ಆಮ್ಲಜನಕ ಲಭ್ಯತೆಗೆ ತಕ್ಕಂತೆ ಒಗ್ಗಿಕೊಳ್ಳುವ ಜೀವಕೋಶ ಕುರಿತ ಸಂಶೋಧನೆಗೆ ವೈದ್ಯಕೀಯ ನೊಬೆಲ್‌

ಈ ವರ್ಷದ ನೊಬೆಲ್‌ ಪುರಸ್ಕಾರಗಳ ಘೋಷಣೆ ಆರಂಭವಾಗಿದೆ. 1901ರಿಂದ ನೀಡಲಾಗುತ್ತಿರುವ ಈ ಪ್ರಶಸ್ತಿ ವಿಜ್ಞಾನ ಕ್ಷೇತ್ರದ ಅತ್ಯುಚ್ಛ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಇಂದು ವೈದ್ಯಕೀಯ ಕ್ಷೇತ್ರದ ಪ್ರಶಸ್ತಿ ಪ್ರಕಟವಾಗಿದ್ದು, ಮೂವರು ವಿಜ್ಞಾನಿಗಳು ಗೌರವವನ್ನು ಹಂಚಿಕೊಂಡಿದ್ದಾರೆ

ಭೂಮಿಯ ಮೇಲೆ ಬದುಕಿರುವ ಬಹುತೇಕ ಜೀವಿಗಳಿಗೆ ಜೀವಂತವಾಗಿರಲು ಆಮ್ಲಜನಕ ಬೇಕೆಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೆ ಆಮ್ಲಜನಕದ ಲಭ್ಯತೆಗೆ ತಕ್ಕಂತೆ ಜೀವಕೋಶಗಳು ಹೇಗೆ ಹೊಂದಿಕೊಳ್ಳುತ್ತವೆ ಮತ್ತು ಈ ಹೊಂದಾಣಿಕೆಯ ಪರಿಣಾಮಗಳು ಎಷ್ಟು ಮಹತ್ವದ್ದಾಗಿರುತ್ತವೆ ಎಂಬುದು ತಿಳಿದಿರಲಿಲ್ಲ. ಈ ವಿಷಯವಾಗಿ ಸಂಶೋಧನೆ ನಡೆಸಿದ ಮೂವರು ವಿಜ್ಞಾನಿಗಳಿಗೆ ಈ ವರ್ಷದ ವೈದ್ಯಕೀಯ ನೊಬೆಲ್‌ ಪುರಸ್ಕಾರವನ್ನು ನೀಡಲಾಗಿದೆ.

ಅಮೆರಿಕದ ವಿಲಿಯಂ ಜಿ ಕೇಲಿನ್‌ ಜೂನಿಯರ್‌, ಗ್ರೆಗ್‌ ಎಲ್‌ ಸೆಮೆಂಜಾ ಮತ್ತು ಇಂಗ್ಲೆಂಡಿನ ಸರ್‌ ಪೀಟರ್‌ ಜೆ ರಾಟ್‌ಕ್ಲಿಫ್‌ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಭೂಮಿಯ ಐದನೆಯ ಒಂದು ಭಾಗದಷ್ಟು ವಾತಾವರಣ ಆಮ್ಲಜನಕದಿಂದ ಕೂಡಿದೆ. ಭೂಮಿಯ ಮೇಲಿರುವ ಪ್ರತಿ ಜೀವಿಯೂ ತಾನು ಸೇವಿಸುವ ಆಹಾರವನ್ನು ಶಕ್ತಿಯಾಗಿ ಪರಿವರ್ತಿಸಲು, ಬದುಕುಳಿಯಲು ಆಮ್ಲಜನಕ ಅತ್ಯಗತ್ಯ. ಆದರೆ ಜೀವದೊಳಗಿರುವ ಅಸಂಖ್ಯ ಜೀವಕೋಶಗಳು ಆಮ್ಲಜನಕ ಲಭ್ಯತೆಯಲ್ಲಿ ಆಗುವ ಏರುಪೇರನ್ನು ಗ್ರಹಿಸಿಕೊಂಡು, ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವ ಬಗೆ ಈ ಮೂವರು ವಿಜ್ಞಾನಿಗಳಲ್ಲಿ ವಿಸ್ಮಯ ಹುಟ್ಟಿಸಿತು.

ಅಷ್ಟೇ ಅಲ್ಲ ಹೀಗೆ ಹೊಂದಿಕೊಳ್ಳುವ ಜೀವಕೋಶಗಳ ವಂಶವಾಹಿಗಳ ಚಟುವಟಿಕೆಗಳನ್ನು ನಿಯಂತ್ರಿಸುವಷ್ಟು ಬದಲಾವಣೆಗಳಾಗುವುದನ್ನು ಈ ಮೂವರು ವಿಜ್ಞಾನಿಗಳು ಗುರುತಿಸಿದ್ದಾರೆ.

ವಿಜ್ಞಾನಿಗಳ ಪ್ರತಿಕ್ರಿಯೆ

ಕೆಂಪು ರಕ್ತ ಕಣಗಳ ಉತ್ಪತ್ತಿ ಹೇಗೆ ನಿಯಂತ್ರಣಗೊಳ್ಳುತ್ತದೆ ಎಂಬ ಸರಳ ಪ್ರಶ್ನೆಯನ್ನು ಬೆನ್ನುಹತ್ತಿ ಸಂಶೋಧನೆಯನ್ನು ಆರಂಭಿಸಿದ್ದು, ಹಲವು ಕ್ಷೇತ್ರಗಳಿಗೆ ಚಾಚಿಕೊಳ್ಳುತ್ತಾ, ಮಹತ್ವದ ಘಟ್ಟವನ್ನು ತಲುಪಿದ್ದು, ಅದ್ಭುತ. ವೈಜ್ಞಾನಿಕ ಸಂಶೋಧನೆ, ಅನಿರೀಕ್ಷಿತ ತಿರುವುಗಳಿಂದ ಕೂಡಿದ್ದು, ರೋಚಕ. ಒಂದು ರೀತಿಯ ಪತ್ತೆದಾರಿಕೆ.

ಗ್ರೆಗ್‌ ಸೆಮೆಂಜಾ, ಪ್ರಶಸ್ತಿ ಪ್ರಕಟಣೆ ಬಳಿಕ ನೊಬೆಲ್‌ ಸಂಸ್ಥೆಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಹೇಳಿದ ಮಾತು. ಪೂರ್ಣ ಸಂಭಾಷಣೆಯ ವಿಡಿಯೋ ಕೆಳಗಿದೆ.

ನಾನು ಕುತೂಹಲ ಮತ್ತು ಕಲ್ಪನೆಗಳಿಂದ ಪ್ರೇರಿತವಾದ ಸಂಶೋಧನೆಯ ಬಗ್ಗೆ ಅಪಾರ ನಂಬಿಕೆ ಉಳ್ಳವನು. ಜ್ಞಾನವನ್ನು ಸೃಷ್ಟಿಸುವ ಕೆಲಸದಲ್ಲಿ ಇವು ಒಂದಲ್ಲ ಒಂದು ರೀತಿಯಲ್ಲಿ ಪರಸ್ಪರ ಪೂರಕವಾಗಿರುವಂತಹವು ಎಂದು ನಾನು ಬಲ್ಲೆ. ವಿಜ್ಞಾನವೆಂದರೆ ಕುತೂಹಲಕಾರಿ ಸಮಸ್ಯೆಗಳನ್ನು ಬಿಡಿಸುವುದು. ಮನುಷ್ಯನಿಗೆ ಬರುವ ಹಲವು ಖಾಯಿಲೆಗಳಲ್ಲಿ ಆಮ್ಲಜನಕದ ಮಹತ್ವವೇನು ಎಂಬುದನ್ನು ನಾನು ಚೆನ್ನಾಗಿ ಅರಿತಿದ್ದೆ.

ವಿಲಿಯಂ ಕೇಲಿನ್‌, ಪ್ರಶಸ್ತಿ ಪ್ರಕಟಣೆ ಬಳಿಕ ನೊಬೆಲ್‌ ಸಂಸ್ಥೆಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಹೇಳಿದ ಮಾತು. ಪೂರ್ಣ ಸಂಭಾಷಣೆಯ ವಿಡಿಯೋ ಕೆಳಗಿದೆ.

ನಾವು ಜ್ಞಾನವನ್ನು ಸೃಷ್ಟಿಸುತ್ತೇವೆ. ಸಾರ್ವಜನಿಕರ ಹಣದಲ್ಲಿ ಸಂಶೋಧನೆ ನಡೆಸುವ ವಿಜ್ಞಾನಿಗಳು ಮಾಡುವುದು ಅದನ್ನೇ. ಆ ಜ್ಞಾನಕ್ಕೆ ಒಂದು ಗುಣವಿರುತ್ತದೆ. ವ್ಯಾಖ್ಯಾನಿಸಬಲ್ಲಂಥದ್ದು ಮತ್ತು ಉತ್ತಮವಾದ, ಸತ್ಯವಾದ ಜ್ಞಾನವಾಗಿರುತ್ತದೆ. ವಿಜ್ಞಾನಿಗಳು ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಧೈರ್ಯ ಹೊಂದಿರಬೇಕು ಮತ್ತು ಅದಕ್ಕೆ ಅವಕಾಶವಿರಬೇಕು.

ಸರ್‌ ಪೀಟರ್‌ ರಾಟ್‌ ಕ್ಲಿಫ್‌, ಪ್ರಶಸ್ತಿ ಪ್ರಕಟಣೆ ಬಳಿಕ ನೊಬೆಲ್‌ ಸಂಸ್ಥೆಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಹೇಳಿದ ಮಾತು. ಪೂರ್ಣ ಸಂಭಾಷಣೆಯ ವಿಡಿಯೋ ಕೆಳಗಿದೆ.

ಈ ಸಂಶೋಧನೆ ಯಾಕೆ ಮಹತ್ವದ್ದು?

ವಿಲಿಯಂ, ಗ್ರೆಗ್‌ ಮತ್ತು ಪೀಟರ್‌ ಅವರ ಸಂಶೋಧನೆ ಹಲವು ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಮಹತ್ವದ ಬದಲಾವಣೆಯನ್ನು ತರಬಲ್ಲದು. ರಕ್ತಹೀನತೆ, ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಅಷ್ಟೇ ಅಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ತೀವ್ರತರವಾದ ಶ್ವಾಸಕೋಶ ಕಾಯಿಲೆಗಳ ಚಿಕಿತ್ಸೆಯಲ್ಲೂ ಈ ಸಂಶೋಧನೆ ಹೊಸ ಸಾಧ್ಯತೆಗಳನ್ನು ತೆರೆಯಲಿದೆ.

ಆಮ್ಲಜನಕದ ಲಭ್ಯತೆಯನ್ನು ಗ್ರಹಿಸುವ ಶಕ್ತಿಯು ದೇಹದ ಜೀವನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಗರ್ಭಕೋಶದಲ್ಲಿರುವಾಗಲೆ ಅಭಿವೃದ್ಧಿಯಾಗುತ್ತದೆ. ಇದು ಕೆಂಪು ರಕ್ತ ಕಣಗಳು ಅಥವಾ ರಕ್ತಕಣಗಳ ಉತ್ಪತ್ತಿಯನ್ನು ಹೆಚ್ಚಿಸಬಲ್ಲದು. ಈ ಕ್ರಿಯೆಯನ್ನು ಸೃಷ್ಟಿಸಬಲ್ಲ ಔಷಧಿಯೂ ರಕ್ತಹೀನತೆಗೆ ಪರಿಣಾಮಕಾರಿ ಚಿಕಿತ್ಸೆಯಾಗಬಲ್ಲದು.

ಪತ್ತೆಯಾಗಿದ್ದು ಹೇಗೆ?

ಆಮ್ಲಜನಕದ ಲಭ್ಯತೆ ಕುರಿತು ಈ ಸಂಶೋಧನೆ ಸಾಧ್ಯವಾಗಿದ್ದು, ಆಮ್ಲಜನಕದ ಪ್ರಮಾಣದ ಕಡಿಮೆಯಾದಾಗ ಎರಿಥ್ರೊಪೊಯಿಟಿನ್‌ (ಇಪಿಒ) ಹಾರ್ಮೋನ್‌ಗಳ ಪ್ರಮಾಣ ಹೆಚ್ಚಾಗಿದ್ದನ್ನು ವಿಜ್ಞಾನಿಗಳು ಗುರುತಿಸಿದ್ದರು. ಹಾಗೆಯೇ ಹೈಪೋಕ್ಸಿಯಾ-ಇಂಡ್ಯೂಸಿಬಲ್‌ ಫ್ಯಾಕ್ಟರ್‌ (ಎಚ್‌ಐಎಫ್‌) ಎಂದು ಕರೆಯಲಾಗುವ ಈ ಪ್ರೋಟೀನ್‌ಗಳ ಗುಚ್ಛವು ಡಿಎನ್ಎಗಳ ವರ್ತನೆಯನ್ನು ಬದಲಿಸುತ್ತಿದ್ದವು.

ಆಮ್ಲಜನಕದ ಪ್ರಮಾಣವನ್ನು ಸಾಮಾನ್ಯವಾಗಿದ್ದಾಗ, ಜೀವಕೋಶಗಳು ಎಚ್ಐಎಫ್‌ ಸತತವಾಗಿ ಉತ್ಪತ್ತಿಯಾಗುತ್ತಿತ್ತು ಮತ್ತು ಇದು ಇನ್ನೊಂದು ಪ್ರೋಟೀನ್‌ ಆದ ವಿಎಚ್‌ಎಲ್‌ನಿಂದ ನಾಶಗೊಳ್ಳುತ್ತಿತ್ತು. ಆದರೆ ಆಮ್ಲಜನಕದ ಪ್ರಮಾಣದಲ್ಲಿ ಕುಸಿತವಾದಾಗ ವಿಎಚ್‌ಎಲ್‌ ಡಿಎನ್‌ಎಯಲ್ಲಿ ಬದಲಾವಣೆ ತರುವಷ್ಟು ಶಕ್ತಿಶಾಲಿಯಾಗಿ ಬೆಳೆಯುತ್ತಿತ್ತು.

ಸಾಮಾನ್ಯವಾಗಿ ದೈಹಿಕ ವ್ಯಾಯಾಮದ ಸಂದರ್ಭದಲ್ಲಿ, ಎತ್ತರದ ಪ್ರದೇಶದಲ್ಲಿರುವಾಗ ಮತ್ತು ಗಾಯಗಳಿಂದ ದೇಹದಲ್ಲಿ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾದಾಗ ದೇಹಕ್ಕೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಈ ಏರುಪೇರು ಸೃಷ್ಟಿಸಬಹುದಾದ ಅನನುಕೂಲ ಮತ್ತು ಅನಾಹುತಗಳನ್ನು ಗುರುತಿಸಿದ್ದರು.

ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲದ ಸಂಶೋಧನೆಗೆ ನೊಬೆಲ್‌ ಪಡೆದಿರುವ ಮೂವರು ವಿಜ್ಞಾನಿಗಳು ವೈದ್ಯಲೋಕದ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

%d bloggers like this: