ಕನ್ನಡ ಲೋಕಕ್ಕೆ ಸಿರಿ ತಂದ ಶಿವರಾಮ ಕಾರಂತರ ವಿಜ್ಞಾನ ಪ್ರೀತಿ | ಭಾಗ 1

ಅಕ್ಟೋಬರ್‌ 10 ಶಿವರಾಮಕಾರಂತರ ಜನ್ಮದಿನ. ಹತ್ತು ಹಲವು ಆಸಕ್ತಿಗಳಲ್ಲಿ ತೊಡಗಿಸಿಕೊಂಡಿದ್ದ ಕಾರಂತರ ಜೀವನ ಅಗಾಧವಾದದ್ದು. ಅವರ ಸಾಹಿತ್ಯ ಕೊಡುಗೆ ಎಷ್ಟು ದೊಡ್ಡದೊ, ವಿಜ್ಞಾನ ಸಾಹಿತ್ಯಕ್ಕೂ ಅಷ್ಟೇ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅತೀವ ಕುತೂಹಲ ಗುಣದ ಕಾರಂತರ ವಿಜ್ಞಾನದೊಂದಿಗೆ ಒಡನಾಟ, ವಿಜ್ಞಾನ ಸಾಹಿತ್ಯ ಕೃಷಿಯ ಕುರಿತು ವಿವರಗಳನ್ನು ಅವರ ಜನ್ಮದಿನ ನೆಪದಲ್ಲಿ ಇಲ್ಲಿ ನೀಡುತ್ತಿದ್ದೇವೆ. ಈ ಲೇಖನ ಎರಡು ಕಂತುಗಳಲ್ಲಿ ಪ್ರಕಟವಾಗುತ್ತಿದೆ

  • ಎ ಪಿ ರಾಧಾಕೃಷ್ಣ, ಭೌತಶಾಸ್ತ್ರ ಅಧ್ಯಾಪಕರು

ಶಿವರಾಮಕಾರಂತರು ಕನ್ನಡದ ಶ್ರೇಷ್ಠ ಕಾದಂಬರಿಕಾರರಾಗಿ ಸುಪ್ರಸಿದ್ದರು. ಆದರೆ ಆಶ್ಚರ್ಯವಾಗಬಹುದು – ಅವರ ಪ್ರಥಮ ಆಸಕ್ತಿ ಇದ್ದುದು – ವೈಚಾರಿಕ ಬರಹಗಳಲ್ಲಿ – ಅದರಲ್ಲೂ ವಿಜ್ಞಾನ ಸಾಹಿತ್ಯದಲ್ಲಿ.

ನಮ್ಮ ಹೆಚ್ಚಿನವರಂತೆ ಕಾಲೇಜು ಮೆಟ್ಟಲೇರಿ, ವಿಶ್ವವಿದ್ಯಾಲಯದ ಅಂಗಣದಲ್ಲಿ ವಿಜ್ಞಾನದ “ಕ್ರಮಬದ್ಧ ಶಿಕ್ಷಣ” ಪಡೆಯದೇ ಹೋದರೂ ಬೆರಗಾಗುವಷ್ಟು ವಿಪುಲವಾಗಿ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ರಚಿಸಿದವರು ಅವರು. ಮೂರು ಸಂಪುಟಗಳ “ಬಾಲಪ್ರಪಂಚ” (1936) ಮತ್ತು ನಾಲ್ಕು ಸಂಪುಟಗಳ “ವಿಜ್ಞಾನ ಪ್ರಪಂಚ” (1959) ವಿಜ್ಞಾನದ ಬಗ್ಗೆ ಕಾರಂತರಿಗೆ ಎಂಥ ತೀವ್ರ ಆಸ್ಥೆ ಇತ್ತೆನ್ನುವುದಕ್ಕೆ ಸಾಕ್ಷಿಯಾಗಿವೆ. ಸುಮಾರು ಮೂರು ಸಾವಿರ ಪುಟಗಳಿಗೆ ವಿಸ್ತರಿಸಿಕೊಂಡಿರುವ ಈ ಸಂಪುಟಗಳು ಒಂದು ವಿಶ್ವವಿದ್ಯಾಲಯದ ಹಲವು ಪ್ರಾದ್ಯಾಪಕ ಮಹೋದಯರು ಸೇರಿ ಮಾಡಬಹುದಾದ ಮಹೋನ್ನತ ಕಾರ್ಯ. ಆದರೆ ಶಿವರಾಮ ಕಾರಂತರು ಇವೆಲ್ಲವನ್ನು ಏಕಾಂಗಿಯಾಗಿ ಮಾಡಿದರು. ಇವಷ್ಟೇ ಅಲ್ಲ, ಮತ್ತೂ ಹಲವು ವಿಜ್ಞಾನ ಪುಸ್ತಕ ಮತ್ತು ಲೇಖನಗಳನ್ನು ಬರೆದರು.

“ಬದುಕು ಮತ್ತು ನಾನು” ಎಂಬ ಲೇಖನದಲ್ಲಿ ಕಾರಂತರು ಹೀಗೆ ಬರೆಯುತ್ತಾರೆ : “ವ್ಯಕ್ತಿ ತಾನು ಹುಟ್ಟಿದ ಬಳಿಕ ಜೀವಿಸುತ್ತಿರುವ ಪರಿಸರದಲ್ಲಿ ಬೆಳೆಯುತ್ತಿರುತ್ತಾನೆ. ಹಾಗೆಂದರೆ, ಅವನ ದೇಹ ಬಲಿಯುವುದಿಲ್ಲ, ಬುದ್ದಿಯೂ ಬಲಿಯುತ್ತದೆ. ಅದು ಯಾವ ರೀತಿಯಿಂದ ಬಲಿಯುತ್ತದೆ? ಆ ಬಲಿಯುವಿಕೆಗೆ ಏನೆಲ್ಲ ಪೋಷಕವಾಗುತ್ತದೆ – ಎಂಬುದನ್ನು ನಾವು ಯೋಚಿಸಿದೆವಾದರೆ, ನಮ್ಮ ಬದುಕೇ ಒಂದು ಅತ್ಯದ್ಭುತ ವಿದ್ಯಮಾನವಾಗಿ, ನಮ್ಮ ಕಣ್ಣಿಗೆ ಗೋಚರಿಸೀತು. ಅದರ ಅದ್ಭುತ ರಮಣೀಯತೆ ಇಲ್ಲವೇ, ಅದ್ಭುತ ಗಂಭೀರ ರೂಪವನ್ನು ಕುರಿತು ತಿಳಿಯಬೇಕಾದರೆ ನಾವು ಅದನ್ನು ಕುರಿತು ಈಗಾಗಲೇ ಕಟ್ಟಿಕೊಂಡು ಬಂದ, ಎಂದರೆ ಕಣ್ಮುಚ್ಚಿ ನಂಬಿಕೊಂಡು ಬಂದ ತೀರ್ಮಾನಗಳನ್ನು ಮರೆತು ನೋಡಬೇಕು – ಆಗ ಮಾತ್ರ, ಅದರ ರಹಸ್ಯ ಹೊಳೆದೀತು. ಹೀಗೇಕೆ ಅನ್ನುತ್ತೇನೆ ಎಂದರೆ ಬದುಕನ್ನು ಕುರಿತು ನಮ್ಮ ಸಮಾಜದಲ್ಲಿ ಪರಂಪರೆಯಿಂದ ನಾವು ನಂಬಿ ಬಂದ ಕೆಲವೊಂದು ಭಾವನೆಗಳಿಂದಾಗಿ ಬದುಕಿನ ನಿರ್ದಿಷ್ಟ ವಿಮರ್ಶೆಗೆ ತೊಡಕು ಬರುತ್ತದೆ ಎಂಬುದರಿಂದ. ” ಮನುಷ್ಯ ಹುಟ್ಟಿದ್ದೇ ಇದಕ್ಕೆ , ಇಂಥದೇ ತಾವಿನಲ್ಲಿ; ಇಂಥ ಯುಗದಲ್ಲಿ, ಅದು ಹುಟ್ಟಿದ ಉದ್ದೇಶ ಇಂಥದೇ” ಅನ್ನುವ ತೀರ್ಮಾನಗಳನ್ನು ನಾವು ಒಪ್ಪಿ ಬಂದೆವೆಂದಾದರೆ ಅಂಥ ಬದುಕಿನಲ್ಲಿ ನಾವು ಹುಡುಕಬೇಕಾದ ಯಾವ ರಹಸ್ಯ ಉಳಿದಿರುವುದಿಲ್ಲ. ನಮ್ಮ ಸಮಾಜವೋ, ಹಿರಿಯರೋ, ಒಪ್ಪಿ ಬಂದ ನಿಶ್ಚಿತ ರೂಪದ ತೀರ್ಮಾನಗಳಿಗೆ ನಮ್ಮ ಋಜು ಹಾಕಿದರಾಯಿತು. ಅಷ್ಟನ್ನು ಮಾಡಿ ನಮ್ಮ ಕಾಲ ಮುಗಿದೊಡನೆ ಇಲ್ಲಿಂದೆದ್ದು ಹೊರಟರಾಯಿತು. ಅದರ ಬದಲು – ನಮ್ಮ ಬದುಕನ್ನು ಕುತೂಹಲದಿಂದ ಇಣುಕಿ ನೋಡಬಲ್ಲ ದೃಷ್ಟ್ಟಿಯನ್ನೋ, ಬದುಕಿನ ಘಟನೆಗಳಿಗೆ ಸ್ಪಂದಿಸಬಲ್ಲ ಸಂವೇದನೆಗಳನ್ನೋ ಪ್ರಕಟಿಸಿ, ಅವು ಹೇಗಾದುವು – ಎಂದು ಚಿಂತಿಸಬಲ್ಲೆವಾದರೆ ಬುದ್ಧಿ ಜೀವಿಗಳಾದ ನಮಗೆ ಬದುಕಿನಲ್ಲಿ ಹೆಜ್ಜೆ ಹೆಜ್ಜೆಗೂ ಆಶ್ಚರ್ಯಕರ ಪ್ರಶ್ನೆಗಳು ಹೊಳೆದಾವು.”

ಇದು ಕಾರಂತರ ವೈಜ್ಞಾನಿಕ ಪ್ರಜ್ಞೆ ಮತ್ತು ಜೀವನ ದೃಷ್ಟಿ. ಯಾವುದೇ ಘಟನೆ ಅಥವಾ ವಿದ್ಯಮಾನವನ್ನು ಅವರು ಗಮನಿಸುತ್ತಿದ್ದುದು ಸಂಶೋಧಕನ ಚಿಕಿತ್ಸಕ ದೃಷ್ಟಿಯಿಂದ. ಆ ಕಾರಣದಿಂದಲೇ ಅವರು ಸದಾ ಪ್ರವಾಸದಲ್ಲಿರುತ್ತಿದ್ದರು; ಉಪನ್ಯಾಸ ಮತ್ತು ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಬಗೆಯ ಜೀವನೋತ್ಸಾಹ ಅವರ ಸಾಹಿತ್ಯಕ್ಕೆ ಪ್ರೇರಣೆಯಾಗಿತ್ತು. ಪ್ರಖರ ವೈಚಾರಿಕತೆ ಅವರದ್ದಾಗಿತ್ತು.

ಇತಿಹಾಸಕ್ಕೆ ಜಿಗಿದ ಮನೆಯ ಬಾವಿ

” ತಿಳುವಳಿಕೆಗೂ ನಮಗೂ ಇರುವ ದೂರ ” ಎನ್ನುವ ಲೇಖನದಲ್ಲಿ ದಕ್ಷಿಣ ಕನ್ನಡದ ತಾನಿರುವ ನೆಲದ ಪ್ರಾಗೈತಿಕ ಇತಿಹಾಸವನ್ನು ವಿವರಿಸುವ ಪ್ರಯತ್ನ ಮಾಡುವ ಕಾರಂತರು ತಮ್ಮ ಲೇಖನಕ್ಕೆ ಹೇಗೆ ಸ್ಫೂರ್ತಿ ಒದಗಿತೆಂದು ವಿವರಿಸುತ್ತಾರೆ (ಶಿವರಾಮಕಾರಂತರ ಲೇಖನಗಳು , ಸಂಪುಟ 5, ವೈಚಾರಿಕ ಬಿಡಿ ಬರಹಗಳು, ಸಂಪಾದಕಿ : ಬಿ.ಮಾಲಿನಿ ಮಲ್ಯ, 437-453). ಅದೊಂದು ದಿನ. ಕಾರಂತರು ಅವರ ಮನೆಯ ಬಾವಿಯೊಂದರ ಕೆಸರು ತೆಗೆಸುತ್ತಿದ್ದರು. ಆ ಕೆಸರಿನಲ್ಲಿ ಕಾಂಡಲು ಮರ, ಮತ್ತಿತರ ಗಿಡಗಳು ಸುಟ್ಟು ಉಂಟಾದ ಮಸಿಯ ಕರಿಕಲು ತುಂಡುಗಳು ಸಿಕ್ಕಿದುವಂತೆ. ಆ ಸಿಕ್ಕ ತುಂಡುಗಳನ್ನು ಎಲ್ಲರೂ ಮಾಡುವಂತೆ ಕಸದ ತೊಟ್ಟಿಗೆ ಕಾರಂತರು ಎಸೆಯಲಿಲ್ಲ. ಬದಲಾಗಿ ಟಾಟಾ ಸಂಶೋಧನಾಲಯಕ್ಕೆ ಕಳುಹಿಸುತ್ತಾರೆ – ಆ ತುಂಡುಗಳು ಎಷ್ಟು ವರ್ಷಗಳ ಹಿಂದಿನವು ಎಂಬ ಬಗ್ಗೆ ಇವರಿಗೆ ಕುತೂಹಲ!. ರೇಡಿಯೋ ಐಸೊಟೋಪ್ ಪರೀಕ್ಷೆಯಿಂದ ಆ ಮಸಿಗೆಂಡಗಳು ಹೆಚ್ಚುಕಡಿಮೆ ೪೫,೦೦೦ ವರ್ಷಗಳ ಹಿಂದಿನವು ಎಂದು ತಿಳಿದು ಬಂತು. ಅಂದರೆ ಕಾರಂತರ ಬಾವಿ ಪ್ರಾಚೀನ ಕಾಲಕ್ಕೆ ಸಂದು ಹೋಯಿತು. ಅಷ್ಟು ವರ್ಷಗಳ ಹಿಂದೆ ಅಲ್ಲೇನು ಇದ್ದಿರಬಹುದು ಮತ್ತು ಕಾಲಾಂತರದಲ್ಲಿ ಅವೆಲ್ಲ ಹೇಗೆ ಬದಲಾವಣೆ ಹೊಂದುತ್ತ ಸಾಗಿದುವು ಎಂಬ ಕಲ್ಪನೆಯನ್ನು ಕಾರಂತರು ಮಾಡುತ್ತಾರೆ – ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ. ಪ್ರಾಚೀನ ಕಾಲದಲ್ಲಿ ಅಲ್ಲಿ ನದಿ ಹರಿಯುತ್ತಿದ್ದಿರಬಹುದೆಂದು ಊಹಿಸುತ್ತಾರೆ. ಲೇಖನದ ಕೊನೆಯಲ್ಲಿ ಕಾರಂತರು ಬರೆಯುತ್ತಾರೆ.

” ನಾನು ಜಗತ್ತಿನ ಜೀವ ಕೋಟಿಯ ಒಂದು ಅಂಶ, ಕಾಲಪ್ರವಾಹದ ಒಂದು ಬಿಂದು- ಎಂದು ತಿಳಿದುಕೊಂಡಾಗ ನಮ್ಮ ಬದುಕಿಗೆ ಎಟಕುವ ಸ್ವಾರಸ್ಯ ಅಪಾರ. ಲೋಕವೆಲ್ಲ ನನಗಾಗ್ಯೇ ಇದೆ – ಎಂದು ತಿಳಿದುಕೊಂಡಾಗ ಮಾತ್ರ ನಮ್ಮೆಲ್ಲ ಪ್ರಶ್ನೆಗಳು ಸರಳವೆನಿಸಿ ಕೇವಲ ಸ್ವಾರ್ಥದ ನೋಟವೊಂದೇ ಪ್ರಾಧಾನ್ಯ ಗಳಿಸುತ್ತದೆ. ಉಳಿದ ಯಾವತ್ತು ಜೀವಿಗಳ ಬದುಕು – ಕ್ಷುದ್ರವೋ, ನಗಣ್ಯವೋ ಅನಿಸುತ್ತದೆ”

ವಿಜ್ಞಾನದ ಬಗ್ಗೆ ಕಾರಂತರಿಗೆ ಖಚಿತ ನಿಲುವಿತ್ತು; ಸ್ಪಷ್ಟ ಕಲ್ಪನೆಯಿತ್ತು. “ವಿಜ್ಞಾನ ಮತ್ತು ಅಂಧಶೃದ್ದೆ” ಎಂಬ ಪುಸ್ತಕದಲ್ಲಿ ಕಾರಂತರು ಬರೆಯುತ್ತಾರೆ

” ವಿಜ್ಞಾನ ಯಾವುದಾದರೊಂದು ಸಂಗತಿಯನ್ನು ಕಣ್ಮುಚ್ಚಿ ನಂಬುವುದಿಲ್ಲ. ಅದು ತನಗೆ ತಿಳಿಯದ್ದನ್ನು ತಿಳಿಯದು ಎಂದು ಹೇಳುತ್ತದೆ. ತಿಳಿದುದಕ್ಕೆ ಕಾರಣಗಳನ್ನು ಒದಗಿಸುತ್ತದೆ. ಪ್ರಯೋಗಗಳ ಮೂಲಕ ಆ ಕಾರಣಗಳ ಸ್ವರೂಪವನ್ನು ನಿಷ್ಕರ್ಷಿಸುತ್ತದೆ. ಆ ಮೂಲಕ ಅದು ಬಾಳ್ವೆಗೆ ಬೇಕಾದ ತಿಳಿವನ್ನೂ, ಧೈರ್ಯವನ್ನೂ, ಸೂಕ್ಷ್ಮ ದೃಷ್ಟಿಯನ್ನೂ ಒದಗಿಸಿ ಮಾರ್ಗದರ್ಶನ ಮಾಡುತ್ತದೆ. ನಮ್ಮ ಮುಂದಿರುವ ಸಮಸ್ಯೆ ಎಂದರೆ ನಾವು ಬಾಳಬೇಕಾದ ರೀತಿ ಯಾವುದು ಎಂದು ಯೋಚಿಸಿ, ಅದಕ್ಕೆ ಏನು ದಾರಿ ಅಥವಾ ಪರಿಹಾರ ಎಂದು ಕಂಡು ಹಿಡಿಯುವುದು. ಆ ಕೆಲಸದಲ್ಲಿ ನಮ್ಮ ಪೂರ್ವೀಕರು ಸಂಗ್ರಹಿಸಿಟ್ಟ ಜ್ಞಾನದ, ವಿಜ್ಞಾನದ ಪ್ರಯೋಜನ ವನ್ನು ಪಡೆಯುವುದು; ಪ್ರಯೋಗ ಮಾಡಿ ನೋಡುವುದು. ಈ ಬಗೆಯಿಂದ ನಮ್ಮ ಕೈಗೆ ಬಂದಿರುವ ತಿಳಿವನ್ನು ಮೂದಲಿಸಿ, ಕೇವಲ ಅಂತೆಕಂತೆಗಳ ಮೇಲೆ ಬೆಳೆಯಿಸಿದ ನಂಬಿಕೆಯ ಕಂತೆಗಳನ್ನು ನೆಚ್ಚಿ ದಾರಿ ಸಾಗುವ ರೀತಿ ಅದಲ್ಲವೇ ಅಲ್ಲ. ನಮಗೆ ನಿಜಕ್ಕೂ ತಿಳಿಯದ್ದನ್ನು ” ತಿಳಿಯದು” ಎಂದು ಹೇಳಲು ಕಲಿಯೋಣ; ಬರಿಯ ಅಂತೆ ಕಂತೆಗಳನ್ನು ನಂಬಿ ನಾವು ಬುದ್ಧಿವಂತರೆಂದು ತೋರಿಸಿಕೊಳ್ಳುವ ಸೋಗನ್ನು ಬಿಟ್ಟುಬಿಡೋಣ” ವಿಜ್ಞಾನದಲ್ಲಿ ಪ್ರಥಮ ಆಸಕ್ತಿ

ಶಿವರಾಮ ಕಾರಂತರಿಗೆ ಕನ್ನದಲ್ಲಿ ವಿಜ್ಞಾನ ಸಾಹಿತ್ಯ ನಿರ್ಮಾಣದ ಆಸಕ್ತಿ ಮೊಳೆತದ್ದಾದರೂ ಹೇಗೆ ? “ಓದಿ ಏನಾಯಿತು?” ( ಗ್ರಂಥಲೋಕದ ನೂರು ಮುಖಗಳು – ವಿಷೇಷಾಂಕ, ಏಪ್ರಿಲ್, 1985) ಎಂಬ ಲೇಖನದಲ್ಲಿ ಕಾರಂತರು ಹೀಗೆ ಬರೆದಿದ್ದಾರೆ

“ಮುಂದೆ ಕೆಲವು ವರ್ಷಗಳ ತರುವಾಯ ನನಗೆ ಹಲವಾರು ಉಪಾಧ್ಯಾಯರ ಸಂಪರ್ಕವಾಯಿತು. ಅವರ ಜ್ಞಾನ ಕೇವಲ ಕನ್ನಡ ಪಠ್ಯ ಪುಸ್ತಕಗಳಿಗೆ ಸೀಮಿತವಾದುದನ್ನು ಕಂಡೆ. ಇಂಗ್ಲೆಂಡಿನಿಂದ ಮಕ್ಕಳಿಗಾಗಿ ರಚಿತವಾಗಿ ಬರುತ್ತಿದ್ದ Book of Knowledge, Wonders of animal life, Outlines of Sciences ಇತ್ಯಾದಿ ಬ್ಱಹತ್ ಗ್ರಂಥಗಳನ್ನು ನೋದಿದಾಗ, ಅನ್ಯರಲ್ಲಿರುವ ಮಾನಸಿಕ ಸಂಪತ್ತು ನಮಗಿಲ್ಲದೇ ಹೋಯಿತೆಂದು ಅನಿಸಿತು. ಅದನ್ನು ನೀಗಿಸಲು ಹಲವಾರು ವಿಷಯಗಳನ್ನು ಕುರಿತು ಬರೆದ ಗ್ರಂಥಗಳನ್ನು ತರಿಸಿಕೊಂಡು ಓದಿ ಕನ್ನಡದಲ್ಲಿ ಬರೆಯತೊಡಗಿದೆ. ಅದರ ಫಲವೇ ಬಾಲಪ್ರಪಂಚ. ಯಾರೂ ಅದನ್ನು ಓದದೇ ಹೋದರೂ ಅದರ ನಿರ್ಮಾಣದ ಕೆಲಸಕ್ಕಾಗಿ ನಾನು ವಿವಿಧ ವಿಷಯಗಳಲ್ಲಿ ಪಡೆದ ತಿಳಿವು, ಸಂತೋಷ ಎಂದೂ ಅಳಿಯಲಾರದು.ಅಲ್ಲಿಂದ ಮುಂದೆ ಈ ಐವತ್ತು ವರ್ಷಗಳ ಅವಧಿಯಲ್ಲಿ ನನ್ನ ಪಾಲಿಗೆ ಅನ್ಯರ ಕ್ರಮ, ಅಧ್ಯಯನಗಳಿಂದ ಸುಲಭದಲ್ಲಿ ದೊರೆಯುವ ಜ್ಞಾನ ಸಂಪತ್ತು ನಾನು ಕುಳಿತಲ್ಲಿಯೇ ಗಳಿಸಬಹುದಾದ ಚಿನ್ನದ ಗಣಿ ಅನಿಸಿದೆ. ಅದು ಕೊಡುತ್ತಿರುವ ಸಂತೋಷ ಅಪಾರ; ಅದು ಪ್ರೇರಿಸುವ ಕಾರ್ಯಪ್ರವೃತ್ತಿ ಅನಿರೀಕ್ಷಿತ; ಉದ್ದಾಮ. ತೆರೆದರೆ ಮಾತ್ರ ಮಾತನಾಡುವ ಮೂಕ ಪುಸ್ತಕಗಳು ನನ್ನನ್ನು ಎಲ್ಲಿಗೆಲ್ಲ ಒಯ್ದಿವೆ, ಏನೆಲ್ಲ ಕೊಟ್ಟಿವೆ ಎಂದು ಹೇಳುವ ಕೆಲಸ ಸುಲಭವಲ್ಲ.

ಶಿವರಾಮ ಕಾರಂತರನ್ನು ಕುರಿತು ಕರ್ನಾಟಕ ರಾಜ್ಯ ವಾರ್ತಾ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರ

ಈಚೆಗಿನ ಕೆಲವು ಶತಮಾನಗಳಲ್ಲಿ ಕೆಲವು ಪಾಶ್ಚಾತ್ಯ ರಾಷ್ಟ್ರಗಳು ವಿಜ್ಞಾನದ ಕ್ಷೇತ್ರಗಳಲ್ಲಿ ನಡೆಯಿಸುತ್ತಿರುವ ಸಂಶೋಧನೆ ಮತ್ತು ಸಾಧನೆಗಳನ್ನು ಕುರಿತು ವಿಜ್ಞಾನಿಗಳು ಇನ್ನೆಷ್ಟು ಕಾಲ ಇದೇ ರೀತಿ ಅನ್ವೇಷಣೆ ನಡೆಯಿಸಿದರೂ ಮುಗಿಯಿತು ಎಂದಾಗದು ಎನಿಸುತ್ತದೆ. ಈ ತನಕ ಯಾವುದೇ ವಿಷಯದಲ್ಲಿ ಕತ್ತಲಾಗಿ ಕಾಣಿಸಿದ ತಾವು, ವಿಜ್ಞಾನ ಕೆಡವಿದ ಬೆಳಕಿನಿಂದ ಒಂದು ಜೀವಂತ ಜಗತ್ತೇ ಎಂಬಷ್ಟು ಹಿರಿದಾಗಿ, ಆಕರ್ಷಕವಾಗಿ ಕಾಣಿಸಿದಾಗ, ನನ್ನ ಮನಸ್ಸನ್ನು ಹಿಗ್ಗಿಸಿದ ಯಾವುದೇ ನಾಟಕ, ಗೀತ, ಶಿಲ್ಪಗಳು ಕೂದ ಅಷ್ಟು ಮನೋಹರವಾಗಿರಲಾರವು ಎನಿಸುತ್ತದೆ. “

ಕಾರಂತರಿಗೆ ಅಂದಿನ ದಿನಗಳಲ್ಲಿ ಆಂಗ್ಲ ಭಾಷೆಯಲ್ಲಿ ಬರುತ್ತಿದ್ದ Popular Science , Science Digest, National Geography ಮೊದಲಾದ ಜನಪ್ರಿಯ ವಿಜ್ಞಾನ ಗ್ರಂಥಗಳ ಪರಿಚಯವಿತ್ತು, ಮಾತ್ರವಲ್ಲ ಅವುಗಳನ್ನು ಎಷ್ಟೇ ದುಬಾರಿಯಾದರೂ ತರಿಸಿ ಓದುತ್ತಿದ್ದರು. ಬಾಲವನದ ಗ್ರಂಥ ಬಂಢಾರದಲ್ಲಿ ನೂರಾರು ವಿಷಯ ವಿಶ್ವಕೋಶಗಳು, ವಿಜ್ಞಾನಕ್ಕೆ ಸಂಬಂಧಿಸಿದ ಆಕರ ಗ್ರಂಥಗಳು, ಜನಪ್ರಿಯ ವಿಜ್ಞಾನ ಪುಸ್ತಕಗಳು ಇದ್ದುವಂತೆ. ಈ ಎಲ್ಲ ಪುಸ್ತಕಗಳನ್ನು ಇಂಗ್ಲೀಷ್ ಬಲ್ಲ ಕಾರಂತರು ಓದುತ್ತ ಹೋದಂತೆ ಕನ್ನಡ ಜನರಿಗೆ ಇವು ತಲುಪುತ್ತಿಲ್ಲವಲ್ಲ ಎಂಬ ನೋವು ಅವರನ್ನು ಕಾಡತೊಡಗಿತು. ಈ ನೋವು ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಗೆ ಕಾರಂತರನ್ನು ತೊಡಗಿಸಿತು.

1971 ರಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ವಿಜ್ಞಾನ ಪಠ್ಯ ಪುಸ್ತಕ ಬರಹಗಾರರ ಶಿಬಿರವನ್ನು ಏರ್ಪಡಿಸಿತು. ಆ ಶಿಬಿರದಲ್ಲಿ ಕಾರಂತರು ” ಆದರ್ಶ ಪಠ್ಯ ಪುಸ್ತಕಗಳು” ಎಂಬ ವಿಷಯದ ಬಗ್ಗೆ ಭಾಷಣ ಮಾಡುತ್ತ ಹೇಳಿದರು

ಇದನ್ನೂ ಓದಿ | ಕನ್ನಡ ಲೋಕಕ್ಕೆ ಸಿರಿ ತಂದ ಶಿವರಾಮ ಕಾರಂತರ ವಿಜ್ಞಾನ ಪ್ರೀತಿ | ಭಾಗ 2

ಇದನ್ನೂ ಕೇಳಿ | ಅಪ್ಪ, ಮನೋವೃತ್ತಿಯಿಂದ ಪೂರ್ಣ ವಿಜ್ಞಾನಿಯೇ ಆಗಿದ್ದರು: ಉಲ್ಲಾಸ್‌ ಕಾರಂತ

” ನಮ್ಮ ಉಪಾಧ್ಯಾಯರುಗಳಿಗೆ ಏನೂ ಪುಸ್ತಕಗಳಿಲ್ಲ ಎಂಬ ಕಾಲಕ್ಕೆ ಎರಡು ಪ್ರಯತ್ನಗಳನ್ನು ಮಾಡಬೇಕಾಯಿತು. ಒಂದು ಕಷ್ಟ ಶಬ್ದ ಬಂದರೆ ಅದರ ಅರ್ಥ ತಿಳಿಯಲು ಒಂದು ಅರ್ಥ ಕೋಶ ಬೇಕೆಂದು ಅನ್ನಿಸಿತು. ಇದು ನಾನು ಬರೆಯಬಲ್ಲೆ ಎಂದಲ್ಲ, ನನಗೆ ಅದರ ಅಭ್ಯಾಸವಾಗುತ್ತದೆಂದು. ಎರಡನೇಯದಾಗಿ ಬಾಲ ಪ್ರಪಂಚ. ಇದನ್ನು ಬರೆಯಲು ಕಾರಣ – ಮಕ್ಕಳಿಗೆ ತಿಳಿಯಬಹುದಾದದ್ದನ್ನು ಹೇಳಬೇಕು ಎಂಬುದೇ. ಒಂದು ಘನ ಉದ್ದೇಶ ಇಟ್ಟುಕೊಂಡಿದ್ದೆ – ನಾನು ಪರರಿಗೆ ಹೇಳಬೇಕಾದರೆ ನನಗೇ ಗೊತ್ತಿರಬೇಕಲ್ಲ; ಆದ್ದರಿಂದ ನನಗೆ ಗೊತ್ತಾಗಲೆಂದು ನಾನು ಮೊದಲು ಓದಲು ಹೊರಟೆ. ಇವತ್ತು ನಾನು ಸಾಹಿತಿ ಅಂತ ಅನ್ನಿಸಿಕೊಂಡಿದ್ದರೂ ಸಾಹಿತ್ಯ ಗ್ರಂಥಗಳನ್ನು ನಾನು ಅಭ್ಯಾಸ ಮಾಡುತ್ತ ಇಲ್ಲ. ಅಪೂರ್ವಕ್ಕೊಂದು ಓದುತ್ತ ಇದ್ದೇನೋ ಇಲ್ಲವೋ ಅದೂ ನನಗೆ ಸಂಶಯ. ಹೆಚ್ಚಿಗೆ ಇವತ್ತಿನವರೆಗೂ, ಇವತ್ತೂ ನಾನು ಓದುತ್ತ ಇರುವುದು ವಿಜ್ಞಾನದ ಪುಸ್ತಕಗಳೇ. ಇಲ್ಲಿ ವಿವಿಧ ರೀತಿಯ ಪುಸ್ತಕಗಳನ್ನು ಕಾದಂಬರಿಗಳಿಗಿಂತ ಚೆನ್ನಾಗಿ ಮೇಲಿನ ಮಟ್ಟದ ವಿಜ್ಞಾನದಲ್ಲಿಯೂ ಬರೆದಿರುವುದನ್ನು ನಾನು ನೋಡಿದ್ದೇನೆ. ನಮ್ಮಲ್ಲಿಗೆ ಬರುವಾಗ ಇದು ಎಲ್ಲ ಸತ್ತ್ವವನ್ನೂ ಕಳೆದುಕೊಂಡು ನಿರ್ಜೀವ ವಾಸ್ತವಾಂಶಗಳ ನಿರೂಪಣೆ ಆಗುವುದೇಕೆ ? ಇದನ್ನು ನಾವು ಯೋಚಿಸಬೇಕಾಗುತ್ತದೆ “

ಎಲ್ಲ ಸಾಹಿತಿಗಳು ಪ್ರಾರಂಭದಲ್ಲಿ ಕಿರು ಬರಹಗಳಿಂದ ಸಾಹಿತ್ಯ ಪ್ರಪಂಚಕ್ಕೆ ಕಾಲಿರಿಸುತ್ತಾರೆ. ಕಾರಂತರು ಕೂಡ ಅಪವಾದವಲ್ಲ. ಮೊದಲಿಗೆ ವಿಜ್ಞಾನಕ್ಕೆ ಸಂಬಂದಿಸಿದ ಕಿರು ಲೇಖನಗಳೊಂದಿಗೆ ವಿಜ್ಞಾನ ಸಾಹಿತ್ಯ ಪ್ರಪಂಚಕ್ಕೆ ಅಡಿ ಇಟ್ಟವರು. 1928 ರ ಸುಮಾರಿಗೆ 28ರ ಹರೆಯದ ಯುವಕ ಕಾರಂತರು “ವಸಂತ” ಎಂಬ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು.