ಫೇಸ್‌ಬುಕ್‌ ಮಾಜಿ ಉದ್ಯೋಗಿ ಫ್ರಾನ್ಸಿಸ್‌ ಹಾಗೆನ್‌ ಬಿಚ್ಚಿಟ್ಟ 9 ಭಯಂಕರ ಸತ್ಯಗಳು

ಸೋಮವಾರ ಅಮೆರಿಕದ ಕಾಂಗ್ರೆಸ್‌ ಎದುರು ಹಾಜರಾಗಿರುವ ಫೇಸ್‌ಬುಕ್‌ನ ಮಾಜಿ ಉದ್ಯೋಗಿ ಡೇಟಾ ವಿಜ್ಞಾನಿ ಫ್ರಾನ್ಸಸ್‌ ಹಾಗೆನ್‌ ಫೇಸ್‌ಬುಕ್‌ ವ್ಯವಹಾರ ತಂತ್ರಗಳನ್ನು ಬಯಲಿಗೆ ಎಳೆದಿದ್ದಾರೆ. ಅದು ಹೇಳುತ್ತಾ ಬಂದಿರುವ ಸುಳ್ಳುಗಳನ್ನು ಬಯಲು ಮಾಡಿದ್ದಾರೆ. ಸೋಮವಾರ ಅಮೆರಿಕದ ಕಾಂಗ್ರೆಸ್‌ ಎದುರು ಹಾಜರಾಗಿರುವ ಫೇಸ್‌ಬುಕ್‌ನ ಮಾಜಿ ಉದ್ಯೋಗಿ ಡೇಟಾ ವಿಜ್ಞಾನಿ ಫ್ರಾನ್ಸಸ್‌ ಹಾಗೆನ್‌ ಫೇಸ್‌ಬುಕ್‌ ವ್ಯವಹಾರ ತಂತ್ರಗಳನ್ನು ಬಯಲಿಗೆ ಎಳೆದಿದ್ದಾರೆ. ಅದು ಹೇಳುತ್ತಾ ಬಂದಿರುವ ಸುಳ್ಳುಗಳನ್ನು ಬಯಲು ಮಾಡಿದ್ದಾರೆ

ಮೂವತ್ತೇಳು ವರ್ಷದ ಫ್ರಾನ್ಸಸ್‌ ಹೇಗೆನ್‌ ಫೇಸ್‌ಬುಕ್‌ನ ಮಾಜಿ ಉದ್ಯೋಗಿ, ಡೇಟಾ ವಿಜ್ಞಾನಿ. ಗೂಗಲ್‌ನಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. 2019ರಲ್ಲಿ ಫೇಸ್‌ಬುಕ್‌ನ ಸಿವಿಕ್‌ ಇಂಟೆಗ್ರಿಟಿ ಡಿಪಾರ್ಟೆಮೆಂಟ್‌ನ ಪ್ರಾಡಕ್ಟ್‌ ಮ್ಯಾನೇಜರ್‌ ಆಗಿ ಸೇರಿದ್ದರು. ಆದರೆ ಕೆಲವೇ ತಿಂಗಳಲ್ಲಿ ಹೊರಬಂದಿರುವ ಫ್ರಾನ್ಸಸ್‌ ಹಾಗೇನ್‌ ಸಿಬಿಎಸ್‌ನ ಪ್ರಸಿದ್ಧ 60 ಮಿನಿಟ್ಸ್‌ ಸಂದರ್ಶನದಲ್ಲಿ ಫೇಸ್‌ಬುಕ್‌ ಕುರಿತು ಬೆಚ್ಚಿ ಬೀಳಿಸುವ 9 ಸಂಗತಿಗಳನ್ನು ಹೊರಹಾಕಿದ್ದಾರೆ.
ಇಡೀ ಜಗತ್ತಿಗೆ ವಿಷ ಉಣಿಸುತ್ತಿರುವ ಫೇಸ್‌ಬುಕ್‌, ಹೇಗೆ ದ್ವೇಷ, ಸುಳ್ಳು ಮಾಹಿತಿ ಹರಡುತ್ತಿದೆ ಎಂಬುದನ್ನು ತಾನು ಕಲೆಹಾಕಿರುವ 10ಸಾವಿರ ಪುಟಗಳ ದಾಖಲೆಗಳ ಮೂಲಕ ಫೇಸ್‌ಬುಕ್‌ ಉಗುಳು ನುಂಗುವುದಕ್ಕೂ ಹೆದರುವಂತೆ ಮಾಡಿದ್ದಾರೆ.
ತನ್ನ ಲಾಭಕ್ಕೆ ಸಮಾಜವನ್ನೇ ಅಧೋಗತಿಗೆ ತಳ್ಳುತ್ತಿರುವುದು ಮಾರ್ಕ್‌ ಝುಕರ್‌ಬರ್ಗ್ ಎಂದು ದಾಖಲೆಗಳೊಂದಿಗೆ ಹೋರಾಟಕ್ಕೆ ನಿಂತಿದ್ದಾರೆ.

1. ಫೇಸ್‌ಬುಕ್‌ ಆಲ್ಗರಿದಂ ಬಳಕೆದಾರರಲ್ಲಿ ಕೋಪವನ್ನು ಉದ್ದೀಪಿಸಬಲ್ಲವು!

ಫ್ರಾನ್ಸಸ್‌ ಹಾಗೆನ್‌ ತಮ್ಮ ’60ಮಿನಿಟ್ಸ್‌’ ಸಂದರ್ಶನದಲ್ಲಿ, ಫೇಸ್‌ಬುಕ್‌ ಆಲ್ಗರಿದಂ ಬಳಕೆದಾರರನಲ್ಲಿ ಹೇಗೆ ಕೋಪ ಉಕ್ಕಿಸುವಂತಹ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಹೀಗೆ ಬಳಕೆದಾರನಲ್ಲಿ ಭಾವೋದ್ವೇಗವನ್ನು ಹುಟ್ಟಿಸುವುದರಿಂದ ಅವನು ಫೇಸ್‌ಬುಕ್‌ನಲ್ಲಿ ತೀವ್ರವಾಗಿ ಸಕ್ರಿಯವಾಗಿರುತ್ತಾನೆ. ಬಳಕೆದಾರ ಹೆಚ್ಚು ಸಕ್ರಿಯವಾಗುವುದೆಂದರೆ ಫೇಸ್‌ಬುಕ್‌ ಜಾಹೀರಾತುಗಳಿಗೆ ಹೆಚ್ಚಿನ ಕ್ಲಿಕ್‌ ಸಿಗುತ್ತದೆ. ಈ ಮೂಲಕ ಫೇಸ್‌ಬುಕ್‌ ಹಣ ಗಳಿಸುತ್ತದೆ ಎಂದು ಹಾಗೆನ್‌ ಹೇಳಿದ್ದರು.
” ದ್ವೇಷ ಹರಡುವ, ಸಮಾಜ ಒಡೆಯುವ, ಧ್ರುವೀಕರಿಸುವ ಮಾಹಿತಿಯು ಬೇರೆ ಯಾವುದೇ ಭಾವನೆಗಳಿಗಿಂತ ಹೆಚ್ಚು ಕೋಪವನ್ನು ಹೆಚ್ಚಿಸುತ್ತದೆ ಎಂಬುದನ್ನು ಸ್ವತಃ ಫೇಸ್‌ಬುಕ್‌ನ ಸಂಶೋಧನೆಯೇ ಹೇಳುತ್ತದೆ” ಎಂದು ಹಾಗೆನ್‌ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.

”ಸುರಕ್ಷತೆಯ ದೃಷ್ಟಿಯಿಂದ ಆಲ್ಗರಿದಮ್‌ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿದರೆ, ಬಳಕೆದಾರರು ಫೇಸ್‌ಬುಕ್‌ನಲ್ಲಿ ಕಡಿಮೆ ಸಮಯವನ್ನು ಕಳೆಯುತ್ತಾರೆ. ಜಾಹೀರಾತುಗಳಿಗೆ ಕಡಿಮೆ ಕ್ಲಿಕ್‌ಗಳು ಬರುತ್ತವೆ. ಅದರಿಂದ ಆದಾಯವೂ ಕಡಿಮೆಯಾಗುತ್ತದೆ ಎಂಬುದು ಫೇಸ್‌ಬುಕ್‌ಗೆ ಗೊತ್ತಿದೆ’ ಎಂದು ವಿವರಿಸಿದ್ದಾರೆ.

2. ಇತರೆ ಸಾಮಾಜಿಕ ಜಾಲತಾಣಗಳಿಗಿಂತ ಹೆಚ್ಚು ಫೇಸ್‌ಬುಕ್‌ ಕೆಟ್ಟದ್ದು

ಸಮಾಜಕ್ಕೆ ಹಾನಿ ಉಂಟುಮಾಡುವ ದೃಷ್ಟಿಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಗಮನಿಸಿದಾಗ, ಎಲ್ಲವೂ ಒಂದೇ ಅನ್ನಿಸುತ್ತದೆ. ಅದು ಟ್ವಿಟರ್‌ ಇರಲಿ, ಯೂಟ್ಯೂಬ್‌ ಇರಲಿ ಅಥವಾ ಪಿಂಟ್ರೆಸ್ಟ್‌. ಆದರೆ ಇವುಗಳ ಮುಂದೆ ಫೇಸ್‌ಬುಕ್‌ ಭಿನ್ನ ಮತ್ತು ಭಯಾನಕ ಎಂಬುದು ಹಾಗೆನ್‌ ಅವರ ವಾದ.
“ನಾನು ಹಲವು ಸಾಮಾಜಿಕ ಜಾಲತಾಣಗಳನ್ನು ನೋಡಿದ್ದೇನೆ. ಅವೆಲ್ಲವುಗಳಿಗಿಂತ ಫೇಸ್‌ಬುಕ್‌ ಅತ್ಯಂತ ಕೆಟ್ಟ ಜಾಲತಾಣ” ಎನ್ನುತ್ತಾರೆ ಹಾಗೆನ್‌.
ಅದರ ಆಶಯ, ಆಲೋಚನೆ ಹಾಗೂ ಕಾರ್ಯತಂತ್ರಗಳು ಯಾವ ರೀತಿಯಲ್ಲೂ ಸಮಾಜದ ಒಳಿತಿಗೆ ಬದ್ಧವಾಗಿಲ್ಲ ಎಂಬುದು ಅವರ ವಾದವಾಗಿದೆ.

3. ಚುನಾವಣೆ ಬಳಿಕ ಸಿವಿಕ್‌ ಇಂಟಿಗ್ರೆಟಿ ವಿಭಾಗ ಮುಚ್ಚಿತು

ರಾಜಕೀಯದ ಸುಳ್ಳು ಮಾಹಿತಿಯನ್ನು ನಿಯಂತ್ರಿಸಲು ಫೇಸ್‌ಬುಕ್‌, ಸಿವಿಕ್‌ ಇಂಟಿಗ್ರೆಟಿ ಎಂಬ ವಿಭಾಗವನ್ನು ಆರಂಭಿಸಿತ್ತು. ಸುಳ್ಳು ಸುದ್ದಿ ನಿಯಂತ್ರಣದ ಬಗ್ಗೆ ಅತೀವ ಆಸಕ್ತಿಯಿದ್ದ ಹಾಗೆನ್‌ ಈ ವಿಭಾಗಕ್ಕೆ ಸೇರಿಕೊಂಡಿದ್ದರು. 2020ರ ನವೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆದ ಬಳಿಕ ಈ ವಿಭಾಗವನ್ನು ವಿಸರ್ಜಿಸಲಾಯಿತು. ‘ನಾವು ಸಿವಿಕ್‌ ಇಂಟಿಗ್ರೆಟಿಯನ್ನು ವಿಸರ್ಜಿಸುತ್ತಿದ್ದೇವೆ” ಎಂದವರು ಹೇಳಿದರು ಎಂದು ಹೇಗೆನ್‌ ನೆನಪಿಸಿಕೊಳ್ಳುತ್ತಾರೆ. ಅವರ ಮಾತಿನ ಅರ್ಥ ಸಾಮಾಜಿಕ ಜಾಲತಾಣದಿಂದ ಯಾವುದೇ ರೀತಿಯ ಅಹಿತಕರ ಬೆಳವಣಿಗೆಗೆ ಪ್ರೇರಣೆಯಾಗಿಲ್ಲ ಎಂಬುದು. ಆಧರೆ  ಫೇಸ್‌ಬುಕ್‌ ಕೇವಲ ಅಮೆರಿಕದ ಪ್ರಜಾಪ್ರಭುತ್ವವನ್ನು ನಾಶಮಾಡುತ್ತಿಲ್ಲ, ಈ ಜಗತ್ತಿನ ಎಲ್ಲ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶ ಮಾಡುತ್ತಿದೆ ಎಂದು ಫ್ರಾನ್ಸಸ್‌ ಹೇಗೆನ್‌ ಎಚ್ಚರಿಸಿದ್ದಾರೆ.

4. ಯುರೋಪಿನ ರಾಜಕೀಯ ಪಕ್ಷಗಳ ನೆಗೆಟಿವ್‌ ಪ್ರಚಾರ

ಪ್ರಚಾರದಲ್ಲಿ ನೆಗೆಟಿವ್‌ ಮತ್ತು ಪಾಸಿಟಿವ್‌ ಎಂಬುದಿಲ್ಲ ಎಂಬ ಮಾತೊಂದಿದೆ. ನೆಗೆಟಿವ್‌ ಪಬ್ಲಿಸಿಟಿಯೂ, ಪಬ್ಲಿಸಿಟಿಯೇ ಎಂಬುದು ಜನಜನಿತ ವಿಚಾರ. ಯುರೋಪಿಯನ್‌ ಒಕ್ಕೂಟದ ರಾಜಕೀಯ ಪಕ್ಷಗಳು ಇದೇ ತಂತ್ರವನ್ನು ಅನುಸರಿಸಿವೆ. ಅದಕ್ಕೆ ಪೂರಕವಾದ ತಂತ್ರಗಳನ್ನು ಫೇಸ್‌ಬುಕ್‌ ರೂಪಿಸಿದೆ ಎಂಬುದು ಹಾಗೆನ್‌ ಅವರ ಆರೋಪ.

ಹಾಗೆನ್‌ ಸಂಗ್ರಹಿಸಿದ ದಾಖಲೆಗಳ ಪ್ರಕಾರ ರಾಜಕೀಯ ಪಕ್ಷಗಳು ಹೆಚ್ಚು ಗಮನಸೆಳೆಯುವುದಕ್ಕಾಗಿ ನೆಗೆಟಿವ್‌ ಆದ ವಿಚಾರಗಳನ್ನು ಒಳಗೊಂಡ ಜಾಹೀರಾತುಗಳನ್ನೇ ಫೇಸ್‌ಬುಕ್‌ ಪ್ರಕಟಿಸಿವೆ. ‘ ಇದರ ಉದ್ದೇಶವಿಷ್ಟೆ. ಸಮಾಜಕ್ಕೆ ಹಾನಿ ಉಂಟು ಮಾಡುವ ಮತ್ತು ನಾವು ಇಷ್ಟಪಡದ ಸಂಗತಿಗಳ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದುವುದಕ್ಕೆ ನಿಮ್ಮ ಮೇಲೆ ಒತ್ತಡ ಹಾಕುವುದು ಈ ತಂತ್ರದ ಉದ್ದೇಶ. ಇಲ್ಲಿ ನಾವು ಒಂದು ನಿಲುವು ತಳೆಯದೇ ಇದ್ದರೆ, ಸಾಮಾಜಿಕ ಜಾಲತಾಣಗಳ ಮಾರುಕಟ್ಟೆಯಲ್ಲಿ ನಾವು ಗೆಲ್ಲುವುದಿಲ್ಲ ಎಂಬುದು ಸ್ಪಷ್ಟ. ಬಳಕೆದಾರರಲ್ಲಿ ಈ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ’ ಎಂದು ಹಾಗೆನ್‌ ವಿವರಿಸುತ್ತಾರೆ.

5. ದ್ವೇಷ ಮತ್ತು ಸುಳ್ಳಿನಿಂದ ಕೂಡಿ ಮಾಹಿತಿ ಗುರುತಿಸುವುದಿಲ್ಲ!

ಫೇಸ್‌ಬುಕ್‌ ಸುಳ್ಳುಸುದ್ದಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ವರ್ಷಗಳ ಹಿಂದೆಯೇ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. 80ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಈ ತಾಣದಲ್ಲಿ ಸುಳ್ಳು ಮಾಹಿತಿ, ದ್ವೇಷ ಹರಡುವಂತಹ ಮಾಹಿತಿ ಸುಲಭವಾಗಿಯೇ ವಿನಿಮಯವಾಗುತ್ತದೆ. ಆದರೆ ಅದನ್ನು ಗುರುತಿಸುವ ನಿಟ್ಟಿನಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿಲ್ಲ. ಫೇಸ್‌ಬುಕ್‌ ಆಂತರಿಕ ಸಂಶೋಧನೆಯ ಪ್ರಕಾರ 3-5%ನಷ್ಟು ದ್ವೇಷ ಹರಡುವ, 1%ಗಿಂತ ಕಡಿಮೆಯ ಸಂಖ್ಯೆಯ ಹಿಂಸಾಚಾರದ ಮತ್ತು ಹಿಂಸೆಗೆ ಪ್ರೇರೇಪಿಸುವ ಪೋಸ್ಟ್‌ಗಳನ್ನು ಗುರುತಿಸಿದೆಯಂತೆ.ಈ ಅಧ್ಯಯನದ ವಿವರಗಳು ಹಾಗೆನ್‌ ಅವರಿಗೆ ಲಭ್ಯವಾಗಿವೆ. ಆದರೂ ತನ್ನನ್ನು ತಾನು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ, ಹಿಂಸಾಚಾರದ ಮಾಹಿತಿ ನಿಯಂತ್ರಿಸುವ ತಾಣವೆಂದು ಹೇಳಿಕೊಳ್ಳುತ್ತದೆ.
ಗಿಜ್ಮೋಡ್‌ಗೆ ಪ್ರತಿಕ್ರಿಯೆ ನೀಡಿರುವ ಫೇಸ್‌ಬುಕ್‌ನ ವಕ್ತಾರರು, ” ಇಂತಹ ಸಂಕೀರ್ಣ ಸವಾಲುಗಳಿಗೆ ಸ್ಪಷ್ಟ, ನಿಖರವಾದ ಪರಿಹಾರ ಕಂಡುಕೊಂಡಿದ್ದರೆ, ಟೆಕ್‌ ಉದ್ಯಮ, ಸರ್ಕಾರಗಳು ಮತ್ತು ಸಮಾಜ ಎಂದೋ ಪರಿಹರಿಸಿಕೊಳ್ಳುತ್ತಿದ್ದವು” ಎಂದಿದ್ದು, ” ನಾವು ನಮ್ಮ ಸಂಶೋಧನೆಯನ್ನು ಬಳಸಿಕೊಂಡು ನಮ್ಮ ಆಪ್‌ಗಳಲ್ಲಿ ಆಗುವ ಬದಲಾವಣೆಗಳ ಮಾಹಿತಿಯನ್ನು ನೀಡುತ್ತಿದ್ದೇವೆ” ಎಂದು ಸಮಜಾಯಿಷಿ ನೀಡಿದ್ದಾರೆ.

6. ಇನ್‌ಸ್ಟಾಗ್ರಾಮ್‌ ಮಕ್ಕಳನ್ನು ಸಂಕಷ್ಟಕ್ಕೆ ತಳ್ಳುತ್ತಿದೆ

ಫೇಸ್‌ಬುಕ್‌ ಸಂಸ್ಥೆಯ ಭಾಗವಾಗಿರುವ ಇನ್‌ಸ್ಟಾಗ್ರಾಮ್‌, ಹರೆಯದ ಸಮುದಾಯದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಆದರೆ ಅದು ಎಳೆಯ ಮನಸ್ಸುಗಳ ಮೇಲೆ ಆಘಾತಕಾರಿ ಪ್ರಭಾವ ಬೀರುವ ಅಂಶಗಳನ್ನು ಹೊಂದಿದೆ ಎಂದು ಹಾಗೆನ್‌ ಅವರಿಗೆ ಸಿಕ್ಕಿರುವ ದಾಖಲೆಗಳು ಹೇಳುತ್ತಿವೆ. 13.5% ಹರೆಯದ ಹೆಣ್ಣು ಮಕ್ಕಳಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವುದಾಗಿ, 17% ಮಕ್ಕಳಿಗೆ ಆಹಾರ ಸೇವನೆಯ ಸಮಸ್ಯೆಯನ್ನು ಇನ್ನಷ್ಟು ತೀವ್ರವಾಗಿಸಿದೆ ಎಂದು ಈ ದಾಖಲೆಗಳು ಹೇಳುತ್ತವೆ.
“ಫೇಸ್‌ಬುಕ್‌ ಸಂಶೋಧನೆಯೇ ಹೇಳುವಂತೆ, ಈ ಹರೆಯದ ಹೆಣ್ಣುಮಕ್ಕಳು ಆಹಾರಕ್ಕೆ ಸಂಬಂಧಿಸಿದ ಪೋಸ್ಟ್‌ಗಳಿಂದಾಗಿ ಇನ್ನಷ್ಟು ಖಿನ್ನರಾಗುತ್ತಿದ್ದಾರೆ ಇದು ಹೆಚ್ಚು ಹೆಚ್ಚು ಆಪ್‌ ಬಳಸುವಂತೆ ಮಾಡುತ್ತಿದೆ. ಇದರಿಂದ ಅವರು ತಮ್ಮ ದೇಹವನ್ನು ಹೆಚ್ಚು ಹೆಚ್ಚು ದ್ವೇಷಿಸುವಂತಾಗುತ್ತದೆ” ಎಂದು ಹಾಗೆನ್‌ ಸಂದರ್ಶನದಲ್ಲಿ ಇನ್‌ಸ್ಟಾಗ್ರಾಮ್‌ ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ.

ಫೇಸ್‌ಬುಕ್‌ ತನ್ನೆಲ್ಲಾ ಸೇವೆಗಳ ಮೂಲಕ, ಈ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುತ್ತಿದೆ. ಆದರೆ ಫೇಸ್‌ಬುಕ್‌ ಹೇಳುವುದೇ ಬೇರೆ.
ಪಾಲಿಸಿ ಕಮ್ಯುನಿಕೇಷನ್‌ ನಿರ್ದೇಶಕರಾದ ಲೆನಾ ಪೀಶ್ಚ್‌,’ ಸೋರಿಕೆಯಾಗಿದೆ ಎನ್ನಲಾಗಿರುವ ಆಂತರಿಕ ಸಂಶೋಧನೆ ಹೇಳುವಂತೆ ಇನ್‌ಸ್ಟಾಗ್ರಾಮ್‌ ಕಿಶೋರಿಯರಿಗೆ ಹಾನಿಕರವಲ್ಲ. ನಾವು ಆಂತರಿಕ ಸಂಶೋಧನೆ ನಡೆಸುವುದು ಹೌದು. ಕಠಿಣ ಪ್ರಶ್ನೆಗಳನ್ನು ಕೇಳಿ, ಹರೆಯದವರ ಆಪ್‌ ಬಳಕೆಯ ಅನುಭವವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮ ಸಂಶೋಧನೆಯು ಹರೆಯದವರು, ಕಷ್ಟದ ಸಮಯವನ್ನು ಮೀರುವುದಕ್ಕೆ ಇನ್‌ಸ್ಟಾಗ್ರಾಮ್‌ ನೆರವಾಗುತ್ತದೆ ಎಂದು ಹೇಳಿರುವುದನ್ನು ಗುರುತಿಸಿದೆ” ಎಂದು ಹೇಳಿಕೆ ನೀಡಿದ್ದಾರೆ.

7. ಫೇಸ್‌ಬುಕ್‌ ಉದ್ಯೋಗಿಗಳೆಲ್ಲಾ ದುಷ್ಟರಲ್ಲ, ಆದರೆ ಅದು ನಿಜವಲ್ಲ!

ಫೇಸ್‌ಬುಕ್‌ನಲ್ಲಿ ಕೆಲಸ ಮಾಡಿ ಹೊರಬಂದವರೆಲ್ಲಾ ಹೇಳುವ ಮಾತು, ಅಲ್ಲಿ ಕೆಲಸ ಮಾಡುವವರೆಲ್ಲಾ ದುಷ್ಟರಲ್ಲ. ಹಾಗಾದರೆ ಅಲ್ಲಿರುವ ವಾತಾವರಣವೇ ಸರಿ ಇಲ್ಲ ಎನ್ನಬೇಕೆ ಎಂದು ಕೇಳುತ್ತಾರೆ ಹಾಗೆನ್‌. ”ಫೇಸ್‌ಬುಕ್‌, ನೀವು ಹೆಚ್ಚು ಹೆಚ್ಚು ಕಂಟೆಂಟ್‌ ಬಳಸಿದಷ್ಟು ಹಣವನ್ನು ಸಂಪಾದಿಸುತ್ತದೆ. ಭಾವನಾತ್ಮಕ ಪ್ರಕ್ರಿಯೆಯನ್ನು ಉದ್ದೀಪಿಸುವ ಈ ತೊಡಗಿಸಿಕೊಳ್ಳುವಿಕೆಯನ್ನು ಜನ ಆನಂದಿಸುತ್ತಾರೆ. ಹೆಚ್ಚು ಕೋಪಿಸಿಕೊಂಡಷ್ಟೂ ಹೆಚ್ಚು, ಸಂವಾದ ನಡೆಸುತ್ತಾರೆ ಮತ್ತು ಹೆಚ್ಚು ಬಳಸುತ್ತಾರೆ” ಎಂದು ವಿವರಿಸುವ ಮೂಲಕ ಇಂಥ ಸಂಸ್ಥೆಯಲ್ಲಿ ಯಾರು ದುಷ್ಟರಿಲ್ಲ ಎಂದು ಹೇಳುವುದೇ ದುರುದ್ದೇಶದಿಂದ ಕೂಡಿದ್ದು ಎಂದು ಸ್ಪಷ್ಟವಾಗಿ ಹೇಳುತ್ತಾರೆ.

8. ಮಾರ್ಕ್‌ ಝುಕರ್‌ಬರ್ಗ್‌ ಬಗ್ಗೆ ಹಾಗೆನ್‌ಗೆ ಅನುಕಂಪವಿದೆ!

”ಮಾರ್ಕ್‌ ಬಗ್ಗೆ ನನಗೆ ಅನುಕಂಪವಿದೆ. ದ್ವೇಷದ ವೇದಿಕೆಯನ್ನು ಸೃಷ್ಟಿಸುವುದಕ್ಕೆ ಅವರು ಹೊರಟಿರಲಿಲ್ಲ. ಆದರೆ ಅವರು ಸೃಷ್ಟಿಸಿದ ವೇದಿಕೆ ದ್ವೇಷ, ಧ್ರುವೀಕರಣದ ಮಾಹಿತಿಗಳು ಅಡ್ಡಪರಿಣಾಮಗಳಾಗಿ ಹೊಮ್ಮುವಂತಹ ಆಯ್ಕೆಗಳಿಗೆ ಅವಕಾಶ ಮಾಡಿಕೊಟ್ಟು, ಅಂತಹ ಮಾಹಿತಿ ಹರಡಿದೆ’ ಎಂದು ಹಾಗೆನ್‌ ಸಂದರ್ಶನದಲ್ಲಿ ಹೇಳಿದ್ದಾರೆ.
ಆದರೆ ಹಾಗೆನ್‌ ಅವರಿಗೆ ಮಾರ್ಕ್‌ ಝುಕರ್‌ ಬರ್ಗ್‌ ಏನು ಮಾಡಲು ಹೊರಟಿದ್ದರು ಎಂಬ ಬಗ್ಗೆ ಆಸಕ್ತಿಯಿಲ್ಲ. ಆದರೆ ಅದು ಬೆಳೆದು ನಿಂತ ಬಗೆ ಎಂಥದ್ದು ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ಅದು ಈಗ ಹೇಗೆ ಬಳಕೆ ಮತ್ತು ದುರ್ಬಳಕೆಯಾಗುತ್ತಿದೆ ಎಂದು ಬಹಳ ಮುಖ್ಯವೆಂದು ಗಮನಿಸಬೇಕೆನ್ನುತ್ತಾರೆ.

9. ವಿಷಲ್‌ಬ್ಲೋವರ್‌ ಕಾನೂನು ರಕ್ಷಣೆಯಿದೆ ಎಂದು ಹಾಗೆನ್‌ ನಂಬಿದ್ದಾರೆ

ಅಮೆರಿಕದ ಸೆಕ್ಯುರಿಟಿಸ್‌ ಮತ್ತು ಎಕ್ಸ್‌ಚೇಂಜ್‌ ಕಮಿಷನ್‌ ಜೊತೆ ಸಂವಹನ ನಡೆಸುತ್ತಿರುವವರಿಗೆ ಅಮೆರಿಕದ ಕಾನೂನು ರಕ್ಷಣೆ ನೀಡುತ್ತದೆ. ಈಗ ವಿಷಲ್‌ಬ್ಲೋವರ್‌ ಆಗಿರುವ ಫ್ರಾನ್ಸಿಸ್‌ ಹಾಗೆನ್‌, ಕೂಡ ಅಮೆರಿಕದ ಕಾನೂನಿನ ರಕ್ಷಣೆ ಇದೆ ಎಂಬ ನಂಬಿಕೆ ಹೊಂದಿದ್ದಾರೆ. ಹತ್ತು ವರ್ಷಗಳ ಹಿಂದೆ ರೂಪಿಸಲಾದ ಡಾಡ್‌ ಫ್ರಾಂಕ್‌ ಕಾಯ್ದೆಯಡಿ ವಿಷಲ್‌ಬ್ಲೋವರ್‌ಗಾಗಿ ಒಂದು ಕಚೇರಿ ಸ್ಥಾಪಿಸಲಾಗಿದೆ. ಈ ಕಾನೂನು ಯಾವುದೇ ಕಂಪನಿ ಎಸ್‌ಇಸಿ ಜೊತೆಗೆ ಸಂವಹನ ಮಾಡುವುದಕ್ಕೆ ತಡೆಯುವಂತಿಲ್ಲ ಎಂದು ಹೇಳುತ್ತದೆ. ಆದರೆ ಇಲ್ಲೂ ಕೆಲವು ಮಿತಿಗಳಿವೆ ಎಂಬುದು ಚರ್ಚೆಯಾಗುತ್ತಿದೆ. ಸತ್ಯ ಬಯಲು ಹೊರಟವರಿಗೆ ಕಾನೂನು ರಕ್ಷಣೆ ಯಾವ ಮಟ್ಟಿಗೆ ಇದೆ ಎಂಬುದು ಫ್ರಾನ್ಸಸ್‌ ಹೇಗೆನ್‌ ಪ್ರಕರಣದಿಂದ ಚರ್ಚೆಯ ಕೇಂದ್ರವಾಗಿದೆ.

ತೀವ್ರ ಮುಜುಗರವನ್ನು ಎದುರಿಸುವುದಕ್ಕೆ ಕಾರಣವಾಗಿರುವ ಈ ಬೆಳವಣಿಗೆಯಿಂದಾಗಿ ಫೇಸ್‌ಬುಕ್‌ ಎಲ್ಲ ರೀತಿಯಲ್ಲೂ ಈ ಆರೋಪಗಳನ್ನು ತಳ್ಳಿಹಾಕುವ, ಫ್ರಾನ್ಸಸ್‌ ಹೇಗೆ ವ್ಯಕ್ತಿತ್ವ ಹನನಕ್ಕೂ ಮುಂದಾಗಿದೆ.

(ಆಧಾರ: ಗಿಜ್ಮೋಡೊ)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.