ಬೀಗಲ್ ಯಾನ 3 | ಧೂಳಿನ ಪುಟ್ಟ ಪೊಟ್ಟಣಗಳಲ್ಲಿ ಸಿಕ್ಕ ಜೀವಿರೂಪಗಳು!

1831ರ ಡಿಸೆಂಬರ್‌ನಲ್ಲಿ ಪಾಲಿಮೌತ್‌ನಿಂದ ಹೊರಟ ಬೀಗಲ್‌ ಹಡಗು ಪ್ರಸಿದ್ಧ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಅವರ ಕುತೂಹಲವನ್ನು ಹೊತ್ತೊಯ್ಯುತ್ತಿತ್ತು. ಎರಡು ವರ್ಷಗಳ ಪಯಣವೆಂದು ಆರಂಭವಾದ ಈ ಸಾಹಸಯಾನ ಐದು ವರ್ಷಗಳ ಕಾಲ ಸಾಗಿತು. ಪುಸ್ತಕವಾಗಿಯೂ ಪ್ರಕಟವಾಯಿತು. ಹಿರಿಯ ಲೇಖಕ ಕೊಳ್ಳೆಗಾಲ ಶರ್ಮ ಅವರು ಈ  ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಸ್ತುತಿ ಶ್ರೀಮತಿ ಭಾರತಿ  ಮೂರನೆಯ ಕಂತು ಇಲ್ಲಿದೆ

ಆ ಬೆಳಗ್ಗೆ ನೋಟ ಬಲು ನಿಚ್ಚಳವಾಗಿತ್ತು. ದೂರದಲ್ಲಿದ್ದ ಪರ್ವತಗಳ ಅಂಚುಗಳೆಲ್ಲವೂ ಅಚ್ಚ ನೀಲಿ ಬಣ್ಣದ ಮೋಡಗಳ ದಡದಲ್ಲಿ ಬರೆದ ರೇಖೆಗಳಂತೆ ಸುಸ್ಪಷ್ಟವಾಗಿ ಕಾಣುತ್ತಿದ್ದುವು. ಇಂಗ್ಲೆಂಡು ಹಾಗೂ ಇನ್ನಿತರ ಕಡೆಗಳಲ್ಲಿನ ಅನುಭವಗಳ ಆಧಾರದ ಮೇಲೆ ಗಾಳಿ ತೇವಾಂಶದಿಂದ ಆರ್ದ್ರವಾಗಿರಬೇಕು ಎಂದು ತರ್ಕಿಸಿದೆ. ಆದರೆ ವಾಸ್ತವ ಬೇರೆಯದೇ ಆಗಿತ್ತು. ವಾತಾವರಣದ ಉಷ್ಣತೆ ಹಾಗೂ ನೀರು ಹನಿಗಟ್ಟುವ ಉಷ್ಣತೆಯ ನಡುವೆ 29.6 ಡಿಗ್ರೀಗಳ ವ್ಯತ್ಯಾಸವಿದೆ ಎಂದು ಆರ್ದ್ರತಾ ಮಾಪಕ ಸೂಚಿಸಿತು. ಇದು ಹೆಚ್ಚೂ ಕಡಿಮೆ ಅದಕ್ಕೂ ಮುಂಚಿನ ದಿನಗಳಲ್ಲಿ ನಾನು ಕಂಡಿದ್ದ ವ್ಯತ್ಯಾಸದ ದುಪ್ಪಟ್ಟು ಇತ್ತು. ವಾತಾವರಣದ ಈ ಶುಷ್ಕತೆಯ ಜೊತೆಗೆ ಎಡೆಬಿಡದೆ ಮಿಂಚು ಕೂಡ ಕೋರೈಸುತ್ತಿತ್ತು. ಇಂತಹ ಹವಾಗುಣವಿರುವ ಸಂದರ್ಭಗಳಲ್ಲಿ ಎಲ್ಲವೂ ನಿಚ್ಚಳವಾಗಿರುವುದು ತುಸು ಅಪರೂಪ, ಅಲ್ಲವೇ?

ಸಾಮಾನ್ಯವಾಗಿ ಇಲ್ಲಿನ ವಾತಾವರಣ ಮಬ್ಬು ಮಸುಕಾಗಿಯೇ ಇರುತ್ತದೆ. ಅತಿ ಸಣ್ಣ ದೂಳು ತುಂಬಿಕೊಂಡು ಹೀಗಾಗುತ್ತಿತ್ತು. ಇದು ಖಗೋಳ ವೀಕ್ಷಣೆಯ ಸಾಧನಗಳನ್ನೂ ಹಾಳುಗೆಡವಿತ್ತು. ಪ್ರಾಯಾ ಬಂದರಿನಲ್ಲಿ ಲಂಗರು ಹಾಕುವ ಮುನ್ನಾದಿನ ಬೆಳಗ್ಗೆ ನಾನು ಒಂದಿಷ್ಟು ನಯವಾದ ಕಂದು ಬಣ್ಣದ ದೂಳನ್ನು ಸಂಗ್ರಹಿಸಿದ್ದೆ. ಕೂವೆಗೆ ಕಟ್ಟಿದ್ದ ಹಾಯಿಬಟ್ಟೆಯ ಮೂಲಕ ಗಾಳಿ ಇದನ್ನು ಸೋಸಿದ ಹಾಗೆ ತೋರುತ್ತಿತ್ತು. ಈ ದ್ವೀಪಗಳ ಉತ್ತರಕ್ಕೆ ಸುಮಾರು ನಾಲ್ಕುನೂರು ಮೈಲಿಗಳ ದೂರದಲ್ಲಿ ಹಡಗಿನ ಮೇಲೆ ಬಿದ್ದ ದೂಳಿನ ನಾಲ್ಕು ಪೊಟ್ಟಣಗಳನ್ನು ಮಿ. ಲಯೆಲ್ ನನಗೆ ಕೊಟ್ಟಿದ್ದರು. ಪ್ರೊಫೆಸರ್ ಎಹ್ರೆನ್ ಬರ್ಗರಿಗೆ ಇದನ್ನು ಕಳಿಸಿದಾಗ ಆತ ಈ ದೂಳಿನಲ್ಲಿ ಹೆಚ್ಚಿನಂಶ ಸಿಲಿಕಾಭರಿತ ಹುರುಪೆಗಳು ಹಾಗೂ ಸಿಲಿಕಾಭರಿತ ಗಟ್ಟಿಯಾದ ಸಸ್ಯಗಳ ಅಂಗಾಂಶವಿವೆ ಎಂದು ಗುರುತಿಸಿದರು. ಈ ಐದು ಪುಟ್ಟ ಪೊಟ್ಟಣಗಳಲ್ಲಿ ಆತ ಏನಿಲ್ಲವೆಂದರೂ ಅರವತ್ತೇಳು ವಿಭಿನ್ನ ಜೀವಿರೂಪಗಳನ್ನು ಗುರುತಿಸಿದ್ದರು! ಇವುಗಳಲ್ಲಿ ಎರಡು ಸಮುದ್ರ ಜೀವಿಗಳು. ಉಳಿದೆಲ್ಲವೂ ಸಿಹಿನೀರಿನ ವಾಸಿಗಳವು.

ಅಟ್ಲಾಂಟಿಕ ಸಾಗರದ ಮಧ್ಯೆ, ತೀರದಿಂದ ಎಲ್ಲೋ ದೂರದಲ್ಲಿದ್ದಾಗಲೂ ಕನಿಷ್ಟ ಎಂದರೆ ಹದಿನೈದು ಜೀವಿಯಂಶಗಳಿರುವ ದೂಳು ಹಡಗಿನಲ್ಲಿ ಬಂದು ಬೀಳುವುದನ್ನು ನಾನು ಕಂಡಿದ್ದೇನೆ. ಈ ದೂಳು ಬಿದ್ದಾಗಲೆಲ್ಲ ಬೀಸುವ ಗಾಳಿಯ ದಿಕ್ಕು ಹಾಗೂ ವಾಯುಮಂಡಲದಲ್ಲಿ ಅತಿ ಎತ್ತರಕ್ಕೆ ದೂಳನ್ನು ಕೊಂಡೊಯ್ಯುವ ಹರ್ಮಟ್ಟನ್ ಬೀಸುವ ಕಾಲದಲ್ಲಿಯೇ ಈ ದೂಳು ಬಂದು ಬೀಳುವುದನ್ನೂ ಗಮನಿಸಿದರೆ ಇದು ಆಫ್ರಿಕಾದಿಂದಲೇ ಬರುತ್ತದೆ ಎಂದು ನಾವು ತಿಳಿಯಬಹುದು. ಹರ್ಮಟ್ಟನ್ ನಮ್ಮ ಮುಂಗಾರಿನಂತೆಯೇ ಆಫ್ರಿಕಾದ ಸಹಾರದಲ್ಲಿ ನಿಯತವಾದ ಋತುಗಳಲ್ಲಿ ಬೀಸುವ ಒಂದು ಮಾರುತ. ಆದರೆ ಆಫ್ರಿಕಾಗಷ್ಟೆ ಸೀಮಿತವಾದ ಹಲವು ವಿಶಿಷ್ಟ ಜೀವಿಯಂಶಗಳ ಅರಿವು ಇರುವ ಪ್ರೊಫೆಸರಿಗೆ ಈ ದೂಳಿನಲ್ಲಿ ಅವು ಯಾವುವೂ ಸಿಗಲಿಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ. ಆತನಿಗೆ ಗೊತ್ತಿದ್ದ ಹಾಗೂ ದಕ್ಷಿಣ ಅಮೆರಿಕೆಯಲ್ಲಿ ಜೀವಿಸುವ ಎರಡು ಜೀವಿಗಳ ಅಂಶಗಳು ಮಾತ್ರವೆ ಅವರಿಗೆ ಕಂಡಿವೆ.

ಹಡಗಿನಲ್ಲಿರುವ ಎಲ್ಲವನ್ನೂ ಮುಸುಕುವಷ್ಟು ಭಾರೀ ಪ್ರಮಾಣದಲ್ಲಿ ಈ ದೂಳು ಬೀಳುತ್ತದೆ. ಇದು ಕಣ್ಣುಗಳನ್ನೂ ಉರಿಸುವುದುಂಟು. ಕೆಲವೊಮ್ಮೆ ಇದು ಎಷ್ಟು ದಟ್ಟವಾಗಿರುತ್ತದೆಂದರೆ ಹಡಗುಗಳು ದಾರಿಕಾಣದೆ ತೀರಕ್ಕೆ ಬಂದು ಬಡಿದುದೂ ಉಂಟು. ಹಡಗುಗಳು ಆಫ್ರಿಕಾದಿಂದ ನೂರಾರಲ್ಲ, ಸಾವಿರ ಮೈಲುಗಳಿಗಿಂತ ದೂರದಲ್ಲಿದ್ದಾಗಲೂ ಉತ್ತರ-ದಕ್ಷಿಣವಾಗಿ ಸುಮಾರು 1600 ಮೈಲಿ ದೂರದಲ್ಲಿದ್ದಾಗಲೂ ಈ ದೂಳು ಬಂದು ಬಿದ್ದುದುಂಟು. ಒಮ್ಮೆ ಹಡಗು ತೀರದಿಂದ ಮುನ್ನೂರ ಮೈಲಿ ದೂರದಲ್ಲಿದ್ದಾಗ ಬಂದು ಬಿದ್ದ ದೂಳನ್ನು ಹೆಕ್ಕಿದಾಗ ಅದರಲ್ಲಿ ಅಂಗುಲದ ಸಾವಿರದೊಂದಂಶಕ್ಕಿಂತಲೂ ದೊಡ್ಡ ಗಾತ್ರದ ಕಲ್ಲುಗಳು ಅತಿ ನಯವಾದ ದೂಳಿನಲ್ಲಿ ಬೆರೆತಿರುವುದನ್ನು ಕಂಡು ನಾನು ಬೆರಗಾಗಿದ್ದೂ ಉಂಟು. ಇಷ್ಟು ಹೇಳಿದ ಮೇಲೆ ಇದಕ್ಕಿಂತಲೂ ಸಣ್ಣಗಿನ ಹಾಗೂ ಹಗುರವಾಗಿರುವ ಸಸ್ಯಗಳ ಗುಪ್ತಬೀಜಗಳನ್ನು ದೂಳಿನಲ್ಲಿ ಇರುವುದು ಅಚ್ಚರಿಯ ವಿಷಯವಲ್ಲ. ಅಲ್ಲವೇ?

ಈ ದ್ವೀಪದ ಭೂಲಕ್ಷಣಗಳು ಅದರ ಪ್ರಾಕೃತಿಕ ಚರಿತ್ರೆಯ ಬಲು ಕೌತುಕಮಯವಾದ ಅಂಶವಾಗಿವೆ. ಬಂದರನ್ನು ಪ್ರವೇಶಿಸುತ್ತಿದ್ದಂತೆ ಎದುರಿಗೆ ಇರುವ ಕಡಿದಾದ ಬಂಡೆಯ ಮುಖದಲ್ಲಿ, ತೀರದ ಉ,ದ್ದಕ್ಕೂ ಹಲವು ಮೈಲಿಗಳ ದೂರದವರೆಗೆ ಬಿಳಿಯದೊಂದು ಗೆರೆಯನ್ನು ಕಾಣಬಹುದು. ಈ ಗೆರೆಯು ನೀರಿನ ಮೇಲೆ ಸುಮಾರು ನಲವತ್ತೈದು ಅಡಿ ಎತ್ತರದಲ್ಲಿ ಅಡ್ಡವಾಗಿ ಸಾಗಿರುವುದು. ಬಳಿ ಸಾರಿ. ಪರೀಕ್ಷಿಸಿದಾಗ ಈ ಬಿಳಿಯ ಪದರದಲ್ಲಿ ಹಲವಾರು ಕಪ್ಪೆಚಿಪ್ಪುಗಳು ಹುದುಗಿದ ಸುಣ್ಣದ ವಸ್ತು ಇರುವುದನ್ನು ಕಾಣಬಹುದು. ಈ ಚಿಪ್ಪುಗಳ ಜೀವಿಗಳಲ್ಲಿ ಬಹುತೇಕವನ್ನು ಈಗಲೂ ನೆರೆಯ ಸಮುದ್ರ ತೀರದಲ್ಲಿ ಹೆಕ್ಕಬಹುದು. ಇದು ಹಳೆಯ ಜ್ವಾಲಾಮುಖಿಯ ದಿಕ್ಕಿಗೆ ಮುಖಮಾಡಿಕೊಂಡಿದೆ.