ಜಕಾರ್ತಾ ಮುಳುಗಡೆ; ಕಾಳಿಮಂಥನ ಇಂಡೋನೇಷ್ಯಾ ಹೊಸ ರಾಜಧಾನಿ

ಸಮುದ್ರ ಮಟ್ಟದಲ್ಲಿ ಏರಿಕೆ ಮತ್ತು ಅತಿಯಾಗಿ ಅಂತರ್ಜಲ ಬಳಕೆ ಎರಡೂ ಈಗ ಜಕಾರ್ತಾ ನಗರವನ್ನು ಮುಳುಗಿಸುತ್ತಿವೆ. ಹವಾಮಾನ ವೈಪರೀತ್ಯದ ಹೊಸ ಹೊಸ ಮುಖಗಳು ಬಿಚ್ಚಿಕೊಳ್ಳುತ್ತಿವೆ

ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮದಿಂದಾಗಿ ಏರುತ್ತಿರುವ ಸಮುದ್ರ ಮಟ್ಟಕ್ಕೆ ನಮ್ಮ ಕಾಲದಲ್ಲಿ ಬಲಿಯಾಗುತ್ತಿರುವ ಮೊದಲ ನಗರ ಹಾಗೂ ರಾಜಧಾನಿ ಇಂಡೋನೇಷ್ಯಾದ ಜಕರ್ತಾ ಆಗಲಿದೆ.

ರಾಷ್ಟ್ರಾಧ್ಯಕ್ಷ ಜೋಕೋ ವಿಡೊಡೊ ಈಗಾಗಲೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದು ಪ್ರಸ್ತುತ ವಿರಳ ಜನಸಂಖ್ಯೆ ಹೊಂದಿರುವ ಕಾಳಿಮಂಥನ್‌ಗೆ ರಾಜಧಾನಿಯನ್ನು ಸ್ಥಳಾಂತರಗೊಳಿಸಲಾಗುವುದು ಎಂದಿದ್ದಾರೆ.

ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ (ಬಹುತೇಕ ನಮ್ಮ ಬೆಂಗಳೂರಿನಷ್ಟು) ಕಡಲ ಕಿನಾರೆಯ ನಗರ ಜಕಾರ್ತಾ ಇಂಡೋನೇಷ್ಯಾದ ಶೇಕಡಾ 60ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಸಮುದ್ರ ಮಟ್ಟದ ಏರಿಕೆಯ ಜತೆಗೆ ಮಾಲಿನ್ಯ, ಟ್ರಾಫಿಕ್ ಜಾಮ್ ನಂಥ ಸಮಸ್ಯೆಗಳು ಜಕಾರ್ತಾದ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡಿದೆ.

ಜಕಾರ್ತಾದ ಶೇ.40ರಷ್ಟು ಭಾಗ ಹಿಂದೆ ಜವುಗು ಪ್ರದೇಶವಾಗಿದ್ದು ಕಳಪೆ ನಗರಯೋಜನೆಯೊಂದಿಗೆ ಬಾಯ್ದೆರೆದ ನಗರ ಸಮಸ್ಯೆಯನ್ನು ಮತ್ತಷ್ಟು ಜಟಿಲವಾಗಿಸಿದೆ. ಈ ಭೂಭಾಗ ವಿಶ್ವದಲ್ಲೇ ಅತಿ ವೇಗವಾಗಿ ಮುಳುಗಡೆಯಾಗುತ್ತಿದ್ದು ವಾರ್ಷಿಕ 10-20 ಸೆಂಟಿಮೀಟರ್ ತಳಕೂರುತ್ತಿದೆ ಎನ್ನುತ್ತಿವೆ ದಾಖಲೆಗಳು. ಸಮುದ್ರಮಟ್ಟದಿಂದ ಕೆಳಗಿರುವ ಈ ಭಾಗವನ್ನು ಉಳಿಸಲು ಇದುವರೆಗೆ ಮಾಡಲಾದ ಯಾವ ಪ್ರಯತ್ನಗಳು ಸೂಕ್ತ ಫಲ ನೀಡಿಲ್ಲ ಎಂಬುದು ಗಮನಾರ್ಹ.

ಇಲ್ಲಿದೆ ನೋಡಿ ಕಾಳಿಮಂಥನ್

ಮಲೇಷ್ಯಾ ಹಾಗೂ ಬ್ರೂನೈ ಗಡಿಯ ಸಮೀಪ ಇರುವ ಕಾಳಿಮಂಥನ್ ಜಕಾರ್ತಾದಿಂದ ಸಾವಿರ ಕಿಲೋಮೀಟರ್ ದೂರದಲ್ಲಿದೆ. ಸಮುದ್ರ ಮಟ್ಟದಿಂದ 2278 ಮೀಟರ್ ಎತ್ತರದಲ್ಲಿರುವ ಕಾಳಿಮಂಥನ್ ಪ್ರ್ಯಾಂತ್ಯ ಬೋರ್ನಿಯೋ ಪ್ರದೇಶಕ್ಕೆ ಸೇರುತ್ತದೆ. ಸರ್ಕಾರಿ ಇಲಾಖೆಗಳಿಗಾಗಿ ಅಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮುಂದಿನ ವರ್ಷದಿಂದ ಆರಂಭವಾಗಲಿದ್ದು 2024ಕ್ಕೆ ಪೂರ್ಣಗೊಳಿಸಲು ಇಂಡೋನೇಷ್ಯಾ ಸರ್ಕಾರ ಉದ್ದೇಶಿಸಿದೆ. ಜಕಾರ್ತಾದಲ್ಲಿ ಸದ್ಯ ಸುಮಾರು 15 ಲಕ್ಷ ಸರ್ಕಾರಿ ನೌಕರರಿದ್ದು ಅವರೆಲ್ಲರನ್ನೂ ಹೊಸ ರಾಜಧಾನಿಯಲ್ಲಿ ಮರುಸ್ಥಾಪಿಸಿವ ಕಾಯಕ ದೊಡ್ಡ ಸವಾಲು.

ಸುಮಾರು 17 ಸಾವಿರ ದ್ವೀಪಗಳನ್ನು ಒಳಗೊಂಡ ಇಂಡೋನೇಷ್ಯಾ ಸಂಕೀರ್ಣ ಭೂಭಾಗವಾಗಿದ್ದು ಅತಿದೊಡ್ಡ ಕಾಡುಗಳನ್ನೂ ಹೊಂದಿದೆ. ಹಾಗಾಗಿ ಸಹಜವಾಗಿ ಅಪರೂಪದ ಸಸ್ಯ ಪ್ರಭೇದ ಹಾಗೂ ಪ್ರಾಣಿಗಳ ವಾಸಸ್ಥಾನವಾಗಿದೆ. ಹಾಗಾಗಿ ಹೊಸ ಯೋಜನೆ ಬಗ್ಗೆ ಪರಿಸರವಾದಿಗಳು ಆತಂಕ ಹೊರಹಾಕಿದ್ದಾರೆ. ಕಾಳಿಮಂಥನ್ ನಿತ್ಯಹರಿದ್ವರ್ಣ ಕಾಡುಗಳನ್ನು ಹೊಂದಿದ್ದು ಅಳಿವಿನ ಅಂಚಿನಲ್ಲಿರುವ ಕೋತಿ ಪ್ರಭೇದ ಒರಾಂಗುಟಾನ್‌ಗಳ ವಾಸಸ್ಥಾನವಾಗಿದೆ.

ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದಿರುವ ವಿಡೊಡೊ “ಯಾವುದೇ ರಕ್ಷಿತ ಅರಣ್ಯ ಭಾಗವನ್ನು ನಾವು ಅಸ್ಥಿರಗೊಳಿಸುವುದಿಲ್ಲ, ಬದಲಾಗಿ ಕಾಳಿಮಂಥನ್ ಜತೆಗೆ ಹಾಲಿ ನಗರಗಳಾದ ಬಾಲಿಕ್‌ಪಾಪನ್ ಹಾಗೂ ಸಮರಿಂಡ ನಡುವೆ ಹೊಸ ಹಸಿರು ರಾಜಧಾನಿ ನಿರ್ಮಾಣ ಮಾಡಲಿದ್ದೇವೆ” ಎಂದಿದ್ದಾರೆ. ಅಲ್ಲದೆ ವಾಣಿಜ್ಯಿಕ ಹಾಗೂ ಹಣಕಾಸು ಕೇಂದ್ರವಾಗಿ ಜಕಾರ್ತಾ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಜಾವಾ ದ್ವೀಪದಲ್ಲಿನ ಪ್ರಮುಖ ನಗರ ಜಕಾರ್ತಾ 1964ರಿಂದ ಅಧಿಕೃತವಾಗಿ ಇಂಡೋನೇಷ್ಯಾದ ರಾಜಧಾನಿಯಾಗಿದೆ. ಬಟಾವಿಯಾ ಎಂದು ಮೊದಲು ಕರೆಸಿಕೊಳ್ಳುತ್ತಿದ್ದ ಜಜಾರ್ತಾ ಡಚ್ ವಸಾಹತು ಕಾಲದಿಂದಲೇ ರಾಜಧಾನಿಯಾಗಿದೆ. ಕಳೆದ ಶತಮಾನದಲ್ಲೇ ಜಾವಾ ದ್ವೀಪದಲ್ಲೇ ಇರುವ ಬಾಂಡುಂಗ್‌ಗೆ ರಾಜಧಾನಿ ಬದಲಾಯಿಸಲು ಡಚ್ಚರು ಯೋಜಿಸಿದ್ದರು. ಅಲ್ಲದೆ ಇಂಡೋನೇಷ್ಯಾ ಸ್ವಾತಂತ್ರ ಸಂಗ್ರಾಮ ಕಾಲದಲ್ಲಿಯೂ ಅಲ್ಪಕಾಲ ಜಾವಾದ ಯೋಗ್ಯಕರ್ತಾ ಹಾಗೂ ಸುಮಾತ್ರಾ ದ್ವೀಪದಲ್ಲಿನ ಬುಕ್ಕಿಟ್ಟಿಂಗಿಗೆ ರಾಜಧಾನಿ ಸ್ಥಳಾಂತರಗೊಂಡಿತ್ತು.

ಈ ನಗರಗಳು ಮುಳುಗುತ್ತಿವೆ!

ಅತಿ ವೇಗವಾಗಿ ಮುಳುಗುತ್ತಿರುವ ನಗರ ಜಕಾರ್ತ ಆದರೂ, ಈ ಸ್ಥಿತಿ ತಲುಪಿದ ನಗರ ಇದೊಂದೇ ಅಲ್ಲ. ಸಿಎನ್‌ಎನ್‌ ವರದಿಯೊಂದರ ಪ್ರಕಾರ ಈ ಕೆಳಗಿನ ನಗರಗಳು ನಿಧಾನವಾಗಿ ಮುಳುಗುತ್ತಿವೆ. ಆ ನಗರಗಳೆಂದರೆ:

  • ಹೂಸ್ಟನ್‌, ಅಮೆರಿಕ,
  • ಲಾಗೋಸ್‌, ನೈಜೀರಿಯಾ
  • ನ್ಯೂ ಆರ್ಲಿಯನ್ಸ್‌, ಅಮೆರಿಕ
  • ಬೀಜಿಂಗ್, ಚೀನಾ
  • ವಾಷಿಂಗ್ಟನ್‌, ಅಮೆರಿಕ