ಕಪ್ಪುಕುಳಿಗಳು ಮತ್ತು ಹಾಲು ಹಾದಿಯ ಕತ್ತಲಿನ ಗುಟ್ಟು ಬಿಚ್ಚಿಟ್ಟ ಮೂವರು ಭೌತ ವಿಜ್ಞಾನಿಗಳು!

ಕಣ್ಣಿಗೆ ಕಾಣುವುದನ್ನೇ ಅರ್ಥ ಮಾಡಿಕೊಳ್ಳಲು ಬೃಹತ್‌ ಬೆಳಕಿನಲ್ಲೂ ಕಷ್ಟ ಇರುವಾಗ, ಮಹಾ ಕತ್ತಲಿನ ಜಗತ್ತಿನ ಬೆಳಕನ್ನು ಊಹೆಗಳ ಲೆಕ್ಕಾಚಾರದಲ್ಲಿ ಹೇಳುವುದಾದರೂ ಹೇಗೆ? ಇಂತಹ ಸಂಕಟ ಕೇವಲ ಅದರ ಸುದ್ಧಿಯನ್ನು ಹಂಚುವ ಮತ್ತು ತಿಳಿಯುವರಿಗೇ ಇರುವಾಗ ಅದನ್ನು ಹುಡುಕಿದವರಿಗೆ ಹೇಗಿದ್ದಿರಬೇಡ?

ಪ್ರಾತಿನಿಧಿಕ ಚಿತ್ರ

ನಮ್ಮ ನಿಮ್ಮೆಲ್ಲರ ಕಣ್ಣಿಗೆ ಕಾಣುವುದೇ ಜಗತ್ತು ಎಂಬುದೇನೋ ಸಾಮಾನ್ಯ ಅನಿಸಿಕೆ. ಆದರೆ ಇಡೀ ವಿಶ್ವದಲ್ಲಿ ಕಾಣದ ಹಾಗೂ ಊಹೆಗೂ ಮೀರಿದ ಬಲು ದೊಡ್ಡ ಜಗತ್ತು ಕತ್ತಲಿನೊಳಗಾವರಿಸಿದೆ. ಅಷ್ಟು ಮಾತ್ರ ಅಲ್ಲ, ಆ ಕತ್ತಲು ಬೆಳಕಿನಲ್ಲಿ ಕಾಣುವ ಎಲ್ಲಾ ವಸ್ತುಗಳ ಚಲನೆಯ ಹಾಗೂ ಇರುವಿಕೆಯ ಮೇಲೂ ಇನ್ನೂ ಅರಿಯಬೇಕಿರುವ ತಿಳಿವನ್ನೂ ತನ್ನ ಮಡಿಲಲ್ಲಿಟ್ಟುಕೊಂಡಿದೆ. ಆ ಗಾಢ ಕತ್ತಲಿನ ಬೆಳಕನ್ನು ಹುಡುಕುವ ಪ್ರಕ್ರಿಯೆ ಭೌತವಿಜ್ಞಾನದ ಬಹು ದೊಡ್ಡ ಗುರಿ. ಅದಕ್ಕಾಗಿ ನಿರಂತರವಾದ ಶತಮಾನಗಳ ಸಾಹಸವನ್ನು ಹಲವು ವಿಜ್ಞಾನಿಗಳು ಮಾಡುತ್ತಲೇ ಇದ್ದಾರೆ. ಅಂತಹಾ ಜಗತ್ತಿನ ತಿಳಿವನ್ನು ಗಣೀತೀಯ ನಿದರ್ಶನಗಳಿಂದ ಸಾಬೀತು ಮಾಡಿದ ಕಪ್ಪುಕುಳಿಗಳ ಕುರಿತ ಶೋಧ ಹಾಗೂ ಹೌದು, ಅವು ಇರುವುದು ನಿಜವೇ ಸರಿ, ನಮ್ಮ ಗೆಲಾಕ್ಸಿಯ ಕೇಂದ್ರದಲ್ಲೊಂದು ಇದೆ ಎಂಬ ಬಹುದೊಡ್ಡ ಗುಟ್ಟನ್ನು ದಶಕಗಳ ಕಾಲ ಪಟ್ಟು ಬಿಡದೆ ಹುಡುಕಿ ಅನಾವರಣಗೊಳಿಸಿದ ಶೋಧಕ್ಕೆ ಈ ಬಾರಿಯ ಭೌತವಿಜ್ಞಾನದ ನೊಬೆಲ್‌ ಬಹುಮಾನವನ್ನು ಇಂದು ಪ್ರಕಟಿಸಲಾಗಿದೆ. ಆಲ್ಬರ್ಟ್‌ ಐನ್‌ಸ್ಟೈನ್‌ ಅವರ ಸಾಮಾನ್ಯ ಸಾಪೇಕ್ಷ ಸಿದ್ಧಾಂತವನ್ನು ಅನುಸರಿಸಿದ ಗಣೀತೀಯ ವಿವರಗಳನ್ನು ಕೊಟ್ಟು ಅದು ಹೇಗೆ ಕಪ್ಪುಕುಳಿಗಳ ನಿರ್ಮಿತಿಯನ್ನು ಕೊಡುತ್ತದೆ ಎಂಬ ಸಂಶೋಧನೆಗೆ ಪ್ರೊ. ರೊಜರ್‌ ಪೆನ್‌ರೋಜ್‌ ಅವರಿಗೆ ಈ ವರ್ಷದ ಅರ್ಧ ಮೊತ್ತದ ನೊಬೆಲ್‌ ಬಹುಮಾನದ ಮೂಲಕ ನೀಡಲಾಗಿದೆ. ಉಳಿದರ್ಧ ಮೊತ್ತದ ಬಹುಮಾನವನ್ನು ಅದರ ಮುಂದುವರಿಕೆಯ ಶೋಧವೆಂಬತೆ ಇರುವ ಅಧ್ಯಯನವನ್ನು ದಶಕಗಳ ಕಾಲ ನಿರ್ವಹಿಸಿ ನಮ್ಮ ಗೆಲಾಕ್ಸಿಯಾದ ಹಾಲು ಹಾದಿ ಅಥವಾ ಆಕಾಶ ಗಂಗೆ (Milky Way) ಕೇಂದ್ರದಲ್ಲಿರುವ ಸೂಪರ್‌ ಮ್ಯಾಸಿವ್‌-ಊಹೆಗೂ ಮೀರಿದ ಗಾತ್ರದ- ಕಪ್ಪುಕುಳಿಯ ಕತ್ತಲಿನ ವಿಶೇಷಣಗಳನ್ನು ಕೊಟ್ಟು ಹೌದು ಕಪ್ಪುಕುಳಿಗಳು ಇರುವುದೆ ನಿಜವೇ ಎಂದು ಸಾಬೀತು ನೀಡಿದ ಪ್ರೊ. ರೈನ್‌ಹಾರ್ಡ್‌ ಗೆಂಜಲ್‌ ಹಾಗೂ ಪ್ರೊ. ಆಂಡ್ರಿಯಾ ಗೆಜ್‌ ಅವರಿಗೂ ನೀಡಲಾಗಿದೆ.

ಕಣ್ಣಿಗ ಕಾಣುವುದನ್ನೇ ಅರ್ಥ ಮಾಡಿಕೊಳ್ಳಲು ಬೃಹತ್‌ ಬೆಳಕಿನಲ್ಲೂ ಕಷ್ಟ ಇರುವಾಗ, ಮಹಾ ಕತ್ತಲಿನ ಜಗತ್ತಿನ ಬೆಳಕನ್ನು ಊಹೆಗಳ ಲೆಕ್ಕಾಚಾರದಲ್ಲಿ ಹೇಳುವುದಾದರೂ ಹೇಗೆ? ಇಂತಹ ಸಂಕಟ ಕೇವಲ ಅದರ ಸುದ್ಧಿಯನ್ನು ಹಂಚುವ ಮತ್ತು ತಿಳಿಯುವರಿಗೇ ಇರುವಾಗ ಅದನ್ನು ಹುಡುಕಿದವರಿಗೆ ಹೇಗಿದ್ದಿರಬೇಡ? ಭೌತವಿಜ್ಞಾನದ ನವೀನ ಶೋಧಗಳೆಲ್ಲವೂ ಹೊಸತೊಂದು ವಿಜ್ಞಾನದ ಮಾದರಿಯನ್ನು ಕೊಡುತ್ತಲೇ ಬೆಳೆಯುತ್ತಿರುವುದು ವಿಜ್ಞಾನದ ತೀವ್ರ ಓದುಗರಿಗೆ ಪರಿಚಯವಿರುತ್ತದೆ. ವಿಶ್ವದ ಆದಿಯನ್ನು ಅಪಾರ ಹರಹಿನ ಮಹಾನ್‌ ಸ್ಪೋಟದ ಬೆಳಕಿನಿಂದ ಆರಂಭವೆಂದುಕೊಂಡರೆ ಕೊನೆಯ ತುದಿಯಲ್ಲಿ ಮಹಾನ್‌ ಕತ್ತಲಿನ ಕುಬ್ಜತೆಯಿದೆ. ಎಷ್ಟೆಂದರೆ ಅಗಾಧ ಬೆಳಕಿನ ಬೃಹತ್‌ ನಕ್ಷತ್ರ ಅಥವಾ ವಸ್ತುವೊಂದು ತನ್ನೆಲ್ಲಾ ಗುರುತ್ವವನ್ನು ತನ್ನೊಳಗೇ ನುಂಗಿಕೊಂಡು ಗಾತ್ರದಲ್ಲೂ ಕಿರಿದಾಗುವುದು. ಎಷ್ಟೆಂದರೆ “ಭೂಮಿಯು ಒಂದು ಬಟಾಣಿ ಕಾಳಿ”ನ ಗಾತ್ರಕ್ಕೆ ಕುಸಿದಂತೆ. ಹಾಗೆ ಬೃಹತ್‌ ನಕ್ಷತ್ರಗಳೂ ಬೆಳಕೆಲ್ಲವನ್ನೂ ತನ್ನೊಳಗೇ ನುಂಗಿ ಕುಬ್ಜವಾಗಿ ಕಪ್ಪುಕುಳಿಗಳಾಗುತ್ತವೆ. ಇದೆಲ್ಲವೂ ಹೀಗೆ ಅಕ್ಷರಗಳಿಂದ ಬರೆದಷ್ಟು ಸುಲಭದ ಮಾತಂತೂ ಅಲ್ಲ! ಗುರುತ್ವವೂ ನಾವಂದುಕೊಂಡಂತೆ ಭೂಮಿಗಿರುವ ತನ್ನೆಡೆಗೆ ಎಳೆದುಕೊಳ್ಳುವ ಶಕ್ತಿ ಅಲ್ಲ! ಅದೊಂದು ಅಪಾರ ಸಾಂಧ್ರ ಬೆಳಕಿನ ಮಧ್ಯದ ಹರಹಿನಲ್ಲಾಗುವ ಬಗೆಯಷ್ಟೇ. ಗುರುತ್ವವೂ ಸಾಮಾನ್ಯ ಸಾಪೇಕ್ಷ ಸೈದ್ಧಾಂತಿಕ ವಿವರಗಳಿಂದ ನೀಡಿದ ಐನ್‌ಸ್ಟೈನ್‌ ಅದರಿಂದ ಮುಂದುವರಿಕೆಯ ವಿವರವಾಗಿ ಕಪ್ಪುಕುಳಿಗಳ ನಿರ್ಮಿತಿಯಲ್ಲಿ ಕೊನೆಯಾಗುವುದು. ಆದಾಗ್ಯೂ ಸ್ವತಃ ಐನ್‌ಸ್ಟೈನ್‌ ಅವರಿಗೂ ಅದು ಇರುವುದು ನಿಜವೇ ಹೌದಾ ಎನ್ನಿಸಿತ್ತಂತೆ! ಅಷ್ಟಕ್ಕೂ ಅವರಿಗಿಂತಾ ಮೊದಲಿನ ಭೌತವಿಜ್ಞಾನಿಗಳೇ ಅಪಾರ ದ್ರವ್ಯರಾಶಿಯ ವಿಶಿಷ್ಟ ಬಗೆಯ ವಸ್ತುವೊಂದು ಇರಬಹುದಾದ ಸಾಧ್ಯತೆಯನ್ನು ಊಹಿಸಿದ್ದರು. 18ನೆಯ ಶತಮಾನದ ಕಡೆಯಲ್ಲಿ ಬ್ರಿಟೀಶ್‌ ಗಣಿತಜ್ಞ ಹಾಗೂ ದಾರ್ಶನಿಕ ಜಾನ್‌ ಮಿಶೆಲ್‌ (John Michell) ಮತ್ತು ವಿಖ್ಯಾತ ಫ್ರೆಂಚ್‌ ವಿಜ್ಞಾನಿ ಪೈರಿ ಲ್ಯಾಪ್ಲೇಸ್‌(Pierre Simon de Laplace) ಬೆಳಕೂ ತಪ್ಪಿಸಿಕೊಳ್ಳಲಾಗದ ಕಾಣದ “ಕತ್ತಲಿನ ನಕ್ಷತ್ರ”ಗಳ ಬಗ್ಗೆ ಊಹಿಸಿದ್ದರು. ಆಲ್ಬರ್ಟ್‌ ಐನ್‌ಸ್ಟೈನ್‌ ಸಿದ್ಧಾಂತವು ಸಾಪೇಕ್ಷ ವಿವರಗಳಿಂದ ಊಹಿಸಿತ್ತು. ಆದರೂ ಅದಕ್ಕೆ ಗಣಿತೀಯ ವಿವರಗಳಿಂದ ಇರುವ ಸಾಧ್ಯತೆಯು ತಿಳಿದದ್ದು ಐನ್‌ಸ್ಟೈನ್‌ ತೀರಿಕೊಂಡು ದಶಕವು ಕಳೆದ ಮೇಲೆ. ರೊಜರ್‌ ಪೆನ್‌ರೋಜ್‌ ಅವರು 1965ರಲ್ಲಿ ಪ್ರಕಟಿಸಿದ ಮಹತ್ವದ ಶೋಧವು ಅದನ್ನು ಗಣಿತೀಯ ನಿದರ್ಶನಗಳ ವಿವರಗಳಿಂದ ಸಾಬೀತು ಮಾಡಿತ್ತು.

ಪೆನ್‌ರೋಜ್‌ ಮಾದರಿಯು ತೀರ ಸತ್ಯದ ಹತ್ತಿರದ ವಿವರವಾಗಿತ್ತು. ಅದೊಂದು ಬಗೆಯಲ್ಲಿ “ಕಾಲದ ಕೊನೆಗೆ ಹೋಗುವ ಏಕ ಮುಖ ಸಂಚಾರ”ವಾಗಿತ್ತು. ಹೇಗೆಂದರೆ ಕಾಲದಲ್ಲಿ ಹಿಂದೆ ಹೋಗುತ್ತಾ ಕಾಲದ ಇಲ್ಲದ ಸ್ಥಿತಿಗೆ ತಲುಪುವ ಬಗೆ! ವಿಚಿತ್ರ ಎನ್ನಿಸುವುದೇ? ನಿಜ. ಇದನ್ನು ನಮ್ಮವರೇ ಆದ ನೊಬೆಲ್‌ ವಿಜ್ಞಾನಿ ಸುಬ್ರಮಣ್ಯ ಚಂದ್ರಶೇಖರ್‌ ಅವರು ಹೇಳುತ್ತಿದ್ದ ತಮ್ಮ ಬಾಲ್ಯದ ವಿಚಿತ್ರ ಅನುಭವದ ಕಥೆಯ ರೂಪಕದ ಮೂಲಕ ನೋಡಬಹುದು. ಅದು ನೀರೊಳಗಿರುವ ಡ್ರಾಗನ್‌ ಫ್ಲೈ ಮತ್ತು ಅದರ ಲಾರ್ವದ ಕಥೆ. ಅದು ಲಾರ್ವಾ ಆಗಿದ್ದು ಇನ್ನೇನು ರೆಕ್ಕೆಬಿಚ್ಚುವಾಗ, ನೀರೊಳಗಿದ್ದಾಗ ತನ್ನ ಸ್ನೇಹಿತರಿಗೆ ಹೇಳುತ್ತಿತ್ತಂತೆ, ಏನೆಂದರೆ ರೆಕ್ಕೆ ಬಿಚ್ಚಿ ಹಾರಿ ಹೊರಗೆ ಹೋಗಿ ಬಂದು ಅಲ್ಲೆಲ್ಲಾ ಏನಿದೆ ಎಂದು ಹೇಳುವೆ ಎಂಬ ಪ್ರಮಾಣ ಮಾಡುವ ಬಗೆ. ಆದರೆ ಹೊರೆಗೆ ಹಾರಿ ಹೋದ ಮೇಲೆ ಮತ್ತೆಂದೂ ವಾಪಸ್ಸು ಬರದ ಲೋಕ. ಲಾರ್ವಗಳಿಗೆ ತಿರುಗಿ ಬಂದು ಹೇಳುವ ಮಾತೇ ಇಲ್ಲ. ಹೀಗೆ ಹಿಂದುರುಗಿ ಬರಲಾದ ಜಗತ್ತು ಅದು ಕಪ್ಪುಕುಳಿಗಳ ಲೋಕ. ಹೀಗೆ ಕಪ್ಪುಕುಳಿಗಳಿಂದ ಹೊರ ಜಗತ್ತಿನಲ್ಲಿರುವ “ಆಕಾಶ- Space“ನಲ್ಲಿ ಮಾತ್ರವೇ ಹೋಗಬಹುದಾದ ಸ್ಥಿತಿ. ಮುಂದೆ ವಸ್ತುವಿನ ಸ್ಪೇಸ್‌ ಅನ್ನು ಕಾಲವು ಆವರಿಸಿಕೊಂಡು ಏಕ ಮುಖವಾಗಿ ಹಿಂದಿರುಗಿ ಬರಲಾದ ಸ್ಥಿತಿಗೆ ಹೋಗುವುದು. ಇದೆಲ್ಲವೂ ಸದ್ಯದ ಕಪ್ಪುಕುಳಿಯ ವಿವರಣೆ. ಮುಂದೆಲ್ಲವೂ ಇನ್ನೂ ವಿವರಗಳಿಂದ ಬಲಗೊಂಡು ಹೊಸತೊಂದು ವಿಜ್ಞಾನವೇ ವಿಕಾಸಗೊಂಡರೂ ಅಚ್ಚರಿ ಇಲ್ಲ.

ಇದನ್ನೂ ಓದಿ | ನೊಬೆಲ್‌ 2020 | ನಮ್ಮ ನಿಮ್ಮ ಡಿಎನ್‌ಎಯನ್ನು ಬೇಕಾದಂತೆ ತಿದ್ದುವ ತಂತ್ರಜ್ಞಾನಕ್ಕೆ ರಸಾಯನಿಕ ವಿಜ್ಞಾನದ ನೊಬೆಲ್‌

ಇಷ್ಟಾದ ಮೇಲೇ ಉಳಿಯುವುದೇನು? ನಮ್ಮ ಮೇಲೂ ಅದರ ಪರಿಣಾಮಗಳೆಂಬಂತೆ ಸಾಕ್ಷಿಗಳ ಒದಗಿಸಿದ ನಮ್ಮದೇ ಗೆಲಾಕ್ಷಿಯ ಮಧ್ಯದಲ್ಲಿರುವ ಸೂಪರ್‌ ಮ್ಯಾಸಿವ್‌ ಕತ್ತಲ ಜಗತ್ತಿನ ಶೋಧ. ಇದನ್ನು ಪತ್ತೆ ಹಚ್ಚಿದ್ದೇ ಅದು ತನ್ನು ಸುತ್ತಲಿನ ನಕ್ಷತ್ರಗಳನ್ನು ಪರಿಭಾವಿಸುವ ವಿವರಗಳನ್ನು ಅರಿಯುವ ಮೂಲಕ. ಹಾಗಾಗಿ ಒಂದು ಬಗೆಯಲ್ಲಿ ಈ ಬೃಹತ್‌ ಕತ್ತಲ ಜಗತ್ತು ನಮ್ಮ ಆಕಾಶಗಂಗೆಯ ಕೇಂದ್ರದಲ್ಲೂ ಇದ್ದು ಅದು ತನ್ನು ಸುತ್ತಲೂ ಸುತ್ತುತ್ತಿರುವ ನಕ್ಷತ್ರಗಳನ್ನು ನಿಯಂತ್ರಿಸುತ್ತಿದೆ. ಇಷ್ಟು ಸಾಕಲ್ಲವೇ ನಮ್ಮ ಭೌತವಿಜ್ಞಾನ ಜಗತ್ತು ಅದೇಕೆ ವಿಶ್ವದ ಅರಿವಿನ ವಿವರವಾದ ಹುಡುಕಾಟ ನಡೆಸುತ್ತಿದೆ.. ಎಂಬು ತುಸುವಾದರೂ ತಿಳಿಯಲು. ಹೌದು, ಇದೊಂದು ಪ್ರಖರ ಸತ್ಯವಾಗಿ ತಿಳಿವಾಗಿಸಿದ್ದು ಪ್ರೊ. ರೈನ್‌ ಹಾರ್ಡ್‌ ಮತ್ತು ಪ್ರೊ. ಆಂಡ್ರಿಯಾ ಗೆಜ್‌ ತಂಡದವರು.

ಅವರು ಗಮನಿಸಿ ದಾಖಲಿಸಿದ್ದು S-2 ಎಂದು ಗುರುತಿಸಲಾದ ನಕ್ಷತ್ರವೊಂದರ ಚಲನೆಯ ಹಾದಿಯ ನಕ್ಷೆ! ಅದು ಒಂದೆರಡು ವರ್ಷವಲ್ಲ. ಸತತವಾಗಿ ಹದಿನಾರು ವರ್ಷಗಳ ಕಾಲ ಅದನ್ನು ನಿರಂತರವಾಗಿ ಅದು ಹಾಯ್ದು ಹೋಗುವ ಮಾರ್ಗವನ್ನು ನಕ್ಷೆಯಗಾಗಿಸಿ ಅದು ಅದೇ ಪಥವನ್ನು ಅನುಸರಿಸುತ್ತಿರುವ ವಿವರಗಳಿಂದ ಮಧ್ಯದಲ್ಲಿರುವ “ಕತ್ತಲಿನ ಜಗತ್ತ”ನ್ನು ಗುರುತಿಸಿದ್ದಾರೆ.

ಪೂರ್ಣ ಲೇಖನವನ್ನು ಓದಲು cfpus.org ತಾಣಕ್ಕೆ ಭೇಟಿ ನೀಡಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.