ಕ್ವಾರಂಟೈನ್‌ನಲ್ಲಿರುವ ಶ್ರೇಷ್ಠ ಮನರಂಜನೆ ನೀಡುವ ಜೊತೆಗೆ ಸಂತ್ರಸ್ತರ ನೆರವಿಗೆ ಹಣ ಸಂಗ್ರಹಿಸಲೆಂದು ಯೂಟ್ಯೂಬ್ ಹತ್ತು ದಿನಗಳ ಚಲನಚಿತ್ರೋತ್ಸವನ್ನು ನಾಳೆಯಿಂದ ಆರಂಭಿಸುತ್ತಿದ್ದೆ. ವಿ ಆರ್ ಒನ್ ಹೆಸರಿನ ಈ ಚಿತ್ರೋತ್ಸವದಲ್ಲಿ ಭಾರತದ ಸಿನಿಮಾಗಳನ್ನು ಪ್ರದರ್ಶನ ಕಾಣುತ್ತಿವೆ

ಕ್ವಾರಂಟೈನ್‌ನಲ್ಲಿರುವವರಿಗೆ ಒಂದು ಸಂತಸದ ಸುದ್ದಿ. ಯೂಟ್ಯೂಬ್ ವಿಶ್ವದ 20 ಪ್ರಖ್ಯಾತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಚಲನಚಿತ್ರಗಳನ್ನು ಆಯ್ದು 10 ದಿನಗಳ ಕಾಲ ಉಚಿತವಾಗಿ ಬಿತ್ತರಿಸುತ್ತಿದೆ!
ಭಾರತದ 4 ಸಿನಿಮಾಗಳು
ಪ್ರತೀಕ್ ವತ್ಸ ನಿರ್ದೇಶನದ ‘ಈಬ್ ಅಲೆ ಊ’, ಅರುಣ್ ಕಾರ್ತಿಕ್ ಅವರ ‘ನಾಸಿರ್’, ಅತುಲ್ ಮೋಂಗಿಯಾ ನಿರ್ದೇಶನದ ಕಿರುಚಿತ್ರ ‘ಅವೇಕ್’ ಮತ್ತು ಶಾನ್ ವ್ಯಾಸ್ ನಿರ್ದೇಶನದ ಕಿರುಚಿತ್ರ ‘ನಟ್‌ಖಟ್’ ಪ್ರದರ್ಶನಗೊಳ್ಳುತ್ತಿವೆ. ಮುಂಬೈನಲ್ಲಿ ನಡೆದ ಜಿಯೋ ಮಾಮಿ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದ ಈ ಚಿತ್ರಗಳನ್ನು ಯೂಟ್ಯೂಬ್ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದೆ.
ಮೇ 29ರಿಂದ ಆರಂಭವಾಗುತ್ತಿರುವ ಈ ಸಿನಿ ಉತ್ಸವ ಜೂನ್ 7ರವರೆಗೆ ನಡೆಯಲಿದೆ. ಯೂಟ್ಯೂಬ್ ಈ ಚಿತ್ರೋತ್ಸವಕ್ಕೆ ‘ವಿ ಆರ್ ಒನ್’ ಎಂದು ಹೆಸರಿಡುವ ಮೂಲಕ ಈ ಸಂಕಷ್ಟದ ಕಾಲದಲ್ಲಿ ಜಾಗತಿಕ ಒಗ್ಗಟ್ಟನ್ನು ಪ್ರತಿಬಿಂಬಿಸುವ ಉದ್ದೇಶ ಹೊಂದಿದೆ.
‘ವಿ ಆರ್ ಒನ್’ ಹೆಸರಿನ ಪ್ರತ್ಯೇಕ ಚಾನೆಲ್ ಅನ್ನು ಮೀಸಲಿರಿಸಿದೆ( ಇಲ್ಲಿ ಕ್ಲಿಕ್ ಮಾಡಿ ನೋಡಿ) ಇದರಲ್ಲಿ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಕಾನ್ಸ್, ಸನ್‌ಡಾನ್, ಟೊರಂಟೊ, ಟೋಕಿಯೋ, ಟ್ರೈಬೆಕಾ, ಜೆರುಸಲೇಂ, ವೆನಿಸ್ ಸೇರಿದಂತೆ 20 ಚಿತ್ರೋತ್ಸವಗಳ ಸಿನಿಮಾಗಳನ್ನು ಈ ಜಾಗತಿಕ ಸಿನಿ ಉತ್ಸವದಲ್ಲಿ ನೋಡಬಹುದು.

ಸಿನಿಮಾಗಳ ಜೊತೆಗೆ, ಕಿರುಚಿತ್ರಗಳು, ಡಾಕ್ಯುಮೆಂಟರಿಗಳು, ಸಂವಾದ, ಸಂಗೀತ ಮುಂತಾದ ವಿಡಿಯೋಗಳನ್ನು ನೋಡಲಿಕ್ಕೆ ಅವಕಾಶ ಕಲ್ಪಿಸುತ್ತಿದೆ.
ಕೋವಿಡ್ 19 ವ್ಯಾಪಕವಾಗುತ್ತಿದ್ದು, ಜಗತ್ತನನ್ನೇ ತಲ್ಲಣಗೊಳಿಸಿರುವಾಗ, ಮನೆಯಲ್ಲೇ ಇರುವುದು ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ ಸಿನಿಮಾಗಳ ಮೂಲಕ ರಂಜಿಸುವ ಪ್ರಯತ್ನವನ್ನು ಯೂಟ್ಯೂಬ್ ಮಾಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಚಿತ್ರ ಪ್ರದರ್ಶನದ ವೇಳೆ ಗಳಿಸುವ ಜಾಹೀರಾತು ಆದಾಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ 19 ಸಾಲಿಡಾರಿಟಿ ರೆಸ್ಪಾನ್ಸ್ ಫಂಡ್‌ಗೆ ನೀಡುವುದಾಗಿ ಯೂಟ್ಯೂಬ್ ತಿಳಿಸಿದೆ.
ಸಿನಿಮಾ, ಪ್ರದರ್ಶನದ ವೇಳಾಪಟ್ಟಿ, ಸಂವಾದಗಳನ್ನು ಕುರಿತ ಹೆಚ್ಚಿನ ಮಾಹಿತಿಗಳಿಗೆ https://www.weareoneglobalfestival.com/ಗೆ ಭೇಟಿ ನೀಡಿ