ನಾಳೆಯಿಂದ ಮೈಸೂರಿನಲ್ಲಿ ವಿಜ್ಞಾನ ಸಂವಹನ ಕುರಿತ ರಾಜ್ಯ ಸಮ್ಮೇಳನ

ಮೈಸೂರಿನ ಸಿಎಫ್‌ಟಿಆರ್‌ಐ, ಸ್ವಾಮಿ ವಿವೇಕಾನಂದ ಯೂಥ್‌ ಮೂವ್ಮೆಂಟ್‌, ನವದೆಹಲಿಯ ವಿಜ್ಞಾನ್‌ ಪ್ರಸಾರ ಸಹಯೋಗದಲ್ಲಿ ಸೆಪ್ಟೆಂಬರ್‌ 20-21ರಂದು ರಾಜ್ಯಮಟ್ಟದ ವಿಜ್ಞಾನ ಸಂವಹನ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದ ವಿಜ್ಞಾನ ಸಂವಹನದ ಸಾಧ್ಯತೆಗಳನ್ನು ಕಂಡುಕೊಳ್ಳುವ ಮಹತ್ವದ ಪ್ರಯತ್ನವಾಗಿದ್ದು, ಕನ್ನಡದಲ್ಲಿ ವಿಜ್ಞಾನ ಸಂವಹನ ಚಳವಳಿಗೊಂದು ಮುನ್ನುಡಿ ಬರೆಯಲಿದೆ

ವಿಜ್ಞಾನವಿಲ್ಲದ ದೈನಂದಿನ ಚಟುವಟಿಕೆಯನ್ನು ಊಹಿಸಿಕೊಳ್ಳುವುದು ಸಾಧ್ಯವೆ! ಇನ್ನು ತಂತ್ರಜ್ಞಾನವಂತೂ ನಮ್ಮ ಬದುಕಿನ ಶೇಕಡ ಎಪ್ಪತ್ತರಷ್ಟು ಭಾಗವನ್ನು ವ್ಯಾಪಿಸಿಕೊಂಡಿದೆ. ನಮ್ಮ ಪ್ರತಿ ಚಟುವಟಿಕೆಯ ಹಿಂದೆಯೂ ವಿಜ್ಞಾನ-ತಂತ್ರಜ್ಞಾನ ಇದ್ದೇ ಇರುತ್ತವೆ. ಆದರೆ ಅವು ಹೇಗೆ ಕೆಲಸ ಮಾಡುತ್ತಿವೆ? ಎಷ್ಟು ಮಹತ್ವದ ಕೆಲಸ ಮಾಡುತ್ತಿವೆ ಎಂಬುದು ನಮಗೆ ಗೊತ್ತಿದೆಯೇ? ಈ ತಿಳಿವು ನಿಜಕ್ಕೂ ಅಗತ್ಯವೇ ಎಂಬ ಬಗ್ಗೆ ನಾವು ಯೋಚಿಸುವುದಿಲ್ಲ. ನಾವು ಮಾಡುವ ಊಟ, ನಾವು ಬಳಸುವ ಕಂಪ್ಯೂಟರ್, ಅದು ಕೆಲಸ ಮಾಡುವ ರೀತಿ, ಪ್ರಕ್ರಿಯೆ, ಅದರ ಹಿಂದಿನ ಸೂತ್ರಗಳ ಬಗ್ಗೆ ನಮಗೆ ತಿಳಿಯಲು ಸಾಧ್ಯವಾದರೆ ನಮ್ಮ ಆಲೋಚನೆ, ನಮ್ಮ ಸುತ್ತಲಿನ ವಿದ್ಯಮಾನಗಳನ್ನು ನೋಡುವ ಕ್ರಮವೂ ಬದಲಾಗುತ್ತದೆ. ಅಂದರೆ ವಿಚಾರವಂತಿಕೆಯ ಬಲವೊಂದು ನಮಗೆ ಸಿಗುತ್ತದೆ.

ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಈ ಜ್ಞಾನ ಹಂಚುವ ಸಾಹಿತ್ಯ ಕನ್ನಡದಲ್ಲಿ ಎಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿದೆ? ವಿಜ್ಞಾನ ಎಂಬುದು ಬೌದ್ಧಿಕತೆ ಸವಾಲು ಹಾಕುವ ಜ್ಞಾನ ಎಂದು ಅದು ಎಲ್ಲರ ಕೈಗೆಟುಕದ್ದು ಎಂದೇ ಭಾವಿಸುತ್ತೇವೆ. ಈ ಧೋರಣೆಯಿಂದ ಸೀಮಿತ ವರ್ಗವನ್ನಷ್ಟೇ ತಲುಪುವ ಅಥವಾ ವಿನಿಮಯವಾಗುವ ಈ ಜ್ಞಾನ ಸಂಪತ್ತು ಬಹುಸಂಖ್ಯಾತರಿಂದ ದೂರ ಉಳಿಯುತ್ತದೆ. ಹಾಗಾಗಿಯೇ ಸಂಕೀರ್ಣವಾದ ವೈಜ್ಞಾನಿಕ ಸಂಗತಿಗಳನ್ನು ಸರಳವಾಗಿ, ಸಾಮಾನ್ಯ ಗ್ರಹಿಕೆಗೂ ಸಿಗುವಂತಹ ಬರಹಗಳು ನಮಗೆ ಬಹಳ ಅಲ್ಪ ಪ್ರಮಾಣದಲ್ಲಿ ಲಭ್ಯ ಇವೆ.

ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವಿಜ್ಞಾನ್‌ ಪ್ರಸಾರ್‌ ಸ್ಥಳೀಯ ಭಾಷೆಯಲ್ಲಿ ವಿಜ್ಞಾನ ಸಂವಹನವನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಅದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳಲ್ಲಿ ಒಂದು ವಿಜ್ಞಾನ ಸಂವಹನ ಸಾಧ್ಯತೆಗಳನ್ನು ಅರಿಯುವ ಸಮ್ಮೇಳನ. ಈಗಾಗಲೇ ಪಶ್ಚಿಮ ಬಂಗಾಳ, ತಮಿಳು ನಾಡಿನಲ್ಲಿ ಆಯಾ ರಾಜ್ಯದ ಭಾಷೆಗಳಲ್ಲಿ ಸಮ್ಮೇಳನಗಳನ್ನು ನಡೆಸಿದೆ. ಅಷ್ಟೇ ಅಲ್ಲದೆ ಉರ್ದು ಭಾಷೆಯಲ್ಲೂ ವಿಜ್ಞಾನ ಸಂವಹನ ಕುರಿತು ಸಮ್ಮೇಳನವನ್ನು ನಡೆಸಿದ್ದು, ಈಗ ಕನ್ನಡದಲ್ಲಿ ಆಯೋಜಿಸಲು ಸಜ್ಜಾಗಿದೆ.

ನಿರ್ದೇಶಕರಾದ ನಕುಲ್ ಪರಾಶರ್

ವಿಜ್ಞಾನ್‌ ಪ್ರಸಾರ್‌ ನಿರ್ದೇಶಕರಾದ ನಕುಲ್‌ ಪರಾಶರ್‌ ಈ ಸಮ್ಮೇಳನ ಕುರಿತು, ” ಸ್ಥಳೀಯ ಭಾಷೆಗಳಲ್ಲಿ ಉದಾಹರಣೆಗಳೊಂದಿಗೆ ನಡೆಸುವ ಚಟುವಟಿಕೆಗಳು ವಿಜ್ಞಾನವನ್ನು ಹೆಚ್ಚು ಆಸಕ್ತಿದಾಯಕಗೊಳಿಸುತ್ತವೆ ಮತ್ತು ಸಂವಹನದ ಪರಿಣಾಮವನ್ನು ಹೆಚ್ಚಿಸುತ್ತದೆ. ಇದರಿಂದ ಸಂವಹನ ಮಾಡುತ್ತಿರುವವರು ಗೆದ್ದಂತಾಗುತ್ತದೆ. ಹಾಗೇ ಆಸಕ್ತರಲ್ಲಿ ಜಿಜ್ಞಾಸೆ ಹೆಚ್ಚುತ್ತದೆ, ಇನ್ನಷ್ಟು ಕುತೂಹಲಿಗಳೂ ಆಗುತ್ತಾರೆ. ಅದೇ ಕಾರಣಕ್ಕೆ ವಿಜ್ಞಾನ್‌ ಪ್ರಸಾರ್‌ ಕನ್ನಡದಲ್ಲಿ ಕುತೂಹಲಿ ಹೆಸರಿನ ಮಾಸಿಕ ಸುದ್ದಿ ಪತ್ರವನ್ನು ಹೊರತರುತ್ತಿದೆ” ಎಂದು ಹೇಳಿದರು.

ಟಿ ವಿ ವೆಂಕಟೇಶ್ವರನ್

ಸಮ್ಮೇಳನ ರೂಪಿಸುವ ಹೊಣೆ ಹೊತ್ತಿರುವ ವಿಜ್ಞಾನ್‌ ಪ್ರಸಾರ್‌ ಹಿರಿಯ ವಿಜ್ಞಾನಿ ಟಿ ವಿ ವೆಂಕಟೇಶ್ವರನ್‌ ಮಾತನಾಡಿ, “ನಾವು ಜ್ಞಾನ ಸಮುದಾಯದ ಯುಗದಲ್ಲಿದ್ದೇವೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಡಾಟಾ, ಆಲ್ಗರಿದಂ ಆಧರಿಸಿದ ತಂತ್ರಜ್ಞಾನಗಳನ್ನು ನೋಡುತ್ತಿದ್ದೇವೆ. ಹಿಂದೆಂಗಿಂತ ಉತ್ತಮವಾದ ತಂತ್ರಜ್ಞಾನ, ವಿಜ್ಞಾನವನ್ನು ನೋಡುತ್ತಿರುವ ಕಾಲವಿದು. ಒಂದು ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕೆಂದರೆ ವಿಜ್ಞಾನದ ಆಗುಹೋಗುಗಳನ್ನು ವಿಜ್ಞಾನಿಯಾಗಿರಲಿ, ಮತ್ತೊಬ್ಬರಿರಲಿ ತಿಳಿಯಬೇಕಾದ್ದು ಅಗತ್ಯ. ಹಾಗಾಗಿ ವಿಜ್ಞಾನವನ್ನು ಎಲ್ಲ ಭಾರತೀಯ ಭಾಷೆಗಳಲ್ಲಿ ತಲುಪಿಸಬೇಕು. ಎಲ್ಲ ಮಾಧ್ಯಮಗಳ ಮೂಲಕ ಸಾಮಾನ್ಯರಿಗೂ ವಿಜ್ಞಾನ ಅವರದೇ ಭಾಷೆಯಲ್ಲಿ ತಲುಪಿಸಬೇಕು. ಇದು ವಿಜ್ಞಾನ್‌ ಪ್ರಸಾರ್‌ನ ಆದ್ಯತೆ. ಈ ಹಿನ್ನೆಲೆಯಲ್ಲಿ ವಿಜ್ಞಾನ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಐದು ಗೋಷ್ಠಿಗಳಿದ್ದು, ವಿಜ್ಞಾನ ಸಂವಹನ, ಪ್ರಚಾರ, ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸರ್ಕಾರಿ ಸಂಸ್ಥೆಗಳು, ಸಂಶೋಧನೆ ಮತ್ತು ಅಧ್ಯಯನದಲ್ಲಿ ಸಕ್ರಿಯವಾಗಿರುವ ಸರ್ಕಾರೇತರ ಸಂಸ್ಥೆಗಳು, ವಿಜ್ಞಾನ ಬರವಣಿಗೆಯಲ್ಲಿ ತೊಡಗಿರುವ ಲೇಖಕರು ಮತ್ತು ಪ್ರಕಾಶಕರು, ವಿಜ್ಞಾನ ಸಂವಹನದ ಮಾಧ್ಯಮಗಳಾಗಿರುವ ಸಾಂಪ್ರದಾಯಿಕ ಹಾಗೂ ಡಿಜಿಟಲ್‌ ಮಾಧ್ಯಮಗಳಿಂದ ಮೂವತ್ತು ಜನ ಸಂಪನ್ಮೂಲ ವ್ಯಕ್ತಿಗಳು ಈ ಸಮ್ಮೇಳನದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

ಎರಡು ದಿನ ಸಮ್ಮೇಳನದ ಅಪ್‌ಡೇಟ್‌ಗಳಿಗೆ ಟೆಕ್‌ಕನ್ನಡ ತಾಣ ಹಾಗೂ ಟೆಕ್‌ ಕನ್ನಡದ ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡುತ್ತಿರಿ.

%d bloggers like this: