ಅಪ್ಪ, ಮನೋವೃತ್ತಿಯಿಂದ ಪೂರ್ಣ ವಿಜ್ಞಾನಿಯೇ ಆಗಿದ್ದರು: ಉಲ್ಲಾಸ ಕಾರಂತ

ಅಕ್ಟೋಬರ್ 10,  ಕನ್ನಡ ಕಂಡ ಅಪೂರ್ವ ಪ್ರತಿಭೆ, ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮಕಾರಂತರ ಜನ್ಮದಿನ. ಹಲವು ಮಹತ್ವ ಕಾದಂಬರಿಗಳನ್ನು, ನಾಟಕಗಳನ್ನು ನೀಡಿದ ಕಾರಂತರು ಹತ್ತು ಹಲವು ಆಸಕ್ತಿಗಳ ಬೆನ್ನು ಹತ್ತಿದವರು. ಅವರ ಕೊಡುಗೆಗಳಲ್ಲಿ ವಿಜ್ಞಾನ ಸಾಹಿತ್ಯ ಮಹತ್ವದ್ದು. ಕಾರಂತರ ವಿಜ್ಞಾನಾಸಕ್ತಿ, ವೈಜ್ಞಾನಿಕ ಮನೋಭಾವವನ್ನು ಕುರಿತು ಅವರ ಪುತ್ರ, ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ತಜ್ಞ ಉಲ್ಲಾಸ ಕಾರಂತರು ತಮ್ಮ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ

ಅಪ್ಪ-ಮಗ: ಶಿವರಾಮ ಕಾರಂತರೊಂದಿಗೆ ಪುತ್ರ ಉಲ್ಲಾಸ ಕಾರಂತ

ಪಾಡ್‌ಕಾಸ್ಟ್‌ನ ಮುಖ್ಯಾಂಶಗಳು

  • ಕಾರಂತರಿಗೆ ವಿಜ್ಞಾನ ಪರಿಸರದ ಬಗ್ಗೆ ಕುತೂಹಲವಿದೆ ಎಂಬುದನ್ನು ನಾನು ಚಿಕ್ಕಂದಿನಲ್ಲೇ ಗಮನಿಸಿದೆ. ಅವರು ಕ್ರಿಯೇಟಿವ್ ರೈಟರ್‌ ಆಗಿದ್ದರೂ ವರ್ಷಕ್ಕೆ ಹತ್ತು ಹದಿನೈದು ದಿನಗಳ ಕಾಲ ಕೂತು ಕಾದಂಬರಿ ಬರೆದು ಮುಗಿಸುತ್ತಿದ್ದರು. ಉಳಿದ ಸಮಯದಲ್ಲಿ ಇತರ ಅನೇಕ ಚಟುವಟಿಕೆಗಳಲ್ಲಿ-ಯಕ್ಷಗಾನ ಇರಬಹುದು, ಸೋಷಿಯಲ್‌ ಇಷ್ಯು ಇರಬಹುದು. ಎಲ್ಲದರಲ್ಲೂ ಇರುತ್ತಿದ್ದರು. ಅವರ ಇತರೆಲ್ಲಾ ಚಟುವಟಿಕೆಗಳಲ್ಲಿ ವಿಜ್ಞಾನದ ಪಾತ್ರ ದೊಡ್ಡದಿತ್ತು.
  • ಇಂಟರ್‌ಮೀಡಿಯೆಟ್‌ಗೆ ಕಾಲೇಜು ಬಿಟ್ಟು, ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಿದರು. ಮುಂದೆ ಓದಲೇ ಇಲ್ಲ. ಆದರೆ ಇಂಗ್ಲಿಷ್‌ನಲ್ಲಿ ಪ್ರಭುತ್ವ ಪಡೆದು, ಪುಸ್ತಕಗಳನ್ನು ಕಲೆ ಹಾಕಲು ಶುರು ಮಾಡಿದರು.
  • 1936-37ನೇ ಇಸವಿಯಿಂದ ನಮ್ಮಲ್ಲಿ ನ್ಯಾಷನಲ್‌ ಜಿಯೋಗ್ರಾಫಿಕ್‌ ಮ್ಯಾಗಜೀನ್ ಬರ್ತಿತ್ತು. ಲೈಫ್‌ ಮ್ಯಾಗಜೀನ್‌ ಬರ್ತಿತ್ತು. ರೀಡರ್ಸ್‌ ಡೈಜೆಸ್ಟ್‌ ಬರ್ತಾ ಇತ್ತು. ಅವರು ಬುಕ್‌ ಆಫ್‌ ದಿ ಮಂತ್‌ ಕ್ಲಬ್‌ ಮೆಂಬರ್‌ ಆಗಿದ್ದರು.
  • ಇಂಗ್ಲಿಷ್‌ನಲ್ಲಿ ಬರುತ್ತಿದ್ದ ಪಾಪುಲರ್‌ ಸೈನ್ಸ್‌ ಪುಸ್ತಕಗಳನ್ನು ಓದುತ್ತಿದ್ದರು. ಅದೇ ರೀತಿ ಕನ್ನಡಕ್ಕೆ ತರುವ ಪ್ರಯತ್ನ ಮಾಡಿದರು. ಇದೆಲ್ಲವನ್ನು ನಾನು ನೋಡಿದ್ದೇನೆ ಮತ್ತು ಅವುಗಳಿಂದ ಬಹಳ ಪ್ರಭಾವಿತನಾಗಿದ್ದೇನೆ.
  • ಅಣು ಶಕ್ತಿಯ ಬಗ್ಗೆ ಐವತ್ತನೆಯ ದಶಕದಲ್ಲಿ ‘ಪರಮಾಣು ಅಂದು ಇಂದು’ ಎಂಬ ಪುಸ್ತಕವನ್ನು ಬರೆದಿದ್ದರು.
  • ವನ್ಯಜೀವಿ ಸಂರಕ್ಷಣೆ, ನಿಸರ್ಗಕ್ಕೆ ಸಂಬಂಧಿಸಿದಂತೆ ನಾನು ಸಾಕಷ್ಟು ಆಳವಾಗಿ ಅಧ್ಯಯನ ಮಾಡಲು ಅವರೇ ಪ್ರೇರಣೆ. ನನ್ನ ಮೇಲೆ ಅತಿ ಪ್ರಭಾವ ಬೀರಿದ ವ್ಯಕ್ತಿ ಡಾ. ಜಾರ್ಜ್‌ ಶೆಲ್ಲರ್‌. ಅವರು ಕಾಂಗೋದಲ್ಲಿ ಗೊರಿಲ್ಲಾ ಕುರಿತು ಅಧ್ಯಯನ ಮಾಡಿ ಪುಸ್ತಕ ಬರೆದಿದ್ದರು. ಅದನ್ನು ಅಪ್ಪ ನನಗೆ ಕೊಟ್ಟಿದ್ದರು. ಲೈಫ್‌ ಮ್ಯಾಗಜೀನ್‌ ನಲ್ಲಿ ಶೆಲ್ಲರ್‌ನಲ್ಲಿ ಕಾನಾ ಅರಣ್ಯದಲ್ಲಿ ಹುಲಿ ಗಳ ಅಧ್ಯಯನ ಮಾಡಿದ್ದ ಬಗ್ಗೆ ಲೇಖನ ತೋರಿಸಿದ್ದರು. ನಾನು ಓದಿದೆ. ವನ್ಯಜೀವಿ ವಿಜ್ಞಾನವೇ ನನ್ನ ಕ್ಷೇತ್ರ ಆಗಬೇಕು ಎಂಬ ಸ್ಪಷ್ಟತೆ ದೊರೆಯಿತು. ಹಾಗೇ ಕಾರಂತರ ಪಾತ್ರ ದೊಡ್ಡದು.
  • ಅವರು ಬದುಕಿದ ರೀತಿ, ಬರೆದ ಕ್ರಮ ನೋಡಿದರೆ, ವಾಟರ್‌ಟೈಟ್‌ ಕಂಪಾರ್ಟ್‌ಮೆಂಟ್‌ ಮಾಡಿಕೊಂಡಿದ್ದರು, ಸಾಹಿತ್ಯಕ್ಕೆ. ವರ್ಷದಲ್ಲಿ ಹತ್ತು ಹದಿನೈದು ದಿನಗಳ ಸೃಜನಶೀಲ ಬರವಣಿಗೆ ಮಾಡಿ ಮುಗಿಸಿಬಿಡುತ್ತಿದ್ದರು. ಉಳಿದ ದಿನಗಳಲ್ಲಿ ಮನೋವೃತ್ತಿಯಿಂದ ಪೂರ್ಣ ಪ್ರಮಾಣದ ವಿಜ್ಞಾನಿಯಾಗಿದ್ದರು.

ಇದನ್ನೂ ಓದಿ | ಕನ್ನಡ ಲೋಕಕ್ಕೆ ಸಿರಿ ತಂದ ಶಿವರಾಮ ಕಾರಂತರ ವಿಜ್ಞಾನ ಪ್ರೀತಿ | ಭಾಗ 1

ಇದನ್ನೂ ಓದಿ | ಕನ್ನಡ ಲೋಕಕ್ಕೆ ಸಿರಿ ತಂದ ಶಿವರಾಮ ಕಾರಂತರ ವಿಜ್ಞಾನ ಪ್ರೀತಿ | ಭಾಗ 2