ಒಂದು ದಿನದ ಅವಧಿಗೆ ಇರುವ ಪೋಸ್ಟ್‌ಗಳು ಭಿನ್ನ ಹೆಸರುಗಳಲ್ಲಿ ಎಲ್ಲ ಸೋಷಿಯಲ್ ಮೀಡಿಯಾ ಆಪ್‌ಗಳಲ್ಲಿ ಲಭ್ಯ ಇವೆ. ಈಗ ಟ್ವಿಟರ್ ಸರದಿ. ಫ್ಲೀಟ್ ಹೆಸರಿನಲ್ಲಿ ಸ್ಟೋರಿ ಪೋಸ್ಟ್ ಮಾಡುವ ಅವಕಾಶ ನೀಡಿದೆ

ಫೇಸ್‌ಬುಕ್ ಆಯ್ತು, ಮೆಸೆಂಜರ್ ಆಯ್ತು, ವಾಟ್ಸ್ ಆಪ್ ಆಯ್ತು, ಇನ್‌ಸ್ಟಾಗ್ರಾಮ್ ಆಯ್ತು. ಈಗ ಟ್ವಿಟರ್ ಸರದಿ. ಒಂದು ದಿನವಿದ್ದು ಕಣ್ಮರೆಯಾಗುವ ಸ್ಟೋರಿ ಮಾದರಿಯ ಫೀಚರ್‌ವೊಂದನ್ನು ಟ್ವಿಟರ್ ಪರಿಚಯಿಸಿದೆ.
ಫ್ಲೀಟ್ ಎಂದು ಕರೆದಿರುವ ಈ ಫೀಚರ್ ಟ್ವೀಟ್‌ಗಳಂತೆ ಸಾರ್ವಜನಿಕರಿಗೆ ಕಾಣಿಸುವುದಿಲ್ಲ. ನಿಮ್ಮನ್ನು ಫಾಲೋ ಮಾಡುವವರಿಗೆ ಮಾತ್ರ ಕಾಣಿಸುತ್ತದೆ. ಈ ಫ್ಲೀಟ್‌ನಲ್ಲಿ ಅಕ್ಷರಗಳ ಜೊತೆಗೆ, ಫೋಟೋ, ವಿಡಿಯೋ, ಜಿಫ್‌ಗಳನ್ನು ಪೋಸ್ಟ್ ಮಾಡಬಹುದು.
ಈ ಫ್ಲೀಟ್‌ಗಳನ್ನು ನೋಡಬಹುದು. ಲೈಕ್ ಮಾಡಲಾಗುವುದಿಲ್ಲ, ರೀ ಟ್ವೀಟ್ ಮಾಡಲು ಕೂಡ ಅವಕಾಶವಿಲ್ಲ. ಒಂದು ವೇಳೆ ಪ್ರತಿಕ್ರಿಯಿಸುವ ಇಚ್ಛೆ ಇದ್ದರೆ, ಫ್ಲೀಟ್ ಮಾಡಿದವರಿಗೆ ಡೈರೆಕ್ಟ್ ಮೆಸೇಜ್ ಮಾಡಬಹುದು.
ಸಾಮಾನ್ಯವಾಗಿ ಟ್ವೀಟ್‌ಗಳು ಸಾರ್ವಜನಿಕ. ಎಲ್ಲರೂ ನೋಡಬಹುದು. ಅಲ್ಲದೆ ಶಾಶ್ವತವಾಗಿ ಉಳಿಯುತ್ತವೆ. ಹಾಗಾಗಿ ಕೆಲವರಿಗೆ ಸಣ್ಣ ಪುಟ್ಟ ಹಾಗೂ ಸಾಂದರ್ಭಿಕ ವಿಚಾರಗಳನ್ನು ಟ್ವೀಟ್ ರೂಪದಲ್ಲಿ ಹಂಚಿಕೊಳ್ಳುವುದಕ್ಕೆ ಇಷ್ಟವಿರುವುದಿಲ್ಲ. ಅಂತಹ ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ ಫ್ಲೀಟ್ ಅನ್ನು ಪರಿಚಯಿಸಿರುವುದಾಗಿ ಟ್ವಿಟರ್ ಹೇಳಿದೆ.
ಬ್ರೆಜಿಲ್‌ನಲ್ಲಿ ಪ್ರಯೋಗ ಆರಂಭಿಸಿದ ಟ್ವಿಟರ್, ಇಟಲಿಯಲ್ಲಿ ಹಾಗೂ ಈಗ ಭಾರತದ ಬಳಕೆದಾರರಿಗೆ ಈ ಫೀಚರ್‌ಅನ್ನು ಪರಿಚಯಿಸಿದೆ. ನಿಧಾನವಾಗಿ ಉಳಿದ ದೇಶಗಳಿಗೂ ಪರಿಚಯಿಸುವ ಉದ್ದೇಶ ಅದಕ್ಕಿದೆ.
ಈಗಾಗಲೇ ಹಲವು ಕಾರಣಗಳಿಗೆ ರಾಜಕೀಯ ಚರ್ಚೆಯ ಕೇಂದ್ರವಾಗಿರುವ ಟ್ವಿಟರ್, ಈ ಫೀಚರ್ ಪರಿಚಯಿಸುವ ಮೂಲಕ ಹೊಸದೊಂದು ವಿವಾದ ಅಥವಾ ಸವಾಲನ್ನು ಮೈಮೇಲೆ ಎಳೆದುಕೊಂಡಿದೆ ಎನ್ನಿಸುತ್ತದೆ.
ಸುಳ್ಳು ಸುದ್ದಿ ಹರಡಲು ಹೊಸ ಅವಕಾಶ?!
ಕಳೆದ ಐದಾರು ವರ್ಷಗಳಲ್ಲಿ ಟ್ವಿಟರ್ ಜಗತ್ತಿನ ಪ್ರಮುಖ ದೇಶಗಳ ರಾಜಕೀಯ ಬದಲಾವಣೆಗಳಲ್ಲಿ ಪ್ರಮುಖ ಪಾತ್ರವಹಿಸಿದೆ. ಒಂದೆಡೆ ರಾಜಕೀಯ ಹುರಿಯಾಳುಗಳು ತಮ್ಮ ಉದ್ದೇಶ ಅಥವಾ ದುರುದ್ದೇಶಗಳ ಸಾಧನೆಗೆ ಟ್ವಿಟರ್ ಅನ್ನು ಸಮರ್ಥವಾಗಿ ಬಳಸಿದ್ದಾರೆ. ಟ್ರಂಪ್ ಆಯ್ಕೆ ಈಗ ಹೆಚ್ಚು ಉಲ್ಲೇಖಿಸಲಾಗುವ ವಿದ್ಯಮಾನ.
ಇನ್ನೊಂದೆಡೆ ಅಧಿಕಾರಸ್ಥರನ್ನು ಹೊಣೆಗಾರರನ್ನಾಗಿಸುವ, ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ವೇದಿಕೆಯಾಗಿಯೂ ಟ್ವಿಟರ್ ಬಳಕೆಯಾಗಿದೆ. ಆದರೆ ಸುಳ್ಳು ಸುದ್ದಿ ಹರಡುವ, ತಪ್ಪು ಮಾಹಿತಿಯನ್ನು ಬಿತ್ತುವ ವಿಷಯದಲ್ಲಿ ಟ್ವಿಟರ್ ಬಳಕೆಯಾಗಿರುವ ರೀತಿ ಮತ್ತು ಅದರ ಪರಿಣಾಮಗಳು ಆಘಾತಕಾರಿ.
ಈ ಹಿನ್ನೆಲೆಯಲ್ಲಿ 24 ಗಂಟೆಗಳಲ್ಲಿ ಅದೃಶ್ಯವಾಗುವ ಫ್ಲೀಟ್ ಯಾರನ್ನೂ ಹೊಣೆಗಾರರನ್ನಾಗಿ ಮಾಡುವ ಅವಕಾಶವನ್ನೇ ನೀಡುವುದಿಲ್ಲ ಎಂಬ ವಾದ ಕೇಳಿ ಬರುತ್ತಿದ್ದು, ಟ್ವಿಟರ್ ಈ ಹೊಸ ನಡೆಯನ್ನು ಟೀಕಿಸಲಾಗುತ್ತಿದೆ.
ದ್ವೇಷಕಾರುವ, ಸುಳ್ಳುಗಳನ್ನು ಹರಡುವ ಶಕ್ತಿಗಳಿಗೆ ಇದೊಂದು ಅಸ್ತ್ರವಾಗಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್‌ನ ಟ್ವಿಟರ್‌ಪೋಸ್ಟ್‌ಗಳನ್ನು ಅಂದರೆ ಟ್ವೀಟ್‌ಗಳನ್ನು ಅಧಿಕೃತ ಹೇಳಿಕೆಗಳು ಎಂದು ಘೋಷಿಸಿದ್ದರು. ಟ್ವಿಟರ್ ಇಷ್ಟು ಅಧಿಕೃತವಾಗಿ ಬಳಕೆಯಾಗುತ್ತಿರುವ ಕಾಲದಲ್ಲಿ ಫ್ಲೀಟ್‌ನಂತಹ ಫೀಚರ್ ತೆರೆದಿಡುವ ಅವಕಾಶ ಮತ್ತು ತಂದೊಡ್ಡುವ ಅಪಾಯಗಳನ್ನು ಊಹಿಸಿಕೊಳ್ಳುವುದು ಕಷ್ಟ.
ತನ್ನನ್ನು ತಾನು ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದಕ್ಕೆ ಟ್ವಿಟರ್‌ಗೆ ಈ ಹೊಸ ಫೀಚರ್ ಸುಲಭ ಅವಕಾಶವನ್ನು ನೀಡುತ್ತದೆ. ಅಮೆರಿಕದ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಎಲ್ಲ ಸೋಷಿಯಲ್ ಆಪ್‌ಗಳಿರುವ ಸ್ಟೋರಿ ಮಾದರಿಯ ಫೀಚರ್ ಅನ್ನು ಪರಿಚಯಿಸುತ್ತಿರುವುದರ ಉದ್ದೇಶವೇನು ಎಂಬ ಪ್ರಶ್ನೆಗೆ ಕಾರಣವಾಗಿದೆ.