ಹ್ಯಾಪಿ ಬರ್ತ್‌ ಡೇ ಗೂಗಲ್‌|ದೈತ್ಯ ಟೆಕ್‌ ಸಂಸ್ಥೆಗೆ ಈಗ ಇಪ್ಪತ್ತೊಂದು ವರ್ಷ!

ಗೂಗಲ್‌ ಇಲ್ಲದ ಇಂರ್ಟನೆಟ್‌ ಊಹಿಸಿಕೊಳ್ಳುವುದು ಕಷ್ಟ. ಎರಡು ದಶಕಗಳ ಹಿಂದೆ ಗೂಗಲ್‌ ಎಂಬ ಪದವೇ ವಿಚಿತ್ರವಾಗಿ ಕೇಳಿಸಿತ್ತು. ಈಗ ಅಚ್ಚರಿಯಾಗಿ ಆವರಿಸಿಕೊಂಡಿದೆ. ಗೂಗಲ್‌ ವ್ಯಾಪಿಸಿಕೊಂಡಿರುವ ಬಗೆ ಮತ್ತು ಹುಟ್ಟು ಹಾಕಿರುವ ಆತಂಕ ಎರಡೂ ಅಸಾಮಾನ್ಯದವು! 21ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಗೂಗಲ್‌ ಈ ವರ್ಷದ ಡೂಡಲ್‌ ಅನ್ನು ಅನಾವರಣ ಮಾಡಿದೆ

ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯ, 1995. ಲ್ಯಾರಿ ಪೇಜ್‌ ಮತ್ತು ಸೆರ್ಗಿ ಬ್ರಿನ್‌. ಇಬ್ಬರೂ ವಿದ್ಯಾರ್ಥಿಗಳು. ಆಗತಾನೇ ಜನಪ್ರಿಯವಾಗುತ್ತಿದ್ದ ವರ್ಲ್ಡ್‌ ವೈಡ್‌ ವೆಬ್‌ ಅನ್ನು ಸುಲಭವಾಗಿ ತಲುಪುವ ವಿಧಾನದ ಹುಡುಕಾಟದಲ್ಲಿದ್ದರು. ತಮ್ಮ ರೀಸರ್ಚ್‌ ಪ್ರಾಜೆಕ್ಟ್‌ನ ಭಾಗವಾಗಿ ಆರಂಭಿಸಿದ ಯೋಜನೆಯನ್ನು google.stanford.edu ಆಗಲೇ ಅವರಿಗೆ ಹೊಳೆದಿದ್ದು ಸರ್ಚ್‌ ಇಂಜಿನ್‌. ವಿವಿಧ ವೆಬ್‌ ತಾಣಗಳಲ್ಲಿರುವ ಸರಕನ್ನು ಒಂದೆಡೆ ಹುಡುಕಿ, ಕಂಡುಕೊಳ್ಳುವ ಒಂದು ಮಾಧ್ಯಮವನ್ನು ರೂಪಿಸುವ ಆಲೋಚನೆ ಹೊಳೆದದ್ದು. ಅದರ ಫಲವೆ ಬ್ಯಾಕ್‌ರಬ್‌. ಇದು ಗೂಗಲ್‌ನ ಮೊದಲ ಹೆಸರು.

ಲ್ಯಾರಿ ಪೇಜ್‌ ಮತ್ತು ಸೆರ್ಗಿ ತಾವು ಅಭಿವೃದ್ಧಿ ಪಡಿಸಿದ ಗೂಗಲ್‌ಗೆ ಒಂದು ಕಂಪನಿಯಾಗಿ 1998ರ ಸೆಪ್ಟೆಂಬರ್‌ 7 ರಂದು ಆರಂಭಿಸಿದರು. 2005ರಲ್ಲಿ ತನ್ನ ಸಂಸ್ಥೆಯ ಸಂಸ್ಥಾಪನ ದಿನವನ್ನು ಸೆಪ್ಟೆಂಬರ್ 27 ಎಂದು ಬದಲಿಸಿತು. ಅಂದಿನಿಂದ ಗೂಗಲ್‌ ವಾರ್ಷಿಕೋತ್ಸವ ಆಚರಿಸಲಾಗುತ್ತಿದ್ದು ಇಂದಿಗೆ 20 ವರ್ಷಗಳನ್ನು ಪೂರೈಸಿ 21ವರ್ಷಕ್ಕೆ ಕಾಲಿರಿಸಿದೆ. ಈ ದೀರ್ಥ ಅವಧಿಯಲ್ಲಿ ಗೂಗಲ್‌ ವಿಶ್ವದ ಅತಿದೊಡ್ಡ ಟೆಕ್‌ ಕಂಪನಿಯಾಗಿ ಬೆಳೆದು ನಿಂತಿದೆ.

ಗೂಗಲ್‌ ಜಗತ್ತಿನ ಅತ್ಯುತ್ತಮ ಸರ್ಚ್ ಆಗಿ ಬೆಳೆದ ಗೂಗಲ್‌ ನಿಧಾನವಾಗಿ ಈಮೇಲ್‌ ಸೇವೆಯನ್ನು ನೀಡಲಾರಂಭಿಸಿತು. ಆ ಕಾಲಕ್ಕೆ ಆಗಲೇ ಹೆಸರು ಮಾಡಿದ್ದ ಹಾಟ್‌ಮೇಲ್‌, ಯಾಹೂಗಳಿಗಿಂತ ಹೆಚ್ಚಿನ ಸ್ಥಳಾವಕಾಶ, ಬಳಕೆದಾರರಿಗೆ ಅನುಕೂಲಕರವಾದ ವಿನ್ಯಾಸದೊಂದಿಗೆ ಈಮೇಲ್‌ ವಲಯದಲ್ಲೂ ತನ್ನ ಹಿಡಿತ ಬಿಗಿ ಮಾಡಿಕೊಂಡಿತು.

ಫೇಸ್‌ಬುಕ್‌ ಇನ್ನೂ ಚಿಗುರುತ್ತಿದ್ದ ಕಾಲದಲ್ಲಿ ಗೂಗಲ್‌ ಆರ್ಕುಟ್‌ ಖರೀದಿಸಿತು. ಮುಕ್ತ ಬರವಣಿಗೆಗೆಂದು ಬ್ಲಾಗರ್‌ ಅನ್ನು ಉಚಿತವಾಗಿ ನೀಡಿತು. ವಿಡಿಯೋಗಳನ ತಾಣ ಯೂಟ್ಯೂಬ್‌ ಅನ್ನು ತನ್ನ ತೆಗೆದುಕೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಫೇಸ್‌ಬುಕ್‌ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಗೂಗಲ್‌ ಪ್ಲಸ್‌ ಹೆಸರಿನಲ್ಲಿ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಗಮನಸೆಳೆಯುವ ಪ್ರಯತ್ನವನ್ನೂ ಮಾಡಿತು. ಇವುಗಳಲ್ಲದೇ, ಗೂಗಲ್‌ ಅರ್ಥ್‌, ಮ್ಯಾಪ್ಸ್‌, ಕ್ರೋಮ್‌ ವೆಬ್‌ಬ್ರೌಸರ್‌ ಸೇರಿದಂತೆ ಹಲವು ಸೇವೆಗಳನ್ನು ನೀಡಲಾರಂಭಿಸಿತು.

ಈ ಪೈಕಿ ಗೂಗಲ್‌ ಸಂಸ್ಥೆಗೆ ಹಾಗೂ ಟೆಕ್‌ ಲೋಕಕ್ಕೆ ಮಹತ್ವದ ತಿರುವು, ಆಂಡ್ರಾಯ್ಡ್‌. ಮೊಬೈಲ್‌ ಫೋನ್‌ಗಳಿಗಾಗಿ ಆಪರೇಟಿಂಗ್‌ ಸಿಸ್ಟಮ್‌ವೊಂದನ್ನು ಅಭಿವೃದ್ಧಿಪಡಿಸಿದ ಗೂಗಲ್‌ ಇಂದು ಇಡೀ ಜಗತ್ತನ್ನೂ ನಿಯಂತ್ರಿಸುತ್ತಿದೆ. 2018ರ ಅಂಕಿ ಅಂಶಗಳ ಪ್ರಕಾರ ಜಗತ್ತಿನಲ್ಲಿ 2.35 ಬಿಲಿಯನ್‌ನಷ್ಟು ಆಂಡ್ರಾಯ್ಡ್‌ ಆಧರಿತ ಸ್ಮಾರ್ಟ್‌ಫೋನ್‌ಗಳು ಬಳಕೆಯಲ್ಲಿವೆ.

ಈಗಂತೂ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ರೊಬೊಟ್ಸ್‌, ಹ್ಯೂಮಾನಾಯ್ಡ್‌ಗಳನ್ನು ರೂಪಿಸುತ್ತಿದೆ. ರೊಬೊಟ್‌ ಸೇನೆಯನ್ನೇ ಆರಂಭಿಸಿದೆ ಎಂಬ ಗಾಳಿಸುದ್ದಿಯಂತೂ ಇದನ್ನು ಅಭಿವೃದ್ಧಿ ಎಂದು ಹೆಮ್ಮೆ ಪಡಬೇಕೊ, ಭವಿಷ್ಯದಲ್ಲಿ ಅನಾಹುತಕಾರಿಯಾಗಬಹುದು ಎಂದು ಆತಂಕ ಪಡಬೇಕೊ ಎಂಬ ಗೊಂದಲವನ್ನು ಹುಟ್ಟುಹಾಕಿದೆ.

ಎರಡು ದಶಕಗಳ ಅವಧಿಯುಲ್ಲಿ 180ಕ್ಕೂ ಹೆಚ್ಚು ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು 11ಸಾವಿರ ಕೋಟಿ ಡಾಲರ್‌ಗಳ ಮೌಲ್ಯದ ಕಂಪನಿಯಾಗಿ ಬೆಳೆದುನಿಂತಿದೆ. ಗೂಗಲ್‌ನ 2018ರಲ್ಲಿ ಇಲ್ಲಿಯವರೆಗಿನ ವಹಿವಾಟಿನ ಮೊತ್ತವೇ 31.15 ಕೋಟಿ ಬಿಲಿಯನ್ ಡಾಲರ್‌!
ಪ್ರಸ್ತುತ ಜಗತ್ತಿನ 50 ಭಾಷೆಗಳಲ್ಲಿ ಸೇವೆ ನೀಡುತ್ತಿದ್ದು, ಅದಕ್ಕಾಗಿ 85000 ಮಂದಿ ಗೂಗಲ್‌ ಉದ್ಯೋಗಿಗಳು ಶ್ರಮಿಸುತ್ತಿದ್ದಾರೆ. ಇದು ಗೂಗಲ್‌ನ ವಿರಾಟ ಸ್ವರೂಪ.

ಗೂಗಲ್‌ ಎಲ್ಲವನ್ನೂ ಉಚಿತವಾಗಿ ಕೊಟ್ಟು ದುಡ್ಡು ಮಾಡುತ್ತಿದೆಯೇ?

ಗೂಗಲ್ ಸಂಸ್ಥೆ ಕುರಿತು ಬಿಬಿಸಿ ನಿರ್ಮಿಸಿದ ಸಾಕ್ಷ್ಯಚಿತ್ರ

ಇದೆಲ್ಲವೂ ಒಂದಲ್ಲ ಒಂದು ಮೂಲದಿಂದ ಕೇಳಿರುವ ವಿಷಯ. ಆದರೆ ಗೂಗಲ್‌ ಇಷ್ಟು ಅಗಾಧವಾಗಿ ಬೆಳೆಯಲು ಹೇಗೆ ಸಾಧ್ಯವಾಯಿತು? ಗೂಗಲ್‌ ತನ್ನ ಬಳಕೆದಾರರಿಂದ ಯಾವ ಸೇವೆಗೂ ಹಣವನ್ನು ಪಡೆಯುವುದಿಲ್ಲ. ಎಲ್ಲವನ್ನೂ ಉಚಿತವಾಗಿ ನೀಡುತ್ತಿದೆ. ಆದರೂ ಜಗತ್ತಿನ ಎರಡನೆಯ ಅತಿ ದೊಡ್ಡ ಟೆಕ್‌ ಕಂಪನಿಯಾಗಿ ಬೆಳೆದದ್ದು ಹೇಗೆ?

ಎಲ್ಲ ಪ್ರಶ್ನೆಗಳಿಗೂ ಒಂದೇ ಪದದ ಉತ್ತರ ನೀಡಬಹುದು; ಗಮನ.

ಗೂಗಲ್‌ ತನ್ನ ಬಳಕೆದಾರರ ಮಾಹಿತಿಯನ್ನೇ ಬಂಡವಾಳ ಮಾಡಿಕೊಂಡು ಇಷ್ಟು ಬೆಳೆದಿದೆ. ಜೀಮೇಲ್‌ ಬಳಸುತ್ತಿದ್ದ ಕಾಲದಿಂದಲೂ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಾ ಬಂದಿದೆ. ಎಲ್ಲ ರೀತಿಯ ಮಾಹಿತಿಯೂ ಉಚಿತವಾಗಿ ಲಭ್ಯವಾಗಬೇಕು ಎಂಬುದು ಗೂಗಲ್‌ ಮೂಲ ಆಶಯ. ಹೀಗೆ ಉಚಿತವಾಗಿ ಲಭ್ಯವಾಗುವ ಮಾಹಿತಿಯನ್ನೇ ಬಳಸಿ ತನ್ನ ದೊಡ್ಡ ಬಿಸಿನೆಸ್‌ ಮಾಡೆಲ್‌ಅನ್ನು ಸ್ಥಾಪಿಸಿ ಬೆಳೆಸಿದೆ.
ಇನ್ನಷ್ಟು ಸರಳವಾಗಿ ಹೇಳಲು ಯತ್ನಿಸುತ್ತೇನೆ. ಅಮೆಜಾನ್‌, ಆಪಲ್‌ ಯಾವುದೇ ಸಂಸ್ಥೆಯಾಗಲಿ ತಮ್ಮ ಡಿಜಿಟಲ್‌ ಉತ್ಪನ್ನಗಳನ್ನು ಮಾರಿ ಹಣ ಮಾಡುತ್ತದೆ. ಆದರೆ ಗೂಗಲ್‌ನಲ್ಲಿ ಹಾಗೇ ಮಾರುವಂಥ ಉತ್ಪನ್ನಗಳೇನು ಇಲ್ಲ. ಆದರೆ ಸೇವೆಗಳನ್ನು ಮಾರಬಹುದು. ಆದರೆ ಇಂಟರ್ನೆಟ್‌ನಲ್ಲಿ ಎಲ್ಲವೂ ಉಚಿತವಾಗಿ ಲಭ್ಯವಾಗಬೇಕು ಎನ್ನುವುದು ಅದರ ಮೂಲತತ್ವ. ಹಾಗಾಗಿ ತನ್ನ ಬಳಕೆದಾರರ ಮಾಹಿತಿಯ ಸಂಗ್ರಹಿಸುವ ಗೂಗಲ್‌ ಅದನ್ನು ಬಳಸಿ ವಸ್ತುಗಳನ್ನು ಮಾರುವ ಉದ್ಯಮಗಳಿಗೆ ತನ್ನ ಬಳಕೆದಾರರ ಗಮನಸೆಳೆಯುವ ಅವಕಾಶವನ್ನು ಸೃಷ್ಟಿಸುತ್ತದೆ. ಈ ಗಮನ ಸೆಳೆಯುವ ಅವಕಾಶ ಸೃಷ್ಟಿಸುವ ಮೂಲಕ- ಜಾಹೀರಾತುಗಳಿರಬಹುದು, ಸರ್ಚ್‌ ಮಾಡಿದಾಗ ಬರುವ ಫಲಿತಾಂಶಗಳಿರಬಹುದು- ವ್ಯಾಪಾರಿಗಳಿಗೆ ತಮ್ಮ ಉತ್ಪನ್ನ, ಸೇವೆಗಳನ್ನು ಗ್ರಾಹಕರ ಗಮನಕ್ಕೆ ತರುವುದಕ್ಕೆ ಅನುವು ಮಾಡಿಕೊಡುತ್ತದೆ. ಹೀಗೆ ಮಾಡುವ ಮೂಲಕ ಅಪಾರ ಪ್ರಮಾಣದ ಆದಾಯವನ್ನು ಗೂಗಲ್‌ ಗಳಿಸುತ್ತಿದೆ.

ಸ್ಮಾರ್ಟ್‌ಫೋನ್‌ ಬಳಕೆ ವ್ಯಾಪಕ ಹಾಗೂ ಅಗಾಧವಾದ ಮೇಲಂತೂ, ಗ್ರಾಹಕರ ಪ್ರತಿಯೊಂದು ಮಾಹಿತಿಯನ್ನು ಸಂಗ್ರಹಿಸುವುದು ಸುಲಭವಾಗಿಬಿಟ್ಟಿತು. ಯಾವಾಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಏನು ಖರೀದಿ ಮಾಡಿದ್ದಾರೆ? ಯಾರಿಗೆ ಏನನ್ನುಕೊಡಿಸಿದ್ದಾರೆ? ಇಷ್ಟದ ವಸ್ತುವೇನು? ಇಷ್ಟದ ಊರು ಯಾವುದು? ಹೀಗೆ ಪ್ರತಿಯೊಂದು ಮಾಹಿತಿಯೂ ಲಭ್ಯವಾಗಲು ಸಾಧ್ಯವಾದ ಮೇಲೆ ಗೂಗಲ್‌ ಬಿಸಿನೆಸ್‌ ಮಾಡೆಲ್‌ ಇನ್ನಷ್ಟು ದೃಢ ಹಾಗೂ ಲಾಭದಾಯಕವಾಗಿ ಬೆಳೆದಿದೆ. ಗೂಗಲ್‌ನ ಈ ಬಿಸಿನೆಸ್‌ ಮಾದರಿ ನೈತಿಕ ಹೌದೋ ಅಲ್ಲವೋ ಎಂಬುದು ಚರ್ಚೆಗೆ ಕಾರಣವಾಗಿರುವ ವಿಷಯ.

ಖಾಸಗಿತನದ್ದೇ ಯಕ್ಷ ಪ್ರಶ್ನೆ

ಗೂಗಲ್‌ನ ಬಿಸಿನೆಸ್‌ ಮಾದರಿಯೇ ಅದರ ಬಳಕೆದಾರರ ಖಾಸಗಿತನದ ಬಗ್ಗೆ ಗಂಭೀರ ಪ್ರಶ್ನೆಗಳು ಏಳುವಂತೆ ಮಾಡಿದೆ. ಬಳಕೆದಾರರನ ಮಾಹಿತಿಯನ್ನು, ವ್ಯಾಪಾರಿಗಳಿಗೆ ಹಂಚಿಕೊಳ್ಳುವ ಈ ಮಾದರಿ, ವ್ಯಕ್ತಿಯೊಬ್ಬನ ಖಾಸಗಿತನವನ್ನು ಕಸಿದುಕೊಂಡಂತಾಗುತ್ತದೆ ಎಂಬ ವಾದ ಹುಟ್ಟಲು ಕಾರಣವಾಯಿತು.

ಹಲವು ಉಚಿತ ಸೇವೆಗಳ ಮೂಲಕ ಅಗಾಧ ಪ್ರಮಾಣ ಬಳಕೆದಾರರನ್ನು ನಿಯಂತ್ರಿಸಲು ಆರಂಭಿಸಿದ ಗೂಗಲ್‌ ಟೆಕ್‌ಲೋಕದಲ್ಲಿ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಿದೆ ಎಂದು ಮುಕ್ತ ತಂತ್ರಾಂಶ, ಮುಕ್ತ ಇಂಟರ್ನೆಟ್‌ ಪ್ರತಿಪಾದಿಸುವವರು ವಿರೋಧಿಸಲು ಆರಂಭಿಸಿದರು. ನೀವೇ ಒಮ್ಮೆ ಯೋಚಿಸಿ, ಆಂಡ್ರಾಯ್ಡ್‌ ಫೋನ್‌ ಬಿಟ್ಟರೂ, ಜೀಮೇಲ್‌ ಬಿಡಲಾಗದು, ಈಗ ಮನರಂಜನೆಯ ಪ್ರಮುಖ ಕಿಂಡಿಯಾಗಿರುವ ಯೂಟ್ಯೂಬ್‌ ಬಿಡಲು ಸಾಧ್ಯವೇ? ಹೀಗೆ, ಹಲವು ಆಯಾಮಗಳಲ್ಲಿ ಗೂಗಲ್‌ ಕಂಪನಿ ಬಳಕೆದಾರರನ್ನು ಹಿಡಿದುಕೊಂಡಿದೆ. ಬಂಧಿಸಿರುವ ಸಂಕೋಲೆಗಳು ಮಾತ್ರ ಕಾಣಿಸುವುದಿಲ್ಲವಷ್ಟೇ.

ವಾಲ್‌ಸ್ಟ್ರೀಟ್‌ ಜರ್ನಲ್‌ನ ಟಾಮ್‌ ಗ್ಯಾರ ಅವರ ವರದಿಯೊಂದರ ಪ್ರಕಾರ, ಗೂಗಲ್‌ ಒಂದು ವರ್ಷದ ಅವಧಿಯಲ್ಲಿ ತನ್ನ ಬಳಕೆದಾರರ ಮಾಹಿತಿಯನ್ನು ಆಧರಿಸಿ ಪೋರ್ಟ್‌ಫೋಲಿಯೋವನ್ನು ಸಿದ್ಧಪಡಿಸುತ್ತದೆ. ಉದಾಹರಣೆಯಾಗಿ ವ್ಯಕ್ತಿಯೊಬ್ಬರು ಒಂದು ವರ್ಷದ ಅವಧಿಯಲ್ಲಿ ಗೂಗಲ್‌ ಸಂಬಂಧಿಸಿದ ಸೇವೆಯನ್ನು ಬಳಸುವ ಕ್ರಮವನ್ನು ದಾಖಲಿಸಿದೆ. ಅದರಂತೆ ಒಂದು ವರ್ಷದಲ್ಲಿ 1.34 ಲಕ್ಷ ಮೇಲ್‌ಗಳು ವಿನಿಮಯವಾಗುತ್ತವೆ. 2700ಕ್ಕೂ ಹೆಚ್ಚು ನಂಬರ್‌ಗಳು ಸೇವ್‌ ಆಗುತ್ತವೆ, ಯೂಟ್ಯೂಬ್‌ನಲ್ಲಿ 9200ಕ್ಕೂ ವಿಡಿಯೋಗಳನ್ನು ವೀಕ್ಷಿಸಲಾಗುತ್ತದೆ, 100ಕ್ಕೂ ಹೆಚ್ಚು ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲಾಗುತ್ತದೆ, 35 ಬಾರಿ ಪಾಸ್‌ವರ್ಡ್‌ಗಳು ಬದಲಾಗುತ್ತವೆ, 60ಸಾವಿರಕ್ಕೂ ಹೆಚ್ಚು ಬಾರಿ ಗೂಗಲ್‌ನಲ್ಲಿ ಸರ್ಚ್ ಮಾಡಲಾಗುತ್ತದೆ ಎಂದು ವರದಿ ವಿವರಿಸಿತ್ತು.

ಹೀಗಿರುವಾಗ ಖಾಸಗಿತನ ಎಂಬ ಚರ್ಚೆ ನಿಜಕ್ಕೂ ಹಾಸ್ಯಾಸ್ಪದವಾಗಿ ಕೇಳಿಸಬಿಡುತ್ತದೆ. ಫೇಸ್‌ಬುಕ್‌ ಮತ್ತು ಕೇಂಬ್ರಿಡ್ಜ್‌ ಅನಾಲಿಟಿಕಾ ಪ್ರಕರಣದಲ್ಲಿ ಮಾಹಿತಿ ಸುರಕ್ಷತೆ ಮತ್ತು ಬಳಕೆದಾರನ ಖಾಸಗಿತನದ ಚರ್ಚೆ ಭಾರಿ ಮಹತ್ವ ಪಡೆದುಕೊಂಡಿದೆ. ಫೇಸ್‌ಬುಕ್‌ಗಿಂತಲೂ ಬೃಹತ್ತಾದ ಟೆಕ್‌ ಕಂಪನಿಯೂ ಈಗ ಖಾಸಗಿತನದ ವಿಷಯದಲ್ಲಿ ಹಲವು ಪ್ರಶ್ನೆಗಳನ್ನು ಎದುರಿಸುತ್ತಿದೆ. ಗೂಗಲ್‌ ಧ್ವನಿ ಆಧರಿತ ಸರ್ಚ್‌ಗಳನ್ನು ಸಂಗ್ರಹಿಸುವುದು, ನಮ್ಮ ಹುಡುಕಾಟಕ್ಕೆ ಅನುಕೂಲವಾಗುವಂತೆ ತಾನಾಗಿ ಸಲಹೆಗಳನ್ನು ನೀಡುವುದು ಎಲ್ಲವೂ ನಮ್ಮದೇ ಬಳಕೆಯ ಇತಿಹಾಸವನ್ನು ಆಧರಿಸಿದ್ದು. ಇದೆಲ್ಲವೂ ನಮ್ಮ ಖಾಸಗಿತನವನ್ನು ಉಲ್ಲಂಘಿಸಿದ ಉದಾಹರಣೆ. ಹಾಗಾಗಿ ಈಗ ಫೇಸ್‌ಬುಕ್‌ನಂತೆ ಗೂಗಲ್‌ ಕೂಡ ಯುರೋಪಿಯನ್‌ ಯೂನಿಯನ್‌ ಎದುರು ಸಮರ್ಥನೆ ನೀಡಬೇಕಾದ ಹಾಗೂ ಖಾಸಗಿತ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾದ ಒತ್ತಡವನ್ನು ಎದುರಿಸುತ್ತಿದೆ.

ಗೂಗಲ್‌ ಹೀಗೆ ಅಗಾಧ ಮಾಹಿತಿಯನ್ನು ತನ್ನಲ್ಲಿಟ್ಟುಕೊಂಡಿದ್ದು, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಷಯಗಳಲ್ಲಿ ತಾನು ಬಯಸಿದಂತಹ ಅಭಿಪ್ರಾಯ ರೂಪಿಸಬಲ್ಲಷ್ಟು ಶಕ್ತಿಶಾಲಿಯಾಗಿ ಬೆಳೆದಿದೆ. ಹಣವಂತರು, ಅಧಿಕಾರಸ್ಥರ ಅಣತಿ ಅಥವಾ ಮನವಿ ಮೇರೆಗೆ ಹಣಕ್ಕಾಗಿ ಅವರಿಗೆ ಬೇಕಾದ ಅಭಿಪ್ರಾಯವನ್ನು ರೂಪಿಸಬಲ್ಲದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಪಾಯ ಒಡ್ಡುವಂತೆ ಬೆಳೆದಿದೆ ಎಂಬ ಟೀಕೆ-ವಿಮರ್ಶೆಗಳು ತೀವ್ರವಾಗಿವೆ.

ಮುಕ್ತ ಸೇವೆ, ಮುಕ್ತ ಇಂಟರ್ನೆಟ್‌ ಅನ್ನು ಪ್ರತಿಪಾದಿಸುವ ಗೂಗಲ್‌ನ ಧ್ಯೇಯ ವಾಕ್ಯ, ‘ ಡು ನೊ ಈವಿಲ್‌’ ಅಂದರೆ ದುಷ್ಟತನ ಕೆಲಸ ಮಾಡಬಾರದು ಎನ್ನುತ್ತದೆ. ಆದರೆ ಗೂಗಲ್‌ ಗಳಿಕೆಗೆ ಅನುಸರಿಸುವ ಮೂಲವೇ ದುಷ್ಟತನದ್ದು ಎಂಬ ಆರೋಪ ದಿನೇದಿನೇ ಬಲವಾಗುತ್ತಿದೆ. ಬಳಕೆದಾರರನ್ನು ಗುಲಾಮರನ್ನಾಗಿಸುವಷ್ಟು ಬಲಾಢ್ಯವಾಗಿ ಬೆಳೆದಿರುವ ಗೂಗಲ್‌ಗೆ ಪರ್ಯಾಯ ಕಂಡುಕೊಳ್ಳಬೇಕಾದ್ದು ಸಮಕಾಲೀನ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ.