ಟೆಕ್‌ 20 | ಇಲ್ಲಿವೆ ಮುಂಬರುವ ದಿನಗಳಲ್ಲಿ ನಾವು ಕಾಣಲಿರುವ 20 ಟೆಕ್ನಾಲಜಿ ಟ್ರೆಂಡ್‌ಗಳು !

ಕಳೆದೊಂದು ದಶಕದಲ್ಲಿ ತಂತ್ರಜ್ಞಾನ ಕಂಡಿರುವ ಶರವೇಗದ ಪ್ರಗತಿ ಮತ್ತಷ್ಟು ಹೊಸ ಟ್ರೆಂಡ್‌ಗಳನ್ನು ನಮ್ಮ ಮುಂದಿಡಲಿದೆ. ಟೆಕ್‌ಲೋಕದ ತಂತ್ರಜ್ಞರು ಪ್ರಸ್ತಾಪಿಸಿರುವ ದಶಕದುದ್ದಕ್ಕೂ ನಾವು ಕಾಣಲಿರುವ ತಂತ್ರಜ್ಞಾನ ಲೋಕದ ಕ್ರಾಂತಿಕಾರಿ ನಡೆಗಳಿವು. ತಂತ್ರಜ್ಞಾನ ಕ್ಷೇತ್ರದ ಇಂತಹ ಟ್ರೆಂಡ್‌ಗಳನ್ನು 2020 ತರಲಿದೆ. ಯಾವುವು? ಏನು ಬದಲಾವಣೆಯನ್ನು ತರಲಿವೆ? ಮುಂದೆ ಓದಿ

ಚಿತ್ರ ಕೃಪೆ:

5ಜಿಯದ್ದೇ ಅಬ್ಬರ!

4ಜಿಯ ಕಾಲ ಮುಗಿಯಿತು. ಇನ್ನು 5ಜಿಯ ಕಾಲ ಎಂಬ ಮಾತು ಕೇಳಿ ಬರಲಾರಂಭಿಸಿದೆ. 5ಜಿ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಆದರೆ 5ಜಿ ತಂತ್ರಜ್ಞಾನ ಕೇವಲ ಸ್ಮಾರ್ಟ್‌ಫೋನ್‌ಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಮುಂದಿನ ಒಂದು ದಶಕದ ಅವಧಿಯಲ್ಲಿ ಮೊಬೈಲ್‌ ಜಾಲದ ಎಲ್ಲ ಸಾಮಾನ್ಯ ಸಮಸ್ಯೆಗಳು ಬಗೆಹರಿಯುವ ಹೊತ್ತಿಗೆ ಈ ತಂತ್ರಜ್ಞಾನದ ಹೊಸದೊಂದು ಮಜಲು ಏರಲಿದೆ. ಫೋನ್‌ಗಳ ಜೊತೆಗೆ ಇತರೆ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಹಲವು ಸಾಧನಗಳ ಕ್ರಾಂತಿಕಾರಿ ಬದಲಾವಣೆಗೆ ಈ ತಂತ್ರಜ್ಞಾನ ಕಾರಣವಾಗಲಿದೆ. ಮುಂದಿನ ಒಂದು ದಶಕದ ಮಹತ್ವದ ಬದಲಾವಣೆಗೆ ಈ ವರ್ಷದ ಮುನ್ನುಡಿ ಬರೆಯಲಿದೆ.

ಐಒಟಿ ಮತ್ತು ಎಡ್ಜ್‌ ಕಂಪ್ಯೂಟಿಂಗ್‌

5ಜಿ ತಂತ್ರಜ್ಞಾನದೊಂದಿಗೆ ಇಂಟರ್ನೆಟ್‌ ಆಫ್‌ ಥಿಂಗ್ಸ್‌ ಮತ್ತು ಎಡ್ಜ್‌ ಕಂಪ್ಯೂಟಿಂಗ್‌ ಎರಡು ಹೆಚ್ಚು ಕಾರ್ಯನಿರ್ವಹಿಸುವುದು ಸುಗಮವಾಗಲಿದೆ. ಮಾಹಿತಿ ಸಂಸ್ಕರಣೆಯ ಪ್ರಕ್ರಿಯೆಯ ಅವಧಿಯನ್ನು ಕಡಿಮೆ ಮಾಡಿ, ವೇಗವೂ ಹೆಚ್ಚಾಗುತ್ತದೆ. ಯಾವುದೇ ಮಾಹಿತಿ ಒಂದು ತುದಿಯಿಂದ ಇನ್ನೊಂದು ತುದಿಗೆ ಸಂಚರಿಸಲು ಮಧ್ಯದಲ್ಲಿ ಸರ್ವರ್‌ಗಳು ಮಾಹಿತಿ ಸಂಸ್ಕರಣೆಯ ಕಾರ್ಯನಿರ್ವಹಿಸುತ್ತವೆ. ಆದರೆ ವೇಗದ ನೆಟ್‌ವರ್ಕ್‌ ಸಾಧನಗಳ ನಡುವೆ ಒಂದು ಜಾಲವನ್ನು ಸೃಷ್ಟಿಸಿ, ಯಾವುದೇ ಮಧ್ಯವರ್ತಿ ಸಾಧನಗಳಿಲ್ಲದೆ ಸಂವಹನವನ್ನು ಸಾಧ್ಯವಾಗಿಸಲಿದೆ.

ದಡ್ಡರಾಗಲಿದ್ದೇವೆಯೇ ಮತ್ತಷ್ಟು!

ತಂತ್ರಜ್ಞಾನ ನಮ್ಮನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದೇವೆ ಎಂದರೆ ಸಂವಾದ ಕಡಿಮೆ ಮಾಡುವ ಮೂಲಕ, ನಮ್ಮ ಕ್ರಿಯಾಶೀಲತೆಯನ್ನು ಕಳೆದುವಷ್ಟರ ಮಟ್ಟಿಗೆ ಅಪಾಯಕಾರಿಯಾಗಿದೆ. ಇದು ನಮ್ಮನ್ನು ನಾವೇ ನಾಶ ಮಾಡಿಕೊಳ್ಳುವಷ್ಟು ಅನಾಹುತಕಾರಿ. ತಂತ್ರಜ್ಞಾನ ಒಳಿತೂ ಹೌದು, ಕೆಡುಕೂ ಹೌದು ಎಂದು ಸಾಮಾನ್ಯವಾಗಿ ಹೇಳುವಂತೆ, ಏನನ್ನೂ ಮಾಡದೇ ನಮ್ಮ ಪಾಡಿಗೆ ಇರುವಂತೆ ಮಾಡಿದರೂ, ಇದು ಮನುಕುಲದ ಬೌದ್ಧಿಕ ಕ್ರಿಯಾಶೀಲತೆಗೆ ಮಾರಕವಾಗಬಹುದು. ಈ ಪ್ರವೃತ್ತಿ ದಿನೇ ದಿನೇ ಹೆಚ್ಚುವುದನ್ನು ಬರುವ ದಿನಗಳಲ್ಲೂ ಕಾಣಲಿದ್ದೇವೆ.

ಆಪ್‌ಗಳ ಜಾಗಕ್ಕೆ ಪಿಡಬ್ಲ್ಯೂಎಗಳು ಬರಲಿವೆ

ಏನೀ ಪಿಡಬ್ಲ್ಯೂಎಗಳು? ಪ್ರೊಗ್ರೆಸಿವ್‌ ವೆಬ್‌ ಆಪ್‌, ಒಂದು ವೆಬ್‌ ಪುಟವನ್ನು ನೀವು ಬಳಸುತ್ತಿರುವ ಫೋನ್‌, ಟ್ಯಾಬ್‌ ಸ್ಕ್ರೀನ್‌ ಅಳತೆ ತಕ್ಕಂತೆ ಹೊಂದಿಕೊಳ್ಳುವ ಆಪ್‌ಗಳು. ಮೊಬೈಲ್‌ ಅಪ್ಲಿಕೇಷನ್‌ಗಳು ನಿಮ್ಮ ಸ್ಟೋರೇಜ್‌ನ ಜಾಗವನ್ನು ತಿನ್ನುತ್ತವೆ. ಆದರೆ ಪ್ರೊಗ್ರೆಸಿವ್‌ ವೆಬ್‌ ಆಪ್ಸ್‌ ಹಾಗಲ್ಲ. ಇವುಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಬೇಕಿಲ್ಲ. ಆಗಾಗ ಅಪ್‌ಡೇಟ್‌ ಮಾಡುವ ರಗಳೆ ಇರುವುದಿಲ್ಲ. ಸದ್ಯ ಆಂಡ್ರಾಯ್ಡ್‌ ಹೆಚ್ಚಿನ ಸಂಖ್ಯೆಯಲ್ಲಿ ಪಿಡಬ್ಲ್ಯೂಎಗಳಿಗೆ ಬೆಂಬಲಿಸುತ್ತಿದೆ. ಮುಂದಿನಗಳಲ್ಲಿ ಇವುಗಳ ಸಂಖ್ಯೆ ಅಧಿಕವಾಗಲಿದೆ.

ಸರಳ ತಂತ್ರಜ್ಞಾನ

ಏಕ ಕಾಲಕ್ಕೆ ಹಲವು ಆಯಾಮದ ಅನುಭವಗಳನ್ನು ಭಿನ್ನ ವೇದಿಕೆಗಳಲ್ಲೂ ನೀಡುವುದು ಹೊಸ ಕಾಲದ ಆದ್ಯತೆ. ಅಂದರೆ, ಒಂದೇ ಸೇವೆಯನ್ನು ನೀವು ಬಳಸುವ ಇಂಟರ್ನೆಟ್‌ ಸಂಪರ್ಕ ಇರುವ ಎಲ್ಲ ರೀತಿಯ ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ಲಭ್ಯವಾಗುವಂತೆ ಮಾಡುವುದು. ಉದಾಹರಣೆಗೆ ನಿಮ್ಮ ಫೋನ್‌ ಜೊತೆಗೆ, ಸ್ಮಾರ್ಟ್‌ ವಾಚ್‌, ಕಾರು, ನಿಮ್ಮ ವಾಯ್ಸ್‌ ಅಸಿಸ್ಟಂಟ್‌ಗಳ ಮೂಲಕ ನಿಮಗೆ ಸೇವೆ ಲಭ್ಯವಾಗುವಂತೆ ಮಾಡುವುದು. ಬ್ಯಾಂಕ್‌ ಮುಂತಾದ ದೈನಂದಿನ ವ್ಯವಹಾರಗಳನ್ನು ಮಾಡುವ ಸೇವೆಗಳಲ್ಲಿ ಈ ಮಲ್ಟಿ ಎಕ್ಸ್‌ಪೀರಿಯೆನ್ಸ್‌ ಡೆವೆಲಪ್‌ಮೆಂಟ್‌ ಪ್ಲಾಟ್‌ಫಾರ್ಮ್ಸ್‌ಅನ್ನು ಸಾಧ್ಯವಾಗಿಸುವ ಪ್ರಯತ್ನ ಮುಂದಿನ ದಿನಗಳಲ್ಲಿ ನೋಡಲಿದ್ದೇವೆ.

ಕ್ವಾಂಟಂ ಕಂಪ್ಯೂಟಿಂಗ್‌

ಐಬಿಎಂ, ಗೂಗಲ್‌ ಸೇರಿದಂತೆ ಟೆಕ್‌ ಕ್ಷೇತ್ರದ ದೈತ್ಯರು ಎನಿಸಿಕೊಂಡು ಸಂಸ್ಥೆಗಳು ಈ ವಿಶಿಷ್ಟ ಸಾಧ್ಯತೆ ಕಂಪ್ಯೂಟರ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಲ್ಲಿ ನಿರತರಾಗಿದ್ದಾರೆ. ಇನ್ನೂ ಪ್ರಯೋಗದ ಹಂತದಲ್ಲಿರುವ ಕ್ವಾಂಟಂ ಕಂಪ್ಯೂಟರ್‌ ತಂತ್ರಜ್ಞಾನ ಈ ದಶಕದ ಹೊತ್ತಿಗೆ ಬಳಕೆಗೆ ಲಭ್ಯವಾಗಬಹುದು ಎಂದು ತಂತ್ರಜ್ಞರು ನಿರೀಕ್ಷಿಸುತ್ತಿದ್ದಾರೆ. ತಂತ್ರಜ್ಞಾನ ಆಧರಿಸಿದ ಎಲ್ಲ ರೀತಿಯ ಸೇವೆಗಳಲ್ಲಿ ವೇಗ, ಜಾಣ್ಮೆ ಎಲ್ಲವನ್ನೂ ನೀಡಬಹುದಾದ ತಂತ್ರಜ್ಞಾನವಿದು.

ಡ್ರೋನ್‌ಗಳ ಹಾರಾಟ ಹೆಚ್ಚಲಿದೆ!

ಡ್ರೋನ್‌ಗಳು ಹಲವು ರೀತಿಯಲ್ಲಿ ಬಳಕೆಯಾಗುತ್ತಿರುವುದನ್ನು ಕೇಳುತ್ತಿದ್ದೇವೆ. ಆದರೆ ಅದಿನ್ನೂ ತೀವ್ರವಾಗಿ ಮತ್ತು ವ್ಯಾಪಕವಾಗಿ ಬಳಕೆಯಾಗುವ ದಿನಗಳು ಮುಂದೆ ಇವೆ. ವಿಶೇಷವಾಗಿ ಸೇನಾ ಉದ್ದೇಶಕ್ಕೆ ಇವು ಉಪಯೋಗಿಸಲ್ಪಡುತ್ತವೆ. ಕಳೆದ ಸೆಪ್ಟೆಂಬರ್‌ನಲ್ಲಿ ಏಕಕಾಲಕ್ಕೆ ಇರಾನ್‌ ಮೂಲದ 10 ಡ್ರೋನ್‌ಗಳು ಸೌದಿ ಅರೇಬಿಯಾದಲ್ಲಿ ದಾಳಿ ನಡೆಸಿದ್ದವು. ಭಾರತ, ರಷ್ಯಾ, ಅಮೆರಿಕಗಳು ಈ ಸಾವಿರಾರು ಡ್ರೋನ್‌ಗಳು ಈ ರೀತಿಯ ದಾಳಿ, ಬೇಹುಗಾರಿಕೆಗೆ ಬಳಸುವ ನಿಟ್ಟಿನಲ್ಲಿ ಪ್ರಯೋಗ ನಡೆಸುತ್ತಿವೆ.

ಆಟೋಮೇಷನ್‌ ಆರ್ಭಟ

ನಮಗೆ ಇಷ್ಟವಿದೆಯೋ, ಇಲ್ಲವೋ, ನಮ್ಮ ದೈನಂದಿನ ಜೀವನದಲ್ಲಿ ಯಂತ್ರಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳಲಿವೆ. ರೊಬೊಟ್‌ರೂಪದಲ್ಲಷ್ಟೇ ಅಲ್ಲ. ಬ್ಯಾಂಕ್‌ ಆಗಲಿದೆ, ಯಾವುದೇ ಸೇವಾ ಕೇಂದ್ರಿತ ವ್ಯವಸ್ಥೆಯಾಗಲಿ ಎಲ್ಲ ಕ್ಷೇತ್ರಗಳು ಸೇವೆ ಅಗತ್ಯವಿರುವವರಿಂದ ಮಾಹಿತಿ ಪಡೆದು, ಅಗತ್ಯ ಮಾಹಿತಿ, ಮಾರ್ಗದರ್ಶನ, ಸೂಚನೆಗಳನ್ನು ನೀಡುವ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿತ ಆಟೊಮೇಷನ್‌ ವ್ಯಾಪಕವಾಗಲಿದೆ. ಅಗ್ಗದ ವೆಚ್ಚದಲ್ಲಿ ಸಾಧ್ಯವಾಗುವ ಈ ಸೇವಾ ವಿಧಾನವನ್ನು ಕಾರ್ಪೋರೇಟ್‌ ಜಗತ್ತು ಬಹಳ ಬೇಗ ಆಲಂಗಿಸಿಕೊಳ್ಳಲಿದೆ.

ಆಗ್ಮೆಂಟೆಡ್‌ ರಿಯಾಲಿಟಿ

ನೀವು ಹೊಸ ಕಾಲದ ವಿಡಿಯೋ ಗೇಮ್‌ ಆಡುವವರಾಗಿದ್ದರೆ, ಈ ತಂತ್ರಜ್ಞಾನದ ಪರಿಚಯ ನಿಮಗಿರುತ್ತದೆ. ಇಲ್ಲದ ವಾಸ್ತವವೊಂದು ಕಂಪ್ಯೂಟರ್‌ ಮೂಲಕ ಸೃಷ್ಟಿಸಿಕೊಡುವ ತಂತ್ರಜ್ಞಾನವಿದು. ಆ ವಾಸ್ತವದಲ್ಲಿ ನೀವು ಪಾತ್ರವಾಗಿರುತ್ತೀರಿ. ಈ ವಿಶಿಷ್ಟ ಅನುಭವದ ತಂತ್ರಜ್ಞಾನ ನಮ್ಮ ವಾಸ್ತವದ ಬೇಸರಗಳಿಂದ ಹೊರತರುವ, ಪಲಾಯನ ಮಾಡುವುದಕ್ಕೆ ನೆರವಾಗುತ್ತದೆ. ಈಗಾಗಲೇ ಸೀಮಿತ ಕ್ಷೇತ್ರದಲ್ಲಿ ಲಭ್ಯವಿರುವ ಆಗ್ಮೆಂಟೆಡ್‌ ರಿಯಾಲಿಟಿ ಮತ್ತು ವರ್ಚ್ಯುವಲ್‌ ರಿಯಾಲಿಟಿ, ಮಿಕ್ಸೆಡ್‌ ರಿಯಾಲಿಟಿ ತಂತ್ರ ವಿಧಾನಗಳು ಇನ್ನಷ್ಟು ವ್ಯಾಪಕವಾಗಲಿವೆ. ಕೆಲ ವರ್ಷಗಳಿಂದ ಗೂಗಲ್‌ ಪರಿಚಯಿಸಿದ್ದ ಗ್ಲಾಸ್‌ ಇದೇ ತಂತ್ರಜ್ಞಾನದ ಭಾಗವಾಗಿತ್ತು. ಇನ್ನು ಪ್ರಾಥಮಿಕ ಹಂತದಲ್ಲಿದ್ದ ಇದು ಮಾರುಕಟ್ಟೆಯಿಂದ ಮರೆಯಿತು. ಆದರೆ ಸುಧಾರಿತ ಕನ್ನಡಕಗಳು ಮೇಲೆ ಹೇಳಿದ ತಂತ್ರಜ್ಞಾನದ ಅನುಭವ ನೀಡುವುದಕ್ಕೆ ಸಿದ್ಧವಾಗಿ ಬರಲಿವೆ.

ಹೊಸ ಕೌಶಲ್ಯಗಳು ಅಗತ್ಯ

ಆಟೋಮೇಷನ್‌ ಹೆಚ್ಚಾದಂತೆ ಬಳಸುವ ಮತ್ತು ಅದನ್ನು ಪರಿಚಯಿಸುವ ವ್ಯಕ್ತಿಗಳಿಗೂ ನಿರ್ದಿಷ್ಟ ಕೌಶಲ್ಯದ ಅಗತ್ಯವಿರುತ್ತದೆ. ಜೆನ್‌ಜೆಡ್‌ (ತೊಂಬತ್ತರ ದಶಕದ ಮಧ್ಯಭಾಗದ ನಂತರ ಜನಿಸಿದವರು)ಎಂದು ಗುರುತಿಸಲಾಗುತ್ತಿರುವ ಹೊಸ ತಲೆಮಾರಿಗೆ ಈ ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲಿರುವ ತಲೆಮಾರು ಆಗಲಿದೆ. ಕಲಿಕೆ ನಿರಂತರ ಎಂಬುದು ಸಾಮಾನ್ಯವಾಗಿ ಹೇಳಲಾಗುವ ಮಾತು. ಆದರೆ ಈ ದಶಕದುದ್ದಕ್ಕೂ ಹೊಸ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು ಅನಿವಾರ್ಯ ಹಾಗೂ ಸತತವಾಗಿ ನಡೆಯಬೇಕಾದ ಪ್ರಕ್ರಿಯೆ ಎನ್ನಬಹುದು.

ಹ್ಯೂಮನ್‌ 2.0 ಅರ್ಥಾತ್ ಹೊಸ ಮನುಷ್ಯ

ಯಂತ್ರ ಮತ್ತು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಕೂಡಿ ಮನುಷ್ಯನ ರೂಪ ತಾಳುತ್ತಿವೆ. ತಂತ್ರಜ್ಞಾನದ ಸಾಧ್ಯತೆಗಳನ್ನು ದೇಹದೊಳಗೆ ಅಳವಡಿಸಿಕೊಂಡ ಸೈಬಾರ್ಗ್‌ಗಳನ್ನು ಬರುವ ದಶಕದಲ್ಲಿ ಕಾಣಲಿದ್ದೇವೆ. ತಂತ್ರಜ್ಞಾನ ವಿಶಿಷ್ಟ ಶಕ್ತಿಯನ್ನು ಮಿತಿಗಳಿರುವ ಮನುಷ್ಯ ದೇಹಕ್ಕೆ ಅಳವಡಿಸಿ, ಅಸಾಧ್ಯವನ್ನು ಸಾಧ್ಯವಾಗಿಸುವ ಪ್ರಯತ್ನವಿದು. ನಮ್ಮ ದೇಹದೊಳಗೆ ಅಳವಡಿಸದೇ, ಹೊರಗಿನಿಂದ ಜೋಡಿಸುವ ಮೂಲಕ ಮನುಷ್ಯನಿಗೆ ಹೊಸಶಕ್ತಿಯನ್ನು ನೀಡುವ ಪ್ರಯತ್ನವೂ ಇದೆಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ನಮ್ಮ ಫೋನ್‌ಗಳಂತೆ ಕಾಲಕಾಲಕ್ಕೆ ಅಪ್‌ಡೇಟ್‌ ಮಾಡಿಕೊಳ್ಳುವ ಮನುಷ್ಯರಾಗುತ್ತೇವೆ ಎಂದು ಅಂದುಕೊಳ್ಳಬಹುದು!

ಸೈಬರ್‌ ಸುರಕ್ಷತೆಯೇ ಆದ್ಯತೆ

ಮಾಹಿತಿಗಿರುವಷ್ಟು ಬೆಲೆ, ಜಗತ್ತಿನ ಇನ್ನಾವುದೇ ವಸ್ತುವಿಗಿಲ್ಲ. ಹಾಗಾಗಿ ಅದನ್ನು ಕಾಪಾಡಿಕೊಳ್ಳುವುದು, ವ್ಯಕ್ತಿಗೂ ಹಾಗೂ ಸಂಸ್ಥೆಗಳಿಗೂ ಅಷ್ಟೇ ಮುಖ್ಯ. ಹಾಗಾಗಿ ಸೈಬರ್‌ ಸುರಕ್ಷತೆಯ ಕ್ಷೇತ್ರ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪ್ರಾಧಾನ್ಯತೆ ಪಡೆದುಕೊಳ್ಳುವುದು ಎಂಬುದು ಕೇವಲ ಊಹೆಯಷ್ಟೇ ಅಲ್ಲ. ಖಾಸಗಿತನ, ಹಣ, ನಮ್ಮ ಜೀವನದ ಅಮೂಲ್ಯ ಸಂಗತಿಗಳನ್ನು ಕಾಪಾಡಿಕೊಳ್ಳಲು ಸೈಬರ್‌ ಸೆಕ್ಯುರಿಟಿ ಅನುಭವಿಗಳ ನೆರವು ಅಗತ್ಯವಾಗುತ್ತದೆ. ಹಾಗಾಗಿ ಸೈಬರ್‌ ಸೆಕ್ಯುರಿಟಿ ಹೊಸ ಉದ್ಯೋಗವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಲಿದೆ.

ಕಣ್ಮರೆಯಾಗಲಿವೆ ಕಚೇರಿಗಳು

ತಂತ್ರಜ್ಞಾನ ಹಾಗೂ ಕೋವರ್ಕಿಂಗ್‌ ಸ್ಪೇಸಸ್‌ ಎರಡೂ ಕಚೇರಿಗಳ ಪರಿಕಲ್ಪನೆಯನ್ನೇ ಬದಲಿಸುತ್ತಿವೆ. ಜಾಗತಿಕವಾಗಿ ಸ್ಪಾರ್ಟಪ್‌ಗಳು ಭೌತಿಕವಾದ ಕಚೇರಿಯ ಕಲ್ಪನೆಯನ್ನೇ ಕೈಬಿಟ್ಟಿದ್ದಾರೆ. ನಮ್ಮ ಎಲ್ಲ ಕೆಲಸಗಳು ಡಿಜಿಟಲ್‌ ಆಗುತ್ತಿರುವ ಹೊತ್ತಲ್ಲಿ, ಭೌತಿಕವಾದ ಕಚೇರಿ, ಅದರ ಸ್ವರೂಪ ಅಪ್ರಸ್ತುತವಾಗುತ್ತಿದೆ. ಇಂಟರ್ನೆಟ್‌ ಏಕಕಾಲಕ್ಕೆ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಮತ್ತೊಂದು ಕಾಲ, ದೇಶದಲ್ಲಿರುವ ವ್ಯಕ್ತಿಯನ್ನು ಬೆಸೆಯುವುದರಿಂದ ನಿರ್ದಿಷ್ಟ ಸ್ಥಳದಲ್ಲಿ ನಿತ್ಯವೂ ಸೇರುವ ಪರಿಪಾಟವನ್ನೇ ಕೈಬಿಡುವಂತಾಗಲಿದೆ.

ತೊಡುವ ಜಾಣ್ಮೆಯ ಉಡುಗೆ

ನಾವು ತೊಡುವ ಕನ್ನಡ, ವಾಚ್‌ ಎಲ್ಲವೂ ಸ್ಮಾರ್ಟ್‌ ಆದ ಮೇಲೆ ಬಟ್ಟೆಗಳು ಸ್ಮಾರ್ಟ್‌ ಯಾಕಾಬಾರದು! ಹವಾಮಾನಕ್ಕೆ ತಕ್ಕಂತೆ ಬಿಗಿಯಾಗುವ, ಸಡಿಲಾಗುವ, ನಿಮ್ಮ ಮನಸ್ಥಿತಿಗೆ ತಕ್ಕಂತೆ ಸ್ಪಂದಿಸುವ ಉಡುಗೆಗಳು ಬರಲಿವೆ. ಹಾಗೇ ಬಣ್ಣ ಬದಲಿಸುವ, ನಿಮ್ಮ ದೇಹದ ಸ್ಥಿತಿಗತಿಯನ್ನು ತಿಳಿಸುವ ಜಾಣ ಉಡುಪುಗಳು ಟ್ರೆಂಡ್‌ ಆಗಲಿದೆ.

ನಗದು ನಗುವುದು

ಅರ್ಥ ಆಗಲಿಲ್ಲವೆ! ತಂತ್ರಜ್ಞಾನ ಇಷ್ಟೊಂದು ವ್ಯಾಪಕವಾಗಿ ಬೆಳೆಯುತ್ತಿದ್ದರೆ, ಭಾರತದಂತಹ ದೇಶಗಳಲ್ಲಿ ನಗದು ರಹಿತ ಅಂದರೆ ಕ್ಯಾಶ್‌ಲೆಸ್‌ ಆರ್ಥಿಕತೆ ತರಲು ಹೊರಟಿದ್ದರೆ, ಜಗತ್ತಿನಲ್ಲಿ ನಗದು ಮತ್ತೆ ಪ್ರಾಮುಖ್ಯತೆ ಪಡೆದುಕೊಳ್ಳುವುದು ಎನ್ನುತ್ತಿದ್ದಾರೆ ತಂತ್ರಜ್ಞರು. ಈ ಕಾಮರ್ಸ್‌ ನಮಗೆ ಕ್ಯಾಶ್‌ಲೆಸ್‌ ವಹಿವಾಟಿಗೆ ಪ್ರೇರೇಪಿಸುತ್ತಾ ಬಂದಿದೆ. ಆದರೆ ಬರುವ ದಿನಗಳಲ್ಲಿ ನಮ್ಮನಮ್ಮ ಪ್ರದೇಶಗಳಲ್ಲಿ, ಸ್ಥಳೀಯವಾದ ವ್ಯವಹಾರಗಳು ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವುದರಿಂದ ಮತ್ತು ಟೆಕ್‌ ಸ್ಯಾವಿಯಲ್ಲದ ಜನರ ನಡುವೆ ನಗದು ವಹಿವಾಟೇ ಹೆಚ್ಚು ಅನುಕೂಲವಾಗುವುದರಿಂದ ನಗದು ಮತ್ತೆ ಪ್ರಸ್ತುತವಾಗುವುದು ಎನ್ನಲಾಗುತ್ತಿದೆ.

ಎಲ್ಲೆಲ್ಲೂ ಅನಾಲಿಟಿಕ್ಸ್‌

ಡಾಟಾ ಅಥವಾ ದತ್ತಾಂಶ ದೊಡ್ಡ ಮಾಹಿತಿ ಕಣಜ. ನಿರ್ದಿಷ್ಟ ಮಾರುಕಟ್ಟೆ, ವಸ್ತು, ವಿಷಯ, ಸಮುದಾಯಗಳ ಎಲ್ಲ ರೀತಿಯ ಮಾಹಿತಿ-ಬಿಗ್‌ ಡಾಟಾ- ಚಿನ್ನವೆಂದೇ ಪರಿಗಣಿಸಲಾಗುತ್ತದೆ. ಯಾವುದೇ ಕ್ಷೇತ್ರವೇ ಆಗಲಿ, ಬಿಗ್‌ಡಾಟಾಕ್ಕೆ ಹೆಚ್ಚಿನ ಬೇಡಿಕೆ ಬರಲಿದ್ದು, ಇದನ್ನು ಸಂಸ್ಕರಿಸುವ ಅನಾಲಿಟಿಕ್ಸ್‌ ಕೂಡ ಪ್ರಾಶಸ್ತ್ಯ ಪಡೆದುಕೊಳ್ಳಲಿವೆ. ನಮ್ಮ-ನಿಮ್ಮ ಪ್ರತಿಯೊಂದು ಚಟುವಟಿಕೆಯೂ ಒಂದು ಮಹತ್ವದ ದತ್ತಾಂಶವಾಗಿ ಸಂಸ್ಕರಣೆಗೊಂಡು ಒಂದು ದೊಡ್ಡ ಸಂಗ್ರಹದ ಪಾಲಾಗುತ್ತಿರುತ್ತದೆ. ನಿಮಗಿದು ತಿಳಿದಿರಲಿ!

ದೊಡ್ಡ ಸಂಗ್ರಹ, ಸಣ್ಣ ನಾಳ

ದೊಡ್ಡ ಪ್ರಮಾಣದಲ್ಲಿ ದತ್ತಾಂಶವನ್ನು ಸಂಗ್ರಹಿಸಿದರೂ, ಅದನ್ನು ಅನ್ವಯಿಸುವುದು ಸಣ್ಣ ಅಥವಾ ನಿರ್ದಿಷ್ಟ ಉದ್ದೇಶಗಳಿಗೆ. ಇದನ್ನು ಲಿಟಲ್‌ ಡಾಟಾ ಎನ್ನುತ್ತಾರೆ. ಇನ್ನೊಂದು ಅರ್ಥದಲ್ಲಿ ಇದನ್ನು ಪರ್ಸನಲೈಸ್ಡ್‌ ಡಾಟಾ ಎನ್ನಬಹುದು. ನೀವು ಕೆಮ್ಮಿದರೆ, ನಿಮಗೆ ಮೈಕೈ ನೋವೆಂದರೆ, ನೀವು ಮದ್ಯಪಾನ ತ್ಯಜಿಸಬೇಕೆಂದಿದ್ದರೆ ನಿರ್ದಿಷ್ಟ ನಿಮ್ಮ ದೇಹಸ್ಥಿತಿ, ವಯಸ್ಸು ಎಲ್ಲವನ್ನೂ ಅಳೆದು ತೂಗಿ, ನಿಮಗೆ ಸೂಕ್ತವೆನಿಸುವ ಸಲಹೆಗಳನ್ನು ನೀಡುವುದಕ್ಕೆ ಈ ಲಿಟಲ್‌ ಡಾಟಾ ಬಳಕೆಯಾಗುತ್ತದೆ!

ಎಲ್ಲವೂ ಸ್ಥಳೀಯ

ದಶಕದ ಹಿಂದೆ ಜಗತ್ತಿನ ಒಂದು ಮೂಲೆಯಿಂದ, ಇನ್ನೊಂದು ಮೂಲೆಗೆ ಸಂಪರ್ಕ ಸಾಧಿಸುವುದೇ ದೊಡ್ಡ ಸಂಗತಿಯಾಗಿತ್ತು. ಆದರೆ ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿ ಸಂಪರ್ಕ ಬೆಸೆದುಕೊಳ್ಳುವ ಮತ್ತು ಸಂವಹನ ನಡೆಸುವುದೇ ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದುಕೊಳ್ಳಲಿದೆ. ಅಂದರೆ ನಿಮ್ಮ ಸುತ್ತಲೂ ಇರುವ ವ್ಯಕ್ತಿ, ಪರಿಸರ ಮತ್ತು ವ್ಯವಸ್ಥೆಗಳ ನಡುವೆ ಒಂದು ಜಾಲವನ್ನು ಬೆಸೆದುಕೊಳ್ಳುವುದು. 5ಜಿ ಇಂಟರ್ನೆಟ್‌ ಮತ್ತು ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ಇದನ್ನು ಸಾಧ್ಯವಾಗಿಸಲಿದ್ದು, ನಿಮ್ಮ ಸುತ್ತಲೂ ಇರುವ ಎಲ್ಲ ವಸ್ತು-ವಿಷಯಗಳ ಬಗ್ಗೆ ಮಾಹಿತಿಯನ್ನು ಒದಗಿಸಲಿವೆ. ಹಾಗೆಯೇ ಸಂಸ್ಥೆಗಳು ಸ್ಥಳೀಯವಾಗಿ ಉತ್ತಮ ಸೇವೆ ನೀಡಲು ಮುಂದಾಗುವ ದಿನಗಳನ್ನು ನಾವು ಕಾಣಲಿದ್ದೇವೆ. ಊಟ, ತಿಂಡಿಗಳಿರಬಹುದು, ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುವುದರಿರಬಹುದು ಎಲ್ಲವನ್ನೂ ಅಲ್ಪಸಮಯದಲ್ಲಿ ಪೂರೈಸುವ ಸೇವಾ ವಿಧಾನಗಳು ಹೆಚ್ಚುಹೆಚ್ಚು ವ್ಯಾಪಕವಾಗಲಿದೆ.

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸೇವೆ

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಎಲ್ಲ ರೀತಿಯ ಸೇವಾ ವಲಯಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಿದೆ. ಆದರೆ ಇದು ಇನ್ನಷ್ಟು ವಿಸ್ತಾರ ಪಡೆಯಲಿದ್ದು, ಎಐ ಆಧರಿತ ಸೇವೆಗಳನ್ನು ನೀಡುವ ಸಂಸ್ಥೆಗಳು ಹೆಚ್ಚು ಬೇಡಿಕೆಯನ್ನು ಪಡೆಯಲಿವೆ. ಸಣ್ಣ ಸಣ್ಣ ಸಂಸ್ಥೆಗಳು ಈ ಎಐ ಸೇವೆಯ ಲಾಭವನ್ನು ಪಡೆದುಕೊಳ್ಳಲಿವೆ.

ಮೇಲು-ಕೀಳು ಇರದು

ಯಾವುದೇ ಆಡಳಿತ ವ್ಯವಸ್ಥೆಯಲ್ಲಿ ತೀರ್ಮಾನ ಕೈಗೊಳ್ಳುವ ಹಿರಿಯ ಶ್ರೇಣಿಯ ವ್ಯಕ್ತಿಗಳು, ಅದನ್ನು ಕಾರ್ಯ ರೂಪಕ್ಕೆ ತರುವ ಸಿಬ್ಬಂದಿ, ಇತ್ಯಾದಿ ತಾರತಮ್ಯಗಳು ಕಡಿಮೆಯಾಗಲಿವೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮತ್ತು ಡಾಟಾ ಅನಾಲಿಟಿಕ್ಸ್‌ ತಂಡ ಅಥವಾ ವ್ಯಕ್ತಿಯ ಗುರಿ ನಿರ್ಧರಿಸುವ ಕೆಲಸವನ್ನು ಮಾಡುವುದರಿಂದ ಇಲ್ಲಿ ಮೇಲಾಧಿಕಾರಿ, ಸಿಬ್ಬಂದಿಯ ಒತ್ತಡಗಳಿಲ್ಲದ ಕೆಲಸ ಮಾಡುವ ಪರಿಸರ ಸೃಷ್ಟಿಯಾಗಲಿದೆ ಎಂದು ತಜ್ಞರು ಭವಿಷ್ಯ ನುಡಿಯುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.