ಪುನರಾರಂಭವಾದ ಟ್ವಿಟರ್ ವೆರಿಫಿಕೇಶನ್ ಬ್ಯಾಡ್ಜ್ ಸೇವೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಅತ್ಯಂತ ಜನಪ್ರಿಯವಾದ ಮೈಕ್ರೊ ಬ್ಲಾಗಿಂಗ್‌ ತಾಣ ಟ್ವಿಟರ್‌, ತಮ್ಮ ಬಳಕೆದಾರರ ಖಾತೆಗಳನ್ನು ವೆರಿಫೈ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದೆ. ಯಾರಿಗೆ ಈ ಅವಕಾಶ ಸಿಗಲಿದೆ? ಏನು ಮಾಡಬೇಕು?

ಟರ್ ಬಳಕೆದಾರರು ಕಾತುರದಿಂದ ಕಾಯುತ್ತಿದ್ದ ‘verification badge’ ಸೇವೆ ಮತ್ತೆ ಚಾಲ್ತಿಗೆ ತರಲು ಟ್ವಿಟರ್ ನಿರ್ಧರಿಸಿದೆ. 2017ರಲ್ಲಿ ಈ ಪ್ರಕ್ರಿಯೆಯ ಮೂಲ ಮಾದರಿಯನ್ನು ವಜಾಗೊಳಿಸಿದ್ದ ಟ್ವಿಟರ್, ಈಗ ಹೊಸ ನೀತಿಯೊಂದಿಗೆ ಮತ್ತೆ ವೆರಿಫೈಡ್ ಅಕೌಂಟ್ ಬ್ಯಾಡ್ಜ್ ನೀಡಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ಈ ಬ್ಯಾಡ್ಜ್ ಪಡೆಯಲು ಎಲ್ಲಾ ಟ್ವಿಟರ್ ಬಳಕೆದಾರರು ಅರ್ಜಿಯನ್ನು ಸಲ್ಲಿಸುವ ಅವಕಾಶವಿರಲಿದೆ.

ಆರು ಕೆಟಗರಿಗಳಿಗೆ ಮಾತ್ರ ಈ ಬಾರಿ ವೆರಿಫೈಡ್ ಎಂಬ ಬ್ಯಾಡ್ಜ್ ನೀಡಲು ಟ್ವಿಟರ್ ನಿರ್ಧರಿಸಿದೆ.

  1. ಸರ್ಕಾರ: ಸರ್ಕಾರದಲ್ಲಿ ಉನ್ನತ ಹಂತದಲ್ಲಿರುವ ಸಚಿವರು, ಅಧಿಕಾರಿಗಳು, ರಾಯಭಾರಿಗಳು, ಅಧಿಕೃತ ವಕ್ತಾರರು ಸೇರಿದಂತೆ ರಾಜ್ಯ ಅಥವಾ ರಾಷ್ಟ್ರದ ಉನ್ನತ ಮಟ್ಟದ ಅಧಿಕಾರಿಗಳು ಈ ಕೆಟಗರಿ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.
  2. ಖಾಸಗಿ ಕಂಪೆನಿಗಳು, ಬ್ರಾಂಡ್ ಅಥವಾ ಸಂಸ್ಥೆ: ಪ್ರಮುಖ ಸಂಸ್ಥೆಗಳ ಟ್ವಿಟರ್ ಖಾತೆಗಳು ಮತ್ತು ಆ ಖಾತೆಗಳಿಗೆ ಹೊಂದಿಕೊಂಡಿರುವ ಇತರ ಖಾತೆಗಳು ಕೂಡಾ ಈ ಬ್ಯಾಡ್ಜ್ ಪಡೆಯಲು ಅರ್ಹವಾಗಿವೆ. ಖಾಸಗಿ ಕಂಪೆನಿ, ಬ್ರಾಂಡ್, ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಈ ಸಂಸ್ಥೆಗಳ ಪದಾಧಿಕಾರಿಗಳು ಕೂಡಾ ಅರ್ಜಿ ಸಲ್ಲಿಸಬಹುದು.
  3. ಮಾಧ್ಯಮ ಮತ್ತು ಪತ್ರಕರ್ತರು: ಮಾಧ್ಯಮ ಸಂಸ್ಥೆಗಳ ಅಧಿಕೃತ ಟ್ವಿಟರ್ ಖಾತೆ ಹಾಗೂ ಈಗಾಗಲೇ ವೆರಿಫೈಡ್ ಬ್ಯಾಡ್ಜ್ ಹೊಂದಿರುವ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಬ್ಯಾಡ್ಜ್ ಪಡೆಯಬಹುದು. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು, ಈಗಾಗಲೇ ಬ್ಯಾಡ್ಜ್ ಪಡೆದಿರುವ ಮಾಧ್ಯಮ ಸಂಸ್ಥೆಗಳಲ್ಲಿ ಪ್ರಕಟವಾಗಿರುವ ಕನಿಷ್ಟ ಮೂರು ಬೈಲೈನ್ ಗಳನ್ನು ಆಧಾರವಾಗಿಟ್ಟುಕೊಂಡು ಅರ್ಜಿ ಸಲ್ಲಿಸಬಹುದು.
  4. ಕ್ರೀಡೆ ಮತ್ತು ಗೇಮಿಂಗ್: ವೃತ್ತಿಪರ ಕ್ರೀಡಾಪಟುಗಳ ವೈಯಕ್ತಿಕ ಖಾತೆಗಳು, ತಂಡಗಳ ಅಧಿಕೃತ ಖಾತೆಗಳು, ಜಾಗತಿಕ ಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಈ ಕೆಟಗರಿ ಅಡಿಯಲ್ಲಿ ಬ್ಯಾಡ್ಜ್ ಪಡೆಯಲು ಅರ್ಹರಾಗಿರುತ್ತಾರೆ. ಕಾಲೇಜು, ಯೂನಿವರ್ಸಿಟಿ ಹಂತಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಟ್ವಿಟರ್ ಸ್ಪಷ್ಟಪಡಿಸಿದೆ.
  5. ಮನೋರಂಜನೆ: ಮನೋರಂಜನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಜನಪ್ರಿಯ ಆ್ಯಂಕರ್ ಗಳು, ನಟರು, ನಟಿಯರು, ಟಿವಿ ಚಾನೆಲ್ ಗಳು, ಫಿಲ್ಮ್ ಸ್ಟುಡಿಯೋಗಳು, ಮ್ಯೂಸಿಕ್ ಲೇಬಲ್ ಗಳ ಟ್ವಿಟರ್ ಖಾತೆಗಳು ಈ ಕೆಟಗರಿ ಅಡಿಯಲ್ಲಿ ಬ್ಯಾಡ್ಜ್ ಪಡೆಯಲು ಅರ್ಹರಾಗಿರುತ್ತಾರೆ.
  6. ಸಾಮಾಜಿಕ ಕಾರ್ಯಕರ್ತರು ಮತ್ತು ಇತರ ಪ್ರಮುಖ ವ್ಯಕ್ತಿಗಳು: ಮೇಲೆ ಗುರುತಿಸಲಾದ ಕೆಟಗರಿಗಳಿಗೆ ಸೇರದ ಸಮಾಜದ ಇತರ ಪ್ರಮುಖ ನಾಯಕರು ಈ ಕೆಟಗರಿ ಅಡಿಯಲ್ಲಿ ಬ್ಯಾಡ್ಜ್ ಪಡೆಯಬಹುದು. ಸಮಾಜದಲ್ಲಿ ಜಾಗೃತಿ ಮೂಡಿಸುವ, ಸಾಮಾಜಿಕ ಹಿತಕ್ಕಾಗಿ ಸಮುದಾಯವನ್ನು ಒಗ್ಗೂಡಿಸುವ, ಸಾಮಾಜಿಕ, ಆರ್ಥಿಕ, ರಾಜಕೀಯ ಅಥವಾ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬದಲಾವಣೆ ತರುವಂತಹ ನಾಯಕರು ಈ ಕೆಟಗರಿ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ವೆರಿಫೈಡ್ ನೀಡುವ ಪ್ರಕ್ರಿಯೆಗೆ ಟ್ವಿಟರ್ ಚಾಲನೆ ನೀಡಿದೆಯಾದರೂ, ಎಲ್ಲರಿಗೂ ಒಮ್ಮೆಗೆ ಈ ಸೇವೆ ಲಭ್ಯವಾಗದೇ ಇರಬಹುದು. ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಟ್ವಿಟರ್ ಜಾಗತಿಕ ಮಟ್ಟದಲ್ಲಿ ಈ ಸೇವೆಯನ್ನು ಮತ್ತೆ ತೆರೆದಿರುವುದರಿಂದ, ಹಂತ ಹಂತವಾಗಿ ತನ್ನ ಗ್ರಾಹಕರಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಿದೆ. ಒಂದು ವೇಳೆ ನಿಮಗೆ ಈಗ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ, ಕೆಲವು ದಿನಗಳ ನಂತರ ಮತ್ತೊಮ್ಮೆ ಪರಿಶೀಲಿಸುವ ವ್ಯವಧಾನವನ್ನು ಇಟ್ಟುಕೊಳ್ಳಿ.

ನಿಮ್ಮ ಟ್ವಿಟರ್ ಖಾತೆಯ Account Settings ನಲ್ಲಿ Account Information ಆಯ್ಕೆ ಮಾಡಿಕೊಳ್ಳಿ. ಅದರ ನಂತರ ಅಲ್ಲಿ ಕಾಣುವಂತಹ Verification Request ಆಯ್ಕೆ ನಿಮಗೆ ಲಭ್ಯವಾಗಿದ್ದರೆ ಅದನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು. ನೀವು ಯಾವ ಕೆಟಗರಿ ಅಡಿಯಲ್ಲಿ ಬರುತ್ತೀರಿ ಎಂಬುದನ್ನು ಆಯ್ಕೆ ಮಾಡಿಕೊಮಡು ನಿಮ್ಮ ಗುರುತಿನ ದಾಖಲೆಗಳನ್ನು ಒದಗಿಸಬೇಕು. ನಿಮ್ಮ ಅರ್ಜಿ ಸ್ವೀಕೃತವಾದ ನಂತರ ಟ್ವಿಟರ್ ಅಧಿಕೃತವಾಗಿ ಒಮದು ಈ-ಮೈಲ್ ಅನ್ನು ನಿಮಗೆ ಕಳುಹಿಸಲಿದೆ.

ಈ ಪ್ರಕ್ರಿಯೆಗಳು ಪೂರ್ಣಗೊಂಡ ಕೆಲವು ದಿನ ಅಥವಾ ಕೆಲವು ವಾರಗಳ ನಂತರ ನಿಮ್ಮ ಅರ್ಜಿ ಪರಿಶೀಲನೆಗೆ ಒಳಪಡುತ್ತದೆ (ಒಟ್ಟು ಅರ್ಜಿಗಳ ಸಂಖ್ಯೆಯ ಆಧಾರದ ಮೇಲೆ ಈ ಸಮಯ ನಿಗಧಿಯಾಗುತ್ತದೆ). ನಿಮ್ಮ ಅರ್ಜಿ ಸ್ವೀಕೃತವಾಗಿದ್ದರೆ ನಿಮ್ಮ ಟ್ವಿಟರ್ ಖಾತೆಯ ಮುಂದೆ ನೀಲಿ ಬಣ್ಣದ ವೆರಿಫಿಕೇಶನ್ ಬ್ಯಾಡ್ಜ್ ಕಾಣಿಸುತ್ತದೆ. ಒಂದು ವೇಳೆ ನಿಮ್ಮ ಅರ್ಜಿ ತಿರಸ್ಕೃತವಾಗಿದೆಯೆಂದು ಟ್ವಿಟರ್ ಅಧಿಕೃತವಾಗಿ ಹೇಳಿದರೆ, ಒಂದು ತಿಂಗಳ ನಂತರ ನೀವು ಮತ್ತೆ ಅರ್ಜಿ ಸಲ್ಲಿಸಬಹುದು.

ಈ ಬಾರಿ ತಮ್ಮ ನೀತಿಗಳಲ್ಲಿ ಟ್ವಿಟರ್ ಬದಲಾವಣೆಗಳನ್ನು ತಂದಿದ್ದು, ವೆರಿಫಿಕೇಶನ್ ಬ್ಯಾಡ್ಜ್ ಪಡೆದು ನಿಷ್ಕ್ರೀಯವಾಗಿರುವ ಖಾತೆಗಳ ಬ್ಯಾಡ್ಜ್ ವಾಪಾಸ್ ಪಡೆಯಲು ನಿರ್ಧರಿಸಿದೆ.ಇದರೊಂದಿಗೆ ಸದ್ಯದ ಮಟ್ಟಿಗೆ ಈ ಸೇವೆ ಕೆಲವು ಸಮಯಕ್ಕೆ ಮಾತ್ರ ಸೀಮಿತವಾಗಿಲಿದ್ದು, ಟ್ವಿಟರ್ ಅಧಿಕೃತ ವಕ್ತಾರರ ಹೇಳಿಕೆಯ ಪ್ರಕಾರ, ಈ ವರ್ಷಾಂತ್ಯದಲ್ಲಿ ಇನ್ನು ಹೆಚ್ಚಿನ ಕೆಟಗರಿಗಳನ್ನು ಸೇರಿಸುವ ಆಲೋಚನೆ ಇದೆ.

ಮುಂಬರುವ ವೆರಿಫಿಕೇಶನ್ ಬ್ಯಾಡ್ಜ್ ಅರ್ಜಿ ವಿಧಾನಗಳಲ್ಲಿ, ವಿಜ್ಞಾನಿಗಳು, ಶಿಕ್ಷಣ ತಜ್ಞರು, ಧಾರ್ಮಿಕ ಮುಖಂಡರು ಸೇರಿದಂತೆ ಇತರರಿಗೂ ಅವಕಾಶ ನೀಡುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: