ಜನ್ಮದಿನ | ತಂತ್ರಜ್ಞಾನ ಕ್ಷೇತ್ರದ ಭವಿಷ್ಯ ನುಡಿದಿದ್ದ ಬರಹಗಾರ ಐಸಾಕ್‌ ಅಸಿಮೋವ್‌

ಐಸಾಕ್ ಅಸಿಮೋವ್ ಜಗತ್ತು ಕಂಡ ಅಪೂರ್ವ ಲೇಖನ. ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಇವರ ಕೊಡುಗೆ ಅಪಾರ ಮತ್ತು ಅಗಾಧ. ಸೃಜನಶೀಲ ಹಾಗೂ ಸೃಜನೇತರ ಬರವಣಿಗೆಯ ಮೂಲಕ ವಿಜ್ಞಾನ ಸಾಹಿತ್ಯವನ್ನು ನೀಡುವ ಜೊತೆಗೆ, ವೈಜ್ಞಾನಿಕ ದೃಷ್ಟಿಕೋನ, ಮುಂಗಾಣ್ಕೆಯನ್ನು ಕೊಟ್ಟವರು. ಇಂದು ಇವರ ಜನ್ಮ ದಿನ

”2014ರಲ್ಲಿ ಹಲವು ಎಲೆಕ್ಟ್ರಿಕ್‌ ಸಾಧನಗಳು ವೈರ್‌ಗಳ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುತ್ತವೆ. ಬ್ಯಾಟರಿಗಳು ದೀರ್ಘಕಾಲ ಬಾಳುತ್ತವೆ.”
” ರೊಬೊಟ್‌ಗಳು ಒಳ್ಳೆಯದೂ ಅಲ್ಲ, ಸಾಮಾನ್ಯವೂ ಅಲ್ಲ. ಆದರೆ 2014ರ ಹೊತ್ತಿಗೆ ಅವುಗಳು ಅಸ್ತಿತ್ವದಲ್ಲಿರುತ್ತವೆ.
“ಅತ್ಯಂತ ಶ್ರಮಬೇಡುವ ಅಡುಗೆ ಮಾಡುವ ಕೆಲಸವನ್ನು ಯಂತ್ರಗಳು ಮಾಡಲಿವೆ. ಅಡುಗೆ ಮನೆಗಳಲ್ಲಿ ಸ್ವತಃ ಅಡುಗೆ ಸಿದ್ಧಮಾಡುವ ಸಾಧನಗಳು ಬರಲಿವೆ”

1964ರಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರಸ್ತಾಪವಾದ ಅಂಶಗಳಿವು. ಮೇಲೆ ಉಲ್ಲೇಖಿಸಿದ ಅಂಶಗಳ ಜೊತೆಗೆ, ಪರಿಸರ, ಶಿಕ್ಷಣ, ಬಾಹ್ಯಾಕಾಶದಲ್ಲಿ ಮಾನವ, ಮನುಷ್ಯರಂತೆ ಕೆಲಸ ಮಾಡುವ ಯಂತ್ರಗಳ ಬಗ್ಗೆಯೂ ಪ್ರಸ್ತಾಪವಿದೆ. ಇದನ್ನು ಬರೆದದ್ದು ಪ್ರಸಿದ್ಧ ವಿಜ್ಞಾನ ಲೇಖಕ ಐಸಾಕ್‌ ಅಸಿಮೋವ್‌. ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೋಡಿದ ಅಪರೂಪದ ಲೇಖಕ ಅಸಿಮೋವ್‌.
500ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದು, ಸಂಪಾದಿಸಿದ, ಸುಮಾರು 9000 ಪೋಸ್ಟ್‌ ಕಾರ್ಡ್‌ಗಳನ್ನು ಬರೆದು, ವೈಜ್ಞಾನಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದರಲ್ಲದೆ, ಶತಮಾನದ ವೈಜ್ಞಾನಿಕ ಸಾಧನೆಯ ಮುನ್ನೋಟವನ್ನು ನೀಡಿದವರು.

ಅಸಿಮೋವ್ ರವರು ಹಿಂದಿನ ಬೆಲರೂಸಿಯನ್ ಸೋವಿಯತ್ ಸಮಾಜವಾದಿ ಒಕ್ಕೂಟದಲ್ಲಿ 1920ರ ಜನವರಿ 2ರಂದು ಜೂಡಾ ಮತ್ತು ಆನ ಬರ್ಮನ್ ಎಂಬ ಯಹೂದ್ಯ ದಂಪತಿಗಳಿಗೆ ಜನಿಸಿದರು. ಅವರು ಮೂರು ವರ್ಷದವರಾಗಿದ್ದಾಗ ಅವರ ತಂದೆತಾಯಿ ಅಮೆರಿಕಕ್ಕೆ ವಲಸೆ ಬಂದರು ಮತ್ತು ನ್ಯೂಯಾರ್ಕ್ ನಗರದ ಬ್ರುಕ್ಲಿನ್ ಎಂಬ ಪ್ರದೇಶದಲ್ಲಿ ನೆಲೆಸಿದರು.

ವಿಜ್ಞಾನದಲ್ಲಿ ಪದವಿ, ಕಲೆಯಲ್ಲಿ ಸ್ನಾತಕೋತ್ತರ ಪದವಿ, ತತ್ವಶಾಸ್ತ್ರದಲ್ಲಿ ಡಾಕ್ಟರೇಟ್‌ ಪಡೆದ ಅಸಿಮೋವ್‌ ಬಯೋಕೆಮಿಸ್ಟ್ರಿಯ ಪ್ರಾಧ್ಯಾಪಕರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದರು. ಆದರೆ ಅವರನ್ನು ಜಗತ್ತಿಗೆ ಪರಿಚಯಿಸಿದ್ದು ಬರವಣಿಗೆ.

ಹತ್ತೊಂಬತ್ತನೆ ವಯಸ್ಸಿಗೇ ಬರೆಯಲು ಆರಂಭಿಸಿದ ಅಸಿಮೋವ್‌, ಮೊದಲು ಬರೆದದ್ದು ಸಣ್ಣ ಕತೆಗಳನ್ನು. ನಂತರ ಸುಮಾರು ಆರೇಳು ವರ್ಷಗಳ ಕಾಲ ವಿಜ್ಞಾನ ಬರವಣಿಗೆಯನ್ನೇ ಮಾಡಿದರೂ, ಅದು ಸೃಜನೇತರ ಸಾಹಿತ್ಯವಾಗಿತ್ತು. ಮತ್ತೆ ವಿಜ್ಞಾನ-ತಂತ್ರಜ್ಞಾನ ಆಧರಿಸಿದ ಕತೆ ಮತ್ತು ಕಾದಂಬರಿಗಳನ್ನು ಬರೆಯಲು ಆರಂಭಿಸಿದ ಇವರು, ಶ್ರೇಷ್ಠ ಕೃತಿಗಳನ್ನು ನೀಡಿದರು.

ಅಸಿಮೋವ್ ಅವರ ಸರಳ ಶೈಲಿ, ಸೃಜನಶೀಲತೆ ವಿಜ್ಞಾನದ ಎಷ್ಟೋ ಮಹತ್ವದ ಪರಿಕಲ್ಪನೆಗಳನ್ನು ಸುಲಭವಾಗಿ ಓದುಗರಿಗೆ ದಾಟಿಸುವುದಕ್ಕೆ ನೆರವಾಯಿತು.

ದಿ ಕೇವ್ಸ್‌ ಆಫ್‌ ಸ್ಟೀಲ್‌, ದಿ ನೇಕೆಡ್‌ ಸನ್‌, ದಿ ರೋಬೊಟ್ಸ್‌ ಆಫ್‌ ಡಾನ್‌, ರೊಬೊಟ್ಸ್‌ ಅಂಡ್‌ ಎಂಪೈರ್‌ (ಸರಣಿಗಳು), ದಿ ಕರೆಂಟ್ಸ್‌ ಆಫ್‌ ಸ್ಪೇಸ್‌, ದಿ ಸ್ಟಾರ್ಸ್‌, ಲೈಕ್ ಡಸ್ಟ್‌, ಪೆಬಲ್‌ ಇನ್‌ ದಿ ಸ್ಕೈ, ಪ್ರಿಲ್ಯೂಡ್‌ ಟು ಫೌಂಡೇಷನ್‌, ಫಾರ್ವರ್ಡ್‌ ದಿ ಫೌಂಡೇಷನ್, ದಿ ಎಂಡ್‌ ಆಫ್‌ ಎಟರ್ನಿಟಿ, ದಿ ಗಾಡ್ಸ್‌ ದೆಮ್‌ಸೆಲ್ವ್ಸ್, ನೆಮಿಸಿಸ್, ನೈಟ್‌ಫಾಲ್, ದಿ ಪೊಸಿಟ್ರೋನಿಕ್‌ ಮ್ಯಾನ್‌, ಫ್ಯಾಂಟಾಸ್ಟಿಕ್‌ ವಯೇಜ್‌ ಕಾದಂಬರಿಗಳು ಪ್ರಕಟವಾದವು.
ಐ ರೊಬೊಟ್‌, ದಿ ಮಾರ್ಷಿಯನ್‌ ವೇ ಅಂಡ್‌ ಅದರ್ ಸ್ಟೋರೀಸ್‌, ಅರ್ಥ್‌ ಈಸ್‌ ರೂಮ್‌ ಎನಫ್‌, ನೈನ್‌ ಟುಮಾರೊಸ್, ದಿ ರೆಸ್ಟ್‌ ಆಫ್‌ ದಿ ರೊಬೊಟ್ಸ್‌, ಥ್ರೋ ಅ ಗ್ಲಾಸ್‌, ಕ್ಲಿಯರ್ಲಿ, ದಿ ಕಂಪ್ಲೀಟ್‌ ರೊಬೊಟ್, ಬ್ಲಾಕ್‌ ವಿಡೋವರ್ಸ್‌ ಪ್ರಮುಖ ಸಣ್ಣ ಕತೆಗಳ ಸಂಕಲನಗಳು.

ಇವುಗಳಲ್ಲದೇ ಸೃಜನೇತರ ಪ್ರಕಾರದಲ್ಲಿ ಖಗೋಳವಿಜ್ಞಾನ, ಗಣಿತ, ಭೂವಿಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಕೀಟಶಾಸ್ತ್ರ, ಇತಿಹಾಸ ವಿಷಯಗಳಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ಪ್ರಕಟಿಸಿದರು.
ಅಸಿಮೋವ್‌ ಅವರ ಸೃಜನಶೀಲ ಕೃತಿಗಳನ್ನು ಆಧರಿಸಿ, ಹಲವು ಸೈಫೈ ಸಿನಿಮಾಗಳು ತೆರೆಕಂಡಿವೆ. ಅವುಗಳಲ್ಲಿ ಪ್ರಮುಖವಾದವು ಇವು: ಐ ರೋಬೊಟ್‌, ಬೈ ಸೆಂಟಿನಲ್‌ ಮ್ಯಾನ್, ದಿ ಲಾಸ್ಟ್‌ ವರ್ಡ್‌, ದಿ ನೇಚರ್‌ ಆಫ್‌ ಥಿಂಗ್ಸ್‌, ದಿ ಡಿಕ್‌ ಕ್ಯಾವೆಟ್‌ ಶೋ ಕೆಲವು.

ಐಸಾಕ್ ಅಸಿಮೋವ್‌ ಮಾತುಗಳನ್ನು ಇಲ್ಲಿ ಕೇಳಿ

“ಮನುಷ್ಯರಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದುಕೊಳ್ಳೋಣ. ನಾವೆಲ್ಲರೂ ಸಜ್ಜನರಾಗಿರುವುದು ಏಕೆಂದರೆ, ಅದು ನಮ್ಮನ್ನು ಸ್ವರ್ಗಕ್ಕೆ ಒಯ್ಯುವ ಟಿಕೆಟ್‌. ನೀವು ನಿಮ್ಮ ಮಕ್ಕಳನ್ನು ಸಾಯುವಂತೆ ಹೊಡೆಯುವುದಿಲ್ಲ ಏಕೆಂದರೆ, ನಿಮಗೆ ನರಕಕ್ಕೆ ಹೋಗುವುದಕ್ಕೆ ಇಷ್ಟವಿಲ್ಲ. ಶಿಕ್ಷೆ ಅಥವಾ ಮೆಚ್ಚುಗೆಯಷ್ಟೇ ನಿಮ್ಮನ್ನು ಸಜ್ಜನ ವ್ಯಕ್ತಿಯನ್ನಾಗಿ ಉಳಿಸುತ್ತವೆ ಎನ್ನುವ ಈ ಧೋರಣೆ ಮನುಷ್ಯರನ್ನೇ ಅವಮಾನಿಸುವಂಥದ್ದು ಎಂದು ನನಗನ್ನಿಸುತ್ತದೆ. “

ಗುಲಾಮರಾಗಿರುವುದಕ್ಕೆ ಬಯಸುವ ಮಹಿಳೆಯರನ್ನು ಕಂಡರೆ ನನಗೆ ಆಗುವುದಿಲ್ಲ. ನಮಗೆ ಅಂತಹ ಮಹಿಳೆಯರು ಬೇಕಿಲ್ಲ. ಮಹಿಳೆಯರಿಗೆ ಎಲ್ಲ ರೀತಿಯಲ್ಲೂ ಸಮಾನ ಹಕ್ಕುಗಳನ್ನು ನೀಡಿ, ಮಾನವೀಯತೆ ಉಳಿಯುತ್ತದೆ, ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತದೆ

ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ, ಮನುಷ್ಯ ಈ ಭೂಮಿಯ ಮೇಲೆ ಇವತ್ತಿನ ಸಂದರ್ಭದಲ್ಲಿ ದೀರ್ಘ ಕಾಲ ಬದುಕು ಸಾಧ್ಯವಾಗಬೇಕೆಂದಾದರೆ, ಯುದ್ಧ ನಡೆಯಬಾರದು. ಹಾಗೆ ನಡೆಯಬೇಕಾದ ಯುದ್ಧಕ್ಕೆ, ನಾವು ನಮ್ಮೆಲ್ಲ ಶಕ್ತಿಯನ್ನು, ನೆಮ್ಮೆಲ್ಲ ಸಮಯವನ್ನು, ನಮ್ಮ ಭಾವನಾತ್ಮಕ ಶ್ರಮ ಮತ್ತು ದ್ವೇಷವನ್ನು ಹೆಚ್ಚಿಸುವ ಮೂಲಕ ಯುದ್ಧಕ್ಕೆ ಸಿದ್ಧರಾಗುವಂತೆ ಮಾಡುವುದು ಏನೂ ಆಗುವುದಿಲ್ಲ. ನಾವು ಖರ್ಚು ಮಾಡುವ ಒಂದೊಂದು ಡಾಲರ್ ರಚನಾತ್ಮಕ ಕಾರ್ಯಕ್ಕೆ ವಿನಿಯೋಗಿಸಬೇಕು. ನಾವು ಯುದ್ಧಕ್ಕೆ ಖರ್ಚು ಮಾಡುವುದಕ್ಕಿಂತ, ಯುದ್ಧದ ಸಿದ್ಧತೆಗೆ ಖರ್ಚು ಮಾಡುವುದೇ ನಮ್ಮನ್ನು ನಾಶ ಮಾಡುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.