ಟೆಕ್‌ 20 | ಈ ವರ್ಷ ತೆರೆ ಕಾಣಲಿರುವ ಟಾಪ್‌ ಹತ್ತು ಸೈ ಫೈ ಸಿನಿಮಾಗಳು ಯಾವುವು ಗೊತ್ತ?

ಮನುಷ್ಯ ಮತ್ತು ವಿಜ್ಞಾನ-ತಂತ್ರಜ್ಞಾನ ನಡುವಿನ ನಂಟು, ಸಂಘರ್ಷವನ್ನು ಬಿಚ್ಚಿಡುವ ಹಲವು ಚಿತ್ರಗಳು ಇತ್ತೀಚೆಗೆ ಬಂದಿವೆ. ಹಾಲಿವುಡ್‌ ಮತ್ತಷ್ಟು ಸಿನಿಮಾಗಳೊಂದಿಗೆ ಸಿದ್ಧವಾಗುತ್ತಿದ್ದು, ಈ ವರ್ಷ ಬಿಡುಗಡೆ ಮಾಡುತ್ತಿದೆ. ಆ ಸಿನಿಮಾಗಳು ಯಾವುವು? ಯಾವ ಚಿತ್ರದ ಮುಂದುವರಿದ ಭಾಗ ತೆರೆ ಕಾಣಲಿದೆ. ಇಲ್ಲಿದೆ ಪಟ್ಟಿ

1. ಸೋನಿಕ್‌ ದಿ ಹೆಡ್ಜ್‌ಹಾಗ್‌

ವಿಡಿಯೋ ಗೇಮ್‌ ಜನಪ್ರಿಯವಾಗಿರುವ ಸೋನಿಕ್‌ ಹೆಡ್ಜ್‌ಹಾಗ್‌ ಈಗ ದೊಡ್ಡ ಪರದೆಗೆ ಬರುತ್ತಿದೆ. ಜಿಮ್‌ ಕ್ಯಾರಿ, ಬೆನ್‌ ಶ್ವಾರ್ಟ್ಜ್‌, ಜೇಮ್ಸ್‌ಮರ್ಸೆಡೆನ್‌ ಮುಖ್ಯಪಾತ್ರಗಳಲ್ಲಿದ್ದು, ಟ್ರೇಲರ್‌ ಈಗಾಗಲೇ ಹೊರಬಿದ್ದಿದೆ. ಮೊದಲ ಟ್ರೇಲರ್‌ ವಿವಾದ ಹುಟ್ಟುಹಾಕಿದ ಕಾರಣ, ಈಗ ಹೊಸ ಟ್ರೇಲರ್‌ನೊಂದಿಗೆ ವೀಕ್ಷಕರನ್ನು ಆಕರ್ಷಿಸುತ್ತಿದೆ. ಫೆಬ್ರವರಿ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷಿ ಇದೆ.

2. 6 ಬಿಲಿಯನ್‌ ಡಾಲರ್‌ ಮ್ಯಾನ್‌

ಎಪ್ಪತ್ತರ ದಶಕದಲ್ಲಿ ಬಂದ ಇದೇ ಹೆಸರಿನ ಚಿತ್ರದ ರೀಮೇಕ್‌ ಇದು. ಮಾರ್ಕ್‌ ವಾಲ್‌ಬರ್ಗ್‌ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸೇನಾನಾಯಕನಾಗಿ ಪಾತ್ರ ನಿರ್ವಹಿಸಿರುವ ವಾಲ್‌ಬರ್ಗ್‌ ಇದರಲ್ಲಿ ಬಯೋನಿಕ್‌ ಅಂಗಗಳನ್ನು ಹೊಂದಿರುವ ಸೈಬಾರ್ಗ್‌ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಟ್ರೇಲರ್‌ ನಿರೀಕ್ಷೆಯಲ್ಲಿದ್ದು, ಚಿತ್ರ ಜೂನ್‌ನಲ್ಲಿ ಹೊರಬರುವ ಸಾಧ್ಯತೆ ಇದೆ.

3. ಬಯೋಸ್

ಭೂಮಿಯ ಮೇಲೆ ಉಳಿದ ಕಟ್ಟ ಕಡೆಯ ವ್ಯಕ್ತಿ. ಆತನೂ ಸಾವಿನ ಅಂಚಿನಲ್ಲಿದ್ದಾನೆ! ಸತ್ತ ಮೇಲೆ ತನ್ನ ನಾಯಿಯನ್ನು ನೋಡಿಕೊಳ್ಳಲಿ ಎಂದು ಒಂದು ರೊಬೊಟ್‌ ಅನ್ನು ಆತ ನಿರ್ಮಿಸುತ್ತಾನೆ. ಕುತೂಹಲ ಕೆರಳಿಸುವ ಈ ಕಥಾ ಹಂದರದಲ್ಲಿ ಕಾಣಿಸಿಕೊಂಡಿರುವುದು ಪ್ರಖ್ಯಾತ ನಟ ಟಾಮ್‌ ಹ್ಯಾಂಕ್ಸ್‌. ಕಾಸ್ಟ್‌ ಅವೇ ಎಂಬ ಚಿತ್ರದಲ್ಲಿ ಇಂಥದ್ದೇ ಒಂದು ಪಾತ್ರನಿರ್ವಹಿಸಿದ್ದ ಹ್ಯಾಂಕ್ಸ್‌ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ. ಚಿತ್ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

4. ದಿ ಇನ್‌ವಿಸಿಬಲ್‌ ಮ್ಯಾನ್

ಎಚ್‌ ಜಿ ವೆಲ್ಸ್‌ ಇದೇ ಕಾದಂಬರಿಯಿಂದ ಪ್ರೇರಣೆಯನ್ನು ಪಡೆದಿರುವ ಈ ಸಿನಿಮಾವನ್ನು ಲೀ ವ್ಯಾನೆಲ್‌ ನಿರ್ದೇಶಿಸುತ್ತಿದ್ದಾರೆ. ಮೂರು ವರ್ಷಗಳ ಹಿಂದೆಯೇ ಚಿತ್ರೀಕರಣ ಆರಂಭಿಸಲಾಗಿದ್ದು, ಚಿತ್ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಎಲಿಜಬೆತ್‌ ಮಾಸ್, ಆಲಿವರ್‌ ಜಾಕ್‌ಸನ್‌, ಆಲ್ಡಿಸ್‌ ಹಾಡ್ಜ್‌ ಮುಖ್ಯಪಾತ್ರದಲ್ಲಿದ್ದಾರೆ.

5. ನೊ ಟೈಮ್‌ ಟು ಡೈ

ಇದು ಬಾಂಡ್‌ ಚಿತ್ರ. ಟೆಕ್ನಾಲಜಿ ಇಲ್ಲದ ಬಾಂಡ್‌ ಸಿನಿಮಾವನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ! ನಿವೃತ್ತನಾಗಿರುವ ಬಾಂಡ್‌ ಅನ್ನು ಸಿಐಎ (ಅಮೆರಿಕದ ಬೇಹುಗಾರಿಕಾ ಸಂಸ್ಥೆ)ಯಲ್ಲಿ ಸೇವೆ ಸಲ್ಲಿಸುತ್ತಿರುವ ಗೆಳೆಯ ಕೋರಿಕೆ ಮೇರೆಗೆ ಮತ್ತೆ ಖಳರ ಬೇಟೆಗೆ ಇಳಿಯುತ್ತಾನೆ. ಅತ್ಯಂತ ಅಪಾಯಕಾರಿ ಅಸ್ತ್ರವನ್ನು ಹೊಂದಿರುವ ನಿಗೂಢ ವ್ಯಕ್ತಿಯನ್ನು ಹಿಡಿಯುವುದಕ್ಕೆ ಬಾಂಡ್‌ ಹೊರಡುತ್ತಾನೆ. ಚಿತ್ರದ ಟ್ರೇಲರ್‌ ಈಗಾಗಲೇ ಗಮನಸೆಳೆದಿದ್ದು, ಏಪ್ರಿಲ್‌ ಮೊದಲ ವಾರ ಚಿತ್ರ ತೆರೆ ಕಾಣಲಿದೆ.

6. ಡ್ಯೂನ್

ಈ ಚಿತ್ರದ ಟ್ರೇಲರ್‌ ಕೂಡ ಲಭ್ಯವಿಲ್ಲ. ಆದರೆ ವರ್ಷದ ಅತಿ ದೊಡ್ಡ ವೈಜ್ಞಾನಿಕ ಕಾಲ್ಪನಿಕ ಸಿನಿಮಾ ಎಂದು ಸುದ್ದು ಮಾಡುತ್ತಿದೆ. ಫ್ರಾಂಕ್‌ ಹರ್ಬಟ್‌ ಕಾದಂಬರಿ ಆಧರಿಸಿದ ಈ ಚಿತ್ರ, ವಯಸ್ಕರ ಸ್ಟಾರ್‌ ವಾರ್‌ ಎಂದೂ ಕರೆಸಿಕೊಳ್ಳುತ್ತಿದೆ. ಕೆನಡಾದ ಡೆನಿಸ್‌ ವಿಲೆನೀವ್‌ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅತಿ ದೊಡ್ಡ ತಾರಾಗಣವನ್ನು ಹೊಂದಿದೆ. ಭವಿಷ್ಯದಲ್ಲಿ ಮನುಷ್ಯತ್ವ ಹೇಗಿರುತ್ತದೆ ಎಂಬುದನ್ನು ಚಿತ್ರ ಕಟ್ಟಿಕೊಡುತ್ತದೆ ಎನ್ನಲಾಗಿದೆ. ಡಿಸೆಂಬರ್‌ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಟ್ರೇಲರ್‌ ಇನ್ನು ಹೊರಬಿದ್ದಿಲ್ಲ.

7. ಅವತಾರ್‌ 2

ಹತ್ತು ವರ್ಷಗಳ ಹಿಂದೆ ಸಿನಿಮಾ ನಿರ್ಮಾಣದಲ್ಲೇ ಒಂದು ಮಹತ್ವದ ಪ್ರಯೋಗ ಎನಿಸಿಕೊಂಡ ಅವತಾರ್‌ ಚಿತ್ರ ತೆರೆ ಕಂಡಿತ್ತು. ದುರಾಸೆಯ ಮನುಷ್ಯ ಸಂಪನ್ಮೂಲಕ್ಕಾಗಿ ಮೂಲನಿವಾಸಿಗಳೊಂದಿಗೆ ಸಂಘರ್ಷಕ್ಕೆ ಇಳಿಯುವ ಕಥೆಯನ್ನು ಹೊಂದಿದ್ದ ಅವತಾರ್‌ ಅನ್ನು ಜೇಮ್ಸ್‌ ಕ್ಯಾಮೆರೂನ್‌ ತೆರೆಗೆ ತಂದಿದ್ದರು. ಅದರ ಮುಂದುವರಿದ ಭಾಗ ಈ ವರ್ಷ ತೆರೆ ಕಾಣಲಿದೆ ಎನ್ನಲಾಗುತ್ತಿದೆ.

8. ಆಫ್ಟರ್‌ ಯಾಂಗ್‌

ಕೋಗೊನಾಡ ನಿರ್ದೇಶನದ ಈ ಚಿತ್ರ ರೊಬೊಟ್‌ಗಳ ಸುತ್ತ ಹೆಣೆದ ಕತೆ. ರೊಬೊವೊಂದನ್ನು ಬೇಬಿಸಿಟ್ಟರ್‌ ಆಗಿ ನೇಮಿಸಿಕೊಳ್ಳುವ ಕುಟುಂಬ, ನಂತರ ಅದನ್ನು ಉಳಿಸಿಕೊಳ್ಳುವುದಕ್ಕಾಗಿ ನಡೆಸುವ ಸಾಹಸವನ್ನು ಕಟ್ಟಿಕೊಡುತ್ತದೆ. ಕಾಲಿನ್ ಫ್ಯಾರೆಲ್‌, ಜೋಡಿ ಟರ್ನರ್‌ ಸ್ಮಿತ್‌ ಮುಖ್ಯ ಪಾತ್ರದಲ್ಲಿದ್ದಾರೆ. ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ.

9. ವಾಯೇಜರ್ಸ್‌

ನೀಲ್‌ ಬರ್ಗರ್‌ ನಿರ್ದೇಶನದ ಈ ಚಿತ್ರ ಬಾಹ್ಯಾಕಾಶದ ಕಥೆಯೊಂದನ್ನು ಕಟ್ಟಿಕೊಡಲಿದೆ. ಮೂವತ್ತು ಮಂದಿ ಮಹಿಳಾ ಮತ್ತು ಪುರುಷ ಗಗನಯಾನಿಗಳು ಬಾಹ್ಯಾಕಾಶದಲ್ಲಿ ಎದುರಿಸುವ ಸವಾಲು, ಅದನ್ನು ಎದುರಿಸುವ ರೋಚಕ ಕತೆಯನ್ನು ಅನಾವರಣ ಮಾಡಲಿದೆ. ಕಾಲಿನ್‌ ಫ್ಯಾರೆಲ್, ಟೈ ಶೆರಿಡಾನ್, ಲಿಲಿ ರೋಸ್‌ ಡೆಪ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್‌ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

10. ಬಿಲ್‌ ಅಂಡ್‌ ಟೆಡ್‌ ಫೇಸ್‌ ದಿ ಮ್ಯೂಸಿಕ್

ಇದು ಹಾಸ್ಯ ಪ್ರಧಾನವಾದ ಸೈಫೈ ಚಿತ್ರ. ಡೀ ಪ್ಯಾರಿಸಾಟ್‌ ನಿರ್ದೇಶನದ ಈ ಚಿತ್ರದಲ್ಲಿ ಕೀನು ರೀವ್ಸ್‌ ಅಲೆಕ್ಸ್‌ ವಿಂಟರ್‌ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಧ್ಯ ವಯಸ್ಸಿನ ಬಿಲ್‌ ಮತ್ತು ಟೆಡ್‌ಗೆ ಭೂಮಿಯ ಮೇಲಿನ ಜೀವಿಗಳನ್ನು ರಕ್ಷಿಸುವಂತಹ ಹಾಡೊಂದನ್ನು ಸಂಯೋಜಿಸುವುದಕ್ಕೆ ಭವಿಷ್ಯದಿಂದ ಬಂದ ವ್ಯಕ್ತಿಯೊಬ್ಬನಿಂದ ಸೂಚನೆ ಸಿಗುತ್ತದೆ. ಈ ಇಬ್ಬರು ಆ ಕೆಲಸವನ್ನು ಮಾಡುತ್ತಾರೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ನೋಡೋಣ. ಆಗಸ್ಟ್‌ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.