ಸೌರವ್ಯೂಹಾದಚೆಗಿನ ಗ್ರಹಗಳ ಪತ್ತೆ, ವಿಶ್ವದ ವಿಕಾಸದ ಹಾದಿ ಗುರುತಿಸಿದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್‌

ರಾಯಲ್ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ ಮಂಗಳವಾರ ಮಧ್ಯಾಹ್ನ (ಭಾರತೀಯ ಕಾಲಮಾನ) ಭೌತಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಪ್ರಕಟಿಸಿತು. ಕೆನಡಾ ಹಾಗೂ ಸ್ವಿಟ್ಜರ್‌ಲೆಂಡಿನ ಇಬ್ಬರು ವಿಜ್ಞಾನಿಗಳು ಈ ವರ್ಷದ ಭೌತಶಾಸ್ತ್ರ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ

ಬ್ರಹ್ಮಾಂಡ ರಚನೆ, ವಿಕಾಸ ಮತ್ತು ಅದರ ಇತಿಹಾಸ ಕುರಿತು ಅಧ್ಯಯನ ಹಾಗೂ ಬ್ರಹ್ಮಾಂಡದಲ್ಲಿ ಭೂಮಿಯ ಸ್ಥಾನವನ್ನು ಅರಿಯುವ ನಿಟ್ಟಿನಲ್ಲಿ ನಡೆದ ಸಂಶೋಧನೆಗೆ ಈ ಬಾರಿಯ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿ ಲಭಿಸಿದೆ.

ಕೆನಡಾದ ಜೇಮ್ಸ್‌ ಪೀಬಲ್ಸ್‌, ಎರಡು ದಶಕಗಳ ಅವಧಿಯಲ್ಲಿ ತಾವೇ ರೂಪಿಸಿದ ಸೈದ್ಧಾಂತಿಕ ಚೌಕಟ್ಟಿನಲ್ಲಿ ಕೋಟ್ಯಂತರ ಗೆಲಾಕ್ಸಿಗಳು, ಗೆಲಾಕ್ಸಿಗಳ ಗುಚ್ಚಗಳನ್ನು ಅವುಗಳ ರಚನೆ, ಇತಿಹಾಸ, ಮಹಾಸ್ಫೋಟದಿಂದ ಇಲ್ಲಿಯವರೆಗಿನ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಬ್ರಹ್ಮಾಂಡದಲ್ಲಿ ಶೇ. 95ರಷ್ಟು ನಿಗೂಢವಾಗಿಯೇ ಉಳಿದಿದ್ದು, ಆಧುನಿಕ ಭೌತಶಾಸ್ತ್ರಕ್ಕೆ ಸವಾಲು ಎಂದೇ ಭಾವಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಅಸ್ತಿತ್ವದ ಮಹಾಪ್ರಶ್ನೆಯ ಸುತ್ತ ಮಹತ್ವದ ಸಂಗತಿಗಳನ್ನು ಕಂಡುಕೊಂಡ ಶ್ರೇಯ ಪೀಬಲ್ಸ್‌ ಅವರದ್ದು.

ಇವರ ಸಂಶೋಧನೆಗೆ ಪೂರಕವಾಗಿ ಸ್ವಿಟ್ಜರ್‌ಲೆಂಡಿನ ಇಬ್ಬರು ವಿಜ್ಞಾನಿಗಳಾದ ಮೈಕೆಲ್‌ ಮೇಯರ್‌ ಮತ್ತು ಡಿಡಿಯರ್ ಕ್ವೆಲಾಜ್‌ ನಮ್ಮ ಕ್ಷೀರಪಥ ಗೆಲಾಕ್ಸಿಯನ್ನು ಅಧ್ಯಯನ ಮಾಡುವುದರ ಜೊತೆಗೆ 1995ರಲ್ಲಿ ನಮ್ಮ ಸೌರ ಮಂಡಲಾದಾಚೆಗೆ ಇರುವ ಗ್ರಹವೊಂದನ್ನು ಗುರುತಿಸಿದರು. ಅದೂ ಸೂರ್ಯನಂತೆಯೇ ಇರುವ ನಕ್ಷತ್ರದ ಸುತ್ತ ಪ್ರದಕ್ಷಿಣೆ ಹಾಕುತ್ತಿರುವುದಾಗಿ ತಿಳಿಸಿದರು. ಇವರ ಈ ಸಂಶೋಧನೆ ಖಗೋಳವಿಜ್ಞಾನದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದ್ದು, ಸೌರವ್ಯೂಹದಾಚೆಗೆ ಅಪರಿಚಿತ ವಿಶ್ವವೊಂದಿರುವ ನಮ್ಮ ಕಲ್ಪನೆಗಳಿಗೆ ಹೊಸ ತಿರುವು ನೀಡಿತು.

ಈ ಮಹತ್ವದ ಸಂಶೋಧನೆಗಳನ್ನು ಗುರುತಿಸಿ ರಾಯಲ್‌ ಸ್ವೀಡಿಷ್‌ ಆಕಾಡೆಮಿ ಸೈನ್ಸಸ್‌ ಇಂದು ಭೌತಶಾಸ್ತ್ರ ನೊಬೆಲ್‌ ಪುರಸ್ಕಾರಕ್ಕೆ ಈ ಮೂವರು ವಿಜ್ಞಾನಿಗಳ ಕೊಡುಗೆಯನ್ನು ಪರಿಗಣಿಸಿದೆ.

ಟೆಕ್‌ಕನ್ನಡ ” ಇಂದು ಭೌತವಿಜ್ಞಾನಕ್ಕೆ ನೊಬೆಲ್‌ ಪ್ರಕಟ ; ಈ ಸಂಶೋಧನೆಗಳು ಸ್ಪರ್ಧೆಯಲ್ಲಿವೆ’‘ ಶೀರ್ಷಿಕೆಯಡಿ ಪ್ರಕಟಿಸಿದ ಲೇಖನದಲ್ಲಿ ಪ್ರಶಸ್ತಿಯ ಸ್ಪರ್ಧೆಯಲ್ಲಿರುವ ಸಂಶೋಧನೆಗಳಲ್ಲಿ ಸೌರವ್ಯೂದಾಚೆಗೆ ಪತ್ತೆಯಾದ ಗ್ರಹಗಳನ್ನು ಕುರಿತು ಪ್ರಸ್ತಾಪಿಸಿತ್ತು.

ತೊಂಬತ್ತರ ದಶಕದವರೆಗೆ ನಾವೆಲ್ಲರೂ ಭಾವಿಸಿದ್ದು ಎಂಟೊ ಒಂಬತ್ತು ಗ್ರಹಗಳು- ಪ್ಲೂಟೋವನ್ನೂ ಸೇರಿಸಿಕೊಂಡು – ಇವೆ ಎಂದು. ಆದರೆ ಅಲ್ಲಿಂದೀಚೆಗೆ ವಿಜ್ಞಾನಗಳು ಸೌರಮಂಡಲದಾಚೆಗೂ ಇರುವ 4,000 ಗ್ರಹಗಳನ್ನು ಪತ್ತೆ ಮಾಡಿದ್ದಾರೆ. ಹಾಗಾಗಿ ನಮ್ಮ ಸೌರವ್ಯೂಹವೇ ಅನನ್ಯವಾದದ್ದು ಎಂದು ನಂಬಿದ್ದ ನಮಗೆ, ನಮ್ಮ ಕಲ್ಪನೆಗೂ ನಿಲುಕದ ಸಂಗತಿಗಳು ಬಹಳಷ್ಟಿವೆ ಎಂಬುದು ವೇದ್ಯವಾಯಿತು. ಈ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಿದ ಮೊದಲಿಗರು ಅಲೆಕ್ಸಾಂಡರ್‌ ವೋಲ್ಸಜಾನ್‌. 1992ರಲ್ಲಿ ಮೊದಲ ಬಾರಿಗೆ ಸೌರವ್ಯೂಹದಾಚೆಗೆ ಎರಡು ಗ್ರಹಗಳನ್ನು ಗುರುತಿಸಿದರು. ಅವುಗಳಿಗೆ ಪೋಲ್ಟರ್‌ಜಿಸ್ಟ್‌ ಮತ್ತು ಫೋಬೆಟರ್‌ ಎಂದು ಹೆಸರಿದರು. ಭೂಮಿಯಿಂದ 2300 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನ್ಯೂಟ್ರನ್‌ ನಕ್ಷತ್ರದ ಸುತ್ತ ಸುತ್ತುತ್ತಿವೆ. ನಂತರದಲ್ಲಿ 1995ರಲ್ಲಿ ಮೈಕೆಲ್‌ಮೇಯರ್‌ ಮತ್ತು ಡೈಡಿಯರ್‌ ಕ್ವೆಲೊಜ್‌ ಕೇವಲ 50 ಜ್ಯೋತಿರ್ವರ್ಷ ದೂರದಲ್ಲಿ ಸೂರ್ಯನಂತಿರುವ ನಕ್ಷತ್ರದ ಸುತ್ತ ಸುತ್ತುವ ಗ್ರಹಗಳನ್ನು ಗುರುತಿಸಿದರು. ಇವರು ಈ ಗ್ರಹಗಳನ್ನು ಗುರುತಿಸುವುದಕ್ಕೆ ಅನನ್ಯವಾದ ವಿಧಾನವನ್ನು ಅನುರಿಸಿದ್ದರು.
ಇವುಗಳ ಜೊತೆಗೆ ಈ ವರ್ಷದ ಆರಂಭದಲ್ಲಿ ಕಪ್ಪು ಹುಳಿಯ ಚಿತ್ರವೊಂದು ವೈರಲ್‌ ಆಗಿತ್ತು. ಏಪ್ರಿಲ್‌ನಲ್ಲಿ ಅಧಿಕೃತವಾಗಿ ಪ್ರಕಟಣೆ ನೀಡಿದ ಈವೆಂಟ್‌ ಹಾರಿಜನ್‌ ಟೆಲಿಸ್ಕೋಪ್‌ ಕೊಲಬೊರೇಷನ್‌, ಕಪ್ಪುಕುಳಿಯೊಂದರ ಚಿತ್ರವನ್ನು ಸೆರೆಹಿಡಿದುದಾಗಿ ತಿಳಿಸಿತು. ಇವು ಅತಿ ಮಹತ್ವದ ಸಂಶೋಧನೆಗಳಾಗಿ ಚರ್ಚೆಯಲ್ಲಿವೆ.

ಇದನ್ನೂ ಓದಿ : ಇಂದು ಭೌತವಿಜ್ಞಾನಕ್ಕೆ ನೊಬೆಲ್‌ ಪ್ರಕಟ ; ಈ ಸಂಶೋಧನೆಗಳು ಸ್ಪರ್ಧಿಯಲ್ಲಿವೆ

%d bloggers like this: