ತೆರಿಗೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಫೇಸ್‌ಬುಕ್‌ ಮೆಟಾ ಪಿಕ್ಸೆಲ್‌!

ತೆರಿಗೆದಾರರ ಖಾಸಗಿ ಹಾಗೂ ಅತ್ಯಂತ ಸೂಕ್ಷ್ಮವಾದ ಮಾಹಿತಿಯನ್ನು ಕಂಪನಿಗಳು ಫೇಸ್‌ಬುಕ್‌ನೊಂದಿಗೆ ಹಂಚುಕೊಳ್ಳುತ್ತಿರುವ ಮಾಹಿತಿಯನ್ನು ತನಿಖೆಯೊಂದು ಬಯಲು ಮಾಡಿದೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆ!

ಬಳಕೆದಾರರನ್ನು ರಾಜಕೀಯ ಉದ್ದೇಶಕ್ಕೆ ಬಳಸಿದ ಗಂಭೀರ ಆರೋಪ ಫೇಸ್‌ಬುಕ್‌ ಮೇಲಿದೆ. ಅದಿನ್ನು ಬಗೆಹರಿದಿಲ್ಲ. ಹಲವು ಕಡೆಗಳಲ್ಲಿ ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡುತ್ತಿರುವ ಆರೋಪವೂ ಇದೆ. ಈಗ ಮತ್ತೊಂದು ಆಘಾತಕಾರಿ ಸಂಗತಿ ಹೊರಬಿದ್ದಿದೆ. ಅಮೆರಿಕದ ದಿ ಮಾರ್ಕ್ಅಪ್‌ ಸಂಸ್ಥೆ ತನಿಖಾ ವರದಿಯೊಂದನ್ನು ಹೊರಹಾಕಿದ್ದು, ಇದರ ಪ್ರಕಾರ ಅಮೆರಿಕದ ಪ್ರತಿಷ್ಠಿತ ತೆರಿಗೆ ಪಾವತಿಗೆ ನೆರವಾಗುವ ಸಂಸ್ಥೆಗಳನ್ನು ಫೇಸ್‌ಬುಕ್‌ ಬಳಸುತ್ತಿದೆ!

ಹೌದು ಟ್ಯಾಕ್ಸ್ಆಕ್ಟ್‌, ಟ್ಯಾಕ್ಸ್‌ಸ್ಲೇಯರ್, ಮತ್ತು ಎಚ್‌ ಅಂಡ್‌ ಆರ್‍‌ ಬ್ಲಾಕ್‌ ತನ್ನ ತೆರಿಗೆದಾರರ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಫೇಸ್‌ಬುಕ್‌ಗೆ ಮಾರಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ ಈ ಮಾಹಿತಿ ಆಧರಿಸಿ, ಬಳಕೆದಾರರನ್ನು ತನ್ನ ನೇರ ಜಾಹೀರಾತು ತಂತ್ರಕ್ಕೆ ಗುರಿಯಾಗಿಸುವುದಕ್ಕೆ ಬಳಸುತ್ತಿದೆ ಎಂದು ಈ ವರದಿ ವಿವರಿಸಿದೆ.

“ದಿ ವರ್ಜ್‌” ಈ ಕುರಿತು ಸುದೀರ್ಘ ವರದಿ ಪ್ರಕಟಿಸಿದೆ. ಅಮೆರಿಕದ ತೆರಿಗೆದಾರರು ಆನ್‌ಲೈನ್‌ ಮೂಲಕ ತೆರಿಗೆ ಪಾವತಿ ಮಾಡುತ್ತಾರೆ. ಈ ಆನ್‌ಲೈನ್‌ ತಾಣಗಳಲ್ಲಿ ಫೇಸ್‌ಬುಕ್‌ನ ಮೆಟಾ ಪಿಕ್ಸೆಲ್‌ ಎಂಬ ಕೋಡ್‌ ಅನ್ನು ಬಳಸಲಾಗುತ್ತದೆ. ಕೋಡ್‌ ತೆರಿಗೆ ಪಾವತಿ ಮಾಡುವವರ ಹೆಸರು, ಅವರ ಈ ಮೇಲ್ ವಿಳಾಸದಂತಹ ಸಾಮಾನ್ಯ ಮಾಹಿತಿಯ ಜೊತೆಗೆ, ಅವರ ಆದಾಯ, ತೆರಿಗೆ ಪಾವತಿಯ ಸ್ಥಿತಿ, ರೀಫಂಡ್‌ ಆದ ಹಣ, ಕುಟುಂಬದ ಅವಲಂಬಿತ ಸದಸ್ಯರು, ಕಾಲೇಜ್‌ ಸ್ಕಾಲರ್‍‌ಶಿಪ್‌ ಮೊತ್ತ ಇತ್ಯಾದಿ ವಿವರಗಳನ್ನು ಸಂಗ್ರಹಿಸಿ ಫೇಸ್‌ನಬುಕ್‌ಗೆ ಕೊಡುತ್ತಿದೆ.

ಹೀಗೆ ಪಡೆದುಕೊಳ್ಳುವ ಮಾಹಿತಿಯನ್ನು ಫೇಸ್‌ಬುಕ್‌, ಜಾಹೀರಾತು ಅಲ್ಗರಿದಮ್‌ನ ಬಲಪಡಿಸುವುದಕ್ಕೆ ಬಳಸುತ್ತಿದೆ. ಎಷ್ಟರ ಮಟ್ಟಿಗೆ ಈ ತಂತ್ರವನ್ನು ಅನುಸರಿಸಲಾಗುತ್ತಿದೆ ಎಂದರೆ, ತೆರಿಗೆದಾರರು ಫೇಸ್‌ಬುಕ್‌ನಲ್ಲಿ ಇಲ್ಲದಿದ್ದರೂ, ಮೆಟಾಸಂಸ್ಥೆಯ ಬೇರಾವುದೇ ತಾಣದಲ್ಲಿದ್ದರೂ ಅವರನ್ನು ಗುರಿಯಾಗಿಸಿಕೊಂಡು ಜಾಹೀರಾತು ತಳ್ಳಲಾಗುತ್ತಿದೆ!!

ದಿ ಮಾರ್ಕಪ್‌ನ ತನಖೆಯಂತೆ ಅಮೆರಿದಲ್ಲಿ 15 ಕೋಟಿ ಜನ ತೆರಿಗೆ ಕಟ್ಟುತ್ತಾರೆ. ಬಳಕೆದಾರರೊಬ್ಬರು ಟ್ಯಾಕ್ಸ್‌ ಆಕ್ಟ್‌ ಎಂಬ ತಾಣದ ಮೂಲಕ ತೆರಿಗೆ ಪಾವತಿಸುವುದಕ್ಕೆ ಮುಂದಾದರೆ, ತೆರಿಗೆ ಪಾವತಿಗಾಗಿ ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗುತ್ತದೆ. ಎಷ್ಟು ಹಣ ಗಳಿಸುತ್ತಾರೆ, ಎಷ್ಟು ಹಣವನ್ನು ಹೂಡಿಕೆ ಮಾಡುತ್ತಾರೆ ಇತ್ಯಾದಿ. ಟ್ಯಾಕ್ಸ್‌ ಆಕ್ಟ್‌ ತಾಣದಲ್ಲಿರುವ ಪಿಕ್ಸೆಲ್‌ ಕೋಡ್‌, ಈ ತಾಣದಿಂದ ತೆರಿಗೆ ಪಾವತಿಯ ಸ್ಟೇಟಸ್‌, ಒಟ್ಟು ಆದಾಯ, ರೀಫಂಡ್‌ ಮೊತ್ತದ ವಿವರಗಳನ್ನು ಸಂಗ್ರಹಿಸಿ ಫೇಸ್‌ಬುಕ್‌ಗೆ ನೀಡುತ್ತದೆ. ಈ ತಾಣದ ಮೂಲಕ ಅಮೆರಿಕದ 30 ಲಕ್ಷ ಮಂದಿ ತೆರಿಗೆ ಪಾವತಿ ಮಾಡುತ್ತಾರೆ.

ಇದೇ ರೀತಿ ಕಳೆದ ಟ್ಯಾಕ್ಸ್‌ಸ್ಲೇಯರ್‍‌ ತಾಣಗಳ ಮೂಲಕ 1 ಕೋಟಿ ಜನ ತೆರಿಗೆಯನ್ನು ಪಾವತಿಸಿದ್ದಾರೆ. ಈ ತಾಣವು ತೆರಿಗೆ ಪಾವತಿ ಮಾಡುವವರ ಹೆಸರು, ಫೋನ್‌ ನಂಭರ್‍‌, ಸ್ಥಳದ ವಿವರಗಳನ್ನೂ ಫೇಸ್‌ಬುಕ್‌ನೊಂದಿಗೆ ಹಂಚಿಕೊಂಡಿದೆ. ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ದಿ ಮಾರ್ಕಪ್‌ ಟ್ಯಾಕ್ಸ್‌ ಆಕ್ಟ್‌ ವಿವರಗಳನ್ನು ಕೇಳಿದಾಗ, “ಬಳಕೆದಾರರ ಖಾಸಗಿತನದ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ’ ಎಂದು ಈ ಮೇಲ್ ಮೂಲಕ ಉತ್ತರಿಸಿದ್ದಾರೆ.

ರಾಮ್‌ಸೆ ಸ್ಮಾರ್ಟ್‌ ಟ್ಯಾಕ್ಸ್‌ ಎಂಬ ಸಂಸ್ಥೆ ಕೂಡ ಮೆಟಾ ಪಿಕ್ಸೆಲ್‌ ಬಳಸುತ್ತಿತ್ತು. ಆದರೆ ಫೇಸ್‌ಬುಕ್ ಮಾಹಿತಿ ಸಂಗ್ರಹಿಸಿ, ಅದನ್ನು ತನ್ನ ವ್ಯಾವಹಾರಿಕ ಲಾಭಕ್ಕೆ ಬಳಸುವುದ ಅರಿತ ಮೇಲೆ ಮೆಟಾ ಪಿಕ್ಸೆಲ್‌ ಅನ್ನು ತಮ್ಮ ವೆಬ್‌ಸೈಟಿನಿಂದ ತೆಗೆದು ಹಾಕಿದ್ದಾರೆ.

ಮೆಟಾ ಪಿಕ್ಸೆಲ್‌ ಹೇಗೆ ಕೆಲಸ ಮಾಡುತ್ತದೆ?
ಹೌದು, ಮೆಟಾ ಪಿಕ್ಸೆಲ್‌ ಮಾಹಿತಿ ಹೇಗೆ ಸಂಗ್ರಹವಾಗುತ್ತದೆ? ಹೇಗೆ ಬಳಕೆಯಾಗುತ್ತದೆ? ನಾವೇಕೆ ಆತಂಕ ಪಡಬೇಕು ಎಂಬ ಪ್ರಶ್ನೆಗಳು ಮೂಡುವುದು ಸಹಜ.

ಮೆಟಾ ಪಿಕ್ಸೆಲ್‌ ಉಚಿತವಾಗಿ ಲಭ್ಯವಿದೆ. ಯಾರು ಬೇಕಾದರೂ ತಮ್ಮ ವೆಬ್‌ ತಾಣದಲ್ಲಿ ಅದನ್ನು ಅಳವಡಿಸಬಹುದು. ಇದರಿಂದ ಕೋಡ್‌ ಅಳವಡಿಸಿದ ತಾಣಕ್ಕೂ ಮತ್ತು ಫೇಸ್‌ಬುಕ್‌ಗೂ ಲಾಭವಿದೆ. ಏಕೆಂದರೆ, ಪಿಕ್ಸೆಲ್‌ ಕೋಡ್‌ ಬಳಕೆದಾರ ಆನ್‌ಲೈನ್‌ನಲ್ಲಿ ಮಾಡುವ ಎಲ್ಲ ಚಟುವಟಿಕೆಗಳನ್ನು ಸಂಗ್ರಹಿಸುತ್ತದೆ. ಉದಾಹರಣೆಗೆ, ನೀವು ಒಂದು ಬ್ಯ್ರಾಂಡಿನ ಶೂ, ಅದರ ಸೈಜ್‌, ಬೆಲೆ ಇತ್ಯಾದಿ ವಿವರಗಳನ್ನು ಬ್ರೌಸ್‌ ಮಾಡುತ್ತೀರೊಂದು ಕೊಳ್ಳಿ. ಈ ಮಾಹಿತಿಯನ್ನು ಆಧರಿಸಿ ಫೇಸ್‌fಬುಕ್‌, ಆ ಬಳಕೆದಾರನಿಗೆ ಫೇಸ್ಬುಕ್‌ನಲ್ಲಿ ಜಾಹೀರಾತು ನೇರವಾಗಿ ನೀಡುತ್ತದೆ. ಗ್ರಾಹಕ ಏನನ್ನೂ ಕೊಳ್ಳಬೇಕೆಂದು ಅಪೇಕ್ಷಿಸುತ್ತಿರುತ್ತಾನೊ, ಅದೇ ಉತ್ಪನ್ನವನ್ನು ಫೇಸ್‌ಬುಕ್‌, ತನ್ನ ತಾಣದ ಮೂಲಕ ಗ್ರಾಹಕನಿಗೆ ಕೊಳ್ಳುವಂತೆ ಉತ್ತೇಜಿಸುತ್ತದೆ.

ವ್ಯಾವಹಾರಿಕ ಉದ್ದೇಶಕ್ಕಾಗಿ ವ್ಯಕ್ತಿಗತವಾದ, ಹಣಕಾಸಿನಂತಹ ಸೂಕ್ಷ್ಮವಾದ ಹಾಗೂ ಖಾಸಗಿಯಾದ ವಿವರಗಳನ್ನು ಫೇಸ್‌ಬುಕ್‌ ಬಳಸಿಕೊಳ್ಳುತ್ತಿದೆ ಎಂಬುದನ್ನು ದಿ ಮಾರ್ಕಪ್‌ ತನ್ನ ತಾಣದಲ್ಲಿ ವರದಿ ಮಾಡಿದೆ.

ತಾನು ಕಂಡುಕೊಂಡ ಸಂಗತಿಯಲ್ಲಿ ಮರುಶೀಲನೆಗೆ ಒಡ್ಡಲು, ಕ್ರೋಮ್, ಮೊಝಿಲ್ಲಾ ಬ್ರೌಸರ್‍‌ಗಳ ಜೊತೆ ಸೇರಿ ತನಿಖೆಯನ್ನೂ ನಡಸಿದೆ. ಈ ಮೂಲಕ ಮೆಟಾ ಪಿಕ್ಸೆಲ್‌ ಬಳಕೆದಾರರ ಯಾವ ಯಾವ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಂಡಿದೆ.

ಅಮೆರಿಕದಲ್ಲಿ ತೆರಿಗೆ ಪಾವತಿ ವ್ಯವಸ್ಥೆ ಭಾರಿ ಪ್ರಮಾಣದಲ್ಲಿ ಖಾಸಗಿ ವಲಯದ ವ್ಯಾಪ್ತಿಯಲ್ಲಿದೆ. ತೆರಿಗೆ ಪಾವತಿಸುವುದೇ ಒಂದು ಅಲ್ಲಿ ಉದ್ಯಮವಾಗಿ ಬೆಳೆದಿದೆ. ರೀಸರ್ಚ್‌ ಅಂಡ್‌ ಮಾರ್ಕೆಟ್‌ನ ಅಧ್ಯಯನದ ಪ್ರಕಾರ ಒಂದು ವರ್ಷದ ತೆರಿಗೆ ಪಾವತಿಸುವ ಉದ್ಯಮದ ವಹಿವಾಟು 11 ಬಿಲಿಯನ್‌ ಡಾಲರ್‍‌ಗಳು!! ದಾಖಲೆಗಳನ್ನು ಸಿದ್ಧಪಡಿಸುವುದು, ಅಗತ್ಯ ವಿವರಗಳನ್ನು ಪಾವತಿಗೆ ತಕ್ಕಂತೆ ಹೊಂದಿಸುವುದು ಇವೆಲ್ಲವನ್ನು ಸಿದ್ಧಪಡಿಸಿಕೊಡುತ್ತವೆ. ಇದಕ್ಕೆ ಹಣ ತೆರಬೇಕಾಗುತ್ತದೆ. ತೆರಿಗೆ ರೂಪದಲ್ಲಿ ಹಣ ನೀಡುವ ಜೊತೆಗೆ ಖಾಸಗಿ ವಿವರಗಳನ್ನೂ ಕಳೆದುಕೊಳ್ಳುವುದು ಈಗ ಅಮೆರಿಕನ್ನರನ್ನು ಬೆಚ್ಚಿ ಬೀಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.