ಕನ್ನಡ ಲೋಕಕ್ಕೆ ಸಿರಿ ತಂದ ಶಿವರಾಮ ಕಾರಂತರ ವಿಜ್ಞಾನ ಪ್ರೀತಿ | ಭಾಗ 2

ಅಕ್ಟೋಬರ್‌ 10 ಶಿವರಾಮಕಾರಂತರ ಜನ್ಮದಿನ. ಹತ್ತು ಹಲವು ಆಸಕ್ತಿಗಳಲ್ಲಿ ತೊಡಗಿಸಿಕೊಂಡಿದ್ದ ಕಾರಂತರ ಜೀವನ ಅಗಾಧವಾದದ್ದು. ಅವರ ಸಾಹಿತ್ಯ ಕೊಡುಗೆ ಎಷ್ಟು ದೊಡ್ಡದೊ, ವಿಜ್ಞಾನ ಸಾಹಿತ್ಯಕ್ಕೂ ಅಷ್ಟೇ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅತೀವ ಕುತೂಹಲ ಗುಣದ ಕಾರಂತರ ವಿಜ್ಞಾನದೊಂದಿಗೆ ಒಡನಾಟ, ವಿಜ್ಞಾನ ಸಾಹಿತ್ಯ ಕೃಷಿಯ ಕುರಿತು ವಿವರಗಳನ್ನು ಅವರ ಜನ್ಮದಿನ ನೆಪದಲ್ಲಿ ಇಲ್ಲಿ ನೀಡುತ್ತಿದ್ದೇವೆ. ಈ ಲೇಖನದ ಎರಡನೆಯ ಕಂತು ಇಲ್ಲಿದೆ

  • ಎ ಪಿ ರಾಧಾಕೃಷ್ಣ, ಭೌತಶಾಸ್ತ್ರ ಅಧ್ಯಾಪಕರು

ಕಾರಂತರೇ ಹೇಳುವಂತೆ ಅವರ ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಪತ್ರಿಕೋದ್ಯಮವೂ ಒಂದು. ವಸಂತ – ಕಾರಂತರ ಪ್ರಪ್ರಥಮ ಪತ್ರಿಕೋದ್ಯಮ ಸಾಹಸ. ಅದರ ಸಂಪಾದಕರು ಮತ್ತು ಹೆಚ್ಚಿನ ಲೇಖನಗಳ ಲೇಖಕರು ಕಾರಂತರೇ ಆಗಿದ್ದರು. ಪತ್ರಿಕೆ ಕುಂದಾಪುರದಿಂದ ಪ್ರಕಟವಾಗುತ್ತಿತ್ತು. ಅದರಲ್ಲಿ ಕಾರಂತರ ಮೊದಲ ಕಾದಂಬರಿಗಳಾದ “ನಿರ್ಭಾಗ್ಯ ಜನ್ಮ, ದೇವದೂತರು ಮತ್ತು ಸೂಳೆಯ ಸಂಸಾರ” ಪ್ರಕಟವಾಯಿತು. ಅಂದಿನ ಸಾಹಿತ್ಯಾಸಕ್ತರನ್ನು ಗಮನ ಸೆಳೆದ ಈ ಪತ್ರಿಕೆಯಲ್ಲಿ ಕಾರಂತರು ಹಲವಾರು ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದರು.

ಆದರೆ ವಸಂತ ಪತ್ರಿಕೆ ಬಹುಕಾಲ ನಡೆಯಲಿಲ್ಲ. ಕಾರಂತರೇ ಹೇಳುತ್ತಾರೆ “ವಸಂತವೆಂಬ ಮಾಸ ಪತ್ರಿಕೆ ನನ್ನ ಗತ ವೈಭವಗಳಲ್ಲೊಂದು ಸ್ಮರಣೆಯಾಯಿತು”. ಸುಮಾರು ಎರಡು ದಶಕಗಳ ಬಳಿಕ, ಅಂದರೆ ಐವತ್ತರ ದಶಕದಲ್ಲಿ ಕಾರಂತರು “ವಿಚಾರವಾಣಿ” ಎಂಬ ಹೊಸ ಪತ್ರಿಕೆ ಪ್ರಾರಂಭಿಸಿದರು. ಆ ಪತ್ರಿಕೆಯಲ್ಲಿ “ವಿಜ್ಞಾನಯುಗ” ಎಂಬ ಅಂಕಣವಿತ್ತು. ಅದರಲ್ಲಿ ಹಲವು ವಿಜ್ಞಾನ ಲೇಖನಗಳನ್ನು ಬರೆದರು.

ಈ ನಡುವೆ 1936ರಲ್ಲಿ ಮೂರು ಸಂಪುಟಗಳ ಬಾಲಪ್ರಪಂಚ ಬೆಳಕು ಕಂಡಿತು. ಅಲ್ಲಿ ದೊಡ್ಡವರಿಗಾಗಿ ಹೇಳದೇ ಉಳಿದ ಹಲವು ವಿಷಯಗಳು ಇದ್ದವು. ಪರಿಣಾಮವಾಗಿ ನಂತರ ಬಂತು ಮೂರು ಸಂಪುಟಗಳ ವಿಜ್ಞಾನ ಪ್ರಪಂಚ ಬಂತು. ಈ ಸಂಪುಟಗಳು ಕನ್ನಡ ವಿಜ್ಞಾನ ವಾಂಗ್ಮಯದಲ್ಲಿ ಮೈಲಿಗಲ್ಲುಗಳು. ಇವಲ್ಲದೇ ಶಿವರಾಮಕಾರಂತರು ಹಲವು ವಿಜ್ಞಾನ ಪುಸ್ತಕಗಳನ್ನು ಬರೆದರು. ವಿಚಿತ್ರ ಖಗೋಲ (1965), ನಮ್ಮ ಭೂ ಖಂಡಗಳು (1965), ಹಿರಿಯ ಕಿರಿಯ ಹಕ್ಕಿಗಳು (1971), ವಿಜ್ಞಾನ ಮತ್ತು ಅಂಧ ಶೃದ್ದೆ (1982), ಉಷ್ನವಲಯದ ಆಗ್ನೇಸ್ಯ (1983), ಪ್ರಾಣಿಪ್ರಪಂಚದ ವಿಸ್ಮಯಗಳು (1984), ಮಂಗನ ಕಾಯಿಲೆ (1984), ವಿಶಾಲ ಸಾಗರಗಳು (1984), ಪ್ರಾಣಿ ಪ್ರಪಂಚ (1990), ಇತ್ಯಾದಿ.

ಮನಸ್ಸಿಗೆ ಮುದ ನೀಡಿದ ಇಂಗ್ಲೀಷಿನ ವಿಜ್ಞಾನ ಪುಸ್ತಕ ದೊರೆತರೆ ಕನ್ನಡದ ಜನರಿಗಾಗಿ ಅನುವಾದಿಸಲು ಕಾರಂತರು ಮುಂದಾಗುತ್ತಿದ್ದರು. ಇಂಗ್ಲೀಷಿನಲ್ಲಿ ರಾಶೆಲ್ ಕಾರ್ಸನ್ ಸುಪ್ರಸಿದ್ದ ಜನಪ್ರಿಯ ವಿಜ್ಞಾನ ಲೇಖಕರು. ಅವರ “The Sea Around Us ” ಪುಸ್ತಕವನ್ನು ಓದಿದ ಕಾರಂತರಿಗೆ ಕನ್ನಡಕ್ಕೆ ಅನುವಾದಿಸುವ ಉತ್ಸಾಹ ಹುಟ್ಟಿತು. ಅದರ ಫಲವೇ ” ನಮ್ಮ ಸುತ್ತಲಿನ ಕಡಲು” (1958). ಇವಲ್ಲದೇ ಅವರ ಇತರ ಅನುವಾದಿತ ಹೊತ್ತಗೆಗಳು ಹೀಗಿವೆ – ಮೋಸೋಮುಗಳು (ಮನ್ಸೂನ್) (1979), ಕೀಟನಾಶಕಗಳ ಪಿಡುಗುಗಳು (1983), ಜನತೆಯೂ ಅರಣ್ಯಗಳೂ (1983), ಭಾರತದ ಪರಿಸರ ಪರಿಸ್ಠಿತಿ (1982) – ಪ್ರಜೆಯ ದೃಷ್ಟಿಯಲ್ಲಿ (1983), ನಮ್ಮ ಪರಮಾಣು ಚೈತನ್ಯ -ಉತ್ಪಾದನಾ ಸಾಧನಗಳು (1986), ಭಾರತದ ಪರಿಸರ ಸ್ಠಿತಿ – ದ್ವಿತೀಯ ಸಮೀಕ್ಷೆ (1986), ಪರಮಾಣು – ಇಂದು, ನಾಳೆ(1983), ನಮ್ಮೆಲ್ಲರಿಗೂ ಒಂದೇ ಭವಿಷ್ಯ (1989). ಸಾಕಾಗದೇ ಪುಸ್ತಕಗಳ ಪಟ್ಟಿ – ಕಾರಂತರಿಗೆ ಅದೆಂಥ ವಿಜ್ಞಾನ ಪ್ರೀತಿ ಇತ್ತೆನ್ನುವುದನ್ನು ಸ್ಪಷ್ಟ ಪಡಿಸಲು.

ಕಡಲ ತೀರ್ದ ಭಾರ್ಗವ ಶಿವರಾಮಕಾರಂತ; ಸಾಕ್ಷ್ಯಚಿತ್ರ

ಕಾರಂತರ ಕೃತಿಗಳಲ್ಲಿ ಹೆಚ್ಚಿನವು ಜೀವ ವಿಜ್ಞಾನ ಮತ್ತು ಪರಿಸರಕ್ಕೆ ಸಂಬಂಧಿಸಿದ್ದು. ಇದಕ್ಕೆ ನಿಸರ್ಗದ ಬಗ್ಗೆ ಕಾರಂತರಿಗಿದ್ದ ಒಲವು ಕಾರಣ. ಅವರು ಒಂದೆಡೆ ಬರೆದಿದ್ದಾರೆ

“ಪ್ರಯತ್ನ ಶೀಲರಿಗೆ, ಸಾಹಸಿಗಳಿಗೆ, ಕುತೂಹಲವುಳ್ಳವರಿಗೆ ನೆಲ, ನೀರು, ಬಾನು ಎಲ್ಲವೂ ಅದ್ಭುತ ಮನೋಹರ ಪ್ರದೇಶಗಳೇ ! ಹಾಗೆ ನೋದಹೋದರೆ ನಮ್ಮ ಮನಸ್ಸಿಗೆ ಸಂತೋಷವನ್ನು ಕೊಡಲಾರದ ಪ್ರದೇಶವೇ ಇಲ್ಲವೋ ಏನೋ ! ಅದನ್ನೆಲ್ಲ ಕಂಡು ತಿಳಿಯುವ ಕುತೂಹಲವಿರುವರ ಪಾಲಿಗೆ ನಿಸರ್ಗ ಯಾವ ರಹಸ್ಯವನ್ನೂ ಬಹಳ ಕಾಲ ಬಚ್ಚಿಟ್ಟುಕೊಳ್ಳಲಾರದು (ವಿಶಾಲ ಸಾಗರಗಳು)”

ಕಾರಂತರಿಗೆ ನಿಸರ್ಗ ಎಲ್ಲವೂ ಆಗಿತ್ತು. ಚೋಮನ ದುಡಿ, ಕುಡಿಯರ ಕೂಸು, ಚಿಗುರಿದ ಕನಸು, ಬೆಟ್ಟದ ಜೀವ ಮೊದಲಾದ ಕಾದಂಬರಿಗಳಲ್ಲಿ ನಾವು ಕಾರಂತರ ನಿಸರ್ಗ ಪ್ರೇಮವನ್ನು ಕಾಣಬಹುದು. ಇದೇ ಬಗೆಯ ನಿಸರ್ಗ ಪ್ರೇಮ ಅವರ ವಿಜ್ಞಾನ ಕೃತಿಗಳನ್ನೂ ಪ್ರಭಾವಿಸಿದೆ. ಕಡಲಂತೆ ಕಾರಂತ ಎಂಬ ಪುಸ್ತಕದಲ್ಲಿ ಶ್ರೀ. ಬಿದರಹಳ್ಳಿ ನರಸಿಂಹಮೂರ್ತಿಯವರು ಹೇಳುವಂತೆ; ” ನಿಸರ್ಗ ಪ್ರೇಮ ಕಾರಂತರ ವ್ಯಕ್ತಿತ್ತ್ವದ ಸ್ಥಾಯಿ ಲಕ್ಷಣ. ದೇವರನ್ನು ಅಷ್ಟಾಗಿ ಒಲ್ಲದ ಕಾರಂತರು ದೇವರ ಜಾಗೆಯಲ್ಲಿ ನಿಸರ್ಗವನ್ನು ಕೂರಿಸಿ ಪೂಜಿಸುತ್ತ ಬಂದಿದ್ದಾರೆ. ಅವರಿಗೆ ಬೆಟ್ಟ ಗುಡ್ದಗಳು, ಮರಗಿಡ ಕಾಡುಗಳು, ನದಿ ಸಮುದ್ರಗಳು ಹೆಂಡತಿ ಮಕ್ಕಳಷ್ಟೇ ಆಪ್ತ ಸ್ನೇಹಿತರಷ್ಟೇ ಆತ್ಮೀಯ ಜೀವಗಳು “

1991ರಲ್ಲಿ ಪ್ರಕಟವಾದ ” ಪ್ರಾಣಿ ಪ್ರಪಂಚ” ಕಾರಂತರ ಜನಪ್ರಿಯ ಪುಸ್ತಕಗಳಲ್ಲೊಂದು. ಏಳಕ್ಕೂ ಹೆಚ್ಚು ಬಾರಿ ಪುನರ್ ಮುದ್ರಣವನ್ನು ಕಂಡಿರುವುದೇ ಇದರ ಜನಪ್ರಿಯತೆಯ ಸೂಚಕ. ಇಂಗ್ಲೀಷಿನ Wonders of animal life ಎಂಬ ನಾಲ್ಕು ಸಂಪುಟಗಳು ಪ್ರಾಣಿ ಪ್ರಪಂಚದ ಸೃಷ್ಟಿಗೆ ಪ್ರೇರಣೆಯಾದುವೆಂದು ಮುನ್ನುಡಿಯಲ್ಲೇ ಕಾರಂತರು ಬರೆದಿದ್ದಾರೆ. ಅಕಾರಾದಿಯಾಗಿ ಬೇರೆ ಬೇರೆ ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ವಿವರಣೆ ಒದಗಿಸಿರುವ ಪುಸ್ತಕದ ತುಂಬ ರೇಖಾ ಚಿತ್ರಗಳಿವೆ – ಅವೆಲ್ಲವನ್ನು ಸ್ವತ: ಕಾರಂತರೇ ಬರೆದಿದ್ದಾರೆಂದರೆ ಸೋಜಿಗವಾಗುತ್ತದೆ. ಕಾರಂತರು ಮುನ್ನಡಿಯಲ್ಲಿ ಹೇಳುತ್ತಾರೆ

” ಇದಕ್ಕಾಗಿ ಎರಡು ವರ್ಷಗಳ ದೀರ್ಘಕಾಲದ ಬಿಡುವಿನ ಸಮಯವನ್ನು ಬಳಸಿಕೊಂಡು ಸುಮಾರು 700 ಪಶುಪಕ್ಷಿಗಳನ್ನು ಈ ಪ್ರಾಣಿ ಪ್ರಪಂಚಕ್ಕೆ ಸೇರಿಸಿಕೊಂಡೆ. ಅವನ್ನು ಸಚಿತ್ರವಾಗಿ ಕೊಡುವ ಪ್ರಯತ್ನದಲ್ಲಿ ಫೊಟೊ ಸಂಗ್ರಹಕ್ಕೆ ಹೋಗದೇ ಅದರ ಖರ್ಚು ವೆಚ್ಚಕ್ಕೆ ಬೆದರಿ, ಈ ಮೊದಲು ಪ್ರಯತ್ನಿಸಿದಂತೆ ನಾನೇ ಬರೆಯತೊಡಗಿದೆ. ಅವೆಲ್ಲವೂ ಅನ್ಯ ಚಿತ್ರಗಳನ್ನೋ, ಫೊಟೋಗಳನ್ನೋ ನೋಡಿ ಬರೆದ ರೇಖಾ ಚಿತ್ರಗಳು. ಅಂಥ ಕೆಲವನ್ನು ಕೈ ತಿದ್ದದ ನಾನು ತಿರು ತಿರುಗಿ ಬರೆಯಲೂ ಬೇಕಾಯಿತು. ಆ ರೀತಿಯಲ್ಲಿ ಸುಮಾರು ನಾಲ್ಕು ನೂರು ಚಿತ್ರಗಳನ್ನು – ಬರೆದು, ಹರಿದು, ಬರೆದು, ಹರಿದು ತಿರುಗಿ ಬರೆಯಲು ಹೊರಟೆ. ಪ್ರಕಟಣೆಯ ವೆಚ್ಚದ ದೃಷ್ಟಿಯಿಂದ ಅದು ಅನಿವಾರ್ಯವಾಗಿತ್ತು.”

ನಾವು ನೆನಪಿಡಬೇಕು – ಇಷ್ಟೆಲ್ಲ ಮಾಡುವಾಗ ಕಾರಂತರು ಇನ್ನೂ 87ರ ತರುಣ!

ಪರಿಸರದ ಬಗ್ಗೆ ಕಾರಂತರಿಗಿತ್ತು ಅನನ್ಯ ಕಾಳಜಿ. ಆಧುನಿಕ ಜೀವನ ವಿಧಾನಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ದನಿ ಎತ್ತಿದರು. ಕೈಗಾ ಪರಮಾಣು ಸ್ಥಾವರ ಸ್ಥಾಪನೆ ಅಥವಾ ಬೇಡ್ತಿ ಹಾಗೂ ಕಾಳೀ ನದೀ ಯೋಜನೆಯ ಸಂದರ್ಭದಲ್ಲಿ, ಕರಾವಳಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆ ಬಂದಾಗ, ಕುದುರೇಮುಖ ಅದಿರು ಯೋಜನೆಯ ಕಾಲದಲ್ಲಿ ಶಿವರಾಮ ಕಾರಂತರು ಸುಮ್ಮನುಳಿಯಲಿಲ್ಲ. ಇವೆಲ್ಲವೂ ಹೇಗೆ ಪರಿಸರದ ಮೇಲೆ ಅಳಿಸಲಾಗದ ಘಾಸಿ ಮಾಡಲಿವೆ ಎಂಬ ಬಗ್ಗೆ ಲೇಖನ, ಉಪನ್ಯಾಸ, ಮತ್ತು ಪುಸ್ತಕಗಳ ಮೂಲಕ ಜನ ಜಾಗೃತಿಗೆ ಯತ್ನಿಸಿದರು. ಜ್ಞಾನಪೀಠ ಪುರಸ್ಕೃತ ಈ ಹಿರಿಯರು ಪತ್ರಿಕೆಗಳ ಜನತಾವಾಣಿಯಲ್ಲಿ ಬರೆದ ಪತ್ರಗಳು ಅಸಂಖ್ಯ. ತನಗೆ ಅನಿಸಿದ್ದನ್ನು ಯಾವ ಮುಲಾಜೂ ಇಲ್ಲದೇ ಕಾರಂತರು ಹೇಳುತ್ತಿದ್ದರು. ದಕ್ಷಿಣ ಮತ್ತು ಉತ್ತರ ಕನ್ನಡದ ಜನಸಮುದಾಯದಲ್ಲಿ ಪರಿಸರ ಪರ ವಾದ ಪ್ರಬಲ ದನಿಯಾಗುವಲ್ಲಿ ಕಾರಂತರು ಕಾರಣರಾದರು. ತನ್ನ ಸುತ್ತಲಿನ ಸಮಸ್ಯೆಗಳಿಗೆ ಕಾರಣವಾದ ಸೋಗಲಾಡಿತನಕ್ಕೆ ಕಾರಂತರು ಖಾರವಾಗಿ ಪ್ರತಿಕ್ರಿಯಿಸುತ್ತಿದ್ದರು.

ಹಿಂದೆ ಕಂಡ ಮತ್ತು ಈಗ ಕಾಣುತ್ತಿರುವ ಕರ್ನಾಟಕ (ಕರ್ನಾಟಕ ಪರಿಸರ ಪರಿಸ್ಠಿತಿ ವರದಿ, 1983-84) ಎಂಬ ಸುದೀರ್ಘ ಲೇಖನವೊಂದರಲ್ಲಿ ಬದಲಾಗುತ್ತಿರುವ ಕರ್ನಾಟಕದ ಪರಿಸರ ಮತ್ತು ಸಾಮಾಜಿಕ ರೀತಿ ನೀತಿಗಳ ಬಗ್ಗೆ ಗಾಡ ವಿಷಾದ ವ್ಯಕ್ತ ಪಡಿಸುತ್ತಾರೆ. ಇಲ್ಲಿ ಎಷ್ಟೆಲ್ಲ ಮರಗಿಡಗಳಿದ್ದುವು, ಜಾನಪದ ಸಂಸ್ಕೃತಿಗಳಿದ್ದುವು, ಪಾರಂಪರಿಕ ಜ್ಞಾನವಿದ್ದುವು, ವನ್ಯ ಜೀವಿಗಳು ಹರಡಿಕೊಡಿದ್ದುವು. ಆದರೆ ಅವೆಲ್ಲವೂ ಮರೆಯಾಗುತ್ತಿವೆಯಲ್ಲ ಎಂದು ಕಾರಂತರು ವಿಷಾದಿಸುತ್ತಾರೆ. ಆ ಲೇಖನದಲ್ಲಿ ಅವರು ನಮ್ಮ ಪರಿಸರ ಪ್ರೀತಿ ಬಗ್ಗೆ ಕಟಕಿಯಾಡುತ್ತಾರೆ –

” ಭಾರತದಲ್ಲಿ ವಾಸಿಸುವ ನಮಗೆ ಪರಿಸರವನ್ನು ಕುರಿತ ಜ್ಞಾನ ತೀರ ಕಡಿಮೆ. ಪಶು ಪಕ್ಷಿಗಳಿಗೂ, ಮಾನವ ಬಳಗಕ್ಕೂ ಏನು ಸಂಬಂಧವಿದೆಯೆಂದು ನಮಗಿನ್ನೂ ತಿಳಿದಿಲ್ಲ. ಆದರೂ ನಾವು ಬುದ್ಧನಿಂದ ಅಹಿಂಸಾ ಧರ್ಮದ ಬೋಧನೆ ಪಡೆದವರು ! ನಮ್ಮ ಪುರಾತನ ಋಷಿಗಳು ಅತಿ ಸೂಕ್ಷ್ಮವಾದ ಜೀವಾಣುವಿನಲ್ಲಿಯೂ ಬ್ರಹ್ಮನಿದ್ದಾನೆ ಎಂದವರು. ಹೀಗೆ ಮತ ಧರ್ಮಗಳ ಪ್ರಭಾವ ನಮ್ಮ ಮೇಲೆ ವಿಪರೀತ ಬಿದ್ದುದರಿಂದಲೋ ಏನೋ. ಆ ಬ್ರಹ್ಮನನ್ನು ನಾವು ನಿಸರ್ಗದಲ್ಲಿ ಕಾಣಲು ಬಯಸುವುದಿಲ್ಲ ! ಕಲಿಯುಗದಲ್ಲಿ ಬ್ರಹ್ಮನ ಬದಲು ದುಡ್ಡೇ ಸರ್ವಸ್ವ – ಎಂಬ ಆರಾಧನೆಗೆ ತೊಡಗಿದ್ದೇವೆ. ಪ್ರಕೃತಿ ಸಂಪತ್ತನ್ನು ನಾವು ಇಂದು ದೈನಂದಿನ ನಮ್ಮ ಲಾಭಕ್ಕಾಗಿ ಸುಲಿಯುತ್ತಿದ್ದೇವೆಯೇ ಹೊರತು, ನಾಳಿನ ಯೋಚನೆ ನಮಗಿಲ್ಲ ಎಂಬಂತೆ ವರ್ತಿಸುತ್ತಿದ್ದೇವೆ.”

ವರ್ತಾಮಾನದ ಸಮಸ್ಯೆಗಳಿಗೆ ಕಾರಂತರಂತೆ ಸ್ಪಂದಿಸಿದ ಸಾಹಿತಿ ಬೇರೊಬ್ಬನಿಲ್ಲವೆಂದರೆ ಅತಿಶಯೋಕ್ತಿಯಾಗದು. ಅವರೆಂದೂ ದಂತ ಗೋಪುರಗಳಲ್ಲಿದ್ದವರಲ್ಲ. “ಭಾರತದ ಪರಿಸರ ಸ್ಥಿತಿ – 1982” ಕಾರಂತರ ಬಲು ಮುಖ್ಯ ಅನುವಾದಿತ ಕೃತಿಗಳಲ್ಲೊಂದು. ಅನಿಲ್ ಅಗರ್ವಾಲ್, ಕ್ಲಾಡ್ ಸಿಲ್ವಾರಿಸ್, ಮಾಧವ ಗಾಡ್ಗಿಲ್ ಮೊದಲಾದ ಮೂವತ್ತಕ್ಕೂ ಹೆಚ್ಚು ಪರಿಸರ ತಜ್ಞರು ಭಾರತದ ನೆಲ, ಜಲ, ವಾಯು – ಒಟ್ಟಾರೆ ಪರಿಸರದ ಪರಿಸ್ಥಿತಿ ಬಗ್ಗೆ ಇಂಗ್ಲೀಷಿನಲ್ಲಿ ತಯಾರಿಸಿದ ವರದಿಯ ಕನ್ನಡ ರೂಪಾಂತರವಿದು. ಕಾರಂತರಿಲ್ಲದಿದ್ದರೆ ಪ್ರಾಯಶ: ಕನ್ನಡಿಗರಿಗೆ ಇಂಥ ಅಮೂಲ್ಯ ಪುಸ್ತಕ ಲಭ್ಯವಾಗುತ್ತಿರಲಿಲ್ಲವೇನೋ.

ಪರಿಷ್ಕರಣೆಗೆ ಅವಕಾಶ

ಕಾರಂತರ ವಿಜ್ಞಾನ ಬರಹಗಳ ಬಗ್ಗೆ ಹಲವು ಆಕ್ಷೇಪಗಳನ್ನು ತಜ್ಞರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಅವರ ಭಾಷೆ ಒರಟು, ಅಲ್ಲಲ್ಲಿ ಸಂದಿಗ್ದತೆ, ಪರಿಕಲ್ಪನೆಯಲ್ಲಿ ಅಸ್ಪಷ್ಟತೆ, ಪಾರಿಭಾಷಿಕ ಶಬ್ದಗಳ ತಪ್ಪು ಬಳಕೆ ಇತ್ಯಾದಿ. ಇಂಥ ಆಕ್ಷೇಪಗಳನ್ನು ಅಲ್ಲಗಳೆಯಲಾರೆ. ಇವೆಲ್ಲವುಗಳ ಹೊರತಾಗಿಯೂ ಕಾರಂತರ ವಿಜ್ಞಾನ ಕೃತಿಗಳು ಯಾವ ಕಾಲದಲ್ಲಿ ರಚಿತವಾದುವು ಎಂಬುದನ್ನು ನಾವು ಗಮನಿಸಬೇಕು. ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ವಾಙ್ಮಯಕ್ಕೆ ಇವು ಉತ್ಸಾಹವನ್ನು ಊಡಿದುವು; ಜನಮಾನಸದ ಮೇಲೆ ಗಾಢ ಪ್ರಭಾವ ಬೀರಿದುವು.

ವಿಜ್ಞಾನ ಒಬ್ಬ ವ್ಯಕ್ತಿಯ ಸೊತ್ತಲ್ಲ. ವಿಜ್ಞಾನ ಬರಹಗಳಲ್ಲಿ ಪರಿಕಲನಾತ್ಮಕ ಸ್ಪಷ್ಟತೆ ಅತೀ ಅಗತ್ಯ. ಅಂತಿಮವಾಗಿ ಕೃತಿಗಾರನ ಕಾಲ ಮತ್ತು ಪರಿಸ್ಠಿತಿಗಿಂತ ಅಲ್ಲಿ ಮಂಡಿಸಿದ ವಿಷಯ ಮುಖ್ಯವಾಗುತ್ತದೆ. ಈ ದೃಷ್ಟಿಯಲ್ಲಿ ಶಿವರಾಮಕಾರಂತರ ವಿಜ್ಞಾನ ಕೃತಿಗಳನ್ನು ಪುನರ್ ಮುದ್ರಣ ಮಾಡುವ ಸಂದರ್ಭದಲ್ಲಿ ಅವುಗಳ ಪರಿಷ್ಕರಣೆ ಅಗತ್ಯ. ಇಲ್ಲಿ “ಕಾರಂತ ಶೈಲಿ” ಯನ್ನು ಮುಟ್ಟದೇ ಪರಿಷ್ಕರಿಸಬಹುದು. ಹೀಗೆ ಮಾಡುವುದರಿಂದ ಕಾರಂತರಿಗೆ ನ್ಯಾಯ ಸಲ್ಲುತ್ತದೆ; ವಿಜ್ಞಾನಕ್ಕೆ ಅನ್ಯಾಯವಾಗದು.

ಇದನ್ನೂ ಓದಿ | ಕನ್ನಡ ಲೋಕಕ್ಕೆ ಸಿರಿ ತಂದ ಶಿವರಾಮ ಕಾರಂತರ ವಿಜ್ಞಾನ ಪ್ರೀತಿ | ಭಾಗ 1

ಇದನ್ನೂ ಕೇಳಿ | ಅಪ್ಪ, ಮನೋವೃತ್ತಿಯಿಂದ ಪೂರ್ಣ ವಿಜ್ಞಾನಿಯೇ ಆಗಿದ್ದರು: ಉಲ್ಲಾಸ್‌ ಕಾರಂತ

ಹಲವು ದಶಕಗಳ ಹಿಂದೆ ಕಾರಂತರು ವಿಶ್ವಕೋಶದ ಪ್ರಕಟಣೆಯ ಸಾಹಸ ಮಾಡಿದರು. ಇಂದು ನಾವಿದ್ದೇವೆ ಮಾಹಿತಿ ಯುಗದಲ್ಲಿ. ಪ್ರಕಟಣೆಗೆ ಹೊಸ ತಂತ್ರಜ್ಞಾನ ಬಂದಿದೆ. ಆದರೇನು ? – ಕಾರಂತರಿಲ್ಲ, ಕಾರಂತರಂಥವರಿಲ್ಲ ! ಕನ್ನಡ ವಿಶ್ವಕೋಶ ಯೋಜನೆ ಅಪೂರ್ಣವಾಗಿ ನಿಂತಿದೆ. ವ್ಯಕ್ತಿಯಾಗಲಿ, ನಮ್ಮ ವಿಶ್ವವಿದ್ಯಾಲಯಗಳಾಗಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿಶ್ವಕೋಶಗಳ ಪ್ರಕಟಣೆಗೆ, ಪುಸ್ತಕ ಪ್ರಕಟಣೆಗೆ ಮುಂದಾಗುತ್ತಿಲ್ಲ. ಕಾರಣಕ್ಕೆ ಹಲವು ನೆಪಗಳಿವೆ. ನಮ್ಮ ಬೌದ್ಧಿಕ ದಿವಾಳಿತನಕ್ಕೆ ಇವು ಸಾಕ್ಷಿಯಾಗದೇ ?

ಕನ್ನಡದ ಪ್ರಮುಖ ವಿಜ್ಞಾನ ಬರಹಗಾರರಾದ ಜೆ.ಅರ್ ಲಕ್ಷ್ಮಣರಾಯರು ಕಾರಂತರ ವಿಜ್ಞಾನ ಸಾಹಿತ್ಯದ ಬಗ್ಗೆ ಕಾರಂತರ ಅಭಿನಂದನ ಗ್ರಂಥವಾದ ಕಾರಂತ ಪ್ರಪಂಚದಲ್ಲಿ ತಮ್ಮ ಅಭಿಪ್ರಾಯವನ್ನು ಹೀಗೆ ಹೇಳಿದ್ದಾರೆ –

” ತಾವು ಓದಿ ತಿಳಿದುಕೊಂಡು ಆನಂದಿಸಿದ ವಿಷಯಗಳನ್ನು ಇತರರಿಗೆ ತಿಳಿಸುವ ಪ್ರಯತ್ನ ಅವರದು. ಆ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆಂದು ನಿಸ್ಸಂಶಯವಾಗಿ ಹೇಳಬಹುದು. ವರದಿ ಮಾಡುವುದರಲ್ಲಿಯೂ ಒಂದು ಕಲೆ ಇದೆ. ಆ ಕಲೆ ಕಾರಂತರಿಗೆ ಒಲಿದಿದೆ. ಆದುದರಿಂದಲೇ ವರ್ಣನೆಗೆ ಪ್ರಾಶಸ್ತ್ಯವಿರುವ ವಿಜ್ಞಾನ ಶಾಖೆಗಳಾದ ಜೀವ ವಿಜ್ಞಾನ, ಭೂವಿಜ್ಞಾನಗಳನ್ನು ಕುರಿತ ಅವರ ಬರಹ ಹೆಚ್ಚು ಶೋಭಿಸುತ್ತದೆ. ಪ್ರಾಣಿ ಮತ್ತು ಸಸ್ಯ ಜೀವನ, ಭೂ ಇತಿಹಾಸಗಳ ವಿಷಯದಲ್ಲಿ ಕಾರಂತರು ಓದುಗರ ಕುತೂಹಲ, ಆಸಕ್ತಿಗಳನ್ನು ಕೆರಳಿಸುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕಾರಂತರ ಬರಹಗಳ ಇನ್ನೊಂದು ಮಹತ್ಸಾಧನೆ ಎಂದರೆ, ಪ್ರೌಢ ವಿಷಯಗಳನ್ನು ಕುರಿತು ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲವೆಂಬ ಅರ್ಥವಿಲ್ಲದ ಕೂಗನ್ನು ಅಡಗಿಸಲು ಅದು ಸಹಕಾರಿಯಾಗಿದೆ. ವಿಷಯದ ಮೇಲೆ ಪ್ರಭುತ್ವ, ತಿಳಿಸಬೇಕೆಂಬ ಅಭಿಲಾಷೆ, ಈ ಎರಡೂ ಇದ್ದುದೇ ಆದರೆ, ಭಾಷೆ ಅಡ್ದಿ ಮಾಡದೆಂಬುದನ್ನು ಅವರ ಬರಹ ತೋರಿಸಿಕೊಟ್ಟಿದೆ. ಇದಕ್ಕಾಗಿ ಕನ್ನಡಿಗರು ಅವರಿಗೆ ಋಣಿಯಾಗಿದ್ದಾರೆ.”

ನಿಜ, ಶಿವರಾಮ ಕಾರಂತರು ಕಾದಂಬರಿಕಾರರಾಗದೇ ಹೋಗಿದ್ದರೂ ವಿಜ್ಞಾನ ಬರಹಗಾರರಾಗಿ ಕನ್ನದ ಸಾಹಿತ್ಯ ಪ್ರಪಂಚದಲ್ಲಿ ಅವರಿಗೊಂದು ಸ್ಥಾನವಿರುತ್ತಿತ್ತು. ಅವರು ಕಾದಂಬರಿಕಾರ, ನಾಟಕಗಾರ, ನಿರ್ದೇಶಕ, ನೃತ್ಯ ಪಟು, ಚಿತ್ರಗಾರ, ವಿಜ್ಞಾನ ಸಾಹಿತ್ಯ ನಿರ್ಮಾಪಕ, ಚಲನ ಚಿತ್ರ ನಿರ್ದೇಶಕ, ಪರಿಸರ ಸಂರಕ್ಷಕ, ರಾಜಕಾರಣಿ, ಪತ್ರಿಕೋದ್ಯಮಿ, ಶಿಕ್ಷಣ ತಜ್ಞ… ಇನ್ನೇನು !?. ಮಾನವತಾವಾದಿ.

ವಿಜ್ಞಾನವನ್ನು ಕಾಲೇಜಿಗೆ ಹೋಗಿ ಶಾಸ್ತ್ರೀಯವಾಗಿ ಕಲಿಯದ ಕಾರಂತರೇ ಇಷ್ಟೊಂದು ಸಮೃದ್ಧವಾಗಿ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ನೃಷ್ಟಿಸಿ ನಮ್ಮ ಮುಂದೆ ಬಲು ದೊಡ್ಡ ಆದರ್ಶವನ್ನು ಬಿಟ್ಟು ಹೋಗಿದ್ದಾರೆ. ಇದು ಶಾಸ್ತ್ರೀಯ ನಮೂನೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಭ್ಯಸಿಸಿದ ನಮಗೆ ಸ್ಫೂರ್ತಿಯ ಸೆಲೆಯಾಗಬೇಕಾಗಿದೆ.