ರೀಚಾರ್ಜ್‌ ಮಾಡಬಲ್ಲ ಬ್ಯಾಟರಿ ಸೃಷ್ಟಿಸಿದ ಮೂವರು ವಿಜ್ಞಾನಿಗಳು ರಸಾಯನಶಾಸ್ತ್ರದ ನೊಬೆಲ್‌

ಅಮೆರಿಕದ ಇಬ್ಬರು ಹಾಗೂ ಜಪಾನಿನ ಒಬ್ಬರು ವಿಜ್ಞಾನಿ ದಶಕಗಳ ಅವಧಿಯಲ್ಲಿ ನಡೆಸಿದ ಲೀಥಿಯಂ ಬ್ಯಾಟರಿಗಳನ್ನು ಕುರಿತ ಸಂಶೋಧನೆಗೆ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಅಫ್‌ ಸೈನ್ಸಸ್‌ ರಸಾಯನಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಪ್ರಕಟಿಸಿದೆ. ಪೆಟ್ರೋಲಿಯಂ ಆಧರಿತ ಇಂಧನ ಅವಲಂಬನೆ ಕಡಿಮೆ ಮಾಡುವುದರಲ್ಲಿ ಇದು ಮಹತ್ವದ ಸಾಧನೆ

ನಾವು ಬಳಸುವ ಮೊಬೈಲ್‌, ನಾವು ಸಂಗೀತ ಕೇಳುವ ಐಪಾಡ್‌, ಯಾವುದೇ ಎಲೆಕ್ಟ್ರಾನಿಕ್‌ ಸಾಧನವಿರಲಿ, ಅವುಗಳು ಕೆಲಸ ಮಾಡುವುದು ಲೀಥಿಯಂ ಐಯಾನ್‌ ಬ್ಯಾಟರಿಗಳಿಂದಾಗಿ. ನಮ್ಮ ಸಂವಹನ, ಕೆಲಸ, ಅಧ್ಯಯನ, ಏನೇ ಇರಲಿ ಅವುಗಳ ಕಾರ್ಯಶೀಲತೆಯ ಹಿಂದೆ ಇರುವುದು ಈ ಬ್ಯಾಟರಿಯೇ.

ಸಣ್ಣ ಸಾಧನಗಳಿಂದ ಹಿಡಿದು ಇತ್ತೀಚಿನ ಎಲೆಕ್ಟ್ರಿಕ್‌ ಕಾರಿನ ವರೆಗೆ ಲೀಥಿಯಂ ಬ್ಯಾಟರಿಗಳು, ಇಂಧನ ಅಥವಾ ಸಾಂಪ್ರದಾಯಿಕ ಶಕ್ತಿ ಮೂಲಗಳಿಗೆ ಪರ್ಯಾಯ ಸ್ಥಾನ ಪಡೆದುಕೊಂಡಿದೆ. ಸೂರ್ಯನ ಬೆಳಕು, ಗಾಳಿಯಿಂದಲೂ ವಿದ್ಯುತ್‌ ಸೃಷ್ಟಿಸಿ, ಅವುಗಳ ಶಕ್ತಿ ಪಡೆದುಕೊಳ್ಳುವ ಈ ಬ್ಯಾಟರಿಗಳ ಸೃಷ್ಟಿಯ ಹಿಂದೆ ಮೂವರು ವಿಜ್ಞಾನಿಗಳ ಮಹತ್ವದ ಕೊಡುಗೆ ಇದೆ.

ಅಮೆರಿಕದ ಆಸ್ಟಿನ್‌ನ ಟೆಕ್ಸಾಸ್‌ ವಿಶ್ವವಿದ್ಯಾಲಯದ ಜಾನ್‌ ಬಿ ಗುಡ್‌ಎನಫ್‌, ನ್ಯೂಯಾರ್ಕ್‌ನ ಬಿಂಗ್‌ಹ್ಯಾಮ್ಟನ್‌ ವಿಶ್ವವಿದ್ಯಾಲಯದ ಸ್ಟ್ಯಾನ್ಲಿ ವಿಟ್ಟಿಂಗ್‌ಹ್ಯಾಮ್‌ ಮತ್ತು ಜಪಾನಿನ ಟೋಕಿಯೋದಲ್ಲಿ ಅಸಾಹಿ ಕಸೀ ಕಾರ್ಪೋರೇಷನ್‌ನ ಅಕಿರಾ ಯೋಶಿನೊ ಲೀಥಿಯಂ ಐಯಾನ್‌ ಬ್ಯಾಟರಿಗಳನ್ನು ರೂಪಿಸುವಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ.

ಸಾಂಪ್ರದಾಯಿಕ ಇಂಧನಗಳ ಅವಲಂಬನೆಯನ್ನು ಕಡಿತಗೊಳಿಸಿ, ಅತ್ಯಂತ ಶಕ್ತಿ ಶಾಲಿ ಬ್ಯಾಟರಿಗಳನ್ನು ರೂಪಿಸಿದ ಈ ಮೂವರು ವಿಜ್ಞಾನಿಗಳಿಗೆ ಬುಧವಾರ ಮಧ್ಯಾಹ್ನ ದಿ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಗೋರನ್‌ ಕೆ ಹ್ಯಾನ್ಸನ್‌ ಪ್ರಶಸ್ತಿ ಪ್ರಕಟಿಸಿದರು.

ಎಪ್ಪತ್ತರ ದಶಕದಲ್ಲಿ ತೀವ್ರತರವಾದ ತೈಲದ ದುಸ್ಥಿತಿ ಇದ್ದಾಗ ಲೀಥಿಯಂ ಐಯಾನ್‌ ಬ್ಯಾಟರಿಗಳ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತ. ಸ್ಟ್ಯಾನ್ಲಿ ವಿಟ್ಟಿಂಗ್‌ಹ್ಯಾಮ್‌, ಸಾಂಪ್ರದಾಯಿಕ ಇಂಧನ ಮುಕ್ತವಾದ ಶಕ್ತಿ ತಂತ್ರಜ್ಞಾನ ರೂಪಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸಿದರು. ಸೂಪರ್‌ ಕಂಡಕ್ಟರ್‌ ಮತ್ತು ಅತಿಯಾದ ಶಕ್ತಿಯನ್ನು ಹಿಡಿದಿಡಬಲ್ಲ ಪದಾರ್ಥವನ್ನು ಕಂಡುಕೊಂಡರು. ಇದು ಲೀಥಿಯಂ ಬ್ಯಾಟರಿಗಳಲ್ಲಿ ಬಳಸುವ ವಿನೂತನ ಕ್ಯಾಥೋಡ್‌ ಸೃಷ್ಟಿಸಲು ಬಳಸಲಾಯಿತು. ಈ ಕ್ಯಾಥೋಡ್‌ ಅನ್ನು ಟಿಟಾನಿಯಂ ಡೈಸಲ್ಫೈಡ್‌ ಬಳಸಿ ತಯಾರಿಸಲಾಯಿತು.

ಈ ಬೆಳವಣಿಗೆ ಇನ್ನಷ್ಟು ಶಕ್ತಿ ತುಂಬಿ ಹೊಸ ತಿರುವು ನೀಡಿದವರು ಜಾನ್‌ ಗುಡ್‌ಎನಫ್‌. ಸ್ಟ್ಯಾನ್ಲಿ ಅವರು ರೂಪಿಸಿದ ಕ್ಯಾಥೋಡ್‌ನಲ್ಲಿ ಮೆಟಲ್‌ ಸಲ್ಫೈಡ್‌ ಬದಲು ಮೆಟಲ್‌ ಆಕ್ಸೈಡ್‌ ಬಳಸಿದ ಹೆಚ್ಚು ಶಕ್ತಿ ಶಾಲಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಎಂಬತ್ತರ ದಶಕದಲ್ಲಿ ಸುದೀರ್ಘ ಸಂಶೋಧನೆಯ ಬಳಿಕ ಕೋಬಾಲ್ಟ್‌ ಆಕ್ಸೈಡ್‌ ಬಳಸಿ ನಾಲ್ಕು ವೋಲ್ಟ್‌ಗಳ ಲೀಥಿಯಂ ಐಯಾನ್‌ ಬ್ಯಾಟರಿ ರೂಪಿಸಿದರು. ಇದೊಂದು ಮಹತ್ವದ ಬೆಳವಣಿಗೆಯಾಗಿತ್ತು.

ಇದನ್ನೂ ಓದಿ | ಸೌರವ್ಯೂಹಾದಚೆಗಿನ ಗ್ರಹಗಳ ಪತ್ತೆ, ವಿಶ್ವದ ವಿಕಾಸದ ಹಾದಿ ಗುರುತಿಸಿದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್‌

ಇವರಿಬ್ಬರ ಸಂಶೋಧನೆಯನ್ನು ಆಧರಿಸಿ ಅಕಿರಾ ಯೋಶಿನೋ ವಾಣಿಜ್ಯ ಸ್ವರೂಪದ ಲೀಥಿಯಂ ಐಯಾನ್‌ ಬ್ಯಾಟರಿಯನ್ನು 1985ರಲ್ಲಿ ಪರಿಚಯಿಸಿದರು. ಹಗುರವಾದ, ಹಲವು ಬಾರಿ ಚಾರ್ಜ್‌ ಮಾಡಬಹುದಾದ, ಹೆಚ್ಚು ಶಕ್ತಿಶಾಲಿಯಾದ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದರು.

ಇಂದು ವ್ಯಾಪಕವಾಗಿ ಬಳಕೆಯಾಗುತ್ತಿರುವ ಲೀಥಿಯಂ ಐಯಾನ್‌ ಬ್ಯಾಟರಿ ಇಡೀ ಸಮಾಜದಲ್ಲಿ ಭಾರಿ ಪ್ರಭಾವ ಬೀರಿದೆ. ನಮ್ಮೆಲ್ಲರ ಯಾಂತ್ರಿಕ ಬದುಕಿನ ಅವಲಂಬನೆಯನ್ನು ಸಮರ್ಥವಾಗಿ ನಿರ್ವಹಿಸಲು ಈ ಬ್ಯಾಟರಿಗಳ ಪಾತ್ರ ಅಗಾಧವಾದದ್ದು. ಎಲೆಕ್ಟ್ರಿಕ್‌ ಕಾರುಗಳತ್ತ ಇಡೀ ಜಗತ್ತು ಆಸಕ್ತಿ ತೋರುತ್ತಿರುವ ಈ ಹೊತ್ತಿನಲ್ಲಿ ಈ ಮೂವರ ಸಾಧನೆ ಗುರುತಿಸುತ್ತಿರುವುದು ಮಹತ್ವದ ಬೆಳವಣಿಗೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.