ಬೀಗಲ್ ಯಾನ 2 | ದ್ವೀಪ ನಡುವೆ ಕಂಡ ಎರಡು ಗ್ರಾಮಗಳೂ ಅಲ್ಲಿನ ಶ್ರೀಮಂತ ಬದುಕು

1831ರ ಡಿಸೆಂಬರ್‌ನಲ್ಲಿ ಪಾಲಿಮೌತ್‌ನಿಂದ ಹೊರಟ ಬೀಗಲ್‌ ಹಡಗು ಪ್ರಸಿದ್ಧ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಅವರ ಕುತೂಹಲವನ್ನು ಹೊತ್ತೊಯ್ಯುತ್ತಿತ್ತು. ಎರಡು ವರ್ಷಗಳ ಪಯಣವೆಂದು ಆರಂಭವಾದ ಈ ಸಾಹಸಯಾನ ಐದು ವರ್ಷಗಳ ಕಾಲ ಸಾಗಿತು. ಪುಸ್ತಕವಾಗಿಯೂ ಪ್ರಕಟವಾಯಿತು. ಹಿರಿಯ ಲೇಖಕ ಕೊಳ್ಳೆಗಾಲ ಶರ್ಮ ಅವರು ಈ  ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಎರಡನೆಯ ಕಂತು ಇಲ್ಲಿದೆ.

ಒಂದು ದಿನ ನಾನು ಮತ್ತು ಇನ್ನಿಬ್ಬರು ಅಧಿಕಾರಿಗಳು ಪ್ರಾಯಾ ಬಂದರಿನ ಪೂರ್ವಕ್ಕೆ ಕೆಲವು ಮೈಲುಗಳಷ್ಟು ದೂರದಲ್ಲಿದ್ದ ರಿಬಿಯೆರಾ ಗ್ರಾಂಡಿ ಎನ್ನುವ ಗ್ರಾಮಕ್ಕೆ ತೆರಳಿದೆವು. ಸೈಂಟ್ ಮಾರ್ಟಿನ್ನನ ಕಣಿವೆಯವರೆಗೂ ಆ ಪ್ರದೇಶವೆಲ್ಲವೂ ತೆಳು ಕಂದು ಬಣ್ಣದ್ದಾಗಿ ತೋರುತ್ತಿತ್ತು. ಆದರೆ ಅಲ್ಲಿದ್ದ ಸಣ್ಣ ತೊರೆಯಿಂದಾಗಿ ಕಣಿವೆಯಲ್ಲಿ ದಟ್ಟವಾದ ಗಿಡಮರಗಳ ಹಸಿರಿತ್ತು. ಒಂದೇ ಗಂಟೆಯೊಳಗೆ ನಾವು ರಿಬಿಯೆರಾ ಗ್ರಾಂಡೆ ತಲುಪಿಯಾಗಿತ್ತು. ಅಲ್ಲಿದ್ದ ಪಾಳು ಬಿದ್ದ ಕೋಟೆ ಹಾಗೂ ಚರ್ಚೊಂದನ್ನು ನೋಡಿ ಬೆರಗಾದೆವು. ಬಂದರು ಪೂರ್ತಿ ಹೂಳು ತುಂಬಿಕೊಳ್ಳುವ ಮುನ್ನ ಈ ಪುಟ್ಟ ಗ್ರಾಮವೇ ದ್ವೀಪದ ಪ್ರಮುಖ ಸ್ಥಾನವಾಗಿತ್ತು. ಈಗ ಅದು ವಿಷಣ್ಣತೆ ತೋರುವ ಸುಂದರ ಚಿತ್ರದಂತಿತ್ತು. ಅಲ್ಲಿಯ ಕರಿಯ ಪಾದ್ರಿಯೊಬ್ಬನನ್ನು ಮಾರ್ಗದರ್ಶಿಯಾಗಿಯೂ, ಆ ಹಿಂದಿನ ಯುದ್ಧದಲ್ಲಿ ಪಾಲ್ಗೊಂಡಿದ್ದ ಸ್ಪೈನಿನವನೊಬ್ಬನನ್ನು ಅನುವಾದಕನನ್ನಾಗಿಯೂ ಇಟ್ಟುಕೊಂಡು ಅಲ್ಲಿದ್ದ ವಿವಿಧ ಕಟ್ಟಡಗಳಿಗೆ ಭೇಟಿ ನೀಡಿದೆವು.

ನಾವುಗಳು ಭೇಟಿ ನೀಡಿದ ಸ್ಥಾನಗಳಲ್ಲಿ ಪುರಾತನವಾದ ಚರ್ಚೊಂದು ಪ್ರಧಾನವಾಗಿತ್ತು. ಆ ದ್ವೀಪವನ್ನು ಆಳಿದ ಗವರ್ನರುಗಳು ಹಾಗೂ ಕಪ್ತಾನರನ್ನು ಆ ಚರ್ಚಿನಲ್ಲಿಯೇ ದಫನು ಮಾಡಲಾಗಿತ್ತು. ಅಲ್ಲಿದ್ದ ಕೆಲವು ಗೋರಿಗಳು ಹದಿನಾರನೆ ಶತಮಾನಕ್ಕೆ ಸೇರಿದ್ದುವು. ಅಂದ ಹಾಗೆ ಕೇಪ್ ಡೆ ವರ್ಡೆ ದ್ವೀಪಗಳನ್ನು 1449ರಲ್ಲಿ ಪತ್ತೆ ಮಾಡಲಾಯಿತು. ಹೀಗಾಗಿ 1571ರ ದಿನಾಂಕವಿದ್ದ ಬಿಷಪ್ಪರ ಗೋರಿಯೊಂದು ಅಲ್ಲಿತ್ತು. ಹಾಗೆಯೇ 1497 ಇಸವಿ ಎಂದು ಕೆತ್ತಿದ್ದ ಕತ್ತಿಯ ಹಿಡಿಯೂ ಅಲ್ಲಿತ್ತು. ಯುರೋಪಿನ ನೆನಪು ತರುವಂತಹ ವಸ್ತುಗಳೆಂದರೆ ಅಲ್ಲಿ ನೆಲೆಯಿದ್ದ ರಾಜದೂತರ ಆಭರಣಗಳಷ್ಟೆ. ಮೈದಾನದ ಒಂದು ಬದಿಗೆ ಚರ್ಚು ಇತ್ತು. ಚರ್ಚಿನ ನಡುವಿನಲ್ಲಿ ದೊಡ್ಡ ಬಾಳೆಯ ತೋಪೊಂದು ಬೆಳೆದಿತ್ತು. ಇನ್ನೊಂದು ಬದಿಯಲ್ಲಿ ಇದ್ದ ಆಸ್ಪತ್ರೆಯಲ್ಲಿ ಹತ್ತು-ಹನ್ನೆರಡು ದೀನ ರೋಗಿಗಳಿದ್ದರು.

ರಾತ್ರಿ ಊಟಕ್ಕೆ ನಾವು ವೇಂಡಾಗೆ ಮರಳಿದೆವು. ಅಲ್ಲಿ ನಮ್ಮನ್ನು ನೋಡಲು ಅಚ್ಚ ಗಪ್ಪು ಬಣ್ಣದ ಗಂಡಸರು, ಹೆಂಗಸರು ಹಾಗೂ ಮಕ್ಕಳ ದೊಡ್ಡ ಜನಸಂದಣಿಯೇ ನೆರೆದಿತ್ತು. ಅವರೆಲ್ಲ ಬಲು ಖುಷಿಯಾಗಿದ್ದಂತಿತ್ತು. ನಾವೇನು ಹೇಳಿದರೂ, ಮಾಡಿದರೂ ಎಲ್ಲದಕ್ಕೂ ಉತ್ತರವಾಗಿ ಎಲ್ಲರೂ ನಗುತ್ತಿದ್ದರು. ಪಟ್ಟಣವನ್ನು ಬಿಡುವ ಮೊದಲು ನಾವು ಅಲ್ಲಿನ ಚರ್ಚಿಗೆ ಭೇಟಿ ನೀಡಿದೆವು. ಸಣ್ಣ ಚರ್ಚಿನಷ್ಟು ಇದು ಶ್ರೀಮಂತವಾಗಿರಲಿಲ್ಲ. ತಾಳಮೇಳವಿಲ್ಲದೆ ಅರಚುತ್ತಿದ್ದ ವಾದ್ಯವಷ್ಟೆ ಅಲ್ಲಿತ್ತು. ಆ ಕರಿಯ ಪಾದ್ರಿಗೆ ನಾವು ಕೆಲವು ಶಿಲ್ಲಿಂಗುಗಳನ್ನು ನೀಡಿದೆವು. ಸ್ಪೈನಿನವನೋ ಅವನ ತಲೆಯನ್ನು ತಟ್ಟಿ, ಅವನು ಕರಿಯನೆಂದು ನಮಗೆ ಅನಿಸಲೇ ಇಲ್ಲವೆಂದ. ಅನಂತರ ನಮ್ಮ ಕುದುರೆಗಳು ಎಷ್ಟೂ ವೇಗವಾಗಿ ಸಾಗಬಲ್ಲುದೋ ಅಷ್ಟೂ ಶೀಘ್ರವಾಗಿ ಅಲ್ಲಿಂದ ಪ್ರಾಯಾ ಬಂದರಿಗೆ ಮರಳಿದೆವು.

ಮತ್ತೊಂದು ದಿನ ನಮ್ಮ ಸವಾರಿ ದ್ವೀಪದ ನಟ್ಟ ನಡುವೆ ಇದ್ದ ಸೇಂಟ್ ಡೊಮಿಂಗೊ ಗ್ರಾಮಕ್ಕೆ ಹೋಯಿತು. ಜಾಲಿಮುಳ್ಳಿನ ಹಲವು ಪುಟ್ಟ ಪುಟ್ಟ ಗಿಡಗಳಿದ್ದ ಸಣ್ಣ ಮೈದಾನವನ್ನು ದಾಟಿ ನಡೆದೆವು. ಸದಾ ಬೀಸುತ್ತಿದ್ದ ಗಾಳಿಯು ಅವುಗಳ ತಲೆಯನ್ನು ಬಾಗಿಸಿತ್ತು. ಕೆಲವಂತೂ ನೆಲವನ್ನೇ ಮುಟ್ಟುವಂತೆ ಬಾಗಿದ್ದುವು. ಅವುಗಳೆಲ್ಲವೂ ಉತ್ತರ-ಈಶಾನ್ಯ ಮುಖಿಯಾಗಿಯೂ, ದಕ್ಷಿಣ-ನೈಋತ್ಯ ಮುಖಿಯಾಗಿಯೂ ಬಾಗಿದ್ದುವು ಇದ್ದುವು. ಅಂದರೆ ಇದು ಅಲ್ಲಿ ಸಹಜವಾಗಿ ಬೀಸುತ್ತಿದ್ದ ಬಲವಾದ ವಾಣಿಜ್ಯ ಮಾರುತಗಳ ದಿಕ್ಕನ್ನು ಸೂಚಿಸುತ್ತಿದ್ದುವಷ್ಟೆ. ಅಲ್ಲಿ ಪಯಣಿಗರು ನಡೆದಾಡಿದ ಗುರುತು ಒಂದಿಷ್ಟೂ ಕಾಣದಿದ್ದರಿಂದ ನಾವು ಹಾದಿ ತಪ್ಪಿ ಫ್ಯುಂಟೆಸಿಗೆ ಹೋದೆವು. ಇದು ನಮಗೆ ಅಲ್ಲಿಗೆ ತಲುಪಿದ ಮೇಲಷ್ಟೆ ಅರಿವಾಗಿದ್ದು. ಆದರೆ ಹೀಗೆ ದಾರಿ ತಪ್ಪಿದ್ದೂ ಒಳ್ಳೆಯದೇ ಆಯಿತು. ಫ್ಯೂಂಟೀಸು ಒಂದು ಸುಂದರ ಹಳ್ಳಿ. ಅಲ್ಲೊಂದು ಪುಟ್ಟ ತೊರೆಯೂ ಇತ್ತು. ಅಲ್ಲಿನ ನಿವಾಸಿಗಳ ಹೊರತಾಗಿ ಉಳಿದೆಲ್ಲವೂ ಶ್ರೀಮಂತವಾಗಿತ್ತು. ಸಂಪೂರ್ಣ ಬೆತ್ತಲಾಗಿ, ಕಪ್ಪಗೆ ಒಣಕಲಾಗಿದ್ದ ಮಕ್ಕಳು ತಮಗಿಂತಲೂ ಇಮ್ಮಡಿ ದೊಡ್ಡದಾದ ಸೌದೆಯ ಹೊರೆ ಹೊತ್ತು ನಡೆದಿದ್ದರು.

ಫ್ಯೂಂಟಿಸಿನ ಬಳಿ ನಾವು ಗಿನೀ ಕೋಳಿಗಳ ದೊಡ್ಡ ಹಿಂಡೊಂದನ್ನು ಕಂಡೆವು. ಹಿಂಡಿನಲ್ಲಿ ಐವತ್ತು ಅರವತ್ತು ಕೋಳಿಗಳಿದ್ದುವು. ಅವು ಎಷ್ಟು ಚುರುಕಾಗಿದ್ದುವೆಂದರೆ ನಮಗೆ ಹತ್ತಿರ ಹೋಗಿ ನೋಡಲು ಆಗಲೇ ಇಲ್ಲ. ಸೆಪ್ಟೆಂಬರಿನ ಮಳೆಗಾಲದಲ್ಲಿ ಪಾರ್ಟರಿಜ್ ಹಕ್ಕಿಗಳು ಮಾಡುವಂತೆ ತಲೆ ಕೊಂಕಿಸಿಕೊಂಡು ನಮ್ಮಿಂದ ತಪ್ಪಿಸಿಕೊಂಡು ಬಿಡುತ್ತಿದ್ದುವು.. ಅಟ್ಟಿಸಿಕೊಂಡು ಹೋದರೆ ಹಾರಿ ಹೋಗುತ್ತಿದ್ದುವು.

ಸೈಂಟ್ ಡೊಮಿಂಗೋದ ನೋಟ ಮತ್ತು ಸೌಂದರ್ಯ ಅಚ್ಚರಿಗೊಳಿಸುವಷ್ಟು ಭಿನ್ನವಾಗಿತ್ತು. ದ್ವೀಪದ ಉಳಿದ ಭಾಗದಲ್ಲಿದ್ದ ವಿಷಾದದ ಛಾಯೆ ಇಲ್ಲಿರಲಿಲ್ಲ. ಕಡಿದಾದ, ಚೂಪು-ಚೂಪಾದ ಲಾವಾ ಪದರ ಶಿಲೆಗಳಿದ್ದ ಕಣಿವೆಯ ತಳದಲ್ಲಿ ಈ ಹಳ್ಳಿ ಇದೆ. ಅಲ್ಲಿ ಹರಿಯುತ್ತಿದ್ದ ಕಿರುತೊರೆಯ ದಂಟೆಗುಂಟ ಆವರಿಸಿದ್ದ ಮಿರುಗುವ ಹಸಿರು, ಅದನ್ನು ಸುತ್ತುವರಿದ ಕಪ್ಪು ಲಾವಾಶಿಲೆಗಳಿಂದಾಗಿ ಎದ್ದು ಕಾಣುತ್ತಿತ್ತು. ನಾವು ಹೋದ ದಿನ ಯಾವುದೋ ಹಬ್ಬ. ಊರೆಲ್ಲ ಜನ ಜಂಗುಳಿ. ಅಲ್ಲಿಂದ ಮರಳುವಾಗ ನಾವು ಒಂದಿಪ್ಪತ್ತು ಕಪ್ಪು ಹುಡುಗಿಯರ ತಂಡವನ್ನು ಹಾದು ಮುನ್ನಡೆದೆವು. ಅವರೆಲ್ಲರೂ ಬಲು ಸೊಗಸಾಗಿ ದಿರಿಸು ಉಟ್ಟಿದ್ದರು. ಅಚ್ಚಕಪ್ಪು ದೇಹದ ಮೇಲೆ ಮಂಜಿನಂತಹ ಬಿಳುಪಿನ ಉಡುಪು, ಜೊತೆಗೆ ಬಣ್ಣ-ಬಣ್ಣದ ಪೇಟ ಮತ್ತು ದೊಡ್ಡ ಶಾಲುಗಳು. ನಾವು ಸಮೀಪಿಸುತ್ತಿದ್ದಂತೆಯೇ ಅವರೆಲ್ಲರೂ ನಮ್ಮತ್ತ ತಿರುಗಿ ರಸ್ತೆಯುದ್ದಕ್ಕೂ ಶಾಲನ್ನು ಹಾಸಿ, ತೊಡೆ ತಟ್ಟುತ್ತಾ ಹಾಡೊಂದನ್ನು ಉತ್ಸಾಹದಿಂದ ಹಾಡಿದರು. ನಾವು ಅವರತ್ತ ಕೆಲವು ವಿಂಟೆಮ್ಮು (ಪೋರ್ತುಗಲ್ಲರ ಕಾಸು) ಎಸೆದೆವು. ನಗುತ್ತ, ಕಿರುಚಾಡುತ್ತ ಅದನ್ನು ಅವರು ಹೆಕ್ಕಿಕೊಂಡರು. ನಾವು ಅಲ್ಲಿಂದ ಹೊರಟಾಗ ಅವರ ಹಾಡು-ಕೂಗಾಟ ಇಮ್ಮಡಿಯಾಗಿತ್ತು.

ಮುಂದಿನ ಸಂಚಿಕೆಯಲ್ಲಿ | ಧೂಳಿನಲ್ಲಿ ಕಂಡ ಜೀವಿಗಳ ಅಂಶ!