ಪದ್ಮಭೂಷಣ ಪುರಸ್ಕೃತ, ಏರೋಸ್ಪೇಸ್‌ ವಿಜ್ಞಾನಿ ರೊದ್ದಂ ನರಸಿಂಹ ಇನ್ನಿಲ್ಲ

ಭಾರತೀಯ ವೈಮಾನಿಕ ವಿಜ್ಞಾನಿ ಮತ್ತು ದ್ರವಚಲನ ಶಾಸ್ತ್ರಜ್ಞರಾಗಿ ಅಪೂರ್ವ ಸಾಧನೆ ಮಾಡಿದ ರೊದ್ದಂ ನರಸಿಂಹ ಇನ್ನಿಲ್ಲ.

ಮಿದುಳಿನ ರಕ್ತ ಸ್ರಾವದಿಂದ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ರಾತ್ರಿ 9.30ರ ವೇಳೆಗೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಐದು ದಶಕಗಳ ಕಾಲ ವಿಜ್ಞಾನ ಸಂಸ್ಥೆಗಳು ಮಹತ್ವದ ಸಂಶೋಧನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ರೊದ್ದ ನರಸಿಂಹ ಸ್ವಾಮಿ, ಜನಿಸಿದ್ದು 1933ರ ಜುಲೈ 20ರಂದು ಬೆಂಗಳೂರಿನಲ್ಲಿ.

ಹೆಸರಾಂತ ವಿಜ್ಞಾನ ಲೇಖಕರಾಗಿದ್ದ ಆರ್‌. ಎಲ್‌. ನರಸಿಂಹಯ್ಯ ಪುತ್ರರಾದ ರೊದ್ದಂ ನರಸಿಂಹ, ತಂದೆಯಿಂದ ತೀವ್ರವಾಗ ಪ್ರಭಾವಿತರಾಗಿ ವಿಜ್ಞಾನದ ಹಾದಿ ಹಿಡಿದರು.

1953 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.1955 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. . 1962 ರಿಂದ 1999 ರವರೆಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸಿದರು.

1984 ರಿಂದ 1993 ರವರೆಗೆ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಎನ್‌ಎಎಲ್‌)ದ ನಿರ್ದೇಶಕರಾಗಿದ್ದರು. 2000 ರಿಂದ 2014 ರವರೆಗೆ ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ನ ಎಂಜಿನಿಯರಿಂಗ್‌ ಮೆಕ್ಯಾನಿಕ್ಸ್‌ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ರಾಜೀವ್‌ಗಾಂಧಿ ಪ್ರಧಾನ ಮಂತ್ರಿ ಆಗಿದ್ದಾಗ ಅವರ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು. 1992–1994ರವರೆಗೆ ಇಂಡಿಯನ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಅಧ್ಯಕ್ಷರಾಗಿದ್ದರು. ಇಸ್ರೊ ಮತ್ತು ನಿಯಾಸ್‌ನಲ್ಲೂ ಸೇವೆ ಸಲ್ಲಿಸಿದ್ದರು.

ತಮ್ಮ ಸುದೀರ್ಘ ಅಧ್ಯಯನ ಮತ್ತು ಬೋಧನ ಅವಧಿಯಲ್ಲಿ 200 ಕ್ಕೂ ಹೆಚ್ಚು ಸಂಶೋಧನೆಗಳನ್ನು ಮತ್ತು 15 ಕೃತಿಗಳನ್ನು ಪ್ರಕಟಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್ ನ ಪ್ರಾಧ್ಯಾಪಕರೂ, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ (NAL) ನಿರ್ದೇಶಕರೂ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್(ನಿಯಾಸ್) ನ ನಿರ್ದೇಶಕರೂ ಮತ್ತು ಮುಂದುವರೆದ ವೈಜ್ಞಾನಿಕ ಸಂಶೋಧನೆಗಾಗಿ ಬೆಂಗಳೂರಿನಲ್ಲಿ ಇರುವ ಜವಾಹರಲಾಲ್ ನೆಹರು ಕೇಂದ್ರದ (JNCASR) ಇಂಜಿನಿಯರಿಂಗ್ ಮೆಕ್ಯಾನಿಕ್ಸ್ ಘಟಕದ ಅಧ್ಯಕ್ಷರೂ ಆಗಿದ್ದರು.ಹೈದರಾಬಾದ್ ವಿಶ್ವವಿದ್ಯಾಲಯ ದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪ್ರಾಟ್ & ವಿಟ್ನೆ ಪೀಠಾಧ್ಯಕ್ಷರೂ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.

ರಾಯಲ್‌ ಸೊಸೈಟಿಯ ಸದಸ್ಯರಾಗಿದ್ದರು. ಅಮೆರಿಕದ ಎರಡು ಪ್ರತಿಷ್ಠಿತ ಸಂಸ್ಥೆಗಳಾದ ನ್ಯಾಷನಲ್‌ ಅಕಾಡೆಮಿ ಆಫ್‌ ಇಂಜಿನಿಯರಿಂಗ್‌ ಮತ್ತು ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅಮೆರಿಕದ ಅಕಾಡೆಮಿ ಆಫ್‌ ಆಟ್ಸ್‌ ಅಂಡ್‌ ಸೈನ್ಸಸ್‌ ಮತ್ತು ಅಮೆರಿಕದ ಇನ್‌ಸ್ಟಿಟ್ಯೂಟ್‌ ಆಫ್‌ ಏರೊನಾಟಿಕ್ಸ್‌ ಅಂಡ್‌ ಆಸ್ಟ್ರೊನಾಟಿಕ್ಸ್‌ನ ಗೌರವ ಸದಸ್ಯರಾಗಿದ್ದರು.

ಭಾರತ ಸರ್ಕಾರದ ಪದ್ಮಭೂಷಣ, ಪದ್ಮವಿಭೂಷಣ ಸೇರಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರು ಪತ್ನಿ ನೀಲಿಮಾ ಮತ್ತು ಪುತ್ರಿ ಮೈತ್ರೇಯಿ ಅವರನ್ನು ಅಗಲಿದ್ದಾರೆ.

ರೊದ್ದಂ ಅವರನ್ನು ಜೀವನ ಸಾಧನೆ ಕುರಿತ ಸಾಕ್ಷ್ಯಚಿತ್ರ- ವಾರ್ತಾ ಇಲಾಖೆ ನಿರ್ಮಾಣ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.