ಕ್ಯಾಮ್‌ಸ್ಕ್ಯಾನರ್‌ ಇಲ್ಲದಿದ್ದರೇನಂತೆ! 5 ಪರ್ಯಾಯ ಆ್ಯಪ್‌ಗಳು ಇಲ್ಲಿವೆ

ಕ್ಯಾಮ್‌ಸ್ಕ್ಯಾನರ್‌ ಅದ್ಭುತವಾದ ಸ್ಕ್ಯಾನಿಂಗ್‌ ಆ್ಯಪ್‌ ಆಗಿತ್ತು. ಆದರೆ ಮಾಲ್‌ವೇರ್‌ ಕಾರಣಕ್ಕೆ ಗೂಗಲ್‌ ಪ್ಲೇ ಸ್ಟೋರ್‌ನಿಂದ ಹೊರ ಹಾಕಿಸಿಕೊಂಡ ಮೇಲೆ, ನೀವು ಅಂಥದ್ದೇ ಒಂದು ಆ್ಯಪ್‌ಗಾಗಿ ಹುಡುಕುತ್ತಿರಬಹುದು. ಇರುವ ಹಲವು ಆ್ಯಪ್‌ಗಳಲ್ಲಿ ಯಾವುದು ಉತ್ತಮ ಎಂದು ಯೋಚಿಸುತ್ತಿರುವುದು. ಇದೋ ಇಲ್ಲಿವೆ ಕ್ಯಾಮ್‌ಸ್ಕ್ಯಾನ್‌ಗೆ ಪರ್ಯಾಯವಾದ ಐದು ಆ್ಯಪ್‌ಗಳು

1 ಅಡೋಬ್‌ ಸ್ಕ್ಯಾನ್‌

ಅಡೋಬ್‌ ಸಂಸ್ಥೆಯ ಅಭಿವೃದ್ಧಿಪಡಿಸಿರುವ ಅಡೋಬ್‌ ಸ್ಕ್ಯಾನ್‌ ಹಲವು ಫೀಚರ್‌ಗಳಿರುವ ಆ್ಯಪ್‌. ದಾಖಲೆಗಳು, ರಸೀದಿಗಳು, ಐಡಿ ಕಾರ್ಡ್‌ಗಳನ್ನು ಅಥವಾ ಯಾವುದೇ ಕಾಗದ ಪತ್ರವನ್ನು ಸುಲಭವಾಗಿ ಸ್ಕ್ಯಾನ್‌ ಮಾಡಬಹುದು. ಸ್ಕ್ಯಾನ್‌ ಮಾಡುತ್ತಿದ್ದಂತೆ ಯಾವ ರೀತಿಯ ದಾಖಲೆ ಎಂಬುದನ್ನು ಸ್ವತಃ ಗುರುತಿಸುವ ಈ ಆ್ಯಪ್‌ ತಾನೇ ಜಾಣ್ಮೆಯಿಂದ ಕ್ರಾಪ್‌ ಕೂಡ ಮಾಡಬಲ್ಲದು. ಜೊತೆಗೆ ಸ್ಕ್ಯಾನ್‌ ಆದ ಇಮೇಜ್‌ ಗುಣಮಟ್ಟವನ್ನು ಹೆಚ್ಚಿಸುವ ಅವಕಾಶಗಳು ಇದರಲ್ಲಿವೆ. ಇದರಲ್ಲಿ ಒಸಿಆರ್‌ ತಂತ್ರಜ್ಞಾನವೂ ಇದ್ದು, ಸ್ಕ್ಯಾನ್‌ ಮಾಡಲಾದ ದಾಖಲೆಯನ್ನು ಅಕ್ಷರ ರೂಪದಲ್ಲಿ ಪರಿವರ್ತಿಸಿಕೊಡಬಲ್ಲದು. ಸ್ಕ್ಯಾನ್‌ ಆದ ದಾಖಲೆಯನ್ನು ಜೆಪಿಜಿ ಅಥವಾ ಪಿಡಿಎಫ್ ರೂಪದಲ್ಲಿ ಪಡೆದುಕೊಳ್ಳಬಹುದು. ಜೊತೆಗೆ ಯಾವುದೇ ವಾಟರ್‌ ಮಾರ್ಕ್‌ನ ರಗಳೆಯೂ ಇಲ್ಲ.

2. ಸ್ಕ್ಯಾನ್‌ಬಾಟ್‌

ಇದು ಬಹಳಷ್ಟು ಕ್ಯಾಮ್‌ಸ್ಕ್ಯಾನರ್‌ನ ಫೀಚರ್‌ಗಳನ್ನು ಹೊಂದಿದೆ. ಎಲ್ಲ ರೀತಿಯ ದಾಖಲೆಗಳನ್ನು ಸ್ಕ್ಯಾನ್‌ ಮಾಡುತ್ತದೆ. ಜೊತೆಗೆ ಸ್ಕ್ಯಾನ್‌ ಮಾಡಲಾದ ದಾಖಲೆಯ ತುದಿಗಳನ್ನು ಸಮಪರ್ಕವಾಗಿ ಗುರುತಿಸಿ ಕ್ರಾಪ್‌ ಮಾಡುತ್ತದೆ. ಒಸಿಆರ್‌, ಡಾಕ್ಯುಮೆಂಟ್‌ ಎಡಿಟಿಂಗ್‌ ಮತ್ತು ಅನ್ನೋಟೇಷನ್‌ಗೂ ಅವಕಾಶವಿದೆ. ಅಷ್ಟೇ ಅಲ್ಲ, ದಾಖಲೆಯಲ್ಲಿರುವ ಪದಗಳನ್ನು ಆಧರಿಸಿ ಸಂಬಂಧಪಟ್ಟ ಫೈಲ್‌ಗಳನ್ನು ಸರ್ಚ್‌ ಮಾಡಬಲ್ಲದು.

3. ಮೈಕ್ರೋಸಾಫ್ಟ್‌ ಆಫೀಸ್‌ ಲೆನ್ಸ್‌

ಇದು ಡಾಕ್ಯುಮೆಂಟ್‌ ಸ್ಕ್ಯಾನರ್‌ ಅಷ್ಟೇ ಅಲ್ಲ. ಇದು ಕೈಬರಹಗಳನ್ನು, ವೈಟ್‌ಬೋರ್ಡ್‌ ಟೇಬಲ್‌ಗಳನ್ನು ಮತ್ತು ಚಿತ್ರಗಳನ್ನು ಓದಲು ಅನುಕೂಲವಾಗುವಂತೆ ಸ್ಕ್ಯಾನ್‌ ಮಾಡುತ್ತದೆ. ಅಷ್ಟೇ ಅಲ್ಲ ಇವುಗಳನ್ನು ವರ್ಡ್‌, ಪವರ್‌ ಪಾಯಿಂಟ್‌ ಡಾಕ್ಯುಮೆಂಟ್‌ಗಳಾಗಿ ಎಕ್ಸ್‌ಪೋರ್ಟ್‌ ಮಾಡಿಕೊಳ್ಳಬಹುದು. ಇನ್ನು ಉಳಿದ ಸ್ಕ್ಯಾನರ್‌ಗಳಂತೆ ಎಲ್ಲ ರೀತಿಯ ಡಾಕ್ಯುಮೆಂಟ್‌ಗಳನ್ನು ಇದು ಸ್ಕ್ಯಾನ್‌ ಮಾಡಬಲ್ಲದು. ಅಷ್ಟೇ ಅಲ್ಲ, ಒನ್‌ನೊಟ್‌ ಥರದ ಕ್ಲೌಡ್‌ ನಿಂದಲೂ ಡಾಕ್ಯುಮೆಂಟ್‌ಗಳನ್ನು ಪಿಡಿಎಫ್‌ ರೂಪದಲ್ಲಿ ಎಕ್ಸ್‌ಪೋರ್ಟ್‌ ಮಾಡಿಕೊಡಬಲ್ಲದು.

4. ಎವರ್‌ ನೋಟ್‌ ಸ್ಕ್ಯಾನಬಲ್‌

ನೀವು ಐಫೋನ್‌ ಅಥವಾ ಐಪ್ಯಾಡ್‌ ಬಳಕೆದಾರರಾದರೆ ಈ ಆ್ಯಪ್‌ ಉತ್ತಮ ಆಯ್ಕೆ. ಇದೂ ಕ್ಯಾಮ್‌ಸ್ಕ್ಯಾನರ್‌ನಂತೆ ಯಾವುದೇ ನೋಟ್ಸ್‌, ಬಿಸಿನೆಸ್‌ ಕಾರ್ಡ್‌, ರಸೀದಿಗಳು ಅಥವಾ ಯಾವುದೇ ದಾಖಲೆ ಪತ್ರಗಳನ್ನು ಸ್ಪಷ್ಟವಾಗಿ ಸ್ಕ್ಯಾನ್‌ ಮಾಡುತ್ತದೆ. ಸ್ವತಃ ದಾಖಲೆಯ ತುದಿಗಳನ್ನು ಗುರುತಿಸಿ ಕ್ರಾಪ್‌ ಮಾಡುತ್ತದೆ. ಸ್ಕ್ಯಾನ್‌ ಮಾಡಿದ ದಾಖಲೆಗಳನ್ನು ನಿಮ್ಮ ಕ್ಯಾಮೆರಾ ಫೋಲ್ಡರ್‌ನಲ್ಲಿ ಸೇವ್‌ ಮಾಡಿಕೊಳ್ಳಬಹುದು ಅಥವಾ ಪಿಡಿಎಫ್‌ ಆಗಿ ಎಕ್ಸ್‌ಪೋರ್ಟ್‌ ಮಾಡಬಹುದು. ಜೊತೆಗೆ ಈಮೇಲ್‌ ಮಾಡಿಕೊಳ್ಳುವುದಕ್ಕೂ ಅವಕಾಶವಿದೆ.

5. ಗೂಗಲ್‌ ಡ್ರೈವ್‌

ನಿಮಗೆ ಅಚ್ಚರಿಯೇನೊ. ಆದರೆ ಗೂಗಲ್‌ ಡ್ರೈವ್‌ ಬಿಲ್ಟ್‌ ಇನ್‌ ಸ್ಕ್ಯಾನರ್‌ ಆ್ಯಪ್‌ ಇದೆ. ನೀವು ಆ್ಯಪ್‌ ನಲ್ಲಿರುವ ಪ್ಲಸ್‌ ಬಟನ್‌ ಒತ್ತಿ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್‌ ಮಾಡಬಹುದು. ಇದು ಕ್ಯಾಮ್‌ಸ್ಕ್ಯಾನರ್‌ನಂತೆ ಹಲವು ಫೀಚರ್‌ಗಳನ್ನು ಹೊಂದಿರುವ ಆ್ಯಪ್‌ ಅಲ್ಲದಿದ್ರು, ಸುಲಭವಾಗಿ ಸ್ಕ್ಯಾನ್‌ ಮಾಡಿ, ಗೂಗಲ್‌ ಡ್ರೈವ್‌ಗೆ ಅಪ್‌ಲೋಡ್‌ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ. ಗೂಗಲ್‌ ಡ್ರೈವರ್‌ ಸೂಚಿಸುವುದಕ್ಕೆ ಇನ್ನೊಂದು ಕಾರಣ, ಸ್ಕ್ಯಾನ್‌ ಮಾಡಲಾದ ದಾಖಲೆಗಳು ಸುರಕ್ಷಿತವಾಗಿ ಸೇವ್‌ ಮಾಡಿಟ್ಟುಕೊಳ್ಳುವ ಅವಕಾಶವೂ ಇರುವುದು.

%d bloggers like this: