ಸಣ್ಣ ಅವಧಿಯ ವಿಡಿಯೋ ಈಗ ದೊಡ್ಡ ಆಕರ್ಷಣೆ. ಟಿಕ್‌ಟಾಕ್, ವಿಗೋ ಸೇರಿದಂತೆ ಅನೇಕ ಮೊಬೈಲ್ ಅಪ್ಲಿಕೇಷನ್‌ಗಳು ಯುವ ಮನಸ್ಸುಗಳನ್ನು ಸೆಳೆಯುತ್ತಿವೆ. ಈ ಇವುಗಳಿಗೆ ಸ್ಪರ್ಧೆ ಒಡ್ಡಲು ಮತ್ತೊಂದು ಆಪ್ ಕಾಲಿಟ್ಟಿದೆ

ಹೆಸರು- ಫೈರ್ ವರ್ಕ್. ಹುಟ್ಟೂರು- ಅಮೆರಿಕದ ಕ್ಯಾಲಿಫೋರ್ನಿಯಾ. ಜನ್ಮದಾತ- ಲೂಪ್ ನೌ ಟೆಕ್ನಾಲಜೀಸ್ ಎಂಬ ಕಂಪೆನಿ. ಸ್ವರೂಪ- ಸಾಮಾಜಿಕ ಮೊಬೈಲ್ ವೀಡಿಯೊ ಆ್ಯಪ್.

ಯಾರಿಗೆ ಕಿಚ್ಚು ಹಚ್ಚಲು ಇದು ಆ್ಯಪ್ ಪ್ರಪಂಚಕ್ಕೆ ಕಾಲಿರಿಸಿದೆಯೋ ಗೊತ್ತಿಲ್ಲ. ಸದ್ಯಕ್ಕೆ ಟಿಕ್ ಟಾಕ್ ಅಪ್ಲಿಕೇಷನ್ನಿಗೆ ಸಡ್ಡು ಹೊಡೆಯಲು ಮುನ್ನುಗ್ಗುತ್ತಿರುವುದಂತೂ ಸತ್ಯ. ಮಾರುಕಟ್ಟೆ ಪ್ರವೇಶಿಸಿದ ಕೇವಲ ಐದು ತಿಂಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಇದು ಆಕರ್ಷಿಸಿದೆ. ಬೀಟಾ ಅವತರಣಿಕೆಯಲ್ಲಿರುವಾಗಲೇ ಶೇ 200ಕ್ಕೂ ಹೆಚ್ಚು ಪ್ರಗತಿ ಸಾಧಿಸಿದ್ದು ಸಾಮಾನ್ಯ ಮಾತಲ್ಲ ಎಂದು ಆ್ಯಪ್ ಲೋಕದ ಪರಿಣತರಿಂದ ಬೆನ್ನು ತಟ್ಟಿಸಿಕೊಂಡಿದೆ. ಟಿಕ್ ಟಾಕ್ ನ ಇನ್ನೊಂದು ಅವತಾರದಂತಿರುವ ಇದು ತನ್ನದೇ ವಿಶೇಷ ಕಾರಣಗಳಿಗಾಗಿ ಗಮನ ಸೆಳೆಯುತ್ತಿದೆ.
ರಿವೀಲ್ ಹೆಸರಿನ ಪೇಟೆಂಟ್ ಪೆಂಡಿಂಗ್ ತಂತ್ರಜ್ಞಾನವನ್ನು ಬಳಸುತ್ತಿರುವ ಫೈರ್ ವರ್ಕ್, ಮೊಬೈಲ್ ನಲ್ಲಿ ಸೃಷ್ಟಿಯಾದ ವೀಡಿಯೊವನ್ನು ಏಕಕಾಲಕ್ಕೆ ಸಮಾನಾಂತರ ಮತ್ತು ಲಂಬಕೋನದಲ್ಲಿ ನೋಡಲು ಸಹಾಯ ಮಾಡುತ್ತದೆ. ಅಂದರೆ ರೊಟೇಟ್ ಮೋಡ್ ಬಳಸದೆ ಫೋನನ್ನು ದೃಶ್ಯವನ್ನು ತಮಗಿಷ್ಟ ಬಂದ ಕಡೆ ತಿರುಗಿಸಿ ನೋಡಲು ಸಾಧ್ಯವಿದೆ. ಹೀಗಾಗಿ ಫೋನ್ ಹೇಗೆ ಹಿಡಿದಿದ್ದಾರೆ ಎಂಬುದು ಸಮಸ್ಯೆಯಾಗುವುದಿಲ್ಲ.
ಟಿಕ್ ಟಾಕ್ ಕೇವಲ 15 ಸೆಕೆಂಡ್ ಅವಧಿಯ ವೀಡಿಯೊ ಸೃಷ್ಟಿಗೆ ಅವಕಾಶ ನೀಡಿದರೆ ಇಲ್ಲಿ ದುಪ್ಪಟ್ಟು ಅಂದರೆ 30 ಸೆಕೆಂಡ್ ವೀಡಿಯೊ ತಯಾರಿಸಬಹುದು. ಬಹಳ ಬಳಕೆದಾರರು ಮಾರುಹೋಗಿರುವುದು ಈ ಸಮಯಾವಕಾಶದ ಕಾರಣಕ್ಕೆ.
ವೀಡಿಯೊ ಮೇಲೆ ಕಾಮೆಂಟ್ ಮಾಡಲು ಅವಕಾಶ ಇಲ್ಲದಿದ್ದರೂ ವೀಡಿಯೊ ಸೃಷ್ಟಿಸಿದವರಿಗೆ ಕಾಮೆಂಟ್ ಸಂದೇಶಗಳನ್ನು ಖಾಸಗಿಯಾಗಿ ಕಳಿಸಲು ಅವಕಾಶ ಇದೆ. ಇದು ವೀಡಿಯೊ ತಯರಾಕರನ್ನು ಟ್ರೋಲರ್ ಗಳು ಮತ್ತು ದ್ವೇಷಿಸುವವರಿಂದ ತಪ್ಪಿಸಲು ಹೂಡಿರುವ ಉಪಾಯ ಎಂದು ಕಂಪೆನಿ ಹೇಳಿಕೊಂಡಿದೆ.
ನಿಲ್ಲಿಸಿ ಮತ್ತೆ ರೆಕಾರ್ಡ್ ಮಾಡುವ ಅವಕಾಶ, ಬೇರೆ ಬೇರೆ ಭಾಗಗಳನ್ನು ರೀಶೂಟ್ ಮಾಡುವ ಸಾಧ್ಯತೆ ಹಾಗೂ ಸಂಗೀತ ಸೇರ್ಪಡೆಯಂತಹ ಟಿಕ್ ಟಾಕ್ ನಲ್ಲಿರುವ ಕೆಲವು ಫೀಚರ್ ಗಳು ಇದರಲ್ಲೂ ಇವೆ.
ಇದರ ಪ್ರೀಮಿಯಂ ವಿಭಾಗದಲ್ಲಿ ವೃತ್ತಿಪರ ವೀಡಿಯೊಗಳನ್ನು ಕೂಡ ನೋಡಬಹುದು. ಕೆಲವು ಕಂಪೆನಿಗಳು, ಸೆಲೆಬ್ರಿಟಿಗಳು ಸೃಷ್ಟಿಸಿದ ವೀಡಿಯೊಗಳು ಇಲ್ಲಿ ಪ್ಲೇ ಆಗುತ್ತವೆ.
ವೀಡಿಯೊವನ್ನು ಡಬಲ್ ಕ್ಲಿಕ್ ಮಾಡಿದರೆ ಸಾಕು ಅದು ರೀಪೋಸ್ಟ್ ಆಗುತ್ತದೆ. ಲೈಕ್ ಮಾಡುವ ಫೀಚರನ್ನು ಆಪ್ ಬೇಕಂತಲೇ ದೂರವಿಟ್ಟಿದ್ದು ಲೈಕ್ ಮಾಡಿ ಕೈ ತೊಳೆದುಕೊಳ್ಳುವ ಬದಲು ರೀಪೋಸ್ಟ್ ಮಾಡು ಎಂದು ವೀಕ್ಷಕರನ್ನು ಪರೋಕ್ಷವಾಗಿ ಒತ್ತಾಯಿಸುತ್ತದೆ. ಹೆಚ್ಚು ಜನರನ್ನು ತಲುಪುವ ತಂತ್ರಗಾರಿಕೆ ಇದರ ಹಿಂದಿದೆ.
ಲೂಪ್ ನೌ ಟೆಕ್ನಾಲಜೀಸ್ ಇಷ್ಟೆಲ್ಲಾ ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ ಈಗಾಗಲೇ ಜನಪ್ರಿಯವಾಗಿರುವ ಟಿಕ್ ಟಾಕ್ ಸಾಮ್ರಾಜ್ಯದ ಮೇಲೆ ತನ್ನ ಧ್ವಜ ನೆಡುವುದು ಸುಮ್ಮನೆ ಮಾತಲ್ಲ. ಅಲ್ಲದೆ ವಿಮಿಯೊ, ಯೂಟ್ಯೂಬ್ ನಂತಹ ಕಂಪೆನಿಗಳಿಗೂ ಸ್ಪರ್ಧೆ ಒಡ್ಡಬೇಕಿದೆ. ಆನ್ ಲೈನ್ ಪ್ರಪಂಚ ಹೆಚ್ಚು ಹೆಚ್ಚು ವೀಡಿಯೊ ಕೇಂದ್ರಿತವಾಗುತ್ತಿರುವುದು ಕೂಡ ಇನ್ನೊಂದು ಬಗೆಯ ಸವಾಲು. ಸಾಮಾಜಿಕ ವಿಡಿಯೊ ಆಪ್ ಸೃಷ್ಟಿಸುವ ಯಾರಿಗೇ ಆಗಲಿ ಫೇಸ್ಬುಕ್ ರೀತಿಯ ಸಾಮಾಜಿಕ ಜಾಲತಾಣಗಳು ಕೂಡ ಮತ್ತೊಂದು ನೆಲೆಯಲ್ಲಿ ಸವಾಲೆಸೆಯುತ್ತಿರುತ್ತವೆ. ತಂತ್ರಜ್ಞಾನ ನವನವೀನವಾಗಿದ್ದಷ್ಟೂ ತಮ್ಮ ಬೆಲ್ಲಕ್ಕೆ ಇರುವೆ ಕಚ್ಚುವುದು ಖಚಿತ ಎನ್ನುವುದು ಆಪ್ ಲೋಕದ ಎಲ್ಲರೂ ಬಲ್ಲ ಗುಟ್ಟು.
ಭಾರತದತ್ತ ಕಣ್ಣು
ಭಾರತೀಯರು ಪ್ರತಿದಿನ ಸುಮಾರು 170 ನಿಮಿಷಗಳಷ್ಟು ಕಾಲ ಆಪ್ ಗಳಲ್ಲಿ ಕಳೆದು ಹೋಗುತ್ತಾರೆ ಎಂಬುದು ಒಂದು ಮೂಲದ ಮಾಹಿತಿ. ಇತರೆ ಜಾಗತಿಕ ಕಂಪೆನಿಗಳಂತೆ ಫೈರ್ ವರ್ಕ್ ಕೂಡ ಭಾರತದ ಮೇಲೆ ದೃಷ್ಟಿ ನೆಡಲು ಇದೂ ಒಂದು ಕಾರಣ. ಭಾರತದಲ್ಲಿ ಆಲ್ಟ್ ಬಾಲಾಜಿ, ರಿಫೈನರಿ 29 ರೀತಿಯ ಕಂಟೆಂಟ್ ಸೃಷ್ಟಿಸುವ ಕಂಪೆನಿಗಳಿಂದ ವೀಡಿಯೊಗಳನ್ನು ಇದು ಪಡೆಯುತ್ತದೆ. ಭಾರತೀಯ ಬಳಕೆದಾರರಿಗೆಂದೇ ಮುಂಬರುವ ದಿನಗಳಲ್ಲಿ ವಿಶೇಷ ಫೀಚರ್ ಗಳನ್ನು ಆಪ್ ಹೊಂದಲಿದೆಯಂತೆ. ದೇಶವು ಆಪ್ ಡೌನ್ಲೋಡ್ ಪ್ರಿಯರ ನಾಡಾಗಿರುವುದರಿಂದ ತಮ್ಮ ಆಪ್ ಕೂಡ ಬಿಸಿ ದೋಸೆಯಂತೆ ಬಿಕರಿಯಾಗಲಿದೆ ಎಂಬ ವಿಶ್ವಾಸದಲ್ಲಿದೆ ಕಂಪೆನಿ.