ಸೆಕ್ಷನ್ 370 ರದ್ದು ಚರ್ಚೆ| ಸೋಷಿಯಲ್‌ ಮೀಡಿಯಾ ಮೇಲೆ ಕಣ್ಣಿಟ್ಟಿರುವ ಸರ್ಕಾರ

ಯಾವುದೇ ಸಾಮಾಜಿಕ, ರಾಜಕೀಯ ವಿಚಾರಗಳ ಚರ್ಚೆಗೆ ಸುಲಭವಾಗಿ ಲಭ್ಯವಿರುವ ವೇದಿಕೆ ಸೋಷಿಯಲ್‌ ಮೀಡಿಯಾ. ಇತ್ತೀಚಿನ ದಿನಗಳಲ್ಲಿ ಜನಾಭಿಪ್ರಾಯ ರೂಪಿಸುವಲ್ಲಿ ನೆರವಾಗುತ್ತಿರುವ ಮಾಧ್ಯಮಗಳಿವು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ತಪ್ಪು ಮಾಹಿತಿ ಹರಡುವುದನ್ನು ತಡೆಯುವ ನೆಪದಲ್ಲಿ ಸರ್ಕಾರ ಸೋಷಿಯಲ್‌ ಮೀಡಿಯಾ ಕಾವಲಿಗೆ ನಿಂತಿದೆ

  • ಟೆಕ್‌ಕನ್ನಡ ಡೆಸ್ಕ್‌

ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕಾಯ್ದೆ 370 ರದ್ದು ಮಾಡುವ ಮೂಲಕ ಹಿಂತೆಗೆದುಕೊಂಡಿದೆ. ಈ ದೇಶದಾದ್ಯಂತ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದೆ. ಪಕ್ಷಾತೀತವಾಗಿ ಅನೇಕರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ಆದರೂ ಕೇಂದ್ರ ಸರ್ಕಾರಕ್ಕೆ ಕಾಶ್ಮೀರ ಕುರಿತು ತಪ್ಪು, ದ್ವೇಷದ ಮಾತುಗಳು ಹರಡುವ ಆತಂಕವಿದೆ. ಹಾಗಾಗಿ ಕೇಂದ್ರದ ಕಾನೂನು ಜಾರಿಗೊಳಿಸುವ ಘಟಕಗಳನ್ನು ಸೋಷಿಯಲ್‌ ಮೀಡಿಯಾದ ಮೇಲೆ ಕಣ್ಣಿಡಲು ಸೂಚನೆ ನೀಡಲಾಗಿದೆ.

‘ಟೆಲಿಗ್ರಾಫ್‌’ ಈ ಕುರಿತು ವರದಿ ಮಾಡಿದ್ದು, ಕೇಂದ್ರ ಗೃಹ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರಗಳನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ಬಗ್ಗೆ ಬರುತ್ತಿರುವ ತೀಕ್ಷ್ಣವಾದ ಟೀಕೆಗಳನ್ನು ಗಮನಿಸಲಿದೆ ಎಂಬ ಸಂಗತಿಯನ್ನು ಉಲ್ಲೇಖಿಸಿದೆ.

ಹಾದಿ ತಪ್ಪಿಸುವ, ದ್ವೇಷ ಹರಡುವಂತಹ ಯಾವುದೇ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ, ಅಂತಹವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೇಸ್‌ಬುಕ್‌, ಟ್ವೀಟರ್ ಸೇರಿದಂತೆ ಇತರೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಸುಳ್ಳು ಪೋಸ್ಟ್‌ಗಳನ್ನು ಸಂಗ್ರಹಿಸಿ, ಡಿಜಿಟಲ್‌ ದಾಖಲೆಗಳ ರೂಪದಲ್ಲಿ ಸಂಗ್ರಹಿಸಲಾಗುವುದು ಮತ್ತು ಇಂಥ ಮಾಹಿತಿ ಹರಡುವ ಜನ ಮತ್ತು ಅವರ ಜಾಲ ಮತ್ತು ಅವರು ಸಂಘಟನೆಗಳನ್ನು ಗುರುತಿಸಲಾಗುವುದು’ ಎಂದು ಗುಪ್ತಚರ ದಳದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಟೆಲಿಗ್ರಾಫ್‌ ವರದಿ ಉಲ್ಲೇಖಿಸಿದೆ.

ಗೃಹ ಸಚಿವಾಲಯ ನಡೆಯನ್ನು, ಹಿಂಸೆಯನ್ನು ತಡೆಯುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಅನುಸರಿಸುತ್ತಿರುವುದಾಗಿ ಸಮರ್ಥಿಸಿಕೊಂಡಿದೆ. ಸರ್ಕಾರ ನೀತಿ ಮತ್ತು ನಿರ್ಣಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುವ ಅವಕಾಶವನ್ನು, ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ, ಸುಳ್ಳು ಸುದ್ದಿಯನ್ನು ತಡೆಯುವ ನೆಪದಲ್ಲಿ ಸರ್ಕಾರವನ್ನು ಯಾವುದೇ ರೀತಿಯಲ್ಲಿ ಟೀಕಿಸದಂತೆ ಬೇಲಿಹಾಕುವ ಪ್ರಯತ್ನ ಇದು ಎಂಬ ಎಂಬ ಟೀಕೆಯೂ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಗಾವಲು ಇಡುವುದರ ಹಿಂದಿನ ಉದ್ದೇಶವನ್ನು ಕುರಿತು ಎಡಿನ್‌ ಬರೋದ ಕ್ವೀನ್‌ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ಪ್ರಾಧ್ಯಾಪಕ ಡೇವಿಡ್‌ ಲೈಯಾನ್‌ ಮಾತುಗಳು

ಇದೇ ಮೊದಲೇನಲ್ಲ

ಕಾಮನ್‌ ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್‌ನ ವೆಂಕಟೇಶ್‌ ನಾಯಕ್‌ ಅವರ ಆರ್‌ ಟಿ ಐ ಬಯಲಿಗೆಳೆದ ಮಾಹಿತಿಯಂತೆ ಬಿಜೆಪಿ ನೇತೃತ್ವ ಸರ್ಕಾರ 2016ದಿಂದಲೂ ಸೋಷಿಯಲ್‌ ಮೀಡಿಯಾ ಕಾವಲು ಕಾಯುತ್ತಿದೆ. ಅದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಸೋಷಿಯಲ್‌ ಮೀಡಿಯಾ ಕಮ್ಯುನಿಕೇಷನ್ಸ್‌ ಹಬ್‌ ಅನ್ನು ಸ್ಥಾಪಿಸಿದ್ದು ಅದರ ಮೂಲಕ ಭಾರತದ ಪ್ರತಿಯೊಬ್ಬ ನಾಗರಿಕರ ಸಾಮಾಜಿಕ ಜಾಲತಾಣದ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದೆ.

ಒಂದು ವರ್ಷ ಕಾಲ ಸಕ್ರಿಯವಾಗಿದ್ದ ಈ ಹಬ್‌ನ ಕಾರ್ಯಚಟುವಟಿಕೆ ವಿಸ್ತರಣೆಗೆ ಟೆಂಡರ್‌ ಕರೆದಿದ್ದಾಗ ಮಾಹಿತಿ ಹೊರಬಂದಿದ್ದು. ಪ್ರಕರಣ ಸುಪ್ರೀಮ್‌ ಕೋರ್ಟ್‌ ಮೆಟ್ಟಿಲೇರಿ, ಸರ್ಕಾರ ತನ್ನ ಪ್ರಜೆಗಳನ್ನು ಅನುಮಾನದಿಂದ ಕಣ್ಗಾವಲು ನಡೆಸುವುದನ್ನು ಟೀಕಿಸಿತ್ತು ಮತ್ತು ಎಚ್ಚರಿಸಿತ್ತು. ಆಗ ಕೇಂದ್ರ ಸರ್ಕಾರ ಟೆಂಡರ್ ಹಿಂಪಡೆದಿತ್ತು.

ವೆಂಕಟೇಶ್‌ ನಾಯಕ್‌ ಆರ್‌ಟಿಐ ಆಗ ಬಯಲು ಮಾಡಿದ ಅಂಶಗಳೆಂದರೆ: ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಆಬ್ಜೆಕ್ಟ್‌ ಒನ್‌ ಇನ್‌ಫಾರ್ಮೇಷನ್‌ ಸಿಸ್ಟಮ್ಸ್‌ ಲಿಮಿಟೆಡ್‌ ಎಂಬ ಸಂಸ್ಥೆಗೆ ಸೋಷಿಯಲ್‌ ಮೀಡಿಯಾ ಕಣ್ಗಾವಲಿನ ಜವಾಬ್ದಾರಿ ಹೊರಿಸಿತ್ತು. ಅದರ ಸೇವೆಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮೊಬೈಲ್‌ ಸಾಧನದಲ್ಲಿ ಸಾಫ್ಟ್‌ವೇರ್‌ ಒಂದನ್ನು ಮತ್ತು ಧ್ವನಿ ಸಂಗ್ರಹಿಸುವ ಸಾಧನವನ್ನು ಇನ್‌ಸ್ಟಾಲ್‌ ಮಾಡಿ, ಅದರ ಮೂಲಕ ಪ್ರತಿಯೊಬ್ಬ ಸೋಷಿಯಲ್‌ ಮೀಡಿಯಾ ಬಳಕೆದಾರ, ಅವರ ಖಾತೆ, ಪ್ರಭಾವಿಗಳು ಮತ್ತು ನಿರ್ದಿಷ್ಟ ಪೋಸ್ಟ್‌ ಅಥವಾ ಟ್ವೀಟ್‌ಗೆ ಬರುವ ಪ್ರತಿಕ್ರಿಯೆಗಳನ್ನು ಗಮನಿಸುವುದಾಗಿತ್ತು.

ಈಗ ಕಾಶ್ಮೀರದ ವಿಷಯದಲ್ಲಿ ಹಿಂಸಾಚಾರಕ್ಕೆ ಪ್ರೇರಣೆಯಾಗುವ ನೆಪದಲ್ಲಿ ಸೋಷಿಯಲ್‌ ಮೀಡಿಯಾದ ಚರ್ಚೆಗಳನ್ನು ಗಮನಿಸ ಹೊರಟಿರುವ ಕೇಂದ್ರ ಸರ್ಕಾರ ಭಾರತೀಯ ಪ್ರಜೆಯ ಮೂಲಭೂತ ಹಕ್ಕನ್ನು ತುಳಿಯಲು ಹೊರಟಿದೆ ಎಂಬ ಟೀಕೆಗೆ ಗುರಿಯಾಗುತ್ತಿದೆ.

ನಿಮ್ಮ ಗಮನಕ್ಕೆ : ಸೆಕ್ಷನ್‌ 505
ಭಾರತೀಯ ದಂಡ ಸಂಹಿತೆಯ ಪ್ರಕಾರ ಭಯ ಅಥವಾ ಆತಂಕ ಹುಟ್ಟಿಸುವ ಅಥವಾ ಯಾವುದೇ ವ್ಯಕ್ತಿ ಸರ್ಕಾರ, ವಿರುದ್ಧ, ಸಾರ್ವಜನಿಕ ನೆಮ್ಮದಿ ಅಥವಾ ವರ್ಗ ಅಥವಾ ಸಮುದಾಯದ ವಿರುದ್ಧ ಅಪರಾಧ ಮಾಡುವುದಕ್ಕೆ ಪ್ರೇರೇಪಿಸುವ ಯಾವುದೇ ಹೇಳಿಕೆ, ಗಾಳಿ ಸುದ್ದಿ, ವರದಿಯನ್ನು ಪ್ರಕಟಿಸಿದರೆ ಅಂತಹವರನ್ನು ಮೂರು ವರ್ಷ ಕಾಲ ಸೆರೆವಾಸ ಅಥವಾ ದಂಡ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದು.