ರಾಮಾನುಜನ್‌ ಜನ್ಮದಿನ | ಅವರ ಕೌಶಲಗಳನ್ನು ತುಲನೆ ಮಾಡಲು ಸಾಧ್ಯವಾಗಿಲ್ಲ!!

ಇಂದು ರಾಷ್ಟ್ರೀಯ ಗಣಿತ ದಿನ. ಮೇಧಾವಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್‌ ಅವರ 134ನೇ ಜನ್ಮ ದಿನ. ಯಾವುದೇ ಔಪಚಾರಿಕ ಶಿಕ್ಷಣ, ಮಾರ್ಗದರ್ಶನಗಳಿಲ್ಲದೆ ಬೆಳೆದ ರಾಮಾನುಜನ್‌ ಜಗತ್ತಿನ ಗಣಿತಜ್ಞರಿಗೆ ಅಚ್ಚರಿಯಾಗಿದ್ದರು. ಹಾರ್ಡಿಯು ರಾಮಾನುಜನ್‌ ಅವರ ಪ್ರತಿಭೆಯನ್ನು ಗುರುತಿಸಿ ಕೇಂಬ್ರಿಡ್ಜ್‌ಗೆ ಕರೆಸಿಕೊಳ್ಳಲು ನಡೆದ ಪ್ರಯತ್ನವನ್ನು ಇಲ್ಲಿರುವ ಭಾಗ ಕಟ್ಟಿಕೊಡುತ್ತದೆ

“ಆ ದಿನಗಳಲ್ಲಿ ಕೇಂಬ್ರಿಡ್ಜ್‌ನ ಗಣಿತವಲಯದಲ್ಲಿದ್ದ ಪ್ರತಿಯೊಬ್ಬರೂ ಸಹ ರಾಮಾನುಜನ್ ಹಾರ್ಡಿಗೆ ಬರೆದಿದ್ದ ಪತ್ರವು ಮೂಡಿಸಿದ ಅಚ್ಚರಿ ಹಾಗೂ ಕೋಲಾಹಲಗಳನ್ನು ಮರೆಯಲಾರರು” ಎಂಬುದಾಗಿ ಇ. ಎಚ್. ನೆವಿಲ್ ನಂತರದ ವರ್ಷಗಳಲ್ಲಿ ನೆನಪಿಸಿಕೊಂಡು ಬರೆಯುತ್ತಾನೆ.

ಹಾರ್ಡಿಯು ಆದನ್ನು ಎಲ್ಲರಿಗೂ ತೋರಿಸಿ ಅದರಲ್ಲಿನ ಕೆಲವು ಭಾಗಗಳನ್ನು ಆಯಾ ವಿಷಯದ ತಜ್ಞರಿಗೂ ಕಳಿಸುತ್ತಾನೆ. (ಇಂತೆಲ್ಲ ಉತ್ಸಾಹ-ಉತ್ಸುಕತೆಗಳ ನಡುವೆ ರಾಮಾನುಜನ್‌ನ ಮೂಲ ಪತ್ರವೂ ಹಾಗೂ ಅದರೊಟ್ಟಿಗೆ ಫಾರ್ಮುಲಾಗಳಿಂದ ತುಂಬಿದ ಒಂದು ಪುಟವೂ ಕಳೆದುಹೋಯಿತು). ಏತನ್ಮಧ್ಯೆ, ಹಾರ್ಡಿಯು ಮತ್ತೊಂದು ದಿಶೆಯಲ್ಲಿ ಕಾರ್ಯೋನ್ಮುಖವಾಗಿ ರಾಮಾನುಜನ್ ಹಾಗೂ ಅವನ ಗಣಿತಕಾರ್ಯದ ಬಗ್ಗೆ ತನಗಿರುವ ಆಸಕ್ತಿಯನ್ನು ಲಂಡನ್ನಿನಲ್ಲಿರುವ ಭಾರತದ ಕಚೇರಿಗೆ ತಿಳಿಸಿ ಅವನನ್ನು ಕೇಂಬ್ರಿಡ್ಡಿಗೆ ಕರೆಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕೆಂಬ ಸಲಹೆಯನ್ನು ಕೊಡುತ್ತಾನೆ.

ತನ್ನ ಹುಟ್ಟುಹಬ್ಬದ ಮಾರನೆಯ ದಿನ, ತೀವ್ರವಾಗಿ ಗಾಳಿ ಬೀಸುತ್ತಿದ್ದ ಫೆಬ್ರವರಿ ಎಂಟನೆಯ ತಾರೀಖಿನ ಶನಿವಾರದಂದು, ಕೇಂಬ್ರಿಡ್ಜ್‌, ಅವನ ಪ್ರತಿಭೆಗಳನ್ನು ಮನಗಂಡಿದ್ದ ನಿರ್ಧಾರವನ್ನು ತಿಳಿಸಲು ಹಾರ್ಡಿಯು ರಾಮಾನುಜನ್‌ಗೆ ಬರೆಯತೊಡಗುತ್ತಾನೆ. ಮೇಲ್ಭಾಗದಲ್ಲಿ “ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್” ಎಂದು ಬರೆದು, ನಂತರ ಅಂದಿನ ದಿನಾಂಕ ತಿಳಿಸಿ ಪತ್ರವನ್ನು ಹೀಗೆ ಮೊದಲು ಮಾಡುತ್ತಾನೆ: “ಡಿಯರ್ ಸರ್, ನಿಮ್ಮ ಪತ್ರ ಹಾಗೂ ಪ್ರಮೇಯಗಳಲ್ಲಿ ನಾನು ಅತೀವ ಆಸಕ್ತಿಯನ್ನು ತಾಳಿದವನಾಗಿದ್ದೇನೆ…” ಹೀಗೆ ಶುರುವಾಗುವ ಪತ್ರವನ್ನು ರಾಮಾನುಜನ್‌, ಕೊನೆಯ ಪಕ್ಷ ಮುಂದುವರೆದು ಓದೇ ತೀರಬೇಕಿದ್ದಿತು.

ಆದರೆ ಮರುವಾಕ್ಯದಲ್ಲಿಯೇ ಹಾರ್ಡಿಯು ತನ್ನ ಎಚ್ಚರದ ಮೊದಲ ಮಾತುಗಳನ್ನು ಸೇರಿಸಿದ್ದನು: “ನಿಮ್ಮ ಕಾರ್ಯದ ಸರಿಯಾದ ಮಲ್ಯಮಾಪನ ಮಾಡಬೇಕಾದರೆ ನಿಮ್ಮ ಕೆಲವು ಹೇಳಿಕೆಗಳ ಸಾಧನಾಕ್ರಮವನ್ನು ನಾನು ನೋಡುವುದರ ಅವಶ್ಯಕತೆಯಿದೆಯೆಂದು ನೀವು ಖಂಡಿತವಾಗಿ ಅರಿತುಕೊಳ್ಳುವಿರಿ ಎಂದು ಭಾವಿಸುತ್ತೇನೆ.”

ಈ ಸಾಧನಾಕ್ರಮ’ ಎಂಬ ಪದವು ರಾಮಾನುಜನ್‌ನ ಗಣಿತ ಜೀವನದಲ್ಲಿ ಗೋಚರಿಸಿದ್ದುದು ಇದೇ ಮೊದಲಾಗಿರಲಿಲ್ಲ. ಆದರೆ ಅದು ಈ ಮುಂಚೆ ಎಂದೂ ಇಷ್ಟೊಂದು ತುರ್ತು ಮತ್ತು ಹಿರಿಮೆಗಳನ್ನು ಗಳಿಸಿರಲಿಲ್ಲ, ಗಣಿತದ ಶೋಧನೆಗಳನ್ನು ಮುಂದಿಡಲು ರಾಮಾನುಜನ್‌ಗೆ ಮಾದರಿಯೆನಿಸಿದ್ದ ಕಾರ್ರ್‌ನ ಸಿನಾಪ್ಸಿಸ್‌ನ ಯಾವ ಸಾಧನಾಕ್ರಮವನ್ನೂ ಕೇವಲ ಒಂದೋ ಎರಡೋ ಪದಗಳಿಂದ ಸೂಚಿಸುವುದರ ಹೊರತಾಗಿ, ಕೊಟ್ಟಿರಲಿಲ್ಲ. ಕಾರ್ರ್‌ಗೆ ಅಷ್ಟು ಮಾತ್ರ ಸಾಕೆನಿಸಿದ್ದಿತು. ಅಂತೆಯೇ ರಾಮಾನುಜನ್‌ಗೂ ಸಹ, ಈಗ ಹಾರ್ಡಿಯು ಅಷ್ಟೇ ಸಾಕಾಗುವುದಿಲ್ಲ ಎನ್ನುತ್ತಿದ್ದನು. ಅದೆಷ್ಟೇ ಸತ್ಯವೆಂದು ತೋರಿಬಂದರೂ ಸಹ ಒಂದು ಶೋಧನೆಯನ್ನು ತಿಳಿಸಲು ಹೇಳಿಕೆಯು ಮಾತ್ರ ಸಾಕಾಗಿರಲಿಲ್ಲ. ಮತ್ತು ತನ್ನ ಪತ್ರದುದ್ದಕ್ಕೂ ಇದೇ ಪಲ್ಲವಿಯನ್ನು ರಾಮಾನುಜನ್‌ಗೆ ಕರೆ ಪದೇ ಆರುಪುತ್ತಿದ್ದನು:

ವಿಶೇಷವಾಗಿ, ನಿಮ್ಮ ಹೇಳಿಕೆಗಳನ್ನು ನೀವು ಸಾಧಿಸಿರುವುದನ್ನೂ ನಾನು ನೋಡಬೇಕು. ನೀವು ಅರಿಯುವಂತೆ ಈ ಸಿದ್ಧಾಂತದಲ್ಲಿ ಎಲ್ಲವೂ ಸಾಧನಾಕ್ರಮದ ಪ್ರತಿಯೊಂದು ಹಂತದ ಸಮರ್ಪಕತೆಯನ್ನು ಅವಲಂಬಿಸಿರುತ್ತದೆ.

ಅದೇ ಮತ್ತೊಂದು ಕಡೆ:

ನಿಮ್ಮ ಸಾಧನಾಕ್ರಮವು ಹಂತಹಂತಗಳಲ್ಲಿಯೂ ಸಮರ್ಪಕವಾಗಿದೆಯೆಂದು ಭಾವಿಸಿ…

ಮತ್ತೆ ಮಗದೊಂದು ಕಡೆ:

ಇಂತೆಲ್ಲ ಪ್ರಶ್ನೆಗಳಲ್ಲಿ, ಖಂಡಿತವಾಗಿಯೂ, ಎಲ್ಲವೂ ಸುಸ್ಥಿರವಾದ ತರ್ಕವನ್ನೇ ಅವಲಂಬಿಸಿರುತ್ತದೆ.

ಒಟ್ಟಾರೆಯಲ್ಲಿ ಹಾರ್ಡಿಯ ಪತ್ರದಲ್ಲಿ ಉತ್ತೇಜನ ನೀಡುವ ಪದಗಳು ಧಾರಾಳವಾಗಿದ್ದವು. ರಾಮಾನುಜನ್‌ನ ಕೆಲವು ಪ್ರಮೇಯಗಳು ಒಂದೇ ಆದಾಗಲೇ ಸುಪರಿಚಿತವಾಗಿದ್ದವು, ಇಲ್ಲ ಪರಿಚಿತ ಪ್ರಮೇಯಗಳ ಸರಳ ವಿಸ್ತೃತ ರೂಪವಾಗಿದ್ದವು. ಆದರೂ ಕೂಡ, ಹಾರ್ಡಿಯ ಔದಾರ್ಯದ ನುಡಿಗಳು ಇವುಗಳೂ ಒಂದು ರೀತಿಯ ಸಾಧನೆಯನ್ನು ಬಿಂಬಿಸುತ್ತವೆಯೆಂದು ಹೇಳುತ್ತಿದ್ದವು. “ನೀವು ತಿಳಿಸಿರುವಂತೆ ತಮಗೆ ಸೂಕ್ತ ಶಿಕ್ಷಣದ ಕೊರತೆಯಿರುವವರ ಉಲ್ಲೇಖವನ್ನು ಪದಶಃ ಅರ್ಥೈಸಿದರೂ ಸಹ, ಇಂತಹ ಕುತೂಹಲಕರ ಶೋಧನೆಗಳನ್ನು ನೀವು ಮರುಸೃಷ್ಟಿಸಿರುವುದು ನಿಮಗೆ ಸಲ್ಲಲೇಬೇಕಾದ ಗೌರವವೆಂದು ನಾನು ಪ್ರತ್ಯೇಕವಾಗಿ ತಿಳಿಸಬೇಕಾದ ಆವಶ್ಯಕತೆಯಿಲ್ಲ.”

ಇದನ್ನು ಹೇಳಿದ ಮರುಕ್ಷಣದಲ್ಲೇ, ರಾಮಾನುಜನ್‌ನ ಇನ್ನೂ ಕೆಲವು ಪ್ರಮೇಯಗಳು ಕ್ಷುಲ್ಲಕವೆನಿಸಿದರೂ ಸಹ ವಿಸ್ತೃತ ಸಾಧನಾಕ್ರಮಗಳನ್ನು ಉದಾಹರಿಸುತ್ತಿದ್ದು ತೋರಿದುದಕ್ಕಿಂತಲೂ ಬಹಳ ಮುಖ್ಯವಾಗಿರಬಹುದೆಂಬ ಶಂಕೆಯನ್ನು ಹಾರ್ಡಿಯು ವ್ಯಕ್ತಪಡಿಸುತ್ತಿದ್ದನು. “ನೀವು ನಿಮ್ಮ ಶೋಧನೆಗಳನ್ನು ಯಾವಾಗಲೂ ಕೆಲವೊಂದು ರೂಪದಲ್ಲೇ ತಿಳಿಸುತ್ತಿದ್ದು ಅವುಗಳನ್ನು ಸರಿಗಾಣುವ ಕಾರ್ಯವು ಇನ್ನೂ ಕಷ್ಟಕರವಾಗಿರುತ್ತದೆ.”

ಕೇಂಬ್ರಿಡ್ಜ್‌ ವಿವಿಯಲ್ಲಿ ರಾಮಾನುಜನ್‌ ( ಮುಂದಿನ ಸಾಲು, ನಾಲ್ಕನೆಯವರು)

ಅಂತೆಯೇ, ಒಂದು ಅನುಬಂಧದ ರೂಪದಲ್ಲಿ “ಲಿಟ್ಲ್‌ ಪುಡ್ ಸೂಚಿಸುವ ಕೆಲವು ಟಿಪ್ಪಣಿಗಳು” ಎಂದು ಸೇರಿಸಿ ಹಾರ್ಡಿಯು ರಾಮಾನುಜನ್‌ನ ಕಾರ್ಯದ ಬಗ್ಗೆ ಲಿಟ್ಲ್‌ವುಡ್‌ಗಿದ್ದ ಕುತೂಹಲವನ್ನೂ ತಿಳಿಸುತ್ತಾನೆ. ಈ ಟಿಪ್ಪಣಿಗಳಲ್ಲಿ ಬಹುತೇಕ ಅವಿಭಾಜ್ಯ ಸಂಖ್ಯೆಗಳ ಕುರಿತಾದ ರಾಮಾನುಜನ್‌ನ ಕಾರ್ಯದ ಉಲ್ಲೇಖವಿದ್ದು ಆ ವಿಷಯದಲ್ಲಿ ಆಗಷ್ಟೇ ಮಹತ್ತರವಾದ ಸಾಧನೆಮಾಡಿದ್ದ ಲಿಟ್ಲ್‌ವುಡ್‌ ಸಹ ತನ್ನ ಸಂಶೋಧನೆಯನ್ನು ಬಹುಶಃ ಇನ್ನೂ ಪ್ರಕಟಿಸಿರಲಿಲ್ಲ. ಹಾಗಾಗಿ ಹಾರ್ಡಿಯು ಲಿಟ್ಸ್‌ವುಡ್‌ನ ಸಂದೇಶವನ್ನು ತಿಳಿಸುವಾಗ ಅತಿ ಉತ್ಸುಕತೆಯಿಂದ ಭಿನ್ನವಿಸಿಕೊಂಡಿದ್ದನು: “ಅವಿಭಾಜ್ಯ ಸಂಖ್ಯೆಗಳ ಬಗೆಗಿನ ನಿಮ್ಮ ಫಾರ್ಮುಲಾವನ್ನು ದಯವಿಟ್ಟು ಕಳಿಸಿಕೊಡಿ. ಹಾಗೂ… ” ಮತ್ತೆ ಇಲ್ಲೂ ಸಹ, ” ಆದಷ್ಟು ಬೇಗ ಎಷ್ಟು ಸಾಧನಾಕ್ರಮವನ್ನು ತಿಳಿಸಬಹುದೋ ಅಷ್ಟನ್ನು ತಿಳಿಸಿ” ಎಂದು ಸಾಧನಾಕ್ರಮದ ತುರ್ತನ್ನು ಒತ್ತಿ ಹೇಳುತ್ತಿದ್ದನು.
ಹಾರ್ಡಿಯ ಇಡೀ ಪತ್ರವೇ ಹಾಗಿದ್ದಿತು; ಅಂದರೆ, ಅದಮ್ಯವಾದ ಉತ್ಸಾಹದಿಂದ ಗಮನಿಸದಿದ್ದರೆ ಅವನನ್ನು ಒಬ್ಬ ಮಂಕುದಿಣ್ಣೆ ಎನ್ನುವ ಹಾಗಿದ್ದಿತು. ಪುಟ 6ರ ಕೆಳಗೆ ಹಾರ್ಡಿಯು, ”ನೀವು ಆದಷ್ಟು ಬೇಗ ನಿಮ್ಮ ಕೆಲವಾದರೂ ಸಾಧನಾಕ್ರಮವನ್ನೂ ತಿಳಿಸಿ ತದನಂತರ ಅವಿಭಾಜ್ಯಗಳ ಹಾಗೂ ಅಪಸರಣ ಸರಣಿಗಳ ನಿಮ್ಮ ಕಾರ್ಯವನ್ನು ವಿವರವಾಗಿ ನಿಮಗೆ ಬಿಡುವಾದಾಗ ಖಂಡಿತವಾಗಿಯೂ ಕಳಿಸುವಿರೆಂದು ಭಾವಿಸುತ್ತೇನೆ” ಎಂದು ಬರೆಯುತ್ತಾ ಈ ಸಾಲುಗಳನ್ನು ಒತ್ತಿ ಹೇಳಲು ಅವುಗಳನ್ನು ಅಂಡರ್‌ಲೈನ್‌ ಮಾಡಿದ್ದನು”

ಮತ್ತು ಅಲ್ಲಿಗೇ ನಿಲ್ಲಿಸದೇ ಹೀಗೆ ಮುಂದುವರೆದಿದ್ದನು: “ನೀವು ಪ್ರಕಟಿಸಲು ಯೋಗ್ಯವಾದ ಆರ್ಯವನ್ನು ಸಾಕಷ್ಟು ಮುಡಿಯೇ ಇರಬೇಕೆಂದು ನನಗೆ ಅನಿಸುತ್ತದೆ; ಅವುಗಳ ಸಮಾಧಾನಕರ ಅಥವಾ ಕ್ರಮವನ್ನು ನೀವು ಒದಗಿಸುವಿರೇ ಆದರೆ ಅವುಗಳನ್ನು ಸೂಕ್ತವಾಗಿ ಚಚಗಿರಿಸುವ ಕೆಲಸವನ್ನು ನಾನು ಬಹಳ ಸಂತೋಷದಿಂದ ಮಾಡುತ್ತೇನೆ.”

ಹಾರ್ಡಿಯ ಪತ್ರವು ಫೆಬ್ರವರಿ ತಿಂಗಳ ಮೂರನೆಯ ವಾರದಲ್ಲಿ ರಾಮನುಜನ್‌ನ ಕೈಸೇರಿರಬಹದು. ಇದೇ ರಾಮನುಜನ್‌ನನ್ನು ಇಂಗ್ಲೆಂಡಿಗೆ ಕರೆಸಿಕೊಳ್ಳುವ ಅನುಮೋದನೆಯು ಮದರಾಸನ್ನು ಅದಕ್ಕೂ ಮುಂಚೆಯೇ ತಲುಪಿದ್ದಿತು. ರಾಮಾನುಜನ್‌ಗೆ ಪತ್ರ ಬರೆಯುವ ಸುಮಾರು ಒಂದು ವಾರ ಮುನ್ನವೇ ಹಾರ್ಡಿಯು ಇಂಡಿಯಾ ಆಫೀಸನ್ನು ಸಂಪರ್ಕಿಸಿದ್ದು, ಫೆಬ್ರವರಿ 3ನೇ ತಾರೀಖಿನ ಹೊತ್ತಿಗೆ ಮಿಸ್ಟರ್ ಮ್ಯಾಲೆಟ್ ಎಂಬುವರು ಮದರಾಸಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗಿದ್ದ ಸಲಹಾ ಮಂಡಳಿಯ ಕಾರ್ಯದರ್ಶಿಗಳಾದ ಆರ್ಥರ್ ಡೇವಿಸ್‌ರಿಗೆ ಅದಾಗಲೇ ಬರೆದಾಗಿದ್ದಿತು. ನಂತರ ಆದೇ ತಿಂಗಳಿನಲ್ಲಿ ಡೇವಿಸ್‌ರು ರಾಮಾನುಜನ್‌ನನ್ನು ಭೇಟಿ ಮಾಡಿದ್ದರು ಮತ್ತು ಸರ್ ಫ್ರಾನ್ಸಿಸ್ ಸಿಂಗ್‌ರ ಆಜ್ಞೆಯ ಮೇರೆಗೆ ನಾರಾಯಣ ಅಯ್ಯರ್ ರಾಮಾನುಜನ್‌ಗೆ ಹಾರ್ಡಿಯು ಅವನನ್ನು ಕೇಂಬ್ರಿಡ್ಜ್ಗೆ ಬರಮಾಡಿಕೊಳ್ಳುವ ಹುನ್ನಾರದಲ್ಲಿದ್ದಾನೆಂದು ತಿಳಿಸಿಯೂ ಆಗಿದ್ದಿತು.

ಆದರೆ ರಾಮಾನುಜನ ಬರುತ್ತಿಲ್ಲವೆಂಬುದು ಹಾರ್ಡಿಗೆ ಗೊತ್ತಾಯಿತು. ಧಾರ್ಮಿಕ ಔಚಿತ್ಯ ಅಥವಾ ಸಾಂಸ್ಕೃತಿಕ ಹಿಂಜರಿಕೆಗಳು ಇದಕ್ಕೆ ಅಡ್ಡ ಬಂದಿದ್ದವು; ಬ್ರಾಹ್ಮಣರು ಮತ್ತು ಸಂಪ್ರದಾಯಸ್ಥರಾದ ಇತರ ಹಿಂದೂಗಳು ಸಮುದ್ರ ದಾಟಿ ವಿಲಾಯತಿಗೆ ಪ್ರಯಾಣ ಬೆಳೆಸುವಂತಿರಲಿಲ್ಲ. ಅಂತಹುದರ ಸೂಕ್ತಾಸೂಕ್ತತೆಗಳು ದೀರ್ಘಕಾಲ ಚರ್ಚೆಯಲ್ಲಿದ್ದಂತಿದ್ದವು.

ಈ ನಡುವೆ ಮದರಾಸಿನಲ್ಲಿ 1910ರ ಕೊನೆಯಲ್ಲಿ ರಾಮಚಂದ್ರ ರಾಯರೊಡನೆ ರಾಮಾನುಜನ್ ಮಾಡಿದ ಭೇಟಿಯು ಯುಕ್ತಾಯುಕ್ತತೆಗಳ ಜಿಜ್ಞಾಸೆಯಲ್ಲಿ ನಿರ್ಣಾಯಕ ಹಂತವನ್ನು ತಲುಪಿದ್ದು ನಾಜೂಕಾದ ಸ್ಥಿತಿಯಲ್ಲಿ ನಿಂತಿದ್ದ ತಕ್ಕಡಿಯು ರಾಮಾನುಜನ್‌ನ ಕಡೆಗೆ ಖಚಿತವಾಗಿ ಇಳಿಯಿತು. ಅದುವರೆಗೂ ಅದು ಕಾಯುತ್ತಿದ್ದುದು ಸಂಪೂರ್ಣವಾಗಿ ನಿರ್ವಿವಾದ ಅರ್ಹತೆಗಳುಳ್ಳ ಗಣಿತಜ್ಞನೊಬ್ಬನ ತೀರ್ಪಿನ ಭಾರವನ್ನು ಮಾತ್ರ. ಅದನ್ನೀಗ ಹಾರ್ಡಿಯ ಪತ್ರವು ಒದಗಿಸಿದ್ದಿತು.

ಫೆಬ್ರವರಿ ೨೫ರಂದು ಗಿಲ್ಬರ್ಟ್ ವಾಕರ್‌ಗೆ ರಾಮಾನುಜನ್‌ನ ಕಾರ್ಯವು ತೋರಿಸಲ್ಪಟ್ಟಿತು. ಸೀನಿಯರ್ ರಾಂಗ್ಲರ್‌ ಆಗಿದ್ದ ವಾಕರ್‌, ಟ್ರಿನಿಟಿಯಲ್ಲಿ ಫೆಲೋ ಆಗಿದ್ದವರೂ ಮತ್ತು ಗಣಿತದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರೂ ಆಗಿದ್ದು ಆ ಹೊತ್ತಿಗೆ ನಲವತ್ತೈದು ವರುಷದವರಾಗಿದ್ದು ಸಿಮ್ಲಾದಲ್ಲಿದ್ದ ಇಂಡಿಯನ್‌ ಮೀಟಿರಿಯಲಾಜಿಕಲ್‌ ಡಿಪಾರ್ಟ್‌ಮೆಂಟಿನ ಮುಖ್ಯಸ್ತರಾಗಿದ್ದರು. ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಸಮಯದಲ್ಲಿ ಹಾಗೂ ಹಲವು ವರ್ಷಗಳ ತಪ್ಪು ಭವಿಷ್ಯವಾಣಿಗಳಿಂದ ಕುಪಿತರಾಗಿ ಪತ್ರಿಕೆಯವರು ಎಬ್ಬಿಸಿದ ಗಲಭೆಯ ಹಿನ್ನೆಲೆಯಲ್ಲಿ ಆಗ ತಾನೆ ರಾಯಲ್‌ ಸೊಸೈಟಿಯ ಫೆಲೋ ಆಗಿ ನೇಮಕರಾಗಿದ್ದ ವಾಕರ್‌ರಂತಹ ವೃತ್ತಿಗಣಿತಜ್ಞರು ಅಂತಹದೊಂದು ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲರೆಂದು ಯೋಚಿಸಲಾಗಿದ್ದಿತು.

ರಾಬರ್ಟ್‌ ಕಾನಿಗೆಲ್ ಕೃತಿ ಆಧರಿಸಿದ ಚಿತ್ರದ ಟ್ರೇಲರ್‌

ಈಗ ವಾಕರ್‌ ಮದರಾಸು ಮಾರ್ಗವಾಗಿ ಪಯಾಣಿಸುತ್ತಿದ್ದುದರಿಂದ ರಾಮಾನುಜನ್‌ನ ನೋಟು ಪುಸ್ತಕಗಳನ್ನು ನೋಡಿ ಪರಿಶೀಲಿಸಲು ಅವರನ್ನು ಸರ್‌ ಫ್ರಾನ್ಸಿಸ್‌ ಕೋರಿದ್ದರು. ಮದರಾಸು ವಿಶ್ವವಿದ್ಯಾಲಯದ ರೆಜಿಸ್ಟ್ರಾರರಿಗೆ ಹೀಗೆ ಬರೆದಿದ್ದರು:

ನಾನು ಕಂಡ ಆತನ ಕಾರ್ಯದ ಲಕ್ಷಣಗಳು ಸ್ವಂತಿಕೆಯಲ್ಲಿ ಅವನ್ನು ಕೇಂಬ್ರಿಡ್ಜ್‌ ಕಾಲೇಜಿನ ಗಣಿತ ವಿದ್ಯಾರ್ಥಿಯೊಬ್ಬನ ಕಾರ್ಯಕ್ಕೆ ಹೋಲಿಸಬಹುದು ಎನ್ನುವಷ್ಟು ನನ್ನನ್ನು ಪ್ರಭಾವಿಸಿದೆ; ಆಧರೆ ರಿಸಲ್ಟ್‌ಗಳನ್ನುಸಾರ್ವತ್ರಿಕವಾಗಿ ಖಾತ್ರಿಗೊಳಿಸಿ ಒಪ್ಪಿ ಸ್ವೀಕರಿಸುವ ಮುನ್ನ, ಇಂತಹ ಸನ್ನಿವೇಶಗಳಲ್ಲಿ ಬಯಸುವಂತೆ ಅವುಗಳಲ್ಲಿ ಅವಶ್ಯವಾಗಿ ಇರಲೇಬೇಕಾದ ಪರಿಪೂರ್ಣತೆಯಲ್ಲಿಯೂ ಹಾಗೂ ಖಚಿತತೆಯೂ ಕೊರತೆ ಇರಬಹುದೆಂದು ತೋರುತ್ತದೆ. ಆತನು ಮಾಡಿರುವ ಕಾರ್ಯದ ವಿಷಯಗಳಲ್ಲಿ ನಾನು ವಿಶೇಷವಾದ ಅಧ್ಯಯನವನ್ನು ಮಾಡಿಲ್ಲವಾದ್ದರಿಂದ ಅವನ ಕೌಶಲಗಳನ್ನು ತಕ್ಕಮಟ್ಟಿಗೆ ತುಲನೆಮಾಡಿ ಅವನನ್ನು ಯುರೋಪಿನ ಕೀರ್ತಿ ಗೌರವಗಳ ಮಟ್ಟಕ್ಕೆ ಹೋಲಿಸಿ ನೋಡಲು ಸಾಧ್ಯವಾಗಿಲ್ಲ. ಆದರೆ ವಿಶ್ವವಿದ್ಯಾಲಯವು ಎಸ್‌ ರಾಮಾನುಜನ್‌ನನ್ನು ಕೆಲವು ವರ್ಷಗಳ ಕಾಲ ಜೀವನೋಪಾಯದ ಆತಂಕಗಳಿಲ್ಲದೇ ಗಣಿತದೊಂದಿಗೆ ವ್ಯವಹರಿಸಲು ಬಿಡುವುದಕ್ಕೆ ಅನುವು ಮಾಡಿಕೊಡಬೇಕೆಂಬ ವಿಷಯವು ನನಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ.

ಅವರ ಒಕ್ಕಣೆಯೇ ತಿಳಿಸಿದಂತೆ, ರಾಮಾನುಜನ್‌ ಕಾರ್ಯವನ್ನು ನೋಡಿದ ಯಾರಿಗಾದರೂ ಅನಿಸುವಂತೆ, ವಾಕರ್‌ ಸಹ ದಿಗ್ಬ್ರಮೆಗೊಂಡಿದ್ದರು. ಅವರೊಬ್ಬ ಶುದ್ಧ ಗಣಿತಜ್ಞರಾಗಿರಲಿಲ್ಲವೆಂಬುದು ಸರ್ವವಿದಿತವಾದ ವಿಷಯ. ಯುವಕರಾಗಿದ್ದಾಗ, ಅವರು ಗೈರೊಸ್ಕೋಪ್‌ಗಳಲ್ಲಿಯೂ ಮತ್ತು ವಿದ್ಯುದಯಸ್ಕಾಂತತೆಯಲ್ಲಿಯೂ ಆಸಕ್ತಿ ತೋರಿದ್ದರು. ಬೂಮರ್ಯಾಂಗ್‌ಗಳ ಮೇಲಾಗುವ ಏರೋಡೈನಾಮಿಕ್‌ ಶಕ್ತಿಗಳ ಅಧ್ಯಯನದಿಂದ ಅವರಿಗೆ ಕಿರಿವಯಸ್ಸಿನಲ್ಲಿಯೇ ಪ್ರಾಮುಖ್ಯತೆ ದೊರಕಿದ್ದು ಅದನ್ನು ಅವರು ಪದವಿಪೂರ್ವ ತರಗತಿಯ ಸಮಯದಲ್ಲಿ ಕೇಂಬ್ರಿಡ್ಜ್‌ ಬ್ಯಾಕ್‌ಗಳ್‌ ಮೇಲೆ ಪ್ರಯೋಗ ಮಾಡಲು ಬಯಸಿದ್ದರು. ಈಗ, ಭಾರತದ ಮುಖ್ಯ ಹವಾಮಾನಗಾರರಾಗಿ ಅವರ ಪ್ರಸ್ತುತ ಲೇಖನವು, “ಉತ್ತರ ಭಾರತದ ಶೀತಲ ಚಂಡಮಾರುತಗಳು” ಎಂಬ ಶೀರ್ಷಿಕೆಯನ್ನು ಹೊಂದಿದ್ದಿತು. ಅನ್ಯ ಪದಗಳಲ್ಲಿ ಹೇಳುವುದಾದರೆ, ಅವರ ಒಲವುಗಳು ಗಣಿತದ ಅನ್ವಯದೆಡೆಗೇ ಅಧಿಕವಾಗಿದ್ದು, ಅವರ ಕಾರ್ಯವು ರಾಮಾನುಜನ್‌ನ ಕಾರ್ಯದಿಂದ ಎಷ್ಟು ದೂರವಿರಬಹುದಾಗಿತ್ತೊ ಅಷ್ಟು ದೂರವಿದ್ದಿತು. ಹಾಗಾಗಿ, ‘ನಾನು ವಿಶೇಷ ಅಧ್ಯಯನವನ್ನು ಮಾಡಿರುವುದಿಲ್ಲವಾದ್ದರಿಂದ..” ಎಂಬ ಅವರ ಹೇಳಿಕೆಯು ಹೇಳಬೇಕಾದುದಕ್ಕಿಂತ ಬಹಳ ಕಡಿಮೆಯನ್ನೇ ತಿಳಿಸುತ್ತಿದ್ದು, ‘ ಅವರ ಕೌಶಲಗಳನ್ನು ತಕ್ಕಮಟ್ಟಿಗೆ ತುಲನೆ ಮಾಡಲು ಸಾಧ್ಯವಾಗಿಲ್ಲ” ಎಂಬುದು ಸೀದಾಸಾದ ಸತ್ಯಸಂಗತಿಯಾಗಿದ್ದಿತು.

ರಾರ್ಬಟ್‌ ಕಾನಿಗೆಲ್‌ ಅವರ, ‘ ದಿ ಮ್ಯಾನ್‌ ಹು ನ್ಯೂ ಇನ್‌ಫಿನಿಟಿ: ಎ ಲೈಫ್‌ ಆಪ್‌ ದಿ ಜೀನಿಯಸ್‌ ರಾಮಾನುಜನ್‌’ ಕೃತಿಯನ್ನು ಸಿ ಎಸ್ ಅರವಿಂದ ಅವರು ಕನ್ನಡಕ್ಕೆ ‘ಅನಂತದ ಒಡನಾಟದಲ್ಲಿ’ ಹೆಸರಿನಲ್ಲಿ ಅನುವಾದಿಸಿದ್ದು, ಇದು ಆ ಕೃತಿಯಿಂದ ಆಯ್ದುಕೊಂಡ ಭಾಗವಾಗಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: