ವಾಹನ ಮರು ನೋಂದಣಿ ದುಬಾರಿ ಆಗಲಿದೆ, ಗುಜರಿಗೆ ಹಾಕಿದರೆ ಹೊಸ ಕಾರಿಗೆ ರಿಯಾಯಿತಿ ಸಿಗಲಿದೆ!

ಇದೇ ತಿಂಗಳು ಕೇಂದ್ರ ಸರ್ಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಪ್ರಕಟಿಸುತ್ತಿರುವ ಹೊಸ ವಾಹನ “ಸ್ಕ್ರ್ಯಾಪೇಜ್ ಪಾಲಿಸಿ”ಯಲ್ಲಿ ಹಳೆಯ ವಾಹನಗಳನ್ನು ರಸ್ತೆಯಿಂದ ಹೊರಗಿಡಲು ಹಲವಾರು ನಿಯಮಗಳನ್ನು ಜಾರಿಗೆ ತರಲು ಉದ್ದೇಶಿಸಿದೆ ಎನ್ನಲಾಗಿದೆ

15 ವರ್ಷಕ್ಕಿಂತ ಹಳೆಯ ವಾಹನ ಮರು ನೋಂದಣಿ‌ ಶುಲ್ಕ ₹600 ರಿಂದ ₹15,000ಕ್ಕೆ ಏರಲಿದೆಯಂತೆ! ಅದರ ಬದಲು ಗುಜರಿಗೆ ಹಾಕಿದರೆ ಹೆಚ್ಚು ಲಾಭ ಎಂದುಕೊಳ್ಳುತ್ತಿದ್ದೀರಾ? ಹಾಗೇನಾದರೂ ಗುಜರಿಗೆ ಹಾಕಿದರೆ ಕೊಳ್ಳುವ ಹೊಸ ಕಾರಿಗೆ ನೋಂದಣಿ ಶುಲ್ಕದಲ್ಲಿ‌‌ ವಿನಾಯಿತಿ ಸಿಗಲಿದೆ!

ಇದೇ ತಿಂಗಳು ಕೇಂದ್ರ ಸರ್ಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಪ್ರಕಟಿಸುತ್ತಿರುವ ಹೊಸ ವಾಹನ “ಸ್ಕ್ರ್ಯಾಪೇಜ್ ಪಾಲಿಸಿ”ಯಲ್ಲಿ ಹಳೆಯ ವಾಹನಗಳನ್ನು ರಸ್ತೆಯಿಂದ ಹೊರಗಿಡಲು ಹಲವಾರು ನಿಯಮಗಳನ್ನು ಜಾರಿಗೆ ತರಲು ಉದ್ದೇಶಿಸಿದೆ ಎನ್ನಲಾಗಿದೆ. ಅದರಂತೆ 15 ವರ್ಷಕ್ಕಿಂತ ಹಳೆಯ ವಾಹನ ಮರು ನೋಂದಣಿ ಶುಲ್ಕ ಏರಿಕೆ, ವಾಹನ ಗುಜರಿಗೆ ಹಾಕಲು ಸೂಕ್ತ ನಿಯಮಾವಳಿ ಹಾಗೂ ಡೀ ರಿಜಿಸ್ಟ್ರೇಶನ್‌ ಮಾಡಿದವರಿಗೆ ಹೊಸ ಖರೀದಿಯಲ್ಲಿ ರಿಯಾಯಿತಿ ನೀಡುವ ಪ್ರಸ್ತಾಪವಿದೆ.

ಅಧಿಕೃತ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 20 ಕೋಟಿಗೂ ಅಧಿಕ ವಾಹನಗಳಿವೆ. ಸರಕಾರದ ಅಧ್ಯಯನದ ಪ್ರಕಾರ ವಾಹನಗಳಿಂದಾಗುವ 65-70% ಮಾಲಿನ್ಯ ಕೇವಲ ವಾಣಿಜ್ಯ ವಾಹನಗಳಿಂದ ಆಗುತ್ತಿವೆ. ಆ ಪೈಕಿ 15% ಮಾಲಿನ್ಯ 2000‌ ಇಸವಿಗಿಂತ ಹಿಂದೆ ತಯಾರಾದ ವಾಹನಗಳಿಂದ ಆಗುತ್ತಿದೆ. ಇಂಥ ವಾಹನಗಳ ಸಂಖ್ಯೆ ಒಟ್ಟು ವಾಣಿಜ್ಯ ವಾಹನಗಳ ಪೈಕಿ ಕೇವಲ 1% ಇದ್ದಾಗ್ಯೂ ಮಾಲಿನ್ಯದ ಪ್ರಮಾಣ ಗಣನೀಯ.

ಈ ಕಾರಣದಿಂದ ಹಳೆಯ ವಾಹನಗಳ ಮೇಲೆ ಬಹುತೇಕ ನಿಷೇಧ ಹೇರುವುದು ಸರ್ಕಾರದ ಉದ್ದೇಶವಾದ ಕಾರಣ ಮರು ನೋಂದಣಿ ಶುಲ್ಕದಲ್ಲಿ ಗಣನೀಯ ಏರಿಕೆ ಮಾಡಲಾಗುತ್ತದೆ. ಪ್ರಸ್ತಾಪಿತ ಏರಿಕೆ ವಿವರ ಇಂತಿದೆ.

ಖಾಸಗಿ ಕಾರುಗಳು

  • ಹಾಲಿ ₹600
  • ಪ್ರಸ್ತಾಪಿತ ₹15,000

ಲಘು ವಾಣಿಜ್ಯ ವಾಹನ:

  • ಹಾಲಿ ₹1,000
  • ಪ್ರಸ್ತಾಪಿತ ₹20,000

ಭಾರಿ ಸರಕು ಸಾಗಣಿಕೆ ವಾಹನ

  • ಹಾಲಿ ₹1,500
  • ಪ್ರಸ್ತಾಪಿತ ₹40,000

ಗುಜರಿ ಸೇರಿಸುವುದು ಹೇಗೆ?

ವಾಹನಗಳನ್ನು ಅಧಿಕೃತವಾಗಿ ಗುಜರಿ ಸೇರಿಸಬೇಕಿದ್ದರೆ ನೋಂದಾಯಿತ ಗುಜರಿ ಕೇಂದ್ರಕ್ಕೆ ಮಾತ್ರವೇ ನೀಡಬೇಕು. ಪರಿಸರಕ್ಕೆ ಹಾನಿಯಾಗದಂತೆ ಸೂಕ್ತ ಸ್ಥಳದಲ್ಲಿ ಸರಿಯಾದ ವಿನ್ಯಾಸದೊಂದಿಗೆ ಸೂಕ್ತ ರೀತಿಯಲ್ಲಿ ನಿರ್ವಹಣೆಯನ್ನು ಖಾತರಿಪಡಿಸಲು ನೋಂದಣಿಗೆ ನಿಯಮಾವಳು ಇರಲಿವೆ. 

ಈ ಅಧಿಕೃತ ಗುಜರಿ ಕೇಂದ್ರದಿಂದ ನೀಡಲಾದ ಪ್ರಮಾಣ ಪತ್ರದ ಆಧಾರದಲ್ಲಿ ಸಾರಿಗೆ ಇಲಾಖೆಯಿಂದ ವಾಹನವನ್ನು ಡೀ ರೀಜಿಸ್ಟ್ರೇಶನ್ ಮಾಡಿಸಬೇಕು. 

ಡೀ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಉಳ್ಳವರಿಗೆ ಅದೇ ಶ್ರೇಣಿಯ ಹೊಸ ವಾಹನ ಖರೀದಿ ವೇಳೆಯಲ್ಲಿ ನೋಂದಣಿ‌ ಶುಲ್ಕದಿಂದ ಪೂರ್ಣ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ. 

2008ರ ಆರ್ಥಿಕ ಕುಸಿತದ ವೇಳೆ ಐರೋಪ್ಯ ರಾಷ್ಟ್ರಗಳಲ್ಲಿ ಹಳೆಯ ವಾಹನಗಳ ಸ್ಕ್ರ್ಯಾಪೇಜ್ ಪಾಲಿಸಿ ಜಾರಿಗೆ ತರಲಾಗಿತ್ತು, ಅದರ ಅನುಸಾರ ಹೊಸ ವಾಹನ ಖರೀದಿಗೆ ಹಲವು ಶುಲ್ಕ ವಿನಿಯಿತಿಗಳನ್ನು ನೀಡಲಾದ ಕಾರಣ ಇಳಿಮುಖವಾಗಿದ್ದ ವಾಹನ ಮಾರಾಟವೂ ಚೇತರಿಕೊಂಡಿತ್ತು.