ಟಾಮ್‌ಕ್ರೂಸ್‌ ಜೊತೆ ಕೈ ಜೋಡಿಸಿದ ನಾಸಾ; ಬಾಹ್ಯಾಕಾಶ ಕೇಂದ್ರದಲ್ಲಿ ಚಿತ್ರೀಕರಣಗೊಳ್ಳಲಿದೆ ಸಿನಿಮಾ!

ಸಿನಿಪ್ರಿಯರು ಬೆರಗಾಗುವ ಸುದ್ದಿಯೊಂದು ಬಂದಿದೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ, ಅದರಲ್ಲೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ನಾಸಾ ಸಿದ್ಧವಾಗಿದೆ. ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವವರು ಮಿಷನ್‌ ಇಂಪಾಸಿಬಲ್‌ ಖ್ಯಾತಿಯ, ಆಕ್ಷನ್‌ ಹೀರೋ ಟಾಮ್‌ ಕ್ರೂಸ್‌!

ನಾಸಾದ ಆಡಳಿತಾಧಿಕಾರಿ ಜಿಮ್‌ ಬೈಡೆನ್‌ಸ್ಟೈನ್‌ ತಮ್ಮ ಟ್ವಿಟರ್‌ ಖಾತೆಯ ಮೂಲಕ ನೀಡಿರುವ ಹೇಳಿಕೆ ಅಂತರಿಕ್ಷ ಆಸಕ್ತರಿಗೆ, ನಟ ಟಾಮ್‌ಕ್ರೂಸ್‌ ಪ್ರಿಯರಿಗೆ ರೋಮಾಂಚನ ಉಂಟು ಮಾಡಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಟಾಮ್‌ ಕ್ರೂಸ್‌ ಸಿನಿಮಾವೊಂದರ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದು, ಇದಕ್ಕೆ ನಾಸಾ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

ಇದೇ ಮೊದಲ ಬಾರಿಗೆ ಇಂಥದ್ದೊಂದು ಸಾಹಸ ನಡೆಯುತ್ತಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಜಿಮ್‌, ನಾಸಾದ ಈ ಮಹತ್ವಕಾಂಕ್ಷಿ ಯೋಜನೆಯನ್ನು ಸಾಧ್ಯವಾಗಿಸಲು, ಹೊಸ ತಲೆಮಾರಿನ ಎಂಜಿನಿಯರ್‌ ಮತ್ತು ವಿಜ್ಞಾನಿಗಳನ್ನು ಹುರಿದುಂಬಿಸುವುದಕ್ಕಾಗಿ ಹೊಸ ಜನಪ್ರಿಯ ಮಾಧ್ಯಮಗಳು ಬೇಕು ಎಂದಿದ್ದಾರೆ.

ಭೂಮಿಯಿಂದ 400 ಕಿ.ಮೀ. ಎತ್ತರದಲ್ಲಿ ಹಾರಾಡುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಅಂತರಿಕ್ಷದ ಅಧ್ಯಯನದಲ್ಲಿ ಕಳೆದ 20 ವರ್ಷಗಳಿಂದ ಸಕ್ರಿಯವಾಗಿದೆ.

ಅಂತರಿಕ್ಷ ಕೇಂದ್ರದಲ್ಲಿ ಈ ಹಿಂದೆಯೂ ಚಿತ್ರೀಕರಣ ನಡೆದಿದೆ. 2002ರಲ್ಲಿ ಐಮ್ಯಾಕ್ಸ್‌ ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆದಿತ್ತು. ಇದಕ್ಕೆ ಸ್ವತಃ ಟಾಮ್‌ ಕ್ರೂಸ್‌ ದನಿ ನೀಡಿದ್ದರು. 2012ರಲ್ಲಿ ಗಗನಯಾನಿಯೊಬ್ಬರ ಮಗನಾದ ಉದ್ಯಮಿ ರಿಚರ್ಡ್‌ ಗ್ಯಾರಿಯಾಟ್‌ ‘ಅಪೋಗಿ ಆಫ್‌ ಫಿಯರ್‌’ ಹೆಸರಿನ ಸೈಫೈ ಸಿನಿಮಾ ಚಿತ್ರೀಕರಣ ನಡೆಸಿದ್ದರು. ಆದರೆ ಬಾಹ್ಯಾಕಾಶದಲ್ಲಿ ಚಿತ್ರೀಕರಣ ನಡೆಸಲು ಮುಂದಾಗಿರುವ ಮೊದಲ ನಟ ಟಾಮ್‌ ಕ್ರೂಸ್‌.

ಕಳೆದ ವರ್ಷ ಟೆಕ್‌ ಉದ್ಯಮಿ ಎಲಾನ್‌ ಮಸ್ಕ್‌ ಅವರ ಕಂಪನಿ ಸ್ಪೇಸ್‌ ಎಕ್ಸ್‌ ಖಾಸಗಿ ವ್ಯಕ್ತಿಗಳನ್ನು, ಬಾಹ್ಯಾಕಾಶ ಆಸಕ್ತರನ್ನು ಪ್ರವಾಸ ಕರೆದೊಯ್ಯುವ ಯೋಜನೆಯೊಂದನ್ನು ಪ್ರಕಟಿಸಿತ್ತು. ಆಗ ಟಾಮ್‌ ಕ್ರೂಸ್‌ ಅವರ ಚಿತ್ರೀಕರಣದ ಯೋಜನೆಯೂ ಪ್ರಸ್ತಾಪವಾಗಿತ್ತು. ಆದರೆ ಸ್ಪೇಸ್‌ ಎಕ್ಸ್‌ ಉಡಾವಣೆ ವಿಫಲವಾದ ಹಿನ್ನೆಲೆಯಲ್ಲಿ ಚಿತ್ರೀಕರಣ ನಿಧಾನವಾಗಿತ್ತು.

ಇದನ್ನೂ ಓದಿ | ಜಿಯೋದಿಂದ ಆಯ್ತು ಕರೋನಾ ಕುರಿತ ಮಾಹಿತಿ ಸೋರಿಕೆ! ಸಿಮ್‌ಟಮ್‌ ಚೆಕ್ಕರ್‌ ಹಿಂಪಡೆದ ಟೆಲಿಕಾಂ ಸಂಸ್ಥೆ!

ಈಗ ನಾಸಾ ಚಿತ್ರೀಕರಣಕ್ಕೆ ನೆರವಾಗಲು ಮುಂದಾಗಿದ್ದು, ಕುತೂಹಲ ಕೆರಳಿಸಿದೆ. ಚಿತ್ರದ ಬಗ್ಗೆ ಯಾವುದೇ ಮಾಹಿತಿ, ಸುಳಿವು ಸಿಕ್ಕಿಲ್ಲ.

ಟಾಮ್‌ ಕ್ರೂಸ್‌ ತಮ್ಮ ವಿಶಿಷ್ಟ ಸಾಹಸ ಪ್ರಧಾನ ಚಿತ್ರಗಳ ಮೂಲಕ ಜನಪ್ರಿಯರಾಗಿದ್ದು, ಇನ್ನೆರಡು ಆಕ್ಷನ್ ಚಿತ್ರಗಳ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಟಾಪ್‌ ಗನ್‌ ಮ್ಯಾವರಿಕ್‌ ಮತ್ತು ಮಿಷನ್‌ ಇಂಪಾಸಿಬಲ್‌ 7 ಬಿಡುಗಡೆಯಾಗಬೇಕಿರುವ ಚಿತ್ರಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.