ಬೀಗಲ್ ಯಾನ 5 | ಶಂಖುವಿನಾಕಾರದ 1000 ಅಡಿ ಎತ್ತರದ ಗುಡ್ಡಗಳ ಹಿಂದಿನ ರಹಸ್ಯವೇನು?

1831ರ ಡಿಸೆಂಬರ್‌ನಲ್ಲಿ ಪಾಲಿಮೌತ್‌ನಿಂದ ಹೊರಟ ಬೀಗಲ್‌ ಹಡಗು ಪ್ರಸಿದ್ಧ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಅವರ ಕುತೂಹಲವನ್ನು ಹೊತ್ತೊಯ್ಯುತ್ತಿತ್ತು. ಎರಡು ವರ್ಷಗಳ ಪಯಣವೆಂದು ಆರಂಭವಾದ ಈ ಸಾಹಸಯಾನ ಐದು ವರ್ಷಗಳ ಕಾಲ ಸಾಗಿತು. ಡಾರ್ವಿನ್‌ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತಂದರು. ಈ ಅನುಭವಗಳನ್ನು ಹಿರಿಯ ಲೇಖಕ ಕೊಳ್ಳೆಗಾಲ ಶರ್ಮ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಸ್ತುತಿ ಶ್ರೀಮತಿ ಭಾರತಿ. ಐದನೆಯ ಕಂತು ಇಲ್ಲಿದೆ

ಈ ದ್ವೀಪದ ಮೇಲೆ ಒಂದು ಗಿಡವೂ ಇಲ್ಲ. ಕಲ್ಲಿನ ಮೇಲೆ ಬೆಳೆಯುವ ಪಾಚಿಯೂ ಕಾಣೆ. ಆದರೂ ಹಲವು ಕೀಟಗಳನ್ನೂ, ಜೇಡಗಳನ್ನೂ ಇಲ್ಲಿ ಕಾಣಬಹುದು. ಇಲ್ಲಿನ ನೆಲವಾಸಿಗಳ ಪೂರ್ಣವಾದ ಪಟ್ಟಿ ಹೀಗಿದೆ. ಬೂಬಿ ಹಾಗೂ ಅದರ ಮೇಲೆ ಇರುವ ಓಲ್ಫರ್ಸಿಯಾ ಎನ್ನುವ ನೊಣ. ಈ ಹಕ್ಕಿಗಳ ಜೊತೆಗೇ ಪರಾವಲಂಬಿಯಾಗಿರುವ ಒಂದು ಚಿಗಟ; ಗರಿಗಳನ್ನು ತಿಂದು ಬದುಕುವ ಕಂದು ಬಣ್ಣದ ಒಂದು ಪತಂಗ, ಸಗಣಿಯ ಅಡಿಯಲ್ಲಿ ಬದುಕುವ ಕ್ವೀಡಿಯಸ್ ಎನ್ನುವ ದುಂಬಿ ಮತ್ತು ಒಂದು ಹೇನು ಹಾಗೂ ಬಹಳಷ್ಟು ಜೇಡಗಳು. ಈ ಜೇಡಗಳು ನೀರಹಕ್ಕಿಯನ್ನು ಶುಚಿಗೊಳಿಸುವ ಸಣ್ಣ ಪುಟ್ಟ ಕೀಟಗಳನ್ನು ತಿಂದು ಬದುಕುತ್ತಿರಬೇಕು ಎನ್ನುವುದು ನನ್ನ ಊಹೆ. ಉಷ್ಣವಲಯದಲ್ಲಿನ ಹವಳದ ದ್ವೀಪಗಳು ರೂಪುಗೊಂಡ ತಕ್ಷಣವೇ ಅವುಗಳಲ್ಲಿ ತೆಂಗಿನಂತಹ ಎತ್ತರದ ಗಿಡಗಳು ಹಾಗೂ ಇತರೆ ಸಸ್ಯಗಳು, ಹಕ್ಕಿಗಳು ಹಾಗೂ ಮನುಷ್ಯರು ನೆಲಸುವುವು ಎಂದು ನಾವು ಆಗಾಗ್ಗೆ ಕೇಳುವ ಕಥೆಗಳೆಲ್ಲವೂ ಬಹುಶಃ ಸರಿಯಲ್ಲ. ಹೊಸದಾಗಿ ರೂಪುಗೊಂಡ ದ್ವೀಪಗಳಲ್ಲಿ ಮೊದಲು ನೆಲೆಯಾಗುವಂಥವು ಗರಿ ಮತ್ತು ಇತರೆ ಕಸವನ್ನು ತಿನ್ನುವ, ಪರಾವಲಂಬಿಯಾದ ಕೀಟಗಳು ಹಾಗೂ ಜೇಡಗಳು ಇವು ಈ ಕಥೆಗಳ ರಮ್ಯತೆಯನ್ನು ಹಾಳುಗೆಡವಿಬಿಡುತ್ತವೆ.

ಉಷ್ಣವಲಯದ ಸಾಗರಗಳಲ್ಲಿರುವ ಅತಿ ಸಣ್ಣ ಕಲ್ಲೂ ಕೂಡ ಅಸಂಖ್ಯ ಸಮುದ್ರ ಸಸ್ಯಗಳಿಗೆ, ಪ್ರಾಣಿಗಳಿಗೆ ಆಸರೆಯಾಗಿ ತನ್ಮೂಲಕ ಬೃಹತ್ಪ್ರಮಾಣದ ಮೀನುಗಳಿಗೂ ಆಧಾರವಾಗುತ್ತದೆ. ಈ ಮೀನುಗಳಲ್ಲಿ ಹೆಚ್ಚಿನ ಪಾಲು ಯಾರಿಗೆ ಸಿಗಬೇಕು ಎನ್ನುವ ಸ್ಪರ್ಧೆ ಬೆಸ್ತರು ಹಾಗೂ ಶಾರ್ಕ್ ಮೀನುಗಳ ನಡುವೆ ನಿರಂತರವಾಗಿ ನಡೆಯುತ್ತಿರುತ್ತದೆ. ಬರ್ಮುಡಾದ ಬಳಿ ನೀರಿನಡಿಯಲ್ಲಿ ಒಂದು ನಡುಗಡ್ಡೆ ಇದೆ ಎಂದು ಪತ್ತೆಯಾಗಿದ್ದು ಅದರ ಸುತ್ತಲೂ ಸುತ್ತುತ್ತಿದ್ದ ಮೀನಿನ ಪ್ರಮಾಣದಿಂದಲೇ ಎಂದೂ ನಾನು ಕೇಳಿದ್ದೇನೆ.

ಫರ್ನಾಂಡೊ ನೊರೊನ್ಹಾ. ಫೆಬ್ರವರಿ 20

ನಾನು ನೊರೊನ್ಹಾದಲ್ಲಿ ಇದ್ದ ಕೆಲವು ಗಂಟೆಗಳ ಅವಧಿಯಲ್ಲಿ, ಹಾಗೂ ನನಗೆ ಸಿಕ್ಕ ಅವಕಾಶದಲ್ಲಿ ಈ ದ್ವೀಪದ ರಚನೆಯು ಜ್ವಾಲಾಮುಖಿಗಳಿಂದಾಗಿದೆ ಎಂದೂ, ಆದರೆ ಇತ್ತೀಚೆಗಲ್ಲ ಎನ್ನುವುದನ್ನು ಕಂಡುಕೊಂಡೆ. ದ್ವೀಪದ ಪ್ರಮುಖ ಲಕ್ಷಣವೆಂದರೆ ಶಂಖುವಿನಾಕಾರದ ಸುಮಾರು 1000 ಅಡಿ ಎತ್ತರದ ಗುಡ್ಡ. ಇದರ ಮೇಲುಭಾಗವು ಬಲು ಕಡಿದಾಗಿತ್ತಲ್ಲದೆ ಒಂದು ಬದಿಯಲ್ಲಿ ತಳದ ಮೇಲೆ ಚಾಚಿಕೊಂಡಂತಿತ್ತು. ಅಲ್ಲಿದ್ದ ಶಿಲೆ ಫೋನೋಲೈಟ್. ಅಸಮವಾದ ಕಂಭಗಳಾಗಿ ವಿಂಗಡಣೆಯಾಗಿತ್ತು. ಅಂತಹುದೊಂದನ್ನು ಪ್ರತ್ಯೇಕಿಸಿ ಗಮನಿಸಿದರೆ ಅದು ಅರೆದ್ರವಾಸ್ಥಿತಿಯಲ್ಲಿ ಮೇಲೆ ನುಗ್ಗಿ ಬಂದಿದ್ದಾಗಿ ಅನಿಸುವುದು.

ಆದರೆ ಸೈಂಟ್ ಹೆಲೆನಾದಲ್ಲಿದ್ದ ಇದೇ ಬಗೆಯ ರಚನೆ ಹಾಗೂ ಆಕಾರದ ಶಿಖರಗಳು ಹೀಗಿರಲಿಲ್ಲ. ಅವು ತಳಕ್ಕೆ ಕುಸಿಯುತ್ತಿದ್ದ ಕೆಸರಿನ ಪದರಗಳೇ ಅಚ್ಚುಗಳಾಗಿ, ಅದರಲ್ಲಿ ಸುರಿದ ಕರಗಿದ ಕಲ್ಲೇ ಹೀಗೆ ದೈತ್ಯ ಕೋಡುಗಲ್ಲುಗಳಾಗಿವೆಯೆಂದು ಖಚಿತ ಪಡಿಸಿಕೊಂಡಿದ್ದೆ. ಇಡೀ ದ್ವೀಪವೆ ಕಾಡಾಗಿತ್ತು. ಆದರೆ ಅಲ್ಲಿನ ಶುಷ್ಕ ವಾತಾವರಣದಿಂದಾಗಿ ಹಸಿರಿನ ಹಬ್ಬವೇನೂ ಇರಲಿಲ್ಲ. ಪರ್ವತವನ್ನು ಹತ್ತುವಾಗ ಹಾದಿಯಲ್ಲಿ ದೈತ್ಯ ಶಿಲಾಕಂಭಗಳ ನೆರಳಿನಲ್ಲಿ ಲಾರೆಲ್ ಗಿಡದಂತಹ ಮರಗಳು ಕೆಲವು ಕಾಣಿಸಿದುವು. ಇನ್ನು ಕೆಲವು ಶಿಲೆಗಳು, ರೋಜಾ ಬಣ್ಣದ ಹೂವುಗಳಷ್ಟೆ ಇದ್ದು, ಎಲೆಗಳೇ ಇಲ್ಲದ ಗಿಡಗಳನ್ನು ಹೊದ್ದು ಉಲ್ಲಾಸದಾಯಕವಾಗಿದ್ದುವು.
ಬಹಿಯಾ (ಸ್ಯಾನ್ ಸಾಲ್ವಡೋರ್).

ಬ್ರೆಜಿಲ್. ಫೆಬ್ರವರಿ 29

ಈ ದಿನ ಖುಷಿಯಿಂದ ಕಳೆಯಿತು. ಬ್ರೆಜಿಲ್ಲಿನ ಕಾಡಿನೊಳಗೆ ಮೊತ್ತಮೊದಲು ಕಾಲಿಟ್ಟ ಪ್ರಕೃತಿ ವಿಜ್ಞಾನಿಯ ಭಾವನೆಗಳನ್ನು ವ್ಯಕ್ತಪಡಿಸಲು ಖುಷಿ ಎನ್ನುವ ಪದ ಸಾಲದು. ಅಲ್ಲಿನ ಹುಲ್ಲುಗಾವಲಿನ ಗಾಂಭೀರ್ಯ, ಪರೋಪಜೀವಿ ಸಸ್ಯಗಳ ಹೊಸತನ, ಹೂವುಗಳ ಸೌಂದರ್ಯ, ಎಲೆಗಳ ಹೊಳೆಯುವ ಹಸಿರು ಹಾಗೂ ಎಲ್ಲದಕ್ಕಿಂತಲೂ ಮುಖ್ಯವಾಗಿ ಅಲ್ಲಿನ ಸಮೃದ್ಧ ಸಸ್ಯರಾಶಿ ನನ್ನನ್ನು ದಿಗ್ಮೂಢನನ್ನಾಗಿಸಿದವು. ಕಾಡಿನೊಳಗಂತೂ ಶಬ್ದ-ನಿಶ್ಶಬ್ದಗಳ ವೈರುಧ್ಯ ವ್ಯಾಪಿಸಿತ್ತು. ಅಲ್ಲಿನ ಕೀಟಗಳ ಸದ್ದು ಎಷ್ಟು ಜೋರಾಗಿತ್ತೆಂದರೆ ಅದು ತೀರದಿಂದ ಹಲವು ನೂರು ಗಜ ದೂರದಲ್ಲಿ ಲಂಗರು ಹಾಕಿದ್ದ ಹಡಗಿಗೂ ಕೇಳಿಸುವಂತಿತ್ತು. ಹಾಗಿದ್ದೂ ಕಾಡಿನ ಅಂತರಾಳದ ಎಲ್ಲೆಡೆ ಒಂದು ಬಗೆಯ ನಿಶ್ಶಬ್ದ ಆಳುತ್ತಿತ್ತು. ನಿಸರ್ಗದ ಪ್ರೇಮಿಗಳಿಗೆ ಇಂತಹ ದಿನವೊಂದು ಜೀವನದಲ್ಲಿ ಅವರು ಮತ್ತೆಂದೂ ಅನುಭವಿಸಲಾರದಂತಹ ಸಂತಸವನ್ನು ತರುತ್ತದೆ.

ಹಲವು ಗಂಟೆಗಳವರೆಗೆ ಅಲ್ಲಿ ಅಲೆದಾಡಿದ ಮೇಲೆ ನಾನು ಲಂಗರು ಹಾಕಿದ್ದೆಡೆಗೆ ಹಿಂದಿರುಗಿದೆ. ಆದರೆ ಅಲ್ಲಿ ತಲುಪುವುದಕ್ಕೂ ಸ್ವಲ್ಪ ಮುನ್ನ ಉಷ್ಣವಲಯದ ಚಂಡಮಾರುತವೊಂದರಲ್ಲಿ ಸಿಲುಕಿಕೊಂಡೆ. ಆಗ ಅಲ್ಲಿದ್ದ ದಪ್ಪನೆಯ ಮರವೊಂದರಡಿಯಲ್ಲಿ ಆಶ್ರಯ ಹುಡುಕಿದೆ. ಆ ಮರದ ಎಲೆಗಳು ಎಷ್ಟು ದಟ್ಟವಾಗಿತ್ತೆಂದರೆ ಇಂಗ್ಲೆಂಡಿನ ಮಳೆ ಅದನ್ನು ದಾಟಿ ಬರುವುದು ಸಾಧ್ಯವೇ ಇರಲಿಲ್ಲ. ಆದರಿಲ್ಲಿಯೋ ಒಂದೆರಡೇ ನಿಮಿಷಗಳಲ್ಲಿ ಸಣ್ಣ ತೊರೆಯೊಂದು ಮರದಿಂದ ಕೆಳಗೆ ಇಳಿಯತೊಡಗಿತು. ಅತಿ ಗಾಢವಾದ ಅರಣ್ಯದ ಬುಡದಲ್ಲಿದ್ದ ದಟ್ಟ ಹಸಿರಿಗೆ ಈ ಉಗ್ರ ಮಳೆಯೇ ಕಾರಣವೆನ್ನಬೇಕು. ಮಳೆಯೇನಾದರೂ ಶೀತ ಪ್ರದೇಶಗಳಲ್ಲಿ ಇದ್ದಂತೆ ಇದ್ದಿದ್ದರೆ ಬಹುಶಃ ಅದರ ಬಹುಪಾಲು ನೆಲ ತಲುಪುವ ಮುನ್ನವೇ ಒಂದೋ ಆವಿಯಾಗಿ ಬಿಡುತ್ತಿತ್ತು, ಇಲ್ಲವೇ ಇಂಗಿ ಹೋಗುತ್ತಿತ್ತು. ಈ ರಾಜಕಾನನದ ಢಾಳಾದ ಸೌಂದರ್ಯವನ್ನು ನಾನು ಈಗ ಬಣ್ಣಿಸುವುದಿಲ್ಲ. ಏಕೆಂದರೆ ನಾವು ಹಿಂತಿರುಗುವಾಗ ಇಲ್ಲಿಗೆ ಇನ್ನೊಮ್ಮೆ ಭೇಟಿ ನೀಡಿದ್ದೆವು. ಆ ಸಂದರ್ಭದಲ್ಲಿ ನಾನು ಇದರ ಬಗ್ಗೆ ಹೇಳುವೆ.

ಇದನ್ನೂ ಕೇಳಿ | ಬೀಗಲ್ ಯಾನ 4 | ವಿಸ್ಮಯದ ಸೇಂಟ್‌ ಪಾಲ್‌ ದ್ವೀಪದಲ್ಲಿ ಸಿಕ್ಕ ಮುತ್ತುಗಳು, ಕಂಡ ಹಕ್ಕಿಗಳು

ಬ್ರೆಜಿಲ್ಲಿನ ಕರಾವಳಿಯಲ್ಲಿ, ಕನಿಷ್ಟ 2000 ಮೈಲುಗಳುದ್ದಕ್ಕೂ ಹಾಗೂ ಖಂಡಿತವಾಗಿ ಒಳನಾಡಿನಲ್ಲಿ ಸಾಕಷ್ಟು ಜಾಗೆಯಲ್ಲಿ ಎಲ್ಲೆಲ್ಲೆಲ್ಲ ಗಟ್ಟಿಯಾದ ಶಿಲೆಗಳಿವೆಯೋ ಅವೆಲ್ಲವೂ ಗ್ರಾನೈಟು ಸ್ವರೂಪದವು. ಅತೀವ ಒತ್ತಡದಲ್ಲಿಯಷ್ಟೆ ಹರಳುಗಟ್ಟುತ್ತವೆಂದು ಭೂವಿಜ್ಞಾನಿಗಳು ಭಾವಿಸುವ ಈ ವಸ್ತುಗಳು ಇಷ್ಟೊಂದು ಬೃಹತ್ ಪ್ರದೇಶವನ್ನು ಆವರಿಸಿದೆಯೆನ್ನುವುದು ಹಲವು ಕುತೂಹಲದ ಪ್ರಶ್ನೆಗಳಿಗೆ ಎಡೆಗೊಡುತ್ತದೆ. ಇದು ಆಳವಾದ ಸಾಗರದ ಅಡಿಯಲ್ಲಿ ರೂಪುಗೊಂಡಿದ್ದೋ? ಅಥವಾ ಇದರ ಮೇಲೆ ಯಾವುದಾದರೂ ಪದರದ ಹೊದಿಕೆ ಇದ್ದದ್ದು ಈಗ ಕಾಣೆಯಾಗಿದೆಯೋ? ಅನಂತ ಕಾಲಾವಧಿಯಲ್ಲಿಯೂ ಇಷ್ಟು ಮೇಲಿನ ಹೊದಿಕೆಯನ್ನು ತೆಗೆದು ಸಹಸ್ರ ಲೀಗುಗಳಷ್ಟು ವಿಸ್ತಾರವಾದ ಶಿಲೆಯನ್ನು ಬಟಾಬಯಲಾಗಿಸುವಂತಹ ಶಕ್ತಿಯೊದು ಇದೆಯೆಂದು ನಂಬಲಾದೀತೇ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.