಳಿದ್ರೂ ಅಂತ ಚಂದ ಮಾಮ ಅಂತಾನೇ ಕರೀಬೇಕಾ?…ನನಗೇಕೋ ತುಂಬಾ ಹತ್ತಿರದಿಂದ ನೋಡಿದಾಗ ಹೆಣ್ಣಿನ ಹಾಗೇ ಕಂಡಿತಪ್ಪಾ…, ಆ ಬೆಡಗು, ಆ ಬಿನ್ನಾಣ…ನಿಜಕ್ಕೂ ಅದು ಚಂದ ಅತ್ತೆ !!,”, ವಿಜೇತ ಕಣ್ಣುಹೊಡೆದ.

. “ಸರಿಹೋಯ್ತು…, ನಾವೀಗ ವಿಕಾಸಪಥದಲ್ಲಿ ತುಂಬಾ ಮುಂದೆ ಹೋಗಿದ್ದೇವೆ ನಿಜ…ಆದರೆ ಇತಿಹಾಸ ಬದಲಾಗೋಲ್ಲ ಅಲ್ವಾ…ಈಗ್ಗೆ ಹಲವು ವರ್ಷಗಳ ಕೆಳಗೆ ಕ್ಷಿಪಣಿಯೊಂದು ಮಂಗಳಕ್ಕೆ ಹೋಗಿತ್ತು. ಆಗ ಅದು ಕಳಿಸಿದ ಮಾಹಿತಿಯಿಂದ ಅಲ್ಲಿಯೂ ಸಹ ಜೀವಿಗಳು ವಾಸಿಸುತ್ತಿವೆಯೆಂದು ತಿಳಿಯಿತು. ಆದರೆ ಇಲ್ಲೀವರೆಗೂ ಅದನ್ನು ನಿಖರವಾಗಿ ಪತ್ತೆಮಾಡಲು ಆಗಿಲ್ಲ…ಕಾಲ ಬದಲಾಗಿದೆ…ಆದರೆ ಕೆಲವು ವಿಚಾರಗಳು ಎಂದೂ ಬದಲಾಗೋಲ್ಲ ಮಹರಾಯ..ಭೂಮಿಯನ್ನು ಹೆಣ್ಣಿಗೆ ಹೋಲಿಸಿದ್ದಾರೆ. ಚಂದ್ರ, ಮಂಗಳ, ಸೂರ್ಯ, ಶನಿ, ಬುಧ, ಶುಕ್ರ…ಇವರನ್ನೆಲ್ಲಾ ಪುರುಷರೆಂದೇ ಕರೆಯುವುದು ಅನಾದಿ ಕಾಲದಿಂದ ಬಂದ ಸಂಪ್ರದಾಯ. ನೀನೆಲ್ಲಾ ಬದಲಿಸಿಬಿಡಬೇಡ…ಗೊಂದಲ ಆಗುತ್ತೆ…”, ಅನಿರುದ್ಧನ ಮಾತುಗಳು ಸ್ಪಷ್ಟವಾಗಿರಲಿಲ್ಲ.

. ” ಈಗ ನಾವು ಹೋಗುತ್ತಿರುವುದು ನೂತನ ಗ್ರಹ ಜೀವಾ ಬಳಿಗೆ. ಅದು ಹೆಣ್ಣೋ ಗಂಡೋ ಗೊತ್ತಿಲ್ಲ. ಅದರ ಆಕೃತಿಯೂ ವಿಶೇಷವಾಗಿದೆ. ಉಳಿದೆಲ್ಲಾ ಗ್ರಹಗಳು ದುಂಡಾಕಾರದಲ್ಲಿದ್ದರೆ ಈ ಹೊಸ ಗ್ರಹ ಜೀವಾ ಮಾತ್ರ ಚೌಕಾಕಾರವಾಗಿದೆ…ವೆರಿ ಇಂಟರೆಸ್ಟಿಂಗ್…”, ವಿಜೇತ ಕುತೂಹಲದಿಂದ ಹೇಳಿದ. “ಗಮ್ಯ ಸೇರಲು ಇನ್ನೂ ಆರು ತಿಂಗಳು…ಅಲ್ಲಿಂದ ಮತ್ತೇ ಭೂಮಿ ತಲುಪಲು ಇನ್ನಾರು ತಿಂಗಳು…ಒಂದು ವರ್ಷದ ಪಯಣ…”, ಅನಿರುದ್ಧ ಸಮಯದ ಬಗ್ಗೆ ಮತ್ತೊಮ್ಮೆ ಲೆಕ್ಕ ಹಾಕಿದ. “ಹೌದು, ನಾವು ಭೂಮಿ ಬಿಡುವಾಗ ಹಾಕಿದ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿದೆ. ಒಂದೇ ದಿನದಲ್ಲಿ ಅಂತರ ಮತ್ತು ಸಮಯದ ಒಂದು ಅಂದಾಜು ಲೆಕ್ಕ ಸಿಕ್ಕಿತು. ಅದನ್ನು ಕೇಂದ್ರಕ್ಕೆ ತಿಳಿಸಿದ್ದೂ ಆಯ್ತು…ಹೇಳೋಕ್ಕಾಗಲ್ಲ…ಈ ಲೆಕ್ಕಾಚಾರವೂ ತಪ್ಪಾಗಬಹುದು…ಮುಂದೆ ಮುಂದೆ ಹೋದಮೇಲೆ ಬದಲಾದರೂ ಆಗಬಹುದು ವಿಜೇತ…”. “ಹಾಗಾದರೆ ಒಂದು ವರ್ಷಕ್ಕಿಂತ ಹೆಚ್ಚಿಗೆಯೂ ಆಗಬಹುದು…ಇಲ್ಲಾ ಕಡಿಮೆಯೂ ಆಗಬಹುದು…ಈಗಲೇ ಪ್ರೆಡಿಕ್ಟ್ ಮಾಡಲು ಬರುವುದಿಲ್ಲವಲ್ಲಾ ಅನಿರುದ್ಧ”.

“ನಾವಿಬ್ಬರೂ ಈ ಪ್ರಾಜೆಕ್ಟ್ ನಲ್ಲಿಯೇ ಬೇಟಿಯಾದವರು…ಆದರೂ ಎಷ್ಟುಬೇಗ ಹೊಂದಿಕೊಂಡೆವಲ್ವಾ…!! ನಿನ್ನ ಜೊತೆ ಬರುವವನು ರಾಜ್ ಕೋಟ್ ನ ವಿಜೇತ ಎಂದು ರಾಜನ್ ಸರ್ ಹೇಳ್ದಾಗ ನಾನು ಸ್ವಲ್ಪ ಬೇಸರಿಸಿಕೊಂಡಿದ್ದೆ. ಅಯ್ಯೋ, ಒಬ್ಬ ಹುಡುಗಿಯನ್ನಾದ್ರೂ ಹಾಕಬಾರದಿತ್ತಾ ಎಂದು ಪೇಚಾಡಿಕೊಂಡಿದ್ದೆ. ಆಕ್ಚ್ಯುಯಲಿ, ಅನೀಶಾ ಆಯ್ಕೆಯಾಗಬಹುದು ಅಂತಾ ಊಹಿಸಿದ್ದೆ. ಯಾಕೆಂದರೆ ಹಿಂದಿನ ಪ್ರಾಜೆಕ್ಟ್ ನಲ್ಲಿ ಅವಳೇ ನನ್ನ ಸಹಯಾತ್ರಿ ಆಗಿದ್ದಳು. ಈ ಬಾರಿಯೂ ಅವಳನ್ನೇ ಹಾಕಬಹುದು ಅಂದುಕೊಂಡಿದ್ದೆ…”.

“ಹ…ಹ…ಓಹೋ…ನಾನು ಬಂದಿದ್ದಕ್ಕೆ ಬೇಸರವಾಯ್ತಾ…ನನಗೆ ಬಂದ ಸುದ್ದಿ ಪ್ರಕಾರ ನೀವಿಬ್ಬರೂ ಒಬ್ಬರಿಗೊಬ್ಬರು ಸರಿಯಾಗಿ ಕೋ ಆರ್ಡಿನೇಟ್ ಮಾಡ್ತಿರಲಿಲ್ಲವಂತೆ…, ಮಾಹಿತಿ ನೀಡೋದ್ರಲ್ಲೂ ತುಂಬಾ ಆರ್ಗ್ಯು ಮಾಡ್ತಿದ್ರಂತೆ…ಶುದ್ಧ ವೈರಿಗಳ ಹಾಗೆ ಇದ್ದಿದ್ದರಿಂದ ಪ್ರಾಜೆಕ್ಟ್ ನಿರೀಕ್ಷಿಸಿದಷ್ಟು ಯಶಸ್ವಿ ಆಗಲಿಲ್ಲ ಎಂದೇ ಅನೀಶಾಳ ಬದಲಿಗೆ ನನ್ನನ್ನು ಆಯ್ಕೆ ಮಾಡಿದರು…ನಾನು ಬೇರೆ ಒಬ್ಬಂಟಿ. ಭೂಮಿಯಲ್ಲಿ ನನ್ನವರು ಅಂತ ಯಾರೆಂದರೆ ಯಾರೂ ಇಲ್ಲ…ಅದಕ್ಕೇ ಈ ಕ್ಷಿಪಣಿಯಲ್ಲಿ ಬರಲು ಒಪ್ಪಿಕೊಂಡೆ…ಇಲ್ಲಿಯವರೆಗೂ ಹೋದ ಕ್ಷಿಪಣಿಗಳೆಲ್ಲಾ ಗಂಟೆಗೆ 1 ಲಕ್ಷ ಇಲ್ಲಾ 2 ಲಕ್ಷ ಕಿಲೋಮೀಟರ್ ವೇಗದಲ್ಲಿ ಹೋಗಿದ್ದವು. ಅಂತಹ ವೇಗದಲ್ಲಿ ಹೋಗಿಯೇ ಕೇವಲ 8 ಗಂಟೆಯಲ್ಲಿ ಚಂದ್ರನನ್ನು ತಲುಪಿದ್ದು ಇದೆ. ಆದರೆ ಇದು ಅಲ್ಮೊಸ್ಟ್ ಐದಾರು ಪಟ್ಟು ಹೆಚ್ಚಿಗೆ ವೇಗದಲ್ಲಿ ಹೋಗ್ತಾ ಇದೆ…. ನಾವು ಬೇರೆಲ್ಲಾ ಕಡೆ ಸುತ್ತು ಹಾಕಿ ಬಂದದ್ದರಿಂದ ಚಂದ್ರನನ್ನು ನೋಡಲು ಹೆಚ್ಚು ಸಮಯ ತೆಗೆದುಕೊಂಡೆವು. ಈ ವೇಗದಲ್ಲಿ ರಿಸ್ಕ್ ಇದೆ ಅಂತ ಎಲ್ಲರೂ ಮುನ್ನೆಚ್ಚರಿಕೆ ಹೇಳಿದರು…ಆದರೂ ನಾನು ಒಪ್ಪಿಕೊಂಡೆ…ನಿನ್ನ ಬಗ್ಗೆ ತುಂಬಾ ಕೇಳಿದ್ದೆ…ನಿನ್ ಜೊತೆ ಕೆಲಸ ಮಾಡೋ ಅಂತ ಅವಕಾಶ ಹೇಗೆ ಬಿಡಲಿ…ಅದಕ್ಕೇ ಬಂದುಬಿಟ್ಟೆ…”, ವಿಜೇತ ಹೇಳಿದಾಗ ಅನಿರುದ್ಧ ಸುಂದರ ನಗೆ ಚೆಲ್ಲಿದ. ” ಹೌದೂ…, ಅನೀಶಾ ಸಹ ತುಂಬಾ ದಕ್ಷತೆಯುಳ್ಳವಳೇ…ಅವಳು ರಷ್ಯಾದಲ್ಲಿ ಕೆಲಸ ಮಾಡ್ತಿದ್ದಾಗ ಜೀವಾ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು. ತುಂಬಾ ಖಡಕ್…ವರ್ಕೋಹಾಲಿಕ್ ಅಂತ ಅವಳ ಬಗ್ಗೆ ಹೇಳ್ತಾರೆ…ನೀನೂ ಹಾಗೇನೇ…ಆದ್ರೂ ಯಾಕೆ ಜಗಳ ಆಡ್ತಾ ಇದ್ರಿ?…ಹಿಂದಿನ ಪ್ರಾಜೆಕ್ಟ್ ಹಾಳು ಮಾಡಿದಿರಿ ಅಂತ ಎಲ್ಲಾ ಕಡೆ ಹೆಸರಾಯ್ತು. ನಾನಾಗ ನಾಸಾದಲ್ಲಿದ್ದೆ…ಅಲ್ಲೆಲ್ಲಾ ಅದೇ ಗುಸುಗುಸು, ಪಿಸುಪಿಸು…ಏನಾಯ್ತು ಅಂತಾ ಕೇಳಬಹುದಾ…?”. ವಿಜೇತ ಕುತೂಹಲದಿಂದ ಕೇಳಿದ. ಅನಿರುದ್ಧ ಮುಗುಳ್ನಗೆ ಬೀರಿದ…ಏನನ್ನೂ ಹೇಳಲಿಲ್ಲ. ಅವನ ಮೌನ ಕಂಡು ವಿಜೇತ ಸುಮ್ಮನಾದ.

****

“ಹಸಿವಾಗ್ತಾ ಇದೆಯಾ…?”, ವಿಜೇತನ ಪ್ರಶ್ನೆಗೆ ಅನಿರುದ್ಧ ಇಲ್ಲವೆಂದು ತಲೆಯಾಡಿಸಿದ.

“ಥತ್….ಹಾಳಾದ್ದು…ಹಸಿವೂ ಇಲ್ಲ, ನೀರಡಿಕೆಯೂ ಇಲ್ಲ…ಅದೇನೋ ಇಂಜೆಕ್ಷನ್ ಕೊಟ್ಟರಲ್ಲಾ…ರಾಜನ್ ಸರ್ ಹೇಳ್ತಾ ಇದ್ದರು, ಈ ಇಂಜೆಕ್ಷನ್ ಕೊಟ್ಟಿದ್ದೇವಲ್ಲಾ…ನಿಮಗೆ ಹಸಿವು, ಬಾಯಾರಿಕೆ ಏನೊಂದೂ ಬಾಧಿಸುವುದಿಲ್ಲ, ಒಂದು ವರ್ಷದವರೆಗೆ!!!…ಅಂತಾ…ಅಕಸ್ಮಾತ್ ಈ ಪಯಣ ಒಂದು ವರ್ಷಕ್ಕಿಂತಲೂ ಅಧಿಕ ಸಮಯ ತಗೊಂಡ್ರೇ ಆಗ ಹಸಿವಾಗಬಹುದು…ಆಗ ಈ ಮಾತ್ರೆ ಸೇವಿಸಿ ಅಂತಾ ಮಾತ್ರೆ ಡಬ್ಬಾನೂ ಕೊಟ್ರು…ಅನಿರುದ್ಧ, ನೀನೇನೇ ಹೇಳು…ಹಸಿವು ಕೊಡೋ ಮಜಾನೇ ಬೇರೇ…ಹಸಿವು ಸ್ವಲ್ಪ ಕಾಡಿದ ಮೇಲೆ ಆಹಾರ ಸೇವಿಸ್ತೀವಲ್ಲಾ….ಅದು ಬ್ರಕ್ಮಾಂಡ ಫೀಲಿಂಗ್ ಕಣೋ…ಯಾಕೋ ಏನೋ…ಹಸಿವು, ನೀರಡಿಕೆ ಇಲ್ಲದ ಮೇಲೆ ಅದು ಜೀವನಾನೇ ಅನ್ನಿಸಿಕೊಳ್ಳೋಲ್ಲ…ನಾನು ಒಂದು ಹಳೆಯ ಪುಸ್ತಕ ಓದ್ತಾ ಇದ್ದೆ. ಅದರಲ್ಲಿ ಆಹಾರದ ವಿಷಯದ ಬಗ್ಗೆ ತುಂಬಾ ವಿಷಯಗಳನ್ನು ಹೇಳಿದ್ರು. ಹಿಂದೆಲ್ಲಾ ಜನರು ಪುಷ್ಕಳವಾಗಿ ಬೋಜನ ಮಾಡ್ತಿದ್ರಂತೆ. ಹೊಟ್ಟೆಬಿರಿಯುವಷ್ಟು ತಿನ್ನುತ್ತಿದ್ದರಂತೆ. ಒಂದು ಹೊತ್ತಿನ ಆಹಾರದಲ್ಲಿ ಅದೆಷ್ಟೋ ಬಗೆಯ ತಿನಿಸುಗಳು ಇರ್ತಾ ಇದ್ದವಂತೆ…ಆಮೇಲೆ ಬರ್ತಾ ಬರ್ತಾ ಆಹಾರದ ಸ್ವರೂಪ ಬದಲಾಯಿತಂತೆ. ಹೊರಗಿನ ಆಹಾರ ತಿನ್ನುವುದು ಹೆಚ್ಚಾಯಿತಂತೆ…ಹೊಸ ಹೊಸ ಪ್ರಯೋಗಗಳ ಆಹಾರ ಸೇವಿಸಿದ್ದರಿಂದ ಆರೋಗ್ಯದಲ್ಲಿ ಸಾಕಷ್ಟು ಏರು ಪೇರಾಯಿತಂತೆ…ಆಗ ಎಚ್ಚೆತ್ತುಕೊಂಡರಂತೆ…ಬದಲಾದ ಜೀವನಶೈಲಿ, ಬದಲಾದ ಆಹಾರ ಪದ್ದತಿ…ಹೊಸ ಹೊಸ ರೋಗಗಳು ಬಂದವಂತೆ…ಕ್ರಮೇಣ ತಿನ್ನುವ ಪ್ರಮಾಣ ಕಡಿಮೆಯಾಯಿತು…ಸಮಯದ ಅಭಾವ…ಆರೋಗ್ಯದ ಏರು ಪೇರು…ತಟ್ಟೆತುಂಬಾ ಹಾಕಿಕೊಂಡು ತಿನ್ನುವುದು ಹೋಗಿ ಒಂದು ಸಣ್ಣ ಚಮಚದಷ್ಟು ಮಾತ್ರ ತಿನ್ನುವ ಹಂತಕ್ಕೆ ಬಂದಿತು….ಪೀಳಿಗೆಯಿಂದ ಪೀಳಿಗೆಗೆ ಹೊಟ್ಟೆಯ ಗಾತ್ರ ಸಣ್ಣದಾಗುತ್ತಾ ಬಂದಿತಂತೆ…ಈಗ ನಮಗೆ ಅರ್ಧ ಚಮಚ ತಿಂದರೆ ಹೊಟ್ಟೆ ಬಿರಿಯುತ್ತದೆ…ಈ ಕ್ಷಿಪಣಿಯಲ್ಲಿ ಅದೂ ಇಲ್ಲ…ಹಸಿವೂ ಆಗ್ತಾ ಇಲ್ಲ…”. ” ಅನೀಶಾನೂ ನಿನ್ನ ಹಾಗೇ ಹೇಳ್ತಾ ಇದ್ದಳು…”, ತುಂಬಾ ದಿನಗಳ ನಂತರ ಅನಿರುದ್ಧನ ಬಾಯಿಯಲ್ಲಿ ಅನೀಶಾಳ ಹೆಸರು ಬಂದಿತು. “ವಾರೆವ್ಹಾ…ಅಂತೂ ಅವಳ ಬಗ್ಗೆ ಹೇಳಿದೆಯಲ್ಲಾ…”, “ಯಾಕೋ ಗೊತ್ತಿಲ್ಲ, ನಿನ್ನ ಮಾತನ್ನು ಕೇಳಿದ ಕೂಡಲೇ ಅವಳ ಹೆಸರು ತಟ್ಟನೆ ನೆನಪು ಬಂದಿತು…ಬಹುಶಃ ಅವಳೂ ಹೀಗೇ ಹೇಳಿದ್ದಳಲ್ಲಾ…ಅದಕ್ಕೇ ಅನ್ನಿಸುತ್ತೆ…”, ಅನಿರುದ್ಧ ನೆನಪಿನಲ್ಲಿ ಮುಳುಗಿದ. “ನನಗೊಂದು ಕುತೂಹಲ ತುಂಬಾ ದಿನದಿಂದ ಕಾಡ್ತಾ ಇದೆ…ನೀನೇನೂ ತಪ್ಪು ತಿಳಿದುಕೊಳ್ಳೋಲ್ಲ ಅಂದ್ರೆ ಕೇಳ್ಲಾ…?”, ವಿಜೇತ ಮೆಲ್ಲನೆ ಕೇಳಿದ.

“ಕೇಳಬಹುದು…ಸಂಕೋಚ ಬೇಡ”

“ಏನಿಲ್ಲ…ನೀನು , ಅನೀಶಾ 3 ವರ್ಷದ ಪ್ರಾಜೆಕ್ಟ್ ಮಾಡಿದ್ದು. ವಯಸ್ಸು, ಮೈ ಕಟ್ಟು, ರೂಪ, ಕಾಯಕ…ಎಲ್ಲವೂ ಸೂಪರ್. ಇಬ್ಬರೇ ಏಕಾಂತದಲ್ಲಿ ಅಷ್ಟು ಕಾಲ ಜೋತೆಗೆ!!!…ಇಬ್ಬರ ನಡುವೆ ಬರೀ ಜಗಳ ಇತ್ತಾ ?…ಸೆಕ್ಸ್ ಬಗ್ಗೆಯೂ ಯೋಚಿಸಿ ನಿಮ್ಮಿಬ್ಬರನ್ನು ಆಯ್ಕೆ ಮಾಡಿದ್ದು ತಾನೇ… ಆ ಒಪ್ಪಂದಕ್ಕೆ ನಿಮ್ಮ ಸಮ್ಮತಿಯನ್ನೂ ತೆಗೆದುಕೊಂಡಿದ್ದರು…ಜಸ್ಟ್ ಸ್ಪೈಸಿ ಕುತೂಹಲ ಅಷ್ಟೇ..!!”, ವಿಜೇತನ ಕಳ್ಳನೋಟಕ್ಕೆ ಅನಿರುದ್ಧ, “ಹಾಂ…ಒಪ್ಪಂದವೇನೋ ಆಗಿತ್ತು ನಿಜ…ಮೊದಲ ಕೆಲವು ದಿನ ಓಕೆ…ಅವಳು ನಾರ್ಮಲ್ ಆಗಿಯೇ ವರ್ತಿಸಿದಳು. ಆಮೇಲೆ ಏನಾಯ್ತೋ ಏನೋ…ಅವಳಿಗೆ ಮೂಡ್ ಇದ್ದಾಗ ಇದ್ದಾಗ ಮಾತ್ರ ಆಗಬೇಕೆನ್ನುತ್ತಿದ್ದಳು…ನನಗೂ ಇರಿಟೇಟ್ ಆಗುತ್ತಿತ್ತು…ಎಷ್ಟೊಂದು ಅಧ್ಯಯನ ಮಾಡಿ, ರಿಪೋರ್ಟ್ ರೆಡಿಮಾಡಬೇಕಿತ್ತು…ಅದೇ ನನಗೆ ಬೇಕೆಂದಾಗ ಸಮ್ಮತಿಸುತ್ತಲೇ ಇರಲಿಲ್ಲ…ಆಗೆಲ್ಲಾ ನಾನೊಂದು ತಂತ್ರ ಬಳಸುತ್ತಿದ್ದೆ….ನೆದರ್ ಲ್ಯಾಂಡ್ ನಲ್ಲಿದ್ದಾಗ ನಾನು ಸಮ್ಮೋಹಿನಿ ವಿದ್ಯೆ ಕಲಿತಿದ್ದೆ…ಕಣ್ಣಿನ ದೃಷ್ಟಿಯಿಂದಲೇ ಪ್ರಣಯ ಮಾಡಿಬಿಡುತ್ತಿದ್ದೆ. ಅದು ಅವಳಿಗೆ ತೀರಾ ಕೋಪ ತರಿಸುತ್ತಿದ್ದಿತು. ನನ್ನೊಡನೆ ಮಾತನಾಡಿದರೆ ಎಲ್ಲಿ ನನ್ನ ಕಣ್ಣುಗಳನ್ನು ನೋಡಬೇಕಾಗುತ್ತದೆಯೋ ಎಂದು ಮಾತನಾಡುವುದಕ್ಕೂ ಸಿದ್ಧಳಿರಲಿಲ್ಲ. ಅವಳೊಡನೆ ಚರ್ಚೆ ಮಾಡದೆ ನಾನು ರಿಪೋರ್ಟ್ ರೆಡಿ ಮಾಡಲು ಸಾಧ್ಯವಿರಲಿಲ್ಲ….ಇದೆಲ್ಲಾ ರಗಳೆಯನ್ನು ನಾನು ಕೇಂದ್ರಕ್ಕೆ ಚಾಚೂ ತಪ್ಪದೆ ತಿಳಿಸುತ್ತಿದ್ದೆ. ಅವರೂ ಅವಳಿಗೆ ವಾರ್ನಿಂಗ್ ಮಾಡಿದರು. ಆದರೆ ಅವಳು ಸ್ವಲ್ಪವೂ ಬದಲಾಗಿರಲಿಲ್ಲ…ಅವಳು ಪ್ರತಿಯೊಂದಕ್ಕೂ ಜಗಳ ಆಡುವುದನ್ನೇ ಅಭ್ಯಾಸ ಮಾಡಿಕೊಂಡಳು…ಕೊನೆಕೊನೆಗೆ ಹೇಗಾಯಿತೆಂದರೆ ಯಾವತ್ತಾದರೂ ಅವಳು ಸುಮ್ಮನಿದ್ದಳೆಂದರೆ ನನಗೆ ಏನೋ ಸಹಜವಾಗಿಲ್ಲ ಅನ್ನಿಸತೊಡಗಿತ್ತು. ಅವಳ ಜಗಳ ಅಷ್ಟೊಂದು ರೂಢಿಯಾಗಿಬಿಟ್ಟಿತ್ತು…”. “ಅನಿರುದ್ಧ, ಅದಕ್ಕೇ ಏನೋ ಈ ಬಾರಿ ಆ ರಗಳೆಯೇ ಬೇಡ ಅಂತ ಒಂದು ವರ್ಷದ ಟೆಸ್ಟೊಸ್ಟೆರಾನ್ ವ್ಯಾಕ್ಸಿನ್ ಕೊಟ್ಟುಬಿಟ್ಟಿದ್ದಾರೆ. ಆದ್ದರಿಂದ ನಮಗಿಬ್ಬರಿಗೂ ಆ ಬಯಕೆಗಳೇ ಬರುತ್ತಿಲ್ಲ…”, ವಿಜೇತ ನುಡಿದಾಗ ಅನಿರುದ್ಧ ಹೌದೆಂದು ತಲೆಯಾಡಿಸಿದ.

****

“ಅನಿ, ಆಗಲೇ ಭೂಮಿಯ ಕಾಲ ಮಾನದ ಪ್ರಕಾರ ಎಂಟು ತಿಂಗಳಾಗುತ್ತಾ ಬಂದಿದೆ…ನಾವಿನ್ನೂ ಜೀವಾ ತಲುಪಿಲ್ಲಿ. ಲೆಕ್ಕಾಚಾರ ಎಲ್ಲಿ ತಪ್ಪಿತೋ ಗೊತ್ತಾಗುತಿಲ್ಲ…”. “ಚಿಂತೆ ಬೇಡ…ನಾವೀಗ ಸಮೀಪದಲ್ಲಿಯೇ ಇದ್ದೇವೆ…ಸೌರಮಂಡಲದ ಏಕೈಕ ಚಚ್ಚೌಕ ಗ್ರಹದ ಮೇಲೆ ನಾವು ಇಳಿಯಲಿದ್ದೇವೆ…ಊಹಿಸಿಕೊಂಡರೇ ರೋಮಾಂಚನವಾಗುತ್ತಿದೆ!!!…ನಾವೆಲ್ಲಾ ಇಷ್ಟು ಕಾಲ ಶ್ರಮ ಪಟ್ಟಿದ್ದಕ್ಕೂ ಸಾರ್ಥಕ ಆಗ್ತಾ ಇದೆ…ನೀನು ಹೇಳಿದ ಹಾಗೆ ಭೂಮಿಯ ಕಾಲಮಾನದ ಪ್ರಕಾರ ಕೇವಲ ಎಂಟು ತಿಂಗಳಾಗಿರಬಹುದು. ಆದರೆ ನಾವು ಅಸಂಖ್ಯ ಜೋತಿರ್ವಷಗಳಷ್ಟು ಮುಂದಿದ್ದೇವೆ…ಈ ರೀತಿಯ ರೋಚಕತೆ ಬೇರಾವ ಕ್ಷೇತ್ರದಲ್ಲೂ ಸಿಗದು…ಅದಕ್ಕೇ ನಾನು ಬಾಹ್ಯಾಕಾಶ ಸಂಶೋಧನಾ ಅಧ್ಯಯನದಲ್ಲಿ ಹೆಚ್ಚು ಆಸ್ಥೆ ವಹಿಸಿದ್ದು…ಅನೀಶಾ ಸಹ ಹೀಗೇ ಹೇಳ್ತಾ ಇದ್ದಳು…”. ” ಗುಡ್…ಪ್ರಥಮ ಬಾರಿ ಅವಳ ಚಿಂತನೆಯನ್ನು ಅನುಮೋದಿಸಿದೆಯಲ್ಲಾ…ಅವಳು ಕೇಳಿಸಿಕೊಂಡಿದ್ದರೆ ಖಂಡಿತ ಕುಣಿದು ಕುಪ್ಪಳಿಸುತ್ತಿದ್ದಳು…ನಿನ್ನ ಕಣ್ಣುಗಳನ್ನು ನೋಡುತ್ತಿದ್ದಳು…”. ವಿಜೇತನ ಮಾತು ಕೇಳಿ ಅನಿರುದ್ಧನ ಮುಖ ಸಣ್ಣದಾಯಿತು. “ಏಕೋ ಗೊತ್ತಿಲ್ಲ…ಅವಳ ನೆನಪು ಗಾಢ ಆಗ್ತಿದೆ…ಮಿಸ್ಸಿಂಗ್ ಹರ್…ಅವಳು ಹೀಗೆ ನನ್ನ ನೆನಪು, ದೌರ್ಬಲ್ಯ ಆಗ್ತಾಳೆ ಅಂತ ನಾನೆಂದೂ ಎಣಿಸಿರಲಿಲ್ಲ…ಭೂಮಿಯ ನೆನಪಾದರೆ ಅವಳೊಬ್ಬಳ ಮುಖವೇ ಕಣ್ಣಮುಂದೆ ಬರುತ್ತದೆ…ಎಂತಹ ರಿಸೋರ್ಸ್ ಫುಲ್ ಹುಡುಗಿ ಆಕೆ…”. ಅನಿರುದ್ಧ ಏನೋ ಯೋಚಿಸುತ್ತಾ ಕುಳಿತಿದ್ದ. ಅಷ್ಟರಲ್ಲೇ ವಿಜೇತ ಗಾಬರಿಯಿಂದ ಚೀರಿದ.

” ಅನೀ…, ಏಕೋ ಮಾನಿಟರ್ ನಲ್ಲಿ ತುಂಬಾ ಲೈನ್ಸ್ ಬರ್ತಿದೆ….ಎಲ್ಲೋ ಏನೋ ಎಡವಟ್ಟಾಗಿದೆ. ಸಂದೇಶ ಅಸ್ಪಷ್ಟವಾಗಿ ಬರ್ತಿದೆ…”. “ಹೌದು…ಮೈಗಾಡ್…ಡೇಂಜರ್ ಸಿಗ್ನಲ್ ಬರ್ತಿದೆ ವಿಜೇತ…”. “ಏನು ಮಾಡೋದು ಅನೀ…, ನಾನಾಗಲೇ ಎಲ್ಲಾ ಪ್ರಯತ್ನಗಳನ್ನೂ ಮಾಡಿದೆ…ಫೇಲ್ಯೂರ್ ಆಗ್ತಿದೆ!!!”. “ವಿಜೇತ, ಇರು ನಾನು ಡಿಕೋಡ್ ಮಾಡ್ತೇನೆ…ಎಸ್…ಸ್ವಲ್ಪ ಮಟ್ಟಿಗೆ ಓದಬಲ್ಲೆ…ರಾಜನ್ ಸರ್ ಮೆಸೇಜ್…ದೇವರೇ…ಅನಾಹುತ ಆಗೇ ಬಿಡ್ತು ವಿಜೇತ…ಮುಂದೆ ಹೋಗುವುದಕ್ಕಾಗುವುದಿಲ್ಲ…ಭೂಮಿಯ ಕಡೆ ತಿರುಗಿಸಿ ಎಂದು ಹೇಳ್ತಿದ್ದಾರೆ ಅವರು…ಏರ್ ಬ್ಲಾಕ್ ಆಗಿದೆ…ನಾವೀಗ ಅಪಾಯದಲ್ಲಿ ಸಿಲುಕಿದ್ದೇವೆ…ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ…!!!”. “ಛೇ…ಅನೀ…ಕೊನೆ ಘಳಿಗೆಯಲ್ಲಿ ಹೇಗಾಯ್ತಲ್ಲೋ…!!! ನನಗೆ ನನ್ನ ಜೀವದ ಬಗ್ಗೆ ಚಿಂತೆಯಿಲ್ಲ… ಆದರೆ ಜೀವಾ ಮಿಷನ್ ಫೇಲ್ಯೂರ್ ಆಗ್ತಿದೆಯಲ್ಲಾ…ನನಗೆ ತಡೆಯೋಕೆ ಆಗ್ತಾ ಇಲ್ಲ…ಪ್ಲೀಸ್ ನೋಡು…ಏನಾದರೂ ಸಾಧ್ಯ ಇದೆಯಾ ಅಂತಾ…”. ” ಬೇರೆ ಆಯ್ಕೆಯಿಲ್ಲ…ನಾವೀಗ ವಾಪಸ್ಸು ತಿರುಗಿಸಲೇ ಬೇಕು…ಭೂಮಿ ತಲುಪುವವರೆಗೆ ಆಕ್ಸಿಜನ್ ಬಂದರೆ ಸಾಕು…”, ಅನಿರುದ್ಧ ಕ್ಷಿಪಣಿಯ ದಿಕ್ಕು ಬದಲಿಸಿದ. ಕೇಂದ್ರದಿಂದಲೂ ಅದೇ ಪ್ರಯತ್ನವಾಯ್ತು. ಕ್ಷಿಪಣಿ ಮತ್ತೇ ಭೂಮಿಯೆಡೆಗೆ ವೇಗವಾಗಿ ಸಾಗಿಬರತೊಡಗಿತು. ಈ ಬಾರಿ ವೇಗವನ್ನೂ ಇನ್ನೂ ಹೆಚ್ಚಿಸಲಾಗಿತ್ತು. ವಿಜೇತ, ಅನಿರುದ್ಧ ಚೈತನ್ಯರಹಿತರಾದರು. ಅವರ ಕನಸು ನುಚ್ಚುನೂರಾಗಿತ್ತು. ಇಬ್ಬರೂ ಎಷ್ಟೋ ಸಮಯದವರೆಗೆ ಮಾತನಾಡಲೇ ಇಲ್ಲ. ಅಸಹಾಯಕತೆಯಿಂದ ಹಪಹಪಿಸತೊಡಗಿದರು. “ತಾಂತ್ರಿಕವಾಗಿ ಎಷ್ಟು ಬೆಳೆದಿದ್ದೇವೆ…ಹೊಸ ಗ್ರಹವನ್ನೂ ಕಂಡುಹಿಡಿದೆವು…ಆದರೂ ಏನಾದರೊಂದು ತಪ್ಪು ಏಕಾಗುತ್ತದೆ…ಎಲ್ಲಿ ಸೋಲುತ್ತೇವೆ ನಾವು…ಎಂತಹ ಪ್ರಮಾದವಾಯಿತಲ್ಲ…ಎಲ್ಲಾ ಶ್ರಮ ವ್ಯರ್ಥವಾಯ್ತು…” ಇಬ್ಬರೂ ದುಃಖಿತರಾದರು.

****

ಭೂಮಿ ತಲುಪಲು ಇನ್ನು ಎರಡೇ ದಿನ ಇದೆ…ನಿರುತ್ಸಾಹದಿಂದಲೇ ಇಬ್ಬರೂ ಕಾರ್ಯ ನಿರ್ವಹಿಸುತ್ತಿದ್ದಾರೆ. “ಹೇಗಾದರೂ ಮಾಡಿ ಭೂಮಿಯನ್ನು ಕ್ಷೇಮವಾಗಿ ತಲುಪಿದರೆ ಸಾಕು…ಮತ್ತೇ ಪ್ರಯತ್ನ ಮಾಡೋಣ”, ಎನ್ನುವಲ್ಲಿಗೆ ಅವರ ಆಶಯ ಬದಲಾಗಿತ್ತು.

“ವಿಜೇತ, ನನಗೇಕೋ ಭೂಮಿ ತಲುಪಲಾರೆವೇನೋ ಎಂದೆನಿಸುತ್ತಿದೆ…”, ಮಾನಿಟರ್ ನೋಡುತ್ತಾ ಕ್ಷೀಣದನಿಯಲ್ಲಿ ನುಡಿದ ಅನಿರುದ್ಧ. “ಏನಾಯ್ತು…?”, ವಿಜೇತನಿಗೆ ಭಯ ಆವರಿಸಿತು. “ಫುಯೆಲ್ ಬೂಸ್ಟರ್ ಸರಿಯಾಗಿ ಕೆಲಸ ಮಾಡ್ತಿಲ್ಲ…ಇದರಲ್ಲಿರುವ ಟರ್ಬೊ ಪಂಪ್ ಹೊಸ ವಿಧಾನದ್ದು…ಈ ಕ್ಷಿಪಣಿಯಲ್ಲಿಯೇ ಮೊದಲ ಬಾರಿಗೆ ಅಳವಡಿಸಲಾಗಿದೆ. ಏನು ಮಿಸ್ಟೇಕ್ ಆಗಿದೆ ಎಂದು ಗೊತ್ತಾಗ್ತಾ ಇಲ್ಲ…ಆಶ್ಚರ್ಯ ಆಗುತ್ತೆ…ಬಹು ಹಿಂದೆ ಇಂತಹ ಅಪಾಯ ಆಗುತ್ತಿತ್ತು….ಈಗ ತಾಂತ್ರಿಕತೆ ತುಂಬಾ ಮುಂದಿದೆ…ಈ ಮಿಸ್ಟೇಕ್ ಆಗಲೇಬಾರದಿತ್ತು…ಆದರೂ ಆಗಿದೆಯೆಂದರೆ ನಂಬುವುದಕ್ಕೇ ಆಗುತ್ತಿಲ್ಲ…ನಾವೆಸ್ಟೇ ಚಾಣಾಕ್ಷರಾದರೂ ವಿಜ್ಞಾನವನ್ನು ಪೂರ್ತಿ ಗೆಲ್ಲಲಾಗಿಲ್ಲ ನೋಡು!!!”, ಅನಿರುದ್ಧ ಪರೀಕ್ಷಿಸುತ್ತಲೇ ನುಡಿದ.

“ಬಹುಶಃ ನಾವು ಹೋಗಿದ್ದು ಹೊಸ ಕಕ್ಷೆಯ ಮೇಲೆ. ಈ ಕ್ಷಿಪಣಿಯ ವಿನ್ಯಾಸ ಅದಕ್ಕೆ ಸೂಟ್ ಆಗಲಿಲ್ಲವೋ ಏನೋ…ಅದಕ್ಕೇ ಈ ರೀತಿಯಾಗುತ್ತಿರಬೇಕು…ಅದೇನೇ ಇರಲಿ,…ಇದಕ್ಕೇನು ಪರಿಹಾರವಿಲ್ಲವೇ…ಬೇಗ ಏನಾದರೂ ಸಲ್ಯೂಶನ್ ಯೋಚಿಸು…ನಾನೂ ಪ್ರಯತ್ನಿಸುತ್ತೇನೆ…”, ವಿಜೇತ ಟೆನ್ಷನ್ ಆದ. “ಜೀವಾ ಸಂಶೋಧನಾ ರಿಪೋರ್ಟ್ ನಲ್ಲಿ ಅನೀಶಾ ಬರೆದ ಕೆಲವು ಸೂಚನೆಗಳು ನೆನಪಾಗ್ತಾ ಇದೆ…ಯೆಸ್…ಅವಳು ಇಂತಹ ಅಪಾಯ ಬಂದಾಗ ಏನು ಮಾಡಬಹುದು ಎಂಬುದನ್ನು ಬರೆದಿದ್ದಳು…ನಿನಗೆ ನೆನಪಿದೆಯಾ…ಅನೀಶಾ ಹೇಳಿದ ಸೂಚನೆಯನ್ನು ನಾವೀಗ ಪಾಲಿಸಿದರೆ ನಮ್ಮಿಬ್ಬರಲ್ಲಿ ಒಬ್ಬರಾದರೂ ಉಳಿಯಬಹುದು…”.

“ನೀನೇನು ಹೇಳ್ತಿದ್ದೀಯ ಅನೀ…ಸರಿ, ಅದೇ ಪರಿಹಾರವಾದರೆ ನಾನೇ ಬಲಿಯಾಗುತ್ತೇನೆ. ಏಕೆಂದರೆ ನನಗಾಗಿ ಅಳುವವರು ಯಾರೂ ಇಲ್ಲ…ಒಂಟಿ ಜೀವಿ ನಾನು…”, ವಿಜೇತ ಮಾತನಾಡುತ್ತಿದ್ದಾಗಲೇ ಅನಿರುದ್ಧ ಫುಯೆಲ್ ಬೂಸ್ಟರ್ ನ ವಾಲ್ವ್ ಸರಿಮಾಡಲು ಪ್ರಯತ್ನಿಸಿದ. ಅದರ ಕನೆಕ್ಷನ್ ಸರಿಯಾಗುವುದರೊಳಗೆ ಕೆಟ್ಟ ಅವಘಡವೂ ಸಂಭವಿಸಿತು. ಆ ಒತ್ತಡದ ರಭಸಕ್ಕೆ ಅನಿರುದ್ಧ ಸೊಯ್ಯನೆ ದೂರ ಎತ್ತಿ ಎಸೆಯಲ್ಪಟ್ಟ. ಆ ರಭಸಕ್ಕೆ ಕ್ಷಿಪಣಿಯ ಗೋಡೆ ಬಲವಾಗಿ ಬಡಿಯಿತು. ಅದನ್ನು ನೋಡಿ ಗಾಬರಿಯಿಂದ ಅವನ ಬಳಿಗೆ ಧಾವಿಸಿದ ವಿಜೇತ, “ಏನಾಯ್ತು ಅನೀ…ಆರ್ ಯು ಆಲ್ ರೈಟ್?”, ಭಯದಿಂದ ವಿಚಾರಿಸಿದ.

ಕ್ಷೀಣ ನಗೆ ಬೀರಿದ ಅನಿರುದ್ಧ, “ಇನ್ನು ನೀನು ಸೇಫ್….ಭೂಮಿಯನ್ನು ಯಾವುದೇ ತೊಂದರೆಯಿಲ್ಲದೆ ತಲುಪುತ್ತೀಯ…ನನ್ನ ವಿದಾಯ ಹೇಳಿಬಿಡು…ಎಲ್ಲರಿಗೂ”. ನಿಧಾನವಾಗಿ ಬಂದ ಅವನ ಮಾತು ವಿಜೇತನನ್ನು ಇನ್ನಷ್ಟು ಘಾಸಿಗೊಳಿಸಿತು. “ನಿನಗೇನು ಆಗೋಲ್ಲ…ನಾನೇ ನಿನಗೆ ಚಿಕಿತ್ಸೆ ಕೊಡುತ್ತೇನೆ…ಏನೇನೋ ಬಡಬಡಿಸಬೇಡ…”, ಎಂದು ಚಿಕಿತ್ಸೆ ಪೆಟ್ಟಿಗೆ ತರಲು ಹೊರಟ ವಿಜೇತನ ಕೈಹಿಡಿದು ತಡೆದ ಅನಿರುದ್ಧ ,”ಇಲ್ಲಾ ವಿಜೇತ…, ನೀನೆಷ್ಟೇ ಪ್ರಯತ್ನಿಸಿದರೂ ನಾನು ಉಳಿಯೋಲ್ಲ…ನಿನಗೇ ಗೊತ್ತಿರುವ ಹಾಗೆ ಇದು ಹೊಸ ಮಾದರಿಯಲ್ಲಿ ನಿರ್ಮಿಸಿದ ಕ್ಞಿಪಣಿ. ಹಿಂದೆಲ್ಲಾ ಸಾಲಿಡ್ ರಾಕೆಟ್ ಬೂಸ್ಟರ್ ಕೆಟ್ಟಿದ್ದರಿಂದ ಎಷ್ಟೊಂದು ಕ್ಷಿಪಣಿಗಳು ಸಿಡಿದುಹೋದವು. ಇಡೀ ಕ್ಷಿಪಣಿಯಲ್ಲಿದ್ದವರೆಲ್ಲಾ ಪ್ರಾಣ ಕಳೆದುಕೊಳ್ಳುವಂತಾಗಿತ್ತು. ಆ ರೀತಿ ಆಗಬಾರದೆಂದೇ ತಾನೇ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದು. ಇದರಲ್ಲಿರುವ ಟರ್ಬೊ ಪಂಪ್ ನಲ್ಲಿ ಬರ್ನಿಂಗ್ ಗ್ಯಾಸ್ ವಿಷಾನಿಲವಾಗಿ ಚಿಕ್ಕ ನಳಿಕೆಯಲ್ಲಿ ಸಂಗ್ರಹವಾಗಿತ್ತು. ಅದರ ಒತ್ತಡವನ್ನು ರಿಲೀಸ್ ಮಾಡಿದರೆ ಅವಘಡ ಆಗುವುದು ತಪ್ಪುತ್ತದೆ…ಬೇರೆ ದಾರಿಯಿರಲಿಲ್ಲ…ವಿಷಾನಿಲ ಕ್ಷಿಪಣಿಯೊಳಗೆ ಹರಡದಂತೆ ನಾನು ಸೇವನೆ ಮಾಡಿಬಿಟ್ಟೆ…ಅದು ತುಂಬಾ ಅಲ್ಪ ಪ್ರಮಾಣದಲ್ಲಿದ್ದರೂ ಅತ್ಯಂತ ವಿಷಕಾರಿ. ಅದೀಗ ನನ್ನ ದೇಹವನ್ನು ವ್ಯಾಪಿಸಿದೆ. ಇನ್ನು ಏನೆಂದರೂ ನಾನು ಉಳಿಯಲಾರೆ…ಅಷ್ಟರೊಳಗೆ ನಾನು ಹೇಳುವ ವಿಷಯವನ್ನು ಸರಿಯಾಗಿ ಕೇಳಿಸಿಕೋ…ನನ್ನದೊಂದು ಮಾತು ನಡೆಸಿಕೊಡುತ್ತೇನೆ ಎಂದು ಮಾತುಕೊಡು…ಪ್ಲೀಸ್”, ಅವನ ದೈನ್ಯತೆಗೆ ವಿಜೇತನಿಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಅನಿರುದ್ಧನ ಕೈಯನ್ನು ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದ. ಆಗಲೇ ಅನಿರುದ್ಧನ ದೇಹ ನೀಲಿಯಾಗಲು ಪ್ರಾರಂಭಿಸಿತು.

“ವಿಜೇತ…, ನಿನಗೆ ಅನೀಶಾನ ವಿಷಯ ಪೂರ್ತಿ ಗೊತ್ತಿಲ್ಲ. ನಿನಗೇ ಅಂತಾ ಅಲ್ಲ…ಬೇರಾರಿಗೂ ಗೊತ್ತಿಲ್ಲ!!!. ನನಗೆ, ರಾಜನ್ ಸರ್ ಗೆ ಮಾತ್ರ ಗೊತ್ತಿರೋದು. ಜೀವಾ ಸಂಶೋಧನೆ ಮಾಡುವಾಗ ಅವಘಡದಲ್ಲಿ ಅವಳ ಕಣ್ಣುಗಳಿಗೆ ಹೊಡೆತ ಬಿದ್ದಿತು. ಎಷ್ಟೇ ಒಳ್ಳೆಯ ಚಿಕಿತ್ಸೆ ತೆಗೆದುಕೊಂಡರೂ ಅವಳ ದೃಷ್ಟಿ ಮಂಜಾಯಿತು. ಈಗ ಅವಳು ಸ್ಪಷ್ಟವಾಗಿ ಏನನ್ನೂ ನೋಡಲಾರಳು. ವೈಧ್ಯಕೀಯ ಇತಿಹಾಸದಲ್ಲೇ ಅವಳದು ವಿಸ್ಮಯ ಕೇಸ್ ಎಂದೆನಿಸಿಕೊಂಡಿದೆ. ಆದರೆ ಈ ವಿಷಯ ಬಹಿರಂಗಗೊಳಿಸದಿರಲು ಅವಳು ವಿನಂತಿಸಿಕೊಂಡಿದ್ದರಿಂದ ಯಾರಿಗೂ ಗೊತ್ತಿಲ್ಲ. ಅವಳೂ ಸಹ ನಿನ್ನಂತೆ ಒಂಟಿ. ಈಗ ಅವಳು ಹರಿಯಾಣದಲ್ಲಿ ಅಜ್ಞಾತವಾಗಿ ಜೀವನ ನಡೆಸುತ್ತಿದ್ದಾಳೆ. ನಾನು ಅವಳನ್ನು ಬೇಟಿಯಾಗಲು ಹೋದಾಗ ಅವಳು ಮುಖವನ್ನೇ ನನಗೆ ತೋರಿಸಲಿಲ್ಲ. ಈ ಜನ್ಮದಲ್ಲಿ ಬೇಟಿ ಮಾಡ ಬೇಡ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಳು…ಅವಳು ಹಾಗೇನೇ…ಮಹಾ ಸ್ವಾಭಿಮಾನಿ…ಒಮ್ಮೆ ನಿರ್ಧರಿಸಿಬಿಟ್ಟರೆ ಆಯ್ತು…ಏನೆಂದರೂ ಅವಳ ನಿಲುವು ಬದಲಾಗದು…ನನಗೆ ಗೊತ್ತು…ನನ್ನ ಮೇಲೆ ಅವಳಿಗೆ ಅಪಾರ ಪ್ರೀತಿಯಿದೆ. ನಮ್ಮಿಬ್ಬರ ಸಂಬಂಧ ಅಂತದ್ದು ವಿಜೇತ…ಎಷ್ಟು ಜಗಳವಾಡುತ್ತಿದ್ದೆವೋ ಅಷ್ಟೇ ಪ್ರೀತಿ ನಮಗೇ ಅರಿವಿಲ್ಲದೆ ನಮ್ಮಿಬ್ಬರ ನಡುವೆ ಬೆಸೆದಿದೆ. ನಾನು ಕಣ್ಣೋಟದಿಂದಲೇ ಅವಳೊಡನೆ ನಡೆಸುತ್ತಿದ್ದ ಚೆಲ್ಲಾಟ, ಪ್ರಣಯ ಅವಳಿಗೆ ಒಳಗೇ ಇಷ್ಟವಾಗುತ್ತಿದ್ದಿತೆಂಬುದನ್ನು ನಾನು ಬಲ್ಲೆ…ಈಗ ಅವಳ ಕಣ್ಣುಗಳನ್ನು ನೋಡಿದರೆ ನಾನೆಲ್ಲಿ ನೋವು ಅನುಭವಿಸುತ್ತೇನೋ ಎಂದೇ ಅವಳು ನನ್ನನ್ನು ಅವಾಯ್ಡ್ ಮಾಡ್ತಿದ್ದಾಳೆ…ಅವಳ ಜೀವನವೇ ಒಂದು ನಿರ್ವಾತ ವ್ಯೋಮವಾಗಿದೆ…ಅವಳಿಗೆ ಹಾಗಾಯಿತಲ್ಲ ಎಂಬ ವೇದನೆಯಿಂದ ನಾನು ಒಳಗೇ ಪರಿತಪಿಸುತ್ತಿದ್ದೆ…ದಯವಿಟ್ಟೂ ನೀನು ಭೂಮಿಗೆ ಹಿಂದಿರುಗಿದ ಮೇಲೆ ಏನಾದರೂ ಸೂಕ್ತ ಕಾರಣ ಹುಡುಕಿಕೊಂಡು, ಅನೀಶಾಳ ವಿಶ್ವಾಸ ಪಡೆದು, ಅವಳ ಜೊತೆಗೇ ಇರು…ಅವಳಿಗೆ ಆಸರೆಯಾಗಿರು…ನಾನು ಹೇಳಿ ಕಳಿಸಿದ್ದು ಎಂಬುದು ಮಾತ್ರ ಅವಳಿಗೆ ಗೊತ್ತಾಗಲೇಬಾರದು…ಇದೊಂದು ಆಸೆ ನೆರವೇರಿಸು…ನಾವೇನೇ ವೈಜ್ಞಾನಿಕವಾಗಿ ಪ್ರಗತಿಯನ್ನು ಸಾಧಿಸಬಹುದು, ಯಾಂತ್ರಿಕವಾಗಿ ಬದಲಾಗಬಹುದು….ಆದರೆ ಈ ಸೆಂಟಿಮೆಂಟಲ್ ವ್ಯಾಲ್ಯೂಸ್ ಮಾತ್ರ ಮಾನವನ ಜೊತೆ ನಿರಂತರವಾಗಿ ಇರುತ್ತವೆ ನೋಡು…”, ಒಮ್ಮೆಲೇ ಅನಿರುದ್ಧ ಶಾಶ್ವತವಾಗಿ ಮೌನವಾದ. ಅವನ ದೇಹವೀಗ ಪೂರ್ತಿ ನೀಲಿಬಣ್ಣಕ್ಕೆ ತಿರುಗಿತ್ತು…ಅನಿರುದ್ಧನ ಮಾತುಗಳು ಕೆಲವು ನಿಮಿಷಗಳ ನಂತರ ವಿಜೇತನ ಹೃದಯವನ್ನು ಸ್ಪರ್ಷಿಸಿದವು…!!!

ಮೂಲತಃ ದಾವಣಗೆರೆಯವರಾದ ಲೇಖಕಿ ಕಿರಣ್ ಪ್ರಸಾದ್ ರಾಜನಹಳ್ಳಿ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ಮಕ್ಕಳಿಗಾಗಿ ಸೈಫೈ ಕತೆ ಮತ್ತು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ರವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರಶಸ್ತಿ, ಲಾಡ್ಲಿ ಮೀಡಿಯಾ ರಾಷ್ಟ್ರೀಯ ಪ್ರಶಸ್ತಿ ಮುಂತಾದ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳು ಲಭಿಸಿವೆ. ರೋಟರಿ ಸಮೂಹ ಅದ್ಯಯನಕ್ಕಾಗಿ ಸಾಂಸ್ಕೃತಿಕ ರಾಯಭಾರಿಯಾಗಿ ಅಮೆರಿಕಾದ ಟೆಕ್ಸಾಸ್ ರಾಜ್ಯದಲ್ಲಿ ಭಾಗವಹಿಸಿ, ಅಲ್ಲಿನ ಪತ್ರಿಕೆಗಳಿಗೆ ಅಂಕಣಕಾರ್ತಿಯಾಗಿ  ಹಾಗೂ ದೂರದರ್ಶನ, ಆಕಾಶವಾಣಿಯಲ್ಲಿ  ಕಾರ್ಯಕ್ರಮ ನಿರೂಪಕಿಯಾಗಿಯೂ  ಕಾರ್ಯನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.