ಟೆಲಿಗ್ರಾಮ್‌ ನಲ್ಲಿ ಇನ್ನು ವಿಡಿಯೋ -ಫೋಟೋಗಳನ್ನು ಎಡಿಟ್‌ ಮಾಡಬಹುದು!

ವಾಟ್ಸ್‌ಆಪ್‌, ಟೆಲಿಗ್ರಾಮ್‌ಗಳ ನಡುವೆ ಅಘೋಷಿತ ಯುದ್ಧವಿದೆ. ಈ ಯುದ್ಧವನ್ನು ಟೆಲಿಗ್ರಾಮ್‌ ಇನ್ನೂ ತೀವ್ರಗೊಳಿಸಿದೆ. ಈಗ ಪರಿಚಯಿಸಲಾಗಿರುವ ವಿಡಿಯೋ ಎಡಿಟಿಂಗ್‌ ಫೀಚರ್‌ ಟೆಲಿಗ್ರಾಮ್‌ ಬಳಕೆದಾರರ ಸಂಖ್ಯೆ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ!

ಸೋಷಿಯಲ್‌ ಮೆಸೇಜಿಂಗ್‌ ಆಪ್‌ಗಳಲ್ಲಿ ಇದು ಕ್ರಾಂತಿ ಎಂದರೆ ಅತಿಶಯೋಕ್ತಿಯೇನಲ್ಲ! ಎಲ್ಲ ಸೋಷಿಯಲ್‌ ಮೆಸೇಜಿಂಗ್‌ ಆಪ್‌ಗಳಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಮಿತಿಗಳು ಹಲವು. ಅಂತಹ ಮಿತಿಗಳನ್ನು ಮೀರಿದ್ದ ಟೆಲಿಗ್ರಾಂ ಈಗ ವಿಡಿಯೋ ಎಡಿಟಿಂಗ್‌, ಫೋಟೊ ಎಡಿಟಿಂಗ್‌ ಫೀಚರ್‌ಗಳನ್ನು ನೀಡುವ ಮೂಲಕ ಟೆಲಿಗ್ರಾಮ್‌ ಬಳಕೆಯ ಅನುಭವವನ್ನು ಇನ್ನಷ್ಟು ವಿಶೇಷವಾಗಿಸಿದೆ.

ತನ್ನ ಅಧಿಕೃತ ಬ್ಲಾಗ್‌ಪೋಸ್ಟ್‌ನಲ್ಲಿ ಪ್ರಕಟಿಸಿರುವ ಟೆಲಿಗ್ರಾಮ್‌ ಫೋಟೋ, ಜಿಫ್‌, ವಿಡಿಯೋಗಳನ್ನು ಹಂಚಿಕೊಳ್ಳುವ ಅನುಭವವನ್ನು ಶ್ರೀಮಂತಗೊಳಿಸುವ ಫೀಚರ್‌ಗಳನ್ನು ಬಳಕೆದಾರರಿಗೆ ನೀಡಿರುವುದಾಗಿ ಹೇಳಿದೆ.

ಫೋಟೋಗಳ ಮೇಲೆ ಅಂಟಿಸಲು ಅನಿಮೇಟೆಡ್‌ ಸ್ಟಿಕರ್‌ಗಳನ್ನು ನೀಡಿದೆ. ಜಿಫ್‌ಗಳಿಗೂ ಈ ಸ್ಟಿಕರ್‌ ಬಳಸಬಹುದು.

ಜಿಫ್‌ಗಳು ಲೋಡಿಂಗ್‌ ಟೈಮ್ ಅನ್ನು ಸುಧಾರಿಸಿದ್ದು, ಇನ್ನಷ್ಟು ಎಮೋಜಿಗಳೊಂದಿಗೆ ಭಾವನೆಗಳ ಅಭಿವ್ಯಕ್ತಿಗೆ ಪೂರಕವಾಗುವಂತೆ ರೂಪಿಸಲಾಗಿದೆ.

ಆಂಡ್ರಾಯ್ಡ್‌ ಫೋನಿನಲ್ಲಿ ಟೆಲಿಗ್ರಾಮ್‌ ಬಳಸುವವರಿಗೆ ಹೆಚ್ಚಿನ ಫೀಚರ್‌ ನೀಡುತ್ತಿದೆ. ಸುಧಾರಿತ ವಿಡಿಯೋ ಪ್ಲೇಯರ್‌ ಪರಿಚಯಿಸಿದ್ದು, ಇದು 30 ಸೆಕೆಂಡ್‌ಗಿಂತ ಕಡಿಮೆ ಅವಧಿಯ ವಿಡಿಯೋಗಳ ಆಟೋಮ್ಯಾಟಿಕ್‌ ಆಗಿ ಲೂಪ್‌ ಆಗುವಂತೆ ಮಾಡಿದೆ.

ಇದನ್ನೂ ಓದಿ | ಮಿತ್ರೋ ಹೆಸರಿನಲ್ಲಿ ಬಂದ ದೇಸಿ ಟಿಕ್‌ ಟಾಕ್‌, ಭಾರತದಲ್ಲ, ಪಾಕಿಸ್ತಾನದ್ದಂತೆ!

ಟೆಲಿಗ್ರಾಮ್‌ ಈಗಾಗಲೇ ಹೆಚ್ಚು ಸುರಕ್ಷಿತವಾದ, ಗೌಪ್ಯತೆ ಕಾಪಾಡುವ, ಅತಿ ದೊಡ್ಡ ಗಾತ್ರದ ಫೈಲ್‌ಗಳನ್ನು ಹಂಚಿಕೊಳ್ಳುವ ಅವಕಾಶವಿರುವ ಹಾಗೂ ಹೆಚ್ಚು ಸದಸ್ಯರ ಗುಂಪುಗಳನ್ನು ಹೊಂದುವ ಅವಕಾಶವಿರುವ ಸೋಷಿಯಲ್‌ ಮೆಸೇಜಿಂಗ್‌ ಆಪ್‌ ಅಗಿ ಜನಪ್ರಿಯವಾಗಿದ್ದು, ಈ ಹೊಸ ಫೀಚರ್‌ಗಳು ಇನ್ನಷ್ಟು ಬಳಕೆದಾರರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.