ಕೋವಿಡ್ -19 ತಡೆಗಟ್ಟುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ

ಕೋವಿಡ್‌ 19 ಇಡೀ ದೇಶವನ್ನು ಅಲುಗಾಡಿಸಿದ, ಈ ಜೈವಿಕ ಸಮಸ್ಯೆ ನಿಯಂತ್ರಣಕ್ಕಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಅತ್ಯಂತ ಪರಿಣಾಮಕಾರಿಯೂ ಹಾಗೂ ಅನಿವಾರ್ಯವೂ ಆದ ಈ ಮಾರ್ಗ ಫಲಿತಾಂಶವನ್ನು ನೀಡುತ್ತಿದೆ ಎನ್ನುತ್ತದೆ ಈ ಲೇಖನ

ಆಧುನಿಕತೆ ಬೆಳೆದ ಹಾಗೆಯೇ ಮಾನವರಿಂದ ತಡೆಹಿಡಿಯಲು ಸಾಧ್ಯವಾಗದ ಸಮಸ್ಯೆಗಳೇ ಹೆಚ್ಚಾಗುತ್ತಿವೆ. ಒಂದೆಡೆ ತಂತ್ರಜ್ಞಾನದಲ್ಲಿ ಮುಂದುವರೆದರೂ ಮತ್ತೊಂದೆಡೆ ಪ್ರಕೃತಿಯ ಘಟನೆಗಳನ್ನು ನಿಭಾಯಿಸಲು ಸಾಧ್ಯವಾಗದೇ ಕೈ ಚೆಲ್ಲಿ ಕುಳಿತಿದ್ದೇವೆ. ಬಹಳ ಮುಖ್ಯವಾಗಿ ಕೋವಿಡ್ ಎಂಬ ಜೈವಿಕ ಸಮಸ್ಯೆಯೊಂದು ನಮ್ಮ ಮುಂದೆ ರಕ್ಕಸನ ರೀತಿಯಲ್ಲಿ ನಿಂತಿದೆ. ಇದನ್ನು ನೇರವಾಗಿ ನಿಯಂತ್ರಿಸಲು ಸಾಧ್ಯವಾಗದೇ ಹೋದರೂ, ತಂತ್ರಜ್ಞಾನ ಹಲವು ರೀತಿಯಲ್ಲಿ ನೆರವಾಗಲು ಸಾಧ್ಯವಿದೆ ಎಂಬುದನ್ನು ಈಗ ತಿಳಿಯುತ್ತಿದೆ.

ಈ ಹಿಂದೆಯೇ ಹಲವಾರು ಸಾಂಕ್ರಾಮಿಕ ರೋಗಗಳು ಹಾಗೂ ಪಿಡುಗುಗಳಾದ ಸಾರ್ಸ್, ಹೆಚ್1ಎನ್1, ಎಲ್ಬಾ ಮೊದಲಾದ ರೋಗಗಳು ತನ್ನ ಬಲಿಷ್ಟ ಬಾಹುಗಳನ್ನು ಚಾಚಿ, ಹಲವಾರು ಸಂಕಷ್ಟಗಳಿಗೆ ಈಡಾಗಿದ್ದೇವೆ. ಪ್ರತೀ ಬಾರಿಯೂ ಇಂತಹ ಸಂದರ್ಭಗಳನ್ನು ಎದುರಿಸಿದ ಹಾಗೆಯೇ ಅದರ ವಿರುದ್ದ ಹೋರಾಡಲು ಪ್ರಯತ್ನಿಸಿದ್ದೇವೆ ಮತ್ತು ಯಶಸ್ಸನ್ನು ಪಡೆದಿದ್ದೇವೆ. ಇಂದು ತಂತ್ರಜ್ಞಾನವು ಮೊಬೈಲ್,ಕ್ಲೌಡ್ ಅನಾಲೆಟಿಕ್ಸ್, ರೋಬೋಟಿಕ್ಸ್,4ಜಿ/5ಜಿ ಅತೀ ವೇಗದ ಇಂಟರ್ನೆಟ್ ಬಳಕೆ ಅವಕಾಶವನ್ನು ನೀಡಿದೆ. ಇದರ ಮೂಲಕ ಸಾಂಕ್ರಾಮಿಕ ರೋಗಗಳ ಪ್ರತಿಕ್ರಿಯೆಗಳನ್ನು ತಿಳಿಯಲು ಸಹಕಾರಿಯಾಗಿದೆ. ಒಬ್ಬರನ್ನೊಬ್ಬರ ನೇರ ಸಂಪರ್ಕಿಸಲು ಹೆದರುವ ಕೋವಿಡ್ ಕಾಲದಲ್ಲಂತೂ ತಂತ್ರಜ್ಞಾನ ಬಹಳ ರೀತಿಯಲ್ಲಿ ನೆರವಾಗಿದೆ.

ಸುಳ್ಳು ಸುದ್ದಿಯ ವಿರುದ್ದ ಹೋರಾಟ

ಸಾಮಾಜಿಕ ಮಾಧ್ಯಮಗಳ ಬಳಕೆಯು ಹೆಚ್ಚಾದಂತೆ ರೋಗಗಳು, ಚಿಕಿತ್ಸೆ, ಲಸಿಕೆ, ಮರಣಗಳ ಸಂಖ್ಯೆ, ಸರ್ಕಾರದ ರೀತಿ ನೀತಿಗಳ ಕುರಿತು ತಪ್ಪು ಮಾಹಿತಿಗಳ ರವಾನೆಯಿಂದ ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಹಾಗೂ ಆತಂಕ ಸೃಷ್ಟಿಯಾಗುತ್ತಿದೆ. ಇದರ ಪರಿಣಾಮವಾಗಿ ಅಗತ್ಯಕ್ಕೂ ಹೆಚ್ಚು ಔಷಧಿಗಳ ಖರೀದಿ, ದಿನಸಿಗಳನ್ನು ಹೆಚ್ಚು ಸಂಗ್ರಹಿಸುವ ಮನೋಭಾವ,ಇದರಿಂದಾಗಿ ಅಗತ್ಯ ವಸ್ತುಗಳ ದಿಢೀರ್ ಬೆಲೆ ಏರಿಕೆ, ಜನರಲ್ಲಿ ಗೊಂದಲ ಸೃಷ್ಟಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ, ಚಿಕಿತ್ಸೆ ನೀಡುವಲ್ಲಿಯೂ ಕೆಲವೊಮ್ಮೆ ತಾರತಮ್ಯ ಮೊದಲಾದವುಗಳನ್ನು ಇಂದು ಕಾಣುತ್ತಿದ್ದೇವೆ.ಇಂತಹ ಅನಗತ್ಯ ಗೊಂದಲ ಹಾಗೂ ತಪ್ಪು ಮಾಹಿತಿಗಳನ್ನು ಸಮಾಜಕ್ಕೆ ರವಾನೆಯಾಗುವುದನ್ನು ತಡೆಗಟ್ಟುವಲ್ಲಿ ಫೇಸ್ ಬುಕ್,ಯು ಟ್ಯೂಬ್ ಮೊದಲಾದವುಗಳು ವಿಶ್ವ ಆರೋಗ್ಯ ಸಂಸ್ಥೆ, ಸ್ಥಳೀಯ ಸರ್ಕಾರ, ನೀಡುವ ಸರಿಯಾದ ಹಾಗೂ ನಿಖರ ಮಾಹಿತಿ ನೀಡಲು ಸತತ ಪ್ರಯತ್ನ ಮಾಡುತ್ತಿದೆ. ಸರಿಯಾದ ಮಾಹಿತಿ ದೊರೆತಲ್ಲಿ ಜನರು ಗೊಂದಲ ಹಾಗೂ ಆತಂಕವಿಲ್ಲದೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂದು ಆಲೋಚಿಸಲು ಸಾಧ್ಯವಾಗುತ್ತದೆ.

ಔಷಧಗಳನ್ನು ಹುಡುಕುವುದು

ಸಾಂಕ್ರಾಮಿಕ ರೋಗಗಳು ಹರಡಲು ಆರಂಭಿಸಿದ ಹಾಗೆ ಜನರ ಮನದಲ್ಲಿ ಮೂಡುವ ಮೊದಲನೆಯ ಪ್ರಶ್ನೆ ಈ ರೋಗಕ್ಕೆ ಔಷಧವಿದೆಯಾ?ಎಲ್ಲಿ ದೊರೆಯುತ್ತದೆ?ಇದು ರಕ್ಷಣೆಗಾ? ಅಥವಾ ನಿರ್ಮೂಲನೆಗಾ?ಕರೋನ ವೈರಸ್ ವಿರುದ್ದ ಹೋರಾಡಲು,ಔಷಧ ಕಂಡು ಹಿಡಿದು, ವೈರಸ್ ಹರಡುವಿಕೆಯ ತೀವ್ರತೆಯನ್ನು ಕಡಿಮೆಗೊಳಿಸಲು ಇಡೀ ಜಗತ್ತೇ ಹೋರಾಡುತ್ತಿದೆ.ಇಂತಹ ಪ್ರಕ್ರಿಯೆಯನ್ನು ತೀವ್ರಗೊಳಿಸುವಲ್ಲಿ ತಂತ್ರಜ್ಞಾನದ ಸಹಾಯ ಪಡೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಸಂಶೋಧಕರಿಗೆ ವೈರಲ್ ಪ್ರೊಟೀನ್ಗಳ ರಚನೆ, ಮೊದಲಾದ ಮಾಹಿತಿಗಳನ್ನು ನೀಡುವ ಮೂಲಕ ಲಸಿಕೆಯ ಕುರಿತು ಅಗತ್ಯ ಮಾಹಿತಿ ನೀಡುವಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ಅನ್ನು ಬಳಸಲಾಗುತ್ತದೆ. ಗೂಗಲ್ ನ ಡೀಪ್ ಮೈಂಡ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಅಲೆನ್ ಇನ್ಸ್ಟಿಟ್ಯೂಟ್ ನ ತಂಡವು AI ಉಪಕರಣಗಳು, ಡಾಟಾ, ಸಂಶೋಧನಾ ಫಲಿತಾಂಶವನ್ನು ತಯಾರಿಸಿದೆ. ಅನುವಂಶಿಕ ಆಧಾರದ ಮೇಲೆ ರಚನೆಯಾದ ಪ್ರೋಟಿನ 3ಡಿ ರಚನೆಯನ್ನು ಗೂಗಲ್ ಮೈಂಡ್ ಜನವರಿಯಲ್ಲಿ ಬಿಡುಗಡೆಗೊಳಿಸಿದ್ದೂ, ಜೀವಶಾಸ್ರ ತಂತ್ರವಾದ ಸ್ಪೈಕ್ ಪ್ರೋಟೀನ್ ಬಳಸಿ ಆಸ್ಟಿನ್ ಟೆಕ್ಸಾಸ್ ವಿಶ್ವವಿದ್ಯಾಲಯ,ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮಾನವ ಜೀವಕೋಶಗಳಿಗೆ ಸೋಂಕು ತಗುಲಿಸುವ ವೈರಸ್ಗಳ 3ಡಿ ಪರಮಾಣುವಿನ ನಕ್ಷೆ ತಯಾರಿಸಿ ಕೊಟ್ಟಿದೆ.

ಕೋವಿಡ್-19 ಕ್ಕೆ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳಿಗೆ AI ಸಹಾಯ ಮಾಡುತ್ತದೆ. ಲಭ್ಯ ಡಾಟಾ ಹಂಚುವುದರ ಮೂಲಕ ಪಾರದರ್ಶಕತೆ ಹಾಗೂ ಪತ್ತೆಹಚ್ಚುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಸಾಂಕ್ರಾಮಿಕ ರೋಗ ಹಬ್ಬುವ ಸಮಯದಲ್ಲಿ ಜನರಿಗೆ ಈ ಕುರಿತು ಸರಿಯಾದ ಮಾಹಿತಿ ಇದೆಯಾ ಅಥವಾ ಅದರ ವಿರುದ್ದ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಎಂಬುದನ್ನು ಲಭ್ಯ ಡಾಟಾ ಹಂಚುವುದರ ಮೂಲಕ ತಿಳಿಯಲು ಸುಲಭವಾಗುತ್ತಿದೆ. ನಿಖರ ಮಾಹಿತಿಗಾಗಿ ಇಂದು ಹಲವಾರು ಗುಂಪುಗಳು ಮೊಬೈಲ್‌, ಈ ಮೇಲ್‌ ಮೊದಲಾದವುಗಳನ್ನು ಬಳಸುತ್ತಿದ್ದಾರೆ. ಕೋವಿಡ್-19 ರ ನಿಖರ ಮಾಹಿತಿ ನೀಡುವ ನಕ್ಷೆಯನ್ನು ಮೈಕ್ರೋಸಾಫ್ಟ್ ಬಿಂಜ್ ಆರಂಭಿಸಿದೆ. ಸರಕು ಸಾಗಾಣೆ ಟ್ರಕ್ ವಿಳಂಬವಾಗುವುದರ ನಿರೀಕ್ಷಿತ ಸಮಯವನ್ನು ತಿಳಿಸುವ ದೃಷ್ಟಿಯಿಂದ ಯುರೋಪಿನ ಗಡಿ ಭಾಗದಲ್ಲಿ ಉಚಿತ ಲೈವ್ ನಕ್ಷೆಯನ್ನು ಸಿಕ್ಸ್‌ ಫೋಲ್ಡ್ ಪ್ರಕಟಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೋವಿಡ್-19 ರ ಕುರಿತು ಮಾಹಿತಿ ನೀಡುವಲ್ಲಿ ಟಿಕ್ ಟಾಕ್, ಸಾಮಾಜಿಕ ಮಾಧ್ಯಮವು ವಿಶ್ವ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಇದು ತನ್ನ ಬಳಕೆದಾರರಿಗೆ ಕೋವಿಡ್ ಕುರಿತಾದ ನಿಖರ ಮಾಹಿತಿ ನೀಡುವುದರ ಜೊತೆಯಲ್ಲಿಯೇ ತನ್ನ ಬಳಕೆದಾರರಿಗೆ ಸಮಯಕ್ಕೆ ಸರಿಯಾದ ಮಾಹಿತಿ ಪಡೆಯಲು, ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಪ್ರಶ್ನೆ ಕೇಳಿ, ಉತ್ತರ ಪಡೆಯುವ ಅವಕಾಶವನ್ನು ಕಲ್ಪಿಸಿದೆ.
ತೈವಾನಿನ CDC- Central Epidemic Command Center ಮೇಲ್ವಿಚಾರಣೆಗೆ ಸಹಕಾರಿಯಾಗಲಿ ಎಂಬ ದೃಷ್ಟಿಯಿಂದ ತನ್ನಲ್ಲಿರುವ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು, ಪ್ರಯಾಣಿಕರ ದತ್ತಾಂಶದ ಜೊತೆಯಲ್ಲಿ ಸಂಯೋಜಿಸುತ್ತದೆ. ಇದರಿಂದ ಅಗತ್ಯ ಹಾಗೂ ಸಮಯಕ್ಕೆ ಸರಿಯಾದ ಎಚ್ಚರಿಕೆಯನ್ನು ನೀಡಲು ಸಹಕಾರಿಯಾಗುತ್ತದೆ. ಉದಾಹರಣೆ ಪ್ರಯಾಣದಿಂದ ಸೋಂಕಿತರಾಗಿದ್ದರೆ ಆರೋಗ್ಯ ತಪಾಸಣೆಯ ಸಂದರ್ಭದಲ್ಲಿ ಎಚ್ಚರಿಸುವಂತೆ ಮಾಹಿತಿ ಬರುತ್ತದೆ.
ಅದೇ ರೀತಿ ಭಾರತದಲ್ಲಿ ಹಲವಾರು ಟೆಲಿಕಾಂ ಕಂಪನಿಗಳಾದ ಜಿಯೋ, ಬಿ.ಎಸ್.ಎನ್.ಎಲ್. ಏರ್ಟೆಲ್ ಮೊದಲಾದವುಗಳು ಸಾಂಕ್ರಾಮಿಕ ರೋಗದ ಕುರಿತು ಜಾಗೃತಿ ನೀಡುವ ಮಾಹಿತಿಯುಳ್ಳ ಕಾಲರ್ ಟ್ಯೂನ್ ಅಳವಡಿಸಿದೆ.

ಜನರ ಮುಖ ಗುರುತಿಸುವಿಕೆ ಹಾಗೂ ಅವರ ಬಳಿಯಿರುವ ಡಾಟಾಗಳನ್ನು ಪತ್ತೆ ಹಚ್ಚುವಿಕೆ

ಇಂದಿನ ತೀವ್ರಗತಿಯ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವುದೂ ಒಂದು ದೊಡ್ಡ ಸವಾಲೇ ಸರಿ.ಇದಕ್ಕೆಂದೇ ಹಲವಾರು ತಂತ್ರಗಳನ್ನು ಬಳಸಲಾಗಿದ್ದು, ಡಾಟಾ ಮೂಲಕ ಸೋಂಕಿತ ವ್ಯಕ್ತಿಗಳ ಗುರುತಿಸುವಿಕೆ, ಅಂತಹ ಸೋಂಕಿತರ ಸಂಪರ್ಕ ಹಾಗೂ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಮಾಡಿದ ಪ್ರಾಥಮಿಕ ವ್ಯಕ್ತಿಗಳ ಗುರುತಿಸುವಿಕೆಗೆ ಸಹಾಯವಾಗುತ್ತದೆ.

ವ್ಯಕ್ತಿಯು ಮಾಸ್ಕ್ ಧರಿಸಿದ್ದರೂ ಡಾಟಾ ಮೂಲಕ ಮುಖ ಗುರುತಿಸುವ ತಂತ್ರವನ್ನು ಉಪಯೋಗಿಸಿ ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತದೆ.ಇಂತಹ ತಂತ್ರಜ್ಞಾನವು ಸೋಂಕಿತ ವ್ಯಕ್ತಿಯ ಕ್ವಾರನ್ಟೈನ್ ಹಾಗೂ ಚಲನವಲನೆ ಮೇಲ್ವಿಚಾರಣೆ ಮಾಡಲು ಹಾಗೂ ಹೊರಗಡೆ ಸಂಚರಿಸಿದರೆ ಮೇಲ್ವಿಚಾರಣೆ ಮಾಡಲು ಅನುಕೂಲಕರವಾಗಿದೆ. ಸೋಂಕಿತರ ಮೇಲೆ ನಿಗಾವಹಿಸುವುದರ ಮೂಲಕ ಇತರ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿ ಇದ್ದಾರೋ ಎಂದು ಕಂಡು ಹಿಡಿಯಲು ಇದು ಸಹಾಯವಾಗುತ್ತದೆ. ಸಿ ಸಿ ಟಿ ವಿ ಕ್ಯಾಮರಾ ಜೊತೆಯಲ್ಲಿಯೇ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಿ, ಕ್ವಾರನ್ಟೈನ್ ನಿಯಮವನ್ನು ಮೀರುವ ಸೋಂಕಿತ ವ್ಯಕ್ತಿ ಹಾಗೂ ಅವರ ಸಂಪರ್ಕದಲ್ಲಿರುವವರನ್ನು ಗುರುತಿಸುತ್ತದೆ.

ಹಾಗಾದರೆ ಕರೋನ ವೈರಸ್ ವಿರುದ್ದ ಹೋರಾಡಲು ಚೈನಾ ಹೇಗೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಹಾಗೂ ಡಾಟಾ ಬಳಕೆ ಮಾಡಿದೆ ನೋಡೋಣ…

ಅಪಾಯದ ಮೌಲ್ಯ ಮಾಪನ ಹಾಗೂ ಮುನ್ಸೂಚನೆಯನ್ನು ತಿಳಿಯುವಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಪಾತ್ರ

ಇಂದಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆಯು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೃತಕ ಬುದ್ದಿಮತ್ತೆಯ ಆಧಾರಿತ ಡಾಟಾ ವಿಶ್ಲೇಷನೆ ಹಾಗೂ ಮುನ್ಸೂಚಕ ಮಾಹಿತಿಗಳು ವೈದ್ಯಕೀಯ ವೃತ್ತಿಪರರಿಗೆ ರೋಗಗಳ ಕುರಿತು ಹೆಚ್ಚಿನದಾಗಿ ವಿಷಯ ತಿಳಿಯಲು ಸಹಕಾರಿಯಾಗಿದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸುವುದರ ಮೂಲಕ ರೋಗಗಳು ಹರಡುವುದರ, ಔಷಧಿ ಹಾಗೂ ಚಿಕಿತ್ಸೆಯ ಕುರಿತಾದ ನಿಖರವಾದ ಮುನ್ಸೂಚನೆ ನೀಡಲು ಸಾಧ್ಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಕೋವಿಡ್-19 ರ ಏಕಾಏಕಿ ಸ್ವರೂಪ ಬದಲಾವಣೆಯ ಕುರಿತು ಅದ್ಯಯನ ಮಾಡಲು ಹಾಗೂ ನಿವಾರಣಾ ವಿಧಾನವನ್ನು ಕಂಡು ಹಿಡಿಯಲು ಅನುಕೂಲವಾಗಿದೆ.

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸಂಶೋಧನಾ ತಂಡಗಳು, ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಗೊಂದಲಗಳ ನಿವಾರಣೆಗೆ ಸ್ಪಷ್ಟತೆಯನ್ನು ರೂಪಿಸಲು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಉಪಯೋಗಿಸಿ ಅಪಾಯದ ಮೌಲ್ಯಮಾಪನವನ್ನು ಕಂಡುಹಿಡಿಯಲು ವಿನ್ಯಾಸ ರೂಪಿಸುತ್ತಿದೆ. ಇಂತಹ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಉಪಕರಣ ಬಳಸಿ, ಪರೀಕ್ಷೆಗೆ ಒಳಪಡುವ ರೋಗಿಗಳಿಗೆ ಸಾಮಾನ್ಯ ಜ್ವರ, ನೆಗಡಿ ಇದೆಯಾ? ಕೋವಿಡ್ ಪರೀಕ್ಷೆ ಮಾಡುವ ಅಗತ್ಯವಿದೆಯಾ ಅಥವಾ ಇಲ್ಲವಾ ಎಂದು ತಳಿಯಲು ಸಹಕಾರಿಯಾಗುತ್ತದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧಾರಿತ ಪರಿಹಾರಗಳನ್ನು ಬಳಸಿ ಒಂದೆಡೆ ಸೇರುವ ದೊಡ್ಡ ಗುಂಪುಗಳ ಜನರ ದೇಹದಲ್ಲಿ ಉಂಟಾಗುವ ಉಷ್ಣಾಂಶಗಳ ವ್ಯತ್ವಾಸವನ್ನು ಕಂಡುಹಿಡಿಯುವ ಸಾಧನವನ್ನು ಚೈನಾದ ಬೈದು –ಅಂತರಾಷ್ಟ್ರೀಯ ಕಂಪನಿಯು ಕಂಡು ಹಿಡಿದಿದೆ. ಜನರ ಓಡಾಟಕ್ಕೆ ಅಡ್ಡಿಪಡಿಸದೆ ಈ ವ್ಯವಸ್ಥೆಯಿಂದ ನಿಮಿಷಕ್ಕೆ 200 ಜನರನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ. ಹೆಚ್ಚು ಜನ ಸಂದಣಿಯಿರುವ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಆಸ್ಪತ್ರೆ ಮೊದಲಾದ ಕಡೆ ಈ ತಂತ್ರಜ್ಞಾನವನ್ನು ಉಪಯೋಗಿಸಿ ಕೋವಿಡ್ ಸೋಂಕಿತರನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಿ, ಅವರನ್ನು ಬೇರ್ಪಡಿಸುವುದರ ಮೂಲಕ ಬೇರೆಯವರಿಗೆ ಹರಡದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ. ರೋಬೋಟ್, ಡ್ರೋನ್ ಹಾಗೂ ಸ್ವಾಯತ್ತ ವಾಹನಗಳ ಬಳಕೆಯ ಮೂಲಕ ದೈಹಿಕ ಚಲನೆ ಹಾಗೂ ಸಂಪರ್ಕವನ್ನು ವಿರಳಗೊಳಿಸುವುದು.

ಅಗತ್ಯ ಸಂದರ್ಭದಲ್ಲಿ ಸ್ವಯಂ ಚಾಲಿತ ಕಾರುಗಳು, ರೋಬೋಟ್ ಬಳಸುವುದರ ಮೂಲಕ ನೇರ ದೈಹಿಕ ಸಂಪರ್ಕವನ್ನು ತಪ್ಪಿಸಬಹುದು. ರೋಗ ಪೀಡಿತ ವ್ಯಕ್ತಿಗಳಿಗೆ ಅಗತ್ಯ ಆರೋಗ್ಯ ಸೇವೆಯನ್ನು ಸ್ವಾಯತ್ತ ವಾಹನಗಳಲ್ಲಿ ಪೂರೈಸುವುದರ ಮೂಲಕ ಆರೋಗ್ಯ ವ್ಯಕ್ತಿಯ ಆರೋಗ್ಯ ಮಟ್ಟದ ಅಪಾಯವನ್ನು ಕಡಿಮೆಗೊಳಿಸಬಹುದು. ಇದರಿಂದ ಸುರಕ್ಷಿತವಾಗಿ ವಸ್ತುಗಳೂ ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ರೋಬೋಟ್ ಗಳನ್ನು ಬಳಸಿ ಅಗತ್ಯವಿರುವಲ್ಲಿ ದಿನಸಿ, ಆಹಾರ, ಅಡುಗೆ ವಸ್ತುಗಳ ವಿತರಣೆ ಹಾಗು ಆಸ್ಪತ್ರೆಗಳಲ್ಲಿ ಕ್ರಿಮಿನಾಶಕಗಳ ಸಿಂಪರಣೆ ಮತ್ತು ರಸ್ತೆಗಳಲ್ಲಿ ಗಸ್ತು ತಿರುಗುವುದರ ಮೂಲಕ ಮೇಲ್ವಿಚಾರಣೆಗೆ ಬಳಸಲಾಗುತ್ತದೆ. ಸೋಂಕಿತ ಜನರ ಪತ್ತೆಹಚ್ಚುವಲ್ಲಿ, ಕ್ವಾರನ್ಟೈನ್ ಇರುವ ವ್ಯಕ್ತಿಗಳಿಗೆ ಅಗತ್ಯ ಔಷಧಗಳ ಕಿಟ್ ವಿತರಣೆ,ಕ್ರಿಮಿನಾಶಕಗಳ ಸಿಂಪರಣೆ ಹಾಗೂ ಆಹಾರ ವಿತರಣೆಗೆ ಡ್ರೋಣ್ ಬಳಕೆ ಮಾಡಲಾಗುತ್ತದೆ.ಹೊಸದಾಗಿ ಸೇರ್ಪಡೆಯಾಗುತ್ತಿರುವ ಸಣ್ಣ ಸಣ್ಣ ಸ್ಥಳಗಳಿಗೆ ರೋಬೋಟ್, ಡ್ರೋನ್ ಹಾಗೂ ಸ್ವಾಯತ್ತ ವಾಹನಗಳ ಬಳಕೆಯ ಮೂಲಕ ಅಗತ್ಯ ಸೇವೆ ಪಡೆಯಲಾಗುತ್ತಿದೆ.

ಕರೋನಾ ವೈರಸ್ ವಿರುದ್ದ ಹೋರಾಡಲು ಚೈನಾದಲ್ಲಿ ರೋಬೋಟ್, ಡ್ರೋನ್ಗಳ ಬಳಕೆ

ಅತೀ ಹೆಚ್ಚು ಜನಸಂದಣಿ ಇರುವ ಜಾಗಗಳಾದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಹೋಟೇಲ್, ಅಂಗಡಿಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ವೈರ್ಲೆಸ್ ಥರ್ಮಾಮೀಟರ್ ಮತ್ತು ಇತರ ರೀತಿಯ ದೇಹದ ಉಷ್ಣಾಂಶ ನೋಡುವ ಹೆಚ್ಚು ಬಳಕೆಯಲ್ಲಿರುವ ವೈದ್ಯಕೀಯ ಪರಿಕರಗಳಾಗಿವೆ. ದೇಹದ ಉಷ್ಣಾಂಶಗಳನ್ನು ಅಳೆಯುವಲ್ಲಿ ಈ ತಂತ್ರಜ್ಞಾನಗಳು ಸಹಾಯವಾಗುವುದು. ಅಲ್ಲದೆ ಹೆಚ್ಚಿನ ಪರೀಕ್ಷೆಯ ಅಗತ್ಯವಿರುವ ವ್ಯಕ್ತಿಯ ಗುರುತಿಸುವಿಕೆಯಲ್ಲಿ ಪರಿಣಾಮಕಾರಿಯಾಗಿದೆ. ಸ್ವಯಂ ಚಾಲಿತ ಉಷ್ಣ ಪರೀಕ್ಷಕಗಳು ಹಾಗೂ ಮುಖ ಗುರುತಿಸುವಿಕೆಯ ತಂತ್ರಜ್ಞಾನಗಳು ಮೇಲ್ವಿಚಾರಣಾ ಪ್ರಕ್ರಿಯೆಗಳನ್ನು ತ್ವರಿತ ಹಾಗೂ ಸುಲಭಗೊಳಿಸಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ವ್ಯಾವಹಾರಿಕ ನಿರಂತರತೆ ಕಾಪಾಡುವಲ್ಲಿ ತಂತ್ರಜ್ಞಾನದ ಪಾತ್ರ

ಸಾಂಕ್ರಾಮಿಕ ಹರಡುವಿಕೆಯ ವಿರುದ್ದ ಹೋರಾಡುವಲ್ಲಿ ಹಾಗೂ ವ್ಯಾವಹಾರಿಕ ನಿರಂತರತೆ ಕಾಪಾಡುವಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುವುದರಿಂದ ಸಾಮಾಜಿಕ ಅಂತರವನ್ನು ಕಾಪಾಡಲು ಸಾಧ್ಯವಾಗಿದೆ.ಈ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ರೂಪಿಸುವಲ್ಲಿ ಹಲವಾರು ತಂತ್ರಗಳ ಮೂಲಕ –ಕ್ಲೌಡ್ ಮೀಟಿಂಗ್,ವರ್ಚ್ಯಯಲ್ ಸಭೆಗಳು ಮೊದಲಾದವುಗಳಗೆ ಡಾಟಾ ಅಪ್ಲಿಕೇಶನ್ ಬಳಸುವುದರ ಮೂಲಕ ಸಕ್ರಿಯಗಳಾಗಿವೆ. ಈ ಎಲ್ಲಾ ಪ್ರಕ್ರಿಯೆಗಳು ಅತೀ ಹಿಂದುಳಿದ ಪ್ರದೇಶದಲ್ಲಿಯೂ ದೊರೆಯುವುದರಿಂದ .ಸಾಮಾಜಿಕ ಅಂತರವನ್ನು ಕಾಪಾಡುವಲ್ಲಿ ವರದಾನವಾಗಿದೆ.

ಜಗತ್ತಿನ ಈ ಕ್ಷಣದ ದೊಡ್ಡ ದುರಂತವೆಂದರೆ ಸಾಂಕ್ರಮಿಕ ರೋಗ ಹಾಗೂ ಅದರ ಅನಿಯಮಿತ ಹರಡುವಿಕೆ.ಇದರಿಂದಾಗಿಯೇ ಜಗತ್ತೇ ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿಲ್ಲ ಎಂದು ತೋರಿಸಿದೆ.ಇದೇ ರೀತಿ ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳು ಹರಡಿದಾಗ ಜಾಗ್ರತರಾಗುವುದರ ಮೊದಲೇ ಈಗಿನಿಂದಲೇ ವ್ಯಕ್ತಿಗತವಾಗಿ ಹಾಗೂ ಸಾಮೂಹಿಕವಾಗಿ ಸಜ್ಜಾಗುವುದು ಒಳಿತು.ಈಗಾಗಲೇ ತಂತ್ರಜ್ಞಾನವು ಮುಂದುವರೆದಿದ್ದು,ಭವಿಷ್ಯದಲ್ಲಿ ಏರ್ಪಡುವ ಸಮಸ್ಯೆಗಳ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಇನ್ನು ಉತ್ತಮಗೊಳಿಸಬೇಕು.ಏಕಾಏಕಿ ತುತ್ತತುದಿಗೇರಿದ ಕೋವಿಡ್-19 ರ ಅಲೆಯನ್ನು ನಿರ್ವಹಿಸಲು ತಂತ್ರಜ್ಞಾನದ ಮೊರೆಹೋದದ್ದು ಕೃತಕ ಬುದ್ದಿಮತ್ತೆಯಿಂದ ಹೊಸ ಹೊಸ ಆವಿಷ್ಕಾರಿ ತಂತ್ರ ಬಳಸಿರುವುದರಿಂದ ಘೋಚರಿಸುತ್ತದೆ.ಇಂತಹ ತಂತ್ರಜ್ಞಾನವು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಸಮಯೋಚಿತ ಹಾಗೂ ಸಾಮಧಾನವಾಗಿ ಆಲೋಚಿಸಿ ಮುನ್ನಡೆಯಲು ಸಹಾಯ ಮಾಡಿದೆ. ಆದ್ದರಿಂದಲೇ ಇಂತಹ ತಂತ್ರಜ್ಞಾನವನ್ನು ಇನ್ನು ಉತ್ತಮಗೊಳಿಸಿ,ಬಳಸಿ,ವ್ಯಕ್ತಿಗತವಾಗಿ ಹಾಗೂ ಸಾಮಾಜಿಕವಾಗಿ ದೊಡ್ಡ ಸಮಸ್ಯೆಯಿಂದ ಪಾರಾಗಲು ಒಟ್ಟಾಗಿ ಶ್ರಮಿಸೋಣ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.