ಸಂಗೀತ ಕೇಳುವ ಬಗೆಯನು ಬದಲಿಸಿದ MP3 ಬಂದುದು ಹೇಗೆ?

ಗ್ರಾಮಾಫೋನ್‌, ಕ್ಯಾಸೆಟ್‌ಗಳಲ್ಲಿ ಸಂಗೀತ ಕೇಳಿ ಆಸ್ವಾದಿಸಿದ ನಮಗೆ ಡಿಜಿಟಲ್‌ ಸಂಗೀತದ ಅನುಭವವನ್ನು ನೀಡಿದ್ದು ಎಂಪಿ3. ಆಗ ನಾವು ಸಂಗೀತ ಕೇಳಬೇಕೆಂದರೆ ಒಂದೇ ಸಾಧನಕ್ಕೆ ಆತುಕೊಳ್ಳಬೇಕಿತ್ತು. ಎಂಪಿ3 ಯಾವ ಸಾಧನದಲ್ಲಾದರೂ ಕೇಳುವ ಭಾಗ್ಯವನ್ನು ನೀಡಿತು. ಈ ಕ್ರಾಂತಿ ಸಂಗೀತ ತಂತ್ರಜ್ಞಾನದ ಹಿಂದಿರುವ ಕಥೆ ಏನು? ಇಲ್ಲಿದೆ ಓದಿ…

MP3 ಎನ್ನುವುದು ಇಂದು ನಾವೆಲ್ಲ ತುಂಬ ಸಹಜವಾಗಿ ಸ್ವೀಕರಿಸುವ ಪದವಾಗಿದೆಯಷ್ಟೆ.  ಇದರ ಹಿಂದಿನ ಇತಿಹಾಸ ರೋಚಕ ಮತ್ತು ತಂತ್ರಜ್ಞಾನ ಮುಂದುವರೆಯುವ ಹಾದಿಯಲ್ಲಿ ಸಿಗುವ ಎಡರು ತೊಡರುಗಳಿಗೆ ಒಂದು ಒಳ್ಳೆಯ ಉದಾಹರಣೆ.  ಈ ತಂತ್ರಜ್ಞಾನಕ್ಕೆ ಈಗ 20ರ ಹರೆಯ.  ಇಂದಿನ ದಿನಗಳಲ್ಲಿ ಬೆಳೆದು ದೊಡ್ಡದಾಗುವ ಬಹುತೇಕ ಎಲ್ಲ ತಂತ್ರಜ್ಞಾನಗಳ ಬೀಜ ರೂಪ ವಿಶ್ವವಿದ್ಯಾನಿಲಯಗಳಲ್ಲಿ ಆಗುವ ಸಂಶೋಧನೆಯಲ್ಲಿರುವುದನ್ನು ಕಾಣುತ್ತೇವೆ. ಇದು ಗೂಗಲ್ ಸರ್ಚ್ ಎಂಜಿನ್ ಗೆ ಅನ್ವಯವಾಗುವಂತೆಯೇ MP3 ತಂತ್ರಜ್ಞಾನಕ್ಕೂ ಅನ್ವಯವಾಗುತ್ತದೆ. 

ಡಿಜಿಟಲ್ ಸಂಗೀತವನ್ನು, ಅದರ ಮಾಧುರ್ಯವನ್ನು ಕುಗ್ಗಿಸದಂತೆ  ಸಂಕ್ಷೇಪಿಸುವುದು ಹೇಗೆ ಎನ್ನುವ ಸವಾಲು ದಶಕಗಳ ಕಾಲ ವಿಜ್ಞಾನಿಗಳನ್ನು ಮತ್ತು ತಂತ್ರಜ್ಞರನ್ನು ಕಾಡಿದೆ.  ಇಲ್ಲಿ  ಮನೋವೈಜ್ಞಾನಿಕ ಧ್ವನಿವಿಜ್ಞಾನ “Psychoacoustics” ಎಂಬ ಜ್ಞಾನ ಶಾಖೆಯ ಪಾತ್ರ ಮುಖ್ಯವಾದದ್ದು.  ನಮ್ಮ ಕಿವಿಯ ಮೇಲೆ ಬೀಳುವ ಎಲ್ಲ ಶಬ್ದಗಳನ್ನೂ ಅದು ಒಂದೇ ರೀತಿ ಗ್ರಹಿಸುವುದಿಲ್ಲ. ಕೆಲವು ಶಬ್ದ ತರಂಗಗಳು ಹೆಚ್ಚು ಪರಿಣಾಮ ಬೀರಿದರೆ ಇನ್ನು ಕೆಲವು ಕಡಿಮೆ.  ಜರ್ಮನಿಯ ಎರ್ ಲ್ಯಾಂಗನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡೀಟರ್ ಸೀಟ್ಜರ್ ಅವರು ಈ ಕ್ಷೇತ್ರದಲ್ಲಿ ಆಳವಾದ ಆಸಕ್ತಿ ಇರಿಸಿಕೊಂಡು ತಮ್ಮ ಸಂಶೋಧನೆಯನ್ನು ಮುಂದುವರೆಸಿಕೊಂಡು ಹೋಗಬಲ್ಲ ಪಿಎಚ್ ಡಿ ವಿದ್ಯಾರ್ಥಿಗೆ ಕಾಯುತ್ತಿದ್ದರು.  ಪ್ರೊ. ಸೀಟ್ಜರ್ ಅವರು ತಮ್ಮ ಐಡಿಯಾಗೆ ಸಲ್ಲಿಸಿದ ಪೇಟೆಂಟ್ ಅರ್ಜಿಯನ್ನು ‘ಕಾರ್ಯಗತಗೊಳಿಸಲು ಕಷ್ಟ ಸಾಧ್ಯ’ ಎಂಬ ಕಾರಣದಿಂದ ತಿರಸ್ಕರಿಸಲಾಗಿತ್ತು.   ಆಗ ಅಲ್ಲಿ ವಿದ್ಯಾರ್ಥಿಯಾಗಿದ್ದವರು ಕಾರ್ಲ್ ಹೀಂಜ್ ಬ್ರಾಂಡೆನ್ ಬರ್ಗ್.  ಅವರು ಗಣಿತ ಮತ್ತು ಎಲೆಕ್ಟ್ರಿಕಲ್ ಎಂಜಿಯಿಯರಿಂಗ್ ಎರಡರಲ್ಲೂ ಆಸಕ್ತಿ ಮತ್ತು ಪರಿಶ್ರಮವಿದ್ದುದರಿಂದ, ಅವರು ಪ್ರೊ. ಸೀಟ್ಜರ್ ಅವರ ಪಿಎಚ್ ಡಿ ವಿದ್ಯಾರ್ಥಿಯಾಗಿ  1980ರ ಆದಿ ಭಾಗದಲ್ಲಿ ಸಂಶೋಧನೆ ಮುಂದುವರೆಸಿದರು.

*****

ಈ ಸಂಕ್ಷೇಪಿಸುವ ಅಲ್ಗಾರಿದಂ ಮಾಡುವ ಕೆಲಸ  ತುಂಬಾ ಸಂಕೀರ್ಣವಾಗಿದ್ದು, ಕೊನೆಯದಾಗಿ ಇದಮಿತ್ಥಂ ಎಂದು ಹೇಳಿ ಸರಿಯಾಗಿದೆ ಎಂದು ಹೇಳುವವರು ಕೇಳುಗರೇ.  ಆದ್ದರಿಂದ ಸಂಕ್ಷೇಪಿಸುವ ಯಾವುದೇ ತಂತ್ರವೂ ಈ ಪರೀಕ್ಷೆಗೆ ಒಳಗಾಗಬೇಕಿತ್ತು.  ಈ ಪಯಣದಲ್ಲಿ ಮನುಷ್ಯನ ಕೇಳ್ವಿಗೆ ಇರುವ ಕೆಲವು ಸೂಕ್ಷ್ಮಗಳನ್ನು ಅಳವಡಿಸಿಕೊಳ್ಳಲಾಯಿತು.  ಉದಾಹರಣೆಗೆ, ಯಾವುದೇ ದೊಡ್ಡ ಶಬ್ದವಾದಲ್ಲಿ, ಆ ಶಬ್ದ ಆಗುವ ಮೊದಲು ಇರುವ  ಮತ್ತು ಶಬ್ದದ ನಂತರದ ಕೆಲವು ಸೂಕ್ಷ್ಮತೆಗಳನ್ನು  ಕಿವಿ “ಕೇಳಿಸಿ” ಕೊಳ್ಳಲು ಅಸಮರ್ಥವಾಗಿರುತ್ತದೆ ಎನ್ನುವ ಒಳನೋಟ.  ಆದ್ದರಿಂದ ಇಂಥ ಭಾಗಗಳನ್ನು ತೆಗೆದುಹಾಕಿದರೂ ಮಾನವರ ಕಿವಿ ಕೇಳುವ ಧ್ವನಿಯಲ್ಲಿ  ಏನೂ ವ್ಯತ್ಯಾಸವಾಗುವುದಿಲ್ಲ.  ಇಂಥದೇ ಹಲವಾರು ಅಂತರ್ಶಿಸ್ತೀಯ ಸಂಶೋಧನೆಗಳಿಂದ ’ಸಂಕ್ಷೇಪ’ ದ ಅನುಪಾತ ಹೆಚ್ಚುತ್ತ ಹೋಗುವಂತೆ ಮಾಡಿದರು. 

ಅವರ ಈ ಅಲ್ಗಾರಿದಮ್ ಸೈದ್ಧಾಂತಿಕವಾಗಿ ಕೆಲಸ ಮಾಡುವಂತೆ ತೋರಿದರೂ, ಅದನ್ನು ಬೇರೆ ಬೇರೆ ಥರದ ಸಂಗೀತಕ್ಕೆ ಒಗ್ಗುವಂತಿದೆಯೇ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಬೇಕಿತ್ತು. ಅವರು ಇದಕ್ಕೆ ಸಾವಿರಾರು ಬಗೆಯ ಸಂಗೀತದ ತುಣುಕುಗಳನ್ನು ತಮ್ಮ ಪ್ರಯೋಗಕ್ಕೆ ಒಳಪಡಿಸಿದರು. ಗಂಡು ಹೆಣ್ಣಿನ ಹಾಡುಗಾರಿಕೆ, ವಾದ್ಯಗಳಿಂದ ಹೊರಡಿಸುವ ಸಂಗೀತ, ಅನೇಕ ವಾದ್ಯಗಳನ್ನು ಸೇರಿಸಿದಾಗ ಸಿಗುವ ಆರ್ಕೆಸ್ಟ್ರಾ ತರಹದ ಸಂಗೀತ ಇತ್ಯಾದಿ.  ಅವರು ಸೂಚಿಸಿದ ಅಲ್ಗಾರಿದಂ ಈ ಎಲ್ಲ `ಸಂಗೀತ’ಗಳಿಗೂ ಒಗ್ಗಬೇಕಿತ್ತು ಮತ್ತು ಕೇಳುಗರಿಗೆ ಕಿರಿ ಕಿರಿ ಉಂಟಾಗಬಾರದಾಗಿತ್ತು.

ಈ ಎಲ್ಲ ಪ್ರಯೋಗಗಳ ನಂತರ 1989ರಲ್ಲಿ ತಮ್ಮ ಪ್ರಬಂಧವನ್ನು ಮಂಡಿಸಿದರು.  ಅವರ ಅಲ್ಗಾರಿದಮ್  ನ್ನು Optimum coding in the frequency domain (OCF) ಎಂದು ಕರೆಯಲಾಗಿದೆ. 

ಎಲ್ಲ ಸಂಶೋಧನೆಗಳನ್ನೂ ಮಾರುಕಟ್ಟೆಗೆ ಕರೆದೊಯ್ಯುವ ವಾಹಕವೊಂದು ಬೇಕಷ್ಟೆ.  ಆಡಿಯೋ/ವಿಡಿಯೋ ತಂತ್ರಜ್ಞಾನದಲ್ಲಿ Moving Picture Experts Group ಎಂಬ ಸಂಸ್ಥೆಯು (ಈ ಸಂಸ್ಥೆಯಲ್ಲಿ ಉಪಕರಣಗಳನ್ನು ವಿನ್ಯಾಸಗೊಳಿಸಿ ಮಾರುಕಟ್ಟೆಗೆ ತರುವ ಕಂಪನಿಗಳಲ್ಲದೆ ವಿಶ್ವವಿದ್ಯಾನಿಲಯ ಮತ್ತು ಸಂಶೋಧನಾ ಸಂಸ್ಥೆಗಳೂ ಸದಸ್ಯತ್ವ ಹೊಂದಿವೆ) ಕೆಲವು ತಂತ್ರಜ್ಞಾನಗಳನ್ನು ಮಾತ್ರ ಉಪಯೋಗಿಸುವಂತೆ ದಾಖಲೆಗಳನ್ನು ಸಿದ್ದಪಡಿಸುತ್ತದೆ. 1995ರಲ್ಲಿ ಆ ಸಂಸ್ಥೆಯ ಮುಂದೆ ಡಿಜಿಟಲ್ ಸಂಗೀತವನ್ನು ಸಂಕ್ಷೇಪಿಸುವ ಎರಡು ತಂತ್ರಜ್ಞಾನಗಳಿದ್ದವು.  ಯಾವುದನ್ನು ತಮ್ಮ ದಾಖಲೆಯಲ್ಲಿ ಅಳವಡಿಸಿಕೊಳ್ಳಬೇಕೆಂದು ಆ ಸಂಸ್ಥೆ ನಿರ್ಧರಿಸಬೇಕಿತ್ತು.  ಬ್ರಾಂಡೆನ್ ಬರ್ಗ್ ಮತ್ತು ಅವರ ಸಹೋದ್ಯೋಗಿಗಳ ಅಲ್ಗಾರಿದಂ ಒಪ್ಪಿತವಾಗುವ ಗುಣಮಟ್ಟವನ್ನು ಪಡೆಯಲು ಕಡಿಮೆ ಸ್ಠಳ ಬಯಸುವ ತೆರನಾಗಿತ್ತು. ಇದರ ಪ್ರತಿಸ್ಪರ್ಧಿ MUSICAM ನ ಅಲ್ಗಾರಿದಂ ಕೆಲಸ ಮಾಡಲು ಕಡಿಮೆ ಶಕ್ತಿ ವ್ಯಯವಾಗುತ್ತಿತ್ತು. ಕಡಿಮೆ ಶಕ್ತಿ ವ್ಯಯವಾಗುವುದೂ ಉಪಕರಣಗಳ ವಿನ್ಯಾಸದಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳುತ್ತದೆ.   ಆದರೆ ಅನೇಕ ತಿಂಗಳುಗಳ ವಾದ ವಿವಾದಗಳ ಬಳಿಕ MP3 ಯನ್ನೇ ಆಯ್ಕೆ ಮಾಡಲಾಯಿತು ಮತ್ತು ಈ ತಂತ್ರಜ್ಞಾನವನ್ನು ಬಳಸಿ ಸಂಕ್ಷೇಪಿಸಿದ ಆಡಿಯೋ ಫೈಲ್ ಗಳಿಗೆ .MP3 ಎಂಬ ಹೆಸರು ಬಳಸಬೇಕೇಂದೂ ನಿರ್ಣಯಿಸಲಾಯಿತು.  14 ನೇ  ಜುಲೈ ಮಧ್ಯಾಹ್ನ 12.29ಕ್ಕೆ ಕಳಿಸಿದ ಇ-ಮೈಲ್ ಇದನ್ನು ಪ್ರಪಂಚಕ್ಕೇ ತಿಳಿಸಿತು.

ಇಂದು ಈ ಮಟ್ಟಿಗಿನ ಜನಪ್ರಿಯತೆಯನ್ನು ಗಳಿಸಲು ಬ್ರಾಂಡೆನ್ ಬರ್ಗ್ ಅವರು ತೆಗೆದುಕೊಂಡ ಮತ್ತೊಂದು ನಿರ್ಣಯವೂ ಸಹಾಯಕವಾಯಿತು.  ಅವರು ಈ ತಂತ್ರಜ್ಞಾನವನ್ನು ಬಳಸುವ ತಂತ್ರಾಂಶವನ್ನು  ಭಾಗಶಃ ’ಮುಕ್ತ’ ತಂತ್ರಾಂಶವೆಂದು ಬಿಡುಗಡೆ ಮಾಡುವುದರ ಮೂಲಕ ಸಾವಿರಾರು ಕಂಪನಿಗಳು ತಮ್ಮ ವಿನ್ಯಾಸಗಳಲ್ಲಿ ಇದನ್ನು ಅಳವಡಿಸಲು ಸಾಧ್ಯವಾಯಿತು.

1987ರ ಚಿತ್ರ – ಹೆಡ್ ಫೋನ್ ಹಾಕಿಕೊಂಡಿರುವವರು ಬ್ರಾಂಡೆನ್ ಬರ್ಗ್
2007ರ ಚಿತ್ರ – ಅದೇ ಗುಂಪು 20 ವರ್ಷಗಳ ಬಳಿಕ

ತನ್ನೊಬ್ಬನನ್ನೇ  ಈ ತಂತ್ರಜ್ಞಾನದ ಜನಕನೆಂದು ಕರೆಸಿಕೊಳ್ಳಲು ಬ್ರಾಂಡೆನ್ ಬರ್ಗ್ ಅವರು ಇಷ್ಟಪಡುವುದಿಲ್ಲ  ’ಇದರ ಮೂಲ ಮಾತೃಕೆಯ ಹಾಗಿರುವ ಸಂಶೋಧನೆಯನ್ನು ನಾನು ಮಾಡಿದ್ದೆನೆಂಬುದು ನಿಜವಾದರೂ, ಅದು ಇಂದಿನ ಸ್ವರೂಪ ತೆಗೆದುಕೊಳ್ಳಬೇಕಾದರೆ ಹಲವಾರು ಜನರ ಕೊಡುಗೆಯಿದೆ’ ಎಂದು ವಿನೀತರಾಗಿ ಹೇಳುತ್ತ್ತಾರೆ.

ಇದನ್ನೂ ಓದಿ | ಐಸಾಕ್‌ ನ್ಯೂಟನ್‌ ಕ್ಯಾಲ್ಕ್ಯುಲಸ್‌ ಜನಕ ಎಂಬುದು ಅರ್ಧಸತ್ಯವೆ?

ಯಾವುದೇ ಒಂದು ಸಂಶೋಧನೆಗೆ ಹುಟ್ಟಿದ ಹಬ್ಬವನ್ನು ನಿಗದಿ ಮಾಡುವುದು ಕಷ್ಟ.  ಆದರೆ MP3  ತಂತ್ರಜ್ಞಾನದ ಉಗಮದಲ್ಲಿ ಮುಖ್ಯ ಪಾತ್ರ ವಹಿಸಿದ ಜರ್ಮನಿಯ ಫ್ರಾನ್ ಹಾಫರ್ ಸಂಸ್ಥೆ ಜುಲೈ ೧೪ ಈ ತಂತ್ರಜ್ಞಾನದ ಹುಟ್ಟುಹಬ್ಬವೆಂದು ತಿಳಿದು ಸಂಭ್ರಮಪಡುತ್ತಿದೆ.  ಈ ದಿನದಂದು ISO ಸಂಸ್ಥೆಯು ಇದಕ್ಕೆ ಮಾನ್ಯತೆ ನೀಡಿ ISO-11172-3 ಎನ್ನುವ ಹೆಸರಿರುವ ದಾಖಲೆಯಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಬೇಕೆಂದು ಹೇಳಿತು.  ಅದೂ ಅಲ್ಲದೆ, ಇದನ್ನು ಅನುಸರಿಸಿ ಸೃಷ್ಟಿಸುವ ಫೈಲ್ ಗಳೆಲ್ಲವೂ .mp3  ಆಗಿರಬೇಕೆಂದು ನಿರ್ಣಯಿಸಿತು.  ಇಷ್ಟು ಸಾಕಲ್ಲವೇ ಹುಟ್ಟು ಹಬ್ಬ ಆಚರಿಸಲು?