ದಿ ಸೋಷಿಯಲ್‌ ಡಿಲೆಮಾ | ಈ ಸಾಕ್ಷ್ಯಚಿತ್ರ ನೋಡಿದ ಮೇಲೆ, ಸೋಷಿಯಲ್‌ ಮಿಡಿಯಾ ಬಳಸುವ ಮುನ್ನ ಯೋಚಿಸುತ್ತೀರಿ

ಸೋಷಿಯಲ್‌ ಮೀಡಿಯಾ ಸೃಷ್ಟಿಸುತ್ತಿರುವ ಅವಾಂತರ, ಅದರಿಂದಾಗಿ ಆಗುತ್ತಿರುವ ಅನಾಹುತಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಅಂತಹ ಸಂಸ್ಥೆಗಳಿಂದ ಹೊರಬಂದ ಅನೇಕರು ಒಳಗಿನ ಸತ್ಯಗಳನ್ನು ಬಿಚ್ಚಿಡುತ್ತಿದ್ದಾರೆ. ಅಂತಹದ ಸತ್ಯಗಳನ್ನು ಅನಾವರಣ ಮಾಡುವ ಸಾಕ್ಷ್ಯಚಿತ್ರ, ದಿ ಸೋಷಿಯಲ್‌ ಡಿಲೆಮಾ

”Nothing Vast enters the life of mortals without a curse”

ಸಫೋಕ್ಲೆಸ್‌ನ ಈ ಮಾತಿನೊಂದಿಗೆ ಆರಂಭವಾಗುವ ‘ದಿ ಸೋಷಿಯಲ್‌ ಡಿಲೆಮಾ’ ಸಾಮಾಜಿಕ ಜಾಲತಾಣಗಳು ತಂದೊಡ್ಡಿರುವ ಅನಾಹುತವನ್ನು ಬಿಚ್ಚಿಡುತ್ತದೆ. ಯಾವುದೇ ಆಗಲಿ, ಸುಲಭವಾಗಿ ನಮಗೆ ದುಕ್ಕುವುದಿಲ್ಲ. ಹಾಗೇ ಏನೇ ಸಿಗುತ್ತಿದ್ದರೆ, ನಾವು ನಮಗೆ ಗೊತ್ತಿಲ್ಲದೇ ಬೆಲೆ ತೆರುತ್ತಿರುತ್ತೇವೆ. ಸಫೋಕ್ಲೆಸ್‌ ಎಚ್ಚರಿಸಿರುವುದು ಅದನ್ನೇ .

ನೆಟ್‌ಫ್ಲಿಕ್ಸ್‌ ಬಿಡುಗಡೆಯಾದ ಈ ಚಿತ್ರ ಸಾಕ್ಷ್ಯಚಿತ್ರವನ್ನು ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಅಮೆರಿಕದ ಚಿತ್ರ ನಿರ್ಮಾಪಕ ಜೆಫ್‌ ಒರ್ಲೋಸ್ಕಿ ನಿರ್ಮಿಸಿದ್ದಾರೆ. ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಮ್‌, ಪಿಂಟ್ರೆಸ್ಟ್‌, ಗೂಗಲ್‌ ಸೇರಿದಂತೆ ಜಗತ್ತಿನ ಎಲ್ಲ ಪ್ರಮುಖ ಸಾಮಾಜಿಕ ಜಾಲತಾಣಗಳಿಂದ ಸಮಾಜ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಆಗಿರುವ ದುಷ್ಪರಿಣಾಮಗಳನ್ನು ಅನಾವರಣ ಮಾಡುತ್ತದೆ.

ಇದೊಂದು ಡಾಕ್ಯು ಡ್ರಾಮ. ಒಂದೆಡೆ ವಾಸ್ತವಾಂಶಗಳನ್ನು ಬಿಚ್ಚುಡುತ್ತಲೇ, ಇನ್ನೊಂದೆಡೆ ಕುಟುಂಬವೊಂದರ ಸಾಮಾಜಿಕ ಜಾಲತಾಣಗಳ ವ್ಯಸನ, ಅದು ಸಂಬಂಧ, ವ್ಯಕ್ತಿತ್ವಗಳ ಮೇಲೆ ಬೀರುವ ಪರಿಣಾಮಗಳನ್ನು ಚಿತ್ರಿಸುತ್ತದೆ. ಒಂದೂವರೆ ಗಂಟೆಯ ಈ ಸಾಕ್ಷ್ಯಚಿತ್ರದಲ್ಲಿ ಜಗತ್ತಿನ ಎಲ್ಲ ಪ್ರಮುಖ ಟೆಕ್‌ ಕಂಪನಿಗಳಲ್ಲಿ ಕೆಲಸ ಮಾಡಿದವರು ಆಯಾ ಸಂಸ್ಥೆಗಳ ಒಳಗುಟ್ಟುಗಳನ್ನು, ಅವುಗಳು ಕಾರ್ಯನಿರ್ವಹಿಸುವ ಬಗೆಯನ್ನು ಬಿಚ್ಚಿಡುತ್ತಾ ಹೋಗುತ್ತಾರೆ.

ಜೊತೆಗೆ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಸ್ಟ್ಯಾನ್‌ಫೋರ್ಡ್‌, ಸಂಶೋಧಾನ ಸಂಸ್ಥೆಗಳ ತಜ್ಞರು ಸಾಮಾಜಿಕ ಜಾಲತಾಣಗಳ ವ್ಯಕ್ತಿ ಮತ್ತು ವ್ಯವಸ್ಥೆಯನ್ನು ಹೇಗೆ ನಿಯಂತ್ರಿಸುತ್ತಿವೆ ಎಂಬುದನ್ನು ವಿವರಿಸಿದ್ದಾರೆ.

ಎಲ್ಲ ಸಾಮಾಜಿಕ ಜಾಲತಾಣದ ಆಪ್‌ಗಳು ಬಳಕೆದಾರರ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತದೆ ಮತ್ತು ಅದೇ ಮಾಹಿತಿಯನ್ನು ಅದೇ ಬಳಕೆದಾರರನ್ನು ನಿಯಂತ್ರಿಸಲು ಮತ್ತು ಪ್ರಭಾವಿಸಲು ಹೇಗೆ ಬಳಸುತ್ತದೆ ಎಂಬುದನ್ನು ವಿವರಿಸುತ್ತದೆ. ಹಾಗೆಯೇ ಜಗತ್ತಿಗೆ ಅತಿದೊಡ್ಡ ಅಪಾಯವಾಗಿ ಪರಿಣಮಿಸಿರುವ ಸುಳ್ಳುಸುದ್ದಿಗಳ ವ್ಯಾಪಕವಾಗುವುದಕ್ಕೆ ಇವುಗಳ ಕೊಡುಗೆ ಏನು ಎಂಬುದನ್ನು ವಿವರಿಸುತ್ತದೆ.

ಗೂಗಲ್‌ ಸಂಸ್ಥೆಯ ವಿನ್ಯಾಸ ವಿಭಾಗದಲ್ಲಿದ್ದು, ಈಗ ಸೆಂಟರ್‌ ಫಾರ್‌ ಹ್ಯೂಮೇನ್‌ ಟೆಕ್ನಾಲಜಿ ಎಂಬ ಸಂಸ್ಥೆ ಆರಂಭಿಸಿರುವ ಟ್ರಿಸ್ಟನ್‌ ಹ್ಯಾರಿಸ್‌, ಫೇಸ್‌ಬುಕ್‌ನ ಲೈಕ್‌ ಬಟನ್‌ ಸೃಷ್ಟಿಸಿದ ಜಸ್ಟಿನ್‌ ರೋಸೆನ್‌ಸ್ಟಿನ್‌, ಪಿಂಟ್ರೆಸ್ಟ್‌ನ ಅಧ್ಯಕ್ಷರಾಗಿದ್ದ ಟಿಮ್‌ ಕೆಂಡಾಲ್ ಹಾಗೂ ಇನ್ನು ಅನೇಕರು ತಮ್ಮ ಸಂಸ್ಥೆಗಳು ಬಳಕೆದಾರರ ಖಾಸಗಿತನದೊಂದಿಗೆ ನಡೆದುಕೊಂಡ ರೀತಿ, ಮಾಹಿತಿಯ ದುರ್ಬಳಕೆಯಾದ ಬಗೆಯನ್ನು ವಿವರಿಸಿದ್ದಾರೆ.

ಆದರೆ ಸಾಮಾಜಿಕ ಜಾಲತಾಣಗಳ ಸಮಸ್ಯೆಯಲ್ಲ ಎಂಬ ನಿಲುವನ್ನು ದಾಖಲಿಸುತ್ತದೆ. ಈ ತಾಣಗಳ ವ್ಯಾಪಾರಿ ವಿಧಾನದಲ್ಲಿರುವ ಸಮಸ್ಯೆಯೇ ಎಲ್ಲ ಅನಾಹುತಗಳಿಗೂ ಮೂಲ ಎಂಬುದನ್ನು ವಿವರಿಸುತ್ತದೆ. ಮಾಹಿತಿ ವಿನಿಮಯ, ಅಗತ್ಯ ನೆರವು, ಸೇವೆಗಳನ್ನು ತಕ್ಷಣ ಲಭ್ಯವಾಗುವಂತೆ ಮಾಡುವಲ್ಲಿ, ಅನ್ಯಾಯ, ಅರಾಜಕತೆಗಳ ವಿರುದ್ಧ ನಡೆದ ಸಂಘಟಿತ ಹೋರಾಟಕ್ಕೆ ಸಾಮಾಜಿಕ ಜಾಲತಾಣಗಳು ತಮ್ಮದೇ ಆದ ಕೊಡುಗೆ ನೀಡಿವೆ ಎಂಬುದನ್ನೂ ಹೇಳುತ್ತದೆ.

ಆದರೆ ಬಳಕೆದಾರರ ಚಟುವಟಿಕೆಗಳನ್ನು ಪ್ರತಿ ಕ್ಷಣವೂ ನಿಗಾ ಇಡುವ ರೀತಿ, ಸುಪ್ತ ಮನಸ್ಸನ್ನು ಪ್ರಭಾವಿಸುವ ರೀತಿಯಲ್ಲಿ ಬಳಕೆದಾರರ ಟೈಮ್‌ ಲೈನ್‌ ಅನ್ನು ನಿಯಂತ್ರಿಸುವ ರೀತಿ ಎಲ್ಲವೂ ನಿಮ್ಮ ಮುಂದಿಡುತ್ತದೆ.

ನಮಗೆ ಈಗಾಗಲೇ ತಿಳಿದಿರುವ ವಿಚಾರಗಳನ್ನೇ ಹೇಳುತ್ತಿರುವಂತೆ ಅನ್ನಿಸಿದರೂ, ಅವುಗಳ ತೀವ್ರತೆಯನ್ನು, ನಿಖರತೆಯನ್ನು ಈ ಸಾಕ್ಷ್ಯಚಿತ್ರ ದಾಖಲಿಸುತ್ತದೆ.

ಇದನ್ನೂ ಓದಿ | ಹಾಟ್‌ಸ್ಟಾರ್‌ VIPನಲ್ಲಿ ಪ್ರಸಾರವಾಗಲ್ಲ IPL 2020 ಲೈವ್ ಸ್ಟೀಮಿಂಗ್: ಇಲ್ಲಿದೇ ಜಿಯೋ ಮಾಸ್ಟರ್ ಪ್ಲಾನ್!

ಫೇಸ್‌ಬುಕ್‌, ಗೂಗಲ್‌ ಸೇರಿದಂತೆ ಎಲ್ಲ ಟೆಕ್‌ ಕಂಪನಿಗಳ ಬಳಕೆದಾರರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವ ಈ ಹೊತ್ತಲ್ಲಿ ‘ದಿ ಸೋಷಿಯಲ್‌ ಡಿಲೆಮಾ’ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಸನ್‌ಡಾನ್ಸ್‌ ಚಿತ್ರೋತ್ಸವ ಪ್ರಶಸ್ತಿ ಪಡೆದಿರುವ ಈ ಸಾಕ್ಷ್ಯಚಿತ್ರವನ್ನು ಪ್ರತಿಯೊಬ್ಬರೂ ನೋಡಲೇಬೇಕು ಎಂಬುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.