ಅಮೆರಿಕದ ಭೌತವಿಜ್ಞಾನಿ ನೀಡಿದ ಶಿಫಾರಸುಗಳು ಹನ್ನೆರಡು ದೇಶಗಳಲ್ಲಿ ಕರೋನಾ ಸೋಂಕು ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಿವೆ. ಯಾರು ಆ ವಿಜ್ಞಾನಿ? ಅವರ ಶಿಫಾರಸುಗಳೇನು?

ಯಾನೀರ್ ಬರ್‌ಯಾಮ್. ಹನ್ನೆರಡು ದೇಶಗಳಿಗೆ ದೇವರಂತೆ ಕಾಣಿಸುತ್ತಿದ್ದಾರೆ. ಅಮೆರಿಕದ ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್ ಸಿಸ್ಟಮ್ಸ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷರಾದ ಇವರು ದತ್ತಾಂಶಗಳನ್ನು ಆಧರಿಸಿ ಕರೋನಾ ವೈರಸ್ ನಿಯಂತ್ರಿಸುವುದಕ್ಕೆ ನೀಡಿದ ಶಿಫಾರಸುಗಳು ಅಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿವೆ.
ವಿಯಟ್ನಾಮ್, ಸೌತ್‌ಕೋರಿಯಾ, ನ್ಯೂಜಿಲ್ಯಾಂಡ್, ಥೈಲ್ಯಾಂಡ್, ಆಸ್ಟ್ರೇಲಿಯಾ, ನಾರ್ವೆ, ಆಸ್ಟ್ರಿಯಾ, ಗ್ರೀಸ್, ಜೋರ್ಡಾನ್, ಲಕ್ಸಂಬರ್ಗ್, ಸ್ಲೋವೇನಿಯಾ, ಐಸ್‌ಲ್ಯಾಂಡ್, ಸ್ಲೋವಾಕಿಯಾ, ಕ್ರೊಯೇಷಿಯಾ, ಲೆಬನಾನ್ ದೇಶಗಳಲ್ಲಿ ಯಾನೀರ್ ಅವರ ಸೂತ್ರಗಳನ್ನು ಅನುಸರಿಸಲಾಗಿತ್ತು.

ಯಾರು ಈ ಯಾನೀರ್ ಬರ್‌ಯಾಮ್?
ಅಮೆರಿಕದ ಪ್ರತಿಷ್ಠಿತ ಮಸಾಚುಸೆಟ್ ತಾಂತ್ರಿಕ ಸಂಸ್ಥೆಯಿಂದ ಪಿಎಚ್‌ಡಿ ಪದವಿ ಪಡೆದ ಇವರು ಬೋಸ್ಟನ್ ವಿವಿಯಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. 1997ರಲ್ಲಿ ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್ ಸಿಸ್ಟಮ್ಸ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕಾಂಪ್ಲೆಕ್ಸ್ ಸಿಸ್ಟಮ್ಸ್ ಎಂಬ ವಿಶಿಷ್ಟ ಅಧ್ಯಯನ ಕ್ರಮವನ್ನು ಪರಿಣಾಮಕಾರಿ ಬಳಸಿದ ಹೆಗ್ಗಳಿಕೆ ಇವರದ್ದು. ಇದನ್ನು ಇನ್ನಷ್ಟು ಔಪಚಾರಿಕ ಬಳಕೆಗೆ ಅನುವಾಗುವಂತೆ ರೂಪಿಸಲು ಶ್ರಮಿಸುತ್ತಿದ್ದಾರೆ. ನೇಚರ್, ಸೈನ್ಸ್ ಪಿಎನ್‌ಎಸ್, ಅಮೆರಿಕನ್ ನ್ಯಾಚ್ಯುರಲಿಸ್ಟ್ ಸೇರಿದಂತೆ ಪ್ರತಿಷ್ಠಿತ ವಿಜ್ಞಾನ ಪತ್ರಿಕೆಗಳಲ್ಲಿ ಇವರ 180ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.
ಏನವು ಸೂತ್ರಗಳು?
ಯಾನೀರ್ ಒಂಬತ್ತು ಸೂತ್ರಗಳನ್ನು ಶಿಫಾರಸು ಮಾಡಿದ್ದರು. ಅವು ಹೀಗಿವೆ:
- ರೋಗವನ್ನು ನಿಯಂತ್ರಿಸುವುದಕ್ಕೆ ಎಲ್ಲರ ಹಂತದಲ್ಲಿ, ಎಲ್ಲ ವಲಯಗಳಲ್ಲಿ ಎಲ್ಲರನ್ನೂ ಒಳಗೊಳ್ಳಿ. ಅಂದರೆ ಸರ್ಕಾರಿ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು, ಕಂಪನಿಗಳು, ವ್ಯಕ್ತಿಗಳು ಎಲ್ಲರನ್ನು ತೊಡಗಿಸಿಕೊಳ್ಳುವುದು.
- ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ವ್ಯಕ್ತಿ ನಡುವಿನ ಸಂಪರ್ಕವನ್ನು ತಪ್ಪಿಸಲು ಲಾಕ್‌ಡೌನ್ ಮಾಡುವುದು.
- ಸೋಂಕಿರುವುದು ಕಂಡು ಬಂದಲ್ಲಿ, ಕುಟುಂಬದಲ್ಲಾಗಲಿ, ಅಕ್ಕಪಕ್ಕದವರಿಗೆ ಹರಡದೇ ಇರಲು ಮುನ್ನೆಚ್ಚರಿಕೆಯಾಗಿ ಶಂಕಿತ ವ್ಯಕ್ತಿಯನ್ನು ಪ್ರತ್ಯೇಕ ಪರಿವೀಕ್ಷಣೆಗೆ ಒಳಪಡಿಸಿ.
- ಗುಂಪು ಇರುವ ಸ್ಥಳಗಳಲ್ಲಿ, ಮಾಸ್ಕ್ ಧರಿಸಿ. ಏಕೆಂದರೆ ಕೆಮ್ಮು, ಸೀನುಗಳಿಂದ ವೈರಸ್ ಹರಡುತ್ತದೆ.
- ಪ್ರವಾಸವನ್ನು ನಿಯಂತ್ರಿಸಿ. ಸೋಂಕು ವಿಸ್ತರಿಸುವುದನ್ನು ತಡೆಯಬಹುದು.
- ಅಗತ್ಯ ವಸ್ತುಗಳ ಪೂರೈಕೆಯನ್ನು ಸುರಕ್ಷಿತವಾಗಿ ಮಾಡುವಂತಾಗಬೇಕು.
- ಆದ್ಯತೆಯ ಮೇಲೆ ಹೆಚ್ಚು ಹೆಚ್ಚು ಪರೀಕ್ಷೆಗಳು ನಡೆಯಬೇಕು. ಜೆನೆಟಿಕ್, ಸಿಟಿ ಸ್ಕ್ಯಾನ್, ಸುಧಾರಿತ ರೋಗಲಕ್ಷಣಗಳ ಸ್ಕ್ರೀನಿಂಗ್ ನಡೆಸಿ. ಪರೀಕ್ಷೆಗಳ ಮೂಲಕ ನಿರ್ದಿಷ್ಟ ಪ್ರದೇಶಗಳಲ್ಲಿರುವ ಸೋಂಕು ಗುರುತಿಸುವುದಕ್ಕೆ ಇದು ನೆರವಾಗುತ್ತದೆ.
9.ಆರೋಗ್ಯ ಸೇವೆಯಲ್ಲಿರುವ ಸಂಸ್ಥೆ, ಸಿಬ್ಬಂದಿಗಳಿಗೆ ಸಂಪೂರ್ಣ ಬೆಂಬಲ ನೀಡಿ. ಅವರಿಗೆ ಅಗತ್ಯವಾದ ಸಾಧನಗಳು, ಸೌಲಭ್ಯಗಳನ್ನು ಪೂರೈಸಿ.
ಸೂತ್ರ ಅದೇ, ಫಲಿತಾಂಶ ಬೇರೆ ಏಕೆ?
ಮೇಲೆ ಹೇಳಿದ ಸೂತ್ರಗಳನ್ನು ಈಗ ಜಗತ್ತಿನ ಎಲ್ಲರೂ ಅನುಸರಿಸುತ್ತಿದ್ದಾರೆ. ಆದರೂ ಸೋಂಕು ಹೆಚ್ಚುತ್ತಿದೆ, ಸಾವು ಸಂಭವಿಸುತ್ತಿವೆ ಎಂದು ಅನ್ನಿಸುತ್ತದೆ. ಆದರೆ ಯಾನೀರ್ ಅವರು
ಈ ಸೂತ್ರಗಳನ್ನು ಅನುಸರಿಸುವುದಕ್ಕೆ ಕೆಲವು ಸೂಚನೆಗಳನ್ನು ನೀಡಿದ್ದರು.
ಬಹಳ ಮುಖ್ಯವಾಗಿ ಡಾಟಾ. ಇಂದು ಯಾವುದೇ ಯೋಜನೆಯನ್ನು, ಕಾರ್ಯಕ್ರಮವನ್ನು ರೂಪಿಸುವಾಗ ಡಾಟಾವನ್ನು ಆಧರಿಸುತ್ತೇವೆ. ಆದರೆ ಈ ಡಾಟಾವನ್ನು ವಿಶ್ಲೇಷಿಸುವ ವಿಧಾನವನ್ನೇ ಸಮರ್ಥವಾಗಿ ಕಂಡುಕೊಂಡಿಲ್ಲ ಎಂಬುದು ಯಾನೀರ್ ಅವರ ಆರೋಪ.
ಸೋಂಕುಶಾಸ್ತ್ರ, ಸಂಖ್ಯಾಶಾಸ್ತ್ರ ಮಾದರಿಗಳು ಸಾಮಾಜಿಕ ವಿಜ್ಞಾನ ಮತ್ತು ಅರ್ಥಶಾಸ್ತ್ರಗಳನ್ನು ಆಧರಿಸಿ ವಿಶ್ಲೇಷಣೆ ಮಾಡಲಾಗುತ್ತದೆ. ಕರೋನಾದಂತಹ ತೀವ್ರತರನಾದ ಸೋಂಕನ್ನು ಅರಿಯಲು ಇನ್ನು ಸುಧಾರಿತ ವಾದ ಮಾದರಿ ಬೇಕೆನ್ನುವುದು ಯಾನೀರ್ ಅವರ ಪಾದ. ಅದಕ್ಕೆ ಅವರು ನೀಡುವ ಸಲಹೆ ಭೌತಶಾಸ್ತ್ರದಲ್ಲಿ ಅನುಸರಿಸಲಾಗುವ ಕಾಂಪ್ಲೆಕ್ಸ್ ಸಿಸ್ಟಮ್. ಯಾನೀರ್ ಈ ಕ್ಷೇತ್ರದಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ಅಧ್ಯಯನ ಮಾಡುತ್ತಿದ್ದಾರೆ.
ಏನಿದು ಕಾಂಪ್ಲೆಕ್ಸ್ ಸಿಸ್ಟಮ್?
ಯಾವುದೇ ವ್ಯವಸ್ಥೆ, ಅದನ್ನು ಅವಲಂಬಿಸಿರುವ ಅಂಶಗಳೂ ಇದ್ದಾಗ, ಸಂಖ್ಯಾಶಾಸ್ತ್ರ ಉಪಯೋಗಕ್ಕೆ ಬರುವುದಿಲ್ಲ. ಯಾಕೆಂದರೆ ಅಸಂಗತವಾಗಿ ದೊಡ್ಡ ಪ್ರಮಾಣದಲ್ಲಿ ನಿರಂತರವಾಗಿ ಬದಲಾವಣೆಗಳು ಆಗುತ್ತಿದ್ದರೆ, ಅದನ್ನು ಅರಿಯುವುದು ಕಷ್ಟವಾಗುತ್ತದೆ. ಏಕೆಂದರೆ ಇದರಲ್ಲಿ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯೂ ಇರುತ್ತದೆ. ಅವರ ವರ್ತನೆಯೂ ಬಹುಮುಖ್ಯ ಅಂಶವಾಗಿರುತ್ತದೆ.
ವಿಶ್ಲೇಷಣೆಗೆ ಬಳಸುವ ಚರಾಂಶಗಳು ತಪ್ಪಾಗಿದ್ದಾರೆ, ಫಲಿತಾಂಶವೂ ತಪ್ಪಾಗುತ್ತದೆ. ಇದನ್ನು ಆಧರಿಸಿ ರೂಪಿಸುವ ಯಾವುದೇ ಕ್ರಮದ ಫಲವೂ ತಪ್ಪಾಗಿರುತ್ತದೆ ಎನ್ನುತ್ತಾರೆ ಯಾನೀರ್.
ಕರೋನಾ ಇದೇ ಮೊದಲಬಾರಿಗೆ ಜಾಗತಿಕವಾಗಿ ಹರಡುತ್ತಿದೆ. ಈ ಬಗ್ಗೆ ಯಾವುದೇ ಅಂಕಿ ಅಂಶಗಳಾಗಲಿ ಲಭ್ಯವಿಲ್ಲ. ಈ ಅವಧಿಯಲ್ಲಿ ವ್ಯವಸ್ಥೆಯ ಪ್ರತಿನಿಧಿಗಳು, ಅಂದರೆ ಒಬ್ಬ ಉದ್ಯಮಿ, ಒಬ್ಬ ವ್ಯಕ್ತಿ, ಕುಟುಂಬ, ಸಮುದಾಯದ ನಡವಳಿಕೆ ಬದಲಾಗುತ್ತದೆ.
ಈ ಸಂಕೀರ್ಣವಾದ ವ್ಯವಸ್ಥೆಯಲ್ಲಿ ನಡವಳಿಕೆ ಮತ್ತು ಪರಸ್ಪರ ಸಂವಾದದ ಮೂಲಕ ಘಟನೆಗಳು ಜರುಗುತ್ತವೆ. ಈ ವ್ಯವಸ್ಥೆಯಲ್ಲಿ ಸಂಕೀರ್ಣ ವ್ಯವಸ್ಥೆಗಳ ಮಾದರಿಯೇ ಹೆಚ್ಚು ಉಪಯುಕ್ತವಾಇದ್ದು, ಇದು ಬಹುಮುಖ್ಯ ಮಾಹಿತಿಯನ್ನು ವಿಶ್ಲೇಷಣೆಗೆ ಬಳಸುತ್ತದೆ ಎಂದು ವಿವರಿಸುತ್ತಾರೆ ಯಾನೀರ್.
ಈ ಹಿನ್ನೆಲೆಯಲ್ಲಿ ಸಂಖ್ಯಾಶಾಸ್ತ್ರೀಯ ಮಾದರಿ ಇಲ್ಲಿ ನೆರವಾಗುವುದಿಲ್ಲ ಎಂದು ಹೇಳುವ ಯಾನೀರ್, ಸೋಂಕು ವ್ಯಾಪಕವಾಗಿರುವ ಕಾಲದಲ್ಲಿ ಜನರ ಜೀವನದ ಮೇಲೆ ಪ್ರಭಾವ, ಸಮಾಜದ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಆಗುವ ಪ್ರಭಾವವನ್ನು ಗಮನಿಸಬೇಕು ಎನ್ನುತ್ತಾರೆ.
ಎಷ್ಟು ಬೇಗ ಜನರ ನಡವಳಿಕೆಯಲ್ಲಿ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೊ ಅಷ್ಟು ಪರಿಣಾಮಕಾರಿಯಾಗಿ ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂಬುದು ಯಾನೀರ್ ಅಭಿಪ್ರಾಯ. ಸ್ಪೇನ್‌ಗಿಂತ ಎರಡು ವಾರಗಳ ಮೊದಲೇ ಕ್ರಮ ಕೈಗೊಂಡಿದ್ದರಿಂದ 100 ಪಟ್ಟು ವೇಗದಲ್ಲಿ ಸೋಂಕು ನಿಯಂತ್ರಣ ಸಾಧ್ಯವಾದ ಉದಾಹರಣೆಯನ್ನು ನೀಡುತ್ತಾರೆ ಯಾನೀರ್.
ದಶಕದಿಂದ ಸಾಲದಲ್ಲಿ ಮುಳುಗಿರುವ ಗ್ರೀಸ್‌ನಲ್ಲಿ ಮೊದಲ ಪ್ರಕರಣ ಕಾಣಿಸಿಕೊಂಡಿದ್ದು ಫೆಬ್ರವರಿ 26ರಂದು. ಫೆಬ್ರವರಿ 27ಕ್ಕೆ ಎಲ್ಲ ಹಬ್ಬ, ಉತ್ಸವಗಳನ್ನು ರದ್ದು ಮಾಡಲಾಯಿತು. ಮಾರ್ಚ್ 10ಕ್ಕೆ ಶಾಲೆ, ಕಾಲೇಜು ಬಂದ್. ಮಾರ್ಚ್ 12ಕ್ಕೆ ಬೆರಳೆಣಿಕೆಯ ಅತಿಥಿಗಳೊಂದಿಗೆ ಒಲಿಂಪಿಕ್ ಜ್ಯೋತಿ ಬೆಳಗಲಾಯಿತು. ಮಾರ್ಚ್ 13ಕ್ಕೆ ಕೆಫೆ, ಹೊಟೆಲ್ ಬಂದ್. ಮಾರ್ಚ್ 22ಕ್ಕೆ ಸಂಚಾರ ಸಂಪೂರ್ಣ ನಿರ್ಬಂಧಿಸಲಾಯಿತು. ಮೇ 9ರ ಹೊತ್ತಿಗೆ ಗ್ರೀಸ್‌ನಲ್ಲಿ ಸೋಂಕು ಖಚಿತವಾದ ಪ್ರಕರಣಗಳ ಸಂಖ್ಯೆ 2691, ಗುಣಮುಖರಾದವರು 1374 ಮತ್ತು ಸಂಭವಿಸಿದ ಸಾವುಗಳ ಸಂಖ್ಯೆ 150.
ಸೋಂಕು ಮೊದಲು ಗುರುತಿಲ್ಪಟ್ಟ ದಿನದಿಂದ ಇಲ್ಲಿಯವರೆಗೆ ಲಭ್ಯವಾಗಿರುವ ಮಾಹಿತಿ, ಅಂಕಿ ಅಂಶಗಳ ಆಧಾರದ ಮೇಲೆ, ಸೋಂಕು ನಿಯಂತ್ರಣಕ್ಕೆ ಅನುಸರಿಸಲಾಗುತ್ತಿರುವ ನಿಯಮಗಳನ್ನು ಮರುವಿಮರ್ಶೆಗೆ ಒಳಪಡಿಸಬೇಕು ಎನ್ನುತ್ತಾರೆ ಯಾನೀರ್.
ಯಾನೀರ್ ಅವರ ಪ್ರಕಾರ ಸಾಮುದಾಯಿಕ ರೋಗ ನಿರೋಧಕತೆ ಎಂಬುದು ಇಲ್ಲ. ಇದು ಇಡೀ ಸಮುದಾಯವನ್ನು ಸಾಯಲು ಬಿಡುವ ಯೋಚನೆ. ಕ್ಷಿಪ್ರವಾಗಿ ಕಾರ್ಯೋನ್ಮುಖರಾಗುವುದು, ಎಲ್ಲ ಆಯಾಮಗಳಲ್ಲೂ ಸಮರ್ಥವಾದ ಕ್ರಮಗಳನ್ನು ಅನುಸರಿಸುವುದು ಶೀಘ್ರ ನಿಯಂತ್ರಣಕ್ಕೆ ಅನುಕೂಲಕರವಾದ ಸೂತ್ರ ಎಂದಿದ್ದಾರೆ.