ಬೀಗಲ್‌ ಯಾನ 1 | ಸೇಂಟ್ ಜಾಗೋ ದ್ವೀಪದ ಪ್ರಾಯಾದಲ್ಲಿ ಲಂಗರು ಹಾಕಿದ ದಿನ

1831ರ ಡಿಸೆಂಬರ್‌ನಲ್ಲಿ ಪಾಲಿಮೌತ್‌ನಿಂದ ಹೊರಟ ಬೀಗಲ್‌ ಹಡಗು ಪ್ರಸಿದ್ಧ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಅವರ ಕುತೂಹಲವನ್ನು ಹೊತ್ತೊಯ್ದಿತ್ತು. ಎರಡು ವರ್ಷಗಳಿಗೆ ಮುಗಿಯುವುದೆಂದುಕೊಂಡ ಪಯಣವೆಂದು ಐದು ವರ್ಷಗಳ ಕಾಲ ಸಾಗಿತು. ಈ ಸಾಹಸಯಾನ ಬಳಿಕ ಪುಸ್ತಕವಾಗಿಯೂ ಪ್ರಕಟವಾಯಿತು. ಹಿರಿಯ ಲೇಖಕ ಕೊಳ್ಳೆಗಾಲ ಶರ್ಮ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಅನುವಾದ ಆಧರಿಸಿದ ಪಾಡ್‌ಕಾಸ್ಟ್‌ ಸರಣಿ ಇಂದು ಆರಂಭಿಸುತ್ತಿದ್ದೇವೆ. ಯಾನದ ಮೊದಲ ದಿನಚರಿ ಇಲ್ಲಿದೆ

ಚಾರ್ಲ್ಸ್ ಡಾರ್ವಿನ್ನರ ಬಗ್ಗೆ ನಮಗೆಲ್ಲ ಗೊತ್ತು. ಜೀವಿಗಳು ವಿಕಾಸವಾದದ್ದು ಹೇಗೆ ಎನ್ನುವ ಬಗ್ಗೆ ವಿಶ್ವಾಸಾರ್ಹವಾದ ತರ್ಕವನ್ನುನೀಡಿ ನಮ್ಮ ಅರಿವಿನ ಹಾದಿಯನ್ನೇ ಪಲ್ಲಟಿಸಿದವರು ಡಾರ್ವಿನ್. ಇವರು ಬರೆದ ಆರಿಜಿನ್ ಆಫ್ ಸ್ಪೀಶೀಸ್ … ಎನ್ನುವ ಹೆಸರಿನಿಂದ ಆರಂಭವಾಗುವ ಪುಸ್ತಕ ಜೀವಿವಿಜ್ಞಾನವಷ್ಟೆ ಅಲ್ಲ, ಭೌತವಿಜ್ಞಾನ, ರಸಾಯನವಿಜ್ಞಾನ, ಅರ್ಥಶಾಸ್ತ್ರ, ಮಾನವಶಾಸ್ತ್ರ, ತತ್ವಶಾಸ್ತ್ರ ಮುಂತಾದ ವಿವಿಧ ಜ್ಞಾನ ಶಾಖೆಗಳನ್ನು ಪ್ರಭಾವಿಸಿದೆ. ಮಾನವನ ಯೋಚನೆಯ ದಿಕ್ಕನ್ನೇಬದಲಿಸಿದೆ. ಚಾರ್ಲ್ಸ್ ಡಾರ್ವಿನ್ನರ ಸಾಧನೆ ಇಷ್ಟಕ್ಕೇ ನಿಲ್ಲುವುದಿಲ್ಲ. ಅವರ ಬರೆಹಗಳು ಎಷ್ಟು ವೈಜ್ಞಾನಿಕವಾಗಿದ್ದುವೋ, ಅಷ್ಟೇ ಸ್ವಾರಸ್ಯಕರವೂ ಆಗಿದ್ದುವು. ಅವರು ಯುವಕರಾಗಿದ್ದಾಗ ಕೈಗೊಂಡ ಸಾಗರಯಾನದ ವೇಳೆ ಕೈಗೊಂಡ ಸಂಶೋಧನೆಗಳೇ ಅವರ ಚಿಂತನೆಗಳಿಗೆ ಮೂಲವಾಗಿದ್ದವು. ಎಚ್ಎಮ್ಎಸ್ ಬೀಗಲ್ ಎನ್ನುವ ಹಡಗಿನಲ್ಲಿ ಅವರು ಎರಡು ವರ್ಷಗಳ ಕಾಲ ಪ್ರಪಂಚದ ವಿವಿಧೆಡೆಗೆ ಪಯಣಿಸಿದ್ದರು. 1831ರ ಡಿಸೆಂಬರ್ 27ರಂದು ಆರಂಭವಾದ ಈ ಚಾರಿತ್ರಿಕ ಪಯಣದ ಪ್ರಮುಖ ವಿವರಗಳನ್ನು ಅವರು ಒಂದು ದಿನಚರಿಯಲ್ಲಿ ದಾಖಲಿಸಿ, ಅದನ್ನೇ “ದಿ ಜರ್ನಲ್ ಆಫ್ ರಿಸರ್ಚಸ್ ಇನ್ ಟು ದಿ ನ್ಯಾಚುರಲ್ ಹಿಸ್ಟರಿ ಅಂಡ್ ಜಿಯಾಲಜಿ ಆಫ್ ಪ್ಲೇಸಸ್ ವಿಸಿಟೆಡ್ ಡ್ಯೂರಿಂಗ್ ದಿ ವಾಯೇಜ್ ಅರೌಂಡ್ ದಿ ವರ್ಲ್ಡ್ ಆಫ್ ಹೆಚ್ ಎಮ್ ಎಸ್ ಬೀಗಲ್” ಎಂಬ ಪುಸ್ತಕವನ್ನಾಗಿ 1872ರಲ್ಲಿ  ಪ್ರಕಟಿಸಿದ್ದರು. ಈ ಪುಸ್ತಕ ಡಾರ್ವಿನ್ನರ ನೋಟ ಎಷ್ಟು ಸೂಕ್ಷ್ಮವಾಗಿತ್ತೆಂಬುದನ್ನು ಪರಿಚಯಿಸುತ್ತದೆ. ಜೊತೆಗೇ ಅಂದಿನ ಕಾಲದ ಪರಿಸರ ಹಾಗೂ ಆ ಬಗ್ಗೆ ನಮಗಿದ್ದ ತಿಳುವಳಿಕೆಯ ಅರಿವನ್ನೂ, ಅಂದಿನ ಬದುಕಿನ ಸುಂದರ ಚಿತ್ರಣವನ್ನೂ ನೀಡುತ್ತದೆ.  ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ನಿಮಗಾಗಿ ಇಲ್ಲಿ ಕಥೆ ಹೇಳುತ್ತಿದ್ದೇವೆ. ಇದೋ ಇಲ್ಲಿದೆ ಮೊದಲ ದಿನದ ಪಯಣ.

ಭಾರಿಯಾಗಿ ಬೀಸಿದ ನೈಋತ್ಯ ಮಾರುತಗಳಿಂದಾಗಿ ಎರಡು ಬಾರಿ ಹಿಮ್ಮೆಟ್ಟಿದ ಬೀಗಲ್ ಹಡಗು ಕೊನೆಗೂ ಡೇವನ್ ಪೋರ್ಟಿನಿಂದ ಹೊರಟಿತು. ಹತ್ತು ಫಿರಂಗಿಗಳಿದ್ದ ಆ ಕೂವೆ ಹಡಗು ಕಪ್ತಾನ ಫಿಟ್ಜ್ ರಾಯನ ನೇತೃತ್ವದಲ್ಲಿ ಡಿಸೆಂಬರ್ 27, 1831ರಂದು ಪ್ರಯಾಣ ಆರಂಭಿಸಿತು. ಕಪ್ತಾನ ಕಿಂಗರ ನೇತೃತ್ವದಲ್ಲಿ ಆರಂಭವಾಗಿದ್ದ ಪಟಗೋನಿಯ ಹಾಗೂ ಟಿಯೆರ್ರಾ ಡೆ ಫ್ಯೂಗೊದ ಸರ್ವೇಕ್ಷಣೆಗಳನ್ನು ಮುಗಿಸುವುದು, ಚಿಲಿ, ಪೆರು ಹಾಗೂ ಶಾಂತಿಸಾಗರದ ಕೆಲವು ದ್ವೀಪಗಳ ಕರಾವಳಿಗಳ ಸರ್ವೆ ಹಾಗೂ ಪ್ರಪಂಚದ ಹಲವೆಡೆ ಕಾಲಮಾನವನ್ನು ಅಳೆಯುವುದು ಈ ಅನ್ವೇಷಣೆಯ ಉದ್ದೇಶವಾಗಿತ್ತು. ಜನವರಿ 6 ರಂದು ನಾವು ಟೆನೆರಿಫೆ ತಲುಪಿದೆವು. ಆದರೆ ನಾವು ಕಾಲರಾ ತಂದು ಬಿಡುತ್ತೇವೆಂಬ ಭಯದಿಂದ ಅಂದೇ ತೀರಕ್ಕೆ ಇಳಿಯಲಿಲ್ಲ. ಮರುದಿನ ಬೆಳಗ್ಗೆ ದೂರದಲ್ಲಿ  ಅಂಕುಡೊಂಕಾಗಿದ್ದ ಗ್ರಾಂಡ್ ಕ್ಯಾನರಿ ದ್ವೀಪಗಳ ಬೆನ್ನ ಹಿಂದಿನಿಂದ ಉದಯಿಸಿದ ಸೂರ್ಯ ತಟಕ್ಕನೆ ಟೆನೆರಿಫೆಯ ಶಿಖರವನ್ನು ಬೆಳಗುವುದನ್ನು ಕಂಡೆವು. ಶಿಖರದ ಕೆಳಗೆಲ್ಲ ಮೋಡಗಳು ಹಿಂಜಿದ ಉಣ್ಣೆಯಂತೆ ಕವಿದಿದ್ದುವು.

ನಾವು ಮರೆಯಲಾಗದಂತಹ ದಿನಗಳಲ್ಲಿ ಇದು ಮೊದಲನೆಯದು. ಜನವರಿ 18, 1832ರಂದು ನಾವು ಸೇಂಟ್ ಜಾಗೋ ದ್ವೀಪದ ಪ್ರಾಯಾ ಬಂದರಿನಲ್ಲಿ ಲಂಗರು ಹಾಕಿದೆವು.   ಪ್ರಸ್ಥಭೂಮಿಯ ಭೂಶಿರ ಡೆ ವರ್ಡಿಯಲ್ಲಿನ ಪ್ರಮುಖ ದ್ವೀಪ ಸೇಂಟ್ ಜಾಗೋದಲ್ಲಿನ ಬಂದರು ಅದು.

ಕಡಲಿನಿಂದ ನೋಡಿದಾಗ ಪ್ರಾಯಾ ಬಂದರಿನ ಪರಿಸರವೆಲ್ಲವೂ ಬರಡೆನ್ನಿಸುತ್ತದೆ. ಹಿಂದೆ ಸುರಿದ ಜ್ವಾಲಾಮುಖಿಯ ಬೆಂಕಿ ಹಾಗೂ ಉಷ್ಣವಲಯದ ಸೂರ್ಯನ ಸುಡು ಬಿಸಿಲಿನಿಂದಾಗಿ ಬಹುತೇಕ ಸ್ಥಳಗಳಲ್ಲಿನ ನೆಲದಲ್ಲಿ ಹಸಿರು ಬೆಳೆಯದಂತಾಗಿದೆ. ಪ್ರಸ್ಥಭೂಮಿಯಿಂದ ಹಂತ ಹಂತವಾಗಿ ನೆಲ ಎತ್ತರವಾಗುತ್ತದೆ. ಅಲ್ಲಲ್ಲಿ ಚೂಪಾದ ಗೋಪುರಗಳಂತಹ ಬೆಟ್ಟಗಳಿವೆ. ಕ್ಷಿತಿಜದಗುಂಟವೂ ಎತ್ತರದ ಪರ್ವತಮಾಲೆ ವಕ್ರರೇಖೆಗಳನ್ನು ಎಳೆದಿದೆ. ಸದಾ ಮಬ್ಬಾಗಿರುವ ಅಲ್ಲಿನ ಹವೆಯಲ್ಲಿ ಇದು ಬಲು ಕೌತುಕಮಯವಾದ ದೃಶ್ಯವಾಗಿ ತೋರುತ್ತದೆ. ಆಗಷ್ಟೆ ಕಡಲಿನಿಂದ ಇಳಿದು ಪ್ರಪ್ರಥಮ ಬಾರಿಗೆ ತೆಂಗಿನ ತೋಪಿನೊಳಗೆ ಕಾಲಿಡುವ ಯಾವನಿಗೂ ಖುಷಿಯಾಗದೇ ಇರದು. ಆ ದ್ವೀಪ ಸಾಧಾರಣವೆನ್ನಿಸಿದರೂ, ಕೇವಲ ಇಂಗ್ಲೆಂಡಿನ ನೆಲವನ್ನಷ್ಟೆ ನೋಡಿದ್ದವರಿಗೆ ಹಸಿರು ತುಂಬಿದ ನಾಡಿಗಿಂತಲೂ ಬಣಗುಡುವ ಈ ಬರಡೂ ಹೊಸತೆನ್ನಿಸುವುದರಲ್ಲಿ ಅಚ್ಚರಿಯೇನಲ್ಲ. ಆ ಲಾವಾಶಿಲೆಗಳ ಬಯಲಿನಲ್ಲಿ ದೂರ ದೂರದವರೆಗೆ ಒಂದೇ ಒಂದು ಹಸಿರೆಲೆಯೂ ಗೋಚರಿಸದು. ಆದರೂ ಕೆಲವು ಹಸುಗಳ ಜೊತೆಗೆ ಆಡುಗಳ ಹಿಂಡುಗಳು ಅಲ್ಲಿ ಬದುಕು ಕಟ್ಟಿಕೊಂಡಿವೆ. ಮಳೆ ಅಪರೂಪ. ಆದರೆ ಬಲು ಅಲ್ಪ ಕಾಲ ಮಳೆ ಭಾರಿಯಾಗಿ ಸುರಿಯುತ್ತದೆ. ಮಳೆ ಸುರಿದ ತಕ್ಷಣದಲ್ಲಿಯೇ ಅಲ್ಲಿರುವ ಎಲ್ಲ ಸಂದುಗೊಂದುಗಳಿಂದಲೂ ಹಸಿರು ಚಿಗುರೊಡೆಯುತ್ತದೆ. ಬಲು ಶೀಘ್ರವೇ ಒಣಗಿ ಹುಲ್ಲಾಗಿ ಬಿಡುವ ಇದೇ ಆ ಪ್ರಾಣಿಗಳ ಬದುಕಿಗೆ ಜೀವಾಳ. ಕಳೆದೊಂದು ವರ್ಷದಿಂದಲೂ ಇಲ್ಲಿ ಮಳೆಯಾಗಿಲ್ಲ. ಈ ದ್ವೀಪವು ಪತ್ತೆಯಾದ ಮೊದಲಲ್ಲಿ ಪ್ರಾಯಾ ಬಂದರಿನ ನೆರೆಹೊರೆಯಲ್ಲೆಲ್ಲ ಮರಗಳ ಹೊದಿಕೆ ಇತ್ತಂತೆ. ವಿವೇಚನೆಯಿಲ್ಲದೆ ಮರಗಳನ್ನು ನಾಶಮಾಡಿದ್ದು ಇಲ್ಲಿ, ಸೇಂಟ್ ಹೆಲೆನಾ ಹಾಗೂ ಕೆಲವು ಕೆನರಿ ದ್ವೀಪಗಳನ್ನು ಹೆಚ್ಚೂಕಡಿಮೆ ಬರಡಾಗಿಸಿದೆ.

ಮಳೆಗಾಲದ ಕೆಲವು ದಿನಗಳಲ್ಲಿ ಮಾತ್ರ ನೀರು ಹರಿಯುವ ಸಪಾಟಾದ ವಿಶಾಲ ಕಣಿವೆಯಲ್ಲಿ ಅಲ್ಲಲ್ಲಿ ಎಲೆಗಳೇ ಇಲ್ಲದ ಕುರುಚಲು ಪೊದೆಗಳನ್ನು ಕಾಣಬಹುದು. ಕೆಲವೇ ಜೀವಗಳು ಈ ಕಣಿವೆಯಲ್ಲಿ ವಾಸಿಸುತ್ತವೆ. ಇಲ್ಲಿ ಸಾಮಾನ್ಯವಾಗಿ ಕಾಣಬರುವ ಪಕ್ಷಿ ಎಂದರೆ ಡಾಸೆಲೋ ಇಯಾಗೊಯೆನ್ಸಿಸ್ ಎನ್ನುವ ಮಿಂಚುಳ್ಳಿ. ಹರಳು ಬೀಜದ ಗಿಡಗಳ ಮೇಲೆ ಕುಳಿತಿರುವ ಇದು ಮಿಡತೆಗಳನ್ನೋ, ಹಲ್ಲಿಗಳನ್ನೋ ಹಿಡಿಯಲು ಚಿಮ್ಮುವುದನ್ನು ನೋಡಬಹುದು. ಗಾಢ ಬಣ್ಣವಿದ್ದರೂ ಇದು ಯುರೋಪಿನ ಮಿಂಚುಳ್ಳಿಗಳಷ್ಟು ಸುಂದರವೇನಲ್ಲ. ಅದರ ಹಾರಾಟ ಹಾಗೂ ಒಣ ಪ್ರದೇಶದಲ್ಲಿರುವ ಅದರ ವಾಸನೆಲೆಯಲ್ಲಿಯೂ ಅದು ಯುರೋಪಿನವುಗಳಿಗಿಂತ ಸಾಕಷ್ಟು ಭಿನ್ನ.

ಮುಂದಿನ ಸಂಚಿಕೆಯಲ್ಲಿ | ದ್ವೀಪ ನಡುವೆ ಕಂಡ ಎರಡು ಗ್ರಾಮಗಳೂ ಅಲ್ಲಿನ ಶ್ರೀಮಂತ ಬದುಕು