ಥೋರಿಯಂ ತಂತ್ರಜ್ಞಾನ ಕದಿಯಲು ಕೂಡಂಕುಳಂ ಅಣು ಸ್ಥಾವರದ ಮೇಲೆ ನಡೆಯಿತೆ ಸೈಬರ್‌ ದಾಳಿ!?

ಮಾಲ್‌ವೇರ್‌ವೊಂದರ ಮೂಲಕ ಇಸ್ರೇಲಿನ ಸಂಸ್ಥೆ ದೇಶದ ಹೋರಾಟಗಾರರು, ಪತ್ರಕರ್ತರರ ಮೇಲೆ ಗೂಢಚಾರಿಕೆ ನಡೆಸಿದ ಚರ್ಚೆ ಬಿಸಿಯಾಗಿದೆ. ಆದರೆ ಅದಕ್ಕಿಂತ ಆಘಾತಕಾರಿಯಾದ ಸುದ್ದಿಯೊಂದನ್ನು ಗ್ರೇಟ್‌ಗೇಮ್‌ಇಂಡಿಯಾ ತಾಣ ಹೊರಹಾಕಿದೆ. ದೇಶದ ಪ್ರಮುಖ ಅಣು ವಿದ್ಯುತ್‌ ಸ್ಥಾವರದ ಮೇಲೆ ಸೈಬರ್‌ ದಾಳಿ ನಡೆದಿರುವುದಾಗಿ ವರದಿಯಾಗಿದೆ

ಸೈಬರ್‌ ದಾಳಿಗೆ ತುತ್ತಾಗುವ ಸರದಿ ಈಗ ಕೂಡಂಕುಳಂ ಅಣು ಸ್ಥಾವರದ್ದು! ಭಾರತದ ಎರಡನೆಯ ಅಣು ವಿದ್ಯುತ್‌ ಸ್ಥಾವರ ಅಕ್ಟೋಬರ್ 19ರಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಕಾರಣ ಸ್ಥಾವರದ ಮೇಲೆ ನಡೆದಿರುವ ದಾಳಿ ಎಂದು ವರದಿಗಳು ಹೇಳುತ್ತಿವೆ. ತಿಂಗಳ ಮೊದಲೇ ಈ ಬಗ್ಗೆ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿತ್ತು ಎನ್ನಲಾಗಿದೆ.

ಈ ಕುರಿತು ಅಕ್ಟೋಬರ್‌ 29ರಂದು ಮೊದಲು ವರದಿ ಪ್ರಕಟಿಸಿದ ‘ಗ್ರೇಟ್‌ಗೇಮ್‌ ಇಂಡಿಯಾ.ಕಾಂ’, ಈಗ ಸೈಬರ್‌ ದಾಳಿಯ ಹಿಂದೆ ಉತ್ತರ ಕೊರಿಯಾ ಇರಬಹುದು ಮತ್ತು ಸೈಬರ್‌ ದಾಳಿಗೆ ಥೋರಿಯಂ ತಂತ್ರಜ್ಞಾನವನ್ನು ಕದಿಯುವ ಉದ್ದೇಶವೇ ಕಾರಣವಿರಬಹುದು ಎಂದು ಹೇಳಿದೆ.

ಗ್ರೇಮ್‌ಗೇಮ್‌ ಇಂಡಿಯಾ ಮೊದಲು ವರದಿ ಮಾಡಿದ ಕೂಡಂಕುಳಂ ಅಣು ವಿದ್ಯುತ್‌ ಸ್ಥಾವರದ ಅಧಿಕಾರಿಗಳು, ಸುಳ್ಳು ವರದಿ ಎಂದು ತಳ್ಳಿ ಹಾಕಿದ್ದರು. ಮರು ದಿನವೇ ಆಡಳಿತ ಉದ್ದೇಶಗಳಿಗೆ ಹೊಂದಿರುವ ನೆಟ್‌ವರ್ಕ್‌ ಮಾಲ್‌ವೇರ್‌ ದಾಳಿಗೆ ತುತ್ತಾಗಿರುವುದನ್ನು ಖಚಿತಪಡಿಸಿದ್ದರು. ಜೊತೆಗೆ ಸ್ಥಾವರದ ನೆಟ್‌ವರ್ಕ್‌ಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಈ ಬಗ್ಗೆ ಮೊದಲು ಎಚ್ಚರಿಕೆ ಗಂಟೆ ಹೊಡೆದ ತಜ್ಞ ಪುಖರಾಜ್‌ ಸಿಂಗ್ ಅಧಿಕಾರಿಗಳ ಹೇಳಿಕೆಯನ್ನು ಅಲ್ಲ ಗಳೆದಿದ್ದು, ಸ್ಥಾವರದ ನೆಟ್‌ವರ್ಕ್‌ ಕೂಡ ಸೈಬರ್‌ ದಾಳಿಗೆ ಗುರಿಯಾಗಿದೆ ಎಂದಿದ್ದಾರೆ.

ಈ ನಡುವೆ ದಕ್ಷಿಣ ಕೋರಿಯಾ ಮೂಲದ ಸರ್ಕಾರೇತರ ಸಂಸ್ಥೆ ಇಸ್ಯುಮೇಕ್‌ ಲ್ಯಾಬ್ಸ್‌ ಹೆಸರಿನ ಸೈಬರ್‌ ಸೆಕ್ಯುರಿಟಿ ತಜ್ಞ ಸಂಸ್ಥೆ ಅಚ್ಚರಿಯ ಅಂಶಗಳನ್ನು ಹೊರಹಾಕಿದೆ. ಭಾರತದ ವಿದೇಶ ಹಣದ ವಿನಿಮಯ ಮತ್ತು ಫೈನಾನ್ಷಿಯಲ್‌ ಹ್ಯಾಕಿಂಗ್‌ ಚಟುವಟಿಕೆಗಳನ್ನು ಗಮನಿಸುವ ಈ ಸಂಸ್ಥೆ ಅಣು ಸ್ಥಾವರದ ಮೇಲೆ ನಡೆದಿರುವ ದಾಳಿಯ ಹಿಂದೆ ಥೋರಿಯಂ ಆಧರಿತ ಅಣುಶಕ್ತಿಯ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕದಿಯುವುದಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

“ಭಾರತದ ಥೋರಿಯಂ ಆಧರಿತ ಅಣುಶಕ್ತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ಕಳೆದ ವರ್ಷದಿಂದ ಉತ್ತರ ಕೊರಿಯಾದ ಹ್ಯಾಕರ್‌ಗಳು ಸತತವಾಗಿ ದಾಳಿ ನಡೆಸುತ್ತಿದ್ದಾರೆ” ಎಂದು ಐಎಂಎಲ್‌ ಸಂಸ್ಥೆ ತಜ್ಞರು ವಿವರಿಸಿದ್ದರು. ಈ ಕುರಿತು ಟ್ವೀಟ್‌ಗಳನ್ನು ಮಾಡಿದ್ದಾರೆ.

ಐಎಂಎಲ್‌ ನ ಕೆಲವು ಮುಖ್ಯವಾದ ಟ್ವೀಟ್‌ಗಳು

ತಮ್ಮ ಟ್ವೀಟ್‌ಗಳಲ್ಲಿ ವಿವರಗಳನ್ನು ಹಂಚಿಕೊಂಡಿರುವ ಐಎಂಎಲ್‌ ತಜ್ಞರು, ” ಡಿಟ್ರ್ಯಾಕ್‌ ಹೆಸರಿನ ಮಾಲ್‌ವೇರ್‌ ಅನ್ನು ಬಳಸಿ ಅಣು ಸ್ಥಾವರದ ಮೇಲೆ ದಾಳಿ ನಡೆಸಲಾಗಿದೆ. ಮುಖ್ಯವಾಗಿ ಹಿರಿಯ ಅಣು ವಿಜ್ಞಾನಿಗಳಾದ ಅನಿಲ್‌ ಕಾಕೋಡ್ಕರ್‌ ಮತ್ತು ಎಸ್ ಎ ಭಾರದ್ವಾಜ್‌ ಅವರಿಗೆ ಈ ಮೇಲ್‌ ಮೂಲಕ ಮಾಲ್‌ವೇರ್‌ ರವಾನಿಸಿ, ಹ್ಯಾಕ್‌ ಮಾಡುವ ಪ್ರಯತ್ನ ಮಾಡಿದ್ದಾರೆ” ಎಂದು ವಿವರಿಸಿದ್ದಾರೆ.

ಅನಿಲ್‌ ಕಾಕೋಡ್ಕರ್‌ ಮತ್ತು ಎಸ್ ಎಸ್ ಭಾರದ್ವಾಜ್‌.

ಈ ರೀತಿಯಾಗಿ ಹ್ಯಾಕರ್‌ಗಳು ಭಾರತದ ಅಣು ಶಕ್ತಿ ವಲಯದ ವಿಶ್ವಾಸಾರ್ಹ ವಲಯದಲ್ಲಿ ಯಾರನ್ನೂ ಬೇಕಾದರೂ ಸಂಪರ್ಕಿಸಲು ಸಾಧ್ಯವಿದೆ ಎಂಬುದು ಐಎಂಎಲ್‌ ತಜ್ಞರ ಲೆಕ್ಕಾಚಾರ. ಕಳೆದ ಹನ್ನೊಂದು ವರ್ಷಗಳಿಂದ ಉತ್ತರ ಕೋರಿಯಾದ ಹ್ಯಾಕರ್‌ಗಳ ಮೇಲೆ ಕಣ್ಣಿಟ್ಟಿರುವ ಈ ಸಂಸ್ಥೆ ಕಳೆದ ಏಪ್ರಿಲ್‌ ತಿಂಗಳಲ್ಲೇ ಅತ್ಯಾಧುನಿಕ ಭಾರಜಲ ಸ್ಥಾವರದ ವಿನ್ಯಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕದಿಯಲು ನಡೆಸಿದ ಯತ್ನದ ಬಗ್ಗೆ ಟ್ವೀಟ್‌ ಮಾಡಿತ್ತು.

ಥೋರಿಯಂ ಆಧರಿತ ಅಣು ಸ್ಥಾವರ ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಭಾರತ 2012ರಲ್ಲಿ ಮೊದಲ ವಾಣಿಜ್ಯ ಉದ್ದೇಶ ವೇಗದ ಸ್ಥಾವರ ಎಂದು ಘೋಷಣೆ ಮಾಡಿತ್ತು. 2050ರ ಹೊತ್ತಿಗೆ ಭಾರತದ ಶೇ30ರಷ್ಟು ವಿದ್ಯುತ್‌ ಬೇಡಿಕೆಯನ್ನು ಥೋರಿಯಂ ಮೂಲಕ ಪೂರೈಸಲು ಸಾಧ್ಯವೆಂದು ಹೇಳಿತ್ತು. ಭಾರತದಲ್ಲಿ ಅತಿದೊಡ್ಡ ಥೋರಿಯಂ ಸಂಗ್ರಹವಿದ್ದು 1000 ವರ್ಷಗಳ ಕಾಲ ಇಡೀ ಏಷ್ಯಾಕ್ಕೆ ಬೇಕಾಗುವ ವಿದ್ಯುತ್‌ ಪೂರೈಸಬಹುದು ಎಂಬುದು ವಿಜ್ಞಾನಿಗಳ ಅಂದಾಜು. ಈ ಹಿನ್ನೆಲೆಯಲ್ಲಿ ಥೋರಿಯಂ ಆಧರಿತ ಅಣುವಿದ್ಯುತ್‌ ತಂತ್ರಜ್ಞಾನ ಅತಿ ಮಹತ್ವ ಪಡೆದುಕೊಂಡಿದ್ದು, ಹಲವು ದೇಶಗಳು ಕಣ್ಣಿಟ್ಟಿವೆ.