ಫಾರ್ವರ್ಡ್‌ ನಿರ್ಬಂಧಿಸಿ, ಗೌಪ್ಯವಾಗಿ ಪೋಸ್ಟ್‌ ಮಾಡಿ; ಟೆಲಿಗ್ರಾಮ್‌ನಲ್ಲಿ ಇನ್ನಷ್ಟು ಹೊಸ ಫೀಚರ್ಸ್‌!

ವಾಟ್ಸ್ಯಾಪ್‌ ಖಾಸಗಿತನದ ನಿಯಮಗಳನ್ನು ಬಲವಂತವಾಗಿ ಹೇರಲು ಯತ್ನಿಸಿದಾಗ ಬಹುಪಾಲು ಬಳಕೆದಾರರು ಖಾಸಗಿತನ ಮತ್ತು ಮಾಹಿತಿ ಸುರಕ್ಷತೆಗೆ ಒತ್ತು ನೀಡುವ ಇತರೆ ಮೆಸೇಜಿಂಗ್‌ ಆ‍್ಯಪ್‌ಗಳತ್ತ ವಾಲಿದ್ದರು. ಈ ಪೈಕಿ ಅತಿಹೆಚ್ಚ ಬಳಕೆದಾರರನ್ನು ಗಳಿಸಿದ್ದು ಟೆಲಿಗ್ರಾಂ. ತನ್ನತ್ತ ಬಳಕೆದಾರರನ್ನು ಹೆಚ್ಚು ಸೆಳೆಯಲು ಮತ್ತು ಇರುವ ಬಳಕೆದಾರರನ್ನು ಇನ್ನಷ್ಟು ಹೆಚ್ಚು ಆ‍್ಯಪ್‌ ಬಳಸುವುದಕ್ಕೆ ಪ್ರೇರೇಪಿಸುವ ಹೊಸ ಹೊಸ ಸೇವೆಗಳನ್ನು ಪರಿಚಯಿಸುತ್ತಲೇ ಬಂದಿದೆ. ಈಗಲೂ ವಿಶಿಷ್ಟವಾದ ಸೇವೆಗಳನ್ನು ಪರಿಚಯಿಸಿದೆ.

ಟೆಲಿಗ್ರಾಮ್, ತನ್ನ ಗ್ರೂಪ್‌ ಹಾಗೂ ಚಾನಲ್‌ಗಳಲ್ಲಿ ಇತರರು ವಿಷಯವನ್ನು ಫಾರ್ವರ್ಡ್‌ ಮಾಡದಂತೆ ತಡೆಯಲು ಅನುವು ನೀಡಿದೆ. ನಿರ್ದಿಷ್ಟ ದಿನಾಂಕಗಳಿಂದ ಸಂದೇಶಗಳನ್ನು ಅಳಿಸುವ ಸಾಮರ್ಥ್ಯ, ಬಳಕೆದಾರರ ಸಂಪರ್ಕಿತ ಸಾಧನಗಳನ್ನು ನಿರ್ವಹಿಸುವ ಹೊಸ ವಿಧಾನಗಳು, ಸಾರ್ವಜನಿಕ ಗುಂಪುಗಳಲ್ಲಿ ಮರೆಮಾಡಿದ ಅಥವಾ ಅನಾಮಧೇಯ ಪೋಸ್ಟ್ ಮಾಡುವ ಅವಕಾಶ ಸೇರಿದಂತೆ ಹಲವು ನವೀನ ವೈಶಿಷ್ಟ್ಯ ಇಲ್ಲಿವೆ

1. ಮೆಸೇಜ್‌ ಫಾವರ್ಡ್‌ ಮಾಡುವುದನ್ನು ನಿರ್ಬಂಧಿಸಿ

ಟೆಲಿಗ್ರಾಮ್‌ ಗ್ರೂಪ್‌ ಅಥವಾ ಚಾನೆಲ್‌ ಅಡ್ಮಿನ್‌ ಗ್ರೂಪಿನಲ್ಲಿ ಕಳುಹಿಸಿದ ಮೆಸೇಜ್‌ ಅನ್ನು ಗ್ರೂಪಿನಲ್ಲಿರುವ ಯಾವುದೇ ವ್ಯಕ್ತಿ ಫಾರ್ವರ್ಡ್‌ ಮಾಡದಂತೆ ನಿಬಂರ್ಧಿಸಬಹುದು. ಇದು ಸ್ಕ್ರೀನ್‌ಶಾಟ್‌ಗಳನ್ನು ತೆಗೆಯದಂತೆ ತಡೆಯುತ್ತದೆ. ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡುವುದನ್ನು ನಿಬಂರ್ಧಿಸಲು ಟೆಲಿಗ್ರಾಮ್‌ ಗ್ರೂಪ್ ಅಥವಾ ಚಾನೆಲ್‌ ಮಾಹಿತಿ ಪುಟಕ್ಕೆ ಹೋಗಿ ಗ್ರೂಪ್‌/ಚಾನೆಲ್‌ ಟೈಪ್‌ ಮೇಲೆ ಕ್ಲಿಕ್‌ ಮಾಡಿ, ಫಾರ್ವರ್ಡ್‌ ಮಾಡದಂತೆ ನಿರ್ಬಂಧಿಸಿ. (Channel Info page > Group / Channel Type > Restrict Saving Content)

2. ದಿನಾಂಕದ ಪ್ರಕಾರ ಸಂದೇಶಗಳನ್ನು ಅಳಿಸಿ

ಟೆಲಿಗ್ರಾಮ್‌ ಬಳಕೆದಾರರು ಯಾವುದೇ ಸಮಯದಲ್ಲಿ ಇನ್ನೊಬ್ಬರೊಂದಿಗೆ ನಡೆಸಿದ ಸಂಭಾಷಣೆಯ ಸಂದೇಶಗಳನ್ನು ಚಾಟ್‌ನಿಂದ ಅಳಿಸಬಹುದು. ಈ ಹೊಸ ಅಪ್‌ಡೇಟ್‌ನಲ್ಲಿ ನೀವು ನಡೆಸಿದ ನಿರ್ದಿಷ್ಟ ದಿನಾಂಕದ ಸಂಭಾಷಣೆಯನ್ನು ಡಿಲಿಟ್‌ ಮಾಡಬಹುದು. ನೀವು ನಡೆಸಿದ ಚಾಟ್‌ನ ಕ್ಯಾಲೆಂಡರ್‌ ತೆರೆಯಲು ಚಾಟ್‌ನಲ್ಲಿ ಸ್ಕ್ರಾಲ್‌ ಮಾಡುವಾಗ ಪಾಪ್‌ಅಪ್‌ ಆಗುವ ದಿನಾಂಕ ಪಟ್ಟಿಯನ್ನು ಕ್ಲಿಕ್‌ ಮಾಡಿ. ನಂತರ ಯಾವ ದಿನಗಳನ್ನು ಅಳಿಸಬೇಕು ಎಂಬುದನ್ನು ಆಯ್ಕೆಮಾಡಿ. ದಿನಾಂಕದ ಪ್ರಕಾರ ಹಿಸ್ಟರಿಯನ್ನು ಅಳಿಸಬಹುದು. ಈ ಅವಕಾಶ ಪ್ರಸ್ತುತ ಒಬ್ಬರಿಗೊಬ್ಬರು ಚಾಟ್ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದು ಗಮನಾರ್ಹ. ಆದರೆ ಯಾವುದೇ ಚಾಟ್ನಲ್ಲಿರುವ ಸಂದೇಶಗಳನ್ನು ಕಳುಹಿಸಿದ ಒಂದು ದಿನ, ವಾರ ಅಥವಾ ತಿಂಗಳ ನಂತರ ಸ್ವಯಂ ಅಳಿಸುವಂತೆಯೂ ಸೆಟ್ಟಿಂಗ್‌ ಮಾಡಿಕೊಳ್ಳಬಹುದು.

3. ಸಾರ್ವಜನಿಕ ಗ್ರೂಪ್‌ಗಳಲ್ಲಿ ಅನಾಮಧೇಯ ಅಥವಾ ಗುಪ್ತ ಪೋಸ್ಟಿಂಗ್

ಪಬ್ಲಿಕ್‌ ಗ್ರೂಪ್ ಮತ್ತು ಚಾನಲ್ ಕಾಮೆಂಟ್ಗಳು ಸಾವಿರಾರು ಸದಸ್ಯರನ್ನು ಹೊಂದಿರುವ ಬೃಹತ್ ಸಮುದಾಯಗಳಲ್ಲಿ ಯಾವುದೇ ವಿಷಯದ ಚರ್ಚೆಗಳಿಗೆ ಅವಕಾಶ ನೀಡುತ್ತದೆ. ಈ ಚಾಟ್ಗಳಲ್ಲಿ ಸಂದೇಶಗಳನ್ನು ಕಳುಹಿಸುವಾಗ ಚಾನಲ್ನಂತೆ ಕಾಣಿಸಿಕೊಳ್ಳುವ ಸಾಮರ್ಥ್ಯವನ್ನು ಟೆಲಿಗ್ರಾಮ್ ಸೇರಿಸಿದೆ. ಮೆಸೇಜ್‌ ಲಿಸ್ಟ್‌ ಪಕ್ಕದಲ್ಲಿರುವ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಚಾನಲ್ಗಳಲ್ಲಿ ಒಂದನ್ನು ಆಯ್ಕೆಮಾಡಿ – ಅದರ ನಂತರ ನೀವು ಕಳುಹಿಸುವ ಸಂದೇಶಗಳು ನಿಮ್ಮ ವೈಯಕ್ತಿಕ ಖಾತೆಯ ಬದಲಿಗೆ ಚಾನಲ್ನ ಹೆಸರು ಮತ್ತು ಫೋಟೋದೊಂದಿಗೆ ಗೋಚರಿಸುತ್ತವೆ. ನಿಮ್ಮ ಚಾನಲ್ ಆಗಿ ಪೋಸ್ಟ್ ಮಾಡುವಾಗ, ನೀವು ಚಾನಲ್ ಹೆಸರನ್ನು ಸಹ ನೋಡುತ್ತೀರಿ.

4. ಸಂಪರ್ಕಿತ ಸಾಧನಗಳನ್ನು ನಿರ್ವಹಿಸಿ

ಏಕಕಾಲಕ್ಕೆ ಟೆಲಿಗ್ರಾಮ್‌ ಅನ್ನು ಹಲವು ಸಾಧನಗಳಲ್ಲಿ ಬಳಸಬಹುದಾಗಿದೆ. ನಿಮ್ಮ ಖಾತೆಯು ಎಲ್ಲಿ ಲಾಗ್‌ ಇನ್‌ ಆಗಿದೆ ಎಂಬುದನ್ನು ನಿಯಂತ್ರಿಸಲು ಡಿವೈಸ್‌ ಮೆನು (Devices Menu) ಸಹಾಯ ಮಾಡುತ್ತದೆ. ಡೆಸ್ಕ್‌ಟಾಪ್‌ನಲ್ಲಿ ಟೆಲಿಗ್ರಾಮ್‌ ಅನ್ನು ತ್ವರಿತವಾಗಿ ಲಿಂಕ್‌ ಮಾಡಲು ಆಟೋಮೆಟಿಕ್‌ ಸೆಟ್ಟಿಂಗ್‌ ಅನ್ನು ಟೆಲಿಗ್ರಾಮ್‌ನಲ್ಲಿ ಸೇರಿಸಲಾಗಿದೆ.

5. iOS 13+ ನಲ್ಲಿ ಟೆಕ್ಸ್ಟ್‌ ಗುರುತಿಸುವಿಕೆ

iOS 13+ ಸೇರಿದಂತೆ ವಿವಿಧ ಸಾಧನಗಳಲ್ಲಿ ಟೆಲಿಗ್ರಾಮ್‌ ಚಾಟ್‌ಗಳಲ್ಲಿನ ಫೋಟೋಗಳಿಗಾಗಿ ಟೆಕ್ಸ್ಟ್‌ ಗುರುತಿಸುವಿಕೆ (ಲೈವ್‌ ಟೆಕ್ಸ್ಟ್) ಅನ್ನು ಸಕ್ರಿಯಗೊಳಿಸಲಾಗಿದೆ. ಇದರ ಮೂಲಕ ಕೀಬೋರ್ಡ್‌ ಅನ್ನು ಬಳಸದೆಯೇ ತ್ವರಿತವಾಗಿ ಟೆಕ್ಸ್ಟ್‌ ಅನ್ನು ಆಯ್ಕೆ ಮಾಡಲು, ನಕಲು ಮಾಡಲು ಹಾಗೂ ಹುಡುಕಲು ಅನುಕೂಲ ಮಾಡಿಕೊಟ್ಟಿದೆ. ಈ ಚಿತ್ರ ಗುರುತಿಸುವಿಕೆಯನ್ನು ನಿಮ್ಮ ಸಾಧನದಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿ ನಿರ್ವಹಿಸಲಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.