ಬೀಗಲ್ ಯಾನ 4 | ವಿಸ್ಮಯದ ಸೇಂಟ್‌ ಪಾಲ್‌ ದ್ವೀಪದಲ್ಲಿ ಸಿಕ್ಕ ಮುತ್ತುಗಳು, ಕಂಡ ಹಕ್ಕಿಗಳು

1831ರ ಡಿಸೆಂಬರ್‌ನಲ್ಲಿ ಪಾಲಿಮೌತ್‌ನಿಂದ ಹೊರಟ ಬೀಗಲ್‌ ಹಡಗು ಪ್ರಸಿದ್ಧ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಅವರ ಕುತೂಹಲವನ್ನು ಹೊತ್ತೊಯ್ಯುತ್ತಿತ್ತು. ಎರಡು ವರ್ಷಗಳ ಪಯಣವೆಂದು ಆರಂಭವಾದ ಈ ಸಾಹಸಯಾನ ಐದು ವರ್ಷಗಳ ಕಾಲ ಸಾಗಿತು. ಡಾರ್ವಿನ್‌ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತಂದರು. ಈ ಅನುಭವಗಳನ್ನು ಹಿರಿಯ ಲೇಖಕ ಕೊಳ್ಳೆಗಾಲ ಶರ್ಮ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಸ್ತುತಿ ಶ್ರೀಮತಿ ಭಾರತಿ. ನಾಲ್ಕನೆಯ ಕಂತು ಇಲ್ಲಿದೆ

ಈ ಕಟಲ್ ಮೀನೋ ತಳದಲ್ಲಿ ಶಿಲೆಯಂತಿರುವಾಗಲೂ, ಈಜುವಾಗಲೂ ಗೋಸುಂಬೆಯಂತೆ ಬಣ್ಣ ಬದಲಿಸುತ್ತಿತ್ತು. ತಪ್ಪಿಸಿಕೊಳ್ಳಲು ಅದು ಬಳಸಿದ ಒಂದು ಯುಕ್ತಿ ನನಗೆ ಬಲು ಮೋಜೆನ್ನಿಸಿತು. ನಾನು ಅದನ್ನು ಗಮನಿಸುತ್ತಿದ್ದೇನೆಂಬುದರ ಅರಿವು ಅದಕ್ಕೆ ಇತ್ತೇನೋ? ಸ್ವಲ್ಪ ಸಮಯ ಕದಲದೆ ನಿಂತಿರುತ್ತಿದ್ದ ಅದು ಮೆಲ್ಲನೆ ಇಲಿಯ ಹಿಂದೆ ಹೋದ ಬೆಕ್ಕಿನ ಹಾಗೆ ಕಳ್ಳತನದಿಂದ ಒಂದೆರಡು ಅಂಗುಲ ಮುಂದೆ ಸರಿಯುತ್ತಿತ್ತು. ಕೆಲವೊಮ್ಮೆ ಬಣ್ಣವನ್ನೂ ಬದಲಿಸುತ್ತಿತ್ತು. ಹೀಗೆ ಸ್ವಲ್ಪ ಆಳದ ನೀರಿರುವ ಜಾಗೆಯವರೆಗೂ ಸಾಗಿದ ಅದು ತಟಕ್ಕನೆ ಸುಯ್ಯೆಂದು ಸಾಗಿ ತನ್ನ ಬಿಲದೊಳಗೆ ನುಸುಳುತ್ತಿತ್ತು. ಹಾದಿಯುದ್ದಕ್ಕೂ ಅದು ಕಪ್ಪನೆಯ ಶಾಯಿಯನ್ನು ಸುರಿದು ಬಿಲದ ಬಾಯಿಯನ್ನು ಮರೆಮಾಚಿ ಬಿಡುತ್ತಿತ್ತು.

ಇಂತಹ ಕಡಲಜೀವಿಗಳಿಗಾಗಿ ಹುಡುಕಾಡುತ್ತಿದ್ದಾಗ ನಾನು ನನ್ನ ತಲೆಯನ್ನು ಕಲ್ಲುತುಂಬಿದ ಆ ತೀರದಿಂದ ಒಂದೆರಡು ಅಡಿ ಮೇಲಿಟ್ಟುಕೊಂಡಿರುತ್ತಿದ್ದೆ. ಅಷ್ಟೆ.  ಹಲವಾರು ಬಾರಿ ನನಗೆ ಈ ಕರಿ ನೀರಿನ ಚಿಲುಮೆಯ ಸಲಾಮು ಕೂಡ ಸಿಕ್ಕಿತ್ತು. ಅದರ ಜೊತೆಗೆ ಗುರುಗುಟ್ಟುವ ಶಾಪವೂ. ಮೊದಮೊದಲು ಅದೇನಿರಬಹುದೆಂದು ನನಗೆ ತಿಳಿಯಲಿಲ್ಲ. ಆಮೇಲೆ ಅದು ಕಲ್ಲಿನ ಪೊಟರೆಯೊಳಗೆ ಅವಿತಿದ್ದ ಈ ಕಟಲ್ ಮೀನಿನ ಕರಾಮತ್ತು ಎಂದು ತಿಳಿಯಿತು.  ಇದರಿಂದಾಗಿ ಅದು ಬಚ್ಚಿಟ್ಟುಕೊಂಡಿದ್ದರೂ ನಾನು ಅದನ್ನು ಹುಡುಕಿ ಬಿಡುತ್ತಿದ್ದೆ. ಅದು ನೀರನ್ನು ಚಿಲುಮೆಯಂತೆ ಚಿಮ್ಮುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.  ದೇಹದ ತಳದಲ್ಲಿರುವ ಕೊಳವೆಯನ್ನು ಮೇಲೆ ಮಾಡಿ ಅದು ಗುರಿಯಿಟ್ಟು ನೀರನ್ನು ಚಿಮ್ಮುತ್ತದೆ ಎಂದು ನನಗೆ ತೋರಿತು. ಅವುಗಳಿಗೆ ತಮ್ಮ ತಲೆಯನ್ನೆತ್ತಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ಸಪಾಟಾದ ನೆಲದ ಮೇಲೆ ಇಟ್ಟಾಗ ಇವು ಮೆಲ್ಲನೆ ತೆವಳಬಹುದಾಗಿತ್ತು ಅಷ್ಟೆ. ನನ್ನ ಕ್ಯಾಬಿನ್ನಿನಲ್ಲಿ ನಾನು ತಂದಿಟ್ಟುಕೊಂಡಿದ್ದ ಒಂದು ಜೀವಿ ರಾತ್ರಿ ತುಸು ಮಿನುಗುತ್ತಿದ್ದುದನ್ನು ಕಂಡಿದ್ದೆ.

ಸೈಂಟ್ ಪಾಲ್ ಕಲ್ಲುಗಳು: ಫೆಬ್ರವರಿ 16, 1832ರಂದು ನಾವು ಅಟ್ಲಾಂಟಿಕ್ ಸಾಗರವನ್ನು ದಾಟಿದೆವು. ದಾಟುವಾಗ ಸೈಂಟ್ ಪಾಲ್  ದ್ವೀಪಗಳಿಗೆ ಬಲು ಸಮೀಪದಿಂದಲೇ ಹೋದೆವು. ಇದೊಂದು ಕಲ್ಲುಗಳ ರಾಶಿ. ಈ ಕಲ್ಲುಗಳ ರಾಶಿಯು ಸೊನ್ನೆ ಡಿಗ್ರಿ ಐವತ್ತೆಂಟು ಮಿನಿಟುಗಳು ಉತ್ತರ ಅಕ್ಷಾಂಶ ಹಾಗೂ ಇಪ್ಪತ್ತೊಂಭತ್ತು ಡಿಗ್ರಿ ಹದಿನೈದು ಮಿನಿಟುಗಳ ಪಶ್ಚಿಮ ರೇಖಾಂಶದಲ್ಲಿದೆ.  ಅಮೆರಿಕೆಯ ತೀರದಿಂದ ಸುಮಾರು 540 ಮೈಲಿಗಳಷ್ಟು ಹಾಗೂ  ಫರ್ನಾಂಡೊ ನೊರೊನ್ಹಾ ದ್ವೀಪದಿಂದ ಸುಮಾರು 350 ಮೈಲಿ ದೂರದಲ್ಲಿದೆ. ಅದರ ಅತಿ ಎತ್ತರದ ಸ್ಥಾನವು ಸಮುದ್ರ ಮಟ್ಟದಿಂದ ಕೇವಲ 50 ಅಡಿ ಮೇಲಿದೆ ಅಷ್ಟೆ.  ಇಡೀ ದ್ವೀಪದ ಸುತ್ತಳತೆ ಸುಮಾರು ಮುಕ್ಕಾಲು ಮೈಲಿ ಇರಬಹುದು. ಸಮುದ್ರದಲ್ಲಿ ಸಾಗುವಾಗ ಈ ಪುಟ್ಟ ಬಿಂದುವಿನಂತಹ ದ್ವೀಪವು  ತಟಕ್ಕನೆ ಎದುರಾಗುತ್ತದೆ. ಅದು ಪುಟ್ಟ ದ್ವೀಪವಿರಬಹುದು. ಆದರೆ ಅದರ ಖನಿಜ ಸ್ವರೂಪ ಸರಳವಾದದ್ದೇನಲ್ಲ.

ದ್ವೀಪದ ಕೆಲವು ಭಾಗದಲ್ಲಿ ಚೆರ್ಟಿ ಇದೆ. ಇನ್ನು ಕೆಲವು ಭಾಗಗಳಲ್ಲಿ  ಹಾವಿನಂತಹ ಗೆರೆಗಳಿರುವ ಪೆಲ್ಡ್ ಸ್ಪಾರ್  ಇದೆ. ಶಾಂತಸಾಗರ, ಅಟ್ಲಾಂಟಿಕ ಹಾಗೂ ಹಿಂದೂ ಮಹಾಸಾಗರದಲ್ಲಿ ಕರಾವಳಿಯಿಂದ ದೂರದಲ್ಲಿರುವ ಎಲ್ಲ ದ್ವೀಪಗಳೂ, ಒಂದೋ ಹವಳದಿಂದ ಆದ ದ್ವೀಪಗಳು ಅಥವಾ ಜ್ವಾಲಾಮುಖಿಯಿಂದ ಸಿಡಿದ ಶಿಲೆಗಳಿಂದ ಆದವುಗಳು. ಇದಕ್ಕೆ ಅಪವಾದವೆಂದರೆ ಸೀಶೆಲ್ಸ್ ದ್ವೀಪಗಳು ಹಾಗೂ ಈ ದ್ವೀಪ. ಈ ಸಾಗರದ್ವೀಪಗಳ ಸ್ವರೂಪ ಜ್ವಾಲಾಮುಖಿಯಿಂದ ದ್ವೀಪಗಳು ಹೇಗೆ ನಿರ್ಮಾಣವಾಗುತ್ತವೆ ಎನ್ನುವ ನಿಯಮದ ವಿಸ್ತರಣೆಯಷ್ಟೆ. ಇಂದು ಚಟುವಟಿಕೆಯಿಂದಿರುವ ಬಹುತೇಕ ಜ್ವಾಲಾಮುಖಿಗಳು ರೂಪುಗೊಳ್ಳುವುದಕ್ಕೆ ಭೌತಿಕವೋ, ರಾಸಾಯನಿಕವೋ, ಯಾವುದೇ ಕಾರಣವಿರಲಿ, ಒಟ್ಟಾರೆ ಅವು ಒಂದೋ ಕರಾವಳಿಗೆ ಸಮೀಪದಲ್ಲಿ ಇರುತ್ತವೆ. ಇಲ್ಲವೇ ಸಮುದ್ರ ಮಧ್ಯದಲ್ಲಿ ದ್ವೀಪಗಳಾಗಿರುತ್ತವೆ.

ದೂರದಿಂದ ನೋಡಿದಾಗ ಸೈಂಟ್ ಪಾಲಿನ ಕಲ್ಲುಗಳು ಬೆಳ್ಳಗೆ ಹೊಳೆಯುತ್ತವೆ. ಇದು ಸ್ವಲ್ಪ ಮಟ್ಟಿಗೆ ಅವುಗಳನ್ನು ಆವರಿಸಿರುವ ಕಡಲಕೋಳಿಗಳ ಹಿಕ್ಕೆಯಿಂದಾಗಿಯೂ, ಸ್ವಲ್ಪ ಮಟ್ಟಿಗೆ ಆ ಕಲ್ಲುಗಳ ಮೇಲ್ಮೈಯನ್ನು ಅಂಟಿಕೊಂಡಿರುವ ಮುತ್ತಿನಂತೆ  ಗಟ್ಟಿಯಾದ ಹಾಗೂ ನಯವಾದ ಹೊಳಪಿನ ವಸ್ತುವಿನಿಂದಾಗಿಯೂ ಹೀಗೆ ತೋರುತ್ತವೆ. ಭೂತಗನ್ನಡಿಯಿಂದ ಗಮನಿಸಿದರೆ ಈ ಶಿಲಾಪದರದಲ್ಲಿ ಬಲು ತೆಳುವಾದ ಹಲವು ಪದರಗಳು ಇರುವುದು ತೋರುತ್ತದೆ. ಇಡೀ ಪದರದ ಒಟ್ಟಾರೆ ದಪ್ಪ ಅಂಗುಲದ ಹತ್ತನೆಯ ಒಂದಂಶವಾಗಬಹುದು. ಅದರಲ್ಲಿ ಹೆಚ್ಚಾಗಿ ಇರುವುದು ಜೀವಿಗಳ ಅಂಶವೇ. ಹಕ್ಕಿಗಳ ಹಿಕ್ಕೆಯ ಮೇಲೆ ಸುರಿದ ಮಳೆ ಇಲ್ಲವೇ ಸಾಗರದ ಉಪ್ಪು ನೀರಿನ ಕ್ರಿಯೆಯೇ ಈ ಪದರದ ಮೂಲ ಎನ್ನುವುದು ನಿಸ್ಸಂದೇಹ. ಅಸೆಂಶನ್ ಹಾಗೂ ಅಬ್ರೊಲೋಸ್ ನಡುಗಡ್ಡೆಗಳಲ್ಲಿ ಅಲ್ಲಲ್ಲಿ ಗುಪ್ಪೆಯಾಗಿ ಕರೆಗಟ್ಟಿದ ಹಿಕ್ಕೆ ಸಿಗುತ್ತವೆ. ಇವನ್ನು ಗ್ವಾನೊ ಎಂದು ಕರೆಯುವರು. ಇವುಗಳ ಬುಡದಲ್ಲಿ ಶಾಖೆಯೊಡೆದ ಸುಣ್ಣಗಲ್ಲಿನಂತಹ ರಚನೆಗಳು ಇದ್ದುವು. ಇವು ಕೂಡ ಆ ಕಲ್ಲುಗಳ ಮೇಲಿದ್ದ ಬಿಳಿಯ ಪದರದಂತೆಯೇ ರೂಪುಗೊಂಡಿರಬೇಕು. ಹೀಗೆ ಶಾಖೆಯೊಡೆದ ರಚನೆಗಳು ನೋಡಲು ಸುಣ್ಣದಂಶವಿರುವ ಗಟ್ಟಿ ದೇಹದ ಸಾಗರಸಸ್ಯಗಳನ್ನು ಹೋಲುತ್ತಿದ್ದುವು.  ಇವುಗಳನ್ನು ಆತುರದಲ್ಲಿ ಗಮನಿಸಿದ ನನಗೆ ಅಷ್ಟೇನೂ ವ್ಯತ್ಯಾಸ ಗೊತ್ತಾಗಲಿಲ್ಲ. ಶಾಖೆಗಳ ತುದಿಯಲ್ಲಿದ್ದ ಗುಬುಟುಗಳು ಮುತ್ತಿನಂತೆಯೇ ನಯವಾಗಿ, ಹಲ್ಲಿನ ಮೇಲಿರುವ ಎನಾಮೆಲ್ಲಿನಂತೆ ಇದ್ದುವು. ಇವನ್ನು ಗೀರುವುದು ಗಾಜಿನ ಹಾಳೆಯನ್ನು ಗೀರುವಷ್ಟೆ ಕಠಿಣವಾಗಿತ್ತು. 

ಅಸೆಂಶನ್ನಿನ ಕರಾವಳಿಯ ಒಂದು ಭಾಗದಲ್ಲಿ, ಮರಳನ್ನು ಕಪ್ಪೆಚಿಪ್ಪುಗಳು ಪೂರ್ತಿ ಆವರಿಸಿಕೊಂಡಿರುವ ಜಾಗವಿದೆ. ಅಲ್ಲಿನ ತೀರದ ಕಲ್ಲುಗಳ ಮೇಲೆ  ಸಮುದ್ರದ ನೀರು ಗಟ್ಟಿಯಾದ ಪದರವೊಂದನ್ನು ರಚಿಸಿರುವುದನ್ನು ಕಾಣಬಹುದು. ಇವು ತೇವವಾದ ಗೋಡೆಯ ಮೇಲೆ ಕಾಣಬರುವ ಮಾರ್ಕಾಂಶಿಯದಂತಹ ಕ್ರಿಪ್ಟೋಗ್ಯಾಮಿ  ಅಂದರೆ ಗುಪ್ತಜೀವಿ ಸಸ್ಯಗಳಂತೆ ತೋರುತ್ತಿದ್ದುವು. ಇವುಗಳ ಎಲೆಗಳ ಮೈ ನುಣುಪಾಗಿ ಹೊಳೆಯುತ್ತ ಸುಂದರವಾಗಿತ್ತು. ಬೆಳಕಿಗೆ ಪೂರ್ತಿ ತೆರೆದುಕೊಂಡೆಡೆ ರೂಪುಗೊಂಡ ಮೈಭಾಗಗಳು ಕಡುಗಪ್ಪು ಬಣ್ಣವಾಗಿದ್ದುವು. ಆದರೆ ಕಲ್ಲಿನ ನೆರಳಲ್ಲಿದ್ದಂತಹವು ಬೂದು ಬಣ್ಣವಾಗಿದ್ದುವು. ಶಿಲೆಯೊಳಗೆ ಈ ರೀತಿಯಲ್ಲಿ ಹೂತುಕೊಂಡುವುಗಳಲ್ಲಿ  ಕೆಲವನ್ನು ಭೂವಿಜ್ಞಾನಿಗಳಿಗೆ ತೋರಿಸಿದ್ದೇನೆ.  ಅವರಲ್ಲಿ ಇವು ಜ್ವಾಲಾಮುಖಿಗಳ ಕ್ರಿಯೆಯಿಂದಲೋ, ಅಥವಾ ಅಗ್ನಿಶಿಲೆಗಳಿಂದಲೋ ಆಗಿರಬೇಕು ಎಂದವರೇ ಹೆಚ್ಚು. ಗಡಸುತನದಲ್ಲಿ ಹಾಗೂ ಅರೆಪಾರದರ್ಶಕತೆಯಲ್ಲಿ ಇದು ಅತ್ಯುತ್ತಮವಾದ ಓಲಿವಾ ಜೀವಿಯ ಚಿಪ್ಪಿಗೆ ಸಮವಾಗಿತ್ತು. ಈ ಆದರೆ ಅದರ ವಾಸನೆ, ಮತ್ತು ಏನಾದರೂ ತಗುಲಿದಾಗ ಬಣ್ಣಗಳೆದುಕೊಳ್ಳುವ ಗುಣಗಳಿಂದಾಗಿ ಅದು ಜೀವಂತವಾದ ಮುತ್ತಿನ ಚಿಪ್ಪಿಗೆ ನಿಕಟವಾಗಿತ್ತು. ಮುತ್ತಿನ ಚಿಪ್ಪುಗಳ ಕೆಲವು ಭಾಗಗಳ ಮೇಲೆ ಮ್ಯಾಂಟಲ್ ಎನ್ನುವ ಮಾಂಸಲ ಪದರದ ಹೊದಿಕೆ ಇರುತ್ತದೆ ಎನ್ನುವುದು ತಿಳಿದ ವಿಷಯ. ಇಲ್ಲಿ ಶಿಲೆಯೊಳಗೆ ಅಡಕವಾಗಿರುವ ವಸ್ತುವಿನಂತೆಯೇ, ಸಾಮಾನ್ಯವಾಗಿ ಮ್ಯಾಂಟಲ್ಲಿನಿಂದ ಮುಚ್ಚಿರುವ ಅಂಗಗಳ ಬಣ್ಣ ಬೆಳಕಿಗೆ ತೆರೆದುಕೊಂಡ ಭಾಗಗಳಿಗಿಂತಲೂ ತುಸು ಪೇಲವವಾಗಿರುತ್ತದೆ.  ಚಿಪ್ಪುಗಳು ಹಾಗೂ ಮೂಳೆಗಳಂತಹ ಗಟ್ಟಿಯಾದ ಅಂಗಗಳಲ್ಲಿರುವ ಸುಣ್ಣದಂಶವು ಫಾಸ್ಫೇಟು ಇಲ್ಲವೇ ಕಾರ್ಬೊನೇಟು ರೂಪದಲ್ಲಿ ಕೂಡುತ್ತದೆ ಎನ್ನುವುದನ್ನು ಗಮನಿಸಿ. ಅಂದ ಮೇಲೆ ಹಲ್ಲಿನ ಎನಾಮಲ್ಲಿಗಿಂತಲೂ ಗಟ್ಟಿಯಾದ, ಹೊಸದಾದ ಚಿಪ್ಪಿನಷ್ಟೇ ನಯ ಮತ್ತು ಬಣ್ಣವಿರುವ ಹಾಗೂ ಕೆಲವು ಕೆಳಸ್ತರದ ಸಸ್ಯಗಳನ್ನು ಹೋಲುವಂತಹ ಶಿಲೆಗಳ ಮೇಲ್ಮೈ ಮೇಲೆ ಇರುವ ಈ ರಚನೆ ಮೃತ ಸಾವಯವ ವಸ್ತುಗಳೇ ರಾಸಾಯನಿಕವಾಗಿ ಮರುರೂಪುಗೊಂಡಿರಬೇಕು. ಇದು ವಿಚಿತ್ರವೆನ್ನಿಸಿದರೂ ಸತ್ಯ.

ಸೈಂಟ್ ಪಾಲ್ ದ್ವೀಪದಲ್ಲಿ ನಾವು ಕಂಡದ್ದು ಎರಡು ಬಗೆಯ ಹಕ್ಕಿಗಳು – ಇವನ್ನು ಬೂಬಿ ಮತ್ತು ನಾಡಿ ಎಂದು ಕರೆದೆವು. ಬೂಬಿ ಎನ್ನುವುದು ಒಂದು ಬಗೆಯ ಕಡಲ ಬಾತು. ನಾಡಿ ಎನ್ನುವುದು ಕಡಲ ಟರ್ನ್ ಹಕ್ಕಿ. ಎರಡೂ ಸೌಮ್ಯ ಸ್ವಭಾವದ ಪೆದ್ದು ಹಕ್ಕಿಗಳು. ಅವು ಮನುಷ್ಯರನ್ನು ಎಷ್ಟರ ಮಟ್ಟಿಗೆ ಗುರುತಿಸುತ್ತವೆ ಎಂದರೆ ನಾನು ನನ್ನ ಕೈಯಲ್ಲಿದ್ದ ಚಾಣದಿಂದ ಎಷ್ಟನ್ನು ಬೇಕಾದರೂ ಕೊಲ್ಲಬಹುದಿತ್ತು. ಬೂಬಿ ಬರಿಗಲ್ಲಿನ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಟರ್ನ್ ಹಕ್ಕಿಯು ಸಾಗರ ಸಸ್ಯಗಳನ್ನು ಬಳಸಿಕೊಂಡು ಸರಳವಾದ ಗೂಡನ್ನು ಕಟ್ಟುತ್ತದೆ. ಇಂತಹ ಹಲವು ಗೂಡುಗಳ ಪಕ್ಕದಲ್ಲೇ ಒಂದು ಹಾರುವ ಮೀನು ಇರುತ್ತಿತ್ತು. ಬಹುಶಃ ಗಂಡು ಹಕ್ಕಿ ತನ್ನ ಸಂಗಾತಿಗೆಂದು ಅದನ್ನು ಅಲ್ಲಿ ತಂದಿಟ್ಟಿರಬೇಕು. ಅಲ್ಲಿರುವ ಪೊಟರೆಗಳೊಳಗೆ  ವಾಸಿಸುವ ದೊಡ್ಡದೊಂದು ಚುರುಕು ಏಡಿ ಆ ತಂದೆ-ತಾಯಿ ಹಕ್ಕಿಗಳ ಗಮನ ಸ್ವಲ್ಪ ಅತ್ತಿತ್ತ ಹರಿದ ಕೂಡಲೇ ಮೀನನ್ನು ಕದಿಯುತ್ತಿದ್ದುದು ತಮಾಷೆಯಾಗಿತ್ತು. ಇಲ್ಲಿಗೆ ಬಂದಿದ್ದ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರಾದ ಸರ್. ಡಬ್ಲ್ಯೂ ಸೈಮಂಡ್ಸ್ ಈ ಏಡಿಗಳು ಮರಿ ಹಕ್ಕಿಗಳನ್ನೂ ಗೂಡಿನಿಂದಾಚೆಗೆ ಎಳೆದುಕೊಂಡು ಹೋಗಿ ತಿನ್ನುವುದನ್ನು ನೋಡಿದ್ದಾಗಿ ಹೇಳಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.