ಕನ್ನಡ ಪರಿಚಾರಕ ಶ್ರೀನಿವಾಸರಾಜು ಅವರ ನೆನಪಿನಲ್ಲಿ ಕನ್ನಡಕ್ಕೆ ಆರು ಉಚಿತ ಯೂನಿಕೋಡ್‌ ಫಾಂಟ್‌ಗಳು

ಕನ್ನಡ ಪುಸ್ತಕ ಪರಂಪರೆ ಬೆಳೆಸಿ, ನೂರಾರು ಲೇಖಕರನ್ನು ಬೆಳೆಸಿದ ಚಿ. ಶ್ರೀನಿವಾಸರಾಜು ಅಸಂಖ್ಯರ ಪಾಲಿಗೆ ಮೇಷ್ಟ್ರು. ಅವರ ಎಪ್ಪತ್ತೈದನೆಯ ಜನ್ಮದಿನದ ಸಂದರ್ಭದಲ್ಲಿ ಅವರ ನೆನಪಿನಲ್ಲಿ ಶ್ರೀನಿವಾಸರಾಜು ಅವರ ಕುಟುಂಬ ಕನ್ನಡಕ್ಕೆ “ಶ್ರೀರಾಜು”ಹೆಸರಿನಲ್ಲಿ ಉಚಿತವಾದ ನಾಲ್ಕು ಯೂನಿಕೋಡ್‌ ಫಾಂಟ್‌ಗಳನ್ನು ಬಿಡುಗಡೆ ಮಾಡಿತ್ತು. ಇಂದು ಅವರ ಎಪ್ಪತ್ತೇಳನೆಯ ಹುಟ್ಟು ಹಬ್ಬ. ಈ ಸಂದರ್ಭದಲ್ಲಿ ಇನ್ನೆರಡು ಫಾಂಟ್‌ಗಳನ್ನು ಬಿಡುಗಡೆ ಮಾಡಿದೆ. ಆರು ವಿನ್ಯಾಸಗಳಿರುವ ಕನ್ನಡದ ಮೊತ್ತ ಮೊದಲ ಯೂನಿಕೋಡ್‌ ಫಾಂಟ್‌ ಇದು.

ಸ್ವಿಟ್ಜರ್‌ಲೆಂಡಿನಲ್ಲಿ ಚಿ ಶ್ರೀನಿವಾಸರಾಜು

ಯಾವುದೇ ಭಾಷೆಯ ಬೆಳವಣಿಗೆಯಲ್ಲಿ ಹಲವು ಸಂಗತಿಗಳು ನಿರ್ಣಾಯಕವು, ಪ್ರಭಾವಿಯೂ ಆಗಿರುತ್ತವೆ. ಅಕ್ಷರ ವಿನ್ಯಾಸಗಳು ಕೂಡ ಭಾಷೆಯೊಂದರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಕಲಾವಿದ ಚಂದ್ರನಾಥ ಆಚಾರ್ಯ ಒಮ್ಮೆ ಹೇಳಿದ್ದರು. ಡಿಜಿಟಲ್‌ ಲೋಕದಲ್ಲಿ ಕನ್ನಡ ಭಾಷೆಯ ಲಿಪಿ ಹೊಸ ಸ್ವರೂಪ ಪಡೆದುಕೊಂಡಿದೆ. ಅದನ್ನು ಆಕರ್ಷಕವೂ, ಆಪ್ತ ಆಗಿಸುವುದು ಹೊಸ ಕಾಲದ ಒಂದು ವರ್ಗವನ್ನು ತಲುಪುವ ಮಾರ್ಗವೂ ಆಗಿರುತ್ತದೆ.

ಇತರೆ ಭಾಷೆಗಳಿಗೆ ಹೋಲಿಸಿದರೆ, ಕನ್ನಡದ ಅಕ್ಷರ ವಿನ್ಯಾಸಗಳ ಸಂಖ್ಯೆ ಹೆಚ್ಚೇನು ಇಲ್ಲ. ಉಚಿತವಾಗಿ ಲಭ್ಯವಿರುವ ಅಕ್ಷರ ವಿನ್ಯಾಸಗಳ ಬಹಳ ಸೀಮಿತ ಆಯ್ಕೆಯವು. ಈ ಹೊತ್ತಲ್ಲಿ ಕನ್ನಡ ನಾಡಿನ ಹೆಮ್ಮೆಯ ಕನ್ನಡ ಪರಿಚಾರಕ, ಚಿ ಶ್ರೀನಿವಾಸರಾಜು ಅವರ ಹೆಸರಿನಲ್ಲಿ ಅವರ 75ನೇ ಜನ್ಮ ದಿನೋತ್ಸವದ ಹಿನ್ನೆಲೆಯಲ್ಲಿ ಅವರ ಕುಟುಂಬ ‘ಶ್ರೀರಾಜು’ ಕನ್ನಡ ಯೂನಿಕೋಡ್‌ ಫಾಂಟ್‌ಗಳನ್ನು ಉಚಿತ ಬಳಕೆಗೆಂದು ಬಿಡುಗಡೆ ಮಾಡಿತು. ಈಗ ನವೆಂಬರ್‌ 28ರಂದು, 77 ಜನ್ಮದಿನೋತ್ಸವದ ಸಂದರ್ಭದಲ್ಲಿ ಶ್ರೀರಾಜುವಿನ ಇನ್ನೆರಡು ಫಾಂಟ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಆರು ವಿನ್ಯಾಸಗಳಿರುವ ಕನ್ನಡದ ಏಕೈಕ ಯೂನಿಕೋಡ್‌ ಫಾಂಟ್‌ ಇದಾಗಿದ್ದು, ರೆಗ್ಯುಲರ್‌, ರೆಗ್ಯುಲರ್‌ ಇಟಾಲಿಕ್‌, ಬೋಲ್ಡ್‌, ಬೋಲ್ಡ್‌ ಇಟಾಲಿಕ್‌, ಔಟಲೈನ್‌, ಔಟ್‌ಲೈನ್‌ ಇಟಾಲಿಕ್‌ ರೂಪದಲ್ಲಿ ಲಭ್ಯ ಇವೆ. ತಲೆಕಟ್ಟು ಇಲ್ಲದ ಕನ್ನಡದ ಈ ಲಿಪಿಯನ್ನು ಸಿದ್ಧಪಡಿಸಿದವರು ಕಲಾವಿದ ನಾಗಲಿಂಗಪ್ಪ ಬಡಿಗೇರ್. ಕಡಿಮೆ ಸ್ಥಳವನ್ನು ಆಕ್ರಮಿಸಿಕೊಳ್ಳುವಂತೆ ವಿನ್ಯಾಸ ಮಾಡಲಾಗಿರುವ ಈ ಅಕ್ಷರ ವಿನ್ಯಾಸಗಳು ಆಧುನಿಕತೆಯ ಸ್ಪರ್ಶನವನ್ನು, ಚಲನಶೀಲ ಗುಣವನ್ನು ಹೊಂದಿದೆ. ಇದನ್ನು ಡಿಜಿಟಲ್‌ ರೂಪಕ್ಕೆ ಅಭಿವೃದ್ಧಿಪಡಿಸಿದವರು ಲಿಖಿತ್‌ ಸಾಫ್ಟ್‌ವೇರ್‌ನ ಹರೀಶ್‌ ಸಾಲಿಗ್ರಾಮ.

ಈಗಾಗಲೇ ಹಲವು ಪ್ರಕಾಶನ ಸಂಸ್ಥೆಗಳು, ಟಿವಿ ವಾಹಿನಿಗಳು ಈ ಫಾಂಟ್‌ಗಳನ್ನು ತಮ್ಮ ವಿನ್ಯಾಸಗಳಲ್ಲಿ ಬಳಸಲಾರಂಭಿಸಿವೆ. ನಿಮಗೂ ಇವುಗಳನ್ನು ಬಳಸುವ ಆಸಕ್ತಿ ಇದ್ದಲ್ಲಿ ಈ ಲಿಂಕ್‌ ಕ್ಲಿಕ್‌ ಮಾಡಿ ಆರೂ ಫಾಂಟ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

https://bit.ly/2sdDknE